ಚದರುಂಗ ಚುಕ್ಕಿ ಸೀರಿಯುಟ್ಟು ಬಂದಾಳ ನೀರಿಗೆ ಬಾಲೆ ಅಂತ ಜನಪದರು ಹಾಡ್ತಾರ. ಕರಿಸೀರಿ ಉಟ್ಟರ ಕರಿಸಿರಿ ಬರ್ತದ ಅಂತ ನಂಬಿಕೆಯೂ ಇದೆ. ಆನೆಯಷ್ಟು ಸಿರಿ ತರುವ ಈ ಕರಿಸೀರೆ ಮಹಾಲಯ ಅಮವಾಸೆಗೆ ಉಡುವುದು ಪ್ರತೀತಿ. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನೇಯುವ ಈ ಸೀರೆಗಳಿಗೆ ಸದಾ ಬೇಡಿಕೆ ಇರುತ್ತದೆ.
ಇದರ ಹೆಸರು ‘ಚದುರಂಗ ಚುಕ್ಕಿ ಸೀರೆ’. ಸೀರೆಯ ಮೇಲೆ ಚದುರಂಗದಾಟದ ರೀತಿಯ ಕೋಣೆಗಳ ಚಿತ್ತಾರದಿಂದಲೇ ಈ ಹೆಸರು ಬಂದಿದೆ. ಪಕ್ಕಾ ದೇಸಿ ದಡಿಯ ಈ ಸೀರೆಯಲ್ಲಿ ಕಪ್ಪು, ನೀಲಿ, ನೇರಳೆ, ಹಸಿರು, ಕಪ್ಪು ಹಸಿರು, ಮೆಜೆಂತಾ, ಕೆಂಪು ಸೇರಿ 20ಕ್ಕೂ ಅಧಿಕ ಬಣ್ಣ ಬಳಸಲಾಗುತ್ತಿದೆ.
ರಾಮದುರ್ಗದಲ್ಲಿ ಹಲವು ಕುಟುಂಬಗಳು ನೇಕಾರಿಕೆಯನ್ನೇ ನೆಚ್ಚಿಕೊಂಡು ಬದುಕಿನ ಬಂಡಿ ದೂಡುತ್ತಿವೆ. ನೂಲು, ರೇಷ್ಮೆ ಮತ್ತು ಮಸ್ರಾಯಿ ಬಳಸಿ ಸೀರೆ ನೇಯುತ್ತಿವೆ. ಇವು ಮಳೆಗಾಲ ಹೊರತುಪಡಿಸಿ, ಉಳಿದೆಲ್ಲ ಕಾಲಕ್ಕೂ ಒಗ್ಗುತ್ತವೆ. ಈ ಸೀರೆಗಳೆಂದರೆ ಮಧ್ಯಮ ವರ್ಗದ ಮಹಿಳೆಯರಿಗೆ ಬಲುಇಷ್ಟ.
‘ಚುಕ್ಕಿಗಳಿಂದ ತುಂಬಿರುವ ಈ ಸೀರೆ ಚೌಕಾಕಾರದ ಗೆರೆಗಳ ವಿನ್ಯಾಸ ಹೊಂದಿದೆ. ವಿವಿಧ ವಿನ್ಯಾಸಗಳ ಜರಿಗಳು, ಆಕರ್ಷಕ ಸೆರಗು ಮತ್ತು ಚುಕ್ಕಿ ಪರಾಸ್ ಬಾರ್ಡರ್ ಆಕರ್ಷಿಸುವಂತಿದೆ. ಇದಕ್ಕೆ ‘ಕರಿ ಚಂದ್ರಿಕಾ’ ಸೀರೆ ಎಂತಲೂ ಕರೆಯಲಾಗುತ್ತದೆ. ಮದುವೆ, ವಿವಿಧ ಸಮಾರಂಭಗಳಲ್ಲೂ ಇದನ್ನು ತೊಡಬಹುದು’ ಎನ್ನುತ್ತಾರೆ ನೇಕಾರ ಏಕನಾಥ ಕೊಣ್ಣೂರ.
‘ಚದುರಂಗ ಚುಕ್ಕಿ’ ಸೀರೆಗೆ ಕರ್ನಾಟಕ ಮಾತ್ರವಲ್ಲದೆ; ಮಹಾರಾಷ್ಟ್ರ ಮಾರುಕಟ್ಟೆಯಲ್ಲೂ ಬೇಡಿಕೆಯಿದೆ. ಈಗ ಆನ್‌ಲೈನ್‌ನಲ್ಲಿಯೂ ಈ ಸೀರೆಗಳ ಮಾರಾಟವಾಗುತ್ತಿದೆ. ₹1,000ದಿಂದ ₹10 ಸಾವಿರದವರೆಗೆ ದರವಿದೆ.
‘ನಾವು ಮಾರುಕಟ್ಟೆಯಲ್ಲಿ ಹಿಂದಿರಬಹುದು. ಆದರೆ, ಹೊಸ ಹೊಸ ವಿನ್ಯಾಸಗಳ ಸೀರೆ ಸಿದ್ಧಪಡಿಸುತ್ತ ಬಂದಿದ್ದೇವೆ. ಪ್ರತಿವರ್ಷವೂ ಬಗೆಬಗೆಯ ವಿನ್ಯಾಸಗಳ ಸೀರೆ ಇಲ್ಲಿ ಸಿದ್ಧವಾಗುತ್ತಿವೆ’ ಎಂದು ಮತ್ತೊಬ್ಬ ನೇಕಾರ ರಾಜೇಂದ್ರ ಕೊಳದೂರ ಹೇಳುತ್ತಾರೆ.
ಪೂರಕ ಮಾಹಿತಿ: ಚನ್ನಪ್ಪ ಮಾದರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.