ಜನಪದ ವಿದ್ವಾಂಸ, ಸಂಶೋಧಕ, ಪ್ರಾಧ್ಯಾಪಕ...ಹೀಗೆ ಬಹುಮುಖ ವ್ಯಕ್ತಿತ್ವದ ಡಾ.ಕೆ.ಆರ್.ದುರ್ಗಾದಾಸ್ ಅವರಿಗೆ ಧಾರವಾಡದಲ್ಲಿ ಇಂದು ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಅವರ ವ್ಯಕ್ತಿತ್ವದ ಮೇಲೊಂದು ಇಣುಕು ನೋಟ ಇಲ್ಲಿದೆ...
*
ನನ್ನ ಬೆಳಗಿನ ವಿಹಾರದಲ್ಲಿ ವಾಡಿಕೆಯಂತೆ ಅನೇಕರ ಭೆಟ್ಟಿಯಾಗುತ್ತಿತ್ತು. ಆದರೆ ಕೆಲಹೊತ್ತು ನಿಂತು, ನನ್ನೊಡನೆ ಮಾತನಾಡಿ ಹೋಗುತ್ತಿದ್ದವರಲ್ಲಿ ಡಾ. ಕೆ.ಆರ್. ದುರ್ಗಾದಾಸ್ ಅವರೂ ಒಬ್ಬರು. ಧಾರವಾಡದ ಕಲ್ಯಾಣನಗರದಿಂದ ವಿಶ್ವವಿದ್ಯಾಲಯದ ಅತಿಥಿಗೃಹದ ಕಡೆಗೆ ನಾನು ಏರಿ ಹೋಗುತ್ತಿದ್ದರೆ, ಅವರು ವಿಶ್ವವಿದ್ಯಾಲಯದ ವಸತಿ ನಿಲಯದಿಂದ ಕಲ್ಯಾಣನಗರದ ಕಡೆಗೆ ಇಳಿದು ಬರುತ್ತಿದ್ದರು. ಮುಂದೆ ರೈಲು ನಿಲ್ದಾಣದವರೆಗೂ ಹೋಗುತ್ತಿದ್ದರೆಂದು ತೋರುತ್ತದೆ.
ದುರ್ಗಾದಾಸ್ ಅವರ ಜೊತೆಗೆ ಸಾಮಾನ್ಯವಾಗಿ ಮೂರು-ನಾಲ್ಕು ಜನ ಇದ್ದೇ ಇರುತ್ತಿದ್ದರು. ಅವರು ವಿದ್ಯಾರ್ಥಿಗಳಾಗಿರಬಹುದು, ಊರಿಂದ ಬಂದ ಅತಿಥಿಗಳಾಗಿರಬಹುದು. ಕೆಲವು ಸಲ ‘ನಿಮ್ಮ ಮನೆಯ ಕಡೆಗೇ ಹೊರಟಿದ್ದೆವು’ ಎಂದೂ ಹೇಳುತ್ತಿದ್ದರು. ಏನು ವಿಷಯವೆಂದು ಕೇಳಿದಾಗ ತಮ್ಮ ಜೊತೆಗಿದ್ದವರ ಪರಿಚಯ ಮಾಡಿಸಿ, ಅವರ ಸಲುವಾಗಿ ಆಗಬೇಕಾದ ಸಣ್ಣ-ಪುಟ್ಟ ಕೆಲಸಗಳ ಬಗ್ಗೆ ಹೇಳುತ್ತಿದ್ದರು. ಅವರ ಈ ಸಮುದಾಯ ಪ್ರಜ್ಞೆಯನ್ನು ನಾನು ಮೊದಲಿನಿಂದಲೂ ಗುರುತಿಸಿದ್ದೆ.
ಹೊಸಪೇಟೆಯ ರಾಮಸಾಗರದ ದುರ್ಗಾದಾಸರು ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದವರು. ಬಸವಕಲ್ಯಾಣದ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕ ವೃತ್ತಿಯನ್ನು ಆರಂಭಿಸಿ, ನಂತರ ತಮ್ಮದೇ ಜಿಲ್ಲೆಯ ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಮುಂದುವರೆದು, ಬೆಳಗಾವಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರವಾಚಕರಾಗಿ ಬೋಧಿಸಿದವರು, ಕೊನೆಗೆ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಳೆದ ಹದಿನೇಳು ವರ್ಷಗಳಿಂದಲೂ ಕೆಲಸ ಮಾಡುತ್ತಿರುವುದನ್ನು ನೋಡಿದರೆ, ಯಾವುದೋ ಒಂದು ಅಂತರಂಗದ ಸಂಬಂಧ ಈ ವಿಶ್ವವಿದ್ಯಾಲಯದೊಡನೆ ಅವರಿಗೆ ಇದ್ದಂತೆ ತೋರುತ್ತದೆ.
ಕಲ್ಯಾಣನಗರದಲ್ಲಿಯೇ ತಮ್ಮ ಹೊಸ ಮನೆಯನ್ನು ಕಟ್ಟಿಸಿ, ಅದಕ್ಕೆ ‘ಜೀವ ಧ್ವನಿ’ ಎಂದು ಹೆಸರಿಟ್ಟಿದ್ದು ಕೂಡ ಆಕಸ್ಮಿಕವಿರಲಾರದೆಂದು ನಾನು ಭಾವಿಸುತ್ತೇನೆ (ನನ್ನ ಒಂದು ಕವನ ಸಂಗ್ರಹದ ಹೆಸರು ‘ಜೀವ ಧ್ವನಿ’). ಅದೇನೇ ಇರಲಿ, ಅವರ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸ್ಫೂರ್ತಿಕೇಂದ್ರ ಧಾರವಾಡವೇ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.
ಆಧುನಿಕ ಸಾಹಿತ್ಯ ವಿಮರ್ಶೆ ಹಾಗೂ ಜಾನಪದ ಅವರ ಆಸಕ್ತಿಯ ಕ್ಷೇತ್ರಗಳಾಗಿದ್ದು, ಇದುವರೆಗೆ ಪ್ರಕಟಗೊಂಡಿರುವ ಹದಿನೇಳು ಕೃತಿಗಳು ಕೂಡ ಅದಕ್ಕನುಗುಣವಾಗಿಯೇ ಇವೆ. ‘ಬಳ್ಳಾರಿ ಜಿಲ್ಲೆಯ ಬಯಲಾಟಗಳು’ ಅವರ ಪಿಎಚ್.ಡಿ. ಸಂಪ್ರಬಂಧದ ವಿಷಯವಾಗಿದ್ದು, ಮುಂದಿನ ಕೆಲವು ಕೃತಿಗಳಲ್ಲಿಯೂ ಆ ಸಂಸ್ಕೃತಿಯ ವಿವಿಧ ಮುಖಗಳನ್ನು ಕಾಣಬಹುದು.
ನಾನು ಬಾಲ್ಯದಲ್ಲಿ ನೋಡಿದ್ದ ಬಯಲಾಟ (ದೊಡ್ಡಾಟ)ದ ಸ್ತುತಿಪದ ‘ಪೊಡವೀಯೋಳ್ ಕುಡುತಿನಿಯಾ ಒಡೆಯಾ ಭೀಮೇಶನಾ’ ಎಂಬುದು ಇನ್ನೂ ನನ್ನ ನೆನಪಿನಲ್ಲಿದೆ. ದುರ್ಗಾದಾಸರ ‘ಕುಡುತಿನಿ ನರಸಿಂಗರಾಯ ಕೃತ ಬಯಲಾಟಗಳು’ ಪುಸ್ತಕವನ್ನು ನೋಡಿದ ಮೇಲೆ, ‘ಕುಡುತಿನಿ’ ಶಬ್ದದ ಬಗ್ಗೆ ಮೊದಲಿನಿಂದಲೂ ನನಗಿದ್ದ ಸಂಶಯ ನಿವಾರಣೆಯಾಯಿತು.
ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿಯು ‘ಬಯಲಾಟ: ಹೊಸ ಸಾಧ್ಯತೆಗಳು’ ಕುರಿತು ಕಾರ್ಯಾಗಾರವೊಂದನ್ನು ಕೆಲ ವರ್ಷಗಳ ಹಿಂದೆ ಧಾರವಾಡದಲ್ಲಿ ಏರ್ಪಡಿಸಿತ್ತು. ಅಂದು ಸಂಜೆ ನಡೆದ ಬಯಲಾಟದ ಪ್ರದರ್ಶನವೊಂದರಲ್ಲಿ ಭೀಮನ ಪಾತ್ರ ವಹಿಸಿದ್ದ ದುರ್ಗಾದಾಸರ ಅಭಿನಯವನ್ನು ಮರೆಯುವಂತಿಲ್ಲ. ಬಯಲಾಟದ ಕಲಾವಿದರೂ ನಿರ್ದೇಶಕರೂ ಆದ ದುರ್ಗಾದಾಸರ ಇನ್ನೊಂದು ಮುಖವನ್ನು ಅಂದು ನೋಡಿದಂತಾಯಿತು. ಆ ಸಂದರ್ಭದಲ್ಲಿ ಅವರ ತಂದೆಯನ್ನೊಳಗೊಂಡಂತೆ ಅವರ ಊರಿನ ಕೆಲ ಜನರೂ ಬಂದು ಪ್ರೇಕ್ಷಕ ವರ್ಗದಲ್ಲಿ ಕುಳಿತು ಸಂತೋಷಪಟ್ಟದ್ದನ್ನು ನಾನು ನೋಡಿದೆ. ದುರ್ಗಾದಾಸರ ಸಮುದಾಯ ಪ್ರೀತಿಗೆ ಅದು ಇನ್ನೊಂದು ನಿದರ್ಶನವೆನಿಸಿತು.
ದುರ್ಗಾದಾಸರು ಮೂವತ್ತಕ್ಕೂ ಮಿಕ್ಕಿ ಸಂಶೋಧನಾ ವಿದ್ಯಾರ್ಥಿಗಳಿಗೆ ಎಂ.ಫಿಲ್. ಮತ್ತು ಪಿಎಚ್.ಡಿ. ಪದವಿಗಳಿಗೆ ಮಾರ್ಗದರ್ಶಕರಾಗಿರುವುದು ಗಮನಾರ್ಹವಾಗಿದೆ. ಸಂಶೋಧನೆ ಹಾಗೂ ಜಾನಪದ ವಿಷಯಗಳಿಗೆ ಸಂಬಂಧಪಟ್ಟಂತೆ ಹಲವಾರು ಮಹತ್ವದ ಲೇಖನಗಳನ್ನೂ ಅವರು ಪ್ರಕಟಿಸಿದ್ದಾರೆ. ಹತ್ತಾರು ಕಾರ್ಯಾಗಾರಗಳನ್ನು, ಸಮ್ಮೇಳನಗಳನ್ನು ದುರ್ಗಾದಾಸರು ಯಶಸ್ವಿಯಾಗಿ ಏರ್ಪಡಿಸಿ ತಮ್ಮ ಸಂಘಟನಾ ಸಾಮರ್ಥ್ಯವನ್ನೂ ವ್ಯಕ್ತಪಡಿಸಿದ್ದುಂಟು. ಅಧ್ಯಯನ, ಅಧ್ಯಾಪನ, ಸಂಶೋಧನ, ಸಂಘಟನೆ, ಆಡಳಿತ- ಹೀಗೆ ಅವರ ವ್ಯಕ್ತಿತ್ವಕ್ಕೆ ಹಲವು ಮುಖಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.