ADVERTISEMENT

PHOTOS: ಬಿಸಿಲ ಸಂಗಡ ಬದುಕು..

ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ಸುಡುವ ಬಿಸಿಲು, ಬೆವರು, ಬಾಯಾರಿಕೆ, ಗರಂ ಚಹಾ ಮತ್ತು ಮಿರ್ಚಿ ಬಜ್ಜಿ ಎಲ್ಲವೂ ಸಹಜ ಜೀವನದ ಭಾಗವೇ.

ತಾಜುದ್ದೀನ್‌ ಆಜಾದ್‌
Published 11 ಮೇ 2024, 21:44 IST
Last Updated 11 ಮೇ 2024, 21:44 IST
ಕಲ್ಲು ಕ್ವಾರಿನೇ ನಮಗ ದೊಡ್ಡ ಈಜುಕೊಳ. ಇಲ್ಲಿ ಯಾರ ಭಿ ರೊಕ್ಕಾ ಕೇಳಲ್ಲ, ಟೇಮಾಯ್ತು ಮ್ಯಾಗ ಬರ್‍ರಿ ಅಂತ ಸೀಟಿ ಊದಿ ಕರೆಲ್ಲ.. ನಾವು, ನಮ್ಮ ಈಜು.. ಈಟೇ ನಮ್ ದುನಿಯಾ. ಏನಂತೀರಿ?
ಕಲ್ಲು ಕ್ವಾರಿನೇ ನಮಗ ದೊಡ್ಡ ಈಜುಕೊಳ. ಇಲ್ಲಿ ಯಾರ ಭಿ ರೊಕ್ಕಾ ಕೇಳಲ್ಲ, ಟೇಮಾಯ್ತು ಮ್ಯಾಗ ಬರ್‍ರಿ ಅಂತ ಸೀಟಿ ಊದಿ ಕರೆಲ್ಲ.. ನಾವು, ನಮ್ಮ ಈಜು.. ಈಟೇ ನಮ್ ದುನಿಯಾ. ಏನಂತೀರಿ?   

ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ಸುಡುವ ಬಿಸಿಲು, ಬೆವರು, ಬಾಯಾರಿಕೆ, ಗರಂ ಚಹಾ ಮತ್ತು ಮಿರ್ಚಿ ಬಜ್ಜಿ ಎಲ್ಲವೂ ಸಹಜ ಜೀವನದ ಭಾಗವೇ. ಗರಿಷ್ಟ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿದರೂ ಬಿಸಿಗಾಳಿ ಸೂಸುವ ಬಿಸಿಲಿನ ಬಗ್ಗೆ ಚಿಂತಿಸುವುದಿಲ್ಲ, ಗೊಣಗುವುದಿಲ್ಲ, ಶಾಪ ಹಾಕುವುದಿಲ್ಲ. ನಡು ಮಧ್ಯಾಹ್ನದಲ್ಲೂ ‘ಬರ್ರೀ, ಚಹಾ ಕುಡಿಯೋಣ’ ಎನ್ನುವ ಆಹ್ವಾನ ಕೂಡ ಇಲ್ಲಿ ಸಹಜವೇ!

ಇಡೀ ವಾತಾವರಣ ಕಾದ ಕಾವಲಿಯಂತಾದರೂ ಬಜಾರ್‌ನಲ್ಲಿ ಖರೀದಿ ಭರಾಟೆ ಎಂದಿನಂತೆಯೇ ಇರುತ್ತದೆ. ಬಾಲಕರು, ಯುವಕರು ಗಲ್ಲಿ ಕ್ರಿಕೆಟ್‌ ಆಡುತ್ತಾ ಸಂಭ್ರಮಿಸುತ್ತಾರೆ. ಇಲ್ಲಿ ಸುಡು ಬಿಸಿಲಿನಲ್ಲೂ ಅವರ ದಿನಚರಿ ಎಂದಿನಂತೆ ಜರುಗುತ್ತದೆ. ಬಿಸಿಲಿನ ಝಳವನ್ನು ನಿರ್ಲಕ್ಷಿಸುವುದೊಂದೇ ಇವರಿಗೆ ಉಳಿದ ದಾರಿ. ಬಿಸಿಲನಾಡಿನಲ್ಲಿ ಬಿಸಿಲಿನೊಂದಿಗೆ ಸೆಣಸುವುದೇ ಕಲೆ.

ಸೂರ್ಯ ಕೆಂಡದುಂಡೆಯಾಗಿ ಬೆಂಕಿ ಉಗುಳುತ್ತಿದ್ದರೂ ಚಹಾದಂಗಡಿ ಮುಂದೆ ಗಿರಾಕಿಗಳಿಗೇನು ಬರವಿಲ್ಲ. ಚಹಾದ ಜೋಡಿ ಮಿರ್ಚಿ ಬಜ್ಜಿಯನ್ನು ಸವಿಯುವ ಸೊಗಸೇ ಬೇರೆ. ಬಿಸಿಲ ಬೇಗೆಯಲ್ಲೂ ಬಿಸಿಬಿಸಿ ಚಹಾ ಮತ್ತು ಮಿರ್ಚಿ ತಿನ್ನುವುದರ ಹಿಂದೆ ವೈಜ್ಞಾನಿಕ ವಿಶ್ಲೇಷಣೆ ಇದೆ. ಕಾರ ತಿಂದ ದೇಹ ಬೆವರು ಹರಿಸಿದಾಗ ಅದು ವಾಹನಗಳಲ್ಲಿ ರೇಡಿಯೇಟರ್‌ನಂತೆ ಕೆಲಸ ಮಾಡುತ್ತಾ ದೇಹವನ್ನು ತಂಪಾಗಿಸುವ ವ್ಯವಸ್ಥೆಗೆ ನೆರವಾಗುತ್ತದೆ ಎನ್ನುವುದು ವಿಜ್ಞಾನಿಗಳ ಅಭಿಮತ.

ADVERTISEMENT

ಮೇ ತಿಂಗಳಲ್ಲಿ ಸುಡುವ ಬಿಸಿಲೇ ಬೇರೆ. ಮುಂಜಾನೆಯಿಂದ ರಾತ್ರಿಯವರೆಗೆ ಬೆಂದ ಭೂಮಿಯಿಂದ ಭುಗಿಲೇಳುವ ಹಬೆ. ಈ ಭಾಗದಲ್ಲಿ ಬಿಸಿಲಿನದೇ ಮೇಲುಗೈ. ಅದರೊಂದಿಗೆ ಹೊಂದುಕೊಂಡು ಬದುಕುವುದು ಜಾಣತನ. ಏನಾದರೇನಂತೆ, ಬಿಸಿಲುನಾಡಿನಲ್ಲಿ ಬಿಸಿಲು ಗೆಲ್ಲಲೇಬೇಕಲ್ಲ...

ಕಲಬುರಗಿ ‘ಪ್ರಜಾವಾಣಿ’ಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ತಾಜುದ್ದೀನ್‌ ಆಜಾದ್‌ ಕಟ್ಟಿಕೊಟ್ಟ ಚಿತ್ರ–ಕಥೆ ಇಲ್ಲಿದೆ ನೋಡಿ...

ಸಂತಿ ಮುಗಿಸಿ ಊರಿಗೆ ಹೋಗಲತಿದ್ದೆವು... ನಮಗಭಿ ಮೊಮ್ಮಕ್ಕಳಗತೆ ಐಸ್‌ಕ್ರೋಟು ತಿಂಬಮ್ಮಿ ಅನಸ್ತು...
ರೈಲ್‌ ಬರಲಾಕ ಇನ್ನಾ ಟೈಮದ.. ಆಟರಾಗ ಧಗೀಗೆ ತೋಯ್ದ ಮೈಗಿ ತಣ್ಣೀರಾಗ ಮೈತೊಳಕೊಂಡು ಬರ್ತೆ..
ಬ್ಯಾಸಗಿ ಮುಗೇತನಾ ನಾವು ಹಿಂಗೆ ಇರ್ತೇವು ನೋಡ್ರಿ...
ಛಾದ ಕೂಡ ಗರಂ ಮಿರ್ಚಿ ಇಲ್ಲಂದುರ್‌.. ಏನ್‌ ಮಜಾ ಇರ್ತದ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.