‘175 ವರ್ಷಗಳ ಹಿಂದೆ ಮುತ್ತಜ್ಜ ಕಟ್ಟಿಸಿದ ವಿಶಿಷ್ಟ ಮನೆಯತ್ತ ಯಾರ ಗಮನ ಇರುತ್ತೆ? ಕಟ್ಟಡ ಪಾಳು ಬಿದ್ದಿರುತ್ತೆ ಇಲ್ಲವೇ ನೆಲಸಮ ಆಗಿರುತ್ತೆ ಎಂಬ ಭಾವನೆಯಿತ್ತು. ಆದರೆ ಅಚ್ಚರಿ ಎಂಬಂತೆ ಇಡೀ ಕಟ್ಟಡ ಮತ್ತು ಆವರಣ ಸುರಕ್ಷಿತವಾಗಿದೆ. ಇದನ್ನು ಕಾಯ್ದುಕೊಂಡ ಸುರಪುರದ ಜನರ ಪ್ರೀತಿ ಮತ್ತು ಅಭಿಮಾನ ಎಷ್ಟು ಕೊಂಡಾಡಿದರೂ ಸಾಲದು’.
ಸುರಪುರ ನಾಯಕ ಸಂಸ್ಥಾನದ ಆಡಳಿತಾಧಿಕಾರಿಯಾಗಿದ್ದ ಫಿಲಿಪ್ ಮೆಡೋಸ್ ಟೇಲರ್ ಅವರ ಮರಿಮೊಮ್ಮಕ್ಕಳಾದ ಅಲ್ಬರ್ಟೊ ಟೇಲರ್ ಮತ್ತು ಜುಲಿಯನ್ ಟೇಲರ್ ಅವರು ಟೇಲರ್ ಮಂಜಿಲ್ 1844 (ಬಂಗಲೆ) ಆವರಣಕ್ಕೆ ಹೆಜ್ಜೆಯಿಟ್ಟ ಮರುಕ್ಷಣವೇ ವ್ಯಕ್ತಪಡಿಸಿದ ಸಂತಸದ ಮಾತಿದು.
ಬಂಗಲೆಯ ಮೆಟ್ಟಿಲು ಏರುವಾಗ, ಕೋಣೆಗಳನ್ನು ವೀಕ್ಷಿಸುವಾಗ, ಏಕಕಾಲಕ್ಕೆ ಏಳು ಬಾಗಿಲು ತೆರೆಯುವುದು ಕಂಡಾಗ ಅವರ ಮೊಗದಲ್ಲಿ ಕುತೂಹಲವನ್ನು ನೋಡುವಂತಿತ್ತು. ಮುತ್ತಜ್ಜ ಇಲ್ಲೆಲ್ಲೋ ಕುರ್ಚಿ ಮೇಲೆ ಕೂತಿದ್ದರೆ, ಅವರೊಂದಿಗೆ ಒಂದು ಸುತ್ತು ಹರಟೆ ಹೊಡೆದರಾಯಿತು ಎಂಬ ಉಮೇದು ಇತ್ತು. ಕಾತರ ಮತ್ತು ತುಡಿತ ನಿಚ್ಚಳವಾಗಿ ಕಾಣುತಿತ್ತು.
ಫೆ.6 ರಿಂದ 8ರವರೆಗೆ ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ, ಭೀಮರಾಯನಗುಡಿ ಮತ್ತು ರಾಯಚೂರು ಜಿಲ್ಲೆಯ ಲಿಂಗಸುಗೂರು ಸುತ್ತಮುತ್ತ ಓಡಾಡಿದ ಅವರು ಮುತ್ತಜ್ಜನ ಗತಕಾಲದ ನೆನಪುಗಳನ್ನು ಶಾಶ್ವತವಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳಲು ಬಯಸಿದರು. ಟೇಲರ್ ಕಾಳಜಿ ತೋರಿದ ಬೋನಾಳ ಕೆರೆ, ಪಕ್ಷಿಧಾಮ ಮತ್ತು ಬಂಡೆಗಲ್ಲು ಮೇಲಿನ ಸೀಟು ವೀಕ್ಷಿಸಿದರು. ಎರಡು ಶತಮಾನದ ಹಿಂದೆ ಮುತ್ತಜ್ಜ ಹೊಂದಿದ್ದ ದೂರದೃಷ್ಟಿ ಬಗ್ಗೆ ಅಭಿಮಾನಪಟ್ಟರು.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸವಿರುವ ಅಲ್ಬರ್ಟೊ ಟೇಲರ್ ಮತ್ತು ಪತ್ನಿ ಕ್ರಿಸ್ಟಲ್ ಮೇಸ್ ಹಾಗೂ ಲಂಡನ್‌ನಲ್ಲಿ ವಾಸವಿರುವ ಜುಲಿಯನ್ ಟೇಲರ್ ಅವರ ಸುರಪುರ ಭೇಟಿ ಕುರಿತು ಸಣ್ಣ ಸುಳಿವೂ ಇರಲಿಲ್ಲ. ಆದರೆ, ಸ್ನೇಹಿತರಾದ ಶಹಾಪುರದ ನಾಗೇಂದ್ರ ಅವರು ದೂರವಾಣಿ ಕರೆ ಮಾಡಿ, ‘ಟೇಲರ್ ಬಂಗಲೆ ನೋಡಿದ ನೀವು ಅವರ ಮರಿಮೊಮ್ಮಕ್ಕಳನ್ನೂ ಭೇಟಿ ಆಗಬೇಕು’ ಎಂದು ಪ್ರೀತಿಯಿಂದ ಕರೆದರು. 15 ನಿಮಿಷ ಮಾತಿಗೆ ಸಿಕ್ಕರೂ ಸಾಕು ಎಂದು ಗಡಿಬಿಡಿ ಯಲ್ಲೇ ಕಲಬುರ್ಗಿಯಿಂದ ಹೊರಟೆ. ಮೂವರು ಭೀಮರಾಯನಗುಡಿಯಲ್ಲಿ ಸಿಕ್ಕರು. ಇವರೊಂದಿಗೆ ಪ್ರಾಧ್ಯಾಪಕ ರಾಘವೇಂದ್ರ ಹಾರಣಗೇರಾ ಕೂಡ ಜೊತೆಯಾದರು.
ಅತ್ಯಂತ ಕಡಿಮೆ ಅವಧಿಯ ಮಾತುಕತೆಯಲ್ಲಿ ಸಹೋದರರಿಬ್ಬರೂ ಟೇಲರ್ ನೆನಪಿನಲ್ಲಿ ಸುರಪುರದಲ್ಲಿ ಏನನ್ನಾದರೂ ಮಾಡುವ, ಕೊಡುಗೆ ನೀಡುವ ಇಂಗಿತ ವ್ಯಕ್ತಪಡಿಸಿದರು. ಸಾಧ್ಯವಾದಾಗಲೆಲ್ಲ ಸುರಪುರಕ್ಕೆ ಭೇಟಿ ನೀಡುತ್ತೇವೆ. ಟೇಲರ್ ನೆನಪು ಆಗಾಗ್ಗೆ ತಾಜಾ ಮಾಡಿಕೊಳ್ಳಲು ತಮ್ಮ ಮಕ್ಕಳನ್ನು ಕರೆತರುವುದಾಗಿ ಖುಷಿಯಿಂದ ಹೇಳಿದರು.
ನಂಟು ಪತ್ತೆಯಾಗಿದ್ದು ಹೀಗೆ
ನೂರಾರು ವರ್ಷಗಳ ಹಿಂದೆಯೇ ಕಡಿತಗೊಂಡ ಸುರಪುರ ಸಂಪರ್ಕವನ್ನು ಟೇಲರ್ ಸಹೋದರರು ಪುನರ್ ಸ್ಥಾಪನೆ ಮಾಡಿಕೊಂಡ ಕತೆ ಆಸಕ್ತಿಕರವಾಗಿದೆ. 1999ರಲ್ಲಿ ಇಂಗ್ಲೆಂಡ್‌ಗೆ ಸಹೋದರನ ಮನೆಗೆ ಭೇಟಿ ನೀಡಿದ ಅಲ್ಬರ್ಟೊ ಅವರಿಗೆ ಮುತ್ತಜ್ಜ ಟೇಲರ್ ರಚಿಸಿದ ‘ಸ್ಟೋರಿ ಆಫ್ ಮೈ ಲೈಫ್’ ಕೃತಿ ಸಿಕ್ಕಿತು. ಕೃತಿ ಕುರಿತು ಹೆಚ್ಚಿನ ಮಾಹಿತಿ ಹುಡುಕಲು ಆರಂಭಿಸಿದ ಅವರು ಅಂತರ್ಜಾಲ ಮತ್ತು ಪರ್ಯಾಯ ಮಾರ್ಗಗಳಿಗೆ ಮೊರೆ ಹೋದರು. ಅಲ್ಲಲ್ಲಿ ಅವರಿಗೆ ಸಣ್ಣ ಎಳೆ ಸಿಕ್ಕಿತ್ತು. ದೊರೆತಷ್ಟು ಮಾಹಿತಿ ಆಧರಿಸಿಯೇ ಅವರು ಭಾರತಕ್ಕೆ ಭೇಟಿ ನೀಡಲು ತೀರ್ಮಾನಿಸಿದರು.
ಈ ಹಂತದಲ್ಲೇ ಅವರಿಗೆ ಆಸ್ಟ್ರೇಲಿಯಾದಲ್ಲಿ ವಾಸವಿರುವ ಪಶ್ಚಿಮ ಬಂಗಾಳ ಮೂಲದ ಸುಪ್ರತಿಕ್ ಮುಖರ್ಜಿಯವರ ಪರಿಚಯವಾಯಿತು. ಅವರ ಮುಖಾಂತರ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಭಾಸ್ಕರರಾವ್ ಮುಡಬೂಳ, ಉಮೇಶ್ ಮತ್ತು ಸುರಪುರ ಸಂಸ್ಥಾನದ ಪ್ರಧಾನ ಮಂತ್ರಿ ವಂಶಸ್ಥರಾದ ನಿಷ್ಠಿಯವರ ಪರಿಚಯವಾಯಿತು. ಅವರನ್ನು ಭೇಟಿಯಾಗುವ ನೆಪದಲ್ಲಿ 2012ರಲ್ಲಿ ಅವರು ಸುರಪುರಕ್ಕೆ ಭೇಟಿ ನೀಡಿದರು. ಸುಪ್ರತಿಕ್ ಮುಖರ್ಜಿಯವರು ಸುರಪುರ ಸಂಸ್ಥಾನ ಕುರಿತು ಆಸಕ್ತಿ ತಳೆದು 1998ರಲ್ಲೇ ಸಾಕ್ಷ್ಯಚಿತ್ರವನ್ನು ನಿರ್ಮಿಸಿದವರು. ಅದು ದೂರದರ್ಶನದ ‘ಸುರಭಿ’ ಧಾರಾವಾಹಿಯಲ್ಲಿ ಪ್ರಸಾರವೂ ಆಯಿತು.’
ಕೃಷಿಕ ಜುಲಿಯನ್
ಇಂಗ್ಲೆಂಡ್‌ನಲ್ಲಿ ನೂರಾರು ಎಕರೆ ಜಮೀನು ಹೊಂದಿರುವ ಜುಲಿಯನ್ ಕೃಷಿಕರಾಗಿದ್ದರೆ, ಅಲ್ಬರ್ಟೊ ದಂತವೈದ್ಯರು. ದೂರದ ದೇಶದಲ್ಲಿ ವಾಸವಿದ್ದರೂ ಅವರಿಗೆ ಭಾರತದ ಕುರಿತು ಹೆಚ್ಚಿನ ಆಸಕ್ತಿ ಇದೆ. ಭಾರತ ಮತ್ತು ತಮ್ಮ ದೇಶಗಳ ನಡುವಿನ ಜೀವನಶೈಲಿ, ಭೌಗೋಳಿಕ ವ್ಯತ್ಯಾಸ ಮುಂತಾದವನ್ನು ಅರಿತುಕೊಂಡಿದ್ದಾರೆ. ಅಲ್ಲದೇ ಇಲ್ಲಿನ ಕಲೆ ಮತ್ತು ಸಂಸ್ಕೃತಿ ಬಗ್ಗೆ ಮಾಹಿತಿ ಹೊಂದಿದ್ದಾರೆ.
ಸುರಪುರ, ಶಹಾಪುರ ಜೊತೆಗಿನ ನಂಟನ್ನು ಮಾತುಕತೆಯುದ್ದಕ್ಕು ಮೆಲುಕು ಹಾಕಿದರು. ಜನರು ತೋರುವ ಪ್ರೀತಿ, ಅಭಿಮಾನಕ್ಕೆ ಸದಾ ಋಣಿ ಎಂದರು. ನೆನಪಿನ ದೊಡ್ಡ ಬುತ್ತಿಯೊಂದಿಗೆ ತಮ್ಮ ದೇಶಕ್ಕೆ ಮರಳಿದರು. ಇದಕ್ಕೂ ಮುನ್ನ ಲಿಂಗಸುಗೂರಿನಲ್ಲಿರುವ ಫಿಲಿಪ್ ಮೆಡೋಸ್ ಟೇಲರ್ ಪತ್ನಿ ಮೇರಿ ಸಮಾಧಿಗೆ ಭೇಟಿ ನೀಡಲು ಮರೆಯಲಿಲ್ಲ.
ಜುಲಿಯನ್‌ರಕೃಷಿ ಮಾತು
ಮುತ್ತಜ್ಜನ ಮನೆ ನೋಡಲು ಬಂದವರು, ನಮ್ಮೊಡನೆ ಕೃಷಿ ಕ್ಷೇತ್ರದ ಬಗ್ಗೆ ಮಾತನಾಡಿದ್ದು ಅಚ್ಚರಿ ಎನ್ನಿಸಿತು. ‘ಇಂಗ್ಲೆಂಡ್‌ನಲ್ಲಿ ರೈತರಿಗೆ ಸರ್ಕಾರದ ನೆರವಿದೆ. ಎಂಥದ್ದೇ ಕಷ್ಟ ಬಂದರೂ ಸರ್ಕಾರವು ಅವರನ್ನು ಕೈಬಿಡುವುದಿಲ್ಲ’ ಎಂದು ಜುಲಿಯನ್ ಅಲ್ಲಿನ ಪಾಲಿಸಿ ಬಗ್ಗೆ ಮಾತನಾಡಿದರು.
‘ಕೃಷಿಯಲ್ಲಿ ಆರ್ಥಿಕ ನಷ್ಟವಾದರೆ ಅಥವಾ ಖಿನ್ನತೆಗೆ ಒಳಗಾದರೆ ಸರ್ಕಾರ ರೈತರೊಂದಿಗೆ ಸಂವಾದ ನಡೆಸಿ, ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ. ನೀವು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಸರ್ಕಾರವು ರೈತರಿಗೆ ಸ್ಪಷ್ಟವಾಗಿ ಸೂಚಿಸಿದೆ’ –ಮಾತು ಮುಂದುವರಿಸಿದರು ಜುಲಿಯನ್.
‘ಭಾರತದಂತಹ ದೊಡ್ಡ ದೇಶದಲ್ಲಿ ಶೇ 70ರಷ್ಟು ಮಂದಿ ಇನ್ನೂ ಕೃಷಿ ಚಟುವಟಿಕೆಯನ್ನೇ ಅವಲಂಬಿಸಿರುವುದು ಅಚ್ಚರಿ ಮೂಡಿಸುತ್ತದೆ. ಆದರೆ ರೈತರ ಪಾಡು ಸಂಕಷ್ಟದಿಂದ ಕೂಡಿದೆ ಎಂಬುದು ಅರಿತು ಬೇಸರವಾಗುತ್ತದೆ. ಒಂದು ವೇಳೆ ಸರ್ಕಾರವು ಬೆನ್ನೆಲುಬಾಗಿ ನಿಂತರೆ ಮತ್ತು ಧೈರ್ಯ ತುಂಬಿದರೆ, ರೈತರು ಸಂಕಷ್ಟಕ್ಕೀಡಾಗುವ ಅಥವಾ ಪ್ರಾಣಕ್ಕೆ ಅಪಾಯ ಮಾಡಿಕೊಳ್ಳುವಂತಹ ಸ್ಥಿತಿ ಬರಲಿಕ್ಕಿಲ್ಲ’ ಎಂದು ಅವರು ತಿಳಿಸಿದರು.
ಪ್ರತಿ ವರ್ಷ ಸುರಪುರ ವಿಜಯೋತ್ಸವ
ಸುರಪುರ ಸಂಸ್ಥಾನದ ಮತ್ತು ಫಿಲಿಪ್ ಮೆಡೋಸ್ ಟೇಲರ್ ಕುರಿತ ನೆನಪುಗಳನ್ನು ದೀರ್ಘ ಕಾಲ ಉಳಿಯುವಂತೆ ಮಾಡಿರುವುದರಲ್ಲಿ ಹಿರಿಯ ಸಂಶೋಧಕ ಭಾಸ್ಕರರಾವ್ ಮುಡಬೂಳ ಅವರದ್ದು ಪ್ರಮುಖ ಪಾತ್ರವಿದೆ.
ಭೀಮರಾಯನಗುಡಿಯಲ್ಲಿ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ನಿರ್ದೇಶಕರು ಆಗಿರುವ ಅವರು ಟೇಲರ್ ಬರೆದಿರುವ ಕೃತಿಗಳು, ಪತ್ರಗಳು ಮತ್ತು ಬಳಸಿರುವ ವಸ್ತುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸಂಸ್ಥಾನದ ವಿಶಿಷ್ಟ ಇತಿಹಾಸವನ್ನು ಎಲ್ಲರಿಗೂ ತಿಳಿಪಡಿಸಲು ಮತ್ತು ಜಾಗೃತಿ ಮೂಡಿಸಲು ಅವರು ಖುಷಿಪಡುತ್ತಾರೆ. 1857ರ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸುರಪುರದ ಮಹತ್ವದ ಪಾತ್ರದ ನೆನಪಿನಲ್ಲಿ ಸಂಶೋಧನಾ ಕೇಂದ್ರದ ವತಿಯಿಂದ ಪ್ರತಿ ವರ್ಷ ಫೆಬ್ರುವರಿ 8ರಂದು ಸುರಪುರ ವಿಜಯೋತ್ಸವ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.