‘ನನ್ನ ಮಗಳು ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳಿಗೆ ಶಾಲೆಗೆ ಹೋಗಿ ಮನೆಗೆ ಬರುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಮನೆಯ ಜವಾಬ್ದಾರಿಗಳ ಅರಿವಿಲ್ಲ. ದುಡ್ಡನ್ನು ನೀರಿನಂತೆ ಖರ್ಚು ಮಾಡುತ್ತಾಳೆ. ಮನೆಯಲ್ಲಿನ ಆಗುಹೋಗುಗಳ ಬಗ್ಗೆಯೂ ನಿಗಾ ಇಲ್ಲ. ಈಗಂತೂ ಮನೆಯಲ್ಲೇ 24 ಗಂಟೆ ಇದ್ದರೂ ಮನೆ ಸ್ವಚ್ಛ ಮಾಡುವುದು, ಅಡುಗೆಯಲ್ಲಿ ಸಹಾಯ ಮಾಡುವುದು, ತನ್ನ ಕೋಣೆಯನ್ನು ಸ್ವಚ್ಛ ಮಾಡಿಕೊಳ್ಳುವುದು ಏನೂ ಕೆಲಸ ಮಾಡುವುದಿಲ್ಲ. ಮುಂದೆ ಇವಳು ಹೇಗೆ ಬದುಕುತ್ತಾಳೋ ಎನ್ನಿಸುತ್ತದೆ’ ಎಂದು ಮಗಳ ಬಗ್ಗೆ ದೂರುತ್ತಾರೆ ಕುಮುದಾ ಪಾಟೀಲ್.
ಹದಿಹರೆಯದ ಮಕ್ಕಳು ಜೀವನ ಕೌಶಲಗಳನ್ನು ಕಲಿಯುತ್ತಿಲ್ಲ, ಮನೆಯಲ್ಲಿನ ಖರ್ಚು–ವೆಚ್ಚಗಳ ಬಗ್ಗೆ ಗಮನ ಹರಿಸುತ್ತಿಲ್ಲ, ಸಣ್ಣ ಪುಟ್ಟ ವಿಷಯಗಳನ್ನೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂಬುದು ಇಂದಿನ ಹಲವು ಪೋಷಕರ ದೂರು. ‘ಆದರೆ ಈ ಕೊರೊನಾ ಸಮಯ ಅಂತಹ ಪೋಷಕರಿಗೆ ವರ ಎನ್ನಬಹುದು. ಮಕ್ಕಳಿಗೆಮನೆಯಲ್ಲಿಯೇ ಇಂತಹ ಜೀವನ ಕೌಶಲವನ್ನು ಕಲಿಸುವ ಮೂಲಕ ಸರಿದಾರಿಗೆ ತರುವ ಪ್ರಯತ್ನ ಮಾಡಲು ಇದು ಸಕಾಲ. ಆ ಮೂಲಕ ಅವರ ಭವಿಷ್ಯದ ದಾರಿಯನ್ನು ಸುಗಮಗೊಳಿಸಬಹುದು’ ಎನ್ನುತ್ತಾರೆ ಆಪ್ತ ಸಮಾಲೋಚಕ ಶೇಷಾದ್ರಿ ಎಂ.ಟಿ.
ಸಮಯ ನಿರ್ವಹಣೆಯ ಪಾಠ ಕಲಿಸಿ
ಶಾಲೆಗೆ ಹೋಗುವಾಗ ಮಕ್ಕಳು ನಿರ್ದಿಷ್ಟ ಸಮಯವನ್ನು ಪಾಲಿಸುತ್ತಿದ್ದರು. ಆದರೆ ಈಗ ಮನೆಯಲ್ಲಿಯೇ ಇರುವ ಮಕ್ಕಳು ಯಾವುದೇ ವೇಳಾಪಟ್ಟಿಯನ್ನು ಪಾಲಿಸುವುದಿಲ್ಲ. ಹಾಗಾಗಿ ಸಮಯಪಾಲನೆಯನ್ನು ಕಲಿಸಲು ಇದು ಒಳ್ಳೆಯ ಸಮಯ. ಈ ಸಂದರ್ಭದಲ್ಲಿ ಪೋಷಕರು ಸಮಯದ ಮೌಲ್ಯ ಹಾಗೂ ಪರಿಪಾಲನೆಯ ಕ್ರಮವನ್ನು ಮಕ್ಕಳಿಗೆ ಕಲಿಸಬೇಕು. ಮಕ್ಕಳು ತಮ್ಮದೇ ಆದ ಒಂದು ವೇಳಾಪಟ್ಟಿಯನ್ನು ರೂಪಿಸಿ ಅದನ್ನು ಪಾಲಿಸುವಂತೆ ನೋಡಿಕೊಳ್ಳಬೇಕು.
ಮನೆ ನಿಭಾಯಿಸುವುದು ತಿಳಿಸಿ
ದೊಡ್ಡವರಾದ ಮೇಲೆ ಮನೆಯನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಈಗಿನಿಂದಲೇ ಯೋಜನೆ ರೂಪಿಸುವುದು ತುಂಬಾ ಅಗತ್ಯ. ಮನೆಗೆ ಬೇಕಾಗುವ ವಸ್ತುಗಳು ಯಾವುವು, ಅವುಗಳ ಬೆಲೆ ಎಷ್ಟು, ಕಡಿಮೆ ಖರ್ಚಿನಲ್ಲಿ ಮನೆಯನ್ನು ನಡೆಸುವುದು ಹೇಗೆ ಎಂಬುದನ್ನು ಮಕ್ಕಳು ತಿಳಿದುಕೊಂಡಿರಬೇಕು. ಒಂದು ಕುಟುಂಬಕ್ಕೆ ವಾರಕ್ಕೆ ಎಷ್ಟು ಅಡುಗೆ ಸಾಮಾನು ಬೇಕು, ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬ ಲೆಕ್ಕಚಾರ ಮಕ್ಕಳಿಗೆ ತಿಳಿಯುವಂತೆ ಮಾಡಬೇಕು. ಅಡುಗೆಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಅಭ್ಯಾಸ ಮಾಡಿಸಿ.
ಹಣಕಾಸು ನಿರ್ವಹಣೆ: ‘ಹದಿಹರೆಯದವರಿಗೆ ಹಣಕಾಸು ನಿರ್ವಹಣೆಯನ್ನು ಕಲಿಸುವುದು ಒಂದು ಪ್ರಮುಖ ಜವಾಬ್ದಾರಿ. ಮನೆ ಬಾಡಿಗೆ, ವಿದ್ಯುತ್ ಬಿಲ್ ಹಾಗೂ ಮನೆ ನಿರ್ವಹಣೆ...ಹೀಗೆ ಸರಳ ಲೆಕ್ಕಾಚಾರವನ್ನು ಮಕ್ಕಳಿಗೆ ಪೋಷಕರು ಕಲಿಸಬೇಕು. ಮನೆಯ ತಿಂಗಳ ಬಜೆಟ್‌ನ ಪುಸ್ತಕವನ್ನು ರೆಡಿ ಮಾಡಲು ಮಕ್ಕಳಿಗೆ ತಿಳಿಸಬೇಕು’ ಎನ್ನುತ್ತಾರೆ ಶೇಷಾದ್ರಿ.
ಸಣ್ಣಪುಟ್ಟ ಆಕಸ್ಮಿಕಗಳನ್ನು ನಿಭಾಯಿಸಲು ಕಲಿಸಿ: ಮನೆಯೊಳಗೆ ಸಣ್ಣ ಅವಘಡಗಳು ಹಾಗೂ ಆಕಸ್ಮಿಕ ಘಟನೆಗಳು ಸಂಭವಿಸಿದಾಗ ಅವುಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದನ್ನು ಕಲಿಸಿ. ಮನೆಯೊಳಗೆ ನೀರು ಬರುವ ಮುಖ್ಯ ಗೇಟ್‌ವಾಲ್ವ್ ಎಲ್ಲಿದೆ, ಅದನ್ನು ಆನ್ ಮಾಡುವುದು, ಬಂದ್ ಮಾಡುವುದು ಹೇಗೆ, ಎಂಸಿಬಿ ಬಾಕ್ಸ್ ಎಲ್ಲಿರುತ್ತದೆ, ವಿದ್ಯುತ್‌ಗೆ ಸಂಬಂಧಿಸಿದ ತುರ್ತು ಪರಿಸ್ಥಿತಿ ಎದುರಾದಾಗ ಪ್ರತಿಕ್ರಿಯಿಸುವುದು ಹೇಗೆ ಎಂಬುದನ್ನೆಲ್ಲಾ ಕಲಿಸಬೇಕು. ಒಬ್ಬರೇ ಇದ್ದಾಗ ಇಂತಹ ಪರಿಸ್ಥಿತಿ ಹೇಗೆ ಎದುರಿಸಬೇಕು ಎಂಬುದನ್ನು ಡೆಮೊ ಮೂಲಕ ತಿಳಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.