ತಿಂಗಳ ಕೊನೆಯ ಭಾನುವಾರ ಹನ್ನೆರಡು ಜನರ ತಂಡವೊಂದುದು ಸರಕಾರಿ ಶಾಲೆಯಲ್ಲಿರುತ್ತದೆ. ಶಾಲೆಯ ಧೂಳನ್ನೊಮ್ಮೆ ಸ್ವಚ್ಛಗೊಳಸಿ, ಶಾಲಾ ಕೊಠಡಿಗಳನ್ನು ಶುಚಿಗೊಳಿಸಿಕೊಂಡು ಬಣ್ಣ ಬಳಿಯಲು ಆರಂಭಿಸಿ ಬಿಡುತ್ತದೆ. ಸಂಜೆ ಸೂರ್ಯಾಸ್ತವಾಗುವವರೆಗೂ ಈ ಕಾರ್ಯ ನಡೆಯುತ್ತದೆ. ಸಂಜೆ ಹೊತ್ತಿಗೆ ಶಾಲೆಯ ಕಟ್ಟಡ ನಳ-ನಳಿಸುತ್ತಿರುತ್ತದೆ. ‘ಶಾಲೆ ನಿಮ್ಮದು -ಸೇವೆ ನಮ್ಮದು’, ‘ಸರಕಾರಿ ಶಾಲೆ ಉಳಿಸಿ, ಬೆಳೆಸಿ’ ಎಂಬ ನುಡಿಯೊಂದಿಗೆ ಈ ತಂಡ ಅಲ್ಲಿಂದ ನಿರ್ಗಮಿಸುತ್ತದೆ.
ಇದು ಕೊಪ್ಪಳದ ಸಮಾನಮನಸ್ಕ ಶಿಕ್ಷಕರನ್ನೊಳಗೊಂಡ ‘ಕಲರವ ಶಿಕ್ಷಕರ ಬಳಗ’ ದ ಸೇವಾ ವೈಖರಿ. ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಈ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ತಂಡದ ಸದಸ್ಯರೆಲ್ಲ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರೆಂಬುದು ವಿಶೇಷ.
ಗ್ರಾಮೀಣ ಭಾಗದ ಅನೇಕ ಸರಕಾರಿ ಶಾಲೆಗಳು ಸುಣ್ಣ-ಬಣ್ಣ ಕಾಣದೆ ಕಳೆಗುಂದಿದ್ದವು. ಶಾಲಾ ಕೊಠಡಿಗಳು ಆಕರ್ಷಕವೂ, ಸ್ವಚ್ಛವಾಗಿಯೂ ಇರಬೇಕು ಎಂಬುದು ಈ ತಂಡದ ಮುಖ್ಯಸ್ಥರೂ, ಶಿಕ್ಷಕರೂ ಆದ ಬೀರಪ್ಪ ಅಂಡಗಿ ಮತ್ತು ಶರಣಪ್ಪ ರಡ್ಡೇರ್ ಇವರ ಚಿಂತನೆಯಾಗಿತ್ತು. ಸಮಾನ ಮನಸ್ಕ ಶಿಕ್ಷಕರೊಟ್ಟಿಗೆ ಈ ಚಿಂತನೆಯನ್ನು ಹಂಚಿಕೊಂಡರು. ಪರಿಣಾಮವಾಗಿ 2021ರಲ್ಲಿ ‘ಕಲರವ ಶಿಕ್ಷಕರ ಸೇವಾ ಬಳಗ’ ಎಂಬ ಹೆಸರಿನೊಂದಿಗೆ ಶಾಲೆಗಳಿಗೆ ಬಣ್ಣ ಹಚ್ಚುವ ಸೇವೆ ಪ್ರಾರಂಭವಾಯಿತು. ಕೊಪ್ಪಳ ತಾಲ್ಲೂಕಿನ ಇರಕಲ್‌ಗಡ ಕಿರಿಯ ಪ್ರಾಥಮಿಕ ಶಾಲೆಯನ್ನು ಶೃಂಗಾರಗೊಳಿಸುವುದರೊಂದಿಗೆ ಆರಂಭವಾದ ಇವರ ಸೇವೆ ನಿರಂತರವಾಗಿ ಇಲ್ಲಿಯವರೆಗೂ ಮುಂದುವರೆದಿದೆ. ಮೂರು ವರ್ಷಗಳಲ್ಲಿ ಪ್ರತಿ ತಿಂಗಳು ಒಂದು ಶಾಲೆಯಂತೆ 32 ಶಾಲೆಗಳನ್ನು ಇದುವರೆಗೂ ವರ್ಣಮಯ ಮಾಡಿದ್ದಾರೆ.
ಪ್ರತಿಯೊಂದು ಶಾಲೆಯ ಆಂದ ಚಂದಕ್ಕೆ ಕನಿಷ್ಠವೆಂದರೂ 30 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಈತನಕ ಶಾಲೆಗಳ ಶೃಂಗಾರಕ್ಕೆ ಸುಮಾರು 10 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ. ಇದನ್ನು ಈ ತಂಡದ 12 ಜನ ಶಿಕ್ಷಕರೇ ಸಮಾನವಾಗಿ ಭರಿಸಿದ್ದಾರೆ.
‘ನಮ್ಮೂರು ಹಾಲಳ್ಳಿ ಶಾಲೆಗೆ ಬಣ್ಣವಿದ್ದಿಲ್ರಿ. ಈ ತಂಡದವ್ರು ಬೆಳಿಗ್ಗೆನೆ ಬಂದು ಶಾಲೆಯ ಎಲ್ಲಾ ಕೊಠಡಿಗಳಿಗೂ ಬಣ್ಣ ಬಳ್ದು ಬಲು ಚಂದ ಮಾಡ್ಯಾರ್‍ರಿ. ಶಾಲಿ ನೋಡಿದ್ರನ ನಮ್ಗ ಆನಂದಾಗುತ್ತ. ಈ ಉಪಕಾರನ ನಾವ್ ಮರೆಯಂಗಿಲ್ರಿ’ ಎಂದು ತಂಡದ ಕುರಿತು ಸಂತಸ ಹಂಚಿಕೊಳ್ಳುತ್ತಾರೆ ಹಾಲಹಳ್ಳಿ ಶಾಲೆಯ ಎಸ್. ಡಿ. ಎಂ.ಸಿ ಅಧ್ಯಕ್ಷರಾದ ಮಾರುತಿ ಉಪ್ಪಾರ.
ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆಯ ಯೋಜನೆಗಳಾದ ‘ಶಾಲೆಗಾಗಿ ನಾವು-ನೀವು’, ಹಳೇ ವಿದ್ಯಾರ್ಥಿಗಳ ಸಂಘಗಳ ರಚನೆಗೆ ಪ್ರೋತ್ಸಾಹ, ಶಾಲೆಗಳಲ್ಲಿ ಸುಸಜ್ಜಿತ ಗ್ರಂಥಾಲಯ ಸ್ಥಾಪನೆಯಂಥ ವಿಷಯಗಳ ಕುರಿತು ಜಾಗೃತಿ ಮತ್ತು ಕಾರ್ಯಾನುಷ್ಠಾನ ಮಾಡುವ ಯೋಜನೆಯನ್ನು ಈ ತಂಡ ಹಾಕಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.