ADVERTISEMENT

ಸಂಚಾರ ಸಂಚಕಾರ; ತಂತ್ರಜ್ಞಾನಕ್ಕೆ ಜೈಕಾರ

ಇ.ಎಸ್.ಸುಧೀಂದ್ರ ಪ್ರಸಾದ್
Published 25 ಜೂನ್ 2023, 0:40 IST
Last Updated 25 ಜೂನ್ 2023, 0:40 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮಹಾನಗರಗಳ ಮೂರನೇ ಮನೆಯಲ್ಲಿ ನೂರೆಂಟು ರಗಳೆ.....

ಹಾರುವ ಕಾರುಗಳು, ಹೈಪರ್ ಲೂಪ್‌ಗಳ ಅಭಿವೃದ್ಧಿಯಾಗುತ್ತಿರುವ ಕಾಲಘಟ್ಟವಿದು. ಹೀಗಿದ್ದೂ ರಸ್ತೆ ಮೇಲೆ ಓಡುವ ವಾಹನಗಳು ತೆವಳುವುದನ್ನು ತಪ್ಪಿಸುವುದು ಈವರೆಗೂ ಸವಾಲಿನ ಕೆಲಸವೇ ಆಗಿದೆ.

ಒಂದರ ಮೇಲೊಂದರಂತಿರುವ ಮೇಲುಸೇತುವೆಗಳು, ಅಡ್ಡಾದಿಡ್ಡಿ ವಾಹನಗಳು ಸಿಗದಂತೆ ಮಾಡುವ ಅಂಡರ್‌ಪಾಸ್‌ಗಳು, ಹೆಜ್ಜೆ ಹೆಜ್ಜೆಗೂ ಎದುರಾಗುವ ಸಿಗ್ನಲ್‌ಗಳು, ಆ ಸಿಗ್ನಲ್‌ಗಳಲ್ಲಿ ವಾಹನ ಸವಾರರ ಸಂಯಮ ಬೇಡುವ ಸೆಕೆಂಡುಗಳ ಎಣಿಕೆ. ವಾಹನ ದಟ್ಟಣೆಯಿಂದ ಪಾರಾಗಲು ಪಾದಚಾರಿ ಮಾರ್ಗ ಏರುವ ದ್ವಿಚಕ್ರವಾಹನ ಸವಾರರು. ‘ಇಲ್ಲೇ ಇದ್ದೀನಿ.. ಐದು ನಿಮಿಷ’ ಎಂಬ ಪದೇ ಪದೇ ಕಿವಿಮೇಲೆ ಬೀಳುವ ಸಾಮಾನ್ಯ ಹೇಳಿಕೆ... ಇವಿಷ್ಟು ಭಾರತದ ಯಾವುದೇ ಮಹಾನಗರಗಳಲ್ಲಿನ ರಸ್ತೆಗಳಲ್ಲಿ ನಿತ್ಯ ಕಂಡುಬರುವ ದೃಶ್ಯಗಳು. ಮಹಾನಗರಗಳಲ್ಲಿ ವಾಸಿಸುವವರು ಕಚೇರಿ, ಮನೆ ಹೊರತುಪಡಿಸಿ ಅತಿ ಹೆಚ್ಚು ಸಮಯ ಕಳೆಯುವ ಮೂರನೇ ಸ್ಥಳವೇ ಟ್ರಾಫಿಕ್‌.

ADVERTISEMENT

ಭಾರತದ ಪ್ರಮುಖ ನಗರಗಳಷ್ಟೇ ಅಲ್ಲ, ಜಗತ್ತಿನ ಪ್ರಮುಖ ನಗರಗಳೂ ಈ ಜಂಜಡದಿಂದ ಈವರೆಗೂ ಸಂಪೂರ್ಣವಾಗಿ ಪಾರಾದ ಉದಾಹರಣೆ ಇಲ್ಲ. ಆದರೂ ಏರುತ್ತಿರುವ ವಾಹನಗಳ ಸಂಖ್ಯೆಗೆ ಅನುಗುಣವಾಗಿ ವಿಸ್ತರಣೆಗೊಳ್ಳದ ರಸ್ತೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಾ ವ್ಯವಸ್ಥೆಯು ಬದಲಾವಣೆಗಾಗಿ ಹಾತೊರೆಯುತ್ತಿದೆ. ಬೆಂಗಳೂರು ಮಹಾನಗರದ ಟ್ರಾಫಿಕ್‌ ಸಿಗ್ನಲ್ಲುಗಳಲ್ಲೂ ಇನ್ನೇನು ಡ್ರೋನ್‌ಗಳು ಹಾರಲಿವೆ.

ಇಡೀ ಜಗತ್ತಿನಲ್ಲಿ 800 ಕೋಟಿ ಜನಸಂಖ್ಯೆಯ ಜತೆಗೆ 150 ಕೋಟಿಗೂ ಅಧಿಕ ವಾಹನಗಳಿವೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ರಸ್ತೆ ಸಂಚಾರದ ಸಮಯ ಇತ್ತೀಚಿನ ದಿನಗಳಲ್ಲಿ ಶೇ 25ರಷ್ಟು ಹೆಚ್ಚಳವಾಗಿದೆ. ಅದಕ್ಕೆ ಪೂರಕವಾಗಿ ಮಾಲಿನ್ಯದ ಪ್ರಮಾಣವೂ ಹೆಚ್ಚಿದೆ.
ಭಾರತದಲ್ಲಿ ಬೆಂಗಳೂರು ಎರಡನೇ ಅತಿ ಹೆಚ್ಚು ವಾಹನಗಳಿರುವ ನಗರ. ಇಲ್ಲಿ ಸುಮಾರು 1.10 ಕೋಟಿ ವಾಹನಗಳು ನಿತ್ಯ ಸಂಚರಿಸುತ್ತವೆ ಎಂದು ದಾಖಲೆಗಳು ಹೇಳುತ್ತವೆ. ಇಲ್ಲಿ ವಾಹನ ಹಾಗೂ ಜನಸಂಖ್ಯೆಯ ಅನುಪಾತ 1:1.3 ಇದೆ. ಅಂದರೆ 1.3 ಜನರಿಗೊಂದು ವಾಹನ ಇದೆಯೆಂದು ಅರ್ಥ. ಇಲ್ಲಿ ಸಾರ್ವಜನಿಕ ಸಾರಿಗೆ ಬಳಸುವವರ ಸಂಖ್ಯೆ ಶೇ 47ರಷ್ಟು ಮಾತ್ರ. ದೇಶದ ಇತರ ಮಹಾನಗರಗಳಿಗೆ ಹೋಲಿಸಿದಲ್ಲಿ ಇದು ಅತ್ಯಂತ ಕಡಿಮೆ.

2025ರ ಹೊತ್ತಿಗೆ ಬೆಂಗಳೂರಿನಲ್ಲಿ 300ರಿಂದ 500 ಹೊಸ ಸಿಗ್ನಲ್‌ಗಳು ಹುಟ್ಟಿಕೊಳ್ಳಲಿವೆ ಎಂದು ಅಂದಾಜಿಸಲಾಗಿದೆ. ಬೇಡಿಕೆಗೆ ತಕ್ಕಂತೆ ಮಾನವನ ಹಸ್ತಕ್ಷೇಪವಿಲ್ಲದೆ ಸಿಗ್ನಲ್ ಸಮಯವನ್ನು ವಿಸ್ತರಿಸುವ ಅಥವಾ ಕಡಿತಗೊಳಿಸುವ ‘ಹೊಂದಿಸಬಲ್ಲ ಸಂಚಾರ ನಿಯಂತ್ರಣ ವ್ಯವಸ್ಥೆ ಹಾಗೂ ಕೃತಕ ಬುದ್ಧಿಮತ್ತೆ’ಯನ್ನು ಅಳವಡಿಸುವ ನಿಟ್ಟಿನಲ್ಲಿ ಸಿದ್ಧತೆ ಆರಂಭಗೊಂಡಿದೆ. ಇದರಿಂದ ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಾಗೂ ಅಂತಹ ವಾಹನಗಳ ನೋಂದಣಿ ಸಂಖ್ಯೆ ಫಲಕವನ್ನು ಸ್ವಯಂಚಾಲಿತವಾಗಿ ದಾಖಲಿಸುವ ವ್ಯವಸ್ಥೆ ಇದರಲ್ಲಿ ಇರಲಿದೆ. ಹೀಗಾದರೆ ಸಂಚಾರ ದಟ್ಟಣೆ ನಿಯಂತ್ರಿಸುವ ಒತ್ತಡದಿಂದ ಪೊಲೀಸರು ಪಾರಾಗಲಿದ್ದಾರೆ ಎಂಬುದು ಅಂದಾಜು.

ಮುಂದುವರಿದ ರಾಷ್ಟ್ರಗಳಲ್ಲಿ ರೊಬೊಟಿಕ್ ಅಥವಾ ಸ್ವಯಂ ಚಾಲಿತ ಕಾರುಗಳು ಟ್ರಾಫಿಕ್ ಸಮಸ್ಯೆ ಹೆಚ್ಚಿಸಿದರೆ, ಭಾರತದಲ್ಲಿ ಅಂಕೆ ಇಲ್ಲದೆ ಏರುತ್ತಿರುವ ವಾಹನಗಳ ಸಂಖ್ಯೆಯೇ ಮುಖ್ಯ ಕಾರಣವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ. ಬೆಂಗಳೂರಿನಲ್ಲಿ ಪೀಕ್ ಅವರ್‌ನಲ್ಲಿ ವಾಹನಗಳ ಸರಾಸರಿ ವೇಗ ಪ್ರತಿ ಗಂಟೆಗೆ 4 ಕಿ.ಮೀ ಮಾತ್ರ ಎನ್ನುವುದು ಈ ಮಾತಿಗೆ ಪುಷ್ಟಿ ನೀಡುತ್ತಿದೆ.

ಸಂಚಾರ ನಿಯಮ ಉಲ್ಲಂಘನೆ ಪತ್ತೆಗಾಗಿ ಹೊಸ ಮಾರ್ಗ ಕಂಡುಕೊಂಡಿರುವ ಸಂಚಾರ ಪೊಲೀಸರು, ವಾಹನಗಳ ನೋಂದಣಿ ಸಂಖ್ಯೆ ಫಲಕ ಸಮೇತ ನಿಯಮ ಉಲ್ಲಂಘನೆ ಪತ್ತೆ ಮಾಡುವ ಆಧುನಿಕ ಕ್ಯಾಮೆರಾಗಳನ್ನು ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸುತ್ತಿದ್ದಾರೆ. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಹೀಗಿದ್ದರೂ ಈಗಲೂ ಹಿಂದಿನಂತೆಯೇ ಕಾಯಲು ಸೆಕೆಂಡುಗಳನ್ನು ತೋರಿಸುವ ಸಿಗ್ನಲ್‌ಗಳು ಅಲ್ಲಲ್ಲಿ ಕೆಲಸ ಮಾಡುತ್ತಿವೆ. ವಾಹನಗಳನ್ನು ತಡೆಯುವ ಬದಲು ಸರಾಗವಾಗಿ ಸಾಗುವಂತೆ ಮಾಡಲು ಯೋಜನೆಗಳು ರೂಪುಗೊಳ್ಳುತ್ತಲೇ ಇವೆ. ಒಂದೆಡೆ ಮೇಲುಸೇತುವೆ, ಅಂಡರ್‌ಪಾಸ್‌ಗಳ ನಿರ್ಮಾಣ, ಏಕಮುಖ ಸಂಚಾರದ ಪ್ರಯೋಗಗಳು ಈಗಲೂ ಚಾಲ್ತಿಯಲ್ಲಿವೆ.

ಜಗತ್ತಿನಲ್ಲೇ ಅತ್ಯಂತ ವ್ಯವಸ್ಥಿತ ಹಾಗೂ ಸುಸಜ್ಜಿತ ಸಂಚಾರ ನಿಯಂತ್ರಣ ವ್ಯವಸ್ಥೆ ಹೊಂದಿರುವ ಸಿಂಗಾಪುರ್, ಲಂಡನ್, ನ್ಯೂಯಾರ್ಕ್‌ನಲ್ಲಿ ರಸ್ತೆಗಳು ಹಾಗೂ ವೃತ್ತಗಳಲ್ಲಿನ ಸಂಚಾರ ದಟ್ಟಣೆಯನ್ನು ಹದ್ದಿನ ಕಣ್ಣಿನಲ್ಲೇ ನೋಡುವ ನೂರಾರು ಕ್ಯಾಮೆರಾಗಳು, ಅವುಗಳಿಗೆ ಅನುಗುಣವಾಗಿ ಸಂದೇಶ ನೀಡುವ ಸೆನ್ಸರ್‌ಗಳು, ಅದಕ್ಕೆ ತಕ್ಕಂತೆ ವರ್ತಿಸುವ ಸಿಗ್ನಲ್ ದೀಪಗಳನ್ನು ಅಳವಡಿಸಲಾಗಿದೆ. ಹೀಗಿದ್ದರೂ ಏರುತ್ತಿರುವ ವಾಹನ ದಟ್ಟಣೆಯು ಈ ನಿಗಾ ವ್ಯವಸ್ಥೆಗೂ ಸವಾಲೊಡ್ಡುತ್ತಿದೆ.

ಯಂತ್ರಗಳ ಜತೆಗೆ ಇತ್ತೀಚೆಗೆ ಕೃತಕ ಬುದ್ಧಿಮತ್ತೆಯನ್ನೂ ಟ್ರಾಫಿಕ್ ನಿಯಂತ್ರಣಕ್ಕಾಗಿ ಬಳಸಲಾಗುತ್ತಿದೆ. ಇದಕ್ಕೊಂದು ಉದಾಹರಣೆ ಎಂಬಂತೆ, ಕೇರಳದಲ್ಲಿ ಜೂನ್ ತಿಂಗಳ ಮೊದಲ ವಾರದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ವಾಹನ ದಟ್ಟಣೆ ನಿಯಂತ್ರಣ ಸಾಧನವನ್ನು ಅಳವಡಿಸಲಾಗಿತ್ತು. ಪ್ರತಿನಿತ್ಯ ಅಲ್ಲಿ ಸರಾಸರಿ 12 ಜನ ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದರು. ಇದನ್ನು ತಪ್ಪಿಸಲು ಅಳವಡಿಸಿದ ಕೃತಕ ಬುದ್ಧಿಮತ್ತೆ ಸಾಧನದ ಪರಿಣಾಮ, ಮೂರು ದಿನಗಳಲ್ಲಿ ಬರೋಬ್ಬರಿ ಮೂರೂವರೆ ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಇದರಲ್ಲಿ ದಾಖಲಾಗಿವೆ. ಇದರಲ್ಲಿ 29 ಸಾವಿರ ಸವಾರರಿಗೆ ದಂಡದ ಚಲನ್ ಕಳುಹಿಸಿರುವುದು ನೂತನ ತಂತ್ರಜ್ಞಾನದ ಕೊಡುಗೆ ಎಂದು ಕೇರಳ ಸರ್ಕಾರ ಹೇಳಿದೆ.

ತಂತ್ರಜ್ಞಾನವಿದ್ದರೂ ದಂಡ, ಶುಲ್ಕ

ಡ್ರೋಣ್‌ ಕಣ್ಣಲ್ಲಿ ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ

ಅತ್ಯಾಧುನಿಕ ತಂತ್ರಜ್ಞಾನ ಇದ್ದರೂ ವಾಹನಗಳ ಸಂಖ್ಯೆಯ ನಿಯಂತ್ರಣವಾಗದ ಕಾರಣ ಲಂಡನ್‌ನಲ್ಲಿ ಪೀಕ್‌ ಅವರ್‌ನಲ್ಲಿ ವಾಹನ ತೆಗೆಯಬೇಕೆಂದರೆ ನಿರ್ದಿಷ್ಟ ಹಣ ನೀಡಬೇಕು ಎಂಬ ನಿಯವನ್ನು ಅಲ್ಲಿನ ಸರ್ಕಾರ ಹೇರಿದೆ. ಇದರಿಂದ ಶೇ 30ರಷ್ಟು ವಾಹನ ದಟ್ಟಣೆ ಕಡಿಮೆಯಾಗಿದೆಯಂತೆ.

ವಾಹನ ದಟ್ಟಣೆ ಹಾಗೂ ಅದರಿಂದ ಉಂಟಾಗುವ ಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ ‘ಸರಿ, ಬೆಸ’ದ ನಿಯಮ ಹೇರಿದೆ. ನೋಂದಣಿ ಸಂಖ್ಯೆ ‘ಸಮ’ವಾಗಿದ್ದರೆ ಒಂದು ದಿನ, ‘ಬೆಸ’ವಾದರೆ ಮತ್ತೊಂದು ದಿನ ವಾಹನಗಳು ರಸ್ತೆಗಿಳಿಯಬೇಕು.

ಮುಂಬೈನಲ್ಲಿ ಸಿಗ್ನಲ್‌ ಬಳಿ ಹಸಿರು ದೀಪ ಹೊತ್ತಿಕೊಂಡಾಗ ಅನಗತ್ಯವಾಗಿ ಹಾರ್ನ್ ಮಾಡಿದರೆ ಕೆಂಪು ದೀಪ ಮತ್ತೆ 90 ಸೆಕೆಂಡುಗಳ ಕಾಲ ಹೆಚ್ಚಾಗುವಂತೆ ಮುಂಬೈ ಪೊಲೀಸರು ಮಾಡಿದ್ದಾರೆ. ಇದು ಅನಗತ್ಯ ಶಬ್ದಮಾಲಿನ್ಯ ತಡೆಗಟ್ಟುವ ಕ್ರಮವಾದರೂ, ವಾಹನ ಸವಾರರು ರಸ್ತೆ ಸಂಚಾರ ನಿಮಯ ಪಾಲನೆಯತ್ತ ಗಮನ ನೀಡಿದ್ದು ವರದಿಯಾಗಿತ್ತು. ಇಂಥ ಕ್ರಮಗಳಿಂದ ಸಂಚಾರ ನಿಯಮ ಪಾಲಿಕೆಯಲ್ಲಿ ಬೆಂಗಳೂರು ಹಾಗೂ ಹೈದರಾಬಾದ್‌ಗಿಂತ ಮುಂಬೈ ಮೇಲಿನ ಸ್ಥಾನದಲ್ಲಿದೆ.

ಭಾರತವಷ್ಟೇ ಅಲ್ಲ, ಆಮ್‌ಸ್ಟರ್‌ಡ್ಯಾಮ್‌, ಮೆಲ್ಬರ್ನ್‌ ಮುಂತಾದ ನಗರಗಳು ರಿಯಲ್ ಟೈಮ್ ಮಾಹಿತಿ ಆಧರಿಸಿ ನಿಯಂತ್ರಿಸುವುದನ್ನೇ ಸದ್ಯಕ್ಕೆ ಮೂಲ ಮಂತ್ರವನ್ನಾಗಿಸಿಕೊಂಡಿವೆ. ತಂತ್ರಜ್ಞಾನದೊಂದಿಗೆ ಮೂಲಸೌಕರ್ಯವನ್ನೂ ಹೆಚ್ಚಿಸಿದಲ್ಲಿ ಸಂಚಾರ ದಟ್ಟಣೆ ತಡೆಯುವುದು ಸವಾಲಲ್ಲ ಎಂಬುದು ಸತ್ಯ.

ತಂತ್ರಜ್ಞಾನಕ್ಕಿಂತ ಮೂಲಸೌಕರ್ಯ ಹೆಚ್ಚಳವೇ ಮುಖ್ಯ

ವಾಹನ ದಟ್ಟಣೆ ನಿಯಂತ್ರಣಕ್ಕೆ ಸಿಗ್ನಲ್ ವ್ಯವಸ್ಥೆಯನ್ನು ಹೈಟೆಕ್‌ ಮಾಡುವುದಷ್ಟೇ ಪರಿಹಾರವಲ್ಲ. ರಸ್ತೆ ಅಭಿವೃದ್ಧಿ, ಲೇನ್‌ಗಳನ್ನು ಅನುಸರಿಸುವಂತೆ ಮಾಡುವ ಕಟ್ಟುನಿಟ್ಟಿನ ಕ್ರಮ ಹಾಗೂ ಸಾರ್ವಜನಿಕ ಸಂಚಾರ ವ್ಯವಸ್ಥೆ ಬಳಕೆಗೆ ಉತ್ತೇಜನ ನೀಡುವಂತಹ ಪ್ರಮುಖ ಅಂಶಗಳೂ ಹೆಚ್ಚು ಫಲಿತಾಂಶ ನೀಡಬಲ್ಲವು ಎನ್ನುವುದು ನಗರ ಯೋಜನೆಯಲ್ಲಿ ಬಹಳಷ್ಟು ವರ್ಷಗಳ ಕಾಲದ ಅನುಭವ ಹೊಂದಿರುವ ಸಾಮಾಜಿಕ ಕಾರ್ಯಕರ್ತ ರವಿಚಂದರ್‌ ಸಲಹೆ.

‘ಬೆಂಗಳೂರಿನಲ್ಲಿ 200ರಿಂದ 250 ಪ್ರಮುಖ ವೃತ್ತಗಳಿವೆ. ಇವುಗಳಲ್ಲಿ ಎಡಕ್ಕೆ ತಿರುಗುವವರು ಎಡಕ್ಕೆ ಇರುವಂತೆ, ಲೇನ್ ಶಿಸ್ತು ಪಾಲಿಸುವಂತೆ ಮಾಡಿದಲ್ಲಿ ವಾಹನ ದಟ್ಟಣೆಯನ್ನು ಬಹಳಷ್ಟು ಪ್ರಮಾಣದಲ್ಲಿ ನಿಯಂತ್ರಿಸಲು ಸಾಧ್ಯ. ಸಿಗ್ನಲ್‌ಗಳು ಇರುವಲ್ಲಿ ಸುತ್ತಮುತ್ತಲಿನ 300ರಿಂದ 400 ಮೀ. ಜಾಗವನ್ನು ಗುಂಡಿರಹಿತವಾಗಿ ಇರುವಂತೆ ಅಭಿವೃದ್ಧಿಪಡಿಸಬೇಕು. ವಾಹನ ದಟ್ಟಣೆ ಹೆಚ್ಚಿರುವ ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ವಾಹನಗಳನ್ನು ತಡೆದು ’‘ಟ್ರಾಫಿಕ್ ಕಾಮ್‌’ (ಅಂತಹ ಕಡೆಗಳಲ್ಲಿ ಪಾದಚಾರಿಗಳಿಗೆ ರಸ್ತೆ ದಾಟಲು ಅನುವು ಮಾಡಿಕೊಡುವುದರಿಂದ) ಬಿಡುವುದರಿಂದಲೂ ವಾಹನ ದಟ್ಟಣೆ ಕಡಿಮೆ ಮಾಡಬಹುದು’ ಎನ್ನುತ್ತಾರೆ ಅವರು.

ತಂತ್ರಜ್ಞಾನ ಬಳಕೆಯನ್ನು ಟ್ರಾಫಿಕ್ ನಿಯಮ ಪಾಲಿಸದವರ ಪತ್ತೆಗೆ (ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರನ್ನು ಪತ್ತೆ ಮಾಡುವುದನ್ನು ಹೊರತುಪಡಿಸಿ) ಬಳಸಬಹುದು. ಆದರೆ ವಾಹನ ದಟ್ಟಣ ನಿಯಂತ್ರಣವನ್ನು ಪೊಲೀಸರೇ ಮಾಡುವುದು ಸೂಕ್ತ. ಕೊನೆಯದಾಗಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಅದರಲ್ಲೂ ‘ಶಕ್ತಿ’ ಯೋಜನೆಯಂತಹವು ಟ್ರಾಫಿಕ್‌ ಸಮಸ್ಯೆಗೆ ಪರಿಹಾರವೂ ಆಗಬಲ್ಲದು’ ಎನ್ನುವ ರವಿಚಂದರ್ ಅವರ ಅಭಿಪ್ರಾಯ ಅರ್ಥಪೂರ್ಣ.

ಮೊದಲ ಹಂತದಲ್ಲಿ 165 ಸಿಗ್ನಲ್‌ಗಳಲ್ಲಿ ಎಐ

ಬೆಂಗಳೂರು ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಿರಂತರ ಹೊಸ ಪ್ರಯೋಗ ನಡೆಸಲಾಗುತ್ತಿದೆ. ಇದರ ಭಾಗವಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಹೊಂದಿಕೆಯಾಗುವ ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಸಿ–ಡಾಕ್ ಅಭಿವೃದ್ಧಿಪಡಿಸಿರುವ ಕಾಸಿಕಾಸ್ಟ್ ಅಲ್ಗಾರಿದಮ್ ಬಳಸಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಮೊದಲ ಹಂತದಲ್ಲಿ 165 ಸಿಗ್ನಲ್‌ಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎನ್ನುತ್ತಾರೆ ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್. ಸದ್ಯಕ್ಕೆ ಡ್ರೋನ್‌ಗಳನ್ನು ಬಳಸಿ ವಾಹನ ದಟ್ಟಣೆಯ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿರುವುದರ ಮೇಲೂ ಅವರು ಬೆಳಕು ಚೆಲ್ಲಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.