ನವೆಂಬರ್ 1ಕ್ಕೆ ಸರಿಯಾಗಿ ಕನ್ನಡನಾಡು ಕರ್ನಾಟಕ ಎಂದು ಹೆಸರಾಗಿ 50 ವರ್ಷಗಳು ಸರಿಯುತ್ತವೆ. ಕನ್ನಡ ಹಾಗೂ ತಂತ್ರಜ್ಞಾನದ ವಿಷಯ ಕುರಿತು ಒಬ್ಬರು ಹಾಗೂ ಕನ್ನಡವನ್ನು ಶ್ರದ್ಧೆ, ಶಿಸ್ತಿನಿಂದ ಕಲಿಯುತ್ತಿರುವ ಕನ್ನಡೇತರ ನಟಿಯಾದ ಇನ್ನೊಬ್ಬರು ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
–––––
ಡಿಜಿಟಲ್ ಜಗತ್ತಿನಲ್ಲಿ ಕನ್ನಡ ಭಾಷೆ ಬೆಳವಣಿಗೆಗೆ ಕಳೆದ ಐದಾರು ವರ್ಷಗಳ ಹಿಂದೆ ಇದ್ದಂತಹ ಅಡಚಣೆಗಳು ಸದ್ಯಕ್ಕೆ ಅಷ್ಟೊಂದು ಕಾಣುತ್ತಿಲ್ಲ. ಫಾಂಟ್ಸ್ ಹಾಗೂ ಕನ್ವರ್ಟರ್ ತಂತ್ರಜ್ಞಾನ ಕನ್ನಡಕ್ಕೂ ಸಾಕಷ್ಟು ಒಗ್ಗಿಕೊಂಡಿದ್ದು, ಡಿಜಿಟಲ್ ಲೋಕದಲ್ಲಿ ಕನ್ನಡ ಪ್ರಕಾಶಿಸುತ್ತಿದೆ. ಆದರೆ, ಇಂಗ್ಲಿಷ್‌ಗೆ ಹೋಲಿಸಿದರೆ ಕನ್ನಡ ಕಂಟೆಂಟ್ ಬರೆಯುವವರು ಕಡಿಮೆ.
ದಶಕದ ಹಿಂದೆ ನುಡಿ/ಬರಹದ ಕಡತಗಳಲ್ಲಿ ಇರುತ್ತಿದ್ದ ಕಂಟೆಂಟ್ ಅನ್ನು ಡಿಜಿಟಲ್‌ಗೆ ಹಾಕಬೇಕಾದರೆ ಯೂನಿಕೋಡ್ ಅವಶ್ಯವಿತ್ತು. ಆಗ ಕನ್ನಡಕ್ಕೆ ಸಂಬಂಧಿಸಿದಂತೆ ಯೂನಿಕೋಡ್ ತಂತ್ರಜ್ಞಾನ ಅಷ್ಟೊಂದು ಸುಧಾರಣೆ ಆಗಿರಲಿಲ್ಲ. 2008ರಲ್ಲಿ ಯಾವುದೋ ಒಂದು ಕಡತವನ್ನು ಡಿಜಿಟಲ್‌ಗೆ ಹಾಕಬೇಕಾಗಿ ಬಂತು. ಅದನ್ನು ಯೂನಿಕೋಡ್‌ಗೆ ಪರಿವರ್ತನೆ ಮಾಡಬೇಕಿತ್ತು. ಆಗ ನಾನೇ ‘ಓಪನ್ ಸೋರ್ಸ್’ ಆಗಿ ನುಡಿ/ಬರಹದಲ್ಲಿದ್ದಿದ್ದನ್ನು ಯೂನಿಕೋಡ್‌ಗೆ ಬದಲಾಯಿಸುವ ‘ಸಂಕ’ ಎಂಬ ವೆಬ್‌ಪೇಜ್ ರಚಿಸಿದ್ದೆ. ಈ ವೆಬ್‌ಪೇಜ್ ಅನ್ನು ಉಚಿತವಾಗಿ ನೀಡಿದೆ. ಸಾಕಷ್ಟು ಜನರಿಂದ ಉತ್ತಮ ಪ್ರತಿಕ್ರಿಯೆ ಬಂತು. ಅನೇಕ ಕನ್ನಡಿಗರು ಸಲಹೆಗಳನ್ನು ನೀಡಿದ್ದರಿಂದ ಅದರಲ್ಲಿ ಸುಧಾರಣೆಗಳನ್ನು ಮಾಡಲು ಸಾಧ್ಯವಾಯಿತು. ನಂತರ ಯೂನಿಕೋಡ್‌ನಿಂದ ಬರಹ/ನುಡಿಗೆ ಬದಲಾಯಿಸುವ ಅವಕಾಶವನ್ನೂ ಒದಗಿಸಿದೆ.
ಸದ್ಯ Aravindavk.in ಪೇಜ್‌ಗೆ ಪ್ರತಿದಿನ ಗೂಗಲ್ ಅನಲಿಟಿಕ್ಸ್ ಪ್ರಕಾರ ಸರಾಸರಿ 5 ಸಾವಿರಕ್ಕೂ ಹೆಚ್ಚು ಬಳಕೆದಾರರು ಭೇಟಿ ನೀಡುತ್ತಾರೆ. ಇದರಿಂದ ಡಿಜಿಟಲ್‌ನಲ್ಲಿ ಕನ್ನಡ ಕಂಟೆಂಟ್ ಹೆಚ್ಚಲು ನನ್ನದೂ ಒಂದು ಅಳಿಲು ಸೇವೆ ಆಗಿರಬಹುದು ಎಂದೆನಿಸುತ್ತದೆ.
ಈ ನಿಟ್ಟಿನಲ್ಲಿ ಬರಹ ಸಾಫ್ಟ್‌ವೇರ್ ಕೂಡ ಉತ್ತಮವಾಗಿದೆ. ಆದರೆ, ಅದನ್ನು ಒಂದು ಅಪ್ಲಿಕೇಶನ್ ತರಹ ಡೌನಲೋಡ್ ಮಾಡಿಕೊಂಡು ಬಳಸಬೇಕಾಗುತ್ತದೆ. ‘ಕೇದಿಗೆ’, ‘ಮಲ್ಲಿಗೆ’ ಎಂಬ ಎರಡು ಯೂನಿಕೋಡ್ ಫಾಂಟ್‌ಗಳನ್ನು ಕೂಡ ರಚಿಸಿದೆ. ಆಮೇಲೆ ಅವುಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿ, ‘ಗುಬ್ಬಿ’ ಮತ್ತು ‘ನವಿಲು’ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದೆ.
ಡಿಜಿಟಲ್ ವಿಷಯದಲ್ಲಿ, ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಮಲಯಾಳಂ ಮುಂದಿದೆ. ಟೂಲ್ಸ್ ಡೆವೆಲಪ್‌ಮೆಂಟ್, ಫಾಂಟ್ಸ್, ಓಪನ್ ಸೋರ್ಸ್ ವಿಷಯಗಳಲ್ಲಿ ಅಲ್ಲಿ ಸಾಕಷ್ಟು ಕೆಲಸಗಳಾಗಿವೆ. ಇದಕ್ಕಾಗಿ ಕೇರಳದ ತಂತ್ರಜ್ಞರು ‘ಮಲಯಾಳಂ ಕಂಪ್ಯೂಟಿಂಗ್’ ಎಂಬ ಗುಂಪನ್ನು ರಚಿಸಿಕೊಂಡಿದ್ದಾರೆ. ಕನ್ನಡದಲ್ಲಿ ಸ್ವತಂತ್ರವಾಗಿ ಇಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರೇ ಹೆಚ್ಚು.
ಹಳಗನ್ನಡ ಮತ್ತು ಪುಸ್ತಕದ ರೂಪದಲ್ಲಿರುವ ಕನ್ನಡ ಕಂಟೆಂಟ್ ಕೂಡ ಬೇರೆ ಯಾವ ಭಾಷೆಗಳಿಗೂ ಕಡಿಮೆ ಇಲ್ಲ. ಅವನ್ನೆಲ್ಲ ಡಿಜಿಟಲೀಕರಣ ಮಾಡಲು ಸಾಕಷ್ಟು ಸಮಯ ಬೇಕು. ಅವುಗಳೆಲ್ಲ ಇಮೇಜ್ ಅಥವಾ ಪಿಡಿಎಫ್ ಸ್ವರೂಪದಲ್ಲಿ ಇರುತ್ತವೆ. ಇವುಗಳನ್ನು ಪಠ್ಯವಾಗಿ ಪರಿವರ್ತಿಸಲು ಒಸಿಆರ್ (Optical Character Recognition) ತಂತ್ರಜ್ಞಾನ ಬೇಕು. ಇದರಲ್ಲಿ ನಾವು ಹಿಂದುಳಿದಿದ್ದೇವೆ.
ಕಾಗುಣಿತ ಹಾಗೂ ವ್ಯಾಕರಣ ಸರಿಪಡಿಸುವ ವಿಷಯದ ತಾಂತ್ರಿಕ ಅನುಕೂಲದಲ್ಲಿ ಇಂಗ್ಲಿಷ್‌ಗೆ ಹೋಲಿಸಿದರೆ ನಾವು ಹಿಂದೆ ಇದ್ದೇವೆ. ಕನ್ನಡ ಭಾಷೆಯ ಶೈಲಿ ವೈವಿಧ್ಯಮಯವಾಗಿರುವುದರಿಂದ ಈ ಕಷ್ಟ. ಕನ್ನಡದಲ್ಲಿ ಈ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ. ಅವು ಇನ್ನೂ ದೊಡ್ಡ ಮಟ್ಟದಲ್ಲಿ ಆಗಬೇಕು.
ಗೂಗಲ್‌ನಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ಟೂಲ್‌ಗಳಿವೆ. ಆದರೆ, ಅವೆಲ್ಲ ಓಪನ್ ಸೋರ್ಸ್‌ಗಳಲ್ಲ. ಸಾಮಾನ್ಯ ಕಂಟೆಂಟ್ ಅನ್ನು ಅಲ್ಲಿ ಬರೆಯಬಹುದು. ಭದ್ರತೆ, ರಹಸ್ಯ ವಿಚಾರಗಳನ್ನು ಬರೆಯವುದು ಕಷ್ಟ. ಏಕೆಂದರೆ ಅಲ್ಲಿ ಖಾಸಗಿತನದ ಖಾತರಿ ಇರುವುದಿಲ್ಲ.
ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಕನ್ನಡಿಗರಿದ್ದಾರೆ. ಅವರೆಲ್ಲ ಬಿಡುವಿನಲ್ಲಿ ಇನ್ನಷ್ಟು ಕನ್ನಡದ ಕೆಲಸಗಳನ್ನು ಮಾಡಲು ಚರ್ಚೆ ನಡೆಸಲು ವೇದಿಕೆ ಸೃಷ್ಟಿಯಾದೀತೆ ಎಂದು ನಾನು ಆಶಾವಾದಿಯಾಗಿದ್ದೇನೆ.
(ಅರವಿಂದ ವಿ.ಕೆ, ಬೆಂಗಳೂರಿನ ಕಡಲು ಟೆಕ್ನಾಲಜೀಸ್‌ನ ಸಹ ಸಂಸ್ಥಾಪಕರು)
ನಿರೂಪಣೆ: ಮಂಜುನಾಥ್ ಭದ್ರಶೆಟ್ಟಿ
****
ಇದನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.