ಜೀವನದ ನಡೆಯಲ್ಲಿ ಎಡವುವುದು ಸಹಜ. 'ನಡೆವರೆಡವದೆ ಕುಳಿತಿಹರೆಡುವವರೆ?’
ಆದರೆ ಹೀಗೆ ಎಡವಿದಾಗ, ಅದರಿಂದ ಮತ್ತೊಬ್ಬರಿಗೆ ತೊಂದರೆಯಾದಾಗ, ನೋವಾದಾಗ ಅದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡು ಕ್ಷಮೆ ಕೇಳುವ ಅಭ್ಯಾಸವನ್ನು ಬೆಳೆಸಿಕೊಂಡರೆ ಬದುಕು ಮತ್ತಷ್ಟು ಸಹನೀಯವೂ ಸುಂದರವೂ ಆಗುತ್ತದೆ. ಮನೆ, ಕಚೇರಿ, ಬಂಧುವಲಯ, ಮಿತ್ರವಲಯ, ಸಾರ್ವಜನಿಕ ಕ್ಷೇತ್ರ – ಹೀಗೆ ಹತ್ತು ಹಲವೆಡೆ ಹಬ್ಬಿದ ಜೀವನಬಳ್ಳಿಯು ತೊಡಕಾಗದಂತೆ ಬೆಳೆಯಲು ಈ ಬಗೆಯ ತಪ್ಪೊಪ್ಪಿಗೆ ಬಹಳ ಮುಖ್ಯ. ಇದು ನಿಜ – ಎಂದು ತಲೆಯಾಡಿಸುವುದು ಸುಲಭ. ಆದರೆ ಹಾಗೆ ನಡೆದುಕೊಳ್ಳುವುದು ಬಹಳ ಕಷ್ಟ. ಕಷ್ಟ ಏಕೆಂದರೆ ನಮ್ಮೊಳಗಿರುವ ಅಹಂ ‘ತಪ್ಪೊಪ್ಪಿಗೆಯೆ – ಏಕೆ? ನೋಡೋಣ, ಆಲೋಚಿಸೋಣ, ಮುಂದೆ ಕೇಳೋಣ’ ಎಂಬಿತ್ಯಾದಿ ಕಾರಣಗಳನ್ನು ಒಡ್ಡಿ ಕೇಳದಂತೆ ಮಾಡಿಬಿಡುತ್ತದೆ. ಅದರಲ್ಲೂ ನಾವು ಹಿರಿಯರೊ, ಹಿರಿಯ ಹುದ್ದೆಯವರೊ ಆಗಿಬಿಟ್ಟರೆ ಕಿರಿಯರ ಕೆಳಗಿನವರ ಮೇಲೆ ನಾವು ನಡೆದುಕೊಂಡ ರೀತಿ ಸರಿಯಿಲ್ಲವೆಂದು ಮನಸ್ಸಾಕ್ಷಿ ಹೇಳಿದರೂ ವಯಸ್ಸಿನ, ಹುದ್ದೆಯ ಘನತೆಯಿಂದಾಗಿ ನಾವು ತಪ್ಪೊಪ್ಪಿಗೆಯನ್ನು ಸಲ್ಲಿಸುವುದೇ ಇಲ್ಲ. ಇದರಿಂದ ಎದುರಿನ ವ್ಯಕ್ತಿಗೆ ಹೆಚ್ಚು ನಷ್ಟವಾಗದಿದ್ದರೂ ನಮ್ಮ ಅಹಂಕಾರ ಬಲಿಯುವುದಂತೂ ದಿಟ. ಹೀಗೆ ಬಲಿತ ಅಹಂಕಾರ ಒಂದಲ್ಲ ಒಂದು ದಿನ ಬಲಿಯಾಗಲೇಬೇಕು; ಅದರೊಂದಿಗೆ ಅಂತಹ ವ್ಯಕ್ತಿಯೂ ಕುಗ್ಗಬೇಕು. ತಪ್ಪೊಪ್ಪಿಗೆಯಿಂದ ಯಾರೂ ಕುಬ್ಜರಾಗುವುದಿಲ್ಲ. ಅದು ಸಕಾಲದಲ್ಲಿ, ಸಕಾರಣವಾಗಿದ್ದುದಾದರೆ, ಎದುರಿನ ವ್ಯಕ್ತಿಗೆ ನಮ್ಮ ಬಗ್ಗೆ ಗೌರವ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.
ತಪ್ಪೊಪ್ಪಿಗೆಯ ಪಾಠ ಎಲ್ಲಿಂದ ಆರಂಭವಾಗಬೇಕು? ಮತ್ತೆಲ್ಲಿಂದ? ಮನೆಯೆ ಮೊದಲ ಪಾಠಶಾಲೆ. ಮಕ್ಕಳು ತಪ್ಪು ಮಾಡಿದಾಗ ಅವರು ಅದನ್ನು ಒಪ್ಪಿಕೊಳ್ಳುವಂತೆ ಸೂಚಿಸಬೇಕು. ಮುಖ್ಯವಾಗಿ ಮಕ್ಕಳು ಮನೆಯ ಹಿರಿಯರನ್ನು ಅನುಕರಿಸುತ್ತಾರೆ ಎಂಬುದು ವಾಸ್ತವ. ಮನೆಯ ಹಿರಿಯರು ಪರಸ್ಪರ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಗಮನಿಸುವ ಮಗು ತಾನೂ ಅದನ್ನೇ ಕಲಿಯುತ್ತದೆ. ದೈನಂದಿನ ಕಾರ್ಯಗಳಲ್ಲಿ ಮನೆಯ ಹಿರಿಯರ ನಡುವೆ ಸಂಘರ್ಷ ನಡೆದು ಕೊನೆಗೆ ತಪ್ಪು ಯಾರದೆಂದು ನಿರ್ಧಾರವಾದ ಬಳಿಕ ಹಾಗೆ ತಪ್ಪು ಎಸಗಿದವರು ಹೇಗೆ ತಪ್ಪೊಪ್ಪಿಗೆ ಮಾಡಿಕೊಳ್ಳುತ್ತಾರೆ ಎಂದು ಮಗು ಗಮನಿಸುತ್ತದೆ. ತಾನೂ ಅದನ್ನೇ ಕಲಿಯುತ್ತದೆ. ಮನೆಯ ತುಂಬೆಲ್ಲ ಅಹಂಕಾರ ವಿಲಾಸವೇ ನಡೆದಾಗ, ಮಗು ಕೂಡ ಅಹಂಕಾರದ ಮೂಟೆಯಾಗುತ್ತದೆ. ಹಾಗೆಯೇ ಸಣ್ಣಪುಟ್ಟದ್ದಕ್ಕೆಲ್ಲ ತಪ್ಪೊಪ್ಪಿಗೆ ಮಾಡಿಕೊಳ್ಳುವುದು ಕೂಡ ಸಲ್ಲದು. ಅದು ಮಗುವಿನ ಧೈರ್ಯವನ್ನು ಆತ್ಮವಿಶ್ವಾಸವನ್ನು ಕುಗ್ಗಿಸಿಬಿಡುತ್ತದೆ. ಯಾವಾಗ, ಎಷ್ಟರ ಮಟ್ಟಿಗೆ, ಯಾವ ಬಗೆಯಲ್ಲಿ ತಪ್ಪೊಪ್ಪಿಗೆ ಮಾಡಿಕೊಳ್ಳಬೇಕು ಎಂಬುದೂ ಒಂದು ಕಲೆ. ಅದನ್ನು ಗಮನಿಸಿ, ಅಭ್ಯಸಿಸಿ ಅಳವಡಿಸಿಕೊಳ್ಳಬೇಕು.
ಸಾಮಾನ್ಯವಾಗಿ ತಪ್ಪೊಪ್ಪಿಗೆಯ ಹೇಳಿಕೆ ಹೀಗಿರುತ್ತದೆ: ‘ನನ್ನ ನಡೆ, ನುಡಿಗಳಿಂದ (ತಿಳಿದೋ ತಿಳಿಯದೆಯೋ ಎಸಗಿದ ಕಾರ್ಯದಿಂದ) ನಿಮಗೆ ನೋವಾಗಿದ್ದರೆ, ದಯವಿಟ್ಟು ಕ್ಷಮಿಸಿಬಿಡಿ.’
ಇದು ಅತ್ಯಂತ ಬಾಲಿಶವಾದ ವಾಕ್ಯ; ಬಹುತೇಕ ವಿದಾಯದ ಭಾಷಣಗಳಲ್ಲಿ ಇದನ್ನು ಕೇಳಿರುತ್ತೇವೆ. ಇದರರ್ಥ: ‘ತಪ್ಪು ನನ್ನದಲ್ಲ. ಆದರೆ ನಿಮಗೆ ಹಾಗೆನಿಸಿರಬಹುದು, ಆದರೂ ನಿಮ್ಮ ಸಣ್ಣತನವನ್ನು ನಾನು ಗಣಿಸದೆ ನಾನೇ ಕ್ಷಮೆ ಕೋರಿ ನನ್ನ ಔದಾರ್ಯವನ್ನು ತೋರುತ್ತಿದ್ದೇನೆ.’ ಇಂತಹ ತಪ್ಪೊಪ್ಪಿಗೆಯೇ ದೊಡ್ಡ ತಪ್ಪು. ಇದು ಬಿರುಕನ್ನು ಮುಚ್ಚುವ ಬದಲು ಮತ್ತಷ್ಟು ದೊಡ್ಡದಾಗಿಸುತ್ತದೆ. ಸಾರ್ವಜನಿಕ ತಪ್ಪುಗಳೆಸಗುವರ ಕಥೆ ಅಂತಿರಲಿ, ಸಾಮಾನ್ಯರಾದ ನಾವು ತಪ್ಪೆಸಗಿದಾಗ, ನೇರವಾಗಿ ಆ ವ್ಯಕ್ತಿಯ ಬಳಿಸಾರಿ, ‘ನನ್ನ ಮಾತಿನಿಂದ, ನಡೆಯಿಂದ ನಿಮಗೆ ನೋವಾಯಿತೆ’ – ಎಂದು ಕೇಳಿ, ಬಳಿಕ ಪ್ರಾಂಜಲ ಮನಸ್ಸಿನಿಂದ ‘ತಪ್ಪಾಯಿತು, ಕ್ಷಮಿಸಿ’ ಎನ್ನುವುದು ಸರಿಯಾದ ಕ್ರಮ. ಮುಂದೆ ಹೀಗಾಗದಂತೆ ನಡೆದುಕೊಂಡರೆ ಆ ವ್ಯಕ್ತಿಗೆ ನಮ್ಮ ಬಗೆಗಿನ ವಿಶ್ವಾಸ ಹೆಚ್ಚುತ್ತದೆ. ಹೀಗೆ ಮಾಡಲು ಬಹಳ ಧೈರ್ಯ ಬೇಕು. ಆದರೆ ಇದರಿಂದ ಮುಂದೆ ಬಹಳ ಪ್ರಯೋಜನವೂ ಉಂಟು. ಜಾನ್ ಮ್ಯಾಕ್ಸ್ ವೆಲ್, ‘ಮನುಷ್ಯ ತಾನೆಸಗಿದ ತಪ್ಪನ್ನು ಒಪ್ಪಿಕೊಳ್ಳುವಷ್ಟು ದೊಡ್ಡವನೂ, ಅದರಿಂದ ತಿಳಿವಳಿಕೆ ಪಡೆದುಕೊಳ್ಳುವಷ್ಟು ಕುಶಲಿಯೂ ಮತ್ತು ಅದನ್ನು ತಿದ್ದಿಕೊಳ್ಳುವಷ್ಟು ಮನೋಬಲವುಳ್ಳವನೂ ಆಗಿರಬೇಕು’ ಎನ್ನುತ್ತಾನೆ. ತಪ್ಪೊಪ್ಪಿಗೆ ಕೇವಲ ಬಾಯಿಮಾತಿನ ಹೇಳಿಕೆಯಾಗಿರಬಾರದು. ಅದು ಹೃದಯಕ್ಕೆ ತಟ್ಟುವಂತಿರಬೇಕು. ಅದರಲ್ಲಿ ಈ ಅಂಶಗಳು ಇರಬೇಕು:
ವಿಷಾದ: ತಪ್ಪೊಪ್ಪಿಗೆ ಪ್ರಾಮಾಣಿಕವಾಗಿದ್ದರೆ ಆ ಹೇಳಿಕೆಯಲ್ಲಿ ವಿಷಾದದ ದನಿ ಇರಬೇಕು. ಅಂದರೆ ತಾನು ಹೀಗೆ ಮಾಡಬಾರದಾಗಿತ್ತು ಎಂಬ ಭಾವ ಅಲ್ಲಿ ವ್ಯಕ್ತವಾಗಬೇಕು.
ತಪ್ಪಿನ ವಿವರಣೆ: ಬಹಳ ಸರಳವಾಗಿ ಏಕೆ ತಪ್ಪಾಯಿತೆಂದು ಹೇಳಬೇಕು. ಆದರೆ ಅದರ ಸಮಜಾಯಿಷಿಯೊ, ದೀರ್ಘವಾದ ಚರ್ವಣವೊ ಆಗಬಾರದು. ಬಹಳ ಬಾರಿ ತಪ್ಪುಗಳು ಯಾವುದೋ ಮತ್ತೊಂದು ತಪ್ಪು ಗ್ರಹಿಕೆಯ ಮೇಲೆ ಆಗಿರುತ್ತವೆ. ಅದನ್ನು ಗುರುತಿಸುವುದಷ್ಟೆ ಆಗಬೇಕು.
ತಪ್ಪಿನ ಜವಾಬ್ದಾರಿ ಹೊರುವುದು: ತಪ್ಪೆಸಗಿದ ಬಗ್ಗೆ ಬೇರೆಡೆಗೆ ಬೊಟ್ಟುಮಾಡದೆ, ಅದನ್ನು ಎಸಗಿದ ಪೂರ್ಣ ಜವಾಬ್ದಾರಿ ತನ್ನದೇ ಎಂದು ಗುರುತಿಸಿಕೊಳ್ಳಬೇಕು.
ಪಶ್ಚಾತ್ತಾಪವನ್ನು ವ್ಯಕ್ತಪಡಿಸುವುದು: ತಾನು ಮಾಡಿದ ತಪ್ಪಿನ ಬಗ್ಗೆ ಅರಿವನ್ನು ಹೊಂದುವುದು. ಅದರ ಪರಿಣಾಮವನ್ನು ಪೂರ್ಣಪ್ರಮಾಣದಲ್ಲಿ ಭಾವಿಸಿ ದುಃಖಿಸುವುದೇ ಪಶ್ಚಾತ್ತಾಪ. ತಪ್ಪೊಪ್ಪಿಗೆಯಲ್ಲಿ ಇದೂ ವ್ಯಕ್ತವಾಗಬೇಕು.
ತಪ್ಪಿನಿಂದಾದ ನಷ್ಟದ ಭರಿಸುವಿಕೆ: ತಪ್ಪಿನಿಂದಾದ ನಷ್ಟದ ಮೌಲ್ಯವನ್ನು ಹಣದ, ಸಮಯದ, ಪ್ರೀತಿಯ ಅಥವಾ ಇನ್ನಾವುದೇ ರೂಪದಲ್ಲಿ ಭರಿಸಲು ಸಾಧ್ಯವಾಗುವುದಾದರೆ ಹಾಗೆ ತುಂಬಿಕೊಡಬೇಕು.
ತಪ್ಪನ್ನು ಮರೆತುಬಿಡುವಂತೆ ಕೋರಿಕೆ: ನಡೆದುದುನ್ನು ಮರೆತುಬಿಡುವಂತೆ ಕೊನೆಯಲ್ಲಿ ಕೋರಬೇಕು. ಯಾವುದೇ ಕಾರಣಕ್ಕೂ ಇದು ಮೊದಲಿಗೆ ಬರಬಾರದು, ಕೊನೆಯಲ್ಲಿಯೇ ಇರಬೇಕು. ಏಕೆಂದರೆ ಮೊದಲಿಗೆ ಬರುವ ಎಲ್ಲ ಅಂಶಗಳು ಮನವರಿಕೆಯಾದ ಮೇಲೆ ಮಾತ್ರ ತಪ್ಪನ್ನು ಮರೆಯಲು ಸಾಧ್ಯ. ಈ ಕ್ರಮದಲ್ಲಿ ತಪ್ಪೊಪ್ಪಿಗೆ ನಡೆದಾಗ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಮೇಲಿನ ಆರು ಹೆಜ್ಜೆಗಳಲ್ಲಿ ಮೂರು ಮುಖ್ಯ ಅಂಶಗಳು ಅಡಕಗೊಂಡಿವೆ. ಮೊದಲನೆಯದು ತಪ್ಪಿನ ಜವಾಬ್ದಾರಿಯನ್ನು ಹೊರುವ ಧೈರ್ಯ, ಎರಡನೆಯದು ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಾಮಾಣಿಕತೆ, ಮೂರನೆಯದು ನಡೆದುದರ ಬಗ್ಗೆ ವಿಷಾದ, ಪಶ್ಚಾತ್ತಾಪ.
ನಾವು ತಪ್ಪೆಸಗಿದಾಗ ತಪ್ಪೊಪ್ಪಿಗೆ ಮಾಡಿಕೊಳ್ಳುವಂತೆ, ಇತರರೂ ನಮ್ಮ ವಿರುದ್ಧ ತಪ್ಪೆಸಗಿದಾಗ ಮಾಡಿಕೊಳ್ಳಬೇಕು ಎಂದು ಬಯಸುವುದು ಸರಿಯೆ. ಆದರೆ ಹಾಗಾಗದಿದ್ದರೆ? ಕುದಿಕುದಿದು ಪರಿತಪಿಸಿ ಮರುಗಬೇಕೆ? ಖಂಡಿತ ಇಲ್ಲ. ಆದರೆ ನಮ್ಮ ಘನತೆಗೆ ಕುಂದಾಗದಂತೆ ಪ್ರತಿರೋಧಿಸುವುದು ತಪ್ಪನ್ನು ತೋರಿಸಿಕೊಡುವುದು ಮಾಡಬೇಕು. ಇಷ್ಟಾಗಿಯೂ ತಪ್ಪೊಪ್ಪಿಗೆ ಬಾರದಿದ್ದಾಗ ಕಗ್ಗದ ಈ ಪದ್ಯವನ್ನು ನೆನಪಿಸಿಕೊಳ್ಳಬೇಕು: ‘ಪ್ರೇಮಬೀಜಗಳಿಹವು ವೈರಬೀಜಗಳವೊಲೆ, ಸೌಮ್ಯಮುಂ ಸಂಕ್ಷೋಭೆಯಂತೆ ಪ್ರಕೃತಿಯಲಿ, ಭ್ರಾಮಕದ ಸೃಷ್ಟಿಯಾ ವಿಷಮಲಕ್ಷಣಗಳಲಿ, ಸಾಮರಸ್ಯವನರಸೊ –ಮಂಕುತಿಮ್ಮ’. ತಪ್ಪುಗಳು ನಡೆದಾಗಲೂ ಸಾಮರಸ್ಯವನ್ನು ಅರಸುವ ಸ್ವಭಾವ ನಮ್ಮದಾಗಬೇಕು. ಇದರಿಂದ ನಮ್ಮಿಂದ ಕಡಿಮೆ ತಪ್ಪುಗಳಾಗುತ್ತವೆ; ಜೊತೆಗೆ ಬೇರೆಯವರ ತಪ್ಪುಗಳನ್ನು ಧೇನಿಸುವ ದಾರಿ ದೂರಾಗುತ್ತದೆ.
ಗಿಬ್ರಾನ್, ಒಂದೆಡೆ ಹೇಳುತ್ತಾನೆ: ‘ಹತಾಶನಾಗದಿರು ಮಿತ್ರ, ಪಂಚಭೂತಗಳಾಚೆ, ಎಲ್ಲದರಾಚೆ ಶಕ್ತಿಯೊಂದಿದೆ. ಅದು ನ್ಯಾಯ, ಕರುಣೆ, ಪ್ರೇಮ ಮತ್ತು ಸಹಾನುಭೂತಿಗಳಿಂದ ಕೂಡಿದೆ.’
ಈ ಜಗತ್ತಿನಲ್ಲಿ ಎಲ್ಲ ಪಯಣಿಗರೇ. ಎಡವಿದಾಗ, ತಡವಿಕೊಂಡಾಗ, ತಪ್ಪೆಸಗಿದಾಗ ಮೇಲಿನ ಉಕ್ತಿಗಳು ನೆನಪಾಗಲಿ. ತಪ್ಪುಗಳನ್ನು ಒಪ್ಪಿಕೊಳ್ಳುವ ಪ್ರಾಂಜಲ ಮನಸ್ಸು ನಮ್ಮದಾಗಲಿ. ತಪ್ಪೊಪ್ಪಿಗೆಯ ಆತ್ಮೀಯ ಅಪ್ಪುಗೆ ನಮ್ಮದಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.