ADVERTISEMENT

ಮಾಧ್ಯಮದ ‘ಜಿಹಾದ್‌’: ಬೀಳದಂತೆ ತಡೆಯಲು ಬೇಕಿದೆ ಊರುಗೋಲು

ಕೆ.ಎಸ್.ದಕ್ಷಿಣಾಮೂರ್ತಿ
Published 26 ಸೆಪ್ಟೆಂಬರ್ 2020, 19:30 IST
Last Updated 26 ಸೆಪ್ಟೆಂಬರ್ 2020, 19:30 IST
   

ಕೋವಿಡ್‌–19 ಸಾಂಕ್ರಾಮಿಕ ರೋಗವು ಮನುಕುಲದ ಮೇಲೆ ಮಾತ್ರ ದಾಳಿ ನಡೆಸಿದೆ ಎಂದು ನೀವು ಭಾವಿಸಿದರೆ ತಪ್ಪಾಗುತ್ತದೆ. ಅದು ಜಗತ್ತಿನಾದ್ಯಂತ, ಆಡಳಿತ ಹಾಗೂ ಪ್ರಜಾಪ್ರಭುತ್ವಕ್ಕೆ ಬಲವಾದ ಪೆಟ್ಟನ್ನು ಕೊಟ್ಟಿದ್ದು, ಪಾರದರ್ಶಕತೆಯನ್ನೂ ಮಸುಕಾಗಿಸಿಬಿಟ್ಟಿದೆ. ಮಾಧ್ಯಮವನ್ನು ಸಹ ಕಾಡದೇ ಬಿಟ್ಟಿಲ್ಲ.

ಭಾರತದ ಸಂದರ್ಭದಲ್ಲಿ ನೋಡುವುದಾದರೆ, ಮಾಧ್ಯಮ ಕಾರ್ಯಾಚರಣೆಯ ಮೇಲೆ ಕೊರೊನಾ ಸೋಂಕು ಭಾರಿ ಪರಿಣಾಮವನ್ನೇ ಬೀರಿದೆ. ಪತ್ರಿಕೆ, ಸುದ್ದಿವಾಹಿನಿ ಹಾಗೂ ಬಹುಮಾಧ್ಯಮ ಸಂಸ್ಥೆಗಳ ನೂರಾರು ಪತ್ರಕರ್ತರು ಹಾಗೂ ಅವುಗಳಿಗೆ ಪೂರಕವಾಗಿ ಕೆಲಸ ಮಾಡುವ ಇನ್ನಿತರ ವಿಭಾಗಗಳ ಸಿಬ್ಬಂದಿ ಭಾರೀ ಬೆಲೆ ತೆರುವಂತಾಗಿದೆ. ವೇತನ ಕಡಿತ, ಉದ್ಯೋಗ ನಷ್ಟದಂತಹ ಸಮಸ್ಯೆಯನ್ನು ಅದು ತಂದೊಡ್ಡಿದೆ. ಕೆಲವು ಮಾಧ್ಯಮ ಸಂಸ್ಥೆಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದು ನಿಂತಿದ್ದರೆ, ಇನ್ನು ಕೆಲವು ಈಗಾಗಲೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.

ಜಗತ್ತಿನ ತುಂಬಾ ಸಾಮಾನ್ಯ ಅನಾರೋಗ್ಯ, ವಯೋಸಹಜ ಕಾಯಿಲೆ, ದೀರ್ಘಕಾಲದ ಅಸ್ವಸ್ಥತೆಯಿಂದಾಗಿ ಈ ಸಾಂಕ್ರಾಮಿಕ ಪಿಡುಗಿಗೆ ಲಕ್ಷಾಂತರ ಜನ ಜೀವ ಕಳೆದುಕೊಂಡಿದ್ದಾರೆ. ಹಾಗೆಯೇ ಸಮಾಜದ ನಾಲ್ಕನೇ ಅಂಗವೆನಿಸಿದ ಮಾಧ್ಯಮದ ಸಮಸ್ಯೆಗಳನ್ನೂ ಅದು ಮುನ್ನೆಲೆಗೆ ತಂದಿದೆ. ಮಾಧ್ಯಮದ ಇತಿಹಾಸ, ರಚನಾತ್ಮಕ ಪಾವಿತ್ರ್ಯ ಹಾಗೂ ಸುಲಭವಾಗಿ ಕುಸಿದು ಬೀಳುವ ಗುಣವನ್ನು ಅವಲೋಕನ ಮಾಡಿಕೊಳ್ಳುವ ಅಗತ್ಯವನ್ನು ಎತ್ತಿತೋರಿದೆ. ಮಾಧ್ಯಮ ಉದ್ಯಮವು ಕೊರೊನಾ ಸೋಂಕಿನ ಹೊಡೆತದಿಂದ ಜರ್ಜರಿತವಾಗಲು ಪ್ರಮುಖ ಕಾರಣ ಹಣಕಾಸು ಸಮಸ್ಯೆ. 1990ರ ದಶಕದ ಆರ್ಥಿಕ ಸುಧಾರಣೆ ನಂತರದ ಆರಂಭಿಕ ವರ್ಷಗಳಲ್ಲಿ ಪತ್ರಿಕೆಗಳು, ವಾಹಿನಿಗಳು ಮತ್ತು ಅಂತರ್ಜಾಲ ಸುದ್ದಿ ತಾಣಗಳು ಬೆಳೆದು ಬಂದ ರೀತಿಯೇ ಇಂದಿನ ಈ ಪರಿಸ್ಥಿತಿಗೆ ಕಾರಣ.

ADVERTISEMENT

ದೇಶದಾದ್ಯಂತ ಕೋವಿಡ್ ನಿಯಂತ್ರಣಕ್ಕಾಗಿ ಮಾರ್ಚ್ ಉತ್ತರಾರ್ಧದಿಂದ ಹೇರಲಾದ ಸರಣಿ ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ಕುಸಿಯಿತು. ಜೊತೆಗೆ, ಮಾಧ್ಯಮಗಳ ಆದಾಯ ಕುಸಿತವೂ ಆರಂಭವಾಯಿತು. ಉದ್ಯಮಗಳು ಸ್ಥಗಿತಗೊಂಡವು. ಜನರು ಕೊಳ್ಳುವ ಪ್ರವೃತ್ತಿಗೆ ಕಡಿವಾಣ ಬಿತ್ತು. ಒಟ್ಟು ಪರಿಣಾಮವಾಗಿ, ಮಾಧ್ಯಮ ಸಂಸ್ಥೆಗಳಿಗೆ ಬರುವ ಜಾಹೀರಾತು ವರಮಾನವೂ ನೆಲಕಚ್ಚಿತು.

ಆದರೆ, ಇದು ನಿಜಕ್ಕೂ ಹೀಗೇ ಆಗಬೇಕಿತ್ತೇ? ಅದನ್ನು ಅರಿಯಲು ಮಾಧ್ಯಮ ಉದ್ಯಮವು ಅಪ್ಪಿಕೊಂಡ ವ್ಯವಹಾರ ಮಾದರಿಯನ್ನು ವಿಶ್ಲೇಷಿಸುವುದು ಸೂಕ್ತ. ಇಂದು ಬಹುತೇಕ ಪತ್ರಿಕೆಗಳ ಒಂದು ಪ್ರತಿಯ ಮುಖಬೆಲೆ ಹತ್ತು ರೂಪಾಯಿಗಿಂತಲೂ ಕಡಿಮೆ ಇದೆ. ಮಾರಾಟದಿಂದ ಬರುವ ಆದಾಯವನ್ನೇ ಪತ್ರಿಕೆಗಳು ಅವಲಂಬಿಸಿದರೆ ಉದ್ಯಮ ನಡೆಸುವುದೇ ಕಷ್ಟವಾಗುತ್ತದೆ. ಬದಲಾಗಿ ಪತ್ರಿಕೆಗಳು ತಮ್ಮ ವೆಚ್ಚವನ್ನು ಹೊಂದಿಸಲು ಜಾಹೀರಾತು ಆದಾಯವನ್ನು ನಂಬಿವೆ.

ಮಾರುಕಟ್ಟೆಯಲ್ಲಿ ಸಿಗುವ ಬೇರೆಲ್ಲ ಉತ್ಪನ್ನಗಳನ್ನು ಗಮನಿಸಿದರೆ, ಅವುಗಳ ಉತ್ಪಾದನಾ ವೆಚ್ಚವನ್ನು ಲೆಕ್ಕ ಹಾಕಿ ಅಂತಿಮ ದರ ನಿರ್ಧಾರವಾಗುತ್ತದೆ. ಪತ್ರಿಕೆಗಳೂ ಅವುಗಳ ಮುದ್ರಣ ವೆಚ್ಚ, ಮುದ್ರಣ ಕಾಗದ, ಪ್ರಸರಣ ಹಾಗೂ ಸಂಪಾದಕೀಯ ವಿಭಾಗದ ವೆಚ್ಚವನ್ನು ಪರಿಗಣಿಸಿ ಮುಖಬೆಲೆ ನಿರ್ಧರಿಸುವ ಮಾದರಿಯನ್ನು ಅನುಸರಿಸಲು ಮುಂದಾದರೆ, ಓದುಗ ಒಂದು ಪತ್ರಿಕೆಗೆ ತೆರಬೇಕಾದ ಬೆಲೆ ಅಂದಾಜು ಇಪ್ಪತ್ತು ರೂಪಾಯಿ. ಒಂದೊಮ್ಮೆ ಇದು ಸಾಧ್ಯವಾದರೆ ಪತ್ರಿಕಾ ಸಂಸ್ಥೆಗಳ ಜಾಹೀರಾತು ಆದಾಯದ ಮೇಲಿನ ಅವಲಂಬನೆ ತಗ್ಗುತ್ತದೆ. ನಿಜವಾದ ಅರ್ಥದಲ್ಲಿ ಸ್ವಾಯತ್ತತೆಯನ್ನು ಪಡೆದುಕೊಂಡಂತಾಗುತ್ತದೆ.ಎಲ್ಲಕ್ಕಿಂತ ಮುಖ್ಯವಾಗಿ, ಸಂಪಾದಕೀಯ ವಿಭಾಗವು ಹೆಚ್ಚು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ.

ದುರದೃಷ್ಟವೆಂದರೆ, 1990ರ ದಶಕದಲ್ಲಿ ಪ್ರಮುಖ ಸುದ್ದಿ ಸಂಸ್ಥೆಗಳ ಆಡಳಿತ ಮಂಡಳಿಗಳು ವಿರುದ್ಧ ದಿಕ್ಕಿನಲ್ಲಿ ನಡೆದವು. ಪ್ರಸರಣ ಸಂಖ್ಯೆಯನ್ನು ಹೆಚ್ಚಿಸುವ ಕಡೆ ಚಿತ್ತ ಹರಿಸಿದ ಕಾರಣ ಒಂದು ರೂಪಾಯಿಗೆ ಒಂದು ಪತ್ರಿಕೆ ಮಾರುವ ತಂತ್ರವನ್ನು ಅನುಸರಿಸಿದವು. ಒಂದರ್ಥದಲ್ಲಿ ಇದು ಫಲವನ್ನೂ ನೀಡಿತು. ಪ್ರಸರಣ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿತು. ಆದರೆ ಅವು ತಮ್ಮ ದೈನಂದಿನ ವೆಚ್ಚ ಭರಿಸುವ ದೃಷ್ಟಿಯಿಂದ ಜಾಹೀರಾತು ಮತ್ತು ಪ್ರಾಯೋಜಕರನ್ನು ನೆಚ್ಚಿ ಕೂರುವ ಸ್ಥಿತಿ ತಲುಪಿದವು. ಇದನ್ನು ‘ದರ ಸಮರ’ ಎಂದು ಸಮರ್ಥಿಸಿಕೊಂಡವು. ಇದರ ಹೊಡೆತಕ್ಕೆ ಸಿಕ್ಕ ಬಾಕಿ ಮಾಧ್ಯಮ ಸಂಸ್ಥೆಗಳು ದುರ್ಬಲಗೊಳ್ಳುತ್ತಾ ಹೋದವು. ಒಟ್ಟಾರೆಯಾಗಿ ಎಲ್ಲ ಪತ್ರಿಕಾ ಸಂಸ್ಥೆಗಳು ಜಾಹೀರಾತುದಾರರ ಬಾಗಿಲ ಮುಂದೆಯೇ ನಿಲ್ಲುವಂತಾಯಿತು.

ಟಿ.ವಿ ವಾಹಿನಿಗಳ ವಿಚಾರಕ್ಕೆ ಬಂದರೆ, ಬಹುತೇಕ ಸಂಸ್ಥೆಗಳು ತಮ್ಮ ವೀಕ್ಷಕರಿಗೆ ಕನಿಷ್ಠ ಶುಲ್ಕ ವಿಧಿಸುವ ಬದಲಾಗಿ ಜಾಹೀರಾತುದಾರರನ್ನು ಸೆಳೆಯಲು ಟಿಆರ್‌ಪಿ ಮೊರೆ ಹೋದವು. ಎಲ್ಲ ವಾಹಿನಿಗಳೂ ಒಂದೇ ಬಗೆಯ ಕಾರ್ಯಕ್ರಮ ರೂಪಿಸುವ ಹುಕಿಗೆ ಬಿದ್ದವು. ಅಂದರೆ ಭಾವೋದ್ರೇಕಗೊಳಿಸುವ, ವಾಸ್ತವಕ್ಕೆ ವಿಮುಖವಾದ ಪೊಳ್ಳು ಚರ್ಚೆಗಳನ್ನು ಹಮ್ಮಿಕೊಳ್ಳುವುದು, ತಳಮಟ್ಟದ ವರದಿಗೆ (ಇದು ಹೆಚ್ಚಿನ ವೆಚ್ಚವನ್ನು ಬಯಸುತ್ತದೆ) ಬದಲಾಗಿ ಆಳುವವರನ್ನು ಓಲೈಸುವ ವರದಿಗೆ ಆದ್ಯತೆ ನೀಡುವುದು– ಇಂತಹ ಪ್ರವೃತ್ತಿ ಆರಂಭಿಸಿದವು. ಆ ಮೂಲಕ ಜಾಹೀರಾತು ಆದಾಯದ ಮೇಲೆ ಹಿಡಿತ ಸಾಧಿಸುವ ತುಡಿತಕ್ಕೆ ಬಿದ್ದವು.

ಇದಕ್ಕೆ ಮಾಧ್ಯಮಗಳು ಬೆಲೆಯಾಗಿ ತೆತ್ತಿದ್ದು ಮಾತ್ರ ತಮ್ಮ ಸ್ವಾತಂತ್ರ್ಯವನ್ನು. ಸರ್ಕಾರ ಹಾಗೂ ಬೇರೆ ಬೇರೆ ಕಾಣದ ಕೈಗಳ ಅಡಿಯಾಳಾಗಿ ಅವು ವರ್ತಿಸುವಂತಾಯಿತು. ಭಾರತದ ವಾಹಿನಿಗಳು ತಮ್ಮ ಗ್ರಾಹಕರಿಗೆ ನೀಡುವ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಗುಣಮಟ್ಟ ಕಳೆದುಕೊಳ್ಳುತ್ತಲೇ ಸಾಗಿವೆ. ಮಾಧ್ಯಮ ಕ್ಷೇತ್ರವು ಹೆಚ್ಚು ಎಚ್ಚರದಿಂದ ಇರಬೇಕಾದ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಾದಂಥ ಪ್ರಮುಖ ಸಂದರ್ಭಗಳಲ್ಲಿಯೂ ಇದು ಮುಂದುವರಿದಿದೆ.

ಅಂತರ್ಜಾಲ ಸುದ್ದಿ ತಾಣಗಳು ತಮ್ಮ ಆದಾಯದ ಮೂಲವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಇನ್ನೂ ಶೈಶವಾವಸ್ಥೆಯಲ್ಲಿವೆ. ಸುದ್ದಿತಾಣಗಳ ಆಡಳಿತ ಮಂಡಳಿಗಳು ಆದಾಯದ ಬೇರೆ ಬೇರೆ ನಮೂನೆಯನ್ನು ಕಂಡುಕೊಳ್ಳುವ ಹಂತದಲ್ಲಿವೆ. ಆದರೆ ಸ್ವಂತ ಬಲದ ಮೇಲೆ ನಿಲ್ಲುವಂತಾಗಲು ಸಾಗಬೇಕಿರುವ ದಾರಿ ದೂರವಿದೆ. ಅದಕ್ಕಿನ್ನೂ ಕಾಲಾವಕಾಶ ಬೇಕಿದೆ. ಕೋವಿಡ್ ಪರಿಣಾಮ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅವುಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡುವುದು, ಸಂಬಳ ಕಡಿತದ ಹಾದಿಯನ್ನೇ ತುಳಿದಿವೆ.

ಸುದ್ದಿ ಗ್ರಾಹಕರು ತಾವು ಏನು ನೋಡುತ್ತಾರೋ ಅಥವಾ ಓದುತ್ತಾರೋ ಅದಕ್ಕೆ ಸಮನಾಗಿ ಹಣವನ್ನೂ ಕೊಡುವಂತಾಗಬೇಕು ಎಂಬುದು ಸದ್ಯದ ಪರಿಸ್ಥಿತಿಯಲ್ಲಿ ಆದರ್ಶದ ಮಾತಾದೀತು. ಆದರೆ ಅಂಥದ್ದೊಂದು ವಾತಾವರಣವಂತೂ ಈ ಹಿಂದೆ ಇತ್ತು. ಕನ್ನಡದ ವಾರಪತ್ರಿಕೆ ‘ಲಂಕೇಶ್‌ ಪತ್ರಿಕೆ’ಯು ಅದರ ಸಂಸ್ಥಾಪಕ ಸಂಪಾದಕ ಪಿ.ಲಂಕೇಶ್‌ ಅವರ ಕಾಲದಲ್ಲಿ ಈ ‘ಸುವರ್ಣ ಯುಗ’ವನ್ನು ಅನುಭವಿಸಿತ್ತು. ಯಾವುದೇ ಜಾಹೀರಾತು ಪಡೆಯದೆ ಪೂರ್ಣಪ್ರಮಾಣದಲ್ಲಿ ಪ್ರಸರಣದಿಂದ ಬರುವ ಆದಾಯದ ಮೇಲೆಯೇ ಕಾರ್ಯಾಚರಣೆ ನಿರ್ವಹಿಸುವ ನೀತಿ ಹೊಂದಿತ್ತು. ಆ ಮೂಲಕ ‘ಲಂಕೇಶ್‌ ಪತ್ರಿಕೆ’ಯು ತನ್ನ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು, ದೊಡ್ಡ ಪ್ರಸರಣ ಸಂಖ್ಯೆಯ ಸಂಭ್ರಮವನ್ನು ಅನುಭವಿಸಿತ್ತು. ಇದು 1980ರಲ್ಲಿ ಪತ್ರಿಕೆ ಆರಂಭವಾದಾಗಿನಿಂದ ಹಿಡಿದು 2000ರಲ್ಲಿ ಲಂಕೇಶರು ತೀರಿಕೊಳ್ಳುವವರೆಗೂ ಮುಂದುವರಿದಿತ್ತು. ಲಂಕೇಶರ ಕಾಲಾನಂತರವೂ ಪತ್ರಿಕೆ ಮುಂದುವರಿದಿದೆ, ಆದರೆ, ಅದು ಬೇರೆಯದೇ ಚರ್ಚೆ.

ಕೆಲವು ಸುದ್ದಿವಾಹಿನಿಗಳು ಆದಾಯ ಕಂಡುಕೊಳ್ಳಲು ‘ಪತ್ರಿಕಾ ಸಾಧನ’ವನ್ನೇ ಅನುಸರಿಸಿವೆ. ಉದಾಹರಣೆಗೆ, ‘ದಿ ಅಲ್ ಜಝೀರಾ’ ವಾಹಿನಿಯು ತನ್ನಲ್ಲಿರುವ ಸುದ್ದಿ ತುಣುಕನ್ನು ಸಿಎನ್ಎನ್ ಮತ್ತು ಬಿಬಿಸಿಯಂಥ ಪ್ರತಿಸ್ಪರ್ಧಿ ವಾಹಿನಿಗಳಿಗೆ ಮಾರಿಕೊಂಡಿತು. ಪ್ರತಿಯಾಗಿ ದೊಡ್ಡ ಮೊತ್ತವನ್ನೇ ಗಳಿಸಿತು.

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಭಾರತೀಯ ಮಾಧ್ಯಮಗಳು ಏನಾದರೂ ಪಾಠ ಕಲಿತಿದ್ದರೆ, ಅವು ತಾವು ನಡೆದು ಬಂದ ಹಾದಿಯನ್ನೊಮ್ಮೆ ಅವಲೋಕನ ಮಾಡಿಕೊಳ್ಳಬೇಕು. ಪತ್ರಿಕೆಗಳು ಪ್ರಸರಣದಿಂದ ಬರುವ ಆದಾಯದ ಮೇಲೆ ಹಾಗೂ ವಾಹಿನಿಗಳು ವೀಕ್ಷಕರು ನೀಡುವ ಶುಲ್ಕದಿಂದಲೇ ಪೂರ್ಣ ಪ್ರಮಾಣದಲ್ಲಿನಡೆಯುವಂತಾಗಬೇಕು ಎಂಬುದು ಪ್ರಾಯೋಗಿಕ ಅಲ್ಲದಿದ್ದರೂ ಜಾಹೀರಾತು ಆದಾಯದ ಮೇಲಿನ ಅವಲಂಬನೆ ತಗ್ಗಿಸಿಕೊಳ್ಳುವ ಸಲುವಾಗಿ, ಸಾಂಕ್ರಾಮಿಕವು ಈ ದಿಸೆಯಲ್ಲಿ ಚಿಂತನೆಗೆ ಹಚ್ಚಿದ್ದಂತೂ ಸುಳ್ಳಲ್ಲ. ಅದು ಸರ್ಕಾರಿ ಅಥವಾ ಖಾಸಗಿಯಾದ ಯಾವುದೇ ಜಾಹೀರಾತು ಇರಬಹುದು.

ಮಾಧ್ಯಮ ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಲು, ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳಿಗೆ ಹೊಂದಿಕೊಂಡು ಕೆಲಸ ಮಾಡುವ ಇತರ ಉದ್ಯೋಗಿಗಳು ಉದ್ಯೋಗ ಭದ್ರತೆ– ಹೆಚ್ಚು ಸ್ವಾತಂತ್ರ್ಯ ಅನುಭವಿಸಲು ಹಾಗೂ ನಿರ್ಭಿಡೆಯಿಂದ ವರದಿ ಮಾಡುವಂತಾಗಲು ಇರುವ ಮಾರ್ಗ ಇದೊಂದೇ.

(ಲೇಖಕ: ದಿ ಫೆಡರಲ್‌ ಡಾಟ್‌ ಕಾಂ ವೆಬ್‌ಸೈಟ್‌ನ ಸಹ ಸಂಪಾದಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.