ಅಜ್ಜಿ ಖಾನಾವಳಿ ಎಂದೇ ಹೆಸರಾದ ‘ಶ್ರೀ ವೀರಭದ್ರೇಶ್ವರ ಲಿಂಗಾಯತ ಖಾನಾವಳಿ’ಯು ಸಾರವಾಡದ ಹೆಸರನ್ನು ಹಲವೆಡೆ ವ್ಯಾಪಿಸುವಂತೆ ಮಾಡಿದೆ. ಹೇಗೆ ಗೊತ್ತೇ?
*****
ಸಿಹಿ ಊಟ.. ಸೋವಿ ಊಟ.. ಆರೋಗ್ಯಕರವಾದ ಊಟ.. ಹೊಟ್ಟೆ ತುಂಬಾ ಊಟ.. ಎಂಬೆಲ್ಲ ಕಾರಣಕ್ಕಾಗಿ ಜನ ದೂರದೂರುಗಳಿಂದ ಸಾರವಾಡಕ್ಕೆ ಬರುತ್ತಾರೆ. ಅಲ್ಲಿನ ಶ್ರೀ ವೀರಭದ್ರೇಶ್ವರ ಲಿಂಗಾಯತ ಖಾನಾವಳಿಗೆ(ಅಜ್ಜಿ ಖಾನಾವಳಿ) ಮುಗಿಬೀಳುತ್ತಾರೆ. ಸಮಾಧಾನದಿಂದ ಉಂಡು ತೃಪ್ತರಾಗಿ ಮರಳುತ್ತಾರೆ. ಅಲ್ಲಿಂದ ಹೊರಡುವಾಗ ಮತ್ತೆ ಮತ್ತೆ ಬರಬೇಕು ಎಂದುಕೊಳ್ಳುತ್ತಾರೆ.
ವಿಜಯಪುರ ಜಿಲ್ಲೆಯ, ಬಬಲೇಶ್ವರ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಊರು ಸಾರವಾಡ. ವಿಜಯಪುರ-ಜಮಖಂಡಿ ಮುಖ್ಯ ರಸ್ತೆಯಲ್ಲಿರುವ, ಡೋಣಿಸಾಲಿನ, ಫಲವತ್ತಾದ ಎರೆಮಣ್ಣಿನ, ಸಮೃದ್ಧ ಊರು. ಕರ್ನಾಟಕದ ಪಂಜಾಬ್ ಎಂದು ಈ ಹಿಂದೆ ಕರೆಯಿಸಿಕೊಳ್ಳುತ್ತಿದ್ದ ವಿಜಯಪುರ ಜಿಲ್ಲೆಯಲ್ಲಿ ಐದು ನದಿಗಳಿದ್ದವು. ಬಾಗಲಕೋಟೆ ಕೂಡ ಜಿಲ್ಲೆಯಾದ ನಂತರ ಈಗ ಮೂರು ನದಿಗಳು ಈ ಜಿಲ್ಲೆಯಲ್ಲಿ ಉಳಿದಿವೆ. ಅವುಗಳಲ್ಲಿ ಡೋಣಿ ನದಿಯೂ ಒಂದು. ಅದರ ಇಕ್ಕೆಲಗಳಲ್ಲಿ ಬೆಳೆಯುವ ಬಿಳಿ ಜೋಳಕ್ಕೆ ತನ್ನದೇ ಆದ ಸ್ವಾದ-ಸತ್ವ-ಬೆಲೆ ಇದೆ.
ಸಾರವಾಡದ ಚಿಕ್ಕಪ್ಪಯ್ಯ ಎಂಬ ಕಾರಣಿಕ ಪುರುಷ ಮುಂದೆ ಏನೆಲ್ಲ ಆಗುವುದು ಎಂಬುದನ್ನು, ಬಹಳ ಹಿಂದೆಯೇ ಸಾರಿ ಹೋದದ್ದರಿಂದ, ಈ ಊರಿಗೆ ಸಾರವಾಡ ಎಂಬ ಹೆಸರು ಬಂದಿದೆ ಎನ್ನುವುದು ಪ್ರತೀತಿ. ಇದು ಸಣ್ಣ ಊರಾದರೂ ಬಹು ದೊಡ್ಡ ಪರಂಪರೆ ಇದೆ. ಸಜ್ಜನ ರಾಜಕಾರಣಿ ಎಂದು ಹೆಸರುವಾಸಿಯಾದ, ದಿವಂಗತ ಸಂಸದ ಬಿ.ಕೆ.ಗುಡದಿನ್ನಿ ಹುಟ್ಟಿದ ಊರು. ಇಲ್ಲಿನ ಪ್ರತಿ ಮನೆಯಲ್ಲೂ ರಂಗ ಕಲಾವಿದರಿದ್ದಾರೆ. ಗುಡದಿನ್ನಿಯವರೂ ಒಂದು ಕಾಲದಲ್ಲಿ, ನಾಟಕದ ಅಡ್ಡೆ ಏರಲು ಬಣ್ಣ ಹಚ್ಚಿದವರೇ. ಅದೆಲ್ಲ ಹಳೆಯದಾಯಿತು, ಅಲ್ಲಿ ಈಗೇನಿದೆ ಹೇಳಿ ಎಂದರೆ, ಗುಡದಿನ್ನಿಯವರ ತಮ್ಮನ ಮಗಳಾದ ಅನಸೂಯಾ ಮಲ್ಲಪ್ಪ ಹಿಟ್ನಳ್ಳಿ, ಎಂಬ ದಿಟ್ಟ ಸುಶಿಕ್ಷಿತ ಮಹಿಳೆ ಸ್ಥಾಪಿಸಿ ನಡೆಸುತ್ತಿರುವ ಶ್ರೀ ವೀರಭದ್ರೇಶ್ವರ ಖಾನಾವಳಿ ಎಂದು ಹೇಳಬೇಕಾಗುತ್ತದೆ.
ಸಾರವಾಡ ಸುಮಾರು ಐದಾರು ಸಾವಿರ ಜನಸಂಖ್ಯೆಯ ಸಣ್ಣ ಊರಾಗಿದೆ. ಅಲ್ಲಿ ಎಕ್ಸ್‌ಪ್ರೆಸ್ ಬಸ್ಸುಗಳ ಅಧಿಕೃತ ನಿಲುಗಡೆ ಇಲ್ಲ. ಆದರೂ ಬಹುತೇಕ ಬಸ್ಸುಗಳು ಅಲ್ಲಿ ನಿಂತೇ ಹೋಗುತ್ತವೆ. ಅದಕ್ಕೆ ಕಾರಣ ಅನಸೂಯಾ ಅಮ್ಮನವರ ಖಾನಾವಳಿಯ ಊಟದ ಆಕರ್ಷಣೆ. ಜನ ಇಲ್ಲಿ ಬರೀ ಉಂಡು ಹೋಗುವದಿಲ್ಲ; ಅದರ ರುಚಿಯನ್ನು ತಮ್ಮವರಿಗಾಗಿ ತೋರಿಸಲು, ಒಂದಿಷ್ಟು ಆಹಾರ ಪದಾರ್ಥಗಳನ್ನು ಕೊಂಡು-ಕಟ್ಟಿಸಿಕೊಂಡು ಹೋಗುತ್ತಾರೆ.
ವಿವಾಹ, ಹುಟ್ಟುಹಬ್ಬ, ಮುಂಜಿ ಮುಂತಾದ ವಿಶೇಷ ಕಾರ್ಯಕ್ರಮಗಳಿದ್ದರೆ, ಅವುಗಳಿಗಾಗಿ ಹೇಳಿದ ಅಡುಗೆಯನ್ನು ರುಚಿಕಟ್ಟಾಗಿ ಸಿದ್ಧಪಡಿಸಿಕೊಂಡು, ಹೇಳಿದ ಸ್ಥಳಕ್ಕೆ ತಂದು ಅಚ್ಚುಕಟ್ಟಾಗಿ ಬಡಿಸಿ ಹೋಗುವುದು ಈ ಖಾನಾವಳಿಯ ಇನ್ನೊಂದು ವಿಶೇಷ.
ಇಲ್ಲಿ ಮನೆಯವರು ಊಟ ಬಡಿಸುವಾಗ, ಇಷ್ಟೇ ಚಪಾತಿ/ರೊಟ್ಟಿ/ಅನ್ನ ಎಂದು ಲೆಕ್ಕ ಹಾಕುವುದಿಲ್ಲ. ಅನಸೂಯಾ ಅವರ ಖಾನಾವಳಿಯಲ್ಲೂ ಲೆಕ್ಕ ಹಾಕುವ ಪದ್ಧತಿ ಇಲ್ಲ. ಒಬ್ಬರು ಹೊಟ್ಟೆ ತುಂಬುವವರೆಗೆ ಎಷ್ಟು ಬೇಕಾದರೂ ಊಟ ಮಾಡಬಹುದು. ಹೆಚ್ಚು ಉಂಡರೆ ಹೆಚ್ಚು ಬೆಲೆ ಕೊಡಬೇಕಾಗಿಲ್ಲ. ಎಷ್ಟೇ ಊಟ ಮಾಡಿದರೂ, ಒಬ್ಬರ ಒಂದು ಊಟದ ಬೆಲೆ ಕೇವಲ 50 ರೂಪಾಯಿ.
ಊಟದಲ್ಲಿ ಒಂದು ಕಾಯಿಪಲ್ಲೆ, ಒಂದು ಕಾಳು ಪಲ್ಲೆ, ಮೊಸರು, ಚಟ್ನಿಪುಡಿ, ಉಪ್ಪಿನಕಾಯಿ... ಎಲ್ಲವೂ ಇರುತ್ತವೆ. ಮೂರು ಪ್ರಕಾರದ ರೊಟ್ಟಿಗಳು; ಬಿಸಿ ಬಿಳಿಜೋಳದ ರೊಟ್ಟಿ, ಕಟಿಯಾದ ಕಡಕ್ ರೊಟ್ಟಿ, ಸಜ್ಜೆ ರೊಟ್ಟಿ ಹಾಗೂ ಚಪಾತಿ, ಅನ್ನ-ಸಾರು ಕೂಡ ಸೇರಿಸುತ್ತವೆ. ಯಾವುದಕ್ಕೂ ಮಿತಿ ಇಲ್ಲ. ಇಲ್ಲಿ ಊಟ ಮಾಡುವವನ ಸಾಮರ್ಥ್ಯಕ್ಕಿಂತ ನೀಡುವವರ ಧಾರಾಳತನ ದೊಡ್ಡದು. ಇದರ ಜೊತೆಗೆ ಶೇಂಗಾ ಹೋಳಿಗೆ ಮುಂತಾದ ಸಿಹಿ ಕಜ್ಜಾಯಗಳೂ ಇರುತ್ತವೆ. ಅವು ಬೇಕಾದರೆ ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ.
‘ಇದೇನೂ ನಮ್ಮ ಕುಟುಂಬಕ್ಕೆ ಹೊಸ ಉದ್ದಿಮೆ-ವ್ಯವಹಾರ ಅಲ್ಲ. 1971ರಲ್ಲಿಯೇ ನಮ್ಮ ಹಿರಿಯರು, ಉಪಾಹಾರ ಗೃಹ ನಡೆಸಲು ಪರವಾನಗಿ ಪಡೆದಿದ್ದರು. ನಮ್ಮದು ಅದನ್ನು ಮುಂದುವರೆಸುತ್ತಿರುವ ಮೂರನೆಯ ತಲೆಮಾರು. ಈ ಮಧ್ಯ 20 ವರ್ಷ ನಮ್ಮ ವ್ಯವಹಾರ ನಿಂತಿತ್ತು. 2003ರಲ್ಲಿ ಮತ್ತೆ ನಾವು ಚಹಾದ ಅಂಗಡಿಯನ್ನು ಶುರುಮಾಡಿದೆವು. ಆಗ ನಾವು ಅದಕ್ಕೆ ಹಾಕಿದ ಬಂಡವಾಳ ಕೇವಲ 17 ರೂಪಾಯಿ. ಯಾಕೋ ನಮಗೆ ಹೋಟೆಲ್ ಉದ್ಯಮ ಸರಿ ಎನಿಸಲಿಲ್ಲ. ಆಮೇಲೆ ಖಾನಾವಳಿಯನ್ನು ಶುರುಮಾಡಿದೆವು. ನಿತ್ಯ ಬೆಳಿಗ್ಗೆ ಎಂಟು ಗಂಟೆಗೆ ನಮ್ಮಲ್ಲಿ ಊಟ ಪ್ರಾರಂಭವಾಗುತ್ತದೆ. ರಾತ್ರಿ 12ರವರೆಗೆ ನಡೆಯುತ್ತಲೇ ಇರುತ್ತದೆ. ಈಗ ಪ್ರತಿನಿತ್ಯ ಸುಮಾರು 500ರಿಂದ 600 ಜನರು ಊಟ ಮಾಡುತ್ತಾರೆ. ಅದಲ್ಲದೇ ಸುಮಾರು 400ರಿಂದ 500 ಊಟಗಳ ಪಾರ್ಸಲ್ ಕಟ್ಟಿಕೊಡುತ್ತೇವೆ’ ಎಂದು ಅನಸೂಯಾಬಾಯಿ ಮುಚ್ಚುಮರೆಯಿಲ್ಲದೆ ವಹಿವಾಟಿನ ಲೆಕ್ಕ ಬಿಚ್ಚಿಟ್ಟರು.
ಹದಿನೈದು ಹೆಣ್ಣುಮಕ್ಕಳು ಮುಂಜಾನೆ 6ರಿಂದ ಸಂಜೆ 6ರ ವರೆಗೆ ಇಲ್ಲಿ ಅಡುಗೆ ಮಾಡುತ್ತಾರೆ. ನಾಲ್ವರು ಗಂಡುಮಕ್ಕಳು ಊಟ ಬಡಿಸುತ್ತಾರೆ. ಅಡುಗೆ ಸಿದ್ಧಪಡಿಸಲು ಕಟ್ಟಿಗೆಗಳನ್ನೇ ಬಳಸುತ್ತಾರೆ. ನಿತ್ಯ ಮೂವರು ಗಂಡಸರು ದಿನವಿಡೀ ಕಟ್ಟಿಗೆ ಒಡೆಯುತ್ತಾರೆ. ದಿನವೊಂದಕ್ಕೆ ಗಂಡಸರಿಗೆ ₹ 600 ಹಾಗೂ ಹೆಂಗಸರಿಗೆ ₹500 ಸಂಬಳ ಕೊಡುತ್ತಾರೆ.
‘ಎಲ್ಲ ಕೆಲಸಗಾರರನ್ನು ನಾವು ಮನೆ ಮಕ್ಕಳಂತೆಯೇ ನೋಡಿಕೊಳ್ಳುತ್ತೇವೆ. ಅವರೂ ಹಾಗೆಯೇ ಮನೆ ಮಕ್ಕಳಂತೆಯೇ ಕೆಲಸ ಮಾಡುತ್ತಾರೆ’ ಎಂಬ ಅನಸೂಯಾಬಾಯಿ ಅವರ ಉತ್ಸಾಹದ ನುಡಿಯೇ ಇಲ್ಲಿನವರ ಒಗ್ಗಟ್ಟಿಗೆ ಕನ್ನಡಿ ಹಿಡಿಯುತ್ತದೆ.
ಅರವತ್ತೆಂಟು ವರ್ಷ ವಯಸ್ಸಿನ ಅನಸೂಯಾ ಅವರದ್ದು ಬಾಲ್ಯವಿವಾಹ. ಮದ್ಯವ್ಯಸನಿ ಗಂಡ ಇದ್ದಂಥ ಪರಿಸ್ಥಿತಿಯಲ್ಲೂ ಅವರು ಮೆಟ್ರಿಕ್ ಪರೀಕ್ಷೆ ಕಟ್ಟಿ ಪಾಸಾಗಿದ್ದರು. ಆಗ ಅವರಿಗೆ ಮೂರು ಕಡೆಯಿಂದ ನೌಕರಿ ಮಾಡುವ ಅವಕಾಶಗಳು ಬಂದಿದ್ದವು. ಮನೆಯವರ ನಿರಾಕರಣೆಯಿಂದ ನೌಕರಿಗೆ ಹೋಗಲು ಆಗಿರಲಿಲ್ಲ. ಮುಂದೆ ಶಿಕ್ಷಣ ಮುಂದುವರೆಸಲೂ ಸಾಧ್ಯ ಆಗಿರಲಿಲ್ಲ. ಒಂದು ವೇಳೆ ಅವಕಾಶ ಸಿಕ್ಕಿದ್ದಿದ್ದರೆ ತಾವು ಜಿಲ್ಲಾಧಿಕಾರಿಯಾಗುತ್ತಿದ್ದುದಾಗಿ ಅನಸೂಯಾ ಹೇಳುವಾಗ ಅವರ ಕಣ್ಣಲ್ಲಿನ ಮಿಂಚನ್ನು ನೋಡಬೇಕು. ಅದಕ್ಕಾಗಿ ಈಗ ಅವರಿಗೆ ಯಾವ ಹಳಹಳಿಕೆಯೂ ಇಲ್ಲ. ‘ಈಗ ಹೊಟ್ಟೆತುಂಬ ಊಟ ಹಾಕುವ ಹಾಗೂ ಉಂಡ ಜನರ ಮುಖದ ಮೇಲಿನ ಸಂತೃಪ್ತಿಯನ್ನು ನೋಡುವ ಭಾಗ್ಯ ನನ್ನದಾಗಿದೆ’ ಎನ್ನುತ್ತಾರೆ.
ಅನಸೂಯಾ ಈಗ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ಒಡೆಯರೇನೂ ಅಲ್ಲ. ಆದರೂ ಅವರು ಈವರೆಗೆ ಖಾನಾವಳಿ ನಡೆಸಲು ಖರೀದಿಸಿದ ದಿನಸಿ ಸಾಮಾನುಗಳ ಮೊತ್ತವೇ ₹70 ಕೋಟಿಯಷ್ಟಾಗಿದೆ ಎಂದು, ಅದರ ಲೆಕ್ಕ ಇಟ್ಟಿರುವ ಸಾರವಾಡದ ಕಿರಾಣಿ ವ್ಯಾಪಾರಿ ಹೇಳುವುದನ್ನು ಕೇಳಿದರೆ ಹುಬ್ಬೇರೀತು.
ಪ್ರತಿದಿನ ಸುಮಾರು 5 ಸಾವಿರ ರೊಟ್ಟಿ, ಒಂದು ಕ್ವಿಂಟಲ್ ಗೋಧಿ, ಅರ್ಧ ಕ್ವಿಂಟಲ್ ಅಕ್ಕಿ ಹಾಗೂ 40-45 ಲೀಟರ್ ಮೊಸರು ಖರ್ಚಾಗುತ್ತದೆ. ಮೊದಮೊದಲು ಒಂದು ಹಿಂದೆ ಊಟಕ್ಕೆ ₹12 ರೂಪಾಯಿ ತೆಗೆದುಕೊಳ್ಳುತ್ತಿದ್ದರು. ಮುಂದೆ ಅದು 20, 30, 40 ರೂಪಾಯಿ ಆಗಿ, ಈಗ ₹50ಕ್ಕೆ ಬಂದಿದೆ.
ಸಮಾರಂಭಗಳಿಗೆ ಐದಾರು ಸಾವಿರ ಜನರಿಗೆ ಅಡುಗೆ ಮಾಡಿ ಕಳುಹಿಸಲು ಬೇಕಾಗುವ ಸಿಬ್ಬಂದಿ, ಪರಿಕರಗಳನ್ನು ಕೂಡ ಅನಸೂಯಾ ಒಟ್ಟುಗೂಡಿಸಿಕೊಂಡಿದ್ದಾರೆ. ಇದಕ್ಕಾಗಿ ವಾಹನದ ಅವಶ್ಯಕತೆ ಇರುತ್ತದೆ. ಅದರ ವೆಚ್ಚವನ್ನು ಕಾರ್ಯಕ್ರಮ ಮಾಡುವವರು ಭರಿಸಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.