ADVERTISEMENT

ಧ್ಯಾನಕ್ಕೆ ಕುಳಿತಾಗ ಮೂರು ಸುವರ್ಣ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು...

ಶ್ರೀ ಶ್ರೀ ರವಿಶಂಕರ್
Published 9 ಅಕ್ಟೋಬರ್ 2024, 11:19 IST
Last Updated 9 ಅಕ್ಟೋಬರ್ 2024, 11:19 IST
<div class="paragraphs"><p>ಧ್ಯಾನ ( ಸಾಂಕೇತಿಕ ಚಿತ್ರ)</p></div>

ಧ್ಯಾನ ( ಸಾಂಕೇತಿಕ ಚಿತ್ರ)

   

ಮನೆಯಲ್ಲಾಗಲೀ ಅಥವಾ ಶಾಲೆಯಲ್ಲಾಗಲೀ ನಮ್ಮ ಮನಸ್ಸುಗಳನ್ನು ಅಥವಾ ಭಾವನೆಗಳನ್ನು ನಿಭಾಯಿಸುವುದು ಹೇಗೆ ಎಂದು ಯಾರೂ ನಮಗೆ ಹೇಳಿಕೊಟ್ಟಿಲ್ಲ. ಕೋಪಿಸಿಕೊಳ್ಳಬಾರದು ಅಥವಾ ಒತ್ತಡಕ್ಕೆ ಒಳಗಾಗಬಾರದು ಎಂದು ನಮಗೆ ಹೇಳಲಾಗಿದೆಯೇ ಹೊರತು, ಅದನ್ನು ಹೇಗೆ ಮಾಡಬಾರದೆಂದು ಯಾರೂ ನಮಗೆ ಹೇಳಿಕೊಟ್ಟಿಲ್ಲ.

ನಮ್ಮ ಭಾವನೆಗಳ ಬಗ್ಗೆ ಅರಿವು ಮತ್ತು ನಮ್ಮ ಮಾನಸಿಕ ಸ್ವಾಸ್ಥ್ಯ ಮುಖ್ಯವಾದರೂ, ಅದರ ಬಗ್ಗೆ ಹೆಚ್ಚು ಗಮನವನ್ನು ಕೊಟ್ಟೇ ಇಲ್ಲ. ಇದರಿಂದ ಒತ್ತಡದ ಸವಾಲುಗಳನ್ನು ಒಬ್ಬೊಂಟಿಗರಾಗಿಯೇ ನಿಭಾಯಿಸುವಂತಹ ಸ್ಥಿತಿ ಬಂದಿದೆ. ಮಾರ್ಗದರ್ಶನದ ಅಭಾವದಿಂದಾಗಿ, 'ಮಾಡುವುದು ಬಹಳಷ್ಟಿದೆ, ಶಕ್ತಿ ಬಹಳ ಕಡಿಮೆಯಿದೆ ಮತ್ತು ಮಾಡಲು ಸಮಯವಿಲ್ಲ' ಎಂಬ ಭಾವನೆ ಬರುತ್ತದೆ. ಅದು ದೊಡ್ಡ ಹುದ್ದೆಯಲ್ಲಿ ಇರುವವರಾಗಲಿ, ರಾಜಕಾರಣಿಯಾಗಿರಲಿ ಅಥವಾ ವ್ಯಾಪಾರಿಯಾಗಿರಲಿ, ಎಲ್ಲರಿಗೂ ಇರುವುದು ಅದೇ 24 ಗಂಟೆಗಳು. ಈ ಸೀಮಿತವಾದ ಸಮಯವನ್ನು ನಿಭಾಯಿಸುವುದರಲ್ಲೇ ಇರುವುದು ಪರಿಹಾರ. ನಮ್ಮ ಶಕ್ತಿಯ ಸಂಚಯ ಮಾಡಿದಾಗ ಮಾತ್ರ ಇದು ಸಾಧ್ಯ. ಶಕ್ತಿಯನ್ನು ಸರಿಯಾದ ಆಹಾರದಿಂದ, ವ್ಯಾಯಾಮದಿಂದ ಮತ್ತು ಮುಖ್ಯವಾಗಿ ಆಳವಾದ ವಿಶ್ರಾಂತಿಯಿಂದ ಪಡೆಯಲು ಸಾಧ್ಯ. ಆಳವಾದ ವಿಶ್ರಾಂತಿಯನ್ನು ಧ್ಯಾನದಿಂದ ಮಾತ್ರ ಪಡೆಯಲು ಸಾಧ್ಯ.

ADVERTISEMENT

ಧ್ಯಾನವೆಂದರೆ ಏಕಾಗ್ರತೆಯಲ್ಲ. ಏಕಾಗ್ರತೆಯನ್ನು ಬಿಡುವುದೇ ಧ್ಯಾನ. ಧ್ಯಾನವೆಂದರೆ ನಮ್ಮ ಆಲೋಚನೆಗಳನ್ನು ಯಾವುದರ ಮೇಲೋ ಕೇಂದ್ರೀಕೃತಗೊಳಿಸುವುದಲ್ಲ. ಧ್ಯಾನವೆಂದರೆ ಮನಸ್ಸನ್ನು ಚಟುವಟಿಕೆಯಿಂದ ಸ್ತಬ್ಧತೆಗೆ ಕೊಂಡೊಯ್ಯುವುದು. ಧ್ಯಾನ ಮಾಡುವ ಸಲುವಾಗಿ ಅಥವಾ ಸಮಾಧಿಯನ್ನು ಪಡೆಯುವ ಸಲುವಾಗಿ ಬೆಟ್ಟದ ಮೇಲೆ ಕುಳಿತುಕೊಳ್ಳಬೇಕಿಲ್ಲ. ಅತೀ ಕಾರ್ಯನಿರತವಾದ ಮಾರುಕಟ್ಟೆಯಾದರೂ ಸರಿ, ಅದನ್ನು ಅನುಭವಿಸಬಹುದು, ಏಕೆಂದರೆ ಧ್ಯಾನವೆಂದರೆ ಮನಸ್ಸನ್ನು ವರ್ತಮಾನದ ಕ್ಷಣಕ್ಕೆ ತರುವುದು.

ಧ್ಯಾನವನ್ನು ಖಾಲಿ ಹೊಟ್ಟೆಯಲ್ಲಿ ಮಾಡುವುದು ಒಳಿತು. ಊಟ ಮಾಡಿದ ಕೂಡಲೇ ಧ್ಯಾನಕ್ಕೆ ಕುಳಿತರೆ ನಿಮಗೆ ಅಜೀರ್ಣವಾದರೂ ಆಗಬಹುದು ಅಥವಾ ಸರಿಯಾಗಿ ಧ್ಯಾನ ಮಾಡಲಾಗದೆ ನಿದ್ದೆ ಮಾಡಿಬಿಡುತ್ತೀರಿ.

ಧ್ಯಾನ ಮಾಡಲು ಉತ್ತಮವಾದ ಭಂಗಿಯೆಂದರೆ ಸುಖವಾಗಿ ಕುಳಿತು ಬೆನ್ನೆಲುಬನ್ನು ನೇರವಾಗಿ ಇಟ್ಟುಕೊಳ್ಳುವುದು. ನೆಲದ ಮೇಲೆ ಕುಳಿತುಕೊಳ್ಳಬಹುದು ಅಥವಾ ಕುರ್ಚಿಯ ಮೇಲಾದರೂ ಕುಳಿತುಕೊಳ್ಳಬಹುದು. ಯಾವುದು ಹಿತವೋ ಅದನ್ನೇ ಮಾಡಬಹುದು.

ಧ್ಯಾನ ಮಾಡಲು ಕುಳಿತಾಗ ಮೂರು ಸುವರ್ಣ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯ ನಿಯಮವೆಂದರೆ, "ನನಗೇನೂ ಬೇಡ". ಧ್ಯಾನಕ್ಕೆ ಕುಳಿತಾಗ ಎಲ್ಲಾ ಬಯಕೆಗಳನ್ನೂ ಬಿಡಿ; ಎಲ್ಲಾ ಬಯಕೆಗಳನ್ನು ಬಿಟ್ಟುಬಿಡುವ ಬಯಕೆಯನ್ನೂ ಬಿಡಿ!

ಎರಡನೆಯ ನಿಯಮವೆಂದರೆ, "ನಾನು ಏನನ್ನೂ ಮಾಡುವುದಿಲ್ಲ". ಕಡಿಮೆ ಯತ್ನವನ್ನು ಹಾಕಿದಷ್ಟೂ ಹೆಚ್ಚು ಫಲವನ್ನು ಪಡೆಯುತ್ತೀರಿ. ನಿಮ್ಮಲ್ಲಿ ಓಡುವ ಆಲೋಚನೆಗಳೊಡನೆ, ಭಾವನೆಗಳೊಡನೆ ಸಿಲುಕಿಕೊಳ್ಳಬೇಡಿ. ಅವುಗಳನ್ನು ಸುಮ್ಮನೆ ಗಮನಿಸಿ.

ಮೂರನೆಯ ಸುವರ್ಣ ನಿಯಮವೆಂದರೆ, "ನಾನು ಏನೂ ಅಲ್ಲ!". ನೀವು ಯಾರೋ ಎಂದು ಅಂದುಕೊಂಡರೆ; ನೀವು ಮಹಾನರು, ಧನವಂತರು ಅಥವಾ ಬಡವರು ಎಂದುಕೊಂಡರೆ, ನಿಮ್ಮಿಂದ ಧ್ಯಾನ ಮಾಡಲು ಸಾಧ್ಯವಿಲ್ಲ. ನಾವೆಲ್ಲರೂ ಯಾವ ಚೈತನ್ಯದಿಂದ ಮಾಡಲ್ಪಟ್ಟಿದ್ದೇವೋ, ಅದರಲ್ಲಿ ನೆಲೆ ನಿಲ್ಲಲು ಕೆಲ ನಿಮಿಷಗಳ ಕಾಲ ನಿಮ್ಮ ಎಲ್ಲಾ ಗುರುತುಗಳನ್ನೂ ಬಿಡಬೇಕು.

ಧ್ಯಾನದಿಂದ ನಮ್ಮ ಬುದ್ಧಿಯು ತೀಕ್ಷ್ಣವಾಗುತ್ತದೆ, ಮನಸ್ಸು ಸ್ಪಷ್ಟವಾಗುತ್ತದೆ, ಭಾವನೆಗಳು ಮೃದುವಾಗುತ್ತವೆ ಮತ್ತು ಬಲಿಷ್ಠವಾಗುತ್ತವೆ, ಹಾಗೂ ಅದು ನಮ್ಮ ಅಂತಃಸ್ಫುರಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಧ್ಯಾನವನ್ನು ಪ್ರಯತ್ನರಹಿತವಾಗಿ ಅನುಭವಿಸಲು, ಯೂಟ್ಯೂಬ್ ನಲ್ಲಿ ಇರುವ ಗುರುದೇವ್ ಶ್ರೀ ಶ್ರೀ ರವಿಶಂಕರರ ಯಾವುದೇ ನಿರ್ದೇಶಿತವಾದ ಧ್ಯಾನವನ್ನು ನೀವು ಅನುಸರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.