ನಸುಕು ಮೂಡಲು ಇನ್ನೂ ಬಹಳ ಸಮಯವಿತ್ತು. ಅಂದಾಜು ರಾತ್ರಿ ಮೂರು ಗಂಟೆ. ಬಿಕೋ ಎನ್ನುವ ಕತ್ತಲು. ಚಳಿಗಾಳಿ. ಬಳ್ಳಾರಿಯಿಂದ ಸುಮಾರು 30 ಕಿ.ಮೀ ದೂರದ ಕೊಳಗಲ್ಲು ಗ್ರಾಮದಾಚೆ ಕಟಾವು ಮಾಡಿದ ಭತ್ತದ ಜಮೀನೊಂದರ ಜೋಪಡಿಯೊಳಗಿದ್ದ ತುಂಬುಗರ್ಭಿಣಿ ಶಾಂತಮ್ಮನಿಗೆ ಹೆರಿಗೆ ನೋವು ಶುರುವಾಯಿತು.
ಶಾಂತಮ್ಮನ ಅಮ್ಮ ನಾಗಮ್ಮ ಗಡಿಬಿಡಿಯಿಂದ ಸಣ್ಣದಾಗಿ ಕೂಗು ಹಾಕುತ್ತಲೇ ತುಸು ದೂರದಲ್ಲಿ ಇನ್ನೊಂದು ಜೋಪಡಿಯೊಳಗಿದ್ದ ಮಂಗಮ್ಮ ಎದ್ದು ಬಂದರು. ಗುಡಿಸಲಿಗೊಂದು ತೆರೆ ಇಳಿಬಿತ್ತು. ಅರ್ಧಗಂಟೆ ಆಗುವುದರೊಳಗೆ ಹೆಣ್ಣು ಮಗು ಹುಟ್ಟಿತು. ಅದು ನಾಲ್ಕನೆಯದು. ಹೆಸರು ‘ಸಿರಿದೇವಿ’.
ಅದಕ್ಕೂ ಮುಂಚಿನ ಮಗು ಹುಟ್ಟಿದ್ದು ಹೊಸಪೇಟೆ ತಾಲ್ಲೂಕಿನ ಪಿ.ಕೆ.ಹಳ್ಳಿಯ ಜಮೀನಿನಲ್ಲಿ ಹಾಕಿದ್ದ ಇಂಥದ್ದೇ ಜೋಪಡಿಯಲ್ಲಿ. ಅದಕ್ಕೂ ಮುಂಚಿನ ಮಕ್ಕಳು ಹುಟ್ಟಿದ್ದು ಕನಕಗಿರಿ ತಾಲ್ಲೂಕಿನ ಮುಸಲಾಪುರದಲ್ಲಿ. ಇವರೆಲ್ಲ ಆಸ್ಪತ್ರೆಯ ಮುಖ ನೋಡದೆ ಹುಟ್ಟಿದವರು. ಶಾಲೆಯ ಮುಖವನ್ನೂ ನೋಡದವರು. ಹುಲ್ಲು, ನೀರು ಇರುವ ಕಡೆ ಅವರಿವರ ದನ ಮೇಯಿಸಿಕೊಂಡು ಹೊರಡುವ ಹೆತ್ತವರನ್ನು ಹಿಂಬಾಲಿಸುವುದೇ ಅವರ ಜೀವನ. ಶಾಲೆ, ಕಲಿಕೆ, ಗಿಲಿಕೆ ಏನೂ ಇಲ್ಲ.
ಹೆರಿಗೆ ಮಾಡಬೇಕೆಂದರೆ ತೆರೆ ಇಳಿಬಿಡೋದು. ಹೆಣ್ಣುಮಕ್ಕಳು ಮೈ ನೆರೆದರೆ ಜೋಪಡಿ ದಬಾಕೋದು. ಒಂದಷ್ಟು ದಿನ ಒಳಗೆ ಕೂರಿಸೋದು ಅಷ್ಟೆ. ಮದುವೆ, ಗಿದುವೆ, ಸೋಬನ ಎಲ್ಲ ಇದೇ ಜೋಪಡಿಯೊಳಗೆ. ಹಲವು ತಲೆಮಾರುಗಳು ಹೀಗೇ ಸಾಗಿ ಹೋಗಿವೆ.
ಗೊಲ್ಲರ ಪೈಕಿ ಅಲೆಮಾರಿ ಕೃಷ್ಣಗೊಲ್ಲರ ಕತೆಯನ್ನು ಎಲ್ಲಿಂದ ಶುರು ಮಾಡಿದರೂ ಇಂಥ ಕಷ್ಟಕಾರ್ಪಣ್ಯಗಳ ಜೊತೆಗೆ ದನಗಳ ಸಾಕ್ಷಿ ಇದ್ದೇ ಇರುತ್ತದೆ. ಕಾಡುಗೊಲ್ಲರಿಗೆ ಊರಾಚೆಯ ‘ಕಾಡೇ’ ಬೀಡು. ಈಗ ಕಾಡಿಲ್ಲ. ಹೆಸರಷ್ಟೇ ಉಳಿದಿದೆ. ಅಲೆಮಾರಿ ಕೃಷ್ಣಗೊಲ್ಲರಿಗೆ ತಮ್ಮೂರು ಎಂದು ಹೇಳಲು ಒಂದೂರು ನೆಪ. ಉದಾಹರಣೆಗೆ ಮುಸಲಾಪುರ. ಆದರೆ ಬದುಕಿಸುವ ಊರುಗಳು ಹತ್ತಾರು.
ಈಗಿನ ಊರು ಬಳ್ಳಾರಿ. ಕಳ್ಳುಬಳ್ಳಿಯ ಸಂಬಂಧಿಕರ ಹತ್ತಾರು ಕುಟುಂಬಗಳ ಮಂದಿ ಆಸುಪಾಸಿನ ಜಮೀನುಗಳಲ್ಲೇ ಗುಡಿಸಲು ಹಾಕಿಕೊಂಡು ಸಾವಿರಾರು ದನಗಳನ್ನು ಮೇಯಿಸುತ್ತಿದ್ದಾರೆ. ಅರ್ಧ ಕಿಲೋ ಮೀಟರ್ ದೂರದ ಆ ಕಡೆ ಜಮೀನಿನಲ್ಲಿ ಶಾಂತಮ್ಮನ ಗಂಡನ ಗುಡಿಸಲಿದೆ. ದನಗಳೂ ಇವೆ. ಇದು ಅಲೆಮಾರಿ ಬದುಕು ಕೊಟ್ಟ ಅವಕಾಶ.
ಬಾಣಂತಿ ಆರೈಕೆ ಮತ್ತು ದನಗಳ ಆರೈಕೆ ಎರಡೂ ಒಟ್ಟಿಗೇ ನಡೆದಿರುವ ಕೃಷ್ಣಗೊಲ್ಲರ ‘ಹೊಲದೊಳಗಿನ ಅಲೆಮಾರಿ ಜಗತ್ತು’ ಅದರಾಚೆಗಿನ ಎಲ್ಲ ಲೋಕಾರೂಢಿಗೂ ತನಗೂ ಸಂಬಂಧವೇ ಇಲ್ಲವೆಂಬಂತೆ, ತನ್ನದೇ ಸಂಪ್ರದಾಯದ ಚೌಕಟ್ಟಿನಲ್ಲೇ ಬದುಕುತ್ತಿದೆ.ಈ ಸಮುದಾಯದಲ್ಲಿ ಹೆಣ್ಣು ಹೆರುವುದು ಮತ್ತು ಹಸು ಈಯುವುದು ಎರಡೂ ಒಂದೇ. ಹೆರಿಗೆ ಎಲ್ಲೇ ಆಗಲಿ, ದನ ಮೇಯಿಸುವ ಅವಧಿ ಮುಗಿದು ಜಮೀನು ಬಿಟ್ಟು ಹೊರಡಬೇಕೆಂದರೆ ಎಲ್ಲವನ್ನೂ ಹೆಗಲ ಮೇಲೆ ಹಾಕಿಕೊಂಡು ಮುಂದಿನ ಜಮೀನಿನತ್ತ ನಡೆಯಬೇಕಷ್ಟೆ; ಹುಟ್ಟು–ಸಾವುಗಳ ಹಂಗು ಮೀರಿ!
ಸಂಪ್ರದಾಯದ ಚೌಕಟ್ಟು
ಇವರ ಬದುಕಿನ ಪರಿಕಲ್ಪನೆಯೇ ವಿಶೇಷ. ‘ದನ ಮಾರಿಕೊಂಡು ತಿಂದರೆ ಜೀವನ ಉದ್ಧಾರವಾಗುವುದಿಲ್ಲ’. ಅದಕ್ಕೇ ಅವರು ಸಾವಿರಾರು ದನಗಳಿದ್ದರೂ ಸ್ವಂತಕ್ಕಿಷ್ಟು ಹಾಲು ಕರೆದುಕೊಳ್ಳುವುದನ್ನು ಬಿಟ್ಟರೆ ಹಾಲು ಮಾರುವುದೇ ಇಲ್ಲ. ಕೇಳಿದವರಿಗೆ ಉಚಿತ. ಉಳಿದದ್ದೆಲ್ಲ ಕರುಗಳಿಗೆ ಮೀಸಲು.
ಕಡುಕಷ್ಟ ಬಾರದ ಹೊರತು ಎಂಥ ನಿಷ್ಪ್ರಯೋಜಕ ದನವನ್ನೂ ಮಾರುವುದಿಲ್ಲ. ಎಲ್ಲವನ್ನೂ ಮಾರಿಕೊಂಡು, ಕೊಳ್ಳುಬಾಕ
ರಾಗಿ ತಿನ್ನುವ ‘ಉದ್ಧಾರ’ ಅಲ್ಲ ಅದು. ಹೈನುಗಾರಿಕೆಯ ಎಲ್ಲ ಲಾಭದ ಲೆಕ್ಕಾಚಾರಗಳನ್ನೂ ಉಲ್ಟಾ ಮಾಡುವ ಜೀವನಶೈಲಿ.
ಹಸು, ಕರು ಮುದಿಯಾಗಲಿ, ಕಾಯಿಲೆ ಬೀಳಲಿ, ಕೈಕಾಲು ಮುರಿದುಕೊಳ್ಳಲಿ, ಏನೇ ಆಗಲಿ, ಜೊತೆಯಲ್ಲಿಟ್ಟುಕೊಂಡೇ ಸಾಕುವ, ಆರೈಕೆ ಮಾಡುವ ಆದಿಮ ಜೀವನ ಶೈಲಿ. ದನ–ಕರುಗಳನ್ನು ಕಟುಕರಿಗೆ ಮಾರುವುದಂತೂ ಕನಸಿನಲ್ಲೂ ಇಲ್ಲ. ಯಾವ ಪ್ರಯೋಜನವಿಲ್ಲವೆಂದರೂ ಅದಕ್ಕೆ ಮೇವು–ನೀರು ಕೊಡುತ್ತಾರೆ. ಅವು ಅವರ ಬಳಿಯಿಂದ ಕೊನೆಗೆ ಮಣ್ಣಿಗೇ ಹೋಗಬೇಕು. ಅಲ್ಲಿವರೆಗೂ ಬಾಂಧವ್ಯ ಉಂಟು. ಗೋಪಾಲನೆ ಎಂದರೆ, ಹಿರೀಕರ ನೇಮವೆಂದರೆ ಸುಮ್ಮನೆಯೇ.
ಅವರು ಮಾಡುವುದಾದರೂ ಏನು? ಒಂದಿಷ್ಟು ತಮ್ಮ ದನ, ಇನ್ನೊಂದಿಷ್ಟು ಊರವರ ದನಗಳನ್ನು ಸೇರಿಸಿಕೊಂಡು ಮೇವು–ನೀರು ಇರುವಲ್ಲಿಗೆ ವಲಸೆ ಬರುವುದು. ಅಲ್ಲಿನ ರೈತ ಜಮೀನುಗಳಲ್ಲಿ ಒಪ್ಪಂದದಂತೆ ಬೀಡುಬಿಟ್ಟು ಮೇಯಿಸುವುದು, ದನಗಳ ಗೊಬ್ಬರವನ್ನು ಅಲ್ಲೇ ಬಿಡುವುದು. ರೈತರು ಕೊಡುವ ಕಾಸು, ಧಾನ್ಯದೊಂದಿಗೆ ದಿನಗಳನ್ನು ನೂಕುವುದು. ‘ಮಾರೋ ವಿಚಾರವಾಗಿದ್ದರೆ ಊರು ಸೇರುತ್ತಿದ್ದೆವು. ನಿಮ್ಮಂಥೋರಿಗೆ ಬೇಸು ಮಾರಿ ಮನೆ ಕಟ್ಕಂಡು ಆರಾಮಗಿರ್ತಿದ್ದೆವು’ ಎನ್ನುವ ಮಂಗಮ್ಮ ನೇಮ ಮೀರದ ಛಲಗಾರ್ತಿಯಂತೆ ಕಾಣಿಸುತ್ತಾರೆ. ಎಲ್ಲ ಸಮುದಾಯಗಳಲ್ಲಿ ಇರುವಂತೆ ಇಲ್ಲಿಯೂ ಹೆಣ್ಣುಮಕ್ಕಳಲ್ಲಿ ಧೈರ್ಯ, ಛಲ ಹೆಚ್ಚು.
ಇನ್ನೊಬ್ಬರ ಹೊಲಕ್ಕೆ ಬುತ್ತಿಕಟ್ಟಿಕೊಂಡು ಕೂಲಿಗೆ ಹೋಗುವುದಕ್ಕಿಂತಲೂ ಇದೇ ಕೆಲಸ ಅವರಿಗೆ ಬೇಸು. ಇದು ಸ್ವಾಭಿಮಾನ. ಅದರೊಂದಿಗೆ ಸಂಪ್ರದಾಯ ಎರಡೂ ಸೇರಿ ಅವರು ಲೋಕದೃಷ್ಟಿಯೊಳಗೆ ಬಡವರಾಗಿಯೇ ಉಳಿದಿದ್ದಾರೆ. ಈಗ ಬೇಕುಬೇಕೆಂಬ ಕೊಳ್ಳು
ಬಾಕ ಸಂಸ್ಕೃತಿಯ ವಿಜೃಂಭಣೆಯ ಕಾಲ. ಇಂಥ ಕಾಲದಲ್ಲೂ ಬೇಡ ಎನ್ನುವ ಬದುಕನ್ನೇ ಆತುಕೊಂಡಿರುವ ಗೊಲ್ಲರು. ಇವರನ್ನು ಕಂಡರೆ ಮೂಗುಮುಚ್ಚಿಕೊಳ್ಳುವ, ದೂರ ಸರಿಯುವ ಜನರುಂಟು. ಆದರೇನೂ ಅವರಿಗೆ ಬೇಸರವಿಲ್ಲ.
ಅವರ ಜೋಪಡಿಯೇ ಗುಡಿ. ಕಂಸನಿಂದ ರಕ್ಷಿಸಲು ವಸುದೇವನು ಎಳೆಯ ಕೃಷ್ಣನನ್ನು ಬಿದಿರಿನ ಬುಟ್ಟಿಯೊಳಗೆ ಮಲಗಿಸಿಕೊಂಡು ಯಮುನಾ ನದಿಯ ಪ್ರವಾಹ ದಾಟಿ ನಂದಗೋಕುಲಕ್ಕೆ ಕರೆದೊಯ್ದ ಕತೆ ಎಲ್ಲರಿಗೂ ಗೊತ್ತು. ಆ ಬುಟ್ಟಿಯೇ ಈ ಕೃಷ್ಣಗೊಲ್ಲರ ದೇವಜಗತ್ತು. ಹೀಗಾಗಿ ಅವರು ಇರುವ ಜಾಗವೆಲ್ಲವೂ ನಂದಗೋಕುಲವೇ.
ಉದ್ಯೋಗ–ಜೀವನ–ಮೀಸಲಾತಿ
ಉದ್ಯೋಗ ಮತ್ತು ಜೀವನ ಬೇರೆ ಬೇರೆ ಅಲ್ಲ. ನಾವು ಪಡೆವ ಶಿಕ್ಷಣ ನಮ್ಮ ಉದ್ಯೋಗವನ್ನು ನಿರ್ಧರಿಸುತ್ತದೆ ಎಂಬುದು ಲೋಕಾರೂಢಿಯ ಮಾತು. ಹಲವರ ಜೀವನ ಈ ಮಾತಿಗಿಂತ ಭಿನ್ನವಾಗಿಯೂ ಇರುತ್ತದೆ. ಈ ಕೃಷ್ಣಗೊಲ್ಲರಿಗೆ ಶಿಕ್ಷಣ ಮತ್ತು ಉದ್ಯೋಗದ ಕುರಿತ ಆಧುನಿಕ ವ್ಯಾಖ್ಯಾನಗಳು ವರ್ಜ್ಯ.
ಮಕ್ಕಳು ಶಾಲೆಗೆ ಹೋಗುವುದಿಲ್ಲ. ಹೀಗಾಗಿ ಶಾಲೆ–ಕಾಲೇಜುಗಳು ಕಲಿಸುವ ಶಿಕ್ಷಣವನ್ನು ಆಧರಿಸಿದ ಉದ್ಯೋಗಗಳತ್ತಲೂ ಲಕ್ಷ್ಯವಿಲ್ಲ. ಮೀಸಲಾತಿ ಎಂಬುದಂತೂ ದೂರವೇ ಉಳಿಯಿತು. ಇಂಥ ಸನ್ನಿವೇಶದಲ್ಲಿ ಸಂಪ್ರದಾಯ ಮೀರಿ ‘ದನಗಳನ್ನು ಮಾರಿ ಚೆನ್ನಾಗಿ ಬದುಕುವ’ ಕನಸು ಕಟ್ಟಿಕೊಂಡವರೂ ಒಳಗೇ ಇದ್ದಾರೆ. ಆದರೆ ಅವರ ಮೇಲೆ ಹಿರಿಯರ ಕಣ್ಗಾವಲಿದೆ. ಅದೆಲ್ಲ ಕಷ್ಟ.
ಹೊಸಕಾಲದಲ್ಲೂ ಸಂಪ್ರದಾಯ ಬಿಟ್ಟುಕೊಡದೇ, ಅನ್ಯರಿಗೆ ತೊಂದರೆ ಕೊಡದೇ ಬದುಕುತ್ತಿರುವ ಈ ಸಮುದಾಯ ತಮ್ಮ ಸಹಯಾತ್ರಿ ದನಗಳು ಸತ್ತರೆ ಅವುಗಳನ್ನು ಹೂಳಿ, ಗೌರವಯುತ ಅಂತ್ಯಸಂಸ್ಕಾರ ಮಾಡಲು ಪಡುವ ಕಷ್ಟವೇನೂ ಕಮ್ಮಿ ಇಲ್ಲ. ಜೋಪಡಿ ಹಾಕಿದ ಜಮೀನಿನಲ್ಲೇ ಹೂಳಬಹುದು. ಆ ಜಮೀನು ಮಾಲೀಕರು ಬೇಡವೆಂದರೆ ಇನ್ನೊಂದು ಜಮೀನು ಇರುತ್ತದಲ್ಲ ಎಂಬ ಭರವಸೆಯೂ ಅವರಲ್ಲಿ ಉಂಟು. ಅಳಿದುಳಿದ ಕಾಡುಂಟು. ಅಲ್ಲಿ ಹೂಳಿದ ಬಳಿಕ ಅಧಿಕಾರಿಗಳ ಕಾಟವೂ ಉಂಟು. ಸತ್ಸಂಪ್ರದಾಯದ ಆಚರಣೆ ಸದ್ಯ ಸಲೀಸಲ್ಲ.
ಇರಲಿ. ಗೋಹತ್ಯೆ ನಿಷೇಧ ಕಾಯ್ದೆಯ ಚರ್ಚೆ ಎಲ್ಲೆಲ್ಲೂ ನಡೆಯುತ್ತಿದೆ. ದನ ಮೇಯಿಸುತ್ತಾ ಹೊಲಗಳಲ್ಲೇ ಕಾಲ ಕಳೆಯುವ ಬಹಳ ಮಂದಿಗೆ ಇದು ಗೊತ್ತಿಲ್ಲ. ದನ ಮೇಯಿಸಲು ಜಮೀನುಗಳ ಹುಡುಕಾಟ ನಡೆಸುವವರಿಗೆ ಅಷ್ಟೋ ಇಷ್ಟೋ ಗೊತ್ತಾಗಿದೆ. ಅವರಲ್ಲಿ ಕೆಲವರು ಸಂಪ್ರದಾಯದ ಚೌಕಟ್ಟಿನಾಚೆಗಿನ ಬದುಕಿನತ್ತ ಆಶಾವಾದದಿಂದ ನೋಡುತ್ತಿರುವವರು. ಮುದಿ ದನಗಳು ಸತ್ತರೆ ಹೂಳಲು ಜಾಗವಿಲ್ಲ. ಕನಿಷ್ಠಪಕ್ಷ ಕಟುಕರಿಗಾದರೂ ಮಾರಿದರೆ ಸ್ವಲ್ಪ ಹಣವಾದರೂ ಬಂದೀತು ಎಂಬ ಆಸೆಯಲ್ಲಿದ್ದಾರೆ. ಕಾಡುಗೊಲ್ಲರನ್ನಷ್ಟೇ ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ನಾವೇನು ತಪ್ಪು ಮಾಡಿದ್ದೇವೆ ಎಂಬ ಹೊಸ ಆಲೋಚನೆಯೂ ಸುಳಿದಿದೆ.
‘ಕಾನೂನು ಏನೇ ಬರಲಿ. ಅದು ದುಡಿಯುವವರ ಪರವಾಗಿರಲಿ’ ಎಂಬ ಹಲುಬು ಅವರಲ್ಲೂ ಶುರುವಾಗಿದೆ. ಆದರೆ, ‘ದುಡಿಯುವವರ ಪರ ಕಾನೂನು ಇದ್ದರೆ ದುಡಿಸಿಕೊಳ್ಳುವವರ ಗತಿ ಏನು’ ಎಂಬ ಪ್ರಶ್ನೆ ಹೊಸ ನೀತಿಗಳನ್ನು ಕಾಡುತ್ತಿರುವಂತೆ ತೋರುತ್ತಿದೆಯಲ್ಲ?!.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.