ADVERTISEMENT

ಬೇಕಿದೆ ಸುಸ್ಥಿರ ಬದುಕಿನ ‘ಯುಗಾದಿ’

ಸಹನಾ ಕಾಂತಬೈಲು
Published 18 ಮಾರ್ಚ್ 2023, 19:30 IST
Last Updated 18 ಮಾರ್ಚ್ 2023, 19:30 IST
ಚಿತ್ರ: ಅಶೋಕ ಉಚ್ಚಂಗಿ
ಚಿತ್ರ: ಅಶೋಕ ಉಚ್ಚಂಗಿ   

ಕಾಲಚಕ್ರ ತಿರುಗಿದೆ. ಯುಗಾದಿ ಹಬ್ಬ ಮತ್ತೆ ಬಂದಿದೆ. ಹಿಂದಿನ ಶುಭಕೃತ್ ಸಂವತ್ಸರವು ಕಳೆದು ಶೋಭನ ಸಂವತ್ಸರ ಕಾಲಿಟ್ಟಿದೆ. ಹೀಗೆ ಹಳತು ಹೋಗಿ ಹೊಸತು ಬರುವುದನ್ನು ನಾವು ಯುಗ ಯುಗಗಳಿಂದ ಕಾಣುತ್ತಲೇ ಇದ್ದೇವೆ. ಶೋಭನ ಎಂದರೆ ಮಂಗಳಕರವಾದುದು. ಹೆಸರಲ್ಲೇ ಮಂಗಳಕರವಿರುವುದು ಹೆಚ್ಚು ಸಮಾಧಾನಕರ.

ಯುಗಾದಿ ಎಲ್ಲ ಹಬ್ಬದ ಹಾಗಲ್ಲ. ಅದು ಪ್ರಕೃತಿಯೊಂದಿಗೆ ನೇರ ಸಂಬಂಧ ಹೊಂದಿರುವಂತದ್ದು. ಯುಗಾದಿ ಬಂದಿದೆಯೆಂದು ನಿಸರ್ಗವೇ ನಮಗೆ ಹೇಳುತ್ತದೆ. ಅದುವರೆಗೂ ಎಲೆಗಳುದುರಿ ಬೋಳಾಗಿದ್ದ ಮರಗಿಡಗಳು ಮ್ಯಾಜಿಕ್ ಮಾಡಿದಂತೆ ಚಿಗುರಿ ಹೂ, ಕಾಯಿ, ಹಣ್ಣು ಹೊತ್ತು ನಿಲ್ಲುತ್ತವೆ. ರೆಂಜೆ, ಸಂಪಿಗೆ, ಮಲ್ಲಿಗೆಗಳು ಅರಳಿ ಘಮಘಮಿಸುತ್ತವೆ. ಹಲಸು, ಮಾವು, ನೇರಳೆ, ಗೇರು ಇನ್ನೂ ಅದೆಷ್ಟೋ ಕಾಡುಹಣ್ಣುಗಳು ಸಿಗುವುದೂ ಈ ಕಾಲದಲ್ಲಿಯೇ. ಬಿರು ಬಿಸಿಲಿದ್ದರೂ ಆಪ್ಯಾಯಮಾನವಾಗಿರುತ್ತದೆ. ಹೀಗೆ ವಸಂತಾಗಮನದ ಹೊತ್ತಿಗೆ ಪ್ರಕೃತಿ ಹೊಸ ಚಿಗುರು, ಹೂವು, ಹಣ್ಣಿನೊಂದಿಗೆ ಸಂಭ್ರಮಿಸುವಂತೆಯೇ ಸುತ್ತಲಿನ ಜೀವರಾಶಿಗಳಿಗೂ ಅದೇನೋ ಹೊಸ ಚೈತನ್ಯ, ಅನಂತ ಉಲ್ಲಾಸ.

ಹಬ್ಬ ಎಂದರೆ ಸಂಭ್ರಮ. ಆದರೆ ಯುಗಾದಿ ಈಗ ಸಂಭ್ರಮದ ಹಬ್ಬವಲ್ಲ. ಇಲ್ಲಿ ಇಂದು ಚೈತ್ರದ ಚಿಗುರು ನಳನಳಿಸುತ್ತಿಲ್ಲ. ಕೋಗಿಲೆಯ ಕುಹು ಕುಹೂ ಅನುರಣಿಸುತ್ತಿಲ್ಲ. ಇಂದಿನ ಮತ್ತು ನಾಳಿನ ಕುರಿತಾದ ನಮ್ಮ ಚಿಂತೆ ನಮ್ಮ ವರ್ತಮಾನದ ಸಂಭ್ರಮವನ್ನು ನಮ್ಮ ಕೈಗೆ ಎಟುಕದಷ್ಟು ದೂರಗೊಳಿಸಿಬಿಟ್ಟಿದೆ. ಪ್ರಕೃತಿಯ ಮೇಲೆ ನಾವು ಎಸಗಿದ ಹಾನಿ ನಮ್ಮ ಮೇಲೆ ಇನ್ನಿಲ್ಲದಂತೆ ಪರಿಣಾಮ ಬೀರಿದೆ. ನಿಸರ್ಗದಲ್ಲಾಗುತ್ತಿರುವ ಮಹತ್ತರ ಬದಲಾವಣೆಗಳು ತಲ್ಲಣ ಹುಟ್ಟಿಸುತ್ತಿವೆ. ಬದುಕಿಡೀ ಬರೀ ಬೇವೇನೋ, ಬೆಲ್ಲದ ಸಿಹಿ ಎಂದು ಬರುವುದೋ ಎಂದು ಕಾಯುವಂತಾಗಿದೆ.

ADVERTISEMENT

ಪ್ರಕೃತಿಯ ಮೇಲೆ ಮನುಷ್ಯ ಮಾಡಿದ ನಿರಂತರ ದಾಳಿಯ ಕಾರಣದಿಂದ ಅದು ಮುನಿಸಿಕೊಂಡಿದೆ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಎಂಬ ಮೂರು ಕಾಲಗಳಲ್ಲಿ ವ್ಯತ್ಯಾಸ ಆಗಿವೆ. ವಿಪರೀತ ಮಳೆ ಅಥವಾ ಮಳೆ ಇಲ್ಲದೆ ಇರುವುದು, ಕೆಲವು ಕಡೆ ಚಳಿಗಾಲ ಇಲ್ಲವೇ ಇಲ್ಲ, ಬದಲಾಗಿ ಬೇಸಿಗೆ ಮತ್ತು ಮಳೆಗಾಲ ಎರಡೇ ಇರುವುದು ಇಲ್ಲವೇ ಒಣಹವೆ ಇರುವುದು ಹೀಗೆ. ಪ್ರಕೃತಿಯ ಪರಿವರ್ತನೆಯೂ ಈಗ ಅನಿರೀಕ್ಷಿತವಾಗಿಯೇ ಇದೆ. ಹೀಗೆಯೇ ಇರುತ್ತದೆ ಹವಾಮಾನ ಎಂದು ಹೇಳಲು ಬರುವುದಿಲ್ಲ.

ಇಡೀ ಜಗತ್ತಿನಲ್ಲಿಯೇ ಹವಾಮಾನ ವೈಪರೀತ್ಯ ಇದೆ ಎಂಬುದು ಯುಗಾದಿಗೆಂದು ಅಮೆರಿಕದಿಂದ ಮನೆಗೆ ಬಂದ ತಂಗಿ ಹೇಳಿದ ಮಾತಿನಲ್ಲಿ ಸ್ಪಷ್ಟ ಗೊತ್ತಾಗುತ್ತದೆ. ಅವಳು ಹೇಳುತ್ತಾಳೆ- ‘ಅಮೆರಿಕದಲ್ಲಿ (ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊ) ಕಳೆದ ನಲುವತ್ತು ವರ್ಷಗಳಲ್ಲಿ ಬರದ ಮಳೆ, ಗಾಳಿ ಈಗ ಬಂದಿದೆ. ಮಳೆಯ ತೀವ್ರತೆ ಎಷ್ಟೆಂದರೆ ಮರಗಳೆಲ್ಲ ಬುಡಸಮೇತ ಬೀಳುತ್ತಿವೆ. ವಾರದ ಹಿಂದೆ ಒಂದು ಬೆಟ್ಟದಲ್ಲಿ ಮರ ಬಿದ್ದು ಅದರ ಅಡಿಗೆ ಒಬ್ಬಳು ಮಹಿಳೆ ಸಿಕ್ಕಿ ಸತ್ತುಹೋದಳು. ಮೊನ್ನೆ ಮಗನ ಶಾಲೆ ಮುಂದೆ ಇರುವ ಬೃಹತ್ ಮರ ಬುಡ ಸಮೇತ ಕಳಚಿ ಮಾರ್ಗಕ್ಕೆ ಬಿತ್ತು. ಪುಣ್ಯಕ್ಕೆ ಆಗ ಪಾಠದ ಸಮಯವಾಗಿತ್ತು. ಮಕ್ಕಳೆಲ್ಲ ಶಾಲೆಯ ಒಳಗಿದ್ದರು. ಹಾಗಾಗಿ ದೊಡ್ಡ ಅನಾಹುತ ಸಂಭವಿಸುವುದು ತಪ್ಪಿತು. ಆದರೆ ಟ್ರಾಫಿಕ್ ಜಾಮ್ ಆಯಿತು. ಕರೆಂಟೇ ಹೋಗದ ನಮ್ಮೂರಲ್ಲಿ ತುಂಬ ಹೊತ್ತು ಕರೆಂಟ್ ಹೋಯಿತು. ಶಾಲೆಗೆ ಒಂದುದಿನ ರಜೆ ಸಾರಿದರು.’ ಪ್ರಕೃತಿಯ ಜೊತೆ ನಾವು ಸಹಬಾಳ್ವೆ ಮಾಡದೆ ಇರುವುದೇ ಇದಕ್ಕೆಲ್ಲ ಕಾರಣ. ನಮಗೂ, ಪ್ರಕೃತಿಗೂ ಸಂಘರ್ಷ ಇದೆ.

ಇಂದು ನಮ್ಮೂರಲ್ಲಿ ಯಾರೂ ಯುಗಾದಿಯನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಇಲ್ಲ. ಈ ಮಳೆಗಾಲದಲ್ಲಿ ನಮ್ಮೂರಲ್ಲಿ ಜಲಸ್ಫೋಟ ಆಯಿತು. ಬೆಟ್ಟ ಜರಿದು ಹೊಳೆ ಮಗುಚಿ ಹರಿಯಿತು. ಸುತ್ತಲಿನ ತೋಟ, ಮರಗಿಡಗಳು ನೀರಿಗೆ ಆಹುತಿಯಾದವು. ಹೀಗಿದ್ದೂ, ಮಾರ್ಚ್ ತಿಂಗಳಿನಿಂದ ಡಿಸೆಂಬರ್ ತನಕ ಬಿಡದೆ ಮಳೆ ಸುರಿದರೂ ಈಗಲೇ ಹೊಳೆ ಬತ್ತಿದೆ; ಕ್ರಿಕೆಟ್ ಆಟದ ಮೈದಾನದಂತೆ ಕಾಣಿಸುತ್ತಿದೆ. ಈ ಹಿಂದಿನವರೆಗೂ ನದಿ ಬತ್ತಿದ್ದೆಂದೇ ಇಲ್ಲ; ಮಳೆಗಾಲದಲ್ಲಿ ತುಂಬಿ ಹರಿದರೆ ಬೇಸಿಗೆಯಲ್ಲಿ ಸಣ್ಣಗೆ ಹರಿಯುತ್ತಿತ್ತು. ಬೋರ್‌ವೆಲ್ ಇಲ್ಲದೆ ನಮ್ಮ ಕೃಷಿ ನಡೆಯುತ್ತಿತ್ತು. ಬೇಸಿಗೆಯಲ್ಲಿ ಹೊಳೆಗೆ ಒಡ್ಡು ಕಟ್ಟಿದರೆ ಆ ನೀರು ಕಣಿಯಲ್ಲಿ ಹರಿದು ನಮ್ಮ ತೋಟಕ್ಕೆ ಬರುತ್ತಿತ್ತು. ಅದನ್ನು ಗಿಡಗಳಿಗೆ ಹಾಯಿಸುತ್ತಿದ್ದೆವು. ಅದು ನಮ್ಮ 20 ಎಕರೆ ಕೃಷಿಭೂಮಿಗೆ ಸಾಕಾಗುತ್ತಿತ್ತು.

ಬೇಸಿಗೆಯಲ್ಲಿ ಮನೆಗೆ ಬಂದವರೆಲ್ಲರಿಗೂ ಹೊಳೆ ಒಂದು ಆಕರ್ಷಕ ತಾಣ ಆಗಿತ್ತು. ಅದರಲ್ಲಿ ಈಜುತ್ತಿದ್ದರು. ಸ್ನಾನ ಮಾಡುತ್ತಿದ್ದರು. ‘ಕಾಂತಬೈಲು ಅಂದರೆ ನೀರಿನ ಗಣಿ. ಸಮೃದ್ಧ ಕಾಡು ಇರುವ ಪರಿಸರದ ನಿಮ್ಮೂರಲ್ಲಿ ಈಗ ನೀರು ಇಲ್ಲ ಎಂದರೆ ನಂಬಲು ಆಗುತ್ತಿಲ್ಲ’ ಎಂದು ನಮ್ಮ ಬಂಧುಗಳೊಬ್ಬರು ಈಚೆಗೆ ಹೇಳಿದ್ದರು. ಮೊನ್ನೆ ಮೊನ್ನೆಯವರೆಗೂ ನಾನು ‘ನಮ್ಮದು ಬೋರ್‌ವೆಲ್ ಮುಕ್ತ ಊರು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆ. ಈ ಕುರಿತು ಅಂಕಿಅಂಶಗಳ ಸಹಿತ ಒಂದು ಲೇಖನವನ್ನೂ ಬರೆದು ಪ್ರಜಾವಾಣಿಗೆ ಕಳಿಸಬೇಕೆಂದು ಇದ್ದೆ. ಆದರೆ, ಈಗ ಬೋರ್‌ವೆಲ್ ಹಾಕದೆ ಇದ್ದರೆ ನಮ್ಮ ಕೃಷಿ ಉಳಿಯುವುದು ಕಷ್ಟ.

ನೀರಿಲ್ಲದೆ ನಮ್ಮ ತೋಟದ ತೆಂಗಿನಮರಗಳು ಗೊನೆಗಳ ಸಮೇತ ಬಾಡಿ ಹೀಚು ಕಾಯಿಗಳು ಉದುರುತ್ತಿವೆ. ಅಂಗಳದ ಬೇವಿನ ಚಿಗುರು
ಬಾಡಿದೆ. ನೆಲ ಬಿರಿದಿದೆ. ಜಲ ಸಮೃದ್ಧಿ ಇರುವ ಊರಲ್ಲಿ ಜಲಕ್ಷಾಮ ಬಂದಿದೆ. ‘ಬೋರ್‌ವೆಲ್ ಇಲ್ಲದ ತೋಟ ನನ್ನದು’ ಎನ್ನುವ ನನ್ನ ಹೆಮ್ಮೆಯ ಕಿರೀಟ ಕಳಚಿ ಬೀಳಲು ಹೆಚ್ಚು ಸಮಯವಿಲ್ಲ. ಬಿಸಿಲಲ್ಲೇ ಬರುವ ಹಬ್ಬ ಯುಗಾದಿಯಾದರೂ
ಈ ಹೊತ್ತು ಭೂಮಿಯೇ ಹೊತ್ತಿ ಉರಿಯುವ ಬಿಸಿಲು.

ಸಮೀಪದ ಕಾಡಿಗೆ ಬಿದ್ದ ಬೆಂಕಿ ವಾರವಾದರೂ ನಂದಿಸಲು ಆಗದೆ ಉರಿಯುತ್ತಲೇ ಇದೆ. ಒಂದು ಕಡೆಯಲ್ಲಿ ನಂದಿಸಿದರೆ ಇನ್ನೊಂದು ಕಡೆಯಿಂದ ಹೊತ್ತಿಕೊಳ್ಳುತ್ತದೆ.

ಮನುಷ್ಯ ಜೀವಿಗೆ ಮಾತ್ರ ತಾನು ಭೂಮಿಯನ್ನು ಉಪಯೋಗಿಸಿ ಅಭಿವೃದ್ಧಿಯ ಹೆಸರಿನಲ್ಲಿ ಉದ್ಧಾರ ಮಾಡುವ ಹುಚ್ಚು. ಈ ಕಾರಣದಿಂದ ಎಷ್ಟೋ ಕಾಲ ತಯಾರಾಗಲು ಬೇಕಾಗುವ ಭೂಮಿಯ ಮೇಲ್ಪದರದ ಮಣ್ಣು ಮತ್ತು ಅದನ್ನು ತಮ್ಮ ಬೇರಿನಿಂದ ತಾಯಿಯನ್ನು ರಕ್ಷಿಸುವ ಮಕ್ಕಳಂಥ ಮರಗಳನ್ನು ಹೆದ್ದಾರಿಗಾಗಿ ಕಡಿಯುವ ಹೆದ್ದಾರಿಯ ಯೋಜನೆಗಳೂ ಭಯಾನಕ. ಅಷ್ಟು ಅಗಲ ರಸ್ತೆ ನಮಗೆ ಬೇಕಾ? ಮನುಷ್ಯ ತನ್ನ ಜತೆ ಪ್ರಾಣಿಪಕ್ಷಿಗಳೂ ಬದುಕದಂತೆ ಮಾಡುತ್ತಿದ್ದಾನೆ. ಇಡೀ ಪ್ರಕೃತಿಯ ಒಡೆಯ ನಾನು ಎಂಬ ಹುಂಬತನ ಅವನಿಗೆ.

ನಾವೆಲ್ಲಾ ಪ್ರಕೃತಿಯ ಮಕ್ಕಳು. ಈ ಮಕ್ಕಳಲ್ಲಿ ಮನುಷ್ಯನಷ್ಟು ಕ್ರೂರ ಯಾರೂ ಇಲ್ಲ. ಇನ್ನೊಂದು ಪ್ರಾಣಿಯನ್ನು ಕೊಂದು ತಿನ್ನುವಷ್ಟು ತಾನು ದೊಡ್ಡವ ಎಂದು ಅವನು ಎಣಿಸಿದ್ದಾನೆ. ಆ ಪ್ರಾಣಿ ಮತ್ತು ತಾನು ಒಂದೇ ಎಂದು ಅವನಿಗೆ ಗೊತ್ತಿಲ್ಲ. ಪ್ರಕೃತಿಗೆ ಮಕ್ಕಳಲ್ಲಿ ಭಿನ್ನಭೇದ ಇಲ್ಲ. ಪ್ರಕೃತಿಯಲ್ಲಿ ಕೆಲವು ನಿಯಮಗಳಿವೆ. ಒಂದು ಹುಲಿ ಒಂದು ಜಿಂಕೆಯನ್ನು ಕೊಂದು ತಿಂದರೆ, ಹೊಟ್ಟೆ ತುಂಬಿದ ಹುಲಿ ಮತ್ತೆ ಜಿಂಕೆ ಎದುರಿನಿಂದ ಹಾದು ಹೋದರೂ ಏನೂ ಮಾಡುವುದಿಲ್ಲ. ಮನುಷ್ಯ ಹಾಗಲ್ಲ. ತಿಂದ ಮೇಲೆ ಅವನಿಗೆ ಮತ್ತೂ ತಿನ್ನಬೇಕು ಎಂದು ಅನಿಸುತ್ತದೆ.

ಮನುಷ್ಯ ಪ್ರಾಣಿಗಳ ಮಟ್ಟಕ್ಕೆ ಏರಬೇಕು ಎಂದು ಖ್ಯಾತ ಚಿಂತಕ ಬನ್ನಂಜೆ ಗೋವಿಂದಾಚಾರ್ಯರು ಹೇಳುತ್ತಿದ್ದರು. ಮನುಷ್ಯ ವಿಚಿತ್ರ ಇದ್ದಾನೆ. ಅವನು ಪ್ರಕೃತಿಯನ್ನು ವಿರೋಧಿಸುತ್ತಾನೆ. ಪ್ರಕೃತಿಯನ್ನು ನಾಶ ಮಾಡಿ ತನ್ನ ಅಭಿವೃದ್ಧಿಯನ್ನು ಸಾಧಿಸುತ್ತೇನೆ ಅಂದುಕೊಂಡಿದ್ದಾನೆ. ಅದು ಸಾಧ್ಯ ಇಲ್ಲ. ಪ್ರಕೃತಿಯ ಮೇಲೆ ಸಮರ ಸಾರುವುದರಿಂದ ನಾಶವಾಗುವುದು ಪ್ರಕೃತಿಯಲ್ಲ, ಕೊನೆಗೆ ಮನುಷ್ಯನೇ.

ಹಿಂದೆ ಕೃಷಿ ಎಂದರೆ ನಾಟಿ ಮಾಡುವುದು, ಪಾಡ್ದನ ಹೇಳುವುದು ಎಲ್ಲವೂ ಒಂದು ಸಂಗೀತಮಯವಾಗಿತ್ತು; ಪರಿಸರ ಪ್ರೇಮವಾಗಿತ್ತು. ಆ ಕಾಲದಲ್ಲಿ ಉಪಯೋಗಿಸುತ್ತಿದ್ದ ಎಲ್ಲ ವಸ್ತುಗಳೂ ಪರಿಸರಕ್ಕೆ ಪೂರಕವಾಗಿದ್ದವು. ಮಡಕೆಯಾಗಲೀ, ಗುಡಿಸಲಾಗಲೀ, ಮಣ್ಣಿನ ನೆಲವಾಗಲೀ ಎಲ್ಲವೂ ಕೂಡ ಪರಿಸರಸ್ನೇಹಿಯಾಗಿದ್ದವು. ಆದರೆ, ಇಂದೇನಾಗಿದೆ? ಭೂಮಿಯನ್ನು ಏಳು ಸಲ ನಾಶ ಮಾಡುವಷ್ಟು ಕ್ಷಿಪಣಿಗಳನ್ನು, ಬಾಂಬ್‍ಗಳನ್ನು ತಯಾರು ಮಾಡಿ ಇಟ್ಟುಕೊಂಡಿದ್ದಾರೆ ಎಲ್ಲಾ ದೇಶದವರು. ಹಾಗಾದರೆ ದೇಶ, ದೇಶದ ನಡುವೆ ಪ್ರೇಮ ಅಂದರೆ ಅರ್ಥ ಎಂತದು? ಇನ್ನೊಂದು ದೇಶವನ್ನು ಕ್ಷಿಪಣಿಯಲ್ಲಿ ಕೊಲ್ಲುವುದಾ? ಇದು ಹೀಗೆಯೇ ಮುಂದುವರಿದರೆ ಜಗತ್ತಿನ ಗತಿ ಏನು?

ನಮ್ಮ ಬದುಕು, ನಮ್ಮ ಸುತ್ತಲಿನ ಪರಿಸರ, ನಮ್ಮ ಭೂಮಿಯ ಸ್ವರೂಪವನ್ನೇ ಮನುಷ್ಯ ತೀವ್ರಗತಿಯಲ್ಲಿ ಬದಲಿಸುತ್ತಿದ್ದಾನೆ. ಇತ್ತೀಚಿನ ವರ್ಷಗಳಲ್ಲಂತೂ ಬದಲಾವಣೆ ಮಿಂಚಿನ ಗತಿ ಪಡೆಯುತ್ತಿದೆ. ಇವೆಲ್ಲ ನಮ್ಮನ್ನು ಎತ್ತ ಕೊಂಡೊಯ್ಯಬಲ್ಲುವು? ಗೊತ್ತಿಲ್ಲ. ಇವೆಲ್ಲ ಸುಖ, ಸಂತೋಷ, ಸಮೃದ್ಧಿ ತರುವುದಾದಲ್ಲಿ ಅಡ್ಡಿಯಿಲ್ಲ. ಆದರೆ ಅದು ಕೆಲವರ ಸಂತೋಷ ಮಾತ್ರ ಆಗಬಾರದು. ಸಮಸ್ತ ಮನುಕುಲಕ್ಕೆ ಒಳಿತು ತರಬೇಕಾಗಿರುವುದು ಅಗತ್ಯ. ಜತೆಗೇ ಈ ತಂತ್ರಜ್ಞಾನದ ಪ್ರಗತಿಯ ಹಾದಿಯಲ್ಲಿ, ನಾಗಾಲೋಟದಿಂದ ಓಡುವ ಭರದಲ್ಲಿ ಇಷ್ಟು ವರ್ಷಗಳ ಕಾಲ ನಮ್ಮ ಬದುಕನ್ನು ಬೆಸೆದ ಜೀವನ ಮೌಲ್ಯಗಳನ್ನು ಎಸೆಯದಂತೆ ಎಚ್ಚರವಹಿಸಬೇಕಾಗಿದೆ. ಇದೇ ಯುಗಾದಿಯ ‘ಬೇವುಬೆಲ್ಲ’.

ಯುಗಾದಿ ಹಸಿರಿನ ಉಸಿರಿನ ಬನಸಿರಿಯ ಹಬ್ಬವಾಗಲಿ. ಎಲ್ಲೆಡೆಯೂ ಶಾಂತಿ, ಸೌಹಾರ್ದ ನೆಲಸಲಿ. ಸುಸ್ಥಿರ ಬದುಕು ನಮ್ಮದಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.