ADVERTISEMENT

ಯು.ಆರ್.ಅನಂತಮೂರ್ತಿ ಅವರ ಕಾದಂಬರಿ 'ಅವಸ್ಥೆ'ಯನ್ನು ನೆನೆದು...

ಆರ್.ತಾರಿಣಿ ಶುಭದಾಯಿನಿ
Published 30 ನವೆಂಬರ್ 2020, 6:16 IST
Last Updated 30 ನವೆಂಬರ್ 2020, 6:16 IST
ಯು. ಆರ್‌. ಅನಂತಮೂರ್ತಿ
ಯು. ಆರ್‌. ಅನಂತಮೂರ್ತಿ   
""

‘ಅವಸ್ಥೆ’ ಕಾದಂಬರಿ ಸ್ವಾತಂತ್ರ್ಯೋತ್ತರ ಕಾಲದ ಹಿಂಸೆಯ ಜಿಜ್ಞಾಸೆಯನ್ನು ಒಳಗೊಂಡ ಕಥನ. ನಾಲ್ಕು ದಶಕಗಳ ನಂತರ ಇಂಗ್ಲಿಷ್‌ಗೆ ಮತ್ತೆ ಅನುವಾದ ಆದ ಕಾರಣಕ್ಕೆ ಅದೀಗ ಪುನಃ ಸುದ್ದಿಯಲ್ಲಿದೆ...

ಅನಂತಮೂರ್ತಿಯವರ ಕಾದಂಬರಿ ‘ಅವಸ್ಥೆ’ ಬಂದಿದ್ದು 1978ರಲ್ಲಿ. ‘ಸಂಸ್ಕಾರ’ (1965) ಬಂದು ಹದಿಮೂರು ವರ್ಷಗಳ ನಂತರ ಬಂದ ಈ ಕೃತಿ, ರಾಜಕೀಯ ಕಾದಂಬರಿ ಎಂದೂ ಶಾಂತವೇರಿ ಗೋಪಾಲಗೌಡರ ಬಯೊಪಿಕ್ ಎಂದೂ ಓದಲ್ಪಟ್ಟಿತು. ದುರಂತ ಎಂದರೆ ಬಯೊಪಿಕ್ ಕಾದಂಬರಿಗಳಲ್ಲಿ ಫಿಕ್ಷನ್ ಅನ್ನು ದೂರೀಕರಿಸಿ ಪಾತ್ರ ಮತ್ತು ವ್ಯಕ್ತಿತ್ವವನ್ನು ಒಂದಕ್ಕೊಂದು ಸಮೀಕರಣ ಮಾಡಿಕೊಳ್ಳುವುದರಿಂದ ವ್ಯಕ್ತಿಯ ಇಮೇಜ್ ಎಲ್ಲಿ ಹಾಳಾಗಿದೆ, ಎಲ್ಲಿ ವೈಭವೀಕರಿಸಲ್ಪಟ್ಟಿದೆ ಎನ್ನುವ ಕಡೆ ಹೆಚ್ಚಿನ ಗಮನ ಬೀಳುತ್ತದೆ. ಇದೇ ರೀತಿ ‘ಅವಸ್ಥೆ’ ಕಾದಂಬರಿಯೊಂದಿಗೆ ಗೋಪಾಲಗೌಡರ ಜೀವನಗಾಥೆಯನ್ನು ಸಮೀಕರಣ ಮಾಡಿದ ಕಾರಣ, ಒಂದು ಕಾದಂಬರಿ ಎತ್ತಬಹುದಾದ ಅನೇಕ ನೈತಿಕ ಪ್ರಶ್ನೆಗಳು ಹಿನ್ನೆಲೆಗೆ ಸರಿಯುವಂತಾಯಿತು. ಅನಂತಮೂರ್ತಿಯವರೇ ಈ ಬಗ್ಗೆ ಟಿಪ್ಪಣಿ ಬರೆದು ‘ನಾನು ಬರೆದಿದ್ದು ಹಾಗಲ್ಲ’ ಎಂಬ ವಿವರಣೆ ನೀಡಬೇಕಾಯಿತು. ಹೀಗೆ ಈ ಕಾದಂಬರಿ ಅನುಭವಿಸಿದ ಅವಸ್ಥೆಯಿಂದಾಗಿ ಅದಕ್ಕೆ ಸಿಗಬೇಕಾದ ಚರ್ಚೆ, ಸಮ್ಮಾನಗಳು ಅಷ್ಟಾಗಿ ಸಿಗಲಿಲ್ಲವೆನ್ನಬೇಕು. ಈಗ ಈ ಕಾದಂಬರಿ ಮತ್ತೆ ಇಂಗ್ಲಿಷಿಗೆ ಅನುವಾದವಾಗುವುದರ ಮೂಲಕ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾದಂಬರಿಯ ಮೇಲೆ ಒಂದು ಟಿಪ್ಪಣಿ.

‘ಅವಸ್ಥೆ’ ಕಾದಂಬರಿ ಸ್ವಾತಂತ್ರ್ಯೋತ್ತರ ಕಾಲದ ಹಿಂಸೆಯ ಜಿಜ್ಞಾಸೆಯನ್ನು ಒಳಗೊಂಡ ಕಥನ. ಗಾಂಧಿ ಅವಲೋಕಿಸಿದ ವಸಾಹತು ರಾಜಕಾರಣದ ಹಿಂಸೆಯ ಮೂಲ ಬಂಡವಾಳಶಾಹಿಯದಾಗಿತ್ತು. ವಸಾಹತು ರಾಜಕಾರಣವು ಅನುಷ್ಠಾನಕ್ಕೆ ತಂದ ರಾಜಕೀಯ, ಸಾಮಾಜಿಕ ಸಂಸ್ಥೆಗಳು ಆಳದಲ್ಲಿ ಅನೈತಿಕವಾಗಿದ್ದವು. ದೇಹ ಮತ್ತು ಆತ್ಮಗಳನ್ನು ದಮನಿಸುವಂತದ್ದಾಗಿದ್ದವು. ಗಾಂಧಿ ಇದನ್ನು ಕಂಡುಕೊಂಡು ಭೌತಿಕ ಮತ್ತು ಆತ್ಮಿಕ ಹಿಂಸೆಗಳ ಸ್ವರೂಪವನ್ನು ಭೇದಿಸಲು ಅಹಿಂಸೆಯನ್ನು ಕಂಡುಕೊಂಡರು.ಸ್ವಾತಂತ್ರ್ಯೋತ್ತರ ಕಾಲದಲ್ಲಿ ವಸಾಹತು ಕಾಲದ ಪಳೆಯುಳಿಕೆಗಳಾಗಿ ಬಂದ ಬಂಡವಾಳಶಾಹಿ ವ್ಯವಸ್ಥೆ ಮತ್ತು ‘ರಾಜ್’ನ ಹಿಂಸಾತ್ಮಕ ಸಂಸ್ಥೆಗಳ ಹಿಂಸೆಯ ವಿರಾಟ್ ರೂಪವು ರಾಜಕಾರಣದ ಬಗೆಗೆ ಒಂದು ಬಗೆಯ ನಿರಾಶೆಯನ್ನು ಹುಟ್ಟುಹಾಕಿತು. ಭ್ರಷ್ಟಾಚಾರ, ಸ್ವಜನಪಕ್ಷಪಾತಗಳ ಆತ್ಮರತಿಗಳನ್ನು ಉದ್ದೀಪಿಸುವ ರಾಜಕಾರಣ ಮುನ್ನೆಲೆಗೆ ಬಂದಿತು.

ADVERTISEMENT

ಈ ಸಂಕ್ರಮಣ ರಾಜಕಾರಣದ ಕಾಲದಲ್ಲಿ ನಿಂತ ‘ಅವಸ್ಥೆ’ ಕಾದಂಬರಿಯ ನಾಯಕ ಕೃಷ್ಣಪ್ಪ ಗೌಡ ಹೊರಗಿನ ಹಿಂಸೆಯನ್ನು ಕಾಣುತ್ತಾ ತನ್ನೊಳಗೆ ಇರುವ ಹಿಂಸಾಮೂಲಗಳನ್ನು ಧ್ಯಾನಿಸುತ್ತಾನೆ. ಹಿಂಸೆಯೆನ್ನುವುದು ತನ್ನೊಳಗೂ ಇದೆ ಎನ್ನುವುದನ್ನು ಆತ್ಮನಿರೀಕ್ಷಣೆ ಮಾಡಿಕೊಳ್ಳುವ ಕೃಷ್ಣಪ್ಪ ಗೌಡನಿಗೆ ರಾಜಕೀಯವೆನ್ನುವುದು ಮತ್ತೊಮ್ಮೆ ಗಾಂಧಿ ಭಾವಿಸಿದಂತೆ ಒಳಗು ಹೊರಗುಗಳೆರಡನ್ನೂ ಬೆಸೆಯುವ ಆಧ್ಯಾತ್ಮಿಕ ಪಯಣ ಎನ್ನುವುದನ್ನು ಕಂಡುಕೊಳ್ಳುವಂತಿದೆ. ಕೃಷ್ಣಪ್ಪ ಗೌಡ, ಅಣ್ಣಾಜಿಯಂತಹವರ ಮೂಲಕ ಕಂಡುಕೊಂಡ ಕಮ್ಯುನಿಸ್ಟ್ ರಾಜಕಾರಣವು ಒಂದೆಡೆ ಐಡಿಯಾಲಜಿಯಲ್ಲಿ ಸುಖಿಸಿ, ಹಿಂಸಾತ್ಮಕವಾದ ವ್ಯವಸ್ಥೆಯನ್ನು ಪರ್ಯಾಯವಾಗಿ ನಿರೂಪಿಸುತ್ತಿದ್ದರೆ ಸಾಂಸ್ಥಿಕ ರಾಜಕಾರಣವು ವ್ಯವಸ್ಥೆಯ ಲಾಭಕ್ಕಾಗಿ ಮೀಸಲಾದಂತಿದೆ. ಕೃಷ್ಣಪ್ಪ ಗೌಡನಿಗೆ ಈ ಎರಡೂ ಬಗೆಯ ರಾಜಕಾರಣಗಳು ಭ್ರಮನಿರಸನವನ್ನು ಉಂಟು ಮಾಡುವಂತಿವೆ.

ವಾರಂಗಲ್‌ನಲ್ಲಿ ಸ್ವತಃ ಕಂಡ ಪೊಲೀಸ್ ವ್ಯವಸ್ಥೆಯು ಹಿಂಸೆಯ ಪರಮಾವಧಿ. ಇದಕ್ಕೆ ಸೇರಿಕೊಂಡಂತೆ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ, ಮಗುವಿನ ಆಹಾರವಾಗಿ ಒಲೆಯ ಮೇಲೆ ಕುದಿಯುತ್ತಿದ್ದ ಹಾಲನ್ನು ಹೊರಗೆ ಚೆಲ್ಲಿಸಿ ಗೇಣಿ ಕೇಳುವ ಧೋರಣೆ ಮುಂತಾದವುಗಳು ದೇಹ ಹಿಂಸೆಯ ಮೂಲಕ ಆತ್ಮಹಿಂಸೆಯನ್ನು ಮಾಡುವಂಥವು. ಕೃಷ್ಣಪ್ಪ ಗೌಡನು ನೈತಿಕವಾದ ಪ್ರಶ್ನೆಗಳನ್ನಿಟ್ಟು
ಕೊಂಡು ಹೊರಟಾಗ ಎದುರಾಗುವ ಸರ್ಕಾರಿ ಪೋಷಿತ ಹಿಂಸೆಗಳು, ಗಂಡಸಿನ ಅಹಮಿಕೆಯಿಂದ, ಹಣದ ಅಹಂಕಾರದಿಂದ ನಡೆಯುವ ಅತ್ಯಾಚಾರಗಳು ಮತ್ತು ನುಣುಪಾಗಿ ಕೊಲ್ಲುವ ಅವಕಾಶವಾದಿ ರಾಜಕಾರಣದ ಹಿಂಸೆಗಳು ಬೇರೆ ಬೇರೆ ಹಂತಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇವುಗಳ ಮೂಲಚೂಲವನ್ನು ಅರಿಯುವುದಕ್ಕೆ ಕಾದಂಬರಿ ಮೂರು ಭಾಗಗಳಲ್ಲಿ ಹರಡಿಕೊಂಡಿದೆ.

ಕೃಷ್ಣಪ್ಪ ಗೌಡನ ಬಾಲ್ಯ ಮತ್ತು ಬದುಕು ಕಟ್ಟಿಕೊಂಡದ್ದರಿಂದ ಅವನೊಬ್ಬ ರಾಜಕೀಯ ನೇತಾರನಾಗಿ ಬೆಳೆಯುವವರೆಗೆ ಕಥೆ ಬೆಳೆಯುತ್ತದೆ. ಅವನ ವ್ಯಕ್ತಿತ್ವ ಕಟ್ಟಿಕೊಟ್ಟವರು ಅವನಿಗೆ ಅನೇಕ ತತ್ವಗಳನ್ನು ಕಲಿಸುತ್ತಾರೆ ಅಥವಾ ಕೃಷ್ಣಪ್ಪ ಕಲಿಯುತ್ತಾನೆ. ಮಹೇಶ್ವರಯ್ಯ ಅವನಿಗೆ ಅಧ್ಯಾತ್ಮದ ಮಾರ್ಗೋಪಾಯಗಳನ್ನು ಕಲಿಸುತ್ತಾರೆ; ಅವನ ಬದುಕಿಗೊಂದು ದಾರಿ ಮಾಡಿಕೊಡುತ್ತಾರೆ. ಅವರ ಆಧ್ಯಾತ್ಮಿಕ ಮಾರ್ಗಗಳನ್ನು ಅಷ್ಟಾಗಿ ಒರೆಗೆ ಹಚ್ಚದ ಕೃಷ್ಣಪ್ಪ ಗುಡ್ಡದಲ್ಲಿದ್ದ ಮೌನಿ ಬೈರಾಗಿಯ ಬದುಕಿನ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಚಡಪಡಿಸುತ್ತಾನೆ. ಅಣ್ಣಾಜಿಯ ಕಮ್ಯುನಿಸ್ಟ್ ತತ್ವದ ಉಪದೇಶಗಳು ಅವನಿಗೆ ಹಿಡಿಸದಿದ್ದರೂ ಅವುಗಳ ಹಿಂದಿನ ಆಂತರ್ಯವನ್ನು ಅರಿಯಲು ಇಚ್ಛಿಸುತ್ತಾನೆ. ಕೊನೆಗೆ ಹೆಣ್ಣು ಎಂದರೆ ಆಗದ ಅವನು ತನ್ನ ಜೀವನದಲ್ಲಿ ಬಂದ ಗೌರಿ, ಲೂಸಿಯಾರಿಂದ ತನ್ನ ವ್ಯಕ್ತಿತ್ವ ಸಾಕಷ್ಟು ಮಾಗಿದ್ದನ್ನು ನೋಡುತ್ತಾನೆ.

ಐಡಿಯಾಲಜಿ, ಕಾಮ, ಆಧ್ಯಾತ್ಮಿಕ ಹಸಿವುಗಳು ಎಲ್ಲೋ ಒಂದೆಡೆ ಸೇರುವ ಬಿಂದುಗಳು ಎನ್ನುವುದನ್ನು ಅರ್ಥ ಮಾಡಿಕೊಂಡಾಗ ತನ್ನ ಸೋಲಿನ, ಕಾಯಿಲೆಯ ಮೂಲಗಳನ್ನು ಅವಲೋಕಿಸಲು ಸಾಧ್ಯವಾಗುತ್ತದೆ. ದೈನಿಕ ವಿವರಗಳನ್ನು ಹೊರಗಿಟ್ಟು ತಾನು ದೊಡ್ಡವನಾಗುವುದು ಸಾಧ್ಯವೇ ಇಲ್ಲ ಎನ್ನಿಸುತ್ತದೆ. ಈ ಪಾಠವನ್ನು ಹೇಳಿಕೊಟ್ಟವರು ಅಣ್ಣಾಜಿಯಂತಹ ವ್ಯಕ್ತಿಗಳೇ. ಗಾಂಧಿ ಸಹ ಚರಕ ಹಿಡಿದು ನೂಲುತ್ತಿದ್ದುದು, ಆಶ್ರಮದ ಕೆಲಸಗಳನ್ನು ಮಾಡುತ್ತಿದ್ದುದು ದೈನಿಕದ ಕ್ರಿಯಾಶೀಲತೆಯನ್ನು ಪಡೆದುಕೊಳ್ಳುವುದಕ್ಕಾಗಿಯೇ. ಇದನ್ನು ಅರಿತಾಗ ಕೃಷ್ಣಪ್ಪ ಗೇಣಿದಾರರ ಪರವಾಗಿ ನಿಂತು ಹೋರಾಟ ಮಾಡಲು ಸಾಧ್ಯವಾಗುತ್ತದೆ; ರಾಜಕಾರಣ ಮಾಡಲು ಸಾಧ್ಯವಾಗುತ್ತದೆ. ವ್ಯಕ್ತಿತ್ವ ವಿಕಸನದ ಕ್ರಿಯಾಶೀಲ ಪಾಠಗಳು ಕೃಷ್ಣಪ್ಪನ ಅಸ್ತಿತ್ವವನ್ನು ರೂಪಿಸುತ್ತವೆ.

ಕೃಷ್ಣಪ್ಪಗೌಡ ತನ್ನ ವ್ಯಕ್ತಿತ್ವವನ್ನೇನೊ ಹುರಿಗೊಳಿಸಿಕೊಳ್ಳುತ್ತಾನೆ. ಆದರೆ ವ್ಯವಸ್ಥೆಯನ್ನು ಬದಲಾಯಿಸಲಾಗದ್ದಕ್ಕೆ ಒಳಗೇ ನೋಯುತ್ತಾನೆ. ಕಮ್ಯುನಿಸಂ, ಉದಾರವಾದಿ ರಾಜಕಾರಣ ಮತ್ತು ಪಕ್ಷ ಸಂಘಟನೆಗಳ ಸಾಂಸ್ಥಿಕ ರಾಜಕಾರಣಗಳ ಮಧ್ಯೆ ತನ್ನ ಅಸ್ತಿತ್ವ ಎಲ್ಲಿ ಎಂಬ ಗೊಂದಲದಲ್ಲಿ ನಿಲ್ಲುತ್ತಾನೆ. ಕೊನೆಗೂ ಕೃಷ್ಣಪ್ಪನ ಅಸ್ತಿತ್ವ ವ್ಯಷ್ಟಿ ಮತ್ತು ಸಮಷ್ಟಿಗಳ ನಡುವೆ ಇರುವ ಕಂದರಗಳನ್ನು ಬೆಸೆಯಲಾರದೆ ಸೋಲನ್ನು ಒಪ್ಪಿಕೊಳ್ಳುವಂತೆ ತೋರುತ್ತದೆ. ಸಿಟ್ಟು, ಗರ್ವಗಳನ್ನು ನೈತಿಕ ಶಕ್ತಿಯ ಕೆಂಡಗಳಂತೆ ಮೊದಲಿನಿಂದ ಕಾಪಾಡಿಕೊಳ್ಳುತ್ತಾ ಬಂದ ಅವನಿಗೆ ಅವು ಆರಿಹೋಗಿರುವುದು ತಿಳಿಯುತ್ತದೆ. ತನ್ನ ಇರುವಿಕೆಯಿಂದ ಆಗುವಿಕೆಯನ್ನು ನಿರೀಕ್ಷಿಸುತ್ತಿದ್ದ ಕೃಷ್ಣಪ್ಪ ಗೌಡ ಅದು ಸಾಧ್ಯವಾಗದೇ ಹೋದ ಭಾವನೆ ತಳೆಯುತ್ತಾನೆ. ಇದು ಕೃಷ್ಣಪ್ಪನ ಅಸ್ತಿತ್ವದ ಅವಸ್ಥೆ ಮಾತ್ರವಲ್ಲ, ಒಂದು ಸಮಾಜದ ಅವಸ್ಥೆಯೂ ಆಗಿದೆ.

ಹೀಗೆ ಸ್ವಾತಂತ್ರ್ಯೋತ್ತರ ಕಾಲದ ತಲ್ಲಣ, ಭ್ರಮನಿರಸನಗಳನ್ನು ಅಡಿಗರ ಪದ್ಯಗಳು ನಿವೇದಿಸುತ್ತಿದ್ದವು. ಅನಂತಮೂರ್ತಿ ಅದನ್ನು ಗದ್ಯದಲ್ಲಿ ಮಾಡಿದ್ದಾರೆ. ಗಾಂಧಿ ನಂತರದ ರಾಜಕಾರಣವನ್ನು ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಪುನರ್ ಪರಿಶೀಲಿಸಿಕೊಳ್ಳುವ ಕಾದಂಬರಿಯಾಗಿ ‘ಅವಸ್ಥೆ’ ಸಮಾಜವಾದಿಯೊಬ್ಬನನ್ನು ಕೇಂದ್ರವಾಗಿರಿಸಿಕೊಂಡು ಕಥೆ ಹೇಳುತ್ತದೆ. ಅವಕಾಶವಾದಿ ರಾಜಕಾರಣದ ವರ್ತಮಾನದಲ್ಲಿ ಈಗ ಮತ್ತೊಮ್ಮೆ ಓದಬೇಕಾದ ಕಾದಂಬರಿಯಾಗಿ ನಿಲ್ಲುತ್ತದೆ.

ಅನಂತಮೂರ್ತಿಯವರ ಕಾದಂಬರಿ ‘ಅವಸ್ಥೆ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.