ಮತ್ತೊಂದು ‘ಪ್ರೇಮಿಗಳ ದಿನ’ ಬಂದಿದೆ. ಗುಲಾಬಿಗಳ ಬಿಕರಿಯೂ ಜೋರಾಗಿಯೇ ನಡೆಯುತ್ತಿದೆ. ‘ಒಂದು ಹೆಣ್ಣಿಗೊಂದು ಗಂಡು ಹೇಗೊ ಸೇರಿ ಹೊಂದಿಕೊಂಡು, ಕಾಣದೊಂದ ಕನಸ ಕಂಡು, ಮಾತಿಗೊಲಿಯದಮೃತವುಂಡು, ದುಃಖ ಹಗರುವೆನುತಿರೆ ಪ್ರೇಮವೆನಲು ಹಾಸ್ಯವೇ’ ಎಂದು ದಾಂಪತ್ಯ ಕವಿ ಕೆಎಸ್‌ನ ಬಲು ಹಿಂದೆಯೇ ಹಾಡಿದ್ದಾರಲ್ಲವೇ? ಅಂತಹ ಪ್ರೇಮಕ್ಕೆ ದೇಶ, ಭಾಷೆ ಗಡಿಗಳ ಹಂಗಿಲ್ಲ ಎನ್ನುತ್ತವೆ ಇಲ್ಲಿನ ಎರಡು ಪ್ರೇಮ ಬರಹಗಳು. ಈ ವಿಶಿಷ್ಟ ದಾಂಪತ್ಯ ಗೀತಗಳನ್ನು ಗುನಗುನಿಸೋಣ ಬನ್ನಿ...
***
ಪ್ರೀತಿ, ಪ್ರೇಮ, ಪ್ರಣಯ, ಎಂಬ ಪದಗಳು ಎಂದಿಗೂ ಅಪ್ಯಾಯಮಾನವೇ. ಕೆಲವೊಮ್ಮೆ ಅರ್ಥಹೀನವೆನಿಸಿದರೂ ಪ್ರೀತಿ, ವಿಶ್ವಾಸ, ನಂಬಿಕೆಗಳಿಲ್ಲದೆ ಬದುಕು ಅರ್ಥಹೀನ. ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ’ ಎಂಬ ಕವಿವಾಣಿ ಅಕ್ಷರಶಃ ಸತ್ಯ. ಕೆಲವರ ಪ್ರೀತಿ ಬದುಕನ್ನು ಅರಳಿಸುತ್ತದೆ. ಕೆಲವರನ್ನು ಮುರುಟಿಸುತ್ತದೆ. ಮತ್ತೆ ಕೆಲವರನ್ನು ಪ್ರೀತಿಯ ಹೆಸರಲ್ಲಿ ಬಂಧಿಸಿ, ಸೆರೆಯಲ್ಲಿರಿಸುತ್ತದೆ.
ಪ್ರೀತಿಯೇ ಹಾಗೆ. ಹದಿಹರೆಯದ ಕನಸುಗಳು ಹುಚ್ಚಾಟಗಳು, ಭ್ರಮೆಗಳು... ಇವೆಲ್ಲಾ ‘ಸವಿ ನೆನಪುಗಳು ಬೇಕು ಸವಿಯಲೀ ಬದುಕು’ ಈಸ್ಟ್‌ಮನ್ ಬಣ್ಣಗಳ ಕನಸುಗಳಲ್ಲಿ, ಗಾಳಿಯಲಿ ತೇಲುತ್ತಾ, ಜೋಕಾಲಿಯಲಿ ಜೀಕುತ್ತಾ, ಚಂದ್ರ ತಾರೆಗಳ ಬಳಿ ಸಾರುತ್ತಾ, ಬೆಳದಿಂಗಳಲಿ ಮೈಮರೆಯುತ್ತಾ... ಧ್ಯಾನಿಸುತ್ತಿರುವಾಗಲೇ ಅರೆ ಯೌವ್ವನವೆಂಬ ಮಾಂತ್ರಿಕ ಆತುರಾತುರವಾಗಿ ಓಡೇ ಬಿಡುತ್ತಾನೆ, ನಮ್ಮರಿವಿಗೆ ಬಾರದ ಹಾಗೆ.
ಬಹುಶಃ ಇದು ಎಲ್ಲರ ಬದುಕಿನ ಅನಿವಾರ್ಯ ಘಟ್ಟ. ನಾನು ಪುಟ್ಟ ಹುಡುಗಿ, ಅರಸೀಕೆರೆಯ ನಮ್ಮ ಮನೆ ತುಂಬಾ ಹುಡುಗರ ಪಾಳ್ಯ, ಆಟ ಊಟ, ತಿರುಗಾಟದ ಒಡನಾಟದಲ್ಲಿ ನಾನು ಹುಡುಗರಷ್ಟೇ ನಿರ್ಭೀತಿ, ನಿರ್ಭೀಡೆಗಳಿಂದಿದ್ದು ಗಂಡುಬೀರಿ, ಅಮೇಜಾನ್ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದೆ, ಹೀಗಾಗಿ ಲಿಂಗಭೇದವಿಲ್ಲದೆ ಎಲ್ಲರೊಂದಿಗೆ ಬೆರೆಯುವುದರಲ್ಲಿ ಯಾವ ದಿಗಿಲು, ಮುಜುಗರ, ಸಂಕೋಚಗಳು ನನಗೆ ಇರಲಿಲ್ಲ. ಈಗಲೂ ಇಲ್ಲ. ಅದಕ್ಕೆ ಬೆಂಬಲ ದೊರೆತದ್ದು ರಂಗಭೂಮಿಯ ನಂಟಿನಿಂದ.
ಮದುವೆಯ ಬಗ್ಗೆ ನನಗೆಂದೂ ಒಲವಿರಲಿಲ್ಲ. ನನ್ನ ಸ್ನೇಹದ ಚೌಕಟ್ಟಿನಲ್ಲಿದ್ದವರ ಬಗ್ಗೆ ಒಲವು ಮೂಡಲೇ ಇಲ್ಲ. ನನ್ನೊಳಗಿನ ಸಾಂಪ್ರದಾಯಿಕ ಮನಸು ಮುಕ್ತವಾಗಿರಲಿಲ್ಲ. ಹಾಗಂತ ನನ್ನ ಮನಸು ಮಡಿ ಮಡಿಯೂ ಅಲ್ಲ. ಆದರೆ ನಾನೆಂದೂ ಸ್ವೇಚ್ಛಾಚಾರಿಯೂ ಅಲ್ಲ, ಅದನ್ನು ಬಯಸಿದವಳೂ ಅಲ್ಲ. ಆದರೆ ನನ್ನ ಸಹಜ ಸಲಿಗೆಯ ವರ್ತನೆಯನ್ನು ತುಂಬಾ ಜನ ತಪ್ಪು ತಿಳಿದದ್ದುಂಟು. ಅವರು ತಪ್ಪು ತಿಳಿದಿದ್ದಾರೆ ಎಂಬುದು ಕೂಡ ನನಗೆ ಅರ್ಥವಾಗುತ್ತಿರಲಿಲ್ಲ. ಅವರವರ ಭಾವಕ್ಕೆ ನಾನೆಂದೂ ತಲೆ ಕೆಡಿಸಿಕೊಳ್ಳಲಿಲ್ಲ. ಯಾವ ಮುಚ್ಚುಮರೆಯಿಲ್ಲದೆ ಎಲ್ಲರೊಂದಿಗೂ ಆರೋಗ್ಯಕರ ಸಂಬಂಧವಿದ್ದು ಸುಖವಾಗಿದ್ದೇನೆ.
ತಂಗಿಯರ ಮದುವೆಯೂ ಆಯಿತು. ನನಗೆ ಮದುವೆಯಲ್ಲಿ ಆಸಕ್ತಿಯೇ ಇರಲಿಲ್ಲ. ಮನೆಯಲ್ಲಿ ಒತ್ತಾಯ, ಹಿತೈಷಿಗಳ ಬುದ್ಧಿಮಾತು ಯಾವುದಕ್ಕೂ ಜಗ್ಗದೆ, ನನ್ನಷ್ಟಕ್ಕೆ ನಾನು ಕೆಲಸ, ನಾಟಕ ಅನ್ನುತ್ತಾ, ಅವರಿವರ ಸಂಕಷ್ಟಗಳಿಗೆ ಸ್ಪಂದಿಸುತ್ತಾ, ಆಹಾ ಅದೆಷ್ಟು ಖುಷಿಯಾಗಿದ್ದೆ. ದುಡಿಯುತ್ತಿದ್ದೆ, ಬೇಕಾದಂಗೆ ಖರ್ಚು ಮಾಡುತ್ತಿದ್ದೆ, ಭವಿಷ್ಯದ ಬಗ್ಗೆ ಖಬರೇ ಇಲ್ಲದವಳಂತೆ.
ಇಂತಿರಲು ಏಳು ಪರ್ವತಗಳ ದಾಟಿಕೊಂಡು ವಾಯು ಕುದುರೆಯನ್ನೇರಿ ಶ್ವೇತವರ್ಣದ ರಾಜಕುಮಾರ ಧುತ್ತನೆ ನನ್ನೆದುರು ಪ್ರತ್ಯಕ್ಷನಾಗಿಬಿಟ್ಟ. ಎಲ್ಲಾ ಗಂಡಸರಂತೆ ‘ಚೆಲುವೆ ನೀನು, ನಂಬು ನನ್ನ’ ಎಂದು ಬಿಟ್ಟ. ಅಷ್ಟಕ್ಕೆ ನಾನೇನು ಮರುಳಾಗಲಿಲ್ಲ.
ಮೈಸೂರಿನಲ್ಲಿ ನನ್ನ ಫ್ರೆಂಚ್ ಗೆಳತಿ ಜೋಸಿ ‘ಎನೆಡ್ಜಾ’ ಎಂಬ ಸಂಸ್ಥೆಯೊಂದನ್ನು ಸೌಲಭ್ಯವಂಚಿತ ಕೆಳವರ್ಗದ ಜನರಿಗಾಗಿ ನಡೆಸುತ್ತಿದ್ದಳು. ಆ ಸಂಸ್ಥೆಯ ಮೂಲಕ ಬಡ ಮುಸ್ಲಿಂ ಕುಟುಂಬವೊಂದನ್ನು ದತ್ತು ತೆಗೆದುಕೊಂಡು ಆ ಮನೆಯ ಮಕ್ಕಳನ್ನು ಓದಿಸಿ, ನಿವೇಶನ ಖರೀದಿಸಿ ಅವರಿಗೆ ಮನೆಕಟ್ಟಿಸಿಕೊಟ್ಟು... ಆರು ಹೆಣ್ಣು ಮಕ್ಕಳ ಮದುವೆಗೂ ಸಹಾಯ ಮಾಡಿ, ಗಂಡುಮಕ್ಕಳಿಗೆ ಅಂಗಡಿ ತೆರೆದುಕೊಟ್ಟು ನೋಡಿಕೊಳ್ಳತ್ತಿದ್ದವನೇ ಆ ರಾಜಕುಮಾರ ಫ್ರಾನ್ಸೀಸ್.
ಫ್ರಾನ್ಸೀಸ್‌ನ ಸಾಮಾಜಿಕ ಕಾಳಜಿ, ತನ್ನವರಲ್ಲದ ಜನರಿಗೆ ಮಿಡಿಯುತ್ತಿದ್ದ ಅವನ ಹೃದಯ ವೈಶಾಲ್ಯ ಮೆಲ್ಲನೆ ನನ್ನನ್ನು ಕರಗಿಸತೊಡಗಿತು ಅನ್ನಿಸುತ್ತದೆ. ಅದಕ್ಕೆ ಮುನ್ನ ಅವ ಮದುವೆಯ ಪ್ರಸ್ತಾಪ ಮಾಡಿದಾಗ ಮುಲಾಜಿಲ್ಲದೆ ತಿರಸ್ಕರಿಸಿ ಬಂದಿದ್ದೆ. ನಿರಾಶೆಯಿಂದ ಫ್ರಾನ್ಸ್‌ಗೆ ಹಿಂದಿರುಗಿದ ಅವ ಇಡೀ ಒಂದು ವರ್ಷ ಪತ್ರ ಬರೆದ.
ಫ್ರೆಂಚ್ ಭಾಷೆಯ ಪತ್ರಗಳನ್ನು ಅನುವಾದಿಸುತ್ತಿದ್ದ ಜೋಸಿ ಮಧ್ಯಸ್ಥಿಕೆ ವಹಿಸಿ ನನ್ನನ್ನು ಮದುವೆಗೆ ಒಪ್ಪಿಸಿದಳು.
ಬಹಳ ಜನ ತಿಳಿದಿರುವಂತೆ ನಾನು ಪ್ರೀತಿಸಿ ಬಿಡಲಾರದೆ ಮದುವೆಯಾದ್ದಲ್ಲ. ಅದಕ್ಕೆ ಮುನ್ನ ಉದ್ದಪಟ್ಟಿಯ ಷರತ್ತುಗಳನ್ನು ವಿಧಿಸಿದೆ. ಅದರಲ್ಲಿ ಮುಖ್ಯವಾಗಿ ಮತಾಂತರ, ದೇಶಾಂತರ, ಮಾಂಸಾಹಾರಗಳಿಗೆ ನನ್ನನ್ನು ಒತ್ತಾಯಿಸಬಾರದು, ಸಂಬಳ ಕೇಳಬಾರದು, ಅಪ್ಪಮ್ಮರನ್ನು ಕಡೆತನಕ ನೋಡಿಕೊಳ್ಳುವೆ; ಅಡ್ಡಿಪಡಿಸಬಾರದು, ನನ್ನ ನಿರ್ಭೀಡೆಯ ನಡೆಯನ್ನು ತಪ್ಪು ತಿಳಿಯಬಾರದು... ಇತ್ಯಾದಿ. ಮರು ಮಾತಿಲ್ಲದ ಒಪ್ಪಿದ, ಲಿಂಗಧಾರಣೆಗೆ ಮುಂದಾದವನನ್ನು ನಾನೇ ತಡೆದೆ. ನಮ್ಮ ನಮ್ಮತನವನ್ನು ಬಿಟ್ಟುಕೊಡದೆ ಬದುಕ ಬಯಸಿದವಳು ನಾನು. ವಿದ್ಯಾಭೂಷಣರು ಸುಬ್ರಹ್ಮಣ್ಯದಲ್ಲಿ ಸ್ವಾಮೀಜಿಯಾಗಿದ್ದಾಗ ಅವರೇ ನನ್ನ ತಂದೆ, ತಾಯಿಯರನ್ನು ಒಪ್ಪಿಸಿ, ಅವರ ಮಠದಲ್ಲೇ ಸರಳವಾಗಿ ಮದುವೆ ಮಾಡಿಕೊಟ್ಟರು. ಆಮೇಲೆ ಅವರೂ ಮದುವೆ ಮಾಡಿಕೊಂಡು ಮಠ ತ್ಯಾಗ ಮಾಡಲು ನನ್ನ ಮದುವೆಯೇ ಕಾರಣವೆಂದು ಕೆಲವರು ರೇಗಿಸಿದ್ದುಂಟು.
‘ಪ್ರೀತಿಯ ಕರೆ ಕೇಳಿ, ಅತ್ಮನ ಮೊರೆ ಕೇಳಿ, ನೀ ಬಂದು ನಿಂತಲ್ಲಿ ದೀಪ ಹಚ್ಚ’ ಎನ್ನುತ್ತಾ ಸಂಸಾರ ನೌಕೆಯನ್ನೇರಿದೆ. ಇಪ್ಪತ್ತೆಂಟು ಸಂವತ್ಸರಗಳು ಕಳೆದೇ ಹೋದವು. ಮಗ ದಳದಳನೆ ಬೆಳೆದು ನಿಂತ, ಈಗ ನಮ್ಮಿಬ್ಬರಿಗೂ ಗೆಳೆಯ. ಎಲ್ಲಾ ಸಂಸಾರಗಳಂತೆ ಬದುಕು ಸಾಗುತ್ತಿದೆ. ಪ್ರಾರಂಭದಲ್ಲಿ ನಮ್ಮ ಸಂಸ್ಕೃತಿ, ಹಬ್ಬ, ಮದುವೆಯ ವೈಭವ, ಸಂತೆ, ಜಾತ್ರೆ ಎಲ್ಲವನ್ನೂ ಫ್ರಾನ್ಸೀಸ್ ಆನಂದಿಸುತ್ತಿದ್ದ. ಕಂಡ ಕಂಡದ್ದನ್ನೆಲ್ಲಾ ಕ್ಲಿಕ್ಕಿಸುತ್ತಾ ಖುಷಿಯಾಗಿದ್ದ.
ಮೆಲ್ಲನೆ ತನ್ನ ದೇಶ, ಭಾಷೆ, ಆಹಾರ ಪದ್ಧತಿ, ಒಡಹುಟ್ಟಿದವರು, ಗೆಳೆಯರನ್ನೆಲ್ಲ ಮಿಸ್ ಮಾಡತೊಡಗಿದ ಎನಿಸುತ್ತದೆ, ಹಾಗೇ ಇಲ್ಲಿಯ ಸಾಮಾಜಿಕ ಬದುಕಿಗೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದ. ಕರೆಂಟ್ ಹೋದರೆ, ಫೋನ್ ಡೆಡ್ ಆದರೆ, ರಸ್ತೆಯಲ್ಲಿ ಯಾರೋ ಹಾರನ್ ಮಾಡಿದರೆ, ನಮ್ಮ ಮೇಜಿನ ಮೇಲಿನ ವಸ್ತುಗಳು ಛಿದ್ರ ಚೂರಾಗುತ್ತಿದ್ದವು. ಅವನ ಸಿಟ್ಟಿಗೆ ಕಾರಣ ನಮ್ಮ ಸಾಮಾಜಿಕ ಹಾಗೂ ನಾಗರಿಕ ಪ್ರಜ್ಞೆಯ ಕುರಿತಾಗಿತ್ತೇ ಹೊರತು ನನ್ನ ಸಂಸಾರಿಕ ಅಪವ್ಯಸನಗಳಾವೂ ಕಾರಣವಾಗಿರುತ್ತಿರಲಿಲ್ಲ.
ಫ್ರಾನ್ಸೀಸ್‌ನ ಇಂತಹ ಅತಿರೇಕದ ವರ್ತನೆ ಕಂಡು ಮನೆಯವರು ಬಿಟ್ಟು ಬಿಡು ಎನ್ನುತ್ತಿದ್ದರು. ಆದರೆ ನಮ್ಮಪ್ಪ ‘ಸಾಹಿತ್ಯ, ನಾಟಕವಲ್ಲದೆ, ಸಹೋದ್ಯೋಗಿಗಳೂ ನಿನಗಿದ್ದಾರೆ. ಅವನು ನಿನಗಾಗಿ ದೇಶ ಭಾಷೆ, ಧರ್ಮ, ಆಹಾರ ಪದ್ಧತಿ ಎಲ್ಲವನ್ನೂ ತ್ಯಾಗ ಮಾಡಿ ಬಂದಿದ್ದಾನೆ, ತನ್ನವರು ಎಂಬುವವರು ಯಾರೂ ಇಲ್ಲ. ಅವನಿಲ್ಲಿ ಒಂಟಿ. ಅದನ್ನು ಮರೆಯದೆ ಚೆನ್ನಾಗಿ ನೋಡಿಕೊ’ ಎನ್ನುತ್ತಿದ್ದರು. ಅದನ್ನು ನಾನು ಅಕ್ಷರಶಃ ಪಾಲಿಸುತ್ತಿರುವೆ. ಅಂತರ ಜಾತಿ, ಅಂತರರಾಷ್ಟ್ರದ ಮದುವೆ ಅಂತೆಲ್ಲಾ ರೇಗಿಸುತ್ತಿದ್ದರು. ಹಾಗೆಲ್ಲಾ ವೈಭವೀಕರಿಸಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಮದುವೆ ಎಂಬುದು ಕೇವಲ ಎರಡು ಮೈ-ಮನಸುಗಳ ಖಾಸಗಿ ಸಂಗತಿ. ಇಬ್ಬರಿಗೂ ಹೊಂದಿಕೊಂಡು ಹೋಗುವ ಮನಸ್ಸಿರಬೇಕು ಅಷ್ಟೇ.
ಸಣ್ಣ ಪುಟ್ಟದ್ದನ್ನೆಲ್ಲ ದೊಡ್ಡದು ಮಾಡುತ್ತಾ ಸಂಬಂಧದ ಹಗ್ಗವನ್ನು ತುಂಡರಿಸುವುದು ಎಷ್ಟು ಹೊತ್ತಿನ ಮಾತು? ಎಲ್ಲಾ ಕುಟುಂಬಗಳಂತೆ ಏರಿಳಿತ
ಗಳೊಂದಿಗೆ ಜಗಳ ಕೂಡ ಒಂದುಗೂಡಿಸುವ ದಡ ಎಂಬ ಅನುಭವವಾಗಿದೆ. ಪ್ರೀತಿ ಒಂದೇ ದಡ ಅಲ್ಲ.
‘ಗಂಡ’ ಯಾವ ಜಾತಿ ಮತ, ದೇಶ, ಭಾಷೆಯಾದರೂ ಸರಿಯೆ, ಪರದೇಶಿ, ಪರಜಾತಿ ಯಾವೂದೂ ಅಲ್ಲ. ಯಾವ ಹಂಗೂ ಇಲ್ಲದೆ ಗಂಡ ಗಂಡನೆ. ಸದ್ಯ ನನ್ನ ಗಂಡ ನಾನು ಮದುವೆಗೆ ಮುನ್ನ ವಿಧಿಸಿದ್ದ ನನ್ನ ಷರತ್ತುಗಳಿಗೆ ಈಗಲೂ ಬದ್ಧನಾಗಿದ್ದಾನೆ. ನನ್ನ ಓಡಾಟದ ಬದುಕಿನಲ್ಲಿ ಅವನಿಗೆ ಕಾಡುತ್ತಿದ್ದ ಒಂಟಿತನದಿಂದಾಗಿ ಆಗಾಗ್ಗೆ ತೋರುತ್ತಿದ್ದ ಅಸಹನೆ, ನಾನು ನಿವೃತ್ತಳಾದ ಮೇಲೆ ಕಡಿಮೆಯಾಗಿದೆ. ಆದರೂ ನಮ್ಮಿಬ್ಬರ ನಡುವಿನ ಸಾಂಸ್ಕೃತಿಕ ಭಿನ್ನತೆಗಳಿಂದಾಗಿ ಈಗಲೂ ಸಣ್ಣಪುಟ್ಟ ಜಗಳ ಆಗುತ್ತಲೇ ಇರುತ್ತವೆ. ನಾನು ಊಟ ಮಾಡುವಾಗ ತಟ್ಟೆಯನ್ನು, ಕೈಬೆರಳನ್ನು ನೆಕ್ಕಿಕೊಳ್ಳುವುದನ್ನು ಕಂಡು ಕಿಡಿಕಾರುತ್ತಾನೆ, ಅವ ಬಿಡದ ಬೀಡಿ ಚಟ ನನ್ನನ್ನು ರೇಗಿಸುತ್ತದೆ. ಆದರೂ... ಇಬ್ಬರೂ ಸಹಿಸಿಕೊಳ್ಳುವುದನ್ನು ಕಲಿತಿದ್ದೇವೆ. ಮನೆಯಿಂದ ಹೊರಹೋಗುವಾಗ ಎಲ್ಲಿದ್ದರೂ ಯಾರಿದ್ದರೂ ಅವರ ಎದುರೇ ಮುತ್ತು ಕೊಡುತ್ತಾನೆ, ನಾನು ಸಂಕೋಚದಿಂದ ಮುದುಡಿಕೊಳ್ಳುವೆ. ನಾನೆಂದೂ ಅವನಿಗೆ ಐ ಲವ್ ಯು ಎಂದು ಹೇಳಿಲ್ಲ. ಯಾರೊಂದಿಗಿನ ಸಂಬಂಧಗಳಲ್ಲೂ ಪ್ರೀತಿ, ಕಾಳಜಿಗಳು ಗುಪ್ತಗಾಮಿನಿಯಾಗಿರಬೇಕೆ ಹೊರತು ಪ್ರದರ್ಶನ ಆಗಿರಬಾರದೆಂದು ಬಯಸುವಳು.
ವಿದೇಶಿಗ ಅಂದ ಕೂಡಲೇ ಸಿರಿಸಂಪತ್ತುಳ್ಳ ಕೋಟ್ಯಧಿಪತಿ ಎಂದೇ ಜನ ಭಾವಿಸುವುದುಂಟು. ಆದರೆ ನನ್ನ ಗಂಡನೂ ನಮ್ಮಂತೆಯೇ ಮಧ್ಯಮ ವರ್ಗದವ, ಅಲ್ಲಿ ಕಷ್ಟಪಟ್ಟು ದುಡಿದು ಇಲ್ಲಿಯ ಅವನ ದತ್ತು ಕುಟುಂಬವನ್ನು ಸಾಕಿದ. ಈಗಲೂ ಹಳ್ಳಿಯವರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ, ಅವನು ತನ್ನ ಗಳಿಕೆಯನ್ನು ಪರೋಪಕಾರಕ್ಕೆ ವ್ಯಯಿಸುವುದರ ಬಗ್ಗೆ ನನಗಾವ ತಕರಾರೂ ಇಲ್ಲ. ನನ್ನ ಗಂಡನಿಗೊಮ್ಮೆ ಅಂಗಾಂಗ ವೈಫಲ್ಯವಾಗಿ ಎರಡು ತಿಂಗಳು ಆಸ್ಪತ್ರೆವಾಸಿಯಾಗಿದ್ದ, 33 ಸಲ ಡಯಾಲಿಸಿಸ್ ಆಯಿತು.
ಸಾವು ಬದುಕಿನ ನಡುವೆ ಸೆಣೆಸಾಡುತ್ತಿದ್ದ ಆತ ಐಸಿಯು ಒಳಗಿದ್ದ. ನಾನು ಐಸಿಯುವಿನ ಹೊರಗೆ ಮಲಗುತ್ತಿದ್ದೆ. ಒಂದು ರಾತ್ರಿ ವೈದ್ಯರು ನನ್ನನ್ನು ಎಬ್ಬಿಸಿ ‘ಬಹುಶಃ ಇದು ಅವನ ಕೊನೆ ರಾತ್ರಿ. ಅವ ವಿದೇಶಿಯನಾದುದರಿಂದ ಅದೇನೇನು ಕಾನೂನುಗಳಿರುತ್ತದೋ ವಿಚಾರಿಸಿಕೊಳ್ಳಿ, ಪಾಪ ಮಗ ಇನ್ನೂ ಚಿಕ್ಕವನು. ಅಪ್ಪನ ಪ್ರೀತಿಯಿಂದ ವಂಚಿತನಾಗುತ್ತಿದ್ದಾನೆ’ ಎಂದರು.
ಏನೂ ಮಾಡಲು ತಿಳಿಯದೆ ನಡುರಾತ್ರಿ ಮನೆಗೆ ಬಂದೆ. ಮನೆಯ ವಸ್ತುಗಳನ್ನೆಲ್ಲಾ ಅಚೀಚೆ ಸರಿಸಿ ನಡುವೆ ದಿವಾನ ಇಟ್ಟು ಅವನ ಅಂತಿಮ ದರ್ಶನದ ಸಿದ್ಧತೆ ಮಾಡಿ, ಹೇಗಾದರಾಗಲಿ ಅಂತ ಎಂದಿನಂತೆ ಗಂಜಿಮಾಡಿಕೊಂಡು ಆಸ್ಪತ್ರೆಗೆ ಮರಳಿದೆ. ಇನ್ನೂ ಉಸಿರಾಡುತ್ತಿದ್ದ. ಮೆಲ್ಲನೆ ಅಲುಗಾಡಿಸಿದೆ. ಕಣ್ ತೆರೆದ, ಗಂಜಿ ಕುಡಿಸಿದೆ ಕುಡಿದ. ಬೆಳಿಗ್ಗೆ ಬಂದ ಡಾಕ್ಟರಿಗೆ ಆಶ್ಚರ್ಯ. ‘ಅಕ್ಚುಯಲಿ ನಿನ್ನೆ ರಾತ್ರಿ ಅವ ಸತ್ತಿದ್ದ, ಇದು ನಿಜಕ್ಕೂ ವಂಡರ್’ ಎನ್ನುತ್ತಾ ಫ್ರಾನ್ಸಿಯ ಬೆನ್ನು ತಟ್ಟಿ ಖುಷಿಯಾಗಿ ಹೋದರು. ಇಡೀ ದಿನ ಅವರ ವಿದ್ಯಾರ್ಥಿಗಳು ಬಂದು ಸತ್ತು ಹೋಗಿದ್ದವ ಬದುಕಿದ್ದಾನೆ ಅಂತ ಇವನನ್ನು ಮಾತನಾಡಿಸಿ ಹೋಗುತ್ತಿದ್ದರು. ಆಗಾಗ್ಗೆ ಆಸ್ಪತ್ರೆಗೆ ಊಟ ತಂದುಕೊಡುತ್ತಿದ್ದ ನಾಗಲಕ್ಷ್ಮೀ ಹರಿಹರೇಶ್ವರ ‘ನೀನು ಆಧುನಿಕ ಸಾವಿತ್ರಿ’ ಅಂತ ರೇಗಿಸುತ್ತಿದ್ದರು. ಆದರೆ ಅವ ಬದುಕಿದ್ದು ಅವನೊಳಗಿನ ದೈತ್ಯ ದೈಹಿಕ ಮತ್ತು ಸಂಕಲ್ಪ ಶಕ್ತಿ ಹಾಗೂ ನಮ್ಮಗಳ ಬಗೆಗಿನ ವ್ಯಾಮೋಹದಿಂದ ಎಂದರು ವೈದ್ಯರು.
ಸಾಂಸ್ಕೃತಿ ಭಿನ್ನತೆಯಿರುವ ಗಂಡ, ಜನರೇಷನ್ ಗ್ಯಾಪ್ ಇರುವ ಮಗ, ಮೂವರ ನಡುವೆಯೂ ಭಿನ್ನಾಭಿಪ್ರಾಯಗಳು. ಆದರೆ, ಯಾವುದೇ ಅತಿರೇಕಕ್ಕೆ ಹೋಗದೆ ಪರಸ್ಪರ ಗೌರವದಿಂದ ನಡೆದುಕೊಳ್ಳುತ್ತಾ ಬಾಗಿ ಮಾಗಿದ್ದೇವೆ, ನಮ್ಮ ನಮ್ಮ ಅಸ್ಮಿತೆಯನ್ನು ಕಾಪಾಡಿಕೊಂಡಿದ್ದೇವೆ. ನಮ್ಮಗಳ ನಡುವೆ ಹರಿಯುತ್ತಿರುವುದು ಅನುರಾಗದ ನದಿ. ಅದು ಯಾರು ಯಾರನ್ನೂ ಬಿಡಲು ಸಾಧ್ಯವಾಗದಂತೆ ಬಾಂಧವ್ಯದ ಬೆಸುಗೆಯಲ್ಲಿ ಮೂವರನ್ನೂ ಬೆಸೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.