ಚುಕ್ಕಿ ನಂಜುಂಡಸ್ವಾಮಿ ಅವರ ತಂದೆ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಜಾತಿ ಬಿಟ್ಟು ಮದುವೆ ಆದವರು. ಮೈಸೂರಿನ ಅನನ್ಯ ಮುದ್ದುಕೃಷ್ಣ ಅವರ ತಂದೆ ಕೆ.ಮುದ್ದುಕೃಷ್ಣ ಸಹ ಜಾತಿ ಧಿಕ್ಕರಿಸಿ ವಿವಾಹವಾದವರು. ಇವರೆಲ್ಲ ತಮ್ಮ ಮಕ್ಕಳು ಕೂಡ ತಮ್ಮಂತೆಯೇ ಆರೋಗ್ಯಕರವಾಗಿ ಯೋಚಿಸುವುದು, ಬದುಕುವುದನ್ನು ಕಲಿಸಿಕೊಟ್ಟವರು. ಅವರ ನೆರಳಿನಲ್ಲೇ ಬೆಳೆದವರು ಸಂಗಾತಿ ಆಯ್ಕೆಯಲ್ಲಿ ಸಹಜವಾಗಿಯೇ ಮುಕ್ತವಾಗಿದ್ದರು. ಶಿವಮೊಗ್ಗ ಜಿಲ್ಲೆ ಸಾಗರ ಸಮೀಪದ ಪುರಪ್ಪೇಮನೆಯ ಕೃತಿ ಆರ್. ಬಾಲ್ಯದಿಂದಲೂ ಭಿನ್ನವಾಗಿಯೇ ಯೋಚಿಸುತ್ತಾ ಬೆಳೆದವರು, ಬದುಕುತ್ತಿರುವವರು. ಅವರದು ಸಮಭಾವ.
ಒಲಿದ ಮನಸ್ಸುಗಳು ದೇಶ, ಭಾಷೆ, ಜಾತಿ, ಧರ್ಮ ಇತ್ಯಾದಿ ಸಂಕೋಲೆಗಳಿಂದ ಬಿಡುಗಡೆಗೊಂಡು ಒಂದಾಗುತ್ತವೆ. ಎಲ್ಲ ರೀತಿಯ ಗಡಿಗಳನ್ನು ಅಳಿಸಿ ಹಾಕಿದ್ದು ಮುಕ್ತ ಆಲೋಚನೆ, ಕನಸು ಮತ್ತು ತೆರೆದ ಮನಸ್ಸು. ಇಂತಹ ಮೂವರು ಪ್ರೇಮ ವಿವಾಹಿತರ ವಿಭಿನ್ನ ಪುಟ್ಟ ಪುಟ್ಟ ಕಥನಗಳು...
ಕಿಚನ್‌ನಲ್ಲಿ ಅರಳಿದ ಪ್ರೀತಿ! –ಅನನ್ಯ ಮುದ್ದುಕೃಷ್ಣ
ಕಳೆದ 30–40 ವರ್ಷಗಳಿಂದ ದೊಡ್ಡದಾಗಿ ಹಬ್ಬಿರುವ ಜಾಗತೀಕರಣವು ವಿಶ್ವದ ಮೂಲೆ ಮೂಲೆಯಲ್ಲಿರುವ ಯುವಕರ ಆಲೋಚನೆ, ವರ್ತನೆ, ಬಯಕೆಗಳನ್ನು ಒಂದೇ ರೀತಿ ಮಾಡಿಬಿಟ್ಟಿದೆ. ಜಾಗತೀಕರಣದಿಂದ ನನಗೆ ಲಭ್ಯವಾದ ಅನುಭವಗಳ ಆಧಾರದ ಮೇಲೆ ಹೇಳುವುದಾದರೆ ವಿದೇಶಿ ಸಿನಿಮಾ, ಹಾಡು, ಅಡುಗೆ, ಉಡುಪು ಇವೆಲ್ಲ ಕೂಡಿ ಬಾಳಸಂಗಾತಿಯನ್ನು ಕೊಟ್ಟುಬಿಟ್ಟವು!
ಇದು ಹೇಗೆ ಎನ್ನುವುದನ್ನು ಸ್ವಲ್ಪ ಬಿಡಿಸಿ ಹೇಳುತ್ತೇನೆ. ನಾನು ಎಂಜಿನಿಯರಿಂಗ್‌ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಮೈಸೂರಿನಿಂದ ಸ್ವೀಡನ್ ದೇಶದ ಸ್ಟಾಕ್ಹೋಮ್ ನಗರಕ್ಕೆ ಹೋದೆ. ಅಲ್ಲಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಇಟಲಿಯ ಬಿಯಾಂಕಾ ವೈದ್ಯಕೀಯ ಶಿಕ್ಷಣಕ್ಕಾಗಿ ಬಂದಿದ್ದು, ಅವಳು ಕೂಡ ನನ್ನ ಹಾಸ್ಟೆಲ್‌ನಲ್ಲಿದ್ದಳು. ಹಾಸ್ಟೆಲ್‌ನಲ್ಲಿ ನಾವು ಅಡುಗೆ ಮಾಡಿಕೊಳ್ಳಬೇಕಿತ್ತು. ಒಂದೊಂದು ಫ್ಲೋರ್‌ಗೆ ಒಂದೊಂದು ಕಿಚನ್ ಇರುತಿತ್ತು. ಅಲ್ಲಿ ನಾವಿಬ್ಬರು ಭೇಟಿಯಾದೆವು.
ನಾವಿಬ್ಬರೂ ಮೊದ ಮೊದಲು ವಿದ್ಯಾರ್ಥಿ ಜೀವನದ ಸುಖ–ದುಃಖಗಳನ್ನು ಹಂಚಿಕೊಂಡೆವು. ನಮ್ಮಿಬ್ಬರ ವಿದ್ಯಾಭ್ಯಾಸದ ವಿಚಾರಗಳು ಒಂದೇ ಎನಿಸಿತು. ನಂತರ ಚಿಕ್ಕವನಾಗಿದ್ದಾಗ ನೋಡಿದ ಸಿನಿಮಾಗಳ ಬಗ್ಗೆ ವಿಶೇಷವಾಗಿ ಮೆಲ್ ಬ್ರೂಕ್ಸ್ ಹಾಗೂ ಮಿಸ್ಟರ್ ಬೀನ್ ಸಿನಿಮಾಗಳ ಬಗ್ಗೆ ಹೇಳಿದೆ. ಆಕೆಗೂ ಈ ಸಿನಿಮಾಗಳು ಬಲು ಇಷ್ಟವೆಂದು ಗೊತ್ತಾಯಿತು. ಮತೊಮ್ಮೆ ಕಿಚನ್‌ನಲ್ಲಿ ಭೇಟಿಯಾದಾಗ ನಮಗೆ ಪ್ರಿಯವಾದ ಜಗತ್ತಿನ ಬಗೆ ಬಗೆ ಅಡುಗೆಯ ಬಗ್ಗೆ ಮಾತನಾಡಿದೆವು. ಬಿಯಾಂಕಾ ಕೂಡ ನನ್ನ ಹಾಗೆಯೇ Foodie ಎಂದು ಗೊತ್ತಾಯಿತು. ಅವಳಿಗೆ ಭಾರತದ ಅಡುಗೆ ಬಹಳ ಇಷ್ಟ, ಆದರೆ ಕರ್ನಾಟಕದ ಯಾವ ಅಡುಗೆಯ ರುಚಿಯನ್ನೂ ಇಲ್ಲಿಯವರೆಗೂ ನೋಡಿರಲಿಲ್ಲ. ನಾನು ಅವಳಿಗೆ ಬಿಸಿಬೇಳೆ ಬಾತ್ ಮಾಡಿಕೊಟ್ಟೆ. ಅವಳಿಗೆ ತುಂಬಾ ಇಷ್ಟ ಆಗಿ ಹೋಯ್ತು. ನನಗೆ ಅನಿಸುತ್ತೆ, ಅವಳು ನನ್ನ ಬಿಸಿಬೇಳೆ ಬಾತ್‌ಗೇ ಬಿದ್ದೋದ್ಲು ಅಂಥ! ಹೀಗೆ ಜಾಗತೀಕರಣ ತೆರೆದ ನಮ್ಮ ಮನಸ್ಸುಗಳು ಸ್ವೀಡನ್ನಿನ ಹಾಸ್ಟೆಲ್ ಕಿಚನ್‌ನಲ್ಲಿ ಒಂದಾದವು.
ದೇಶ, ಭಾಷೆ, ಜಾತಿ, ಧರ್ಮ, ಆಚರಣೆ ಇತ್ಯಾದಿ ಸಂಕೋಲೆಗಳಿಂದ ಬಿಡುಗಡೆಗೊಳಿಸುವುದು ಪ್ರೀತಿಯೊಂದೇ ಎಂಬುದು ನನ್ನ ಅನುಭವ. ಆದರೆ, ಇಲ್ಲಿಯೂ ಕೂಡ ನವ ಜೋಡಿಗಳಿಗೆ ಕೆಲವೊಂದು ವ್ಯತ್ಯಾಸಗಳು ಕಾಣಿಸುತ್ತವೆ. ಅವುಗಳನ್ನು ಕೊಂದು ಹಾಕಬೇಕು. ಪರಸ್ಪರ ಅರ್ಥ ಮಾಡಿಕೊಳ್ಳುವ ಮೂಲಕ, ಹೊಂದಾಣಿಕೆ ಬೆಳೆಸಿಕೊಂಡು ಸಂಬಂಧವನ್ನು ಕಾಪಾಡಿಕೊಳ್ಳಬೇಕು. ದಿನಗಳು, ವರ್ಷಗಳು ಕಳೆದಂತೆ ವ್ಯತ್ಯಾಸಗಳು ಮಾಯವಾಗುತ್ತವೆ. ಅಲ್ಲಿಯವರೆಗೆ ತಾಳ್ಮೆ ಹಾಗೂ ನಂಬಿಕೆಯೇ ಮುಖ್ಯ.
ನನ್ನ ಮತ್ತು ಬಿಯಾಂಕಾ ನಡುವೆ ಕಲ್ಚರಲ್ ತಿಕ್ಕಾಟ ಆಗಲೇ ಇಲ್ಲ. ನಮಗೆ ನಮ್ಮ ಇತಿಮಿತಿಗಳು ಗೊತ್ತಿದ್ದವು. ನಮ್ಮದು ಒಂದು ರೀತಿಯ best-of ಕಲ್ಚರ್. ಉಪಯೋಗಕ್ಕೆ ಬಾರದ ಸಾಂಸ್ಕೃತಿಕ ಅಂಶಗಳನ್ನು ಮೂಲೆಗೆ ಎಸೆದು ಪ್ರಯೋಜನಕ್ಕೆ ಬರುವ ಅಂಶಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿದ್ದೇವೆ. ಉದಾಹರಣೆಗೆ–ಸ್ವೀಡನ್ ದೇಶದ ಸಂಯಮ (lagom), ಭಾರತದ ಅತಿಥಿ ಉಪಚಾರ, ಇಟಲಿಯ ಹಾಸ್ಯಪ್ರಜ್ಞೆಯನ್ನು ನಾವು ಅಳವಡಿಸಿಕೊಂಡಿದ್ದೇವೆ. ಹೀಗೆ ಇದ್ದಾಗ ಯಾರ ಸಂಸ್ಕೃತಿಯೂ ಮೇಲು–ಕೀಳು ಎನ್ನುವ ಪ್ರಶ್ನೆ ಬರುವುದಿಲ್ಲ.
ನನ್ನ ಅಪ್ಪ, ಅಮ್ಮ ಕಲಿಸಿದ್ದು, ನನಗೆ ಇಷ್ಟವಾದ ಸಂಗಾತಿಯನ್ನು ಆರಿಸಿಕೊಳ್ಳಲು ಪ್ರೇರಣೆ ಆಯಿತು. ‘ನಿನ್ನ ಜೀವನವನ್ನು ನೀನೆ ಕಟ್ಟಿಕೊಳ್ಳಬೇಕು, ನಿನಗೆ ಹೆಣ್ಣು ಹುಡುಕುವ ವಿಷಯದಲ್ಲಿ ನಾವು ತಲೆ ಹಾಕುವುದಿಲ್ಲ, ಸಹಾಯ ಮಾಡಲ್ಲ, ನಿನ್ನ ಆಯ್ಕೆಗೆ ನಮ್ಮ ಸಮ್ಮತಿ ಇದ್ದೇ ಇರುತ್ತದೆ’ ಎಂದು ಹೇಳಿದ್ದರು. ಏಕೆಂದರೆ ಅಪ್ಪ, ಅಮ್ಮ ಜಾತಿ ಧಿಕ್ಕರಿಸಿ ಮದುವೆ ಆದವರು. ಅವರ ನೆರಳಲ್ಲೇ ಬೆಳೆದ ನಾನು, ನನ್ನ ತಮ್ಮ ಮುಕ್ತವಾಗಿ ಸಂಗಾತಿಯನ್ನು ಆಯ್ಕೆ ಮಾಡಿಕೊಂಡೆವು.
ನಿರೂಪಣೆ: ಸುದೇಶ ದೊಡ್ಡಪಾಳ್ಯ
‘ಪ್ರೀತಿ ದೇಹಕ್ಕೆ ಉಸಿರಿದ್ದಾಗ ಹಾಗೆ’ –ಕೃತಿ ಆರ್.
ಪ್ರೀತಿ ಬಗ್ಗೆ ಸಾವಿರಾರು ವರ್ಷಗಳಿಂದ ಎಲ್ಲರೂ ಬರಿತಾನೆ ಇದಾರೆ, ಅದು ದೇಹಕ್ಕೆ ಉಸಿರಿದ್ದ ಹಾಗೆ ಅಂತ ನನಗೆ ಇವತ್ತು ಅನ್ನಿಸ್ತಾ ಇದೆ. ದಿನಾ ಬೇರೆ ಬೇರೆ ತರ ಅನುಭವಕ್ಕೆ ಬರ್ತಾ ಇರತ್ತೆ. ಪ್ರೀತಿ, ಜಾಸ್ತಿ ಕಾಲ ಬದುಕಬೇಕಂದ್ರೆ ಅದನ್ನ ಕಾಪಿಡಬೇಕು, ಅದಕ್ಕಾಗಿ ಕೆಲಸ ಮಾಡಬೇಕು. ಅದರರ್ಥ ಕ್ಷಣಿಕವಾದ ಪ್ರೀತಿ ಸುಳ್ಳು ಅಂತೇನೂ ಅಲ್ಲ. ಎಲ್ಲರ ಜೀವನದಲ್ಲಿ ಅದಕ್ಕೂ ಒಂದು ಜಾಗ ಇರತ್ತೆ. ಆದರೆ ಇನ್ನೊಬ್ಬರೊಟ್ಟಿಗೆ ಬದುಕಬೇಕಂದ್ರೆ ಸಮಾನಆಸಕ್ತಿಗಳು, ಪರಸ್ಪರ ಗೌರವನೂ ಇರಬೇಕಾಗತ್ತೆ.
ನಾನು ಹಾಗೂ ಟಾಡ್ ಲಾರಿಚ್ ಜೊತೆಗಿರ್ತಾ ಸುಮಾರು 25-26 ವರ್ಷ ಆಯ್ತು. ಅವನು ಅಮೆರಿಕದವನು. ನಮಗೀಗ ಹದಿನೇಳು ವರ್ಷದ ಮಗನಿದ್ದಾನೆ. ಆತನ ಹೆಸರು ಹಮೀರ್ ಮುಗಿಲು. ನಮಗೆ ಅಂತರ ರಾಷ್ಟ್ರೀಯ, ಅಂತರ ಧರ್ಮ ಅಂತೆಲ್ಲ ಆಗಲೂ ಅನ್ನಿಸಿರಲಿಲ್ಲ, ಈಗಲೂ ಇಲ್ಲ. ಹೊರಗಡೆಯವರಿಗೆ ಬೇರೆ ಕಾಣುತ್ತಿರಬೇಕು! ಬೇರೆ ದೇಶದಲ್ಲಿ ಮನುಷ್ಯರಿಗೆ ಕೋಡಿರತ್ತೆ ಅಥವಾ ಮನುಷ್ಯರು ಮರದಿಂದ ಹುಟ್ತಾರೆ ಅನ್ನೊ ಕಲ್ಪನೆಗಳೆಲ್ಲ ಇರಬಹುದೇನೊ. In fact ನಾವು ಹಳ್ಳಿಲಿರೊದ್ರಿಂದ ಈ ತರದ ಕುತೂಹಲಿಗಳು ಮೊದಮೊದಲಿಗೆ ಸಿಗ್ತಾ ಇದ್ರು. ಅಂದ್ರೆ ಹಳ್ಳಿಯವರಿಗೆ ಏನು ಗೊತ್ತಿರಲ್ಲ ಅಂತಲ್ಲ. ಎಲ್ಲರೂ ಪರಿಚಯದವರೇ ಆಗಿರ್ತಾರೆ, ಪೂರ್ವಗ್ರಹಿಕೆಗಳನ್ನ ತೋರಿಸೊ ಅಷ್ಟು ಒಡನಾಟ ಇರತ್ತೆ ಅಂತ ಅಷ್ಟೆ.
ಬೇರೆ ದೇಶದವರಾದ್ದರಿಂದ cultural difference ಇರುತ್ತಲ್ಲ, ಅದನ್ನ ಹೇಗೆ ನಿಭಾಯಿಸಿದಿರಿ ಅನ್ನೊದು ಎಲ್ಲರೂ ಕೇಳೊ ಪ್ರಶ್ನೆ. ನಿಜ ಹೇಳ್ಬೇಕಂದ್ರೆ ನನ್ನದೇ ಜಾತಿಯವರನ್ನ ಮಾಡ್ಕೊಂಡಿದ್ರೆ ತುಂಬಾ cultural difference ಆಗ್ತಿತ್ತು. ಜೀವನ, ಸಮಾಜ, ಸಂಸಾರದ ಬಗ್ಗೆ ನಮ್ಮ ದೃಷ್ಟಿಕೋನಗಳು ಒಂದೇ ರೀತಿಯಾಗಿದ್ದರಿಂದಲೇ ನಾವು ಬೇಗ ಗೆಳೆಯರಾಗಿದ್ದು.
ಸ್ವಭಾವದಲ್ಲಿ ವ್ಯತ್ಯಾಸಗಳು ಇದ್ದೇ ಇರತ್ತೆ. ಒಬ್ಬರು ಬೇಗ ಏಳೊರು, ಇನ್ನೊಬ್ಬರು ರಾತ್ರಿ ಕೆಲಸ ಮಾಡೊರು ಈ ರೀತಿಯದು. ನನ್ನ ಸಂಗಾತಿ ಮನೆ ಗುಮ್ಮ. ಹತ್ತಿರದ ಟೌನ್‌ಗೆ ಹೋದರೂ ಸ್ವಲ್ಪ ಹೊತ್ತಿಗೆ, ಗಲಾಟೆ ಗೌಜು ಸಹಿಸ್ಕೊಳೊಕಾಗಲ್ಲ, ಮನೆಗೆ ಹೋಗೋಣ ಅಂತಾನೆ. ಯಾವುದೇ ಸಂಬಂಧವಾದರೂ ‘ಆದರ್ಶ’, ‘ಗಟ್ಟಿ’ ಅಂತ ಕರೆಸ್ಕೊಳೊದು ಮುಜುಗರದ ವಿಷಯ. ವರ್ಷಗಟ್ಟಲೇ ಜೊತೆಗಿದ್ದು ಇದ್ದು ನಾವು ಮನೆಲಿರೊ furniture ತರ ಆಗಿಬಿಟ್ಟಿದ್ರೂ ಸಂಬಂಧ ಗಟ್ಟಿಯಾಗಿದೆ ಅಂತನೇ ಹೇಳೊದು. ಅವನ/ಅವಳ ಬಗ್ಗೆ ಎಲ್ಲಾ ಗೊತ್ತಿದೆ ಅಂತ ಅಂದ್ಕೊಳ್ಳದೆ ಓಪನ್ ಆಗಿ ಇದ್ರೆ ಜೀವನ ಸ್ವಾರಸ್ಯವಾಗಿರತ್ತೆ. ಇಲ್ಲ ಅಂದ್ರೆ ದಿನಾ ಬೆಳಿಗ್ಗೆಯಾಗತ್ತೆ ರಾತ್ರಿಯಾಗತ್ತೆ ಅಷ್ಟೆ.
ಒಂದು ವಿಷಯ ನಮ್ಮಿಬ್ಬರಿಗೂ ಅನುಭವಕ್ಕೆ ಬಂದಿದೆ. ಹಳ್ಳಿ ಖಾಲಿಯಾಗ್ತಿದೆ, ಮಕ್ಕಳೆಲ್ಲ ಬೆಂಗಳೂರಿಗೆ ಸೇರ್ತಿದಾರೆ ಅಂತ ಎಲ್ಲರೂ ಇಲ್ಲಿ ಮಾತಾಡ್ತಾರೆ. ಅಂದರೆ ಮಗ ವಾಪಾಸು ಬರ್ಲಿ, ಅಂತಿರತ್ತೆ. ಮಗಳೇ ವಾಪಾಸು ಬಂದ್ರೆ ಗಂಡಾಳ್ವಿಕೆ ಸಮಾಜಕ್ಕೆ ಸ್ವಲ್ಪ ಇರಿಸು ಮುರುಸು. ಅದನ್ನ ಹಲವಾರು ರೀತಿ ತೋರಿಸ್ತಾರೆ. ನನ್ನ ಮನೆಯವರಿಗೆ ಏನೂ ಸಮಸ್ಯೆ ಇಲ್ಲ, 24 ವರ್ಷದ ಹಿಂದೇನೆ ನಮ್ಮ ಊರಿನಲ್ಲಿ ನಡೆಯೊ ರೀತಿನೆ, ಮನೆ ಅಂಗಳಕ್ಕೇ ಚಪ್ಪರ ಹಾಕಿ ಮದುವೆ, ನೆಂಟರಿಷ್ಟರಿಗೆ ಊಟ ಎಲ್ಲಾ ಹಾಕಿದಾರೆ. ಒಟ್ಟೂ ಸಮಾಜದ ಬಗ್ಗೆ ಹೇಳ್ತಾ ಇರೊದು ನಾನು. ತುಂಬಾ ತಿಳಿದವರು ಅನ್ಕೊಂಡವರ ಪ್ರತಿಕ್ರಿಯೆಗಳು ಕೂಡ ನಮಗೆ ಆಶ್ಚರ್ಯ ಹುಟ್ಟಿಸೊ ರೀತಿಯದ್ದಾಗಿತ್ತು. ಅದನ್ನ ನಾವಿಬ್ಬರೂ ಸ್ವಲ್ಪ ತಮಾಷೆಯಾಗಿ ತಗೊಂಡು ಜೀವನ ಸಹ್ಯ ಮಾಡ್ಕೊಂಡ್ವಿ. ನಾವು ಒಬ್ಬರಿಗೊಬ್ಬರು ತುಂಬಾ comfortable ಆಗಿರೊದ್ರಿಂದ ಮಾತ್ರ ಇದನ್ನ handle ಮಾಡೊಕಾಯ್ತು. ನಮ್ಮ ದೌರ್ಬಲ್ಯದ ಬಗ್ಗೆನೂ judgement ಇಲ್ಲದೆ ಮಾತಾಡ್ಕೊಳೊಕೆ ಜಾಗ ಇರೊ ಸಂಬಂಧನೇ ಗಟ್ಟಿಯಾದ ಸಂಬಂಧ ಅಂತ ಈಗ ಅನ್ನಿಸ್ತಾ ಇದೆ.
‘ನಮ್ಮದು ಗಡಿ ಮೀರಿದ ಪ್ರೀತಿ’ –ಚುಕ್ಕಿ ನಂಜುಂಡಸ್ವಾಮಿ, ರೈತ ನಾಯಕಿ
‘ಗಡಿಗಳಿಲ್ಲದ ಜಗತ್ತನ್ನು ಕಟ್ಟಬೇಕು’ ಎಂಬುದು ಡಾ.ರಾಮಮನೋಹರ ಲೋಹಿಯಾ ಅವರ ವಾದವಾಗಿತ್ತು. ನನ್ನ ತಂದೆ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರು ‘ದೇಶಗಳ ನಡುವೆ ಸಂಚಾರಕ್ಕೆ ಪಾಸ್‌ಪೋರ್ಟ್ ಯಾಕೆ ಬೇಕು’ ಎಂದು ಕೇಳುತ್ತಿದ್ದರು. ‘ಗಡಿಗಳಿರಬಾರದು, ಬೆಸೆಯುವ ಸೇತುವೆಗಳು ಮಾತ್ರ ಇರಬೇಕು’ ಎಂಬುದು ನನ್ನ ದೃಢ ನಿಲುವು.
ನನ್ನ ಮತ್ತು ಪತಿ ಲೂಕಾ ನಡುವಿನದ್ದು ಜಾತಿ, ಧರ್ಮ, ಸಂಸ್ಕೃತಿ, ಗಡಿ ಮೀರಿದ ಪ್ರೀತಿ, ಸ್ನೇಹ. ನಾನು ರೈತ ಚಳವಳಿಯಲ್ಲಿ ತಂದೆಯವರ ಜೊತೆ ಓಡಾಡಿದವಳು. ಲೂಕಾ, ಇಟಲಿಯಲ್ಲಿ ನಗರ ಪ್ರದೇಶಗಳ ಬಡವರು, ನಿರಾಶ್ರಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿದವರು. ತಂದೆಯವರೇ ಅವರನ್ನು ನನಗೆ ಪರಿಚಯಿಸಿದ್ದರು.
2004ರಲ್ಲಿ ಇಟಲಿಯಲ್ಲಿ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಹೋಗಿದ್ದೆ. ಭಾರತಕ್ಕೆ ವಾಪಸ್ ಆಗಲು ಹೊರಟ ನನಗೆ ವಿಮಾನ ತಪ್ಪಿ ಹೋಯಿತು. ಹೋಟೆಲ್‌ಗಳಲ್ಲಿ ಉಳಿಯುವಷ್ಟು ಹಣ ಇರಲಿಲ್ಲ. ಲೂಕಾ ಅವರಿಗೆ ಕರೆ ಮಾಡಿದಾಗ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಅದೇ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಲೂಕಾ ಮತ್ತವರ ತಂಡದವರು ಬುಷ್ ವಿರುದ್ಧ ಹೋರಾಟ ರೂಪಿಸುತ್ತಿದ್ದರು. ಅದಕ್ಕೆ ನನ್ನನ್ನೂ ಕರೆದುಕೊಂಡು ಹೋಗಿದ್ದರು. ಆಗ ಇಬ್ಬರ ನಡುವೆ ಹೆಚ್ಚು ಮಾತುಕತೆ, ಸ್ನೇಹ ಆಯಿತು.
ನಾನು ಮುಕ್ತ ವಾತಾವರಣದಲ್ಲಿ ಬೆಳೆದವಳು. ತಂದೆ, ತಾಯಿ ಇಬ್ಬರೂ ಪೂರ್ಣ ಸ್ವಾತಂತ್ರ್ಯ ನೀಡಿದ್ದರು. ನಾನು ಕ್ರಾಂತಿಕಾರಿ ನಿಲುವುಗಳನ್ನು ಹೊಂದಿದ್ದೆ. ಬದುಕಿನಲ್ಲಿ ಗೆಳೆಯನಂತಿರುವ ಸಂಗಾತಿಯನ್ನು ಬಯಸಿದ್ದೆ. ದೇಶದ ಪುರುಷರ ಬಗ್ಗೆ ನನಗೆ ಭಯ ಇತ್ತು. ನನ್ನ ಮೇಲೆ ಹಕ್ಕು ಸಾಧಿಸುವ ವ್ಯಕ್ತಿಯನ್ನು ಮದುವೆಯಾದರೆ ‘ನನ್ನತನ’ ಕಳೆದುಕೊಳ್ಳುತ್ತೇನೆ ಎಂಬ ಚಿಂತೆ ಕಾಡುತ್ತಿತ್ತು. ಹಾಗಾಗಿ, ಮದುವೆಯ ಬಗ್ಗೆ ಸಣ್ಣ ಅಂಜಿಕೆ ಇತ್ತು. ಆ ವೇಳೆಗಾಗಲೇ ನಾನು ಮತ್ತು ಲೂಕಾ ಪರಸ್ಪರ ಅರ್ಥ ಮಾಡಿಕೊಂಡಿದ್ದೆವು. ನಮ್ಮ ಹೋರಾಟದ ನಿಲುವುಗಳು ಸ್ನೇಹವನ್ನು ಗಟ್ಟಿಗೊಳಿಸಿದ್ದವು. ನನಗೆ ಇಲ್ಲಿ ಅಮೃತಭೂಮಿ, ರೈತ ಸಂಘದ ಜವಾಬ್ದಾರಿಗಳಿದ್ದವು. ಹಾಗಾಗಿ, ಇಟಲಿಗೆ ಹೋಗುವುದಕ್ಕೆ ಸಾಧ್ಯವಿರಲಿಲ್ಲ. ಆದರೆ, ಅವರೇ ಇಲ್ಲಿಗೆ ಬರಲು ನಿರ್ಧರಿಸಿದರು. 2007ರಲ್ಲಿ ಮದುವೆ ಆಯಿತು.
ಮದುವೆಯಾಗುವ ಹೊತ್ತಿಗೆ ತಂದೆ, ತಾಯಿ ಇಬ್ಬರೂ ನಮ್ಮೊಂದಿಗೆ ದೈಹಿಕವಾಗಿ ಇರಲಿಲ್ಲ. ಕುಟುಂಬದ ಯಾರಿಂದಲೂ ವಿರೋಧವೂ ಬರಲಿಲ್ಲ. ನನ್ನ ಮತ್ತು ಲೂಕಾ ಜೀವನಶೈಲಿ, ಆಹಾರ ಸಂಸ್ಕೃತಿ ಎಲ್ಲವೂ ಭಿನ್ನ. ಹಾಗಿದ್ದರೂ ನಮ್ಮ ನಡುವೆ ಸಾಂಸ್ಕೃತಿಕ ಸಂಘರ್ಷ ಎಂಬುದು ಬರಲೇ ಇಲ್ಲ.
2010ರಲ್ಲಿ ಮಗ ‘ತೆನೆ’ ಹುಟ್ಟಿದ. ಪ್ರಾಥಮಿಕ ಹಂತದವರೆಗೂ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು ಎಂಬುದು ನಮ್ಮ ನಿರ್ಧಾರವಾಗಿತ್ತು. ಚಾಮರಾಜನಗರದ ದೀನಬಂಧು ಶಾಲೆಗೆ ಸೇರಿಸಿದ್ದೆವು. ಈಗ 8ನೇ ತರಗತಿಗೆ ಮೈಸೂರಿನಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಹೋಗುತ್ತಿದ್ದಾನೆ. ನಮ್ಮ ‘ಗಡಿ ಮೀರಿದ ಪ್ರೀತಿ’ಯಿಂದ ಮಗನಿಗೂ ಸಮಸ್ಯೆಯಾಗಿಲ್ಲ. ಲೂಕಾ ಮಗನಿಗೆ ಇಟಾಲಿಯನ್ ಭಾಷೆ ಕಲಿಸಿದ್ದಾರೆ. ಇಲ್ಲಿನ ಕನ್ನಡ, ಹಿಂದಿ, ಇಂಗ್ಲಿಷ್ ಕಲಿತಿದ್ದಾನೆ. ಸ್ವಲ್ಪ ಸ್ವಲ್ಪ ಮರಾಠಿಯೂ ಮಾತನಾಡುತ್ತಾನೆ.
ನಮ್ಮ ಪ್ರೀತಿ, ಮದುವೆಗೆ ಯಾವ ಅಡ್ಡಿ –ಆತಂಕವೂ ಬರಲಿಲ್ಲ. ನಾವು ನಮ್ಮ ನಿಲುವಿಗೆ ಬದ್ಧರಾಗಿದ್ದುದು ಮತ್ತು ಮನೆಯಲ್ಲಿ ಅಂತಹ ವಾತಾವರಣ ಇದ್ದುದು ಅದಕ್ಕೆ ಕಾರಣ. ಆದರೆ, ನಮ್ಮ ಸಮಾಜ ಈಗಲೂ ಅಂತರ್ಜಾತಿ, ಅಂತರಧರ್ಮೀಯ ಮದುವೆಯನ್ನು ಮುಕ್ತವಾಗಿ ಸ್ವೀಕರಿಸುತ್ತಿಲ್ಲ. ಮರ್ಯಾದೆಗೇಡು ಹತ್ಯೆಗಳು, ಸಮಾಜದ ವಿರೋಧ, ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಜಾತಿ, ಧರ್ಮ ಮೀರಿ ಮದುವೆಯಾಗಲು ಹೊರಟವರು ತಮ್ಮ ನಿರ್ಧಾರದ ಬಗ್ಗೆ ನಂಬಿಕೆ ಇಟ್ಟಿರಬೇಕು ಎಂಬುದು ಒಂದು ವಿಚಾರವಾದರೆ, ಇಂತಹ ಜೋಡಿಗಳನ್ನು ರಕ್ಷಿಸಲು ಸಾಂಸ್ಥಿಕವಾದ ವ್ಯವಸ್ಥೆಯ ಅಗತ್ಯವೂ ಇದೆ.
ನಿರೂಪಣೆ: ಸೂರ್ಯನಾರಾಯಣ ವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.