ಒಂದು ಊರಿನ ಮೊದಲ ದರ್ಶನ ಮಾಡಿಸುವ ವಾಹನಗಳಲ್ಲಿ ಆಟೊ ಮುಖ್ಯವಾದುದು. ಬರುವ ಅತಿಥಿಗಳನ್ನೋ, ತಮ್ಮದೇ ಊರಿನವರನ್ನೋ ಹೊತ್ತು ಸಾಗುವ ಆಟೊ ಚಾಲಕರು ದೇಸಿಭಾಷೆಯಲ್ಲಿ ಅನುಭವ ಹಂಚಿಕೊಳ್ಳುವುದನ್ನು ಎಷ್ಟೋ ಕಡೆ ನೋಡುತ್ತೇವೆ. ಹಾಗೆ ಕುಶಲೋಪರಿಯ ರೀತಿ ತೆರೆದುಕೊಳ್ಳುವ ಸಂಭಾಷಣೆ ವಿಚಾರ ವಿನಿಮಯವಾಗಿ ವಿಸ್ತರಣೆಯಾಗಲೂಬಹುದು. ಆಟೊ ಚಾಲಕರ ಸಂವಾದದ ಮಾತು ಒಂದು ಕಡೆ. ಜನರು ಹತ್ತುವ ಇಂತಹ ಆಟೊಗಳು ಚೆಂದವಾಗಿರಬೇಕು, ಭಿನ್ನವಾಗಿರಬೇಕು ಎಂದು ಬಯಸುವ ಚಾಲಕರಿಗೂ ಕೊರತೆ ಇಲ್ಲ.
ಆಟೊಗಳ ವಿನ್ಯಾಸ ಒಂದೊಂದು ಊರಲ್ಲಿ ಒಂದೊಂದು ಬಗೆ. ಕರ್ನಾಟಕದ ಬಹುತೇಕ ನಗರಗಳಲ್ಲಿ ಕಂಡುಬರುವ ಆಟೊಗಳ ಸ್ವರೂಪಕ್ಕೆ ಹೋಲಿಸಿದರೆ, ಮಧ್ಯ ಕರ್ನಾಟಕದ ಪ್ರಮುಖ ನಗರವಾದ ದಾವಣಗೆರೆಯಲ್ಲಿನ ಆಟೊಗಳ ಸ್ವರೂಪ ಸಂಪೂರ್ಣ ಭಿನ್ನ. ಮುಂಭಾಗದಿಂದ ಹಿಂಭಾಗದತ್ತ ಇಳಿಜಾರಾಗಿರುವಂತೆ ಆಟೊಗಳ ಮೇಲಿನ ಹೊದಿಕೆ ಮೊದಲ ನೋಟಕ್ಕೆ ಕಾಣುತ್ತದೆ. ಹೆಚ್ಚು ಮಳೆ ಸುರಿಯುವ ಪ್ರದೇಶದಲ್ಲಿ ಕಂಡುಬರುವ ಹೆಂಚಿನ ಮನೆಗಳ ಇಳಿಜಾರನ್ನು ಈ ಆಟೊಗಳ ಚಾವಣಿಯ ವಿನ್ಯಾಸ ನೆನಪಿಸುತ್ತದೆ. ಇಂತಹ ವಿನ್ಯಾಸಕ್ಕೆ ಆಟೊ ಓಡಿಸುವವರ ಶೋಕಿಯೊಂದೇ ಕಾರಣ ಎನ್ನುವುದು ಚಾಲಕರನ್ನು ಹಾಗೂ ಈ ರೀತಿ ವಿನ್ಯಾಸ ಮಾಡುವವರನ್ನು ಕೇಳಿದರೆ ತಿಳಿಯುತ್ತದೆ.
ಜೀವನೋಪಾಯಕ್ಕೆಂದು ಹೊಸ ಅಥವಾ ಸೆಕೆಂಡ್ ಹ್ಯಾಂಡ್ ಆಟೊ ಖರೀದಿಸುವ ಇಲ್ಲಿನ ಯುವಕರು, ಆ ಆಟೊಗಳ ಅಂದ ಹೆಚ್ಚಿಸಲು ಐವತ್ತು ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ಹಣ ವ್ಯಯಿಸುತ್ತಾರೆ. ದಾವಣಗೆರೆಯಲ್ಲಿ ಸಂಚರಿಸುವ ಮುಕ್ಕಾಲು ಪಾಲು ಆಟೊಗಳ ಆಕಾರ ಇದರಿಂದಾಗಿಯೇ ಆಕರ್ಷಣೀಯವೆನಿಸುತ್ತದೆ.
ಅಂದಾಜು ಎರಡರಿಂದ ಎರಡೂವರೆ ಲಕ್ಷ ರೂಪಾಯಿ ಕೊಟ್ಟು ಆಟೊ ಖರೀದಿಸುವ ಚಾಲಕರು, ನೇರವಾಗಿ ಅವುಗಳನ್ನು ಅಂದಗಾಣಿಸುವ ವಿನ್ಯಾಸಗಾರರ ಬಳಿಗೆ ತೆಗೆದುಕೊಂಡು ಹೋಗುವುದು ವಾಡಿಕೆ. ಆಟೊಗಳ ಹೊರಮೈನಲ್ಲಿ ರಾತ್ರಿ ಹೊತ್ತು ಎದ್ದು ಕಾಣುವಂತಹ ಲೈಟಿಂಗ್ ಅಳವಡಿಕೆ, ಹಿಂಭಾಗ ಮತ್ತು ಮುಂಭಾಗ ಕಂಡೊಡನೆಯೇ ಮನ ಸೆಳೆಯುವ ಮಾದರಿಯ ಪೇಂಟಿಂಗ್ ಮತ್ತು ಗಮನ ಸೆಳೆಯುವಂಥ ಸಾಲುಗಳನ್ನು ಆಟೊಗಳ ಮೇಲೆ ಬರೆಸುವುದಕ್ಕೆ ಯುವಕರ ನಡುವೆ ಪೈಪೋಟಿಯೇ ಇದೆ. ಒಳಗೆ ಕುಳಿತು ಪ್ರಯಾಣ ಮಾಡುವವರಿಗೆ ಹಿತಾನುಭವ ಕಲ್ಪಿಸುವ ಕುಷನ್ ವರ್ಕ್‌ಗೆ ಆದ್ಯತೆ ನೀಡುವವರು ಕೂಡ ಇದ್ದಾರೆ. ಆಸನ, ಚಾವಣಿಯ ಒಳಗಿನ ಭಾಗದ (ಸೀಲಿಂಗ್) ವಿನ್ಯಾಸವೂ ವಿಭಿನ್ನವಾಗಿ ಇರುವಂತೆಯೇ ನೋಡಿಕೊಂಡು, ಐಷಾರಾಮಿ ವಾಹನಗಳಲ್ಲಿನ ‘ಸುಖಾಸೀನ’ ವ್ಯವಸ್ಥೆ ಅಳವಡಿಸುವುದು ಇಲ್ಲಿನ ವೈಶಿಷ್ಟ್ಯ. ಇಪ್ಪತ್ತು ವರ್ಷಗಳಿಂದ ವಾಹನಗಳ ವಿನ್ಯಾಸದ ಕೆಲಸದಲ್ಲಿ ತೊಡಗಿರುವ ಸಾದಿಕ್ ಇಂತಹ ಸಣ್ಣಪುಟ್ಟ ವಿವರವನ್ನೆಲ್ಲ ಉತ್ಸಾಹದಿಂದ ಹೇಳುತ್ತಾರೆ.
ಇಲ್ಲಿನ ಆಟೊಗಳ ಮುಂಭಾಗದ ಎತ್ತರ ಇತರೆಡೆ ಕಂಡುಬರುವ ಸಾಮಾನ್ಯ ಆಟೊಗಳಂತಿರದೆ, ಒಂದರಿಂದ ಒಂದೂವರೆ ಅಡಿಯಷ್ಟು ಹೆಚ್ಚು ಎತ್ತರವಾಗಿರುತ್ತದೆ. ಹೀಗೆ ವಿಶೇಷ ರೂಪ ನೀಡುವ ಪರಿಣತರ ತಂಡವೇ ಇಲ್ಲಿ ಕೆಲಸ ಮಾಡುತ್ತಿದೆ. ಆಟೊಗಳ ಚಾಸಿ ಎತ್ತರಿಸುವ ಮೂಲಕ ಮುಂಭಾಗವನ್ನು ತುಸು ಏರು ಸ್ತರದಲ್ಲಿ ಇರುವಂತೆ ಮರು ವಿನ್ಯಾಸ ಮಾಡಲಾಗುತ್ತದೆ. ಇದರಿಂದ ಆಟೊದ ಸ್ವರೂಪವೇ ಬದಲಾಗುತ್ತದೆ. ಹೀಗೆ ಮುಂಭಾಗ ಎತ್ತರವಾಗುವುದರಿಂದ ಒಳಗೆ ಕುಳಿತುಕೊಳ್ಳುವ ಚಾಲಕರಿಗೆ ಆರಾಮದಾಯಕ ಅನುಭವ ದೊರೆಯುತ್ತದೆ. ಆದರೆ, ಚಾಲನೆಯ ವೇಳೆ ಮೈಯೆಲ್ಲ ಕಣ್ಣಾಗಿರಬೇಕು. ವೇಗವಾಗಿ ಸಾಗುವಾಗ ಹೆಚ್ಚು ಕಡಿಮೆ ಆಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಅನೇಕ ವರ್ಷಗಳಿಂದ ಆಟೊಗಳ ವಿನ್ಯಾಸ ಗಮನಿಸುತ್ತಾ ಬಂದಿರುವ ಯಡಿಯೂರು ಸ್ವಾಮಿ ಹೇಳುತ್ತಾರೆ.
ಒಂದೂವರೆ ದಶಕದಿಂದ ಹೆಚ್ಚಾದ ಖಯಾಲಿ
‘ಆಟೊಗಳ ಅಲಂಕಾರಕ್ಕೆ ದಾವಣಗೆರೆಯವರು ಮಹತ್ವ ನೀಡಿದಷ್ಟು ರಾಜ್ಯದ ಬೇರೆಡೆಯವರು ನೀಡಿದ್ದನ್ನು ನಾನು ಕಂಡಿಲ್ಲ. 20 ವರ್ಷಗಳ ಹಿಂದೆ ಇಂಥ ಖಯಾಲಿ ಇಲ್ಲಿ ಅಪರೂಪ ಎಂಬಂತಿತ್ತು. ಕಳೆದ ಒಂದೂವರೆ ದಶಕದಿಂದ ಈಚೆಗೆ ಈ ಖಯಾಲಿ ಅನೇಕ ಆಟೊ ಚಾಲಕರಲ್ಲಿ ಕಂಡುಬರುತ್ತಿದೆ. ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ, ತಮ್ಮ ಆಟೊ ಎದ್ದು ಕಾಣಬೇಕೆಂಬ ಹಂಬಲವೇ ಇದಕ್ಕೆ ಪ್ರೇರಣೆ’ ಎಂದು 35 ವರ್ಷಗಳಿಂದ ನಗರದಲ್ಲಿ ಆಟೊ ಚಾಲನೆಯ ವೃತ್ತಿಯಲ್ಲಿರುವ ಸನಾವುಲ್ಲಾ ಶೇಖ್ ಅನುಭವ ಹಂಚಿಕೊಂಡರು.
ದಾವಣಗೆರೆ ಹೊರತುಪಡಿಸಿದರೆ ಪಕ್ಕದ ಚಿತ್ರದುರ್ಗ ನಗರ ಮತ್ತು ಚನ್ನಗಿರಿ ಪಟ್ಟಣಗಳಲ್ಲಿ ಇದೇ ರೀತಿ ಆಟೊಗಳ ಅಲಂಕಾರಕ್ಕೆ ಪ್ರಾಶಸ್ತ್ಯ ನೀಡಲಾಗುತ್ತದೆ. ಆದರೆ, ಅಂಥ ಆಟೊಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಸಂಕ್ರಾಂತಿ ಹಾಗೂ ಕಾರಹುಣ್ಣಿಮೆಗೆ ಅಣಿಯಾಗುವ ಹೋರಿಯಂತೆ, ಜಾತ್ರೆಗೆ ಸಿದ್ಧಗೊಳ್ಳುವ ತೇರಿನಂತೆ ಆಟೊಗಳನ್ನು ಸಿಂಗರಿಸುವ ಆಟೊ ಚಾಲಕರಿಗೆ ಈ ವಿಷಯದಲ್ಲಿ ಹಿಂಜರಿಕೆಯೇ ಇಲ್ಲ ಎಂದೂ ಅವರು ಮಾತು ಸೇರಿಸಿದರು.
ಆಟೊ ಒಳಾಂಗಣದ ಅಂದ ಹೆಚ್ಚಿಸಲು ಪ್ಲೈವುಡ್ ಪಿಒಪಿ (ಒಳ ಚಾವಣಿಯ ವಿನ್ಯಾಸಕ್ಕೆ ಈ ಪದ ಪರ್ಯಾಯವೇ ಆಗಿದೆ) ಅಳವಡಿಸಿ ಅದರಲ್ಲೂ ಲೈಟಿಂಗ್‌ಗೆ ಆದ್ಯತೆ ನೀಡಲಾಗುತ್ತದೆ. ಹೊರಮೈ ಮತ್ತು ಒಳಮೈಗೆ ಎಲ್‌ಇಡಿ ಲೈಟ್‌ಗಳನ್ನು ಬಳಸುವುದು ಇತ್ತೀಚಿನ ಶೋಕಿ.
ಒಳಗೆ ಸೌಂಡ್ ಸಿಸ್ಟಂ ಅಳವಡಿಕೆಯೂ ಖರ್ಚಿನ ಬಾಬತ್ತು. ಅವರವರ ಸಾಮರ್ಥ್ಯಕ್ಕೆ ಅನುಗುಣವಾದ ಸ್ಪೀಕರ್‌ಗಳು ಲಭ್ಯವಿದ್ದು, ಡಿ.ಜೆ. ಅನುಭವ ನೀಡುವ ಸ್ಪೀಕರ್‌ಗಳಿಗೆ ಈಗ ಆದ್ಯತೆ. ಜೊತೆಗೆ ಆಟೊದ ಹ್ಯಾಂಡಲ್ ಮೇಲೆ ಸ್ಟೀರಿಂಗ್ ಅಳವಡಿಕೆ ಹೊಸ ಸೇರ್ಪಡೆಯಾಗಿದೆ. ಸೆಲ್ಫ್ ಸ್ಟಾರ್ಟರ್ ಸೌಲಭ್ಯ ಬೇಕೆಂದರೆ ಈ ಸ್ಟೀರಿಂಗ್ ಬೇಕೇಬೇಕು. ಅದರ ಮೇಲೆ ಸ್ವಲ್ಪ ಜಾಗವನ್ನು ಮೊಬೈಲ್ ಸ್ಟ್ಯಾಂಡ್‌ಗೆ ಮೀಸಲಿಡಲಾಗುತ್ತದೆ. ಸಿ.ಸಿ.ಟಿ.ವಿ ಕ್ಯಾಮೆರಾ, ಡಿಜಿಟಲ್ ಪೇಮೆಂಟ್ ಕ್ಯೂಆರ್ ಕೋಡ್ ಶೀಟ್‌ಗಳನ್ನೂ ಕೆಲವರು ಹಾಕಿಸಿದ್ದಾರೆ.
ಇನ್ನು ಸೀಟಿಂಗ್‌ನಲ್ಲಿ ವಿವಿಧ ಬಗೆಯುಂಟು. ಐಷಾರಾಮಿ ಕಾರ್‌ಗಳಲ್ಲಿ ಇರುವಂತೆಯೇ ಆಟೊಗಳ ಸೀಟಿಂಗ್‌ಗೆ ಕುಷನ್ ಹಾಕಿಸುವವರೂ ಇದ್ದಾರೆ.
ಚಕ್ರ (ವ್ಹೀಲ್)ಗಳಿಗೆ ಸ್ಟೀಲ್ ಅಥವಾ ಅಲ್ಯುಮಿನಿಯಂ ಕ್ಯಾಪ್ ಬಳಸಲಾಗುತ್ತದೆ. ಅದೂ ಆಟೊಗಳನ್ನು ಮಿರಮಿರ ಮಿಂಚುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಮೆಕ್ಯಾನಿಕ್‌ಗಳ ಹೇಳಿಕೆ. ಇದರ ಜೊತೆಜೊತೆಗೇ ಕನ್ನಡಿಗಳ (ಸೈಡ್, ಫ್ರಂಟ್, ಬ್ಯಾಕ್ ಮಿರರ್) ಜೋಡಣೆ ಕೂಡ ಮೆರುಗನ್ನು ನೀಡುತ್ತದೆ.
ಆಟೊಗಳ ಔಟ್‌ಲುಕ್‌ಗೆ ಆ್ಯಂಟೆನಾಗಳನ್ನು ಬಳಸಲಾಗುತ್ತದೆ. ಅದರಲ್ಲಿ ‘ಜಿಂಕೆ ಕೊಂಬು’ ಎಂಬುದು ಲುಕ್ ಮತ್ತು ಖದರ್ ಹೆಚ್ಚಿಸಲು ಪ್ರಮುಖವಾದದ್ದು ಎಂಬ ನಂಬಿಕೆಯೂ ಇಲ್ಲಿನ ಚಾಲಕರಲ್ಲಿದೆ. ಈ ಕೊಂಬು ಅಸಲಿ ಜಿಂಕೆಯದ್ದಲ್ಲ; ಅಲ್ಯುಮಿನಿಯಂ ಅಥವಾ ಸ್ಟೀಲ್ ಲೋಹದಿಂದ ಸಿದ್ಧವಾದದ್ದಾಗಿರುತ್ತದೆ. ಕೆಲವರು ಕಾರ್‌ಗಳ ಲೋಗೊಗಳ ನಕಲಿ ಮಾದರಿಗಳನ್ನು ಅಳವಡಿಸುತ್ತಾರೆ. ಜಾಗ್ವಾರ್‌ನ ಲೋಗೊ ಅಂಥವುಗಳಲ್ಲಿ ಪ್ರಮುಖವಾದುದು.
ಆ್ಯಂಟೇನಾ ಔಟ್‌ಲುಕ್ ಎಂಬುದು ಮತ್ತೊಂದು ವಿಧದ ಅಲಂಕಾರ. ಇದಕ್ಕಾಗಿ ಹಲವು ಬಗೆಯ ‘ಏರಿಯಲ್’ಗಳ ಬಳಕೆ ಮಾಡುತ್ತಾರೆ. ಅದರಲ್ಲಿ ‘ಬುಲೆಟ್ ಏರಿಯಲ್’ಗೆ ಪ್ರಾಶಸ್ತ್ಯ. ಆಟೊಗಳ ಮೇಲೆ ಕಡ್ಡಿಯಂಥ ಹತ್ತಾರು ಏರಿಯಲ್‌ಗಳು ರಾರಾಜಿಸುತ್ತಿರುತ್ತವೆ. ಆದರೆ, ಯಾವುದೂ ತಾಂತ್ರಿಕವಾಗಿ ಏನೂ ಕೆಲಸ ಮಾಡುವುದಿಲ್ಲ.
ಶೋ ಹಾರ್ನ್, ಕಾರ್ ಬಂಪರ್, ಸ್ಟೀಲ್ ಮಡ್ ಗಾರ್ಡ್, ಸ್ಟೀಲ್ ಲ್ಯಾಡರ್, ಕ್ರೋಮಿಯಂ ಹಾರ್ನ್ ಅಳವಡಿಸುವಂತೆ ದುಂಬಾಲು ಬೀಳುವವರೇ ಅಧಿಕ ಎನ್ನುವುದನ್ನು ಅಂದಗಾಣಿಸುವ ಕಾಯಕದಲ್ಲಿ ನಿರತರಾದವರು ಸ್ಪಷ್ಟಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.