ADVERTISEMENT

ಜೀವಸತ್ವ ಉಣಿಸಿದ ಸಂಗೀತಗಾರರು...

ಪ್ರಜಾವಾಣಿ ವಿಶೇಷ
Published 19 ಆಗಸ್ಟ್ 2023, 23:30 IST
Last Updated 19 ಆಗಸ್ಟ್ 2023, 23:30 IST
ಬಾಂಬೆ ಜಯಶ್ರೀ, ಭೀಮಸೇನ ಜೋಷಿ, ಬಾಲಮುರಳೀಕೃಷ್ಣ, ಟಿ.ಎನ್‌.ಕೃಷ್ಣನ್‌ 
ಬಾಂಬೆ ಜಯಶ್ರೀ, ಭೀಮಸೇನ ಜೋಷಿ, ಬಾಲಮುರಳೀಕೃಷ್ಣ, ಟಿ.ಎನ್‌.ಕೃಷ್ಣನ್‌    

ವಸುಧೇಂದ್ರ

ಕಥನ ಸಾಹಿತ್ಯ ರಚಿಸುವವರಿಗೆ ಗುರು-ಶಿಷ್ಯ ಸಂಬಂಧ ‘ದ್ರೋಣ-ಏಕಲವ್ಯ’ರ ಸಂಬಂಧವಿದ್ದಂತೆ. ದೈಹಿಕವಾಗಿ ಗುರುಗಳು ಶಿಷ್ಯನ ಜೊತೆ ಇರಬೇಕೆಂದೇನೂ ಇಲ್ಲ. ಏಕಲವ್ಯನಿಗೆ ದ್ರೋಣರ ಮೂರ್ತಿ ಗುರುರೂಪಕವಾದರೆ, ನಮಗೆ ನಮ್ಮ ಹಿರಿಯ ಸಾಹಿತಿಗಳ ಪುಸ್ತಕಗಳು. ಆದ್ದರಿಂದ ನಮ್ಮ ಕಾಲದಲ್ಲಿ ಬದುಕಿ-ಬಾಳದವರೂ ನಮ್ಮ ಗುರುಗಳಾಗಬಹುದು. ಪಂಪ, ಕುಮಾರವ್ಯಾಸ, ರಾಘವಂಕ, ಪುರಂದರರನ್ನು ಈಗಲೂ ಗುರುವಾಗಿಸಿಕೊಂಡಿರುವ ಅನೇಕ ಶಿಷ್ಯರಿದ್ದಾರೆ, ಮುಂದೆಯೂ ಇರುತ್ತಾರೆ. ಹದಿನೇಳನೇ ಶತಮಾನದ ಶೇಕ್ಸ್‌ಪಿಯರ್‌ಗೆ ಶಿಷ್ಯನಾಗದ ಯಾವ ಆಧುನಿಕ ನಾಟಕಕಾರನೂ ನನಗೆ ಕಂಡಿಲ್ಲ. ಅಷ್ಟೇ ಅಲ್ಲದೆ, ಒಬ್ಬ ಶಿಷ್ಯನಿಗೆ ಏಕಕಾಲಕ್ಕೆ ಯಾವುದೇ ಸಮಸ್ಯೆಯಿಲ್ಲದಂತೆ ಹಲವಾರು ಗುರುಗಳು ಇರಬಹುದು! ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪ - ಇತ್ಯಾದಿ ಕಲಾಪ್ರಕಾರಗಳಲ್ಲಿ ಇಂತಹ ಅನುಕೂಲವಿಲ್ಲ. ಕರ್ನಾಟಕ ಸಂಗೀತ ಕಲಿಯುವವರು ತ್ಯಾಗರಾಜರನ್ನು ಗುರುವೆಂದು ಸ್ವೀಕರಿಸಿ ಅವರ ಪಟವನ್ನು ಪ್ರತಿಷ್ಠಾಪಿಸಿಕೊಂಡರೂ, ದೈನಂದಿನ ಕಲಿಕೆಯಲ್ಲಿ ಕೈ ಹಿಡಿದು ನಡೆಸುವ ಗುರುಗಳೊಬ್ಬರು ಅವರಿಗೆ ಬೇಕೇ ಬೇಕು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎನ್ನುವುದು ಅವರಿಗೆ ಅಕ್ಷರಶಃ ಒಪ್ಪುತ್ತದೆ. ಆದ್ದರಿಂದ ಅಲ್ಲಿ ಗುರು-ಶಿಷ್ಯರ ಸಂಬಂಧ ಅತ್ಯಂತ ಗಾಢವಾದದ್ದು. ಜೊತೆಗೆ ಏಕಕಾಲಕ್ಕೆ ಒಬ್ಬ ಗುರುಗಳ ಜೊತೆಯೇ ಶಿಷ್ಯತ್ವ ನಡೆಯುತ್ತಿರುತ್ತದೆ.

ಕತೆಗಾರನಾಗಿ ನನಗೆ ಮತ್ತೊಂದು ವಿಶೇಷ ಸಂಗತಿಯೂ ಗೋಚರಿಸುತ್ತದೆ. ಸಾಹಿತ್ಯದ ಸೂಕ್ಷ್ಮಗಳನ್ನು ಕಲಿಯಲು ನನಗೆ ಸಾಹಿತಿಗಳೇ ಗುರುಗಳಾಗಬೇಕೆನ್ನಿಸುವುದಿಲ್ಲ. ಇತರ ಕಲಾಪ್ರಕಾರದಲ್ಲಿ ಸಾಧನೆ ಮಾಡಿದ ಯಾರೇ ಹಿರಿಯರು ನನಗೆ ಮಾರ್ಗದರ್ಶನ ಮಾಡಬಹುದು ಅನ್ನಿಸುತ್ತದೆ. ಇದೊಂದು ತರಹ ಸರಸ್ವತಿಯ ಮೂರ್ತಿಯನ್ನು ಇಟ್ಟುಕೊಂಡು ಏಕಲವ್ಯನು ಬಿಲ್ವಿದ್ಯೆಯನ್ನು ಅಭ್ಯಾಸ ಮಾಡಿದಂತೆ! ಇಂತಹ ಯೋಚನೆ ನಿಮಗೆ ಅಸಂಬದ್ಧ ಎನ್ನಿಸಬಹುದಾದರೂ, ನನಗೆ ಅಂತಹ ಹಲವಾರು ಅನುಭವಗಳು ಆಗಿವೆ. ಎಲ್ಲ ಕಲೆಗಳು ಸವೆಸುವ ದಾರಿಗಳು ವಿಭಿನ್ನವಾದರೂ, ಅಂತಿಮವಾಗಿ ಅವುಗಳ ಗುರಿ ಒಂದೇ ಆಗಿರುತ್ತದೆ. ಆ ನಿಟ್ಟಿನಿಂದ ಭಿನ್ನ ಕಲಾತಪಸ್ವಿಗಳು ತಮ್ಮ ಪಯಣದ ಅನುಭವಗಳನ್ನು ಹಂಚಿಕೊಂಡಾಗ, ನಮ್ಮ ಪಯಣಕ್ಕೆ ತಕ್ಕಂತೆ ಅವನ್ನು ರೂಪಾಂತರಿಸಿ ಅಳವಡಿಸಿಕೊಳ್ಳಬಹುದಾಗಿದೆ. ಅಂತಹ ಹಲವಾರು ಸಂಗತಿಗಳನ್ನು ಈ ಬರಹದಲ್ಲಿ ನಿಮ್ಮೊಡನೆ ಹಂಚಿಕೊಳ್ಳುವೆ.

ADVERTISEMENT

ನನಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕೇಳುವ ಹವ್ಯಾಸವಿದೆ. ನಿತ್ಯ ಒಂದೆರಡು ತಾಸಾದರೂ ಕೇಳುತ್ತೇನೆ. ನನಗೆ ಹಾಡಲು ಬರುವುದಿಲ್ಲ ಎನ್ನುವ ಖೇದವಿದೆಯಾದರೂ, ಹಾಡುವವರ ಕಂಠಶ್ರೀಯನ್ನು ಕೇಳಿ ಸಂತೋಷಗೊಳ್ಳುವ ಸೌಭಾಗ್ಯವನ್ನು ರೂಢಿಸಿಕೊಂಡಿದ್ದೇನೆ. ಮುಖ್ಯವಾದ ರಾಗಗಳನ್ನು ಗುರುತಿಸುವುದು, ಕೀರ್ತನೆಯ ಅರ್ಥವನ್ನು ತಿಳಿದುಕೊಳ್ಳುವುದು, ಸಂಗೀತಗಾರರ ಜೀವನಚರಿತ್ರೆಗಳನ್ನು ಓದುವುದು- ನನ್ನ ಹವ್ಯಾಸಗಳಾಗಿವೆ. ಸಾಮಾನ್ಯವಾಗಿ ಸಂಗೀತಗಾರರು ಸಾಹಿತಿಗಳಂತೆ ಮಾತಾಡುವುದಿಲ್ಲ. ಅವರಿಗೆ ಶಬ್ದಾರ್ಥಕ್ಕಿಂತಲೂ ರಾಗರತಿಯೇ ಮುಖ್ಯ. ಆದರೆ ಅಪರೂಪಕ್ಕೆ ಸಂಗೀತ ಕಛೇರಿಗಳಲ್ಲಿ ಒಮ್ಮೊಮ್ಮೆ ಮಾತಾಡುತ್ತಾರೆ; ತಮ್ಮ ಬದುಕಿನ ಅನುಭವಗಳನ್ನು ಸಭೆಗಳಲ್ಲಿ ಹಂಚಿಕೊಳ್ಳುತ್ತಾರೆ. ಯಾವುದೇ ವಿಶೇಷಣಗಳಿಲ್ಲದ ಈ ಸರಳ ಮಾತುಗಳು ನನ್ನಲ್ಲಿ ಸಾಕಷ್ಟು ಪುಳಕವನ್ನುಂಟು ಮಾಡಿ, ಹೊಸ ಸತ್ಯಗಳನ್ನು ಗೋಚರಿಸುತ್ತವೆ.

ಸುಮಾರು ನಾಲ್ಕೈದು ವರ್ಷಗಳ ಕೆಳಗೆ ಖ್ಯಾತ ಪಿಟೀಲು ವಾದಕರಾದ ಟಿ.ಎನ್. ಕೃಷ್ಣನ್ ಅವರು ಬೆಂಗಳೂರಿನ ಗಾಯನ ಸಮಾಜದಲ್ಲಿ ಕಛೇರಿಯೊಂದನ್ನು ಕೊಟ್ಟರು. ಆಗಲೇ ಎಂಬತ್ತು ದಾಟಿದ್ದ ಅವರು ವೃದ್ಧಾಪ್ಯದಿಂದ ಜರ್ಜರಿತರಾಗಿದ್ದರು. ಅವರು ವೇದಿಕೆಯನ್ನು ಹತ್ತಲು ಇಬ್ಬರು ಹುಡುಗರ ಸಹಾಯವನ್ನು ಪಡೆದುಕೊಂಡು, ನಿಧಾನಕ್ಕೆ ಒಂದೊಂದೇ ಹೆಜ್ಜೆಗಳನ್ನು ಇಡುತ್ತಾ ಬಂದರು. ತಮ್ಮ ಆಸನದಲ್ಲಿ ಕುಳಿತುಕೊಂಡು, ಕೈಯಲ್ಲಿ ಪಿಟೀಲು ತೆಗೆದುಕೊಂಡು ಶೃತಿಗೊಳಿಸಿಕೊಂಡ ನಂತರ ಸ್ವಲ್ಪ ಮಾತಾಡಿದರು. ಅವರು ಆಡಿದ ಮಾತುಗಳ ಸಂಕ್ಷಿಪ್ತರೂಪ ಹೀಗಿತ್ತು:

‘ನನಗೆ ಈಗ ಎಂಬತ್ತು ದಾಟಿದೆ. ಬದುಕಿನ ಅನೇಕ ಕೆಲಸಗಳನ್ನು ಮಾಡುವಾಗ ನನಗೆ ಮುಪ್ಪು ಬಂದಿರುವುದು ತಿಳಿಯುತ್ತದೆ. ಉಣ್ಣುವಾಗ, ನಡೆಯುವಾಗ, ನಿದ್ರಿಸುವಾಗ, ಮಾತ್ರೆ ತೆಗೆದುಕೊಳ್ಳುವಾಗ- ಎಲ್ಲ ಹೊತ್ತಿನಲ್ಲೂ ನನ್ನ ವೃದ್ಧಾಪ್ಯ ಗೋಚರಿಸುತ್ತದೆ. ಆದರೆ ಯಾವಾಗ ನೀವು ನನ್ನ ಕೈಗೆ ಈ ಪುಟ್ಟ ಪಿಟೀಲನ್ನು ಕೊಡುತ್ತೀರೋ, ಆಗ ನನಗೆ ವೃದ್ಧಾಪ್ಯ ಮರೆತು ಹೋಗುತ್ತದೆ. ಅದನ್ನು ನುಡಿಸುವಾಗ ನನಗೆ ಹದಿನೆಂಟರ ಯೌವನ ಮರುಕಳಿಸುತ್ತದೆ. ಅದೇ ಹರೆಯದ ಉತ್ಸಾಹದಿಂದ ಈಗಲೂ ನುಡಿಸಬಲ್ಲೆ. ಆದರೆ ನನಗೊಲಿದ ಈ ಪಿಟೀಲನ್ನು ದಕ್ಕಿಸಿ ಉಳಿಸಿಕೊಳ್ಳುವುದು ಸುಲಭವಲ್ಲ. ಈಗಲೂ ಬೆಳಿಗ್ಗೆ ನಾಲ್ಕಕ್ಕೆ ಎದ್ದು ಒಂದೆರಡು ತಾಸು ನುಡಿಸುತ್ತೇನೆ. ದಿನವೂ ಹೊಸತೇನನ್ನೋ ಕಲಿತುಕೊಳ್ಳುತ್ತೇನೆ’ ಎಂದು ಹೇಳಿ ನಿಷ್ಕಲ್ಮಶ ನಗೆಯನ್ನು ನಕ್ಕರು. ಅವರ ಮಾತಿನಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ. ಮುಂದಿನ ಎರಡು ತಾಸುಗಳ ಕಾಲ ಸುಶ್ರಾವ್ಯವಾಗಿ ಪಿಟೀಲು ನುಡಿಸಿದರು. ಅಂದು ರಾಗವಿಸ್ತಾರ ಮಾಡಿ ಅವರು ಪ್ರಸ್ತುತ ಪಡಿಸಿದ ಶ್ರೀರಂಜನಿ ರಾಗ, ಈಗಲೂ ನನ್ನ ಕಿವಿಯಲ್ಲಿ ರಿಂಗಣಿಸುತ್ತದೆ.

ಕೃಷ್ಣನ್ ಅವರು ಮೇಲಿನ ಮಾತುಗಳನ್ನು ಹೇಳಿದಾಗ ನನಗೆ ಮೈಯಲ್ಲಿ ಮಿಂಚು ಸಂಚರಿಸಿದಂತಾಗಿತ್ತು. ಬೇಕೆಂದಾಗ ಹರೆಯವನ್ನು ನಮ್ಮೊಳಗೆ ಆಹ್ವಾನಿಸಿಕೊಳ್ಳುವ ‘ಮಂತ್ರಶಕ್ತಿ’ ಯಾರಿಗೆ ಬೇಡ? ತಲೆ ಕೆಳಗಿಟ್ಟ ತಕ್ಷಣ ನಿದ್ದೆ ಬರುವ, ಏನು ಉಂಡರೂ ಜೀರ್ಣಿಸಿಕೊಳ್ಳುವ, ಎಷ್ಟು ಬೇಕಾದರೂ ಓಡುವ-ಎಗರುವ-ಕುಣಿಯುವ, ಬೇಕಾದಷ್ಟು ಗೆಳೆಯರನ್ನು ಹೊಂದಿರುವ, ಯಾವುದೇ ದೊಡ್ಡ ಜವಾಬ್ದಾರಿಗಳಿಲ್ಲದ ಯೌವನ ಯಾರಿಗೆ ತಾನೆ ಬೇಡ? ಬದುಕಿನ ಗುರಿಯೇ ಅಂತಹ ಯೌವನವನ್ನು ಮತ್ತೆ ಮತ್ತೆ ಪಡೆಯುವುದಲ್ಲವೆ? ಅದಕ್ಕೊಂದು ಸುಲಭದ, ಆದರೆ ಕಠಿಣ ಪರಿಶ್ರಮದಿಂದ ಕರಗತ ಮಾಡಿಕೊಳ್ಳಬೇಕಾದ, ಸಾಧನವನ್ನು ಟಿ.ಎನ್. ಕೃಷ್ಣನ್ ಹೇಳಿದ್ದರು. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಇಂತಹ ಒಂದು ‘ಪಿಟೀಲ’ನ್ನು ಗಳಿಸಿಕೊಳ್ಳಬೇಕು. ನನ್ನ ‘ಪಿಟೀಲು’ ಬೇರೇನಲ್ಲ, ಅದು ಪುಸ್ತಕಗಳೆನ್ನುವುದು ಹೊಳೆಯಲು ನನಗೆ ಹೆಚ್ಚು ಸಮಯ ಬೇಕಾಗಲಿಲ್ಲ.

‘ನನ್ನ ಎಂತಹ ಸಂಕಷ್ಟದ ಹೊತ್ತಿನಲ್ಲಿಯೇ ಆಗಲಿ, ಒಳ್ಳೆಯ ಪುಸ್ತಕವೊಂದನ್ನು ಓದಿದರೆ ಸಾಕು, ಸಮಾಧಾನವಾಗುತ್ತದೆ. ಅಂದಮೇಲೆ ನನಗೆ ಪುಸ್ತಕದ ಒಡನಾಟ ಶಾಶ್ವತವಾದದ್ದು. ಮುಪ್ಪು ಬಂದರೂ ಯೌವನಕ್ಕೆ ಮರಳಬಲ್ಲ ಮಾಯಾದಂಡವದು. ಅದನ್ನು ಯಾವ ಹೊತ್ತಿನಲ್ಲಿಯೂ ಕಳೆದುಕೊಳ್ಳುವಂತಿಲ್ಲ. ನಿತ್ಯ ನನ್ನ ‘ಪಿಟೀಲಿ’ನೊಡನೆ ಒಂದೆರಡು ತಾಸು ಒಡನಾಡುತ್ತಾ ಹೊಸದನ್ನು ಕಲಿಯದಿದ್ದರೆ, ಆ ಮಂತ್ರದಂಡವನ್ನು ನಾನು ಕಳೆದುಕೊಳ್ಳುತ್ತೇನೆ’ ಎನ್ನುವುದು ಅರ್ಥವಾಗಿತ್ತು. ಸಾಹಿತ್ಯದ ಪಾಠವನ್ನು ಹೇಳಿದ ಆ ಹಿರಿಯ ಸಂಗೀತ ಗುರುಗಳಿಗೆ ಮನಸ್ಸಿನಲ್ಲಿಯೇ ವಂದನೆಗಳನ್ನು ಅರ್ಪಿಸಿದೆ. ದುರದೃಷ್ಟವೆಂದರೆ ಮತ್ತೆಂದೂ ಅವರೂ ಬೆಂಗಳೂರಿಗೆ ಬರಲಿಲ್ಲ, ಇನ್ನೊಂದು ಕಛೇರಿ ಕೊಡಲು ಸಾಧ್ಯವಾಗಲಿಲ್ಲ. 2020ರ ನವೆಂಬರ್ 2ರಂದು ಕೊನೆಯುಸಿರೆಳೆದರು.

ನನ್ನ ಮತ್ತೊಬ್ಬ ಸಾಹಿತ್ಯದ ಗುರುಗಳು ಮಂಗನಪಲ್ಲಿ ಬಾಲಮುರಳೀಕೃಷ್ಣ ಅವರು. ಅವರ ಹಲವಾರು ಕಚೇರಿಗಳನ್ನು ನಾನು ಕೇಳಿ ಪುನೀತನಾಗಿದ್ದೇನೆ. ಕಛೇರಿಯ ಮಧ್ಯದಲ್ಲಿ ಅವರು ಎಷ್ಟು ಸೊಗಸಾದ ಮಾತಿನ ಮುತ್ತುಗಳನ್ನು ಉದುರಿಸುತ್ತಿದ್ದರೆಂದರೆ, ಇಡೀ ಸಭೆಯೇ ನಗೆಗಡಲಿನಲ್ಲಿ ತೇಲಿ ಹೋಗುತ್ತಿತ್ತು. ಅಪರೂಪದ ಹಾಸ್ಯಪ್ರಜ್ಞೆ ಅವರದು. ಅವರು ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡಾಗ, ಅವರ ಹತ್ತಿರದ ಶಿಷ್ಯರೊಬ್ಬರು ಪತ್ರಿಕೆಯೊಂದರಲ್ಲಿ ನುಡಿನಮನವನ್ನು ಸಲ್ಲಿಸಿದ್ದರು. ಬಾಲಮುರಳೀಕೃಷ್ಣ ಅವರಿಗೆ ಮುಪ್ಪಿನಲ್ಲಿ ಮರೆವಿನ ರೋಗ ತೀವ್ರವಾಗಿ ಬಾಧಿಸಿತಂತೆ. ಈ ರೋಗ ಕೊನೆಕೊನೆಗೆ ಅದೆಷ್ಟು ತೀವ್ರವಾಗಿ ಹೋಯಿತೆಂದರೆ, ಅವರು ತಮ್ಮ ಮಗನನ್ನೂ ಗುರುತಿಸಲಾರದೆ ಹೋದರಂತೆ. ಆದರೆ ಕೊನೆತನಕ ಮರೆಯದ ಅವರ ಒಂದು ವಿಶೇಷ ಶಕ್ತಿಯನ್ನು ಅವರ ಶಿಷ್ಯ ತಮ್ಮ ನುಡಿನಮನದಲ್ಲಿ ಗುರುತಿಸಿದ್ದರು. ಸಾಯುವ ಗಳಿಗೆಯವರೆಗೂ ಯಾರಾದರೂ ಅವರನ್ನು ರಾಗವೊಂದನ್ನು ಪ್ರಸ್ತುತ ಪಡಿಸಲು ಕೋರಿದರೆ, ತಪ್ಪಿಲ್ಲದಂತೆ ಆ ರಾಗವನ್ನು ಆ ಮುಪ್ಪಿನ ಬಾಧೆಯಲ್ಲಿಯೇ ಒಪ್ಪಿಸುತ್ತಿದ್ದರಂತೆ. ಕಲ್ಯಾಣಿ ಎಂದರೆ ಕಲ್ಯಾಣಿ, ತೋಡಿ ಎಂದರೆ ತೋಡಿ, ಶಂಕರಾಭರಣ ಬೇಕೆಂದರೆ ಶಂಕರಾಭರಣ! ‘ನಮ್ಮ ಗುರುಗಳು ಎಂದೂ ತಾವು ಒಲಿಸಿಕೊಂಡ ರಾಗಗಳನ್ನು ಮರೆಯಲಿಲ್ಲ’ ಎಂದು ಅವರ ಶಿಷ್ಯ ಆರ್ದ್ರವಾಗಿ ಲೇಖನವನ್ನು ಮುಗಿಸಿದ್ದರು. ತಕ್ಷಣ ನನಗೆ ಸಾಹಿತ್ಯದ ಪಾಠವೊಂದು ದಕ್ಕಿ ಹೋಯಿತು. ನಾನೆಂದೂ ಮರೆಯಬಾರದ ರಾಗಗಳು ಯಾವವೆಂದು ನನಗೆ ಹೊಳೆದವು. ಅವು ‘ಕುವೆಂಪು ರಾಗ’, ‘ಕಾರಂತ ರಾಗ’, ‘ಮಾಸ್ತಿ ರಾಗ’ - ಇನ್ನೂ ಹಲವಾರು ರಾಗಗಳು. ನನ್ನ ರಕ್ತಸಂಬಂಧಿಗಳನ್ನು ಮರೆತರೂ, ನಾನು ಈ ವಿಶೇಷ ‘ರಾಗ’ಗಳನ್ನು ಮರೆಯುವಂತಿಲ್ಲ. ಆದ್ದರಿಂದ ಅವುಗಳನ್ನು ಒಮ್ಮೆ ಓದಿಬಿಟ್ಟರೆ ಸಾಕಾಗುವುದಿಲ್ಲ. ಮತ್ತೆ ಮತ್ತೆ ಈ ‘ರಾಗ’ಗಳನ್ನು ಓದಿ ಒಲಿಸಿಕೊಳ್ಳಬೇಕು ಎಂಬ ಸಾಕ್ಷಾತ್ಕಾರವಾದಾಗ ರೋಮಾಂಚನವಾಗಿತ್ತು. ಆ ಕಾರಣದಿಂದಲೇ ಮತ್ತೆ ಮತ್ತೆ ಹಿರಿಯರ ಪುಸ್ತಕಗಳಿಗೆ ಮರಳಬೇಕೆನ್ನಿಸುತ್ತದೆ.

ಇತ್ತೀಚೆಗೆ ಬಾಂಬೆ ಜಯಶ್ರೀ ಅವರ ಸಂಗೀತವನ್ನು ನಾನು ತೀವ್ರವಾಗಿ ಕೇಳುತ್ತೇನೆ. ಅವರ ವಿಭಿನ್ನ ಧ್ವನಿ ನನ್ನನ್ನು ಆಕರ್ಷಿಸುತ್ತದೆ. ಅವರು ಕೆಲವು ಸಿನಿಮಾ ಗೀತೆಗಳನ್ನೂ ಹಾಡಿರುವುದರಿಂದ ಸಾಕಷ್ಟು ಜನಪ್ರಿಯರು. ಆ ಕಾರಣದಿಂದ ಅವರನ್ನು ಸಾಹಿತ್ಯೋತ್ಸವಗಳಿಗೂ ಆಹ್ವಾನಿಸುತ್ತಾರೆ. ಇತ್ತೀಚೆಗೆ ತಿರುವನಂತಪುರಂನಲ್ಲಿ ನಡೆದ ಮಾತೃಭೂಮಿ ಸಾಹಿತ್ಯ ಉತ್ಸವಕ್ಕೆ ಅವರನ್ನು ಆಹ್ವಾನಿಸಿದ್ದರು. ಅವರೊಡನೆ ನಡೆದ ಸಂವಾದದಲ್ಲಿ ಅವರೊಂದು ವಿಶೇಷ ಘಟನೆಯನ್ನು ಸಭಿಕರೊಡನೆ ಹಂಚಿಕೊಂಡರು. ಒಮ್ಮೆ ದುಬೈ ನಗರದಲ್ಲಿ ಅವರು ಎರಡು ತಾಸಿನ ಸಂಗೀತ ಕಛೇರಿಯನ್ನು ಕೊಟ್ಟರಂತೆ. ಸಾಮಾನ್ಯವಾಗಿ ಕಛೇರಿ ಮುಗಿದ ನಂತರ ಪರಿಚಿತರು, ಸಂಗೀತ ಪ್ರೇಮಿಗಳು ಕಲಾವಿದರನ್ನು ಭೇಟಿಯಾಗಿ ಕಾರ್ಯಕ್ರಮ ಅದೆಷ್ಟು ಸೊಗಸಾಗಿ ಮೂಡಿ ಬಂತು ಎಂದು ಅವರಿಗೆ ಸಂತೋಷದಿಂದ ತಿಳಿಸುವುದು ಸಂಪ್ರದಾಯ. ಆ ರೀತಿಯಲ್ಲಿಯೇ ಈ ಕಛೇರಿ ಮುಗಿದ ನಂತರವೂ ಸಾಕಷ್ಟು ರಸಿಕರು ಭೇಟಿಯಾಗಿ ಕಛೇರಿಯನ್ನು ಕೊಂಡಾಡಿ ಹೋದರು. ತುಸು ಗಲಾಟೆ ತಗ್ಗಿದ ನಂತರ ಒಬ್ಬ ಹದಿನಾರು-ಹದಿನೇಳು ವಯಸ್ಸಿನ ಹುಡುಗನೊಬ್ಬ ಅವರೆಡೆಗೆ ನಡೆದು ಬಂದ. ಅವನು ರಭಸದಿಂದ ನಡೆಯುತ್ತಿದ್ದ ರೀತಿ, ಮುಖದಲ್ಲಿದ್ದ ವಿಚಿತ್ರ ಭಾವ ನೋಡಿದ ತಕ್ಷಣ ಜಯಶ್ರೀ ಅವರಿಗೆ ಆ ಹುಡುಗನಿಗೆ ಏನೋ ಸಮಸ್ಯೆಯಿರಬೇಕು ಅನ್ನಿಸಿದೆ. ಆ ಹುಡುಗ ಅವರೆಡೆಗೆ ಬಂದಿದ್ದೇ, ಮುಖದಲ್ಲಿ ಒಂದಿಷ್ಟೂ ನಗುವಿಲ್ಲದೆ ‘ಈವತ್ತು ನೀನು ಎಲ್ಲಾ ತಪ್ಪು ಹಾಡಿದಿ. ಆಲ್ ರಾಂಗ್… ಆಲ್ ರಾಂಗ್… ನಂಗೆ ಸಿಟ್ಟು ಬಂದಿದೆ’ ಎಂದು ಹೇಳಿ ಹೊರಟೇ ಹೋದನಂತೆ. ಈ ತರಹ ಯಾರೂ ಹಿರಿಯ ಕಲಾವಿದರಿಗೆ ಹೇಳುವುದಿಲ್ಲ. ಆದ್ದರಿಂದ ಜಯಶ್ರೀ ಅವರ ಮನಸ್ಸಿಗೆ ಅಸಂತೋಷವಾಯ್ತು. ಹತ್ತಿರದಲ್ಲಿ ಯಾರೂ ಇಲ್ಲದ್ದರಿಂದ ಆ ಸಂಗತಿಯನ್ನು ಅವರು ಹೆಚ್ಚು ಕೆದಕಲು ಹೋಗಲಿಲ್ಲ.

ಆನಂತರ ಆ ರಾತ್ರಿ ಕಲಾವಿದೆಗೆ ಮತ್ತು ಇತರರಿಗೆ ಒಂದು ಔತಣಕೂಟವಿತ್ತು. ಅಲ್ಲಿ ಈ ಬಾಲಕನನ್ನೂ, ಅವನ ಜೊತೆ ಇರುವ ನಡುವಯಸ್ಸಿನ ಮಹಿಳೆಯನ್ನೂ ಜಯಶ್ರೀ ಗಮನಿಸಿದರು. ಆ ಹುಡುಗ ಮಾತಿಲ್ಲದೆ, ಎಲ್ಲಿಯೋ ಶೂನ್ಯದಲ್ಲಿ ನೋಟವನ್ನು ನೆಟ್ಟಿದ್ದು ಕಂಡಾಗ ಅವನೊಬ್ಬ ಮಾನಸಿಕ ಅಸ್ವಸ್ಥ್ಯನಿರಬಹುದು ಎಂಬ ಅನುಮಾನ ಅವರಿಗೆ ಬಂದಿದೆ. ಆದರೂ ಕುತೂಹಲದಿಂದ ಆ ಮಹಿಳೆಯನ್ನು ಕರೆದು, ಅಂದು ಸಂಜೆ ನಡೆದ ಘಟನೆಯನ್ನು ವಿವರಿಸಿದರು. ಆ ಮಹಿಳೆ ಆ ಹುಡುಗನ ತಾಯಿಯಾಗಿದ್ದರು. ‘ಅವನು ಹಾಗೇಕೆ ಹೇಳಿದ?’ ಎಂದು ವಿಚಾರಿದರು. ಆಗ ಆ ತಾಯಿ ತುಸು ಹಿಂಜರಿಕೆಯಿಂದಲೇ ‘ಅವನು ಹೇಳಿದ್ದಾನೆಂದರೆ ನೀವು ಏನಾದರೂ ಹಾಡಿನಲ್ಲಿ ತಪ್ಪು ಮಾಡಿರುತ್ತೀರಿ. ನನಗೆ ಅವನಷ್ಟು ಸಂಗೀತ ಗೊತ್ತಿಲ್ಲ. ಅವನು ಆಟಿಸಂ ಕಾಯಿಲೆಯ ಹುಡುಗ. ಆದರೆ ಸಂಗೀತ ಆಲಿಸುವುದರಲ್ಲಿ ಅವನಿಗೆ ವಿಶೇಷ ಪ್ರಾವೀಣ್ಯ ಇದೆ. ನಿಮ್ಮ ದೊಡ್ಡ ಅಭಿಮಾನಿ. ನಿಮ್ಮ ಎಲ್ಲಾ ಧ್ವನಿಚಕ್ರಗಳನ್ನೂ ನೂರಾರು ಸಲ ಕೇಳಿದ್ದಾನೆ. ಈಗಲೂ ರಾತ್ರಿ ಮಲಗುವಾಗಲೂ ನಿಮ್ಮ ಹಾಡುಗಳನ್ನು ಕೇಳುತ್ತಾ ನಿದ್ದೆ ಹೋಗುತ್ತಾನೆ. ಸಂಗೀತದಲ್ಲಿ ಅವನೊಂದು ಕಂಪ್ಯೂಟರ್ ಇದ್ದಂತೆ. ಏನು ತಪ್ಪು ನಡೆದರೂ ಅವನಿಗೆ ಗೊತ್ತಾಗುತ್ತದೆ’ ಎಂದು ಹೇಳಿದರು. ಜಯಶ್ರೀ ಅವರು ಅದರ ಬಗ್ಗೆ ಹೆಚ್ಚಿನ ವಿಚಾರ ಮಾಡದೆ ಆ ಊರಿಂದ ಮರಳಿ ಚೆನ್ನೈಗೆ ವಾಪಸಾದರು.

ಒಂದು ವಾರದ ನಂತರ ಜಯಶ್ರೀಯವರಿಗೆ ಆ ಕಛೇರಿಯ ಸಂಪೂರ್ಣ ವಿಡಿಯೊ ರೆಕಾರ್ಡಿಂಗ್ ಅನ್ನು ಆಯೋಜಕರು ಕಳುಹಿಸಿಕೊಟ್ಟರು. ಯಾಕೋ ಅನುಮಾನವಾಗಿ ಜಯಶ್ರೀ ಅವರು ಅದನ್ನು ಮತ್ತೊಮ್ಮೆ ಕೇಳಿದರು. ಆಗ ಅವರಿಗೆ ತಮ್ಮ ಹಾಡುಗಾರಿಕೆಯಲ್ಲಿ ಸಾಕಷ್ಟು ನ್ಯೂನತೆಗಳು ಗೋಚರವಾಗಿವೆ ಎಂದು ತಿಳಿದುಬಿಟ್ಟಿತು. ತಕ್ಷಣ ಅವರಿಗೆ ಆ ಹುಡುಗ ಮತ್ತು ಅವನ ತಾಯಿಯ ನೆನಪು ಬಂದಿದೆ. ಅವರು ಮಾನಸಿಕ ವೈದ್ಯರೊಬ್ಬರಿಗೆ ಕರೆ ಮಾಡಿ ಆಟಿಸಂ ಕಾಯಿಲೆ ಬಗ್ಗೆ ವಿಚಾರಿಸಿದ್ದಾರೆ. ಈ ಮಕ್ಕಳು ಉಳಿದಂತೆ ಸಮಾಜದ ಜೊತೆ ಹೊಂದಿಕೊಳ್ಳಲು ಕಷ್ಟವಾದರೂ, ಕೆಲವೊಂದು ಸಂಗತಿಗಳಲ್ಲಿ ಸಾಮಾನ್ಯ ಮನುಷ್ಯರು ಸಾಧಿಸಲಾಗದ ವಿಶೇಷ ಪ್ರತಿಭೆಯಿರುತ್ತದೆ. ಗಣಿತ, ಸಂಗೀತ, ನೆನಪಿನ ಶಕ್ತಿ, ಕಂಠಪಾಟ–ಹೀಗೆ ಅದು ಏನಾದರೂ ಆಗಿರಬಹುದು. ಈ ಹುಡುಗನಿಗೆ ಸಂಗೀತದಲ್ಲಿ ಅಂತಹ ಶಕ್ತಿ ಇರಬಹುದು. ಜಗತ್ತಿನ ಉಳಿದ ‘ಸಜ್ಜನ’ರಂತೆ ಈ ಹುಡುಗ ಹಿಂಜರಿಯದೆ, ‘ಅಪ್ರಿಯ ಸತ್ಯ’ವನ್ನು ಯಾವ ಮುಲಾಜಿಲ್ಲದೆ ಹೇಳಿರಬಹುದು ಎಂದು ವೈದ್ಯರು ಅಭಿಪ್ರಾಯ ಪಟ್ಟರಂತೆ.

ಈ ಸತ್ಯ ತಿಳಿದ ತಕ್ಷಣ ಜಯಶ್ರೀ ಅವರು ಎಚ್ಚೆತ್ತು ಕೊಂಡಿದ್ದಾರೆ. ತಾವು ಮತ್ತು ತಮ್ಮ ಶಿಷ್ಯಂದಿರು ಇಂತಹ ವಿಶೇಷ ಮಕ್ಕಳ ನೆರವನ್ನು ಪಡೆದು ಸಾಧನೆಯನ್ನು ಮಾಡಬೇಕು ಎಂದು ಅರಿತುಕೊಂಡಿದ್ದಾರೆ. ಈಗ ಅಂತಹ ಮಕ್ಕಳಿಗಾಗಿ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಆ ಮಕ್ಕಳ ಒಳಿತಿಗಾಗಿ ಸಾಕಷ್ಟು ದಾನ ಮಾಡಿದ್ದಾರೆ. ಆ ಮಕ್ಕಳ ಮುಂದೆ ತಿಂಗಳಿಗೊಮ್ಮೆ ಶಿಷ್ಯಂದಿರ ಜೊತೆಗೂಡಿ ಸಂಗೀತ ಹಾಡಿ, ಅವರ ಅಭಿಪ್ರಾಯ ಪಡೆಯುತ್ತಾರೆ. ಇದು ಅವರ ಕಲಿಕೆಗೆ ಸಾಕಷ್ಟು ಅನುಕೂಲವನ್ನು ಮಾಡಿಕೊಟ್ಟಿದೆ.

ಈ ಸನ್ನಿವೇಶ ದೊಡ್ಡದೇ ಆದ ಸಾಹಿತ್ಯ ಪಾಠವನ್ನು ನನಗೆ ಕಲಿಸಿತು. ನಾವು ಒಮ್ಮೆ ಪ್ರಸಿದ್ಧಿಗೆ ಬಂದಮೇಲೆ, ನಮ್ಮ ಬರವಣಿಗೆಯ ಕುರಿತು ನಮ್ಮ ಪರಿಚಿತರು, ಅಭಿಮಾನಿಗಳು ಹುಸಿಮೆಚ್ಚುಗೆಯನ್ನು ಹೇಳುತ್ತಲೇ ಹೋಗುತ್ತಾರೆ. ಆದರೆ ಕಹಿಸತ್ಯ ಹೇಳುವ ಗೊಡವೆಗೇ ಹೋಗುವುದಿಲ್ಲ. ಅಂತಹ ಕಹಿಸತ್ಯವನ್ನೂ ನುಡಿಯುವ ಪ್ರಾಮಾಣಿಕರು ಇದ್ದೇ ಇರುತ್ತಾರೆ. ಅಂತಹವರು ಚಿಕ್ಕವರಾಗಿರಲಿ ಅಥವಾ ದೊಡ್ಡವರಾಗಿರಲಿ, ತಕ್ಷಣ ಅವರನ್ನು ಗುರುತಿಸಿಕೊಂಡು ಅವರ ನೆರವನ್ನು ನಾವು ಪಡೆಯಬೇಕು. ನಿರಂತರವಾಗಿ ಅಂತಹವರ ಅಭಿಪ್ರಾಯಗಳನ್ನು ಕೇಳಿ, ನಮ್ಮನ್ನು ನಾವು ತಿದ್ದಿಕೊಳ್ಳುತ್ತಲೇ ಇರಬೇಕು. ಅವರು ಒಂದು ರೀತಿ ನಮ್ಮ ಗುರುಗಳಾಗಿರುತ್ತಾರೆ ಎನ್ನುವ ಸಂಗತಿ ನನಗೆ ಹೆಚ್ಚು ಸ್ಪಷ್ಟವಾಯಿತು.

ಇಷ್ಟೆಲ್ಲಾ ಹೇಳಿದ ಮೇಲೆ ನಮ್ಮ ಕನ್ನಡದವರೇ ಆದ ಪಂಡಿತ ಭೀಮಸೇನ ಜೋಷಿಯವರ ಬಗ್ಗೆ ಹೇಳದಿದ್ದರೆ ಹೇಗೆ? ಅವರ ಕುರಿತ ಪುಸ್ತಕವೊಂದನ್ನು ಓದುವ ಸೌಭಾಗ್ಯ ಇತ್ತೀಚೆಗೆ ನನಗೆ ಒದಗಿಬಂತು. ಅವರು ತಮ್ಮ ಸಂಗೀತ ಜೀವನದ ಆರಂಭದ ದಿನಗಳಲ್ಲಿ ತಮ್ಮ ಸಂಗೀತ ಕಛೇರಿಗಳ ಅವಕಾಶಕ್ಕಾಗಿ ವಿಶೇಷ ಪದ್ಧತಿಯನ್ನು ಅನುಸರಿಸುತ್ತಿದ್ದರಂತೆ. ಒಮ್ಮೆ ಅವರಿಗೆ ಮಂತ್ರಾಯಲದಲ್ಲಿ ಹಾಡಲು ಆಹ್ವಾನ ಬಂದಿತು. ಕಛೇರಿ ನಡೆಯುವ ದಿನಕ್ಕೆ ಒಂದು ವಾರ ಮೊದಲೇ ತಮ್ಮ ಸಂಗೀತಕ್ಕೆ ಸಾಥ್ ಕೊಡುವ ಪಟಾಲಂ ಕಟ್ಟಿಕೊಂಡು ಕಾರಿನಲ್ಲಿ ಹೊರಟುಬಿಟ್ಟರು. ಮಂತ್ರಾಲಯದ ದಾರಿಯಲ್ಲಿ ಸಿಗುವ ಅನೇಕ ಪ್ರಮುಖ ಹಳ್ಳಿಗಳಿಗೆ ಕಾರನ್ನು ಒಯ್ದು, ಅಲ್ಲಿಯ ಗೌಡರನ್ನು ಕಂಡು ಭೇಟಿಯಾಗಿ ‘ನನ್ನ ಹೆಸರು ಭೀಮಸೇನ ಅಂತ. ಸಂಗೀತ ಹಾಡ್ತೀನಿ. ಸವಾಯಿ ಗಂಧರ್ವರ ಹತ್ತಿರ ಹಾಡೋದು ಕಲಿತೀನಿ. ನೀವು ಒಪ್ಪಿಗೆ ಕೊಟ್ಟರೆ ಈ ಸಂಜೆ ನಿಮ್ಮೂರಲ್ಲಿ ಕಛೇರಿ ಮಾಡ್ತೀನಿ. ನಿಮ್ಮ ಊರಿನ ಜನರ ಹತ್ತಿರ ಚಂದಾ ಎತ್ತಿ ಕೊಟ್ಟರೆ ನಮಗೆ ಉಪಕಾರ ಆಗ್ತದೆ’ ಎಂದು ಬೇಡಿಕೊಳ್ಳುತ್ತಿದ್ದರು. ಬಹುತೇಕ ಊರಿನ ಗೌಡರು ಅದಕ್ಕೆ ಒಪ್ಪಿ ಕಛೇರಿ ಏರ್ಪಾಡು ಮಾಡುತ್ತಿದ್ದರು. ಆ ದಿನ ಅವರೆಲ್ಲರ ವಸತಿ ಮತ್ತು ಊಟೋಪಚಾರಗಳು ಆ ಹಳ್ಳಿಯಲ್ಲಿಯೇ ನಡೆದು ಹೋಗುತ್ತಿದ್ದವು. ಜೊತೆಗೆ ದಾರಿಯ ಖರ್ಚಿಗೆ ಒಂದಿಷ್ಟು ಹಣ ಮಿಕ್ಕುತ್ತಿತ್ತು. ಎಲ್ಲಕ್ಕೂ ಮುಖ್ಯವಾಗಿ ಅವರ ಗಂಧರ್ವ ಗಾಯನದ ಸುದ್ದಿ ಬಾಯಿಂದ ಬಾಯಿಗೆ ಹರಡಿ, ಅವರ ಪ್ರಖ್ಯಾತಿಗೆ ಅನುಕೂಲವಾಯಿತು.

ಕನ್ನಡ ಪುಸ್ತಕ ಪ್ರಕಾಶಕ ನಾನು. ಯಾವ ಸಂಕೋಚವೂ ಇಲ್ಲದಂತೆ ನನ್ನ ಪುಸ್ತಕಗಳನ್ನೂ ನಾನೇ ಪ್ರಕಟಿಸಿಕೊಳ್ಳುತ್ತೇನೆ. ಹಿರಿಯರಾದ ಭೀಮಸೇನ ಜೋಷಿಯವರೆ ನಮ್ಮ ಪುಸ್ತಕಗಳ ಮಾರಾಟ ಮಾಡುವ ವಿಧಾನವನ್ನು ಕಲಿಸಿಕೊಟ್ಟಿದ್ದಾರಲ್ಲವೆ? ಆದ್ದರಿಂದ ಯಾವುದೋ ಸಂಕೋಚವಿಲ್ಲದಂತೆ ಪುಸ್ತಕಗಳನ್ನು ಓದುಗರಿಗೆ ಮಾರಾಟ ಮಾಡುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.