ಶಕ್ತಿಕೇಂದ್ರ ವಿಧಾನಸೌಧವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಿ ಕಣ್ತುಂಬಿಕೊಳ್ಳಬೇಕು ಎಂಬ ಮಹದಾಸೆ ಬೆಂಗಳೂರಿಗೆ ಬರುವ ಕೆಲವರಲ್ಲಿಯಾದರೂ ಇದ್ದೇ ಇರುತ್ತದೆ. ವಿಶಾಲವಾಗಿ ತಲೆಎತ್ತಿ ನಿಂತ ಈ ಸೌಧದ ಹಲವು ಅಂತಸ್ತುಗಳಲ್ಲಿ ನಾಡಿನ ಆಡಳಿತದ ನಾಡಿಗಳು ಹರಡಿಕೊಂಡಿವೆ. ದ್ರಾವಿಡ ವಾಸ್ತುಶೈಲಿಯಲ್ಲಿರುವ ಇದರ ವಿನ್ಯಾಸ, ಆಕಾರ, ವಿಶಿಷ್ಟತೆಯಿಂದ ಈ ಸೌಧ ಸೂಜಿಗಲ್ಲಿನಂತೆ ಜನರನ್ನು ಸೆಳೆಯುತ್ತಲೇ ಇದೆ.
ಬೆಂಗಳೂರಿಗೆ ಬಂದು ವಿಧಾನಸೌಧದ ಮುಂದೆ ನಿಂತು ಹಲ್ಲುಕಿರಿದು, ಫೋಟೋ ತೆಗೆಸಿಕೊಂಡರಷ್ಟೆ ಬೆಂಗಳೂರಿನ ಭೇಟಿ ಪೂರ್ಣಗೊಳ್ಳುವುದು. ಅಲ್ಲಿಯೇ ತುಸು ಅಡ್ಡಾಡ್ಡಿ, ನಮ್ಮೂರಿನಿಂದ ಆಯ್ಕೆಯಾದ ಜನಪ್ರತಿನಿಧಿಗಳು ಈ ಸೌಧದ ಯಾವ ಅಂತಸ್ತಿನಲ್ಲಿರಬಹುದು?, ನಮ್ಮೂರಿನ ‘ಆ ದೊಡ್ಡ ಜನ’ದ ಕಚೇರಿ ಎಲ್ಲಿರಬಹುದು? ಎಂದೆಲ್ಲ ಲೆಕ್ಕಾಚಾರ ಹಾಕುವಾಗ, ಮೂಗಿಗೆ ಘಮ್ಮೆಂದು ಅಡರುವ ಪಾನಿಪೂರಿ, ಮಸಾಲಪೂರಿ, ಉಪ್ಪುಖಾರ ಸವರಿದ ಮಾವಿನಕಾಯಿ, ಬಗೆಯ ಬಗೆಯ ಐಸ್‌ಕ್ಯಾಂಡಿಗಳ ಸ್ವಾದವನ್ನು ನೋಡಲು ನಾಲಿಗೆ ಇನ್ನಿಲ್ಲದಂತೆ ಚಡಪಡಿಸುತ್ತದೆ.
ಈ ಕಡೆ ಶಾಸಕಾಂಗವನ್ನು ಪ್ರತಿನಿಧಿಸುವ ವಿಧಾನಸೌಧ, ಆ ಕಡೆ ನ್ಯಾಯಾಂಗ ವ್ಯವಸ್ಥೆಯನ್ನು ಬಿಂಬಿಸುವ ಹೈಕೋರ್ಟ್. ಇಲ್ಲೆಲ್ಲ ಸುತ್ತಾಡಿ ತುಸು ವಿರಮಿಸಲು ಕಬ್ಬನ್ ಉದ್ಯಾನ. ಒಟ್ಟಾರೆ ವಾರಾಂತ್ಯದ ಪಿಕ್ನಿಕ್‌ಗೆ ಪರಿಪೂರ್ಣ ತಾಣವಾಗಿಯೂ ಜನರಲ್ಲಿ ಅಚ್ಚೊತ್ತಿರುವ ಈ ‘ಪ್ರಭಾವಿ’ ಪ್ರದೇಶದ ಆಯಾಕಟ್ಟಿನ ಸ್ಥಳಗಳೆಲ್ಲವೂ ಶ್ರೀಸಾಮಾನ್ಯರ ‘ಪಿಕ್ಚರ್ ಪರ್ಫೆಕ್ಟ್’ ತಾಣಗಳಾಗಿಯೂ ಪ್ರಸಿದ್ಧಿ ಪಡೆದುಕೊಂಡಿವೆ. ವಿಧಾನಸೌಧದ ಮುಂದೆ ನಿಂತು ಊದುಕೊಳವೆಯಿಂದ ನೀರಿನ ಗುಳ್ಳೆಯನ್ನು ಹರಿಬಿಡುವ ಪೋರಿ, ಅಧಿಕಾರವೆಂಬುದು ನೀರ ಮೇಲಿನ ಗುಳ್ಳೆಯಂತೆ! ಎಂದೂ ಪರೋಕ್ಷವಾಗಿ ಹೇಳುತ್ತಿರುವಂತೆ ಭಾಸವಾಗುತ್ತದೆ. ಕರ್ಚೀಫು, ಬನಿಯನ್‌ಗಳ ಮಾರಾಟಕ್ಕೂ ಇಲ್ಲಿದೆ ಜಾಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.