ADVERTISEMENT

ಕನ್ನಡ ವಿಮರ್ಶೆಯ ವಿರಾಟ ಪುರುಷ

ಎನ್.ಎಸ್.ಗುಂಡೂರ
Published 3 ಅಕ್ಟೋಬರ್ 2020, 19:31 IST
Last Updated 3 ಅಕ್ಟೋಬರ್ 2020, 19:31 IST
ಪತ್ನಿ ಶಾಂತಾ ಆಮೂರ ಜತೆ ಪ್ರೊ. ಜಿ.ಎಸ್.ಆಮೂರ
ಪತ್ನಿ ಶಾಂತಾ ಆಮೂರ ಜತೆ ಪ್ರೊ. ಜಿ.ಎಸ್.ಆಮೂರ   

ಕಳೆದ ವರ್ಷ, ಧಾರವಾಡದ ಸಾಹಿತ್ಯ ಸಂಭ್ರಮದ ಗೋಷ್ಠಿಯೊಂದರಲ್ಲಿ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು ‘ವಿಮರ್ಶಕ ಅತಿ ಅಳಿವಿನ ಅಂಚಿನಲ್ಲಿರುವ ಪ್ರಾಣಿ’ ಎಂದು ಹೇಳಿದ್ದುಂಟು. ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದಷ್ಟೇ ಹೇಳುವುದು ಅವರ ಉದ್ದೇಶವಾಗಿರಲಿಕ್ಕಿಲ್ಲ! ಒಟ್ಟಾರೆ ವಿಮರ್ಶಾ ಕ್ರಿಯಾಚರಣೆ ಸಂದಿಗ್ಧತೆಯನ್ನು ಎದುರಿಸುತ್ತಿರುವ ಈ ಕಾಲದಲ್ಲಿ ಹೇಗೆ ಸಾಹಿತ್ಯ-ಸಂಸ್ಕೃತಿ ವಿಮರ್ಶೆ ಸೂಕ್ಷ್ಮತೆ, ಗಂಭೀರತೆ, ಅಪಾರ ಓದಿನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಎಂದೂ ಹೇಳುವುದಾಗಿತ್ತು.

ಮುಂದೆ ಕನ್ನಡದ ವಿಮರ್ಶಾ ಸಂಪ್ರದಾಯ ಯಾವ ಹೆಜ್ಜೆಯನ್ನು ತುಳಿಯುವುದೋ ನಮಗೆ ಗೊತ್ತಿಲ್ಲ. ಆದರೆ, ಹಿರಿಯ ವಿಮರ್ಶಕ ಡಾ. ಜಿ.ಎಸ್. ಆಮೂರ ಅವರ ಅಗಲಿಕೆಯ ಬಳಿಕ ಆಧುನಿಕ ಕನ್ನಡದ ವಿಮರ್ಶಾ ಪರಂಪರೆಗೆ ಶಿಸ್ತು, ಬದ್ಧತೆ ಮತ್ತು ವಿಶಾಲತೆಯನ್ನೊದಗಿಸಿದ ಮಹಾವಿದ್ವಾಂಸನನ್ನು ನಾವು ಕಳೆದುಕೊಂಡಿದ್ದೇವೆ. ಕನ್ನಡದ ವಿಮರ್ಶಾ ಪ್ರಜ್ಞೆಯನ್ನು ಮರುರೂಪಿಸಬೇಕಾದ ಈ ಸಂದರ್ಭದಲ್ಲಿ ಜಿ.ಎಸ್ ಆಮೂರರು ವಿದ್ವಾಂಸ-ವಿಮರ್ಶಕರಾಗಿ ರೂಪುಗೊಂಡ ಬಗೆಯನ್ನು ಅವಲೋಕಿಸುತ್ತ, ಅವರ ವಿದ್ವತ್‌ಪೂರ್ಣ ಕೆಲಸವನ್ನು ನೆನೆಯುವುದರ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವುದು ಈ ಲೇಖನದ ಆಶಯ.

ಗುರುರಾಜ ಶ್ಯಾಮಾಚಾರ್ಯ ಆಮೂರರು ಹುಟ್ಟಿ ಬೆಳೆದಿದ್ದು ಧಾರವಾಡ ಸೀಮೆಯ, ಈಗಿನ ಹಾವೇರಿ ಜಿಲ್ಲೆ. ಅವರ ತಾಯಿ ತವರುಮನೆ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ 1925ರ ಮೇ ಎಂಟರಂದು ಜನಿಸಿದ ಆಮೂರರು ತಮ್ಮ ಬಾಲ್ಯದ ಶಿಕ್ಷಣವನ್ನು ತಮ್ಮ ತಂದೆಯವರ ಊರಾದ ಸುರಣಿಗಿಯಲ್ಲಿ ಮುಗಿಸಿದರು. ಸ್ವತಃ ಅವರ ತಂದೆಯವರು ವಿದ್ಯಾವಂತರು ಹಾಗೂ ವಸಾಹತು-ಪೂರ್ವಕಾಲದ ಶಿಕ್ಷಕರಾಗಿದ್ದರು. ತಾಯಿಯನ್ನು ಬೇಗ ಕಳೆದುಕೊಂಡ ಗುರುರಾಜ ಅವರು ತಂದೆಯ ಶಿಸ್ತಿನ ತರಬೇತಿಯಲ್ಲಿ ಬೆಳೆದರು. ಮುಂದೆ ಹಾವೇರಿಯ ಮುನ್ಸಿಪಲ್ ಹೈಸ್ಕೂಲಿನಲ್ಲಿ ವಿದ್ಯಾಬ್ಯಾಸ ಮುಗಿಸಿ, ಹೆಚ್ಚಿನ ವ್ಯಾಸಂಗಕ್ಕಾಗಿ ಧಾರವಾಡದ ಕಡೆ ಮುಖಮಾಡಿದರು.

ADVERTISEMENT

ಆಗ ಮುಂಬೈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುತ್ತಿದ್ದ ಮೆಟ್ರಿಕ್ಯುಲೇಶನ್‍ನ್ನು 1943ರಲ್ಲಿ ಆಮೂರರು ಒಂಬತ್ತನೆಯ ರ‍್ಯಾಂಕ್ ಗಿಟ್ಟಿಸಿಕೊಳ್ಳುವುದರ ಮೂಲಕ ಪಾಸಾದರು. 1947ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ ಇಂಗ್ಲಿಷ್‌ ಆನರ್ಸ್‍ನ್ನು, 1949ರಲ್ಲಿ ಎಂ.ಎ. ಇಂಗ್ಲಿಷ್‌ ಮುಗಿಸಿ, ಮುಂಬೈ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನಗಳಿಸಿದರು. ಬಡತನದ ಕಾರಣದಿಂದ ಅರೆಕಾಲಿಕ ಕೆಲಸವನ್ನು ಮಾಡುತ್ತ ಧಾರವಾಡದಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ ಆಮೂರರು ಬಂಧು-ಬಳಗದವರ ಮನೆಯಲ್ಲಿದ್ದು ತಮ್ಮ ವಿದ್ಯಾಬ್ಯಾಸ ಪೂರೈಸಿದರು. ಅವರು ವಿದ್ಯಾರ್ಥಿಯಾಗಿ ನಾಟಕಕಾರ ಶ್ರೀರಂಗರ ಮನೆಯಲ್ಲಿಯೂ ಕೆಲವು ದಿವಸಗಳವರೆಗೆ ಇದ್ದದ್ದುಂಟು.

ಕರ್ನಾಟಕದ ಏಕೀಕರಣ ಚಳವಳಿಯ ಕಾವು ಒಂದು ಕಡೆಯಾದರೆ, ಸ್ವಾತಂತ್ರ್ಯ ಸಂಗ್ರಾಮದ ಹುರುಪು ಇನ್ನೊಂದು ಕಡೆ ಇದ್ದ ಕಾಲವದು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್.ಆರ್ ಬೊಮ್ಮಾಯ ಅವರು ಜಿ.ಎಸ್. ಆಮೂರರ ಸಹಪಾಠಿಗಳು. ಅವರೊಡನೆ ಇವರು ಎಂ.ಎನ್ ರಾಯ್ ಅವರ ಪ್ರಭಾವಕ್ಕೆ ಬಂದರು. ಕನ್ನಡ ಸಾರಸ್ವತ ಲೋಕದ ದ.ರಾ. ಬೇಂದ್ರೆ, ಶಂಭಾ ಜೋಶಿ ಅಂಥವರ ನಂಟಿದ್ದರೂ ಆಮೂರರು ಇಂಗ್ಲಿಷ್‌ ಸಾಹಿತ್ಯದ ಅಧ್ಯಯನದಲ್ಲಿ ತೊಡಗಿಸಿಕೊಂಡು ಡಾ. ವಿ.ಕೃ. ಗೋಕಾಕ ಮತ್ತು ಪ್ರೊ. ಆರಮ್ಯಾಂಡೊ ಮೆನೆಜಿಸ್ ಅವರ ಶಿಷ್ಯರಾದರು. ‘ದಿ ಕಾನ್‍ಸೆಪ್ಟ್ ಆಫ್ ಕಾಮಿಡಿ’ ಎಂಬ ವಿಷಯದ ಕುರಿತು ಪ್ರೊ. ಮೆನೆಜಿಸ್ ಅವರ ಮಾರ್ಗದರ್ಶನದಲ್ಲಿ ತಮ್ಮ ಪಿ.ಎಚ್‍ಡಿ ಮಹಾಪ್ರಬಂಧ ಬರೆದ ಆಮೂರರು ಮೆನೆಜಿಸ್ ಅವರನ್ನು ತಮ್ಮ ಬೌದ್ಧಿಕ ಗುರುವೆಂದು ಆಗಾಗ ನೆನೆಯುತ್ತಿದ್ದರು.

ಗೋವಾದಿಂದ ಧಾರವಾಡಕ್ಕೆ ಬಂದಿದ್ದ ಮೆನೆಜಿಸ್ ಗ್ರೀಕ್, ಲ್ಯಾಟಿನ್‌ ಸಾಹಿತ್ಯಗಳನ್ನು ಅಪಾರವಾಗಿ ಓದಿಕೊಂಡಿದ್ದ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದರು. ಅವರ ಗಾರುಡಿಯಲ್ಲಿ ಬೆಳೆದ ಯುವ ಆಮೂರರು ಇಂಗ್ಲಿಷ್‌ ಸಾಹಿತ್ಯದ ಬೋಧನೆ ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಬಹುಶಃ ಧಾರವಾಡ ಪರಿಸರದಲ್ಲಿ, ಇಂಗ್ಲಿಷ್‌ ವಿಷಯದಲ್ಲಿ ಇವರದು ಎರಡನೆ ಪಿ.ಎಚ್‍ಡಿ ಇರಬೇಕು; ಮೊದಲನೆಯದು ಇವರ ಸಹೋದ್ಯೊಗಿಯಾಗಿದ್ದ ಡಾ. ಎಂ.ಕೆ. ನಾಯ್ಕ್ ಅವರದು. ಲೇಖಕರ ಕೃತಿಗಳ ಕುರಿತು ಅಧ್ಯಯನ ಮಾಡುವ ರೂಢಿ ಇದ್ದ ಆ ಕಾಲದಲ್ಲಿ ‘ಕಾಮಿಡಿ’ ಅಂತಹ ಪರಿಕಲ್ಪನೆಯ ಕುರಿತು ಅಧ್ಯಯನ ಕೈಗೊಳ್ಳುವುದು ವಿನೂತನವಾದರೂ ಶೈಕ್ಷಣಿಕವಾಗಿ ರಿಸ್ಕಿನ ಕೆಲಸವಾಗಿತ್ತು. ಈ ಎಲ್ಲ ತೊಡಕಿನ ಹೊರತಾಗಿಯೂ ಆಮೂರರು ಎಂತಹ ವಿಶಿಷ್ಟ ಕೆಲಸ ಮಾಡುತ್ತಾರೆಂದರೆ ಅವರ ಮಹಾಪ್ರಬಂಧ ಪ್ರಕಟಣೆಯ ನಂತರ ಪಶ್ಚಿಮದ ವಿದ್ವಾಂಸರು ಇವರನ್ನು ತಮ್ಮ ಅಧ್ಯಯನಗಳಲ್ಲಿ ಉದ್ಧರಿಸುತ್ತಾರೆ.

ಕುಮಟಾದ ಬಾಳಿಗಾ ಕಾಲೇಜು, ಗದುಗಿನ ಜೆ.ಟಿ. ಕಾಲೇಜುಗಳಲ್ಲಿ ಇಂಗ್ಲಿಷ್‌ ಉಪನ್ಯಾಸಕರಾಗಿ ಕೆಲಸ ಮಾಡಿ, ತದನಂತರ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಲ್ಲಿಯೂ ಸೇವೆ ಸಲ್ಲಿಸಿದ ಆಮೂರರು ಔರಂಗಾಬಾದನಲ್ಲಿರುವ ಡಾ. ಬಾಬಾ ಸಾಹೇಬ ಅಂಬೇಡ್ಕರ ಮರಾಠವಾಡ ಯುನಿವರ್ಸಿಟಿಯಲ್ಲಿ 1968ರಿಂದ 1985ರವರಗೆ ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. 1972-73ರಲ್ಲಿ ಸೀನಿಯರ್ ಫುಲ್‍ಬ್ರೈಟ್ ಫೆಲೋಶಿಪ್ ಪಡೆದು ಅಮೆರಿಕದ ಸಾಂತಾ ಬಾರ್ಬರಾ ಹಾಗೂ ಯೇಲ್ ವಿವಿಗಳಲ್ಲಿ ಸಂಶೋಧನೆ ಹಾಗೂ 1973ರಲ್ಲಿ ಬ್ರಿಟಿಷ್‌ ಕೌನ್ಸಿಲ್ ಸಹಾಯದಿಂದ ಇಂಗ್ಲೆಂಡ್‍ನಲ್ಲಿ ಸಂಶೋಧನೆ ಮಾಡಿದ ಆಮೂರರು ಪಶ್ಚಿಮದ ವಿದ್ವತ್ ಜೀವನ ಕ್ರಮಕ್ಕೆ ಮಾರು ಹೋಗಿದ್ದರು.

ತಮ್ಮ ವೃತ್ತಿ ಜೀವನವನ್ನೆಲ್ಲಾ ಇಂಗ್ಲಿಷ್‌ ಅಧ್ಯಯನದ ಜ್ಞಾನಶಿಸ್ತಿಗೆ ಅರ್ಪಿಸಿಕೊಂಡಿದ್ದ ಆಮೂರರು, ತಮ್ಮ ಮಾತುಕತೆಯಲ್ಲಿ ಆಗಾಗ ಹೇಳುತ್ತಿದ್ದುದು ಏನೆಂದರೆ ‘ಭಾರತೀಯ ಇಂಗ್ಲಿಷ್‌ ಪ್ರಾಧ್ಯಾಪಕರು ತಮ್ಮ ವೃತ್ತಿ ಧರ್ಮಕ್ಕೆ ತಕ್ಕುದುದಾಗಿ ಇಂಗ್ಲಿಷ್‌ ಅಧ್ಯಯನದಲ್ಲಿ ಕೆಲಸ ಮಾಡಲೇಬೇಕು. ನಂತರ ಅವರು ತಮ್ಮ ಸೇವೆಯನ್ನು ತಮ್ಮ ಮಾತೃಭಾಷಾ ಸಾಹಿತ್ಯ, ಸಂಸ್ಕೃತಿ ಅಧ್ಯಯನಕ್ಕೆ ಮೀಸಲಿಡಬೇಕು’. ಅದರಂತೆಯೇ ತಮ್ಮ ನಿವೃತ್ತಿವರೆಗೂ ಅವರು ಇಂಗ್ಲಿಷ್‌ ಅಧ್ಯಯನದ ಹಲವು ಪ್ರಕಾರಗಳಾದ ಇಂಗ್ಲಿಷ್‌ ಸಾಹಿತ್ಯ, ಯುರೋಪಿನ ಸಾಹಿತ್ಯ, ಅಮೇರಿಕೆಯ ಸಾಹಿತ್ಯ, ಭಾರತೀಯ ಇಂಗ್ಲಿಷ್‌ ಸಾಹಿತ್ಯ, ಕಾಮನ್‍ವೆಲ್ತ್ ಸಾಹಿತ್ಯ ಇತ್ಯಾದಿಗಳಲ್ಲಿ ಕೆಲಸ ಮಾಡಿದರು.

ಸುಮಾರು 20 ಕೃತಿಗಳನ್ನು ಆಮೂರರು ಇಂಗ್ಲಿಷ್‌ನಲ್ಲಿ ರಚಿಸಿದ್ದಾರೆ. ಈ ಕೃತಿಗಳಲ್ಲಿರುವ ಹೆಚ್ಚಿನ ಲೇಖನಗಳು ಜಗತ್ ಪ್ರಸಿದ್ಧ ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇಂಗ್ಲಿಷ್‌ ಅಧ್ಯಯನದ ಜ್ಞಾನಶಿಸ್ತಿಗೆ ಅವರ ಮುಖ್ಯ ಕೊಡುಗೆ ಎಂದರೆ ಭಾರತೀಯ ಇಂಗ್ಲಿಷ್‌ ಸಾಹಿತ್ಯದ ಕುರಿತು ಮಾಡಿದ ಅಧ್ಯಯನಗಳು. ಈ ಕ್ಷೇತ್ರ ಶೈವಾವಸ್ಥೆಯಲ್ಲಿರುವಾಗ 1968ರಲ್ಲಿ ಕ್ರಿಟಿಕಲ್ ಎಸೆಜ್ ಆನ್ ಇಂಡಿಯನ್ ರೈಟಿಂಗ್ ಇನ್ ಇಂಗ್ಲಿಷ್‌ ಎನ್ನುವ ಗ್ರಂಥದ ಯೋಜನೆಯನ್ನು ಹಾಕಿಕೊಂಡು ಇತರರೊಂದಿಗೆ ಸಂಪಾದನೆ ಮಾಡಿದ್ದು ಭಾರತೀಯ ಇಂಗ್ಲಿಷ್‌ ಸಾಹಿತ್ಯದ ಅಧ್ಯಯನದ ಇತಿಹಾಸದಲ್ಲಿ ಒಂದು ಮೈಲಿಗಲ್ಲು.

ಪ್ರೊ.ಸಿ.ಡಿ. ನರಸಿಂಹಯ್ಯ ಅವರ ನೇತೃತ್ವದಲ್ಲಿ ಆರ್ನಲ್ಡ್ ಹೈನ್‍ಮನ್ ಪ್ರಕಾಶನದ ಸರಣಿಗಾಗಿ ಅವರು 1972ರಲ್ಲಿ ಮನೋಹರ್ ಮಳಗಾಂವ್‍ಕರ್ ಮೇಲೆ ಬರೆದ ಪುಸ್ತಕವು ‘ಮಳಗಾಂವ್‍ಕರ್ ಅವರು ಜನಪ್ರಿಯ ಲೇಖಕ’ ಎಂಬ ಹಣೆಪಟ್ಟಿಯಿಂದ ಹೊರಗೆ ಬಂದು ಸಾಹಿತ್ಯದ ಮುಖ್ಯವಾಹಿನಿಗೆ ಬರುವಂತಾಯಿತು. ಹೀಗೆ ಆರ್.ಕೆ ನಾರಾಯಣ್, ರಾಜಾರಾವ್ ಇನ್ನಿತರ ಭಾರತೀಯ ಲೇಖಕರ ಕುರಿತ ಅಧ್ಯಯನಗಳು ಹಾಗೂ ಡೆಕ್ಕನ್ ಹೆರಾಲ್ಡ್‌ಗೆ ಅವರು ಮಾಡುತ್ತಿದ್ದ ಪುಸ್ತಕ ಪರಿಚಯಗಳು ಹಲವು ಸಂಕಲನಗಳಲ್ಲಿ ಪ್ರಕಟಗೊಂಡಿವೆ. ಅವರ ಇಂಗ್ಲಿಷ್‌ ಗದ್ಯವು ಕನ್ನಡದ ಗದ್ಯಕ್ಕಿಂತಲೂ ಸಹಜವೂ, ಹೆಚ್ಚು ಬಿಗಿಯಾಗಿರುವುದು ಕಂಡುಬರುತ್ತದೆ.

ಆಮೂರರ ಇಂಗ್ಲಿಷ್‌ ಅಧ್ಯಯನದ ಸೇವೆ ಕೇವಲ ಪ್ರಕಟಣೆಗೆ ಸಿಮೀತಗೊಂಡಿರಲಿಲ್ಲ. ಪಾಠ ಬೋಧನೆ ಇಷ್ಟಪಡುತ್ತಿದ್ದ ಅವರು ಮೊಟ್ಟಮೊದಲು ತಮ್ಮನ್ನು ತಾವೊಬ್ಬ ಶಿಕ್ಷಕನನ್ನಾಗಿ ಪರಿಭಾವಿಸಿದ್ದರು. ತರಗತಿಗೆ ಅವರು ತಯಾರಿ ಮಾಡಿದ ಟಿಪ್ಪಣಿಗಳನ್ನು ಗಮನಿಸಿದರೆ, ಅದೊಂದು ಸಂಶೋಧನೆಯ ಕೆಲಸದಂತೆ ಕಾಣುತ್ತದೆ. ಅದರಾಚೆಗೆ ಅವರ ಬದ್ಧತೆ ಎದ್ದು ಕಾಣುವುದು ಔರಂಗಾಬಾದನಲ್ಲಿ ಇಂಗ್ಲಿಷ್‌ ವಿಭಾಗವನ್ನು ಕಟ್ಟಿದ ರೀತಿ. ‘ವಿವಿಗಳ ಡಿಪಾರ್ಟ್‍ಮೆಂಟ್‍ಗಳನ್ನು ಕಟ್ಟಬೇಕು’ ಎನ್ನುವ ನುಡಿಗಟ್ಟನ್ನು ಉಚ್ಚರಿಸುತ್ತಿದ್ದ ಅವರು ತಾವು ತರಬೇತಿಗೊಳಿಸಿದ ಶಿಷ್ಯವರ್ಗವನ್ನು ಆಯ್ದುಕೊಂಡು ತಮ್ಮ ವಿಭಾಗಕ್ಕೆ ನೇಮಕ ಮಾಡುವಲ್ಲಿ ಮುತುವರ್ಜಿ ವಹಿಸುತ್ತಿದ್ದರು. ಹಲವು ತಲೆಮಾರಿನ ವಿದ್ಯಾರ್ಥಿಗಳನ್ನು ಸೃಷ್ಟಿಸುತ್ತ, ಮುಂದಿನ ತಲೆಮಾರಿನ ಶಿಷ್ಯರನ್ನು ವಿದ್ವಾಂಸರನ್ನಾಗಿಸುವುದು ಅವರ ಸಾಂಸ್ಥಿಕ ಜವಾಬ್ದಾರಿಯೆಂದು ನಂಬಿದ್ದರು. ಮಹಾರಾಷ್ಟ್ರದಲ್ಲಿನ ಅಪಾರ ಶಿಷ್ಯ ಬಳಗದಲ್ಲಿ ಜ್ಞಾನಪೀಠ ಪುರಸ್ಕೃತ ಬಾಲಚಂದ್ರ ನೇಮಾಡೆ ಅವರೂ ಒಬ್ಬರು.

ಕನ್ನಡ ನಾಡಿನಿಂದ ದೂರವಿದ್ದರೂ ಕನ್ನಡ ಸಾಹಿತ್ಯದ ಕುರಿತು ಆಗಾಗ ಆಮೂರರು ಬರೆದಿದ್ದುಂಟು. ಆದರೆ ಅವರು ತಮ್ಮ ನಿವೃತ್ತಿಯ ನಂತರ ಧಾರವಾಡದಲ್ಲಿ ನೆಲೆಸಿ ಸಂಪೂರ್ಣ ಕನ್ನಡದ ಅಧ್ಯಯನಕ್ಕೆ ತಮ್ಮ ಕೊನೆ ಉಸಿರಿರುವರೆಗೂ ತಮ್ಮನ್ನು ಮೀಸಲಿಟ್ಟರು. ತಮ್ಮ ಆತ್ಮಕತೆ, ಒಂದು ಕವಿತಾ ಸಂಕಲನ, ಸಂಪಾದಿತ ಕೃತಿಗಳು ಸೇರಿದಂತೆ ಸುಮಾರು 50ಕ್ಕೂ ಹೆಚ್ಚಿನ ಕೃತಿಗಳನ್ನು ಆಮೂರರು ಕನ್ನಡದಲ್ಲಿ ರಚಿಸಿದ್ದಾರೆ. ಹಳಗನ್ನಡ ಸಾಹಿತ್ಯ ಕುರಿತು ಕೆಲವು ಲೇಖನಗಳನ್ನು ಬರೆದಿದ್ದರೂ ಸಾಹಿತ್ಯ ಹಾಗೂ ಸಾಂಸ್ಕೃತಿಗೆ ಸಂಬಂಧಪಟ್ಟ ಇವರ ಸುಮಾರು 36 ಕೃತಿಗಳ ಅಧ್ಯಯನದ ಮುಖ್ಯ ವಸ್ತು ‘ಆಧುನಿಕ ಕನ್ನಡ ಸಾಹಿತ್ಯ’. ಈ ಪರಂಪರೆಯ ಎಲ್ಲ ಪ್ರಕಾರಗಳ ಬಗ್ಗೆ ಬರೆದಿರುವ ಆಮೂರರು ಬಹುಶಃ ಕನ್ನಡದಲ್ಲಿ ಅತಿ ಹೆಚ್ಚು ಉಲ್ಲೇಖಗೊಂಡ ವಿದ್ವಾಂಸರಿರಬೇಕು. ಕನ್ನಡ ಕಥನ ಸಾಹಿತ್ಯ: ಕಾದಂಬರಿ ಹಾಗೂ ಕನ್ನಡ ಕಥನ ಸಾಹಿತ್ಯ: ಸಣ್ಣಕತೆ ಇವುಗಳು ಕನ್ನಡ ಕಥನ ಪರಂಪರೆಯ ಇತಿಹಾಸವನ್ನು ಪುನರ್‍ರಚಿಸುವ ಅತ್ಯುತ್ತಮ ಪ್ರಯತ್ನಗಳು. ಗಿರಡ್ಡಿ ಗೋವಿಂದರಾಜ ಅವರ ಒತ್ತಾಸೆಯ ಮೇರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡ ಆಮೂರರ ಎಸೆಜ್ ಇನ್ ಮಾಡರ್ನ್ ಕನ್ನಡ ಲಿಟರೇಚರ್ (2001)ನಲ್ಲಿನ ಬಿಡಿ ಲೇಖನಗಳು ಆಧುನಿಕ ಕನ್ನಡ ಸಾಹಿತ್ಯದ ಇತಿಹಾಸವನ್ನು ಹೇಳುತ್ತವೆ.

ಅನಕೃ, ದ.ರಾ. ಬೇಂದ್ರೆ, ಶ್ರೀರಂಗ, ಶಾಂತಿನಾಥ ದೇಸಾಯಿ, ಗಿರೀಶ ಕಾರ್ನಾಡ, ವಿ.ಕೃ. ಗೋಕಾಕ, ಯು. ಆರ್ ಅನಂತಮೂರ್ತಿ, ಕೆರೂರ ವಾಸುದೇವಾಚಾರ್ಯ ಹಾಗೂ ಕುವೆಂಪು ಈ ಎಲ್ಲ ಲೇಖಕರ ಬಗ್ಗೆ ಬರೆದ ಪುಸ್ತಕಗಳಲ್ಲಿ, ಬೇಂದ್ರೆ ಕುರಿತ ಭುವನದ ಭಾಗ್ಯ (1991) ಹಾಗೂ ಶ್ರೀರಂಗರ ಕುರಿತ ವಿರಾಟ ಪುರುಷ: ಶ್ರೀರಂಗ ಸಾಹಿತ್ಯ ಸಮೀಕ್ಷೆ (1998) ಈ ಎರಡು ಗ್ರಂಥಗಳು ಆಧುನಿಕ ಕನ್ನಡದ ವಿಮರ್ಶಾ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದಿವೆ.

ಆಮೂರರು ಮತ್ತೆ ಮತ್ತೆ ಅಧ್ಯಯನ ಮಾಡಿದ ಒಬ್ಬ ಬರಹಗಾರನೆಂದರೆ ಬೇಂದ್ರೆ. ಇಂಗ್ಲಿಷ್‌ ಭಾಷೆಯಲ್ಲಿ ಒಳಗೊಂಡಂತೆ, ಬಿಡಿ ಲೇಖನಗಳು, ಪುಸ್ತಿಕೆ, ಪುಸ್ತಕಗಳನ್ನು ಸೇರಿ ಒಟ್ಟಾರೆ ಆರು ಕೃತಿಗಳನ್ನು ಬೇಂದ್ರೆ ಕುರಿತು ಬರೆದ ಆಮೂರರು ಭುವನದ ಭಾಗ್ಯದಲ್ಲಿ ಬೇಂದ್ರೆ ಅವರ ಸಾಹಿತ್ಯವನ್ನು ಅದರ ಚಾರಿತ್ರಿಕ ಸಂದರ್ಭದಲ್ಲಿಟ್ಟು ಇಡಿಯಾಗಿ ನೋಡುವ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅರಳು ಮರಳಿನ ಪೂರ್ವದ ಕವಿಯೇ ನಿಜವಾದ ಬೇಂದ್ರೆ, ನಂತರದ ಕವಿ ಕವಿಯೇ ಅಲ್ಲ ಎನ್ನುವ ಅಭಿಪ್ರಾಯವನ್ನು ಪ್ರಶ್ನಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದ ಭುವನದ ಭಾಗ್ಯ ಬೇಂದ್ರೆ ಅವರ ಎಲ್ಲ ಪ್ರಕಾರದ ಬರವಣಿಗೆಗಳನ್ನು ಅವಲೋಕಿಸಿದ ಮೊದಲ ಗ್ರಂಥವಾಗಿದೆ. ಇದು ಆಮೂರರಿಗೆ ‘ಬೇಂದ್ರೆ ಸ್ಕಾಲರ್’ ಎನ್ನುವ ಭಾಗ್ಯವನ್ನು ತಂದುಕೊಟ್ಟಿತು.

ಶಾಂತಿನಾಥ ದೇಸಾಯಿಯವರ ಓಂ ಣಮೋ, ಅನಕೃ ಅವರ ಸಂಧ್ಯಾರಾಗ, ರಾಘವೇಂದ್ರ ಪಾಟೀಲರ ತೇರು ಈ ಎಲ್ಲ ಕಾದಂಬರಿಗಳನ್ನು ಸೇರಿ, ಆಯ್ದ ಭಕ್ತ ಸಂತರ ಕವಿತೆಗಳನ್ನು ಸೇಂಟ್ಸೆ ಅಂಡ್ ಪೊಯಟ್ಸ್ ಶೀರ್ಷಿಕೆಯಡಿಯಲ್ಲಿ ಹಾಗೂ ಬೇಂದ್ರೆಯವರ ಕೆಲವು ಕವಿತೆಗಳನ್ನು ಸ್ಪೈಡರ್ ಅಂಡ್ ದಿ ವೆಬ್ ಶೀರ್ಷಿಕೆಯಡಿಯಲ್ಲಿ ಆಮೂರರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಆದರೆ ಅನುವಾದ ಕುರಿತು ಅವರ ಸಿದ್ಧಾಂತ ಬೇರಯೆ ಆಗಿತ್ತು. ನಾವು ಇತರ ಭಾಷೆಯಿಂದ ನಮ್ಮ ಭಾಷೆಗೆ ಅನುವಾದ ಮಾಡಬೇಕೇ ಹೊರತು ನಮ್ಮ ಭಾಷೆಯಿಂದ ಅನ್ಯ ಭಾಷೆಗೆ ಅಲ್ಲವೆಂದು ವಾದಿಸುತ್ತಿದ್ದರು. ಏಕೆಂದರೆ ಅವರ ಪ್ರಕಾರ ಅನುವಾದ ಒಂದು ಸಾಂಸ್ಕೃತಿಕ ಅಗತ್ಯ, ‘ನಮ್ಮಲ್ಲಿ ಇಲ್ಲದ್ದನ್ನು ತಂದುಕೊಳ್ಳುವ’ ಬೌದ್ಧಿಕ ವ್ಯವಹಾರ. ಅದಕ್ಕಿಂತಲೂ ಮುಖ್ಯವಾಗಿ ಒಬ್ಬ ಅನುವಾದಕನಿಗೆ ಅನ್ಯ ಭಾಷೆಯಿಂದ ತನ್ನ ಮಾತೃ ಭಾಷೆಗೆ ಅನುವಾದ ಮಾಡುವಲ್ಲಿರುವ ನೈಪುಣ್ಯ ಅನ್ಯ ಭಾಷೆಗೆ ಮಾಡುವುದರಲ್ಲಿ ಇರುವುದಿಲ್ಲ. ಭುವನದ ಭಾಗ್ಯದಲ್ಲಿ ಬೇಂದ್ರೆ ಅವರು ಕೈಗೊಂಡ ಅನುವಾದಗಳ ವಿಶ್ಲೇಷಣೆ ಮಾಡುತ್ತ, ಆಮೂರರು ಅನುವಾದ ಕ್ರಿಯೆ ನಡೆದಾಗ ಹೇಗೆ ಅನುವಾದಕನು ಕೆಲವು ಅರ್ಥವಿನ್ಯಾಸಗಳನ್ನು ಕಳೆದುಕೊಳ್ಳುತ್ತಾನೆ, ಹೊಸ ಅರ್ಥಗಳನ್ನು ಸೃಷ್ಟಿಸುತ್ತಾನೆ ಹಾಗೂ ಅರ್ಥಗಳನ್ನು ವಿನಿಮಯ ಮಾಡಿಕೊಳ್ಳುತ್ತಾನೆ ಎಂದು ವಿವರಿಸುತ್ತಾರೆ. ಅವರ ಪ್ರಕಾರ ಅನುವಾದದಲ್ಲಿ ಶಬ್ಧಾರ್ಥಗಳನ್ನು ಕಳೆದುಕೊಳ್ಳುವುದು, ಪಡೆದುಕೊಳ್ಳುವುದು ಹಾಗೂ ವಿನಿಮಯ ಮಾಡಿಕೊಳ್ಳುವುದು ಅನಿವಾರ್ಯ.

ತಮ್ಮ ಜೀವನದುದ್ದಕ್ಕೂ ಹೊಸ ಅಧ್ಯಯನ ಕ್ಷೇತ್ರಗಳಲ್ಲಿ ಆಸಕ್ತಿ ತೋರಿಸಿದ ಆಮೂರರು, ಇಂಗ್ಲಿಷ್‌ ಸಾಹಿತ್ಯ ಬಿಟ್ಟು, ಕನ್ನಡ ಸಾಹಿತ್ಯದ ನಂಟನ್ನು ಬೆಳೆಸಿಕೊಂಡರು. ಹಾಗೆಯೆ ತಮ್ಮ ಕೊನೆಯ ಒಂದು ದಶಕದಲ್ಲಿ ಸಾಹಿತ್ಯ ಕ್ಷೇತ್ರವನ್ನು ಬಿಟ್ಟು ಭಾರತೀಯ ಅಭಿಜಾತ ಚಿಂತನಾ ಪರಂಪರೆ, ಅದಕ್ಕೆ ಸಂಬಂಧಪಟ್ಟ ಪಠ್ಯಗಳೊಡನೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 2013ರಲ್ಲಿ ಪ್ರಕಟಗೊಂಡ ಅವರ ಲೋಕಯಾತ್ರೆ ನಮ್ಮ ಜೀವನವನ್ನು ಒಂದು ಯಾತ್ರೆಯ ರೂಪಕದಲ್ಲಿ ಪರಿಕಲ್ಪಿಸುವ ಮಹಾಭಾರತವನ್ನು ಶ್ರೇಷ್ಠ ಲೌಕಿಕ ಕಾವ್ಯ, ಮನುಷ್ಯ ಲೋಕದ ಕತೆ ಎಂದು ಪರಿಶೋಧಿಸುತ್ತದೆ. 2017ರಲ್ಲಿ ಪ್ರಕಟಗೊಂಡ ಅವರ ಯೋಗಶಾಸ್ತ್ರ ಶ್ರೀಮದ್ಭಗವದ್ಗೀತೆಯನ್ನು ಶ್ರೀಕೃಷ್ಣನ ಯೋಗಶಾಸ್ತ್ರವಾಗಿ ನೋಡುತ್ತದೆ. ಕೊನೆಯದಾಗಿ ಶ್ರೀ ದಕ್ಷಿಣಮೂರ್ತಿ ಸ್ತ್ರೋತ್ರ ಕುರಿತು ಸುಬ್ಬರಾಮಯ್ಯ ಅವರು ಬರೆದ ಅದ್ವೈತ ತತ್ವಜ್ಞಾನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಆಮೂರರು ಅನುವಾದಿಸಿದರು.

ಆಧುನಿಕ ಯುಗಧರ್ಮದ ಕೂಸಾಗಿದ್ದ ಆಮೂರರು ಸ್ವಾಭಾವಿಕವಾಗಿ ಪಶ್ಚಿಮದ ವಿಮರ್ಶೆಯ ಒಡಲಾಳದಿಂದಲೇ ತಮ್ಮ ವಿಮರ್ಶಾ ಪ್ರಸ್ಥಾನಗಳನ್ನು ರೂಢಿಸಿಕೊಂಡಿದ್ದರು. ಉಳಿದೆಲ್ಲ ವಿಮರ್ಶಕರಂತೆ ಇವರು ಕೇವಲ ಪಶ್ಚಿಮದ ವಿಮರ್ಶಾ ಪ್ರಜ್ಞೆಯನ್ನು ಪಡೆದುಕೊಳ್ಳಲಿಲ್ಲ, ಅದರ ಜೊತೆಗೆ ಪಶ್ಚಿಮದ ಬೌದ್ಧಿಕ ಶಿಸ್ತು, ಬದ್ಧತೆಯನ್ನು ಮೆಚ್ಚುತ್ತ ತಮ್ಮ ವಿಮರ್ಶೆಯ ಆಚರಣಿಯಲ್ಲಿ ಕರಗತ ಮಾಡಿಕೊಂಡಿದ್ದರು. ಅಂತಯೆ ಅವರ ವಿಶ್ಲೇಷಣೆ ಉಳಿದ ವಿದ್ವಾಂಸರ ಅಭಿಪ್ರಾಯಗಳನ್ನು ಚರ್ಚಿಸದೇ ಮುಂದುವರೆಯುತ್ತಿರಲಿಲ್ಲ. ಈ ದೃಷ್ಟಿಕೋನದಿಂದ ವಿಮರ್ಶೆ ಎನ್ನುವುದು ಒಂದು ಸಂವಾದವೆಂದು ಆಮೂರರು ನಂಬಿದ್ದರು. ಕೃತಿಗಳ ವಸ್ತುನಿಷ್ಠ ಮೌಲ್ಯಮಾಪನ, ಸಮತೂಕದ ವ್ಯಾಖ್ಯಾನ, ಅಚ್ಚುಕಟ್ಟಾದ ನಿರೂಪಣೆ ಮಾಡುವ ಅವರ ಅಧ್ಯಯನಗಳು ಮೂಲತ ಕೃತಿನಿಷ್ಠ ವಿಮರ್ಶಾ ಮಾದರಿಗಳಾಗಿವೆ.

1986ರಲ್ಲಿ ಪ್ರಕಟವಾದ ಅವರ ಲೇಖನ “ವಿಮರ್ಶೆಗೆ ಬಂದ ವಿಪತ್ತು”, ಪಶ್ಚಿಮದ ವಿಮರ್ಶಾ ಪದ್ಧತಿ ಭಾರತದಂತ ಪಶ್ಚಿಮೇತರ ಸಂಸ್ಕೃತಿಗಳಲ್ಲಿ ಸಸಿ ನೆಟ್ಟಕೂಡಲೇ ಒಣಗಿ ಹೋಗುತ್ತಿರುವುದಕ್ಕೆ ಏನು ಕಾರಣವೆಂದು ಜಿಜ್ಞಾಸೆ ನಡೆಸುತ್ತದೆ. ಈ ವಿಪತ್ತಿನ ಹತ್ತು ಹಲವು ಮುಖಗಳನ್ನು ಶೋಧಿಸುವ ಈ ಲೇಖನ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳುತ್ತ, ವಿಮರ್ಶೆಯ ಪರಿಭಾಷೆ ಹೇಗಿರಬೇಕೆಂದು ಹಲವು ಸೂಚನೆಗಳನ್ನು ನೀಡುತ್ತದೆ. ಅಂಥವುಗಳಲ್ಲಿ ಒಂದಾದ ‘ಲಿಟರರಿ ಸ್ಕಾಲರ್‍ಶಿಪ್’ಎನ್ನುವ ವಿಚಾರ ಆಮೂರರ ವಿಮರ್ಶಾ ಪ್ರಸ್ಥಾನದ ತಳಪಾಯವನ್ನು ತೆರೆದಿಡುತ್ತದೆ. ಪರಂಪರೆಯ ಇಡಿಯಾದ ತಿಳಿವಳಿಕೆ ವಿಮರ್ಶೆಗೆ ಅತ್ಯವಶ್ಯ ಎನ್ನುವ ಆಮೂರರು ಯಲಿಯಟ್-ಲಿವಿಸ್ ಅವರ ಪ್ರಭಾವದ ಆಚೆ ಪಾಂಡಿತ್ಯ, ಆಳವಾದ ಅಧ್ಯಯನ, ಅಂತಪಠ್ಯಗಳ ಅರಿವು ಕನ್ನಡದ ವಿಮರ್ಶಾ ಕ್ರಿಯಾಪ್ರಕ್ರಿಯೆಗೆ ಎಷ್ಟು ಅತ್ಯವಶ್ಯಕ ಎಂದು ಗುರುತಿಸುವುದತ್ತರ ಗಮನಹರಿಸಿದೆ. ಕನ್ನಡ ಅಧ್ಯಯನ ಈ ತಿಳಿವಳಿಕೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಸಂಗತಿಯಾಗಿದೆ.

ಧಾರವಾಡ ಸಾಹಿತ್ಯ ಸಂಸ್ಕೃತಿ ಹೇಗೆ ಹರಟೆಯನ್ನು ಫಲವತ್ತಾಗಿ ಬಳಸಿಕೊಂಡಿದೆ ಎಂಬುದು ಅಧ್ಯಯನಕ್ಕೆ ಯೋಗ್ಯವಾದ ವಸ್ತುವಾಗಿದೆ. ಮನೋಹರ ಗ್ರಂಥಮಾಲೆ ಕಟ್ಟಡದ ಅಟ್ಟ ಹರಟೆಗೆ ಮನೆ ಮಾತಾಗಿತ್ತು. ಕೀರ್ತಿನಾಥ ಕುರ್ತಕೋಟಿ ಅವರು ಹೊರಗಿನವರಿಗೆ ‘ಹೊಟ್ಟೆ ತುಂಬ ಮಾತಾಡೋಣ, ಧಾರವಾಡಕ್ಕೆ ಬನ್ನಿ’ ಎಂದು ಹೇಳುತ್ತಿದ್ದುದನ್ನು ಕೆಲವರು ನೆನಪಿಸಿಕೊಳ್ಳುತ್ತಾರೆ. ಆಮೂರರು ಕೂಡ ಮಾತು ಪ್ರಿಯರಾಗಿದ್ದರು. ಮನೆಗೆ ಬಂದವರ ಜೊತೆ ಮಾತನಾಡುವುದು ತಾವು ಬರೆಯುತ್ತಿರುವ ವಿಷಯ ಅಥವಾ ಆಲೋಚನೆ ಮಾಡುತ್ತಿರುವ ಸಂಗತಿಯ ಬಗ್ಗೆ ಸ್ಪಷ್ಟತೆಯನ್ನು ಸಾಧಿಸುವ ಆಚರಣೆಯೂ ಆಗಿತ್ತು. ಗಂಟೆಗಟ್ಟಲೇ ಅವರು ಫೋನಿನಲ್ಲಿ ಮಾತನಾಡುತ್ತಿದ್ದುದುಂಟು. ಸಾಮಾಜಿಕ ಸಂವಹನವಾಗಿ ಪ್ರಾರಂಭವಾಗುತ್ತಿದ್ದ ಹರಟೆ ಅವರ ಸಹವಾಸದಲ್ಲಿ ಬೌದ್ಧಿಕತೆಯ ಎತ್ತರಕ್ಕೇರುತ್ತಿತ್ತು, ಗಾಸಿಪ್‍ನ್ನು ಬಲುದೂರವಿಡುತ್ತಿತ್ತು.

ಜನಪ್ರಿಯ ಇಂಗ್ಲಿಷ್‌ ಕಾದಂಬರಿಗಳನ್ನು ಹವ್ಯಾಸಕ್ಕಾಗಿ ಓದುತ್ತಿದ್ದ ಆಮೂರರು ‘ನ್ಯೂಯಾರ್ಕ್‌ ರಿವ್ಯೂ ಆಫ್ ಬುಕ್ಸ್’ನಲ್ಲಿ ಸಮಕಾಲೀನ ಹೊಸ ವಿಚಾರಗಳನ್ನು ಹುಡುಕುತ್ತಿದ್ದರು. ಕ್ರಿಕೆಟ್, ಚಹಾ ಅವರಿಗೆ ಬಲು ಇಷ್ಟ. ವಿ.ಎಸ್. ನೈಪಾಲ್‍ರ ಬರವಣಿಗೆ ಮೆಚ್ಚುತ್ತಿದ್ದ ಅವರು, ಆರ್‌ಬ್ಯಾಕ್, ಲುಕ್ಯಾಚ್, ಎಫ್ ಆರ್ ಲಿವಿಸ್ ಹಾಗೂ ಎಡ್ವರ್ಡ ಸೈದ್‍ರ ವಿಚಾರಗಳಿಂದ ತಾವು ಕಲಿತಿದ್ದನ್ನು ಸ್ಮರಿಸಿಕೊಳ್ಳುತ್ತಿದ್ದರು.

ದೇವರನ್ನು ನಂಬುತ್ತಿದ್ದ ಆಮೂರರು, ತಾವೊಬ್ಬ ಸೆಲ್ಪ್-ಮೇಡ್-ಮ್ಯಾನ್ ಎನ್ನುವ ಸ್ವಾಭಿಮಾನವೂ ಇತ್ತು. ಆದರೆ ತಮ್ಮ ಆತ್ಮಕಥೆ ನೀರ ಮೇಲಣ ಗುಳ್ಳೆ (2015) ಬರೆಯುವಾಗ ಅವರ ಜೀವನದ ಪರಿಕಲ್ಪನೆ ದಾಸರ ಪರಿಭಾಷೆಯನ್ನು ಅನುಸರಿಸಿತು. ಈ ಜೀವನದಲ್ಲಿ ನಮ್ಮದೇ ಅನ್ನುವುದು ಏನಿಲ್ಲ! ಜೀವನವೆಂದರೆ ಎರವಿನ ಸಂಸಾರ! ಅವರು ತಮ್ಮ ಆತ್ಮಕತೆಗೆ ‘ಎರವಿನ ಸಂಸಾರ’ ಎಂಬ ಶೀರ್ಷಿಕೆ ಕೊಡಬೇಕೆಂದು ಯೋಚಿಸಿದ್ದುಂಟು.

ಧಾರವಾಡದಲ್ಲಿ ನಾನು ವಿದ್ಯಾಭ್ಯಾಸ ಮಾಡುತ್ತಿರುವಾಗ ಉಚಿತ ವಸತಿಯಿಂದ ಹಿಡಿದು, ಹರಟೆ ಹಾಗೂ ಬೌದ್ಧಿಕ ಮಹತ್ವಾಕಾಂಕ್ಷೆಗಳೆಲ್ಲವನ್ನೂ ಅವರಿಂದ ಸಾಕಷ್ಟು ಎರವಲು ಪಡೆದಿದ್ದೇನೆ. ವೈಕ್ತಿಕವಾಗಿ ನಾನು ಆಮೂರರಿಗೆ ಚಿರಋಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.