ವಿಜಯಪುರ ಜಿಲ್ಲೆಯ ಕಾಗ್ಜಿ ನಿಂಬೆಯು ‘ಭೌಗೋಳಿಕ ಸೂಚ್ಯಂಕ’ ಪಟ್ಟ ಗಿಟ್ಟಿಸಿಕೊಂಡಿದೆ. ಹಾಗೆಂದು ಇದೇ ಮೊದಲ ಉತ್ಪನ್ನವೇನಲ್ಲ. ಆದರೆ, ‘ಜಿಐ ನೋಂದಣಿ’ ಪಡೆದ ನಂತರ ಮುಂದೇನು? ರೈತ ಸಮುದಾಯಕ್ಕೆ ಅದರಿಂದ ಹೆಚ್ಚು ಪ್ರಯೋಜನ ಹೇಗೆ ಸಿಕ್ಕೀತು?
ಲೇಖನ: ಆನಂದತೀರ್ಥ ಪ್ಯಾಟಿ
ಪಾರಂಪರಿಕ ಉತ್ಪನ್ನಕ್ಕೊಂದು ವಿಶೇಷ ಮುದ್ರೆಯೊತ್ತುವ ಸುದ್ದಿ ಆಗಾಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತದೆ. ಸಾಂಪ್ರದಾಯಿಕ ತಿಂಡಿ-ತಿನಿಸುಗಳು, ನೈಸರ್ಗಿಕ ಪದಾರ್ಥಗಳು, ಕರಕುಶಲ ವಸ್ತುಗಳು ಪಡೆಯುವ ‘ಜಿಐ ಟ್ಯಾಗ್’ಗೆ ಸಂಬಂಧಿಸಿದಂತೆ ಒಂದಷ್ಟು ಚರ್ಚೆಯಾಗುತ್ತವೆ. ಅದರ ಪ್ರಯೋಜನಗಳು ಜನರಿಗೆ ಗೊತ್ತಾಗುವುದು ಅಸ್ಪಷ್ಟ. ಚರ್ಚೆಯು ಕಾವು ಕಳೆದುಕೊಂಡೊಡನೆ ಪ್ರಯೋಜನದ ಸಂಗತಿಯೂ ಹಿನ್ನೆಲೆಗೆ ಸರಿದುಬಿಡುತ್ತದೆ. ಮತ್ತೆ ‘ಜಿಐ ಟ್ಯಾಗ್’ ಕಾಣಿಸುವುದು ಇನ್ನೊಂದು ಉತ್ಪನ್ನಕ್ಕೆ ಆ ಪಟ್ಟ ಸಿಕ್ಕಾಗಲೇ!
ವಿಶ್ವವೇ ಒಂದು ಅಂಗಡಿಯಾಗಿರುವಾಗ ಒಂದೂರಿನ ಸರಕು ಇನ್ನೊಂದೂರಿಗೆ ಬರಲೆಷ್ಟು ಹೊತ್ತು? ಆದರೆ, ಉತ್ಪನ್ನಗಳ ಪ್ರವಾಹದಲ್ಲಿ ಸ್ಥಳೀಯ ಸೊಗಡಿನ ಸರಕುಗಳು ಅಸ್ತಿತ್ವಕ್ಕೆ ಪರದಾಡಬೇಕಿದೆ. ಪಾರಂಪರಿಕ ಸಾಮಗ್ರಿಗಳಿಗೆ ವಿಶೇಷ ಮೊಹರು ಹಾಕಿ, ಆ ಮೂಲಕ ಜಾಗತಿಕ ಮಟ್ಟದ ಸಂತೆಯಲ್ಲೂ ಸ್ಥಳೀಯ ಸೊಗಡು ಉಳಿಸುವ ಪ್ರಯತ್ನಕ್ಕೆ ‘ಜಿಐ ಟ್ಯಾಗ್’ ರೆಕ್ಕೆಪುಕ್ಕ ಹಚ್ಚುತ್ತದೆ.
ಕೆಲವು ದಿನಗಳ ಹಿಂದೆ ವಿಜಯಪುರ ಜಿಲ್ಲೆಯ ಕಾಗ್ಜಿ ನಿಂಬೆಗೆ ‘ಜಿಐ’ ಹಣೆಪಟ್ಟಿ ಸಿಕ್ಕಾಗ ಮತ್ತೆ ಆ ‘ಟ್ಯಾಗ್’ ಚರ್ಚೆಗೆ ಬಂದಿತು. ನಾಡಿನಲ್ಲಿ ಈವರೆಗೆ ಹತ್ತಾರು ಉತ್ಪನ್ನಗಳಿಗೆ ಈ ಪಟ್ಟ ಸಿಕ್ಕಿದ್ದರೂ, ಹೆಚ್ಚೇನೂ ಮಾಹಿತಿ ಸಿಗದು. ಜನಸಾಮಾನ್ಯರ ಭಾಷೆಯಲ್ಲಿ ‘ಜಿಐ ಟ್ಯಾಗ್’ ಎಂದು ಹೇಳಲಾಗುತ್ತಿದೆ; ವಾಸ್ತವದಲ್ಲಿ ಇದು ನೋಂದಣಿ-‘ಜಿಯಾಗ್ರಫಿಕಲ್ ಇಂಡಿಕೇಶನ್ ರಿಜಿಸ್ಟ್ರಿ’ (ಜಿಐ ನೋಂದಣಿ). ಚೆನ್ನೈನ ಜಿಯಾಗ್ರಫಿಕಲ್ ಇಂಡಿಕೇಶನ್ಸ್ ರಿಜಿಸ್ಟ್ರಿ ಪ್ರಾಧಿಕಾರವು ಈ ಕೆಲಸ ನಿರ್ವಹಿಸುತ್ತಿದೆ.
ಪೇಟೆಂಟ್ ಮತ್ತು ಜಿಐ ಟ್ಯಾಗ್ ಒಂದೇ ಎನ್ನುವುದು ಸಾಮಾನ್ಯ ವ್ಯಾಖ್ಯಾನ. ಅದು ಸರಿಯಲ್ಲ. ಹೊಸ ಸಂಶೋಧನೆ ಅಥವಾ ತಂತ್ರಜ್ಞಾನಕ್ಕೆ ಪೇಟೆಂಟ್ ಕೊಟ್ಟರೆ, ಸಾಂಪ್ರದಾಯಿಕ ಅಥವಾ ಪಾರಂಪಾರಿಕ ಸಾಮಗ್ರಿಗಳಿಗೆ ‘ಜಿಐ ನೋಂದಣಿ’ ಕೊಡಲಾಗುತ್ತದೆ. ಅದರಲ್ಲೂ ಸ್ಥಳೀಯ ವೈಶಿಷ್ಟ್ಯ ಪ್ರತಿನಿಧಿಸುವ ಕೃಷಿ, ತೋಟಗಾರಿಕೆ, ಕರಕುಶಲ ಕಲಾಕೃತಿ ಅಥವಾ ನೈಸರ್ಗಿಕ ಉತ್ಪನ್ನಗಳಿಗೆ ‘ಜಿಐ ನೋಂದಣಿ’ ಸಿಗುತ್ತದೆ.
ಭಾರತವು ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಮಾರುಕಟ್ಟೆಯ ಗಡಿ ಅಳಿಸಿಹೋಯಿತು. ಈಗ ಇಡೀ ಜಗತ್ತು ಒಂದು ಅಂಗಡಿ! ಮಳಿಗೆಗೆ ಎಲ್ಲೆಲ್ಲಿಂದಲೋ ಬಂದುಬೀಳುವ ಸಾಮಗ್ರಿಗಳಂತೆ, ದೇಶವಿದೇಶಗಳಿಂದ ತರಹೇವಾರಿ ಸರಕು-ಸರಂಜಾಮು ಭಾರತದ ಮಾರುಕಟ್ಟೆಗೆ ಆಮದಾಗುತ್ತಿವೆ. ಹೀಗೆ ಬೇರೆ ಕಡೆಯ ಉತ್ಪನ್ನಗಳು ದೇಶದೊಳಗೆ ಬಂದಾಗ, ನಮ್ಮ ಪಾರಂಪರಿಕ ಉತ್ಪನ್ನಗಳ ಗತಿ ಏನಾದೀತು? ಮಾರುಕಟ್ಟೆಯಲ್ಲಿ ಇವುಗಳನ್ನು ಉಳಿಸಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಉತ್ತರವಾಗಿ ನಮ್ಮದೇ ಸೊಗಡಿನ ಉತ್ಪನ್ನಗಳು ದೇಶ-ವಿದೇಶದ ಮಾರುಕಟ್ಟೆಗಳಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡು, ಅವುಗಳಿಗೆ ವಿಶೇಷ ವಹಿವಾಟಿನ ಅವಕಾಶ ಒದಗಿಸುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವು 2003ರಲ್ಲಿ ‘ಜಿಐ ನೋಂದಣಿ’ ಶುರು ಮಾಡಿತು.
ಅರ್ಧ ದಾರಿಯಷ್ಟೇ
ಕರ್ನಾಟಕ ನಿಂಬೆ ಅಭಿವೃದ್ಧಿ ಮಂಡಳಿಯು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಹಯೋಗದೊಂದಿಗೆ ನಡೆಸಿದ ಐದು ವರ್ಷಗಳ ಪ್ರಯತ್ನದ ಫಲವಾಗಿ ಇಂಡಿ (ಕಾಗ್ಜಿ) ನಿಂಬೆಗೆ ‘ಜಿಐ ಟ್ಯಾಗ್’ ಸಿಕ್ಕಿದೆ.
ಉತ್ಪನ್ನವೊಂದಕ್ಕೆ ‘ಜಿಐ ನೋಂದಣಿ’ ಪಡೆಯುವುದು ಅರ್ಧ ದಾರಿಯಷ್ಟೇ; ಅದಕ್ಕಿಂತ ಹೆಚ್ಚಿನ ಕೆಲಸ ಆ ನಂತರದ್ದೇ ಆಗಿರುತ್ತದೆ. ಆದರೆ ಆ ದ್ವಿತೀಯಾರ್ಧ ಪ್ರಕ್ರಿಯೆ ಬಗ್ಗೆ ಗಂಭೀರವಾಗಿ ಯೋಚಿಸುವವರಿಲ್ಲ ಎಂಬುದು ವಿಪರ್ಯಾಸ! ‘ಜಿಐ ಟ್ಯಾಗ್’ ಪಡೆಯುವುದು ತುಸು ಸಂಕೀರ್ಣವಾದ ಪ್ರಕ್ರಿಯೆ. ಇದರ ಬಗ್ಗೆ ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ಒಂದಷ್ಟು ಅಧ್ಯಯನ ಮಾಡಿದ ಕೆಲವು ರೈತರಿಗೆ ಗೊತ್ತೇ ವಿನಾ, ಅದರ ನಿಜವಾದ ಪ್ರತಿಫಲ ಪಡೆಯಬೇಕಿರುವ ಸಮುದಾಯಗಳಿಗೆ ಆ ಬಗ್ಗೆ ಮಾಹಿತಿಯೇ ಇರುವುದಿಲ್ಲ! ಎಷ್ಟೋ ಜನರಿಗೆ ‘ಜಿಐ ನೋಂದಣಿ’ಯ ಪ್ರಮಾಣಪತ್ರ ಹೇಗಿರುತ್ತದೆ ಎಂಬುದೂ ಗೊತ್ತಿರಲಾರದು.
’ಜಿಐ’ ಲೇಬಲ್ ಪಡೆಯುವ ಉತ್ಪನ್ನದಿಂದ ರೈತ ಸಮುದಾಯ ಲಾಭ ಪಡೆಯದೇ ಇರುವುದಕ್ಕೆ ಮುಖ್ಯ ಕಾರಣ ಇದೇ!
ಮಾರ್ಕೆಟ್ ತಜ್ಞರ ಪ್ರಕಾರ, ‘ಜಿಐ ನೋಂದಣಿ ಎಂಬುದು ವಹಿವಾಟಿಗೊಂದು ಅತ್ಯುತ್ತಮ ಟೂಲ್’. ಉತ್ಪಾದಕನ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಸಂರಕ್ಷಿಸಲು ಇದೊಂದು ಉತ್ತಮ ’ಅಸ್ತ್ರ’. ತಳಮಟ್ಟದಲ್ಲಿ ರೈತ, ಕುಶಲಕರ್ಮಿ ಅಥವಾ ಸಮುದಾಯಗಳ ಪರಂಪರಾಗತ ಸಂಪತ್ತು ಹಾಗೂ ಜ್ಞಾನದ ರಕ್ಷಣೆ ಮಾಡುತ್ತಲೇ, ‘ಜಿಐ ನೋಂದಣಿ’ಯನ್ನು ಮಾರುಕಟ್ಟೆ ಅವಕಾಶ ವಿಸ್ತರಿಸಲು ಬಳಸಬೇಕು. ಆದರೆ ‘ಜಿಐ ಟ್ಯಾಗ್’ ಪಡೆಯುತ್ತಲೇ ಎಲ್ಲರಿಗೂ ಏನೋ ಖುಷಿ, ಸಂತೃಪ್ತಿಯಾಗಿ ನಿರಾಳವಾಗಿ ಬಿಡುತ್ತಾರೆ. ಅಲ್ಲಿಗೆ ಸ್ತಬ್ಧ. ಮುಂದಿನ ಚಟುವಟಿಕೆಗೆ ಆಸಕ್ತಿ ತೋರಿಸುವುದೇ ಇಲ್ಲ ಎಂಬುದನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.
ನಿಂತಲ್ಲೇ ನಿಂತಿವೆ!
ಕರ್ನಾಟಕದ ಹಲವಾರು ಉತ್ಪನ್ನಗಳಿಗೆ ‘ಭೌಗೋಳಿಕ ಸೂಚ್ಯಂಕ ನೋಂದಣಿ’ ಸಿಕ್ಕಿದೆ. ನಂಜನಗೂಡಿನ ರಸಬಾಳೆ, ಮೈಸೂರು ವೀಳ್ಯದೆಲೆ, ಕೊಡಗಿನ ಕಿತ್ತಲೆ, ದೇವನಹಳ್ಳಿಯ ಚಕ್ಕೋತ ಇತ್ಯಾದಿ ಈ ಪಟ್ಟಿಯಲ್ಲಿವೆ. ಆ ಪೈಕಿ ಉಡುಪಿಯ ಮಲ್ಲಿಗೆಯೂ ಒಂದಾಗಿದ್ದು, ‘ಜಿಐ ಟ್ಯಾಗ್’ ಸಿಕ್ಕ ಬಳಿಕ ಮಾರುಕಟ್ಟೆ ವಿಸ್ತಾರಗೊಂಡು ವಿದೇಶಕ್ಕೂ ರಫ್ತಾಗುತ್ತಿದೆ. ಅದು ರೈತ ಸಮುದಾಯಕ್ಕೆ ಸಿಕ್ಕ ಹೆಚ್ಚುವರಿ ಆದಾಯ.
ಹಾಗಾದರೆ ಉಳಿದ ಉತ್ಪನ್ನಗಳ ಪಾಡು? ‘ಅಲ್ಲೇ ನಿಂತಿವೆ’ ಎಂದು ನಿಸ್ಸಹಾಯಕರಾಗಿ ಹೇಳುತ್ತಾರೆ ತೋಟಗಾರಿಕೆ ಅಧಿಕಾರಿಗಳು. ಇದಕ್ಕೆ ಕಾರಣಗಳು ಹಲವು.
ಉತ್ಪನ್ನವೊಂದಕ್ಕೆ ‘ಜಿಐ ಟ್ಯಾಗ್’ ಸಿಕ್ಕಾಗ, ಆಮೇಲಷ್ಟೇ ಅದರ ನಿಜವಾದ ಬಳಕೆಯ ಆರಂಭವಾಗುತ್ತದೆ. ಅದಕ್ಕಾಗಿ ಸುದೀರ್ಘ ಪ್ರಕ್ರಿಯೆಯೇ ನಡೆಯಬೇಕು. ಕೃಷಿ, ತೋಟಗಾರಿಕೆ ಅಥವಾ ಕರಕುಶಲ ಕಲಾಕೃತಿಗೆ ಈ ‘ಟ್ಯಾಗ್’ ದಕ್ಕುವುದರಲ್ಲಿ ಸರ್ಕಾರದ ಸಂಬಂಧಿತ ಇಲಾಖೆಗಳ ಪಾತ್ರ ಹೆಚ್ಚಾಗಿರುತ್ತದೆ. ಆ ಉತ್ಪನ್ನವು ‘ಭೌಗೋಳಿಕ ಸೂಚ್ಯಂಕ’ ಪಡೆಯಲು ಹೇಗೆ ಅರ್ಹ ಎಂಬುದನ್ನು ಸಾಕ್ಷಿ-ಪುರಾವೆ ಒದಗಿಸಿ ‘ಜಿಯಾಗ್ರಫಿಕಲ್ ಇಂಡಿಕೇಶನ್ಸ್ ರಿಜಿಸ್ಟ್ರಿ’ ಪ್ರಾಧಿಕಾರಕ್ಕೆ ಮನದಟ್ಟು ಮಾಡಿಸಬೇಕು. ಬೇರೆ ಸಮುದಾಯ ಅಥವಾ ಪ್ರದೇಶದ ಜನರಿಂದ ಆಕ್ಷೇಪ ಎದುರಾದರೆ, ಸಮಜಾಯಷಿ ಒದಗಿಸಬೇಕು. ಇಷ್ಟೆಲ್ಲ ಮಾಡುವ ಹೊತ್ತಿಗೆ ಇಲಾಖೆಗಳ ಅಧಿಕಾರಿಗಳು ಸುಸ್ತಾಗಿರುತ್ತಾರೆ. ಒಂದೊಮ್ಮೆ ‘ಜಿಐ ಟ್ಯಾಗ್’ ದಕ್ಕಿದ ಬಳಿಕ, ಸುಮ್ಮನಾಗುತ್ತಾರೆ.
ವ್ಯಾಪಕ ಪ್ರಚಾರ ಅಗತ್ಯ
ದ್ವಿತೀಯಾರ್ಧದ ಪ್ರಯತ್ನಗಳು ನಡೆಯದೇ ಹೋದರೆ, ಆ ಪಟ್ಟ ಗಿಟ್ಟಿಸಿಕೊಂಡ ಉತ್ಪನ್ನಕ್ಕೆ ಹೆಚ್ಚೇನೂ ‘ಮೌಲ್ಯ’ ಸಿಗದು. ಇದಕ್ಕಾಗಿ ಮೊದಲಿಗೆ ರೈತರಲ್ಲಿ ‘ಜಿಐ’ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಅದರ ಹಿಂದಿರುವ ಕಾನೂನುಗಳು, ಪ್ರಯೋಜನ, ಮಾರುಕಟ್ಟೆ ಸ್ವರೂಪ, ಕಾರ್ಯತಂತ್ರದ ಬಗ್ಗೆ ರೈತರ ಜತೆಜತೆಗೆ ವಿಜ್ಞಾನಿಗಳಲ್ಲೂ ಜನಪ್ರತಿನಿಧಿಗಳಲ್ಲೂ ಜಾಗೃತಿ ಮೂಡಿಸಬೇಕು. ಈ ಟ್ಯಾಗ್ ಪಡೆದ ಉತ್ಪನ್ನದ ವೈಶಿಷ್ಟ್ಯ ಏನೇನು ಎಂದು ಎಲ್ಲ ಬಗೆಯ ಮಾಧ್ಯಮಗಳಲ್ಲೂ ಪ್ರಚಾರ ಕೊಡಬೇಕು.
ಆಸಕ್ತ ಗ್ರಾಹಕರು ಗುಣಮಟ್ಟದ ಉತ್ಪನ್ನವನ್ನು ತುಸು ಹೆಚ್ಚು ದರ ನೀಡಿಯೂ ಖರೀದಿಸುತ್ತಾರೆ. ಆದರೆ ಈ ತೆರನಾದ ಜಿಐ ಟ್ಯಾಗಿನ ಉತ್ಪನ್ನಗಳ ಖರೀದಿ- ಮಾರಾಟಕ್ಕೊಂದು ವಿಶೇಷ ವೇದಿಕೆಯೇ ಇಲ್ಲ. ಇದರಿಂದಾಗಿಯೇ ನಕಲಿ ಉತ್ಪನ್ನಗಳು ಅಸಲಿ ಹೆಸರಿನಲ್ಲೇ ಮಾರುಕಟ್ಟೆಗೆ ಬಂದು ಬೀಳುತ್ತವೆ. ಅಂಥ ಸಂದರ್ಭದಲ್ಲಿ ಕಾನೂನು ಕ್ರಮ ಜರುಗಿಸುವ ತಂಡದ ಬೆಂಬಲವೂ ಸಮುದಾಯಕ್ಕೆ ಅಗತ್ಯ.
ಇನ್ನು, ಉತ್ತಮ ಮತ್ತು ನಂಬಿಕಾರ್ಹ ಗುಣಮಟ್ಟದ ಪದಾರ್ಥಕ್ಕೆ ದಿಢೀರ್ ಬೇಡಿಕೆ ಕಂಡುಬಂದರೆ ಅದನ್ನು ಪೂರೈಸಲು ರೈತ ಸಮುದಾಯಕ್ಕೆ ಆಗದು. ಇದನ್ನು ಪರಿಗಣಿಸಿ, ರೈತರ ಸಾಮರ್ಥ್ಯವೃದ್ಧಿಗೆ ತರಬೇತಿ ಕೊಡಬೇಕು. ಸಹಜವಾಗಿಯೇ ಹೆಚ್ಚಿನ ರೈತರಿಗೆ ಮಾರುಕಟ್ಟೆ ತಂತ್ರ ಗೊತ್ತಿರುವುದಿಲ್ಲ. ಅದಕ್ಕಾಗಿ ದೇಶ- ಪ್ರಾದೇಶಿಕ ಮಟ್ಟದಲ್ಲಿ ಉತ್ಪನ್ನದ ವಹಿವಾಟು ಸ್ವರೂಪ ಅರಿತು, ಅದಕ್ಕೆ ತಕ್ಕಂತೆ ಉತ್ಪಾದನೆ ಮತ್ತು ವ್ಯಾಪಾರದ ಕಾರ್ಯತಂತ್ರ ರೂಪಿಸಬೇಕು. ಇದಕ್ಕೆ ಸಮಾನಾಂತರವಾಗಿ ಗ್ರಾಹಕರಲ್ಲಿ ಆ ಉತ್ಪನ್ನದ ವೈಶಿಷ್ಟ್ಯದ ಬಗ್ಗೆ ಮೇಳ, ಉತ್ಸವದ ಮೂಲಕ ಅರಿವು ಮೂಡಿಸಬೇಕು.
‘ಮೂಲತಃ ಜಿಐ ನೋಂದಣಿ ಶುರುವಾಗಿದ್ದೇ ಸ್ಥಳೀಯ ಅಥವಾ ಪಾರಂಪರಿಕ ಸಂಪತ್ತನ್ನು ಗುರುತಿಸಿ, ಅದಕ್ಕೊಂದು ವಹಿವಾಟಿನ ಸ್ವರೂಪ ಕೊಟ್ಟು ರೈತ ಸಮುದಾಯಕ್ಕೆ ಹೆಚ್ಚಿನ ಆದಾಯ ಕೊಡುವ ದೃಷ್ಟಿಯಿಂದ’ ಎನ್ನುತ್ತಾರೆ, ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಡಾ. ಕೆ.ರಾಮಕೃಷ್ಣಪ್ಪ. ಟ್ಯಾಗ್ ಮುಂದಿಟ್ಟುಕೊಂಡು ಸಮುದಾಯ ಅಥವಾ ರೈತ ಗುಂಪುಗಳು ಆ ಉತ್ಪನ್ನದ ವಹಿವಾಟಿಗೆ ಮತ್ತೊಂದು ಹೆಜ್ಜೆ ಮುಂದೆ ಹೋಗಬೇಕು ಎಂಬ ಸಲಹೆ ಅವರದು. ಕಮಲಾಪುರದ ಕೆಂಪುಬಾಳೆ, ಮಲೆನಾಡಿನ ಅಪ್ಪೆಮಿಡಿ, ನಂಜನಗೂಡಿನ ರಸಬಾಳೆಗೆ ‘ಜಿಐ ನೋಂದಣಿ’ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅನುಭವ ಹಂಚಿಕೊಳ್ಳುವ ಡಾ. ರಾಮಕೃಷ್ಣಪ್ಪ, ಗ್ರಾಹಕರಲ್ಲಿ ಅರಿವು ಮೂಡಿಸುವುದು ಹಾಗೂ ರೈತಮಟ್ಟದಲ್ಲಿ ಇದಕ್ಕೊಂದು ವಾಣಿಜ್ಯ ಸ್ವರೂಪ ಕೊಡುವುದು- ಈ ಎರಡನ್ನೂ ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಜಿಐ ನೋಂದಣಿಗೆ ಅರ್ಥ ಬಂದೀತು ಎನ್ನುತ್ತಾರೆ.
ವಿಶೇಷ ಮಹತ್ವವುಳ್ಳ ಪದಾರ್ಥವೊಂದರ ಉತ್ಪಾದನೆಗೆ ಭೌಗೋಳಿಕ ಸೀಮೆಯನ್ನು ಗುರುತಿಸಿ, ಅದಕ್ಕೆ ಸ್ಥಳ ಪರಂಪರೆಯ ಮೊಹರು ಒತ್ತುವುದರ ಹಿಂದೆ ‘ವಿಶ್ವ ವಾಣಿಜ್ಯ ಒಪ್ಪಂದ’ದ ನೆರಳು ಇದೆ ಎಂಬುದೂ ಚೋದ್ಯ. ಆದರೆ, ಅದನ್ನು ರೈತ ಸಮುದಾಯದ ಒಳಿತಿಗೆ ಬಳಸಿಕೊಳ್ಳಲು ಸಾಧ್ಯ ಎಂಬುದನ್ನು ಕರ್ನಾಟಕದ ತೋಟಗಾರಿಕೆ ಇಲಾಖೆಯು ಉಡುಪಿಯ ಮಲ್ಲಿಗೆ ಬೆಳೆಗೆ ತೋರಿಸಿಕೊಟ್ಟಿದೆ. ಕೇರಳದಲ್ಲಂತೂ ಕೃಷಿ ವಿಜ್ಞಾನಿ ಡಾ. ಸಿ.ಆರ್. ಎಲ್ಸಿ ಅವರ ಸತತ ಪರಿಶ್ರಮದಿಂದಾಗಿ ಚೆಂಗಲಿಕೋದನ್ ಬಾಳೆ, ಪೊಕ್ಕಾಳಿ ಅಕ್ಕಿ, ಮರಯೂರು ಬೆಲ್ಲ, ಎಡಯೂರು ಮೆಣಸು ಇನ್ನಿತರ ಉತ್ಪನ್ನಗಳು ‘ಜಿಐ’ ಹಣೆಪಟ್ಟಿ ಪಡೆದು ರೈತರಿಗೆ ಹೊಸ ದಾರಿ ತೋರಿಸಿವೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಚಿಕ್ಕಮಗಳೂರು, ಕೊಡಗು ಹಾಗೂ ಬಾಬಾಬುಡನ್‌ಗಿರಿಯ ಜಿಐ ಟ್ಯಾಗ್ ಹೊಂದಿರುವ ಅರೇಬಿಕಾ ಕಾಫಿ ವೈವಿಧ್ಯವನ್ನು ಜನಪ್ರಿಯಗೊಳಿಸಲು ‘ಕಾಫಿ ಎಕೊ ಟೂರಿಸಂ’ ಪ್ರಾರಂಭಿಸುವ ಅಂಶವಿದೆ. ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ ಇವುಗಳ ಉತ್ಪಾದನೆ, ಸಂಶೋಧನೆ, ಮಾರುಕಟ್ಟೆ ಉತ್ತಮಪಡಿಸುವ ಕಾರ್ಯಕ್ರಮಗಳನ್ನು ರೂಪಿಸುವುದಾಗಿಯೂ ಬಜೆಟ್‌ನಲ್ಲಿ ಪ್ರಸ್ತಾವ ಇದೆ. ಅವು ಎಷ್ಟರಮಟ್ಟಿಗೆ ಸಾಕಾರಗೊಳ್ಳಲಿದೆ ಎಂದು ನೋಡಬೇಕು.
ಜಿಐ ಪಡೆದು ಯಶಸ್ಸು ಸಾಧಿಸಿದ ಮಾದರಿಗಳಂತೂ ಕಣ್ಣ ಮುಂದಿವೆ. ಆದರೆ, ಸಾಲು ಸಾಲು ಉತ್ಪನ್ನಗಳನ್ನು ‘ಜಿಐ ನೋಂದಣಿ’ ಪಟ್ಟಿಗೆ ಸೇರಿಸಲು ಉತ್ಸುಕತೆ ತೋರಿಸುವ ಸರ್ಕಾರದ ವಿವಿಧ ಇಲಾಖೆಗಳು, ನಂತರ ಯಾಕೆ ‘ವಿಶ್ರಾಂತಿ ಮೂಡ್’ಗೆ ಜಾರಿಬಿಡುತ್ತವೋ ಎಂಬುದು ಬಗೆಹರಿಯಲಾಗದ ಪ್ರಶ್ನೆಯಂತೂ ಹೌದು!
––
ಕಾಗ್ಜಿ ನಿಂಬೆ
ತೆಳು ಸಿಪ್ಪೆಯ ಕಾಗ್ಜಿ ನಿಂಬೆ ಈಚೆಗಷ್ಟೇ ‘ಜಿಐ’ ಪಡೆದ ಕಾಗ್ಜಿ ನಿಂಬೆಯನ್ನು ವಿಜಯಪುರ ಜಿಲ್ಲೆಯ ಇಂಡಿ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ನಿಂಬೆಹಣ್ಣಿನ ಸಿಪ್ಪೆ ತೆಳುವಾಗಿದ್ದು ಅಧಿಕ ಆಮ್ಲೀಯ ಗುಣ ಮತ್ತು ರಸ ಹೊಂದಿದೆ. ಈ ವಿಶೇಷ ತಳಿ ನಿಂಬೆಯ ಇತಿಹಾಸ ಸಾಗುವಳಿ ಪ್ರದೇಶ ಗುಣಲಕ್ಷಣ ಹಾಗೂ ಇನ್ನಿತರ ವಿಸ್ತೃತ ಅಧ್ಯಯನದ ಜತೆಗೆ ಅನೇಕ ತಾಂತ್ರಿಕ ವಿವರಗಳನ್ನು ಸಲ್ಲಿಸಿ ‘ಜಿಐ ನೋಂದಣಿ’ ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿತ್ತು. ಮೈಸೂರು ರೇಷ್ಮೆ ಚೆನ್ನಪಟ್ಟಣ ಬೊಂಬೆ ಇಳಕಲ್ ಸೀರೆ ಕಿನ್ನಾಳ ಗೊಂಬೆ ಹಡಗಲಿ ಮಲ್ಲಿಗೆ ಬೆಂಗಳೂರಿನ ನೀಲಿ ದ್ರಾಕ್ಷಿ ಕಲಬುರ್ಗಿ ತೊಗರಿ ಬೇಳೆ ಇತರೆ ಉತ್ಪನ್ನಗಳು ಕನ್ನಡ ನಾಡಿನಲ್ಲಿ ‘ಜಿಐ ಟ್ಯಾಗ್’ ಪಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.