ಆಧುನಿಕ ಅಂಚೆ ವ್ಯವಸ್ಥೆ ಇಂಗ್ಲೆಂಡ್‌ನಲ್ಲಿ ಶುರುವಾಗಿ ಇನ್ನೂರು ವರ್ಷಗಳೇ ಕಳೆದುಹೋಗಿದೆ. ಸುಲಭ ಎನ್ನಬಹುದಾದ ಈ ವ್ಯವಸ್ಥೆಯನ್ನು ಜಗತ್ತಿನ ಬಹುತೇಕ ಎಲ್ಲಾ ದೇಶಗಳೂ ಅನುಸರಿಸಿವೆ.
ಈಗ ಕೊರಿಯರ್, ಇ–ಮೇಲ್, ಎಸ್.ಎಂ.ಎಸ್.ಗಳದ್ದೇ ಸದ್ದು. ದಿನನಿತ್ಯ ಕಾಣಿಸಿಕೊಳ್ಳುತ್ತಿದ್ದ ಖಾಕಿಧಾರಿ, ಅಂಚೆ ಸಂಚಿಯ ಅಂಚೆಯಲ್ಲಿ ಕೂಡ ಈಗ ಅಪರೂಪ. ಆದರೆ ಕಾಗದಪತ್ರಗಳ ರವಾನೆಗೆ ಉಪಯೋಗವಾಗುತ್ತಿದ್ದ ಅಂಟು ಉಳ್ಳ ಪುಟ್ಟಪುಟ್ಟ ಬಣ್ಣಬಣ್ಣದ ಕಾಗದದ ತುಂಡುಗಳೇನೂ (ಅಂಚೆಚೀಟಿಗಳು) ಅಪರೂಪವಾಗಿಲ್ಲ. ಎರಡು ಶತಮಾನಗಳ ಹಿಂದೆ ಆರಂಭವಾದ ಅಂಚೆ ಚೀಟಿಗಳ ಸಂಗ್ರಹ ಹವ್ಯಾಸ ಇಂದು ಹೆಚ್ಚುತ್ತಲೇ ಇದ್ದು, ಈ ಹವ್ಯಾಸ ದೊಡ್ಡ ಉದ್ಯಮದ ಮುಖವನ್ನೇ ಪಡೆದುಕೊಂಡಿದೆ.
ಇಂಗ್ಲೆಂಡಿನಲ್ಲಿ ಅಂಚೆಚೀಟಿಗಳಲ್ಲಿ ಮೊದಲು ಕಾಣಿಸಿಕೊಂಡಿದ್ದು ಆ ದೇಶದ ರಾಣಿ. ಕಾಲಕ್ರಮೇಣ ಆಗೀಗ ರಾಜನ ಚಿತ್ರ ಅಲ್ಲಿ ಅಚ್ಚಾದರೂ ರಾಣಿಯ ಮುಖಕ್ಕೇ ಪ್ರಾಶಸ್ತ್ಯ. ಬ್ರಿಟಿಷರೇ ಆಳುತ್ತಿದ್ದ ಭಾರತದ ಅನೇಕ ಸಂಸ್ಥಾನಗಳು ತಮ್ಮದೇ ಅಂಚೆಚೀಟಿಗಳನ್ನು ತಮ್ಮ ಅರಸರ ಚಿತ್ರಗಳೊಂದಿಗೆ ಮುದ್ರಿಸಿಕೊಂಡು ಚಲಾವಣೆ ಮಾಡಿದವಾದರೂ, ಬ್ರಿಟಿಷ್ ಸರ್ಕಾರ ಭಾರತದಲ್ಲಿ ಜಾರಿಗೆ ತಂದ ಇಂಪೀರಿಯಲ್ ಪೋಸ್ಟ್‌ನಲ್ಲಿ ಸೇರಿಹೋಗಿದ್ದು ಇತಿಹಾಸ. ಅಂಚೆಚೀಟಿ ಇಲ್ಲದಿದ್ದರೂ ಅಂಚೆ ಮೊಹರು ಬಳಸಿಕೊಂಡು ವ್ಯವಸ್ಥಿತವಾಗಿ ಚಲಾವಣೆಯಲ್ಲಿದ್ದ ಮೈಸೂರು ಅಂಚೆ ಇಂಪೀರಿಯಲ್ ಪೋಸ್ಟ್‌ನಲ್ಲೇ ಹುದುಗಿಕೊಂಡಿತು.
ಮೊದಮೊದಲು ರಾಜಮಹಾರಾಜರಿಗೆ ಆಡಳಿತ ವ್ಯವಸ್ಥೆಗೆ ಮಾತ್ರ ಲಭ್ಯವಿದ್ದ ಅಂಚೆ ಸೇವೆ, ನಂತರದ ದಿನಗಳಲ್ಲಿ ಸಾರ್ವಜನಿಕರಿಗೂ ಲಭಿಸಿತು. ಅಂಚೆ ಜನರ ಬದುಕಿನ ಅವಿಭಾಜ್ಯ ಅಂಗವೂ ಆಗಿತ್ತು. ಸ್ವಾತಂತ್ರ್ಯಾ ನಂತರ ಸ್ವತಂತ್ರ ಅಂಚೆ ವ್ಯವಸ್ಥೆಯೂ ಭಾರತದಲ್ಲಿ ಪ್ರಾರಂಭಗೊಂಡಿತು.
ಅಂಚೆಚೀಟಿಗಳು ಕೇವಲ ಕಾಗದ ಪತ್ರಗಳನ್ನು ರವಾನೆ ಮಾಡುತ್ತಿರಲಿಲ್ಲ. ಆಯಾ ದೇಶಗಳ ಸಾಧಕರು, ಪ್ರವಾಸಿ ತಾಣಗಳು, ಸಾಧನೆಯ ಹೆಜ್ಜೆಗಳ ವಾಹಕಗಳೂ ಆಗಿದ್ದವು. ಅಪರೂಪದ ಘಟನೆಗಳು ಚಾರಿತ್ರಿಕ ವಿಚಾರಗಳನ್ನು ದಾಟಿಸುವ ಅಂಚೆ ಚೀಟಿಗಳನ್ನು ಸಂಗ್ರಹಿಸುವ ಹವ್ಯಾಸ ಅನೇಕರಿಗೆ ಇದೆ. ಹೀಗಾಗಿ ಈ ಕೊರಿಯರ್ ಅಬ್ಬರದ ಕಾಲದಲ್ಲೂ ಅಂಚೆಚೀಟಿಗಳ ಬೇಡಿಕೆಗೆ ಕುಂದು ಬಂದಿಲ್ಲ.
‘ಫಿಲಾಟಲಿ’ ಅಂದರೆ ಅಂಚೆಚೀಟಿ ಹಾಗೂ ದಸ್ತಾವೇಜುಗಳನ್ನು ಸಂಗ್ರಹಿಸುವ ಹವ್ಯಾಸ; ಈಗ ವಿಜ್ಞಾನವೇ ಆಗಿದೆ. ದೊಡ್ಡ ಮೊತ್ತದ ಬಂಡವಾಳವಿರುವ ವ್ಯವಹಾರದ ಬಾಬತ್ತು ಕೂಡ ಆಗಿದೆ.
ನಿಯತ ಅಂಚೆ ಚೀಟಿಗಳು ಹಾಗೂ ಸ್ಮರಣಾರ್ಥ ಚೀಟಿಗಳು–ವಿಶ್ವದ ಎಲ್ಲಾ ದೇಶಗಳಲ್ಲೂ ಪ್ರಕಟಣೆಗೊಳ್ಳುವ ಎರಡು ಬಗೆಯವು. ಸ್ಮರಣೀಯ ಸಮಾರಂಭಗಳು, ಗಣ್ಯವ್ಯಕ್ತಿಗಳು ಗಮನಾರ್ಹ ಸಂಸ್ಥೆಗಳು, ಐತಿಹಾಸಿಕ ಘಟನೆಗಳು, ಪ್ರಾಕೃತಿಕ ತಾಣಗಳು, ಪ್ರಾಣಿ-ಪಕ್ಷಿಸಂಕುಲ. ಆಯಾದೇಶಗಳ ಪ್ರಮುಖ ಆಗುಹೋಗುಗಳನ್ನು ಪ್ರತಿಬಿಂಬಿಸುವ ಸಾಧನಗಳಾಗಿ ಅಂಚೆಚೀಟಿಗಳು ಬಳಕೆಯಲ್ಲಿವೆ. ವಿಶೇಷ ಸಂದರ್ಭಗಳಲ್ಲಿ ನೆನಪಿನ (ಸ್ಮರಣಾರ್ಥ) ಅಂಚೆಚೀಟಿಗಳನ್ನು ಹೊರತರುವುದು ಜಾಗತಿಕವಾಗಿ ರೂಢಿಯಲ್ಲಿದೆ.
ನಮ್ಮ ದೇಶದಲ್ಲಿ ತ್ರಿವರ್ಣ ಧ್ವಜದ ಚಿತ್ರವುಳ್ಳ ಅಂಚೆಚೀಟಿ ಮೊದಲು ಮುದ್ರಿತವಾಗಿತ್ತು. ಒಕ್ಕೂಟ ರಾಷ್ಟ್ರವಾದ ಭಾರತದ ಎಲ್ಲ ರಾಜ್ಯಗಳ ವಿಷಯ ವಿಶೇಷಗಳನ್ನು ಭಾರತೀಯ ಅಂಚೆ ಚೀಟಿಗಳು ಹೊತ್ತು ತರುತ್ತಿವೆ.
ವಿಜಯಪುರದ ಗೋಲ್‌ಗುಂಬಜ್ ಪ್ರಥಮವಾಗಿ ಕಾಣಿಸಿಕೊಂಡ ಕರ್ನಾಟಕದ ಚಿತ್ರ ಒಳಗೊಂಡ ಅಂಚೆಚೀಟಿ. ಭಾರತೀಯ ಅಂಚೆ ಇಲಾಖೆ ಕಳೆದ ಏಳು ದಶಕಗಳಲ್ಲಿ ಹೊರತಂದಿರುವ ಅಂಚೆಚೀಟಿಗಳ ಸಂಖ್ಯೆ ಮೂರು ಸಾವಿರಕ್ಕೂ ಹೆಚ್ಚು. ಹಲವಾರು ವಿಚಾರಗಳಲ್ಲಿ ತಾರತಮ್ಯಕ್ಕೆ ತುತ್ತಾಗಿರುವ ಕರ್ನಾಟಕ ಅಂಚೆಚೀಟಿ ವಿಷಯದಲ್ಲಿಯೂ ಇದನ್ನು ಅನುಭವಿಸುತ್ತಿದೆ. ಅನ್ಯರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಅಂಚೆಚೀಟಿಗಳ ಪಾಲು ತೀರಾ ಕಡಿಮೆ. ಬೇರೆ ರಾಜ್ಯಗಳು ಅಂಚೆಚೀಟಿಗಳಲ್ಲಿ ಶತಕ ಬಾರಿಸಿದ್ದರೂ ಕರ್ನಾಟಕಕ್ಕೆ ಆ ಭಾಗ್ಯ ಇನ್ನೂ ಸಿಕ್ಕಿಲ್ಲ.
ಅಂಚೆಚೀಟಿಗಳ ಪ್ರಕಟಣೆಯಲ್ಲಿ ಕರ್ನಾಟಕಕ್ಕೆ ಕೆಲವಾರು ಗೌರವಗಳು ಸಿಕ್ಕಿದ್ದರೂ ಸಹಜವಾಗಿ ಸಿಗಬೇಕಾದ ಮಾನ್ಯತೆಯಂತೂ ಸಿಕ್ಕಿಲ್ಲ. ಬಸವಣ್ಣ, ಕನಕದಾಸ, ಪುರಂದರದಾಸರು ಅಂಚೆಚೀಟಿಗಳಲ್ಲಿ ಕಾಣಿಸಿಕೊಂಡಿದ್ದರೂ ಸರ್ವಜ್ಞ, ಶಿಶುನಾಳ ಷರೀಫ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಕೈವಾರ ನಾರೇಯಣರಿಗೆ ಸ್ಥಾನ ಸಿಕ್ಕಿಲ್ಲ.
ಒಂಬತ್ತು ದಶಕಗಳನ್ನು ಕಂಡಿರುವ ಕನ್ನಡ ಚಿತ್ರರಂಗದಲ್ಲಿ ರಾಜ್‌ಕುಮಾರ್, ವಿಷ್ಣುವರ್ಧನ್ ಅಂಚೆ ಚೀಟಿಗಳನ್ನು ಅಲಂಕರಿಸಿದ್ದರೆ, ರಂಗಭೂಮಿ ಚಿತ್ರರಂಗದಲ್ಲಿ ಖ್ಯಾತರಾದ ಗುಬ್ಬಿ ವೀರಣ್ಣ, ಸುಬ್ಬಯ್ಯನಾಯ್ಡು, ನರಸಿಂಹರಾಜು, ಬಾಲಕೃಷ್ಣ, ನಿರ್ದೇಶಕರಾದ ಸಿದ್ಧಲಿಂಗಯ್ಯ, ಪುಟ್ಟಣ್ಣ ಕಣಗಾಲ್, ಬಿ.ಆರ್.ಪಂತಲು, ವೈ.ಆರ್.ಸ್ವಾಮಿ, ಡಿ.ಶಂಕರ್ ಸಿಂಗ್ ಅವರು ಇನ್ನೂ ಕಾಣಿಸಿಕೊಳ್ಳಬೇಕಿದೆ.
ಶತಮಾನ ತುಂಬಿದ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರಿನ ಕೆಂಪುಕೋಟೆ, ವಿಧಾನಸೌಧ, ಸೆಂಟ್ರಲ್ ಕಾಲೇಜ್ ಇನ್ನೂ ಸ್ಥಾನ ಪಡೆದಿಲ್ಲ.
ಅನೇಕ ರಾಜ್ಯಗಳ ಮಾಜಿ ಮುಖ್ಯಮಂತ್ರಿಗಳು ಅಂಚೆಚೀಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕ ಕೆಂಗಲ್ ಹನುಮಂತಯ್ಯ, ಡಿ.ದೇವರಾಜು ಅರಸು ಮುಂತಾದವರಿಗೆ ಆ ಗೌರವ ಸಿಗಬೇಕಿದೆ. ಶಿಕ್ಷಣ ತಜ್ಞರಾದ ಎಚ್.ನರಸಿಂಹಯ್ಯ, ಪ್ರೊ.ಸಿ.ಡಿ.ನರಸಿಂಹಯ್ಯ, ಡಿ.ಸಿ.ಪಾವಟೆ, ಎಲ್ಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೂ ಅಂಚೆಚೀಟಿಗಳಲ್ಲಿ ಜಾಗ ಮಾಡಬೇಕಿದೆ.
ಪಿಟೀಲು ಚೌಡಯ್ಯ, ವೀಣೆ ದೊರೆಸ್ವಾಮಿ ಅಯ್ಯಂಗಾರ್, ಮೈಸೂರು ಅನಂತಸ್ವಾಮಿ, ಹುಕ್ಕೇರಿ ಬಾಳಪ್ಪ, ಕಾಳಿಂಗರಾವ್, ಸಿ. ಅಶ್ವಥ್, ಜಿ.ಕೆ.ವೆಂಕಟೇಶ್, ವಿಜಯಭಾಸ್ಕರ್, ಕಾಳಿಂಗ ನಾವಡ, ಹೀಗೆ ಸಂಗೀತ ಸಂಬಂಧಿಸಿದ ಗಣ್ಯರ ಪಟ್ಟಿ ಸಾಕಷ್ಟಿದೆ.
ಜಾನಪದ ಕಲೆಗಳಲ್ಲಿ ಕರ್ನಾಟಕಕ್ಕೆ ಪ್ರಮುಖ ಸ್ಥಾನವಿದೆ. ಡೊಳ್ಳು, ಕಂಸಾಳೆ, ವೀರಗಾಸೆ, ಮರಗೋಲು, ಕೊಡವನೃತ್ಯ, ತಮಟೆ, ಚೆಂಡೆ, ಕರ್ನಾಟಕದ ಜಾನಪದ ಕಲೆಗಳಾಗುವುವೂ ಅಂಚೆಚೀಟಿಗಳಲ್ಲಿ ಬಂದಿಲ್ಲ.
ನೂರು ವರ್ಷ ತುಂಬಿದಾಗ ಅವರದೇ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಕಾಣುವ ಯೋಗ ಹೆಸರಾಂತ ಆಡಳಿತಗಾರ, ವಿಖ್ಯಾತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರದ್ದು.
ಅಂಚೆಚೀಟಿಗಳಲ್ಲಿ ಕರ್ನಾಟಕಕ್ಕೆ ಈ ತಾರತಮ್ಯ ಆಗಿರುವುದಕ್ಕೆ ಕೇಂದ್ರ ಸರ್ಕಾರದ ಅಂಚೆ ಇಲಾಖೆಯ ನಿರ್ಲಕ್ಷ್ಯದ ಜತೆಗೆ ಕರ್ನಾಟಕದ ಸ್ಥಳೀಯ ಅಂಚೆ ಇಲಾಖೆ ಹಾಗೂ ಕರ್ನಾಟಕದ ಲೋಕಸಭಾ ಸದಸ್ಯರ ಅಸಡ್ಡೆಯೂ ಕಾರಣ.
ಅಂಚೆಚೀಟಿಗಳನ್ನು ಪ್ರಕಟಿಸಲು ಸಾಂದರ್ಭಿಕವಾಗಿ ಸೂಕ್ತ ಮಾಹಿತಿಗಳನ್ನು ಅಂಚೆ ಇಲಾಖೆಗೆ ತಲುಪಿಸಬೇಕಾದುದು ಸರ್ಕಾರದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಹೊಣೆ. ಅದು ಆಗುತ್ತಿಲ್ಲವೆನ್ನುವುದು ವಾಸ್ತವ.
ಒಂಬತ್ತು ವರ್ಷಗಳ ನಂತರ ವೈವಿಧ್ಯಮಯ ಅಂಚೆಚೀಟಿಗಳನ್ನು ಪ್ರದರ್ಶಿಸುತ್ತಿರುವ ‘ಕರ್ನಾಫೆಕ್ಸ್ 2024 ಜನವರಿ 5ರಿಂದ 8ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಾಡಾಗಿದೆ. ನಾಡಿನ ಭವ್ಯ ಇತಿಹಾಸವನ್ನು ಅಂಚೆಚೀಟಿಗಳಲ್ಲಿ ತರುವಂತೆ ಮಾಡಬೇಕಿದ್ದು, ಅದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಇನ್ನಾದರೂ ಜನಪ್ರತಿನಿಧಿಗಳು ಮನಸ್ಸು ಮಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.