ತುಲಾ ರಾಶಿಯ ಮೂಲವನ್ನು ಹುಡುಕುತ್ತಾ ಹೊರಟಾಗ ಅಡ್ಡಬಂದ ತಕ್ಕಡಿಗಳು ಹಲವಾರು. ವಿಶೇಷವಾದವು ಎಂದರೆ ಒಂದೇ ತಟ್ಟೆಯ ಒಂದೇ ಬಟ್ಟಿನ ತಕ್ಕಡಿ. ಅಲ್ಲದೆ ಬಟ್ಟೇ ಬೇಕಿಲ್ಲದ ತಕ್ಕಡಿಯೂ ಉಂಟು. ಇದನ್ನು ಯಾರು, ಹೇಗೆ ಬಳಸುತ್ತಿದ್ದಿರಬಹುದು?
ಪರಿಚಿತ ಹನ್ನೆರಡು ರಾಶಿಗಳ ಹೆಸರುಗಳ ಮೂಲವನ್ನು ಕೆದಕಿದ ಹಲವಾರು ವಿದ್ವಾಂಸರು, ‘ಅವು ಬಹುಶಃ ಗ್ರೀಕರಿಂದ ಅಲೆಕ್ಸಾಂಡರನ ಕಾಲದಲ್ಲಿ ಬಂದಿರಬೇಕು. ಒಂಬತ್ತು - ಹತ್ತನೆಯ ಶತಮಾನದಲ್ಲಿ ಮೂಲ ಗ್ರೀಕ್ ಹೆಸರುಗಳಿಗೆ ಸಂಸ್ಕೃತ ಅನುವಾದಗಳೂ ಆಗಿ ಪುಸ್ತಕಗಳಲ್ಲಿ ಸ್ಥಾನವನ್ನು ಭದ್ರ ಮಾಡಿಕೊಂಡ ಮೇಲೆ ಅವು ನಮ್ಮವೇ ಆಗಿಬಿಟ್ಟವು’ ಎಂದು ಅಭಿಪ್ರಾಯ ಪಡುತ್ತಾರೆ.
ಅವರಾದರೂ ಈ ಹೆಸರುಗಳನ್ನು ಹೇಗೆ ಹುಡುಕಿದರು ಎಂಬುದನ್ನು ಅರಸುತ್ತಾ ಹೊರಟಾಗ, ಅವು ಗ್ರೀಕ್ ಮೂಲದವಲ್ಲ, ಅದಕ್ಕೂ ಮುಂಚೆಯೇ ಬಳಕೆಯಲ್ಲಿದ್ದವು, ಬಹುಶಃ ಬ್ಯಾಬಿಲೋನಿಯಾದಲ್ಲಿಯೇ ಈ ನಾಮಕರಣ ನಡೆದಿರಬೇಕು ಎಂಬ ಅಂಶವೂ ಪತ್ತೆಯಾಯಿತು.
ಖಗೋಳ ವಿಜ್ಞಾನಿಗಳ ದಿಕ್ಕು ಯಾವಾಗಲೂ ಆಕಾಶದತ್ತವೇ. ಆದ್ದರಿಂದ ಈ ಹೆಸರುಗಳಿಗೆ ಹೊಂದುವ ಕಾಲ್ಪನಿಕ ಚಿತ್ರಗಳನ್ನು ಆಕಾಶದಲ್ಲಿ ಹುಡುಕತೊಡಗಿದರು. ವೃಶ್ಚಿಕಕ್ಕೆ ಚೇಳಿನ ಆಕಾರ ಹೊಂದುವಷ್ಟು ಸುಲಭವಾಗಿ ಇತರ ಹೆಸರುಗಳು ಹೊಂದುವುದೇ ಇಲ್ಲ. ವೃಷಭಕ್ಕೆ ಹಾಗೂ ಹೀಗೂ ಗೂಳಿಯನ್ನು ಹೊಂದಿಸಬಹುದಷ್ಟೆ. ಪರಂಪರಾಗತವಾಗಿ ಬಂದಿರುವ ಹೆಸರುಗಳೂ ಇಲ್ಲಿ ಸುಳಿವನ್ನು ಕೊಡುವುವು. ಹೀಗೆ ತುಲಾ ಹೆಸರಿನ ಸಮಸ್ಯೆ ಆರಂಭವಾಯಿತು. ಈ ಭಾಗದಲ್ಲಿರುವ ನಕ್ಷತ್ರಗಳೆಲ್ಲ ಕ್ಷೀಣವಾದವು. ಆಲ್ಫಾ, ಬೀಟಾ, ಗಾಮಾ - ಹೀಗೆ ಗ್ರೀಕ್ ಅಕ್ಷರಗಳಿಂದ ಗುರುತಿಸುವುದು ಪದ್ಧತಿ. ಅವುಗಳಲ್ಲೇ ನಾಲ್ಕನ್ನು ಆರಿಸಿ ಒಂದು ಚೌಕಾಕಾರವನ್ನು ಕಲ್ಪಿಸಿಕೊಂಡು ಯಾವುದೇ ಕಲಾವಿದ ಅವುಗಳ ಮೂಲಕ ಗೆರೆಗಳನ್ನು ಎಳೆದು ತಕ್ಕಡಿಯ ಚಿತ್ರವನ್ನು ಬರೆಯಬಹುದು.
ಸಾಧಾರಣವಾಗಿ ಎರಡು ತಟ್ಟೆಗಳಲ್ಲಿ ಒಂದೊಂದು ನಕ್ಷತ್ರ; ಎರಡು ಹಿಡಿಗಳಲ್ಲಿ ಒಂದೊಂದು ನಕ್ಷತ್ರ ಬರೆದಿರುತ್ತಾರೆ. ಇಲ್ಲಿರುವ ನಕ್ಷತ್ರದ ಹೆಸರುಗಳಲ್ಲಿ ವಿಶಾಖಾ ಎಂಬುದು ನಮಗೆ ಪರಿಚಿತವಷ್ಟೆ. ಅದರ ಅರ್ಥ ಕೊಂಬೆಗಳು ಎಂದಾಗುತ್ತದೆ. ಹಾಗಾದರೆ ಇಲ್ಲೊಂದು ಮರವನ್ನೂ ಅದರ ಕೊಂಬೆಗಳನ್ನೂ ಊಹಿಸಿಕೊಳ್ಳಬಹುದು. ಆದರೆ ವಿಶಾಖಾ ಎಂಬುದು ಒಂದೇ ನಕ್ಷತ್ರ. ಅದರ ಅರ್ಥದ ಬಗ್ಗೆ ಅಥವಾ ಆಕಾಶದಲ್ಲಿ ಅದು ಹೇಗೆ ಹೊಂದುತ್ತದೆ ಎಂಬುದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ.
ನಕ್ಷತ್ರಗಳ ಹೆಸರನ್ನು ಪಟ್ಟಿ ಮಾಡಿರುವ ಸುಮಾರು 500 - 600 ವರ್ಷ ಹಳೆಯ ಸಂಸ್ಕೃತ ಗ್ರಂಥಗಳನ್ನು ಪರಿಶೀಲಿಸಿದಾಗ ಒಂದು ವಿಚಿತ್ರ ಬಗೆಯ ಹೊಂದಾಣಿಕೆ ಮಾಡಿಕೊಂಡಿರುವುದು ತಿಳಿಯಿತು. ಯಾವುದೇ ಹೆಸರನ್ನು ಬರೆಯದೆ ತುಲೈಕಸಿಕ್ಕಾ ಅಂದರೆ ತುಲಾದ ಮೊದಲನೆಯ ಚುಕ್ಕೆ ಮತ್ತು ತುಲಾನ್ಯಸಿಕ್ಕಾ ಅಂದರೆ ತುಲಾದ ಇನ್ನೊಂದು ಚುಕ್ಕೆ ಎಂದು ಹೆಸರು ಕೊಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಸ್ಥಾನ ನಿರ್ದೇಶಕಗಳೂ ಇರುವುದರಿಂದ ಮೊದಲನೆಯದು ವಿಶಾಖಾ ಎಂದು ಗುರುತಿಸುವುದು ಸಾಧ್ಯ. ಎರಡನೆಯದು ಸ್ವಾತಿ ಅಲ್ಲ; ಆದ್ದರಿಂದ ಅದರ ಹೆಸರನ್ನು ತುಲಾನ್ಯಸಿಕ್ಕಾ ಎಂದೇ ಇಟ್ಟುಕೊಳ್ಳಬೇಕಾಗುತ್ತದೆ.
ನಕ್ಷತ್ರಗಳ ನಕ್ಷೆಯನ್ನು ಬರೆಯುವ ಪದ್ಧತಿ ನಮ್ಮಲ್ಲಿಲ್ಲದಿದ್ದರೂ ಯುರೋಪ್ ಮತ್ತು ಚೀನಾ ಅಲ್ಲದೆ ಅರಬ್ ದೇಶಗಳಲ್ಲಿಯೂ ಪ್ರಚಲಿತವಿರುವುದರಿಂದ ಅತಿ ಹಳೆಯ ತುಲಾ ಚಿತ್ರವನ್ನು ಹುಡುಕಿದಾಗ ಆಶ್ಚರ್ಯ ಕಾದಿತ್ತು. ಅರಬ್ ದೇಶಗಳಲ್ಲಿ ಅದಕ್ಕೆ ತುಲಾ ಎಂಬ ಹೆಸರೇ ಇರಲಿಲ್ಲ. ಆ ನಕ್ಷತ್ರಗಳು ವೃಶ್ಚಿಕದ ಒಂದು ಭಾಗವಾಗಿದ್ದವು. ಆ ನಕ್ಷತ್ರಗಳನ್ನು ಚೇಳಿನ ಕೊಂಡಿ ಎಂದು ಹೆಸರಿಸಲಾಗಿತ್ತು. ಅದಕ್ಕೂ ಹಿಂದಿನದು ಎನ್ನಲಾದ ಒಂದು ಬ್ಯಾಬಿಲೋನಿಯ ಚಿತ್ರದಲ್ಲಿ ಇದ್ದುದು ಒಂದೇ ತಟ್ಟೆ.
ತಕ್ಕಡಿಗಳ ಇತಿಹಾಸವನ್ನು ಕೆದಕಿರುವ ವಿದ್ವಾಂಸರು ಅತಿ ಹಳೆಯ ಭಿತ್ತಿಚಿತ್ರಗಳಲ್ಲಿ ಒಂದೇ ತಟ್ಟೆಯ ತಕ್ಕಡಿಗಳನ್ನು ಹುಡುಕಿದ್ದಾರೆ. ಅಜಂತಾದ ಒಂದು ಚಿತ್ರದಲ್ಲಿಯೂ ಒಂದೇ ತಟ್ಟೆಯ ತಕ್ಕಡಿ ಇದೆ. ಅಫ್ಗಾನಿಸ್ತಾನದಲ್ಲಿ ಮತ್ತು ಆಂಧ್ರದ ಅಮರಾವತಿಯ ಕೆತ್ತನೆಗಳಲ್ಲಿ ಈ ಚಿತ್ರಗಳಿವೆ. ಮಥುರಾದಲ್ಲಿರುವ ವಸ್ತುಸಂಗ್ರಹಾಲಯದಲ್ಲಿಯೂ ಕೆತ್ತನೆಯ ಶಿಲ್ಪ ಇದೆ.
ಸಂದರ್ಭ - ತನಗೆ ಶರಣಾಗಿ ಬಂದ ಪಾರಿವಾಳವನ್ನು ಕಾಪಾಡಲು ತನ್ನ ಮಾಂಸವನ್ನೇ ಗಿಡುಗನಿಗೆ ಕೊಟ್ಟ ಶಿಬಿ ಚಕ್ರವರ್ತಿಯ ಕತೆ. ಈ ಎಲ್ಲಾ ಚಿತ್ರಗಳಲ್ಲೂ ಚಕ್ರವರ್ತಿಯ ತೊಡೆಯ ಮೇಲೆ ಪಾರಿವಾಳ ಇದೆ. ಮಾಂಸವನ್ನು ಕೊಯ್ದು ತೆಗೆಯುತ್ತಿರುವ ದೃಶ್ಯವಿದೆ. ಒಂದರಲ್ಲಿ ಚಕ್ರವರ್ತಿಯೇ ತಕ್ಕಡಿ ಹಿಡಿದಿದ್ದರೆ, ಇನ್ನೊಂದರಲ್ಲಿ ಸೇವಕ ಹಿಡಿದು ನಿಂತಿದ್ದಾನೆ.
ಅಮರಾವತಿಯ ಇನ್ನೊಂದು ಚಿತ್ರದಲ್ಲಿ ಈಗ ನಾವು ಬಳಸುತ್ತಿರುವ ಎರಡು ತಟ್ಟೆಗಳ ತಕ್ಕಡಿ ಇದೆ. ದೊಡ್ಡದು - ತುಲಾಭಾರಕ್ಕೆ ಬಳಸುವಂತಹುದು. ಅದರ ಒಂದು ತಟ್ಟೆಯಲ್ಲಿ ರಾಜನೇ ಕಾಲಿಟ್ಟು ಹತ್ತುತ್ತಿರುವ ದೃಶ್ಯವಿದೆ.
ಒಂಟಿ ತಕ್ಕಡಿಯನ್ನು ಬಳಸುತ್ತಿದ್ದುದಾದರೂ ಹೇಗೆ?
ನೀವೊಂದು ಆಟದ ಮೈದಾನಕ್ಕೆ ಹೋಗಿದ್ದೀರಿ ಎಂದುಕೊಳ್ಳಿ. ಅಲ್ಲಿ ಯಾರೂ ಇಲ್ಲ. ನಿಮ್ಮ ಜೊತೆಗೂ ಯಾರೂ ಇಲ್ಲ. ಏತ-ಏತ (ಸೀ-ಸಾ) ನೋಡಿ ನಿಮಗೆ ಆಡಬೇಕೆನ್ನಿಸುತ್ತದೆ. ಇದನ್ನು ಒಂಟಿಯಾಗಿ ಆಡುವುದು ಹೇಗೆ? ಪ್ರೌಢಶಾಲೆಯಲ್ಲಿ ಕಲಿತ ಭೌತವಿಜ್ಞಾನದ ಪಾಠಗಳನ್ನು ನೆನಪು ಮಾಡಿಕೊಳ್ಳಿ. ಒಂದು ಬದಿಗೆ ಕಲ್ಲು ಇಟ್ಟು ಇನ್ನೊಂದು ಕಡೆ ನೀವು ಕುಳಿತು ಆಡಲು ಪ್ರಯತ್ನಿಸಿ. ಕಲ್ಲನ್ನು ಹಿಂದೆ ಮುಂದೆ ಸರಿಸಿ ಒಂದೆರಡು ಬಾರಿ ಪ್ರಯತ್ನಿಸಿದ ಮೇಲೆ ಸಫಲರಾಗುತ್ತೀರಿ.
ಇದರ ತತ್ವವೇ ಒಂದು ತಟ್ಟೆಯ ತಕ್ಕಡಿಯಲ್ಲೂ ಬಳಕೆಯಾಗುತ್ತದೆ. ಒಂದೇ ಬಟ್ಟನ್ನು ಹಿಂದೆ ಮುಂದೆ ಸರಿಸಿ ಸಮತೋಲನ ಪಡೆಯಬಹುದು. ಈ ಬಗೆಯ ತಕ್ಕಡಿಯ ಬಗ್ಗೆ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವಿವರಣೆ ಇದೆ. ಸಮಕರಣ ಎಂದಿದರ ಹೆಸರು. 72 ಅಂಗುಲ ಉದ್ದದ 35 ಪಲ (ತೂಕದ ಅಳತೆ) ತೂಗುವ ಲೋಹದ ಪಟ್ಟಿ. ಐದು ಪಲ ತೂಗುವ ಬಟ್ಟನ್ನು ಅಂಚಿನಲ್ಲಿರಿಸಿ ಸಮತೋಲನದ ಆಧಾರ ಬಿಂದುವನ್ನು ಗುರುತಿಸಿ ಅದನ್ನು ಸೊನ್ನೆ ಎಂದು ಪರಿಗಣಿಸಬೇಕು. ಆಮೇಲೆ ಬೇರೆ ಬೇರೆ ತೂಕಗಳಿಗೆ ಪಟ್ಟಿಯ ಮೇಲೆ ಗುರುತು ಮಾಡಿಕೊಳ್ಳಬೇಕು. ಇದರಿಂದ ನೂರು ಪಲಗಳವರೆಗೂ ಅಳತೆ ಮಾಡಬಹುದು. ಈ ಬಗೆಯ 25 ಗೆರೆಗಳಿರುತ್ತವೆ. ಇದರ ಸಂಪೂರ್ಣ ವಿವರಗಳು, ಅಂದರೆ ಅಳತೆಗಳ ಉಪವಿಭಾಗಗಳು, ಅವುಗಳನ್ನು ಸೂಚಿಸುವ ಬಗೆ, ಪ್ರತಿ ಐದು ಏಕಮಾನಕ್ಕೆ ಬಳಸಬೇಕಾದ ವಿಶೇಷ ಚಿಹ್ನೆ ಇವೆಲ್ಲವೂ ನಿಗದಿಯಾಗಿವೆ. ಇದಕ್ಕೆ ‘ನಾಂದಿಪಿನಾದ್ಧ’ ಮಾಡಬೇಕು ಎಂಬ ಸೂಚನೆ ಇದೆ.
ನಾಂದಿಪಿನಾದ್ಧ ಎಂದರೆ ಏನು? ಅದರ ಬಗ್ಗೆ ಚಿಂತಿಸಿದವರು ಪಟ್ಟಿಯ ಮೇಲೆ ಗೆರೆಗಳನ್ನು ಮತ್ತು ಐದು ದಳದ ಹೂವಿನಾಕೃತಿಯ ಗುರುತನ್ನು ಮಾಡುವ ಪ್ರಕ್ರಿಯೆ ಎಂದು ಗುರುತಿಸಿದ್ದಾರೆ. ಅರ್ಥಶಾಸ್ತ್ರದಲ್ಲಿ ಈ ಪಟ್ಟಿಗಳ ತಯಾರಿಕೆಯ ಜೊತೆಗೇ ಗೆರೆಗಳನ್ನು ಗುರುತು ಮಾಡುವ ವಿಧಾನವನ್ನೂ ಕೊಡಲಾಗಿದೆ. ಶಾಸನಗಳಲ್ಲಿ ಕಂಡುಬರುವ ಅಳತೆಗೋಲುಗಳಲ್ಲಿ ಕೂಡ ವಿಶೇಷ ಗುರುತುಗಳಿರುತ್ತವೆ, ಅವುಗಳನ್ನು ಪುಷ್ಪಿಕಾ ಎಂದು ಗುರುತಿಸುತ್ತಾರೆ. ಇಲ್ಲಿ ನಾಂದಿ ಎಂಬ ಪದ ಐದು ದಳದ ನಂದ ಬಟ್ಟಲು ಹೂವಿನದು ಎಂದು ಕೆಲವು ವಿದ್ವಾಂಸರ ತರ್ಕ. ಒಟ್ಟಿನಲ್ಲಿ ಈ ಬಗೆಯ ತಕ್ಕಡಿ ಬಹಳ ಜನಪ್ರಿಯವೇ ಆಗಿದ್ದಿರಬೇಕು.
ಇನ್ನೂ ದೊಡ್ಡ ಸಮಕರಣವೂ ಇದೆ. ಅದು 70 ಪಲ ತೂಗುವ ಲೋಹದ ಪಟ್ಟಿ. ಅದರಲ್ಲಿ 200 ಪಲಗಳವರೆಗೂ ಅಳತೆ ಮಾಡಬಹುದು. ಇದರಲ್ಲಿ ಬಳಸುವ ಅಳತೆಯ ಬಟ್ಟಿಗೆ ಮಂಡಲ ಎಂದು ಹೆಸರು. ಧರಣಗ ಎಂಬ ಹೆಸರೂ ಇದೆ. ಇದೇ ಬಗೆಯ ತಕ್ಕಡಿಗಳು ಮಲೇಷ್ಯಾ, ಮ್ಯಾನ್ಮಾರ್, ಥಾಯ್ಲೆಂಡ್‍ಗಳಲ್ಲಿಯೂ ಕಂಡುಬರುತ್ತವೆ.
ಇದನ್ನು ತಯಾರಿಸುವವನೂ, ಬಳಸುವವನೂ ಗಣಿತದಲ್ಲಿ ಗಟ್ಟಿಗನಾಗಿರಬೇಕಾದದ್ದು ಅನಿವಾರ್ಯ. ಆಗ ಗಣಿತದ ಸಾಮಾನ್ಯ ಜ್ಞಾನದಮಟ್ಟ ಸಾಕಷ್ಟು ಎತ್ತರದಲ್ಲಿತ್ತು ಎನ್ನಿಸುತ್ತದೆ. ಏಕೆಂದರೆ ಎಲ್ಲ ಬಾಯಿ ಲೆಕ್ಕಗಳು. ಯಾವ ದೇಶದ ತಕ್ಕಡಿಗಳಲ್ಲಿಯೂ ಅಕ್ಷರಗಳಾಗಲೀ ಅಂಕಿಗಳಾಗಲೀ ಕಂಡುಬರುವುದಿಲ್ಲ. ನಂದಬಟ್ಟಲಿನ ಆಕೃತಿ ಐದು ಭಾಗಗಳಿಗೊಂದು ಸೂಚಿಮಾತ್ರ. ದಿನಸಿ ಇತ್ಯಾದಿ ಮಾರುವವನು ಎರಡನೆಯ ಗೆರೆ ಮೂರನೆಯ ಗೆರೆಗೆ ಇಂತಿಷ್ಟು ಎಂದು ನೆನಪಿಟ್ಟುಕೊಂಡರೆ ಸಾಕು. ಕೊಳ್ಳುವವನು ಜಾಗೃತನಾಗಿರಬೇಕು. ಕೊಳ್ಳುವುದಾದರೂ ಎಂಥ ವಸ್ತುಗಳಿರಬಹುದು? ತರಕಾರಿ? ಒಂದು ಬದನೆ ಕಾಯಿ ಕಡಿಮೆಯಾದರೆ ಪರವಾಗಿಲ್ಲ, ಆದರೆ, ಚಿನ್ನ ಬೆಳ್ಳಿ, ಮುತ್ತು... ನಷ್ಟ ಮಾಡಿಕೊಳ್ಳಲುಂಟೇ?
ಅಳತೆಯ ಬಟ್ಟೇ ಇಲ್ಲದ ತಕ್ಕಡಿ?
ಈ ಬಗೆಯ ಒಂಟಿ ತಟ್ಟೆಯ ತಕ್ಕಡಿಗಳಲ್ಲಿ ಎರಡು ವಿಧ. ಒಂದರಲ್ಲಿ ಬಟ್ಟನ್ನು ಹಿಂದೆ ಮುಂದೆ ಸರಿಸಬಹುದು. ಇನ್ನೊಂದು ಬಗೆಯಲ್ಲಿ ಬಟ್ಟಿಗೆ ಆಸ್ಪದವೇ ಇಲ್ಲ. ಹಿಡಿಕೆಯನ್ನೇ ಹಿಂದೆ ಮುಂದೆ ಸರಿಸಬಹುದು. ಇಂತಹ ಏತ ಏತ ಆಟಗಳೂ ಇವೆ (ತಾರಾಲಯದ ವಿಜ್ಞಾನ ವನದಲ್ಲಿದೆ). ಇದು ಬಹಳ ಜನಪ್ರಿಯವಾಗಿತ್ತು ಎಂದು ತೋರುತ್ತದೆ. ಇದಕ್ಕೆ ಬಳಕೆಯಾಗುವ ಕೋಲಿನ ಆಕಾರವೂ ವಿಚಿತ್ರ. ಒಂದು ಕಡೆ ದಪ್ಪ; ಇನ್ನೊಂದು ಕಡೆ ಸಣ್ಣ (ಮೀನಖಂಡದ ಹಾಗೆ). ಅದರ ಒಂದು ತುದಿಗೆ ತಟ್ಟೆ ಕಟ್ಟಿ, ಸಮಕರಣದ ಹಿಡಿಕೆಯನ್ನು ಹಿಂದೆ ಮುಂದೆ ಸರಿಸಿ ಸಮತೋಲನ ಮಾಡಿಕೊಳ್ಳಬೇಕು. ಇದೇ ಆಧಾರ ಬಿಂದು. ಆಮೇಲೆ ತಟ್ಟೆಯ ಮೇಲೆ ಬೇರೆ ಬೇರೆ ಬಟ್ಟುಗಳನ್ನು ನೇತು ಹಾಕಿ ಹಿಡಿಕೆಯ ಹಗ್ಗವನ್ನು ಹಿಂದೆ ಮುಂದೆ ಸರಿಸಿ ಆಯಾ ತೂಕಕ್ಕೆ ಸರಿಯಾಗಿ ಸಮತೋಲನವಾಗುವಂತೆ ಗೆರೆಗಳನ್ನು ಕೋಲಿನ ಮೇಲೆ ಕಚ್ಚು ಮಾಡಿಕೊಳ್ಳಬೇಕು. ಹೀಗೆ 10, 15, 20 ಗೆರೆಗಳನ್ನು ಗುರುತುಮಾಡಿಕೊಳ್ಳಬೇಕು. ಈಗ ತಕ್ಕಡಿ ಬಳಕೆಗೆ ಸಿದ್ಧ. ಆದ್ದರಿಂದ ಮೀನಖಂಡ ಆಕಾರದ ಕೋಲಿನ ಮೇಲೆ ಗೆರೆಗಳನ್ನು ಕೊರೆದಿರುವುದು ಕಂಡು ಬಂದರೆ ಅದು ಒಂಟಿ ತಕ್ಕಡಿಯ ಕೋಲು ಎಂದು ಗುರುತಿಸಬಹುದು. ಇವುಗಳನ್ನು ತರಕಾರಿ ಮುಂತಾದ ದಿನಬಳಕೆಯ ವಸ್ತುಗಳಿಗಾಗಿ ಬಳಸುತ್ತಿದ್ದರು. ಈಗಲೂ ಬಳಸುತ್ತಿದ್ದಾರೆ.
ಈಶಾನ್ಯ ಭಾರತದ ಹಳ್ಳಿಗಳಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದ ಹಳ್ಳಿಯ ತರಕಾರಿ ವ್ಯಾಪಾರದ ದೃಶ್ಯಗಳಲ್ಲಿ ಕೂಡ ಈ ಎರಡೂ ಬಗೆಯ ತಕ್ಕಡಿಗಳು (ಬಟ್ಟು ಬೇಕಾದದ್ದು; ಬಟ್ಟು ಇಲ್ಲದ್ದು) ಯುಟ್ಯೂಬ್‌ಗಳಲ್ಲಿ ಕಂಡುಬರುತ್ತವೆ. ಸ್ಟೀಲ್ ಯಾರ್ಡ್ ಬ್ಯಾಲೆನ್ಸ್ ಎಂದು ಕೊಟ್ಟು ಗೂಗಲಿಸಿ.ಯಾವುದೇ ಲಿಪಿ, ಅಕ್ಷರಗಳಿಲ್ಲದೆ ತಯಾರಾದ ಈ ಎರಡೂ ತಕ್ಕಡಿಗಳು ಭಾಷಾತೀತವಾದವು. ಆದ್ದರಿಂದಲೇ ವಿದೇಶಗಳಲ್ಲಿಯೂ ವ್ಯಾಪಾರಿಗಳನ್ನು ಸುಲಭವಾಗಿ ಕೈವಶಮಾಡಿಕೊಂಡವು. ಜೊತೆಗೆ ಕೃತಿಸ್ವಾಮ್ಯವನ್ನೂ ಕಳೆದುಕೊಂಡವು. ಸುಮಾರು 500 ವರ್ಷಗಳ ಹಿಂದೆ ಯುರೋಪಿನ ತರಕಾರಿ ಮಾರುಕಟ್ಟೆಗಳಿಗೂ ಲಗ್ಗೆ ಇಟ್ಟು, ಅಲ್ಲಿಯ ಮ್ಯೂಸಿಯಂಗಳಲ್ಲಿ ಪ್ರತಿಷ್ಠಿತ ಸ್ಥಾನ ಗಿಟ್ಟಿಸಿಕೊಂಡವು. ಕೆಲವಕ್ಕೆ ಆಗಲೇ ‘ಮೇಡ್ ಇನ್ ಚೀನಾ’ ಠಸ್ಸೆಯೂ ಸಿಕ್ಕಿವೆ.
ಒಂದು ತಟ್ಟೆಯ ತಕ್ಕಡಿ ಅಕ್ಕಸಾಲಿಗರಲ್ಲಿ ಬಳಕೆಯಲ್ಲಿತ್ತು ಎಂದು ಕೆಲವು ಹಿರಿಯರು ಹೇಳುತ್ತಾರೆ. ಸುಮಾರು ನೂರು ವರ್ಷಗಳ ಹಿಂದೆಯೂ ಇವು ಬಳಕೆಯಲ್ಲಿದ್ದುವಂತೆ. ಕೊಳ್ಳಲು ಒಂದು ತಟ್ಟೆಯ ತಕ್ಕಡಿ, ಮಾರಲು ಎರಡು ತಟ್ಟೆಯ ತಕ್ಕಡಿ ಉಪಯೋಗಿಸುತ್ತಿದ್ದರಂತೆ. ಸ್ವಾತಂತ್ರ್ಯ ಪೂರ್ವದವರೆಗೂ ಬಳಕೆಯಲ್ಲಿದ್ದ ಸೇರು, ಪಾವು, ಮಣ, ವೀಸಾ, ನಾಕಾಣೆಗಳು ಗಾದೆಗಳಲ್ಲಿ ಮಾತ್ರ ಉಳಿದುಕೊಂಡ ಹಾಗೆ ಈ ತಕ್ಕಡಿಗಳು ಆಯುಧ ಪೂಜೆಗೆ ಮಾತ್ರ ಉಳಿದುಕೊಂಡಿರುವುದು ಸಾಧ್ಯ.ಅದೇನೇ ಇರಲಿ; ಆಕಾಶದಲ್ಲಿ ಇರುವುದು ಚುಕ್ಕೆಗಳು ಮಾತ್ರ. ನಿಮ್ಮಿಷ್ಟ ಬಂದ ಹೆಸರನ್ನು ಇಟ್ಟುಕೊಂಡು ಗುರುತುಮಾಡಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.