ADVERTISEMENT

ಕಾಶ್ಮೀರ ಕಣಿವೆಯ ವಿಲ್ಲೊ ಕ್ರಿಕೆಟ್‌ ಬ್ಯಾಟ್‌ಗಳು..

ಭಾರತದ ಮುಕುಟ ಪ್ರಾಯವಾಗಿರುವ ಕಾಶ್ಮೀರ ಕಣಿವೆಯಲ್ಲಿ ಅಶಾಂತಿಯ ಕಾರ್ಮೋಡ ಸರಿದು ಬೆಚ್ಚನೆ ವಾತಾವರಣ ನೆಲೆಗೊಳ್ಳುತ್ತಿದೆ.

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 23:45 IST
Last Updated 20 ಜುಲೈ 2024, 23:45 IST
<div class="paragraphs"><p>ಕ್ರಿಕೆಟ್‌ ಬ್ಯಾಟ್‌ ಕಾರ್ಖಾನೆ  </p></div>

ಕ್ರಿಕೆಟ್‌ ಬ್ಯಾಟ್‌ ಕಾರ್ಖಾನೆ

   

ಚಿತ್ರಗಳು, ರವೀಂದ್ರ ಭಟ್ಟ

ಭಾರತದ ಮುಕುಟ ಪ್ರಾಯವಾಗಿರುವ ಕಾಶ್ಮೀರ ಕಣಿವೆಯಲ್ಲಿ ಅಶಾಂತಿಯ ಕಾರ್ಮೋಡ ಸರಿದು ಬೆಚ್ಚನೆ ವಾತಾವರಣ ನೆಲೆಗೊಳ್ಳುತ್ತಿದೆ. ಹಾಗೆಯೇ ಸೇಬು ಮತ್ತು ಹಿಮಚ್ಛಾದಿತ ವಾತಾವರಣಕ್ಕೆ ಹೆಸರುವಾಸಿಯಾಗಿರುವ ವಾದಿ (ಕಣಿವೆ)ಯಲ್ಲಿ ಪ್ರವಾಸೋದ್ಯಮವೂ ಗರಿಗೆದರುತ್ತಿದೆ. ಇದಕ್ಕೆ ರಾಜಧಾನಿ ಸೇರಿದಂತೆ ಪ್ರಮುಖ ತಾಣಗಳು ಪ್ರವಾಸಿಗಳಿಂದ ತುಂಬಿತುಳುಕುತ್ತಿರುವುದೇ ಸಾಕ್ಷಿ.
ಹೀಗೆ ಶಾಂತಿ-ಸುವ್ಯವಸ್ಥೆಯ ತಣ್ಣನೆ ಗಾಳಿಗೆ ತೆರೆದುಕೊಂಡಿರುವ ಕಣಿವೆ ರಾಜ್ಯವು ತನ್ನಲ್ಲಿನ ವಿಶೇಷತೆಗಳೊಂದಿಗೆ ಹಲವು ಉತ್ಪನ್ನಗಳ ತಯಾರಿಕೆ, ವ್ಯಾಪಾರ, ಉದ್ಯಮದ ಮೂಲಕ ಹೆಸರುವಾಸಿಯಾಗುತ್ತಿದೆ. ಇದಕ್ಕೆ ಉತ್ತಮ ನಿದರ್ಶನ ವಿಲ್ಲೊ ಕ್ರಿಕೆಟ್‌ ಬ್ಯಾಟ್‌ ತಯಾರಿಕೆ.

ADVERTISEMENT

ಕಾಶ್ಮೀರದ ರಾಜಧಾನಿ ಶ್ರೀನಗರದ ನೆರೆಯ ಜಿಲ್ಲೆ ಪುಲ್ವಾಮಾ. ಪುಲ್ವಾಮಾ ಎಂದೊಡನೆ ಭಾರತೀಯ ಸೇನೆ ಮೇಲೆ ಉಗ್ರರು ನಡೆಸಿದ್ದ ದಾಳಿ ನೆನಪಿಗೆ ಬರುವುದು ಸಹಜ. ಆದರೆ ಇದೇ ಪುಲ್ವಾಮಾದಲ್ಲಿರುವ ಪಾಮ್‌ ಪೋರ್‌ ಕೇಸರಿ ಬೆಳೆ ಖ್ಯಾತಿ ಗಳಿಸಿದೆ. ಇಲ್ಲಿನ ಗುಣಮಟ್ಟದ ಕೇಸರಿಗೆ ವಿಶ್ವದಾದ್ಯಂತ ವಿಶೇಷ ಸ್ಥಾನಮಾನವಿದೆ. ಆದರೆ, ಇದೇ ಪ್ರದೇಶದಲ್ಲಿ ತಯಾರಾಗುವ ಕ್ರಿಕೆಟ್‌ ಬ್ಯಾಟ್‌ ಇದೀಗ ಹೆಸರು ಗಳಿಸಿದೆ.

ಶ್ರೀನಗರದಿಂದ ಜಮ್ಮುವಿಗೆ ತೆರಳುವ ಮಾರ್ಗದಲ್ಲಿ ಪುಲ್ವಾಮಾ ಮೂಲಕ ಸಾಗುವ ವೇಳೆ ಹೆದ್ದಾರಿ ಆಜುಬಾಜಿನಲ್ಲಿ ಕ್ರಿಕೆಟ್‌ ಬ್ಯಾಟ್‌ ತಯಾರಿಸುವ ಹತ್ತಾರು ಕಾರ್ಖಾನೆಗಳು ಸಿಗುತ್ತವೆ. ಕ್ರಿಕೆಟ್‌ ಬ್ಯಾಟ್‌ ಅನ್ನು ದೇಶದ ಯಾವ ಭಾಗದಲ್ಲೂ ತಯಾರಿಸಬಹುದಾದರೂ ಇಲ್ಲಿ ದೊರಕುವ ವಿಲ್ಲೊಮರದ ಕ್ರಿಕೆಟ್‌ ಬ್ಯಾಟ್‌ಗಳು ಪ್ರತ್ಯೇಕ ಮಾರುಕಟ್ಟೆಯನ್ನೇ ಸೃಷ್ಟಿಸಿವೆ.

ಏನಿದು ವಿಲ್ಲೊ ಬ್ಯಾಟ್‌?

ಕಣಿವೆ ಹಿಮಚ್ಛಾದಿತ ಪ್ರದೇಶಗಳಲ್ಲಿ ಬೆಳೆಯುವ ವಿಲ್ಲೊಮರಗಳೇ ಈ ಕ್ರಿಕೆಟ್‌ ಬ್ಯಾಟ್‌ಗಳ ಜೀವಾಳ. ಪುಲ್ವಾಮಾ ಜಿಲ್ಲೆಯಲ್ಲಿ ಸುಮಾರು 30 ರಿಂದ 40 ವರ್ಷಗಳ ಅವಧಿಯಲ್ಲಿ ಬೆಳೆದಿರುವ ಕಾಶ್ಮೀರಿ ವಿಲ್ಲೊಮರಗಳಿಂದ ಈ ಬ್ಯಾಟುಗಳನ್ನು ಸಿದ್ಧಪಡಿಸಲಾಗುತ್ತದೆ. ಈ ಪ್ರದೇಶದಲ್ಲಿ ಒಟ್ಟಾರೆ 105ಕ್ಕೂ ಅಧಿಕ ಬ್ಯಾಟ್‌ ಮಾರಾಟ ಮಾಡುವ ಮಳಿಗೆಗಳು ಸಿಗುತ್ತವೆ.

ಕಾಶ್ಮೀರಿ ವಿಲ್ಲೊಮರದಿಂದ ಮಾಡುವ ಈ ಬ್ಯಾಟ್‌ಗಳು ಹಗುರವಾಗಿ ಇರುತ್ತವೆ. ಆದರೂ ಕಾರ್ಕ್‌ ಚೆಂಡನ್ನೂ ತಡೆಯುವಷ್ಟು ಬಲಿಷ್ಠವಾಗಿರುವ ಜತೆಗೆ ಬ್ಯಾಟ್‌ನ ಉಬ್ಬುತಗ್ಗಿನ ಆಕಾರವನ್ನೂ ಸುಲಭದಲ್ಲಿ ನೀಡಬಹುದು.

‘ವಿಲ್ಲೊ ಬ್ಯಾಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಆರ್ಡರ್‌ ಬಂದ ಸಂದರ್ಭದಲ್ಲಿ ತ್ವರಿತವಾಗಿ ಬ್ಯಾಟುಗಳ ತಯಾರಿಕೆಗೆ ನುರಿತ ಕಾರ್ಮಿಕರ ಕೊರತೆ ಕಾಡುತ್ತದೆ’ ಎಂದು ಉದ್ಯಮಿ ಶಾಹೀನ್‌ ಹೇಳುತ್ತಾರೆ.

ನಕಲಿ ಬ್ಯಾಟ್‌ಗಳ ಹಾವಳಿ

ಕಾಶ್ಮೀರಿ ವಿಲ್ಲೊ ಹೆಸರಿನ ನಕಲಿ ಬ್ಯಾಟ್‌ಗಳು ದೇಶದಾದ್ಯಂತ ಸಿಗುತ್ತವೆ. ಆದರೆ, ಆಟಗಾರರಿಗೆ ಅಸಲಿ-ನಕಲಿಯ ಅರಿವು ಇರುತ್ತದೆ. ಈ ಮೊದಲು ಇಂಗ್ಲೆಂಡ್‌ನಿಂದ ಬರುತ್ತಿದ್ದ ಇಂಗ್ಲಿಷ್‌ ವಿಲ್ಲೊ ಮರಗಳಿಂದ ಮಾಡಿದ್ದ ಬ್ಯಾಟ್‌ಗಳು ಮಾತ್ರ ಸಿಗುತ್ತಿದ್ದವು. ಆದರೆ, 2019ರ ನಂತರ ಕಾಶ್ಮೀರದ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎನ್ನುವ ಶಾಹೀನ್‌, ಇದರಿಂದಾಗಿ ಇಲ್ಲಿನ ಬ್ಯಾಟ್‌ಗಳಿಗೂ ಬೇಡಿಕೆ ಹೆಚ್ಚಿದ್ದು, ಮಾರುಕಟ್ಟೆಯೂ ಉತ್ತಮವಾಗಿದೆ ಎನ್ನುತ್ತಾರೆ.

ಈ ಮೊದಲು ಕಾಶ್ಮೀರಿ ವಿಲ್ಲೊ ಬ್ಯಾಟ್‌ಗಳನ್ನು ದೊಡ್ಡಮಟ್ಟದಲ್ಲಿ ಖರೀದಿಸುತ್ತಿದ್ದ ದೇಶದ ಇತರೆ ಭಾಗದ ವ್ಯಾಪಾರಿಗಳು ತಮ್ಮ ಬ್ರ್ಯಾಂಡ್‌ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ, ಈಗ ಹಾಗಾಗುತ್ತಿಲ್ಲ. ಕಾಶ್ಮೀರಿ ವಿಲ್ಲೊ ಬ್ಯಾಟ್‌ಗಳಿಗೆ ಇಲ್ಲಿನ ಬ್ರ್ಯಾಂಡಿಂಗ್‌ ನಂತರವೇ ಇತರೆಡೆಗಳಿಗೆ ಕಳುಹಿಸಲಾಗುತ್ತಿದೆ.

ಕಾಶ್ಮೀರಿ ವಿಲ್ಲೊಮರದ ಈ ಬ್ಯಾಟ್‌ಗಳಿಗೆ ಕೀಟಬಾಧೆ ಇದೆ. ಇದಕ್ಕಾಗಿಯೇ ಕೀಟದಿಂದ ಬ್ಯಾಟ್‌ ಅನ್ನು ಮುಕ್ತವಾಗಿಸುವ ಸಲುವಾಗಿ ವಿವಿಧ ಹಂತಗಳಲ್ಲಿ ಔಷಧ ಸಿಂಪಡಣೆ ಮಾಡಲಾಗುತ್ತದೆ.

₹ 300 ರಿಂದ ₹ 4000 ವರೆಗಿನ ವಿಲ್ಲೊ ಬ್ಯಾಟ್‌ಗಳು ಲಭ್ಯವಿದ್ದು, ಆನ್‌ಲೈನ್‌ ಮೂಲಕವೂ ತರಿಸಿಕೊಳ್ಳುವ ವ್ಯವಸ್ಥೆ ಇದೆ. ದಿನೇ ದಿನೇ ಬ್ಯಾಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಪುಲ್ವಾಮಾ ಜಿಲ್ಲೆಯಲ್ಲಿ ನೂರಾರು ಕುಟುಂಬಗಳು ಈ ಉದ್ದಿಮೆಯನ್ನು ಅವಲಂಬಿಸಿ ಬದುಕುತ್ತಿವೆ.

ಒಂದು ಬ್ಯಾಟ್‌ ತಯಾರಿಸಲು ಕನಿಷ್ಠ 18 ಮಂದಿ ಕಾರ್ಮಿಕರ ಶ್ರಮ ಅಡಗಿದ್ದು, ವಾರ್ಷಿಕ ಸುಮಾರು 60 ಸಾವಿರ ಬ್ಯಾಟ್‌ಗಳನ್ನು ತಯಾರು ಮಾಡಲಾಗುತ್ತದೆ. ಒಟ್ಟಾರೆ ಕಾಶ್ಮೀರ ಕಣಿವೆ ಇದೀಗ ಸೇಬು ಮತ್ತು ಕೇಸರಿ ಜತೆಗೆ ಕಾಶ್ಮೀರಿ ವಿಲ್ಲೊ ಬ್ಯಾಟ್‌ಗಳಿಗೂ ಪ್ರಖ್ಯಾತಿ ಪಡೆಯುತ್ತಿದ್ದು, ಈ ಉತ್ಪನ್ನ ಕಾಶ್ಮೀರದ ಹಿರಿಮೆಗೆ ಮತ್ತೊಂದು ಗರಿ ಇರಿಸಿದೆ.

‘ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಭೇಟಿ ನೀಡಿ ಬ್ಯಾಟ್‌ಗಳು ಸಿದ್ಧವಾಗುವ ಪ್ರಕ್ರಿಯೆಯನ್ನು ವೀಕ್ಷಿಸಿದ ನಂತರ ಕಾಶ್ಮೀರಿ ವಿಲ್ಲೊ ಬ್ಯಾಟ್‌ಗಳ ಅದೃಷ್ಟವೇ ಬದಲಾಗಿದೆ. ನಮ್ಮ ಬ್ಯಾಟುಗಳಿಗೆ ಭರ್ಜರಿ ಮಾರುಕಟ್ಟೆ ನಿರ್ಮಾಣವಾಗಿದ್ದು, ಇದೀಗ ಇಲ್ಲಿನ ಬ್ಯಾಟ್‌ಗಳು ಭಾರತ ಮಾತ್ರವಲ್ಲದೇ ವಿದೇಶಗಳಿಗೂ ರಫ್ತಾಗುತ್ತಿವೆ’ ಎನ್ನುತ್ತಾರೆ ಇಲ್ಲಿನ ಪ್ರಖ್ಯಾತ ಬ್ಯಾಟ್‌ ಉತ್ಪಾದಕ ಎಂ.ಜೆ.ಎಸ್‌.ನ ಶಾಹೀನ್‌.

ದೇಶದಲ್ಲಿ ಕಾಶ್ಮೀರಿ ಸೇಬು, ಕಾಶ್ಮೀರಿ ಕೇಸರಿ ಎನ್ನುವಂತೆಯೇ ಈಗ ಕಾಶ್ಮೀರಿ ವಿಲ್ಲೊ ಕ್ರಿಕೆಟ್‌ ಬ್ಯಾಟ್‌ ಎನ್ನುವುದು ಹೊಸ ಸೇರ್ಪಡೆ. ಇದು ಕಾಶ್ಮೀರಕ್ಕೆ ಮೊತ್ತೊಂದು ಗರಿ.

ಕ್ರಿಕೆಟ್‌ ಬ್ಯಾಟ್‌ ತಯಾರಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.