ADVERTISEMENT

ನಾನು ಅಮ್ಮ..ನಾನು ಉದ್ಯೋಗಿ | ಉದ್ಯೋಗಸ್ಥ ಮಹಿಳೆಯರ ಮೇಲೆ ಹೆಚ್ಚಾದ ಕೆಲಸದ ಹೊರೆ

ಉದ್ಯೋಗಸ್ಥ ಮಹಿಳೆಯರ ಮೇಲೆ ಹೆಚ್ಚಾದ ಕೆಲಸದ ಹೊರೆ

ಸುಧಾ ಹೆಗಡೆ
Published 30 ಏಪ್ರಿಲ್ 2021, 19:30 IST
Last Updated 30 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಅ ಯ್ಯೋ.. ತುಂಬಾನೇ ಕಷ್ಟ. ಹೇಳ್ತಾ ಹೋದ್ರೆ ಇಡೀ ದಿನ ಬೇಕಾಗಬಹುದು’

‘ಕೆಲಸ ಮಾಡಿ ಮಾಡಿ ಪೂರ್ತಿ ಖಾಲಿ ಖಾಲಿ ಅನಿಸ್ತಾ ಇದೆ’

‘ಒಂದು ರೀತಿ ಚಿತ್ರಹಿಂಸೆಯಾಗ್ತಿದೆ.. ಉದ್ಯೋಗಸ್ಥ ತಾಯಂದಿರ ಮೇಲೆ ಈ ರೀತಿ ಒತ್ತಡ ಬೀಳುತ್ತೆ ಅಂದ್ರೆ ಏನು ಹೇಳಬೇಕೋ ಗೊತ್ತಾಗ್ತಾ ಇಲ್ಲ’

ADVERTISEMENT

ಪುಟ್ಟ ಮಕ್ಕಳಿರುವ ತಾಯಂದಿರನ್ನು ಮಾತನಾಡಿಸಿ ನೋಡಿ, ಈ ಒಂದು ವರ್ಷದಲ್ಲಿ ಎಷ್ಟು ಹೈರಾಣಾಗಿದ್ದಾರೆ ಎಂದರೆ ಜೀವಮಾನದಲ್ಲಿ ಇದನ್ನೆಲ್ಲ ಮರೆಯೋದಕ್ಕೆ ಆಗದೇ ಇರುವಷ್ಟು! ಉದ್ಯೋಗಸ್ಥ ತಾಯಂದಿರು, ಉದ್ಯಮ ನಡೆಸುವ ಅಮ್ಮಂದಿರು, ಪ್ರಮುಖವಾದ ಸ್ಥಾನದಲ್ಲಿರುವ ಹಾಗೆಯೇ ದಿನಗೂಲಿಯಾಗಿ ಕೆಲಸ ಮಾಡುವ ತಾಯಂದಿರು... ಎಲ್ಲರೂ ಹೇಳುವುದು ಒಂದೇ ಮಾತು, ‘ಸಾಕಾಗಿದೆ ಈ ಒಂದು ವರ್ಷ. ಕಳೆದ ಕಾರ್ಮಿಕರ ದಿನ ನಮಗೆ ಹೇಗೆ ಇತ್ತೋ, ಈ ಕಾರ್ಮಿಕರ ದಿನವೂ ಹಾಗೇ– ಒಂಚೂರೂ ಬದಲಾವಣೆ ಇಲ್ಲ. ಮನೆಗೆಲಸ, ಕಚೇರಿ ಕೆಲಸ ಅಥವಾ ಸ್ವಂತ ಉದ್ಯಮವಾದರೆ ಅದರಲ್ಲಿ ನಿರಂತರ ಹೋರಾಟ. ನಮ್ಮ ಕಷ್ಟ, ಕೆಲವೊಮ್ಮೆ ಕೋಪ ಎಲ್ಲವನ್ನೂ ಕೇಳುವವರಾರು?’ ಎಂಬ ಆಕ್ರೋಶ.

‘ನನಗೊಬ್ಬನೇ ಮಗ. ಇನ್ನೂ ಏಳನೇ ತರಗತಿ. ಗಂಡನಿಗೂ ಉದ್ಯೋಗವಿದೆ. ಮಧ್ಯಮ ವರ್ಗದ ಕುಟುಂಬ ಎನ್ನಬಹುದು. ಆದರೆ ನನ್ನ ಗಂಡನ ಕೆಲಸ ಹೋಯ್ತು. ಮಗನ ಶಾಲೆ, ಸಾಮಾಜಿಕ ಬದುಕಿಗೆ ಒಮ್ಮೆಲೇ ತೆರೆ ಬಿದ್ದಾಗ ಕಂಗಾಲಾಗಿಬಿಟ್ಟೆ. ಕಚೇರಿ ಕೆಲಸ, ಮಗನ ಆನ್‌ಲೈನ್‌ ತರಗತಿ.. ಎರಡೂ ಒಂದೇ ಜಾಗದಲ್ಲಿ, ಒಂದೇ ಸಮಯದಲ್ಲಿ ನಿರ್ವಹಿಸುವುದೆಂದರೆ..! ಅಬ್ಬಾ, ವ್ಯವಸ್ಥಿತವಾಗಿ ಸಾಗುತ್ತಿದ್ದ ಬದುಕು ಒಂದೇ ಒಂದು ಕೋವಿಡ್ ಹೊಡೆತಕ್ಕೆ ನುಚ್ಚುನೂರಾಗಿ ಹೋಯ್ತು’ ಎಂಬ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಜಾನಕಿ ಪದಕಿಯ ಮಾತಿನಲ್ಲಿ ಸಂಕಷ್ಟದ ನೋವಿತ್ತು.

ಮಹಿಳಾ ಕಾರ್ಮಿಕರ ನೋವು

ಕಳೆದ ವರ್ಷದ ಲಾಕ್‌ಡೌನ್‌ನಿಂದ ಈ ವರ್ಷದ ಲಾಕ್‌ಡೌನ್‌ವರೆಗಿನ ಅನಿಶ್ಚಿತ ಪರಿಸ್ಥಿತಿ ಬಹುತೇಕ ಎಲ್ಲರ ಜೀವನದ ಮೇಲೂ ಪರಿಣಾಮ ಬೀರಿದೆ. ಹಾಗೆಯೇ ಜಾನಕಿಯಂತಹ ಬಹುತೇಕ ಮಹಿಳಾ ಕಾರ್ಮಿಕರ ಬದುಕಿಗೆ ನೋವಿನ ಬರೆಯೆಳೆದಿದೆ. ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ, ಇಬ್ಬರು ಮಕ್ಕಳ ತಾಯಿ ಬೆಂಗಳೂರಿನ ಆರ್‌ಟಿ ನಗರದ ಸಂಧ್ಯಾಳ ಕಥೆ ಇದಕ್ಕಿಂತ ಬೇರೆ ಏನಿಲ್ಲ. ಗಂಡ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ. ತವರುಮನೆಯಾದ ಮಂಗಳೂರಿನ ಪುಟ್ಟ ಹಳ್ಳಿಯಿಂದ ವರ್ಷಕ್ಕೆ ಸಾಕಾಗುವಷ್ಟು ಅಕ್ಕಿ, ತೆಂಗಿನಕಾಯಿ ಕಳಿಸುತ್ತಿದ್ದರು. ಮಕ್ಕಳನ್ನು ಚೆನ್ನಾಗಿ ಓದಿಸುತ್ತ, ಬದುಕು ಕಂಡುಕೊಳ್ಳುತ್ತಿರುವಾಗಲೇ ನೆಮ್ಮದಿಯನ್ನು ಕಸಿದಿತ್ತು ಕೋವಿಡ್‌. ಈಗ ಸಂಧ್ಯಾ ತಾನು ಶಿಕ್ಷಕಿಯಾಗಿರುವ ಶಾಲಾ ಮಕ್ಕಳಿಗೂ ಆನ್‌ಲೈನ್‌ ತರಗತಿಯಲ್ಲಿ ಪಾಠ ಹೇಳಬೇಕು, ಮಕ್ಕಳಿಗೂ ಆನ್‌ಲೈನ್‌ ತರಗತಿಯಲ್ಲಿ ಪಾಠ ಕೇಳಲು ಸಮಯ ಹೊಂದಿಸಿಕೊಳ್ಳಬೇಕು. ಅವರ ತಿಂಡಿ, ಊಟ ಎಂಬ ವ್ಯವಸ್ಥೆಯೂ ಮೊದಲಿನಂತೆ ಇದೆ. ಆದರೆ ಅವರಿಬ್ಬರೂ ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗಿರಬೇಕು. ಎಲ್ಲವನ್ನೂ ಸರಿದೂಗಿಸಲು ಆಕೆ 14 ತಾಸು ದುಡಿಯಬೇಕು! ಗಂಡನಿಗೆ ಕಚೇರಿಯಲ್ಲೇ ಮಾಡುವಂತಹ ಕೆಲಸ, ಕಂಪನಿಯಲ್ಲಿ ರಜೆ ಕೊಡ್ತಾ ಇಲ್ಲ ಎಂಬ ಕಾರಣವಂತೂ ಇದ್ದೇ ಇದೆ.

‘ಈ ಕೋವಿಡ್‌ ಎಂಬುದು ಸಮಾಜದಲ್ಲಿನ ಹುಳುಕನ್ನು ತೋರಿಸಿದೆ. ನಮ್ಮಂಥವರ ಕೆಲಸವನ್ನು ಎಲ್ಲಿಯೂ ಯಾರೂ ಪರಿಗಣಿಸುತ್ತಿಲ್ಲ ಎನಿಸುತ್ತದೆ. ಮಕ್ಕಳ ಹೋಂಸ್ಕೂಲ್‌ ಜೊತೆ ಸಂಪಾದಿಸಲು ದುಡಿಯಲೇಬೇಕು– ಮಕ್ಕಳ ಭವಿಷ್ಯಕ್ಕೆ ಹಣ ಹೊಂದಿಸಬೇಕಲ್ಲ. ಆದರೆ ಗಂಡನಿಗೆ ಮಾತ್ರ ಮನೆಯ ಬಿಸಿ ತಾಗದು’ ಎನ್ನುವಾಗ ಒಂದು ರೀತಿಯ ಆಕ್ರೋಶವಿತ್ತು ಆಕೆಯಲ್ಲಿ.

ಕಚೇರಿ ಕೆಲಸ, ಮನೆಗೆಲಸ, ಮಕ್ಕಳ ಪಾಲನೆ

ಕೋವಿಡ್‌ಗಿಂತ ಮುಂಚೆಯೂ ಮಹಿಳಾ ಕಾರ್ಮಿಕರ ಸ್ಥಿತಿ ಹೆಚ್ಚು ಕಡಿಮೆ ಹೀಗೆಯೇ ಇದ್ದರೂ ಹುಳುಕು ಹೊರಗಿನವರಿಗೆ ಗೊತ್ತಾಗುತ್ತಿರಲಿಲ್ಲ ಅಥವಾ ಒಂದು ರೀತಿಯಲ್ಲಿ ಕೌಟುಂಬಿಕ ಬದುಕು ನಡೆದುಕೊಂಡು ಹೋಗುತ್ತಿತ್ತು. ಮನೆಗೆಲಸ ಮಾಡಿಕೊಂಡು, ಡೇಕೇರ್‌ನಲ್ಲಿ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗಿ ಬಂದು ಮಾಡುವುದು ಸಾಮಾನ್ಯ ಎಂಬಂತಾಗಿತ್ತು. ಮನೆಗೆಲಸ, ಮಕ್ಕಳ ಕೆಲಸದ ಹೊಣೆ ಮನೆಯಲ್ಲಿನ ಪುರುಷರಿಗೆ ಅಷ್ಟೊಂದು ತಟ್ಟದಂತೆ ಹೇಗೊ ನೋಡಿಕೊಂಡರು. ಆದರೆ ಈಗಿನ ಪರಿಸ್ಥಿತಿ ಎಲ್ಲವನ್ನೂ ಬುಡಮೇಲು ಮಾಡಿದ್ದು, ಮಹಿಳೆಯರ ಮೇಲೆ ಹೆಚ್ಚಿನ ಒತ್ತಡ ಹೇರಿದೆ ಎನ್ನಬಹುದು.

‘ಈಗಂತೂ ಒದ್ದಾಟವಾಗಿಬಿಟ್ಟಿದೆ’ ಎನ್ನುವ ಗಾರ್ಮೆಂಟ್‌ ಉದ್ಯೋಗಿ ಪ್ರತಿಮಾ ಲೋಖಂಡೆ ‘ಮನೆಯಲ್ಲಿ ಮಕ್ಕಳಿಬ್ಬರು, ವಯಸ್ಸಾದ ಅತ್ತೆ– ಮಾವ. ಮನೆಗೆಲಸ, ಊಟ– ತಿಂಡಿ ಎಲ್ಲವನ್ನೂ ಮಾಡಿಕೊಂಡು ಗಾರ್ಮೆಂಟ್‌ಗೆ ಹೋಗುತ್ತಿದ್ದೆ. ಕಳೆದ ವರ್ಷ ಲಾಕ್‌ಡೌನ್‌ ಎಂದು ಕೆಲವು ತಿಂಗಳುಗಳ ಕಾಲ ಸಂಪಾದನೆ ಇರಲಿಲ್ಲ. ಈಗ ಮತ್ತೆ ಲಾಕ್‌ಡೌನ್‌ ಎಂದು ತಾಪತ್ರಯ ಶುರುವಾಗಿದೆ. ಗಂಡ ತರಕಾರಿ ಮಾರಾಟದಿಂದ ತರುವ ಹಣವನ್ನೇ ನೆಚ್ಚಿಕೊಂಡಿದ್ದೇವೆ. ದೊಡ್ಡ ಮಗನಿಗೆ ಭಯ, ಆತಂಕದ ಸಮಸ್ಯೆ ಶುರುವಾಗಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ.

ಇಂತಹ ಸಮಸ್ಯೆಗಳು ಕೋವಿಡ್ ಕಡಿಮೆಯಾದ ಮೇಲೂ ಪರಿಹಾರ ಕಾಣುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಪೋಷಕರು ಮಕ್ಕಳ ಕರ್ತವ್ಯವನ್ನು ಸಮಾನವಾಗಿ ಹಂಚಿಕೊಳ್ಳುವ ಕಾಲ ನಿಧಾನಕ್ಕಾದರೂ ಬರಬಹುದು ಎಂಬ ಆಶಾವಾದ ಹೊಂದಬೇಕಷ್ಟೆ. ಜೊತೆಗೆ ಮಕ್ಕಳಿಗಾಗಿ ಕಡಿಮೆ ವೆಚ್ಚದ ಚೈಲ್ಡ್‌ಕೇರ್‌ ಕೇಂದ್ರಗಳು, ಶಾಲೆಯ ನಂತರ ಆಟವಾಡಲು ಸ್ಥಳಗಳು, ಆರೋಗ್ಯ ಸೇವೆ ದೊರೆತರೆ ಉದ್ಯೋಗಸ್ಥ ತಾಯಂದಿರು ನೆಮ್ಮದಿಯ ನಿಟ್ಟುಸಿರು ಬಿಡಬಹುದು.

ಉನ್ನತ ಸ್ಥಾನಕ್ಕೇರಲು ಕೌಟುಂಬಿಕ ಕರ್ತವ್ಯ ಅಡ್ಡಿ

ಮಹಿಳಾ ಉದ್ಯೋಗಿಗಳ ವೇತನದಲ್ಲಿನ ತಾರತಮ್ಯ ಸಾಕಷ್ಟು ಕಮ್ಮಿಯಾಗಿದೆ. ಕಂಪನಿಯಲ್ಲಿ ಉನ್ನತ ಸ್ಥಾನಕ್ಕೂ ಏರಬಹುದು. ಆದರೆ ಮಕ್ಕಳ ಕೆಲಸ, ಅಡುಗೆ, ಅವರನ್ನು ಓದಿಸುವುದು... ಹೀಗೆ ಹತ್ತಾರು ಕರ್ತವ್ಯಗಳು ಅವರನ್ನು ಹಿಂದಕ್ಕೆ ಎಳೆದುಬಿಡುತ್ತವೆ. ಈ ಕುರಿತು ನಡೆದ ಸಮೀಕ್ಷೆಯೊಂದರಲ್ಲಿ ಶೇ 79ರಷ್ಟು ಮಂದಿ ತಾಯಂದಿರು, ಕಳೆದ ಒಂದು ವರ್ಷದಿಂದ ಹೋಂ ಸ್ಕೂಲಿಂಗ್‌ ಹೊಣೆ ತಮ್ಮ ಮೇಲೆಯೇ ಬಿದ್ದಿದೆ ಎಂದು ಹೇಳಿಕೊಂಡಿದ್ದಾರೆ. ಶಾಲೆಗಳನ್ನು ಮುಚ್ಚಿರುವುದರಿಂದ ತಾಯಂದಿರ ಮಾನಸಿಕ ಒತ್ತಡವೂ ಜಾಸ್ತಿಯಾಗಿದೆಯಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.