ಅಕ್ಟೋಬರ್ ಮೊದಲ ವಾರ ವಿಶ್ವದೆಲ್ಲೆಡೆ ವನ್ಯಜೀವಿ ಸಪ್ತಾಹದ ಸಮಾರಂಭಗಳಿಗೆ ಸಿದ್ಧತೆ ನಡೆದಿದೆ. ಭಾರತವೂ ಸಹ 67ನೇ ಸಮಾರಂಭ ಆಚರಿಸುತ್ತಿದೆ. ಸಾಂಕೇತಿಕ ಹಬ್ಬವಾಗಿ...ಬಂದು ಹೋಗುವ ನೂರಾರು ಹಬ್ಬಗಳಲ್ಲಿ ಒಂದಾಗಿ...
ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಅರಣ್ಯ ಸೇವೆಯ ಅಧಿಕಾರಿಯೊಬ್ಬರು ಈಚೆಗೆ ಸಿಕ್ಕಿದ್ದರು. ಕೇಂದ್ರ ಸರ್ಕಾರದ ಕ್ರಿಯಾಶೀಲತೆಯನ್ನು, ತ್ವರಿತವಾಗಿ ಕಾರ್ಯರೂಪಕ್ಕೆ ಬರುತ್ತಿರುವ ಯೋಜನೆಗಳನ್ನು ಉತ್ಸಾಹದಿಂದ ವಿವರಿಸುತ್ತಿದ್ದರು.
ಮುಂದುವರಿದು, ಸದಸ್ಯರಾಗಿದ್ದ ಸಮಿತಿಯು ಅಂಡಮಾನ್–ನಿಕೋಬಾರ್ ದ್ವೀಪಕ್ಕೆ ಸಂಬಂಧಿಸಿದ ಯೋಜನೆಯ ಕಡತಗಳಿಗೆ ಕೆಲವೇ ಗಂಟೆಗಳಲ್ಲಿ ಅನುಮೋದನೆ ನೀಡಿದ ಸಾಧನೆಯನ್ನು, ಆ ಅಭಿವೃದ್ಧಿಗೆ ತೊಡಕಾಗಿರುವ ಕಾನೂನು ಪೀಡೆಗಳನ್ನು ಹೇಗೆ ಬದಿಗೆ ಸರಿಸಿ ಹಸಿರು ನಿಶಾನೆ ತೋರಿದೆವು ಎಂದು ಭಾವಪರವಶರಾಗಿ ಹೇಳಿದರು.
ಅಂಡಮಾನ್‌ನ ಉತ್ತರದಲ್ಲಿರುವ ನಿಕೋಬಾರ್ ದ್ವೀಪ. ಅಲ್ಲಿ ದೈತ್ಯ ಮರಗಳಿಂದ ತುಂಬಿದ ಕತ್ತಲೆಯ ಕಾಡು. ದ್ವೀಪದ ಸುತ್ತಲೂ ಸ್ಫಟಿಕದಷ್ಟು ಸ್ವಚ್ಛವಾದ ಮರಳಿನ ಮೈದಾನ. ಮರಳಿನ ಮೈದಾನದ ಮೇಲೆ ತೇಲಿ ಬರುವ ಅಲೆಗಳು ಸದ್ದಿಲ್ಲದೆ ಮರಳಿ ಸಮುದ್ರಕ್ಕೆ ಹಿಂದಿರುಗುವ ದೃಶ್ಯಗಳು ಸ್ವರ್ಗ ಸದೃಶ.
ಈ ಕತ್ತಲ ಕಾಡಿನೊಳಗಿಂದ ಮೆಗಾಪೋಡ್ ಹಕ್ಕಿಗಳ ಕಲರವ. ನಾರ್ಕೊಂಡಮ್ ಹಾರ್ನ್‌ಬಿಲ್ ಹಕ್ಕಿಗಳ ರೆಕ್ಕೆಗಳ ಸದ್ದು. ಸೂರ್ಯ ಮುಳುಗುವ ಹೊತ್ತಿಗೆ ಕಣ್ಣುಜ್ಜಿಕೊಂಡು ಬೆಳಗಾಯಿತೆಂದು ಪೊಟರೆಗಳಿಂದ ಇಣುಕುವ ಅಂಡಮಾನ್ ಗೂಬೆಗಳು. ಒಣಗಿದ ಎಲೆಗಳ ರಾಶಿಯ ನಡುವೆ ಸದ್ದಿಲ್ಲದೆ ಸರಿಯುವ ಕಾಳಿಂಗ ಸರ್ಪಗಳು.
ಗಂಧರ್ವ ಲೋಕದಂತಿದ್ದ ಆ ಪುಟ್ಟ ದ್ವೀಪದ 32,371 ಎಕರೆ ಕಾಡನ್ನು ಎರಡು ವರ್ಷಗಳ ಹಿಂದೆ ಬುಲ್ಡೋಜರ್‌ಗಳು ಕೆಲವೇ ದಿನಗಳಲ್ಲಿ ನೆಲಸಮ ಮಾಡಿದವು. ಹೆಚ್ಚು ಕಡಿಮೆ ದ್ವೀಪವೇ ಬಯಲಾಯಿತು. 72,000 ಕೋಟಿ ರೂಪಾಯಿಗಳ ಯೋಜನೆ ಕೆಲಸ ಆರಂಭಿಸಿತು. ಬಂದರು, ವಿಮಾನ ನಿಲ್ದಾಣ, ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಮತ್ತು ನಗರ ನಿವೇಶನಗಳ ಮಹಾ ಯೋಜನೆ. ಅಭಿವೃದ್ಧಿಯ ಗದ್ದಲಕ್ಕೆ ಬೆಚ್ಚಿಬಿದ್ದ ಶೋಮ್ಪೆನ್ ಬುಡಕಟ್ಟು ಜನ ಎತ್ತ ಹೋದರೋ ಗೊತ್ತಿಲ್ಲ. ಕೇವಲ 229 ಮಂದಿಯಷ್ಟೇ ಉಳಿದಿರುವ, ಕಣ್ಮರೆಗೆ ಸಿದ್ಧತೆ ನಡೆಸಿರುವ ಅಪರೂಪದ ಸಮುದಾಯವದು.
ಇದಾವುದನ್ನೂ ಅರಿಯದೆ ದೆಹಲಿಯಲ್ಲಿ ಕುಳಿತು ವಿಡಿಯೊ ಕಾನ್ಫರೆನ್ಸ್ ಮೂಲಕ ತ್ವರಿತಗತಿಯಲ್ಲಿ ಯೋಜನೆಗೆ ಅನುಮತಿ ನೀಡಿದ್ದನ್ನು ಅವರು ಸಾಧನೆ ಎಂದು ಭಾವಿಸಿದ್ದಂತೆ ಕಂಡಿದ್ದರು. ಮಹಾ ದಕ್ಷ ಮತ್ತು ಪರಿಣಾಮಕಾರಿ ತೀರ್ಮಾನಗಳಿಗೆ ಹೆಸರಾದ ಅನೇಕ ನಾಯಕರು ಚರಿತ್ರೆಯ ಕಾಲಘಟ್ಟದಲ್ಲಿ ಖಳನಾಯಕರಾಗಿ ಉಳಿದಿರುವ ಅನೇಕ ಉದಾಹರಣೆಗಳಿವೆ. ಮುಂದೊಂದು ದಿನ ಆ ಪಟ್ಟಿಗೆ ಇವರೂ ಸೇರಬಹುದೇನೋ. ಅಂಡಮಾನ್ ದ್ವೀಪಗಳ ವಿಶೇಷತೆ, ಅಲ್ಲಿಯ ಜೀವ ಪರಿಸರ, ನೆಲೆಸಿರುವ ಬುಡಕಟ್ಟು ಜನಾಂಗಗಳ ಬಗ್ಗೆ ಅವರಿಗೆ ಅಲ್ಪಸ್ವಲ್ಪ ಜ್ಞಾನವಿದ್ದು, ಕನಿಷ್ಠ ಕಳಕಳಿಯಿದ್ದಿದ್ದಲ್ಲಿ ಖಂಡಿತವಾಗಿ ಆ ಪಾಪದ ಕೃತ್ಯದಲ್ಲಿ ಪಾಲ್ಗೊಳ್ಳುತ್ತಿರಲಿಲ್ಲವೇನೋ. ಅಥವಾ ಸತ್ಯದ ಪ್ರಜ್ಞೆ ಬೇಕೆಂದೇ ನಿದ್ರಿಸಿಬಿಟ್ಟಿರಬಹುದು. ವೈಜ್ಞಾನಿಕ ಒಳನೋಟ, ತಾತ್ವಿಕ ಚಿಂತನೆಗಳಿಲ್ಲದಿದ್ದಾಗ ಇಂತಹ ಅನಾಹುತಗಳು ಜರುಗುವುದು ಸಹಜ.
ಇಷ್ಟು ಕಠಿಣವಾಗಿ ಮಾತನಾಡಲು ಕಾರಣವಿದೆ. ಅಂಡಮಾನ್–ನಿಕೋಬಾರ್ ದ್ವೀಪ ಸಮೂಹ ಸಂಕೀರ್ಣ ಜೈವಿಕ ವೈವಿಧ್ಯತೆಯ ಪ್ರದೇಶ. ಭಾರತ ಮತ್ತು ಏಷ್ಯಾ ಖಂಡದ ಈಶಾನ್ಯ ದೇಶಗಳ ಜೀವಸಂಕುಲಗಳು ಇಲ್ಲಿ ನೆಲೆಕಂಡಿವೆ.
ನಾರ್ಕೊಂಡಮ್ ಹಾರ್ನ್‌ಬಿಲ್ ಇಲ್ಲಷ್ಟೇ ಜೀವಿಸುವ ಹಕ್ಕಿಗಳು. ಮೆಗಾಪೋಡ್ ಹಕ್ಕಿಗಳದ್ದು ಇನ್ನಷ್ಟು ವಿಶೇಷ. ಇವು ದೂರಕ್ಕೆ ಹಾರಲಾರದ ಹಕ್ಕಿಗಳು. ಪುಟ್ಟ ದಿಬ್ಬಗಳ ನಡುವೆ ಇವುಗಳ ಗೂಡು. ಆದರೆ ಮೊಟ್ಟೆಗಳಿಗೆ ಕಾವು ಕೊಡುವ ಕಾಯಕ ಅವುಗಳಿಗಿಲ್ಲ. ಉದುರಿದ ಎಳೆಗಳು ಕೊಳೆತು ವಿಘಟಿಸುವ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಶಾಖಕ್ಕೆ ಮೊಟ್ಟೆಗಳು ಬಿರಿದು ಮರಿಗಳು ಹೊರಬರುತ್ತವೆ.
ಇದೇ ರೀತಿ ಅಂಡಮಾನ್ ಮಾಸ್ಕ್ಡ್ ಗೂಬೆಗಳು ಇಲ್ಲಿಗಷ್ಟೇ ಸೀಮಿತ. ಇದಲ್ಲದೆ ಅರಣ್ಯದೊಂದಿಗೆ ನಿರಂತರವಾಗಿ ಸಮುದ್ರ ಇಟ್ಟುಕೊಂಡಿರುವ ಸಂವಾದವನ್ನು ಇಂದಿಗೂ ಯಾರೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲ.
ಲಕ್ಷ ಲಕ್ಷ ವರ್ಷಗಳಲ್ಲಿ ವಿಕಸಿಸುತ್ತ ರೂಪುಪಡೆದ ಜೀವಸಂಕುಲಗಳ ನೆಲೆಯನ್ನು ಧ್ವಂಸಗೊಳಿಸಿ, ಅಭಿವೃದ್ಧಿ ಎಂಬ ಭ್ರಮೆಗೆ ಅಡಿಪಾಯ ಹಾಕುವುದರಲ್ಲಿ ಏನಾದರೂ ಅರ್ಥವಿದೆಯೆ?
ಇದು ಅಂಡಮಾನ್‌ನ ಉತ್ತರ ನಿಕೋಬಾರ್‌ನ ದುರಂತ ಕಥೆ. ಸರ್ಕಾರಗಳು ಇಂತಹ ಮೂರ್ಖ ತೀರ್ಮಾನಗಳಿಗೆ ಸದಾ ಹಾತೊರೆಯುತ್ತಿರುತ್ತವೆ. ಕೆಲವು ವರ್ಷಗಳ ಹಿಂದೆ ಮಲೇಷ್ಯಾ ಸರ್ಕಾರದ ಯಾವುದೋ ರಾಜಕೀಯ ನಿಲುವಿಗೆ ಸಿಟ್ಟಾದ ಕೇಂದ್ರ, ಈಶಾನ್ಯ ರಾಜ್ಯಗಳ ಕಾಡುಗಳನ್ನು ಸವರಿ ಪಾಮ್ ಗಿಡಗಳನ್ನು ನೆಡುವಂತೆ ಆಜ್ಞಾಪಿಸಿತ್ತು. ಆ ಮೂಲಕ ಮಲೇಷ್ಯಾದಿಂದ ಆಮದಾಗುತ್ತಿದ್ದ ಪಾಮ್ ಎಣ್ಣೆ ಖರೀದಿಯನ್ನು ಸ್ಥಗಿತಗೊಳಿಸಿ ಅವರಿಗೆ ಪಾಠ ಕಲಿಸುವುದು ಉದ್ದೇಶವಾಗಿತ್ತು. ಇದು ಅವಿವೇಕದ ನಿರ್ಧಾರವೆ. ವ್ಯವಹಾರಿಕವಾಗಿ ಈ ತೀರ್ಮಾನ ಲಾಭದಾಯಕವಾಗಿರಲಿಲ್ಲ. ಜೊತೆಗೆ, ಈ ಅಮೂಲ್ಯ ಮಳೆ ಕಾಡುಗಳನ್ನು ಛಿದ್ರಗೊಳಿಸಿ ನಾವು ಬೆಳೆಸುವ ಪಾಮ್ ತೋಟಗಳು ಪರಿಸರಕ್ಕೆ ಹಾನಿಕರ.
ಇದೇ ರೀತಿ ಲೇಹ್ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ಗಣಿಗಾರಿಕೆ ಆರಂಭಿಸಲು ಸಿದ್ಧತೆ ನಡೆಸಿದೆ. ವಾಸ್ತವವಾಗಿ ಈ ಇಡೀ ವಲಯವೇ ಅತ್ಯಂತ ಸೂಕ್ಷ್ಮ. ಅಲ್ಲಿಯ ಹೆಚ್ಚಿನ ದೈತ್ಯ ಹಿಮಪರ್ವತಗಳಿಗಾಗಲಿ ಅಥವಾ ಗುಡ್ಡ ಕಣಿವೆಗಳಿಗಾಗಲಿ ಭದ್ರ ಅಡಿಪಾಯವಿಲ್ಲ. ಅವು ಪುಡಿಪುಡಿಯಾದ ಮಣ್ಣಿನಿಂದ ರೂಪುಗೊಂಡಿರುವ ಸ್ಥಿರತೆ ಇಲ್ಲದ ಪರ್ವತಗಳು. ಗಣಿಗಾರಿಕೆಯಲ್ಲಿ ಸಿಡಿಯುವ ಸದ್ದಿನ ಕಂಪನಕ್ಕೆ ಈ ಪರ್ವತಗಳು ಜಾರಬಹುದು. ಈ ಗುಡ್ಡಗಳ ನೆತ್ತಿಯಲ್ಲಿ ಕುಳಿತ ಮಂಜುಗೆಡ್ಡೆಗಳೇ ಅಲ್ಲಿನ ನೀರಿನ ಮೂಲ. ಇದಲ್ಲದೆ ಹಿಮಚಿರತೆಗಳ ನೆಲೆಯೂ ಹೌದು. ಈ ಅಪರೂಪದ ಜೀವಿಗಳನ್ನು ನೋಡಲೆಂದೇ ದೇಶ ವಿದೇಶಗಳಿಂದ ಅಲ್ಲಿಗೆ ಪ್ರವಾಸಿಗಳು ಭೇಟಿ ನೀಡುತ್ತಾರೆ. ಈ ಪ್ರವಾಸೋದ್ಯಮ ಸ್ಥಳೀಯ ಜನರ ಬದುಕಿಗೆ ಆಧಾರವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿಯ ಜನ ಗಣಿ ಕೈಗಾರಿಕೆ ಬೇಡವೆಂದು ಕೈಮುಗಿದು ಕೇಳಿಕೊಳ್ಳುತ್ತಿದ್ದಾರೆ. ನಿರುತ್ತರ ಸರ್ಕಾರದ ಉತ್ತರವಾಗಿದೆ.
ಇದಲ್ಲದೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಭಾರತವನ್ನು ಈಗಾಗಲೇ 67 ಲಕ್ಷ ಕಿಲೋಮೀಟರ್ ಉದ್ದದ ರಸ್ತೆಗಳು, 132 ಸಾವಿರ ಕಿಲೋಮೀಟರ್ ರೈಲ್ವೆ ಹಳಿಗಳು ತುಂಡರಿಸಿವೆ. ಇದರಿಂದ ಮಾರ್ಗದ ಆಸುಪಾಸಿನ ಜೀವಪರಿಸರದ ನಿತ್ಯ ಚಟುವಟಿಕೆಗೆ ಧಕ್ಕೆಯಾಗಿದೆ. ಜೀವಿ ಜೀವಿಗಳ ನಡುವೆ ಜರುಗಲೇಬೇಕಿರುವ ಸಂವಾದ ಸಾಧ್ಯವಾಗುತ್ತಿಲ್ಲ.
ಇದರಿಂದ ಜಿನುಗುವ ಝರಿಗಳು, ಹರಿಯುವ ಹಳ್ಳಗಳು ತಮ್ಮ ಅಸ್ಮಿತೆಯನ್ನು ಕಳೆದುಕೊಂಡಿವೆ. ಅಭಿವೃದ್ಧಿಯ ನಕ್ಷೆಗಳು ತೋರುವ ದಿಕ್ಕಿಗೆ ಅವು ಹರಿಯಬೇಕಾದ ಸನ್ನಿವೇಶಗಳು ನಿರ್ಮಾಣವಾಗಿದೆ. ಇದರಿಂದ ಭೂಮಿ ಕ್ರಮೇಣ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಅಂತರ್ಜಲದ ಪುನಶ್ಚೇತನಕ್ಕೂ ಅಡ್ಡಿಯಾಗುತ್ತದೆ. ಅಷ್ಟೇ ಅಲ್ಲ, ಮಣ್ಣಿನ ಕಣಗಳಲ್ಲಿ ಕುಳಿತ ಲಕ್ಷ ಲಕ್ಷ ಸೂಕ್ಷ್ಮಾಣು ಜೀವಿಗಳು ನಿಷ್ಕ್ರಿಯವಾಗಿಬಿಡುತ್ತವೆ. ಆಗ ಮಣ್ಣು ತನ್ನ ರಚನೆ, ಗುಣಗಳನ್ನೆಲ್ಲ ಕಳೆದುಕೊಳ್ಳುತ್ತದೆ. ಭೂಮಿ ಸತ್ವವನ್ನು ಕಳೆದುಕೊಂಡು ಬರಡಾಗಲು ಸಿದ್ದವಾಗುತ್ತದೆ.
ಸರ್ಕಾರ ಈ ದಿಕ್ಕಿನಲ್ಲಿ ಎಚ್ಚರವಾಗಿಲ್ಲವೇ? ಅಪಾಯಕ್ಕೆ ಸಿಕ್ಕಿರುವ ಭೂಮಿ, ಪರಿಸರ ಮತ್ತು ಜೀವಸಂಕುಲಗಳ ರಕ್ಷಣೆಗೆ ಕಾರ್ಯಕ್ರಮ ಗಳನ್ನು ಹೆಣೆದಿಲ್ಲವೆ? ಈ ಪ್ರಶ್ನೆಗಳಿಗೆ ಉತ್ತರ ನಿರಾಶಾದಾಯಕ.
ಹಾಗೆಯೇ, ನಿರರ್ಥಕ ಯೋಜನೆಗಳ ಬಗ್ಗೆ ಚರ್ಚಿಸೋಣ. ಕಾಡನ್ನಾಗಲಿ, ಹುಲ್ಲುಗಾವಲು ಗಳನ್ನಾಗಲಿ ಎಂದಿಗೂ ಮಾನವ ಸೃಷ್ಟಿಸಲು ಸಾಧ್ಯವಿಲ್ಲ. ಅವುಗಳನ್ನು ಸಂರಕ್ಷಿವುದಷ್ಟೇ ನಮ್ಮ ಮುಂದಿರುವ ಆಯ್ಕೆ. ಈ ಸರಳ ಸತ್ಯ ಅರ್ಥವಾದಂತೆ ಕಾಣುತ್ತಿಲ್ಲ. ಈಚೆಗೆ ಹುಲ್ಲುಗಾವಲು ಅಭಿವೃದ್ಧಿ ಯೋಜನೆಯನ್ನು ರೂಪಿಸಿದೆ. ಅಭಿವೃದ್ಧಿ ಎನ್ನುವ ಪದ ಪರಿಸರದ ಸಂದರ್ಭದಲ್ಲಿ ನಾಶ ಅಥವಾ ಧ್ವಂಸ ಎಂಬ ಅರ್ಥ ಬರುತ್ತದೆ.
ಇಲ್ಲಿ ಹುಲ್ಲುಗಾವಲುಗಳನ್ನು ಸೃಷ್ಟಿಸುವುದಾದರೂ ಹೇಗೆ? ಎಲ್ಲೋ ಸಂಗ್ರಹಿಸಿದ ಹುಲ್ಲಿನ ಬೀಜಗಳನ್ನು ತೆರೆದ ಬಯಲಿಗೆ ಬಿಸಾಡಿಬಿಡುವುದೆ? ಹುಲ್ಲುಗಾವಲೆಂದರೆ ನಾವು ಪಾರ್ಕ್‌ಗಳಲ್ಲಿ, ರೆಸಾರ್ಟ್‌ಗಳಲ್ಲಿ ಬೆಳೆಸುವ ಹಸಿರು ಮೈದಾನಗಳಲ್ಲ. ಹುಲ್ಲುಗಾವಲಿಗೆ ತನ್ನದೇ ಗುಣವಿರುತ್ತದೆ. ಅಲ್ಲಿ ಎಷ್ಟು ಜಾತಿಯ ಹುಲ್ಲುಗಳಿವೆ? ಆ ಸಂಯೋಜನೆಯನ್ನು ತೀರ್ಮಾನಿಸುವ ಅಂಶಗಳು ಯಾವುವು? ಅವುಗಳ ಆಯ್ಕೆಗಳೇನು? ಇವುಗಳಿಗೆ ಉತ್ತರ ಕಂಡುಕೊಳ್ಳುವುದು ಸುಲಭದ ಕೆಲಸವಲ್ಲ.
ಇದಕ್ಕೆ ಉದಾಹರಣೆ ಎಂದರೆ ತಾಂಜೇನಿಯಾದ ಸವನ್ನಾ ಕಾಡುಗಳಲ್ಲಿನ ವೈವಿಧ್ಯತೆ. ಇಲ್ಲಿ 275ಕ್ಕೂ ಹೆಚ್ಚಿನ ಹುಲ್ಲಿನ ಪ್ರಭೇದಗಳಿವೆ. ಅಲ್ಲಿರುವ ಲಕ್ಷ ಲಕ್ಷ ಗೊರಸುಪಾದದ ಜೀವಿಗಳ ದೈನಂದಿಕ ಸವಾಲಿನೊಂದಿಗೆ ಅವು ಹೇಗೆ ಉಳಿದು ಬಂದಿರಬಹುದು? ಹೀಗೆ ವಿಷಯಗಳ ಆಳಕ್ಕೆ ಹೋದಷ್ಟೂ ಅವು ಇನ್ನಷ್ಟು ಸಂಕೀರ್ಣವಾಗುತ್ತಾ ಹೋಗುತ್ತವೆ. ಈ ಹಿನ್ನೆಲೆಯಲ್ಲಿ ತಜ್ಞರು ನಿರ್ವಹಿಸಬೇಕಾದ ಕೆಲಸಗಳನ್ನು ಅವರೇ ನಿರ್ವಹಿಸಬೇಕು. ಇಲ್ಲಿ ಅಹಂಗಿಂತ ವಿನಯ ಮುಖ್ಯವಾಗುತ್ತದೆ. ಹಾಗಾಗಿ ವೈಜ್ಞಾನಿಕ ಮನೋಧರ್ಮ ಮಾತ್ರ ಭವಿಷ್ಯವನ್ನು ಕಾಪಾಡಬಹುದು.
ಇದನ್ನೆಲ್ಲ ಹೇಳುವಾಗ ಕಾಡು, ಬೆಟ್ಟ-ಗುಡ್ಡ, ನದಿ-ಸರೋವರ ಇವುಗಳೆಲ್ಲ ಏಕೆ ಬೇಕು? ಎಂಬ ಪ್ರಶ್ನೆ ಎದುರಾಗಬಹುದು. ಇಂದು ಭೂಮಂಡಲ ವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ ವಾತಾವರಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಇಂಗಾಲದ ಅಂಶ. ಇದು ಹವಾಮಾನದ ಬದಲಾವಣೆಗೆ ಮುಖ್ಯ ಕಾರಣವೆಂದು ವಿಜ್ಞಾನಿಗಳು ಹೇಳುತ್ತಲೇ ಇದ್ದಾರೆ. ಈ ಸಮಸ್ಯೆಗೆ ಇರುವ ಏಕೈಕ ಪರಿಹಾರವೆಂದರೆ ಜೀವ ಪರಿಸರವನ್ನು ಉಳಿಸಿಕೊಳ್ಳುವುದು. ಈ ಜೀವ ಪರಿಸರಕ್ಕೆ ಇಂಗಾಲ ವನ್ನು ಪರಿಣಾಮಕಾರಿ ಆಗಿ ನಿಯಂತ್ರಿಸುವ ಶಕ್ತಿಯಿದೆ.
ಈ ಕಾರಣದಿಂದಲೇ ಹಲವಾರು ಆಫ್ರಿಕಾ ದೇಶಗಳನ್ನು ಬರ ಮೇಲಿಂದ ಮೇಲೆ ಕಾಡುತ್ತಿದೆ. ಜನರ ಬದುಕು ಅಸ್ತವ್ಯಸ್ತವಾಗಿದೆ. ಕಾನೂನಿನಲ್ಲಿ ರಕ್ಷಣೆ ಒದಗಿಸಿದ್ದ ಕಾಡುಪ್ರಾಣಿಗಳನ್ನು ಬೇಟೆಯಾಡಲು ಸರ್ಕಾರ ಅನುಮತಿ ನೀಡಿದೆ. ಕೆಲವೆಡೆ ಸರ್ಕಾರಗಳೇ ಆ ಕೆಲಸನ್ನು ನಿರ್ವಹಿಸುತ್ತಿವೆ. ಏಕೆಂದರೆ ಹಸಿವಿನಿಂದ ಜನರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯ ಸವಾಲು ಅಲ್ಲಿ ಎದುರಾಗಿದೆ. ಇಂತಹ ಗಂಭೀರ ಸನ್ನಿವೇಶದಲ್ಲೂ ನಮ್ಮ ಸಮಾಜ, ಸರ್ಕಾರಗಳು ಹಾಗೆಯೇ ಮಾಧ್ಯಮ ಎಚ್ಚೆತ್ತುಕೊಳ್ಳುವುದು ಯಾವಾಗ? ನಮಗಂತೂ ಭರವಸೆಗಳು ಕಾಣುತ್ತಿಲ್ಲ. ಸಮಾಜ ಎಚ್ಚೆತ್ತುಕೊಳ್ಳುವ ಹೊತ್ತಿಗೆ ಜೀವಸಂಕುಲಗಳು ದೇವಲೋಕಕ್ಕೆ ಪ್ರಯಾಣಿಸಿ ಬಿಟ್ಟಿರಬಹುದು.
ನಾವು ಸೃಷ್ಟಿಸಿದ ಅದ್ಭುತಗಳಿಗಿಂತ, ನಾವು ಗಾಸಿಗೊಳಿಸದೆ ಯಾವುದನ್ನೆಲ್ಲ ಸಂರಕ್ಷಿಸಿದ್ದೇವೆ ಎಂಬ ಆಧಾರದ ಮೇಲೆ ಮುಂದಿನ ಜನಾಂಗ ನಮ್ಮನ್ನು ಗೌರವಿಸಬಹುದುಮೈಕೆಲ್ ಕಾಲಿನ್ಸ್ 1969ರ ಚಂದ್ರಯಾನದಲ್ಲಿದ್ದ ವಿಜ್ಞಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.