‘ರೈಟರ್ಸ್ ಬ್ಲಾಕ್’ ಬಗ್ಗೆ ಕೇಳಿದ್ದೀರಿ ತಾನೆ? ‘ಬರಹಗಾರರ ತಡೆಗೋಡೆ’ಯನ್ನು ನಾವ್ಯಾರೂ ಪ್ರಸಿದ್ಧ ಲೇಖಕರಲ್ಲದೆಯೂ ಅನುಭವಿಸಿರಲು ಸಾಧ್ಯವಿದೆ. ಖಾಲಿ ಕಾಗದವನ್ನಿಟ್ಟುಕೊಂಡು ಏನು ಬರೆಯಬೇಕು, ಎಲ್ಲಿಂದ ಆರಂಭಿಸಬೇಕು ಎನ್ನುವುದು ಗೊತ್ತಾಗದೆ ನಾವೆಷ್ಟು ಬಾರಿ ಕುಳಿತಿಲ್ಲ? ‘ಈಗೇನು ಚ್ಯಾಟ್ ಜಿಪಿಟಿ ಇದೆ ಬಿಡಿ’ ಅನ್ನಬಹುದು. ಆದರೆ ಚ್ಯಾಟ್ ಜಿಪಿಟಿಗೆ ಏನಾದರೂ ‘ಆದೇಶ’ ಕೊಡಲಾದರೂ ನಮ್ಮ ತಲೆ ಕೆಲಸ ಮಾಡಬೇಕಲ್ಲ?
ಮನುಷ್ಯನ ಮನಸ್ಸು ರೂಪುಗೊಂಡಾಗಿನಿಂದಲೂ, ಅಂದರೆ ಆದಿಮಾನವನ ಕಾಲದಿಂದಲೂ ಕಲೆಗಳು ಇದ್ದವಷ್ಟೆ. ಆಗಲೂ `ಬರಹಗಾರರ ಬ್ಲಾಕ್' ಇದ್ದಿರಬೇಕು. ಆದರೆ 21ನೇ ಶತಮಾನದ ಕೊನೆಯ ಭಾಗದವರೆಗೆ ಇದಕ್ಕೆ ಒಂದು ‘ಸಮಸ್ಯೆ’ ಎಂಬ ‘ಗೌರವ’ ದೊರೆತಿರಲಿಲ್ಲ. 1970ರ ಹೊತ್ತಿಗೆ ಈ ಸಮಸ್ಯೆ ಬರಹಗಾರರ ಗಮನಕ್ಕೆ ಬಂದು ಅದೆಷ್ಟು ‘ಕುಖ್ಯಾತಿ’ ಗಳಿಸಿತೆಂದರೆ ‘ಬಿ ವರ್ಡ್’ ಎಂದಷ್ಟೇ ಅದನ್ನು ಕರೆಯುತ್ತಿದ್ದರು. ಅದನ್ನು ಪೂರ್ತಿ ಉಚ್ಚರಿಸಲೂ ಹೆದರುವಷ್ಟು! ಅದನ್ನು ‘ಡ್ರೈ ಸ್ಪೆಲ್’ (ಒಣ ಅವಧಿ) ಎಂದು ಕರೆಯುವುದೂ ರೂಢಿಯಾಗಿತ್ತು. ಇದು ಕೇವಲ ಬರಹಗಾರರಲ್ಲಷ್ಟೇ ಅಲ್ಲ. ಯಾವುದನ್ನೂ ‘ಸೃಷ್ಟಿಸುವ ಕಲೆ’ಯಲ್ಲಿಯೂ ಕಾಣಬಹುದಾದದ್ದೇ. ‘ಸ್ಫೂರ್ತಿ’ ಹುಟ್ಟದಿರುವುದು, ಹಾಡಿದ್ದು, ನೃತ್ಯ ಸಂಯೋಜಿಸಿದ್ದು, ಚಿತ್ರ ಬರೆದದ್ದು ತನಗೇ ಯಾಂತ್ರಿಕ, ಅದರಲ್ಲಿ ಯಾವ ಹೊಸತೂ ಇಲ್ಲ ಅನಿಸುವುದು ಅಥವಾ ಏನೂ ಹೊಳೆಯದಿರುವುದು–ಇವೆಲ್ಲ ಕಲಾ ವಲಯದಲ್ಲಿ ಸಾಮಾನ್ಯ. ಆದರೂ ಬರಹಗಾರರು ಇದನ್ನು ವ್ಯಾಪಕವಾಗಿ ತೆರೆದಿಟ್ಟಿದ್ದರಿಂದ ಅವರಲ್ಲಿಯೇ ಇದು ಹೆಚ್ಚು ಪ್ರಸಿದ್ಧ.
ವಿಫಲತೆಯ ಭಯ, ಯಶಸ್ಸು ಸಿಗುವುದೋ ಇಲ್ಲವೋ ಎಂಬ ಅನುಮಾನ, ಅತಿಯಾದ ಪರಿಪೂರ್ಣತೆಯತ್ತ ದೃಷ್ಟಿ–ಇವು ಸಾಮಾನ್ಯವಾಗಿ ಬರಹಗಾರನ ಗೋಡೆಯ ಬಲವಾದ ಇಟ್ಟಿಗೆಗಳು. ಕೆಲವೊಮ್ಮೆ ತಾನು ಆರಿಸಿಕೊಂಡ ವಸ್ತು ಎತ್ತ ಸಾಗಬೇಕು ಎಂಬ ಬಗ್ಗೆ ಅನಿಶ್ಚಿತತೆ, ಅಧ್ಯಯನದ ಕೊರತೆಗಳೂ ಜೊತೆಗೂಡಬಹುದು. ‘ನೂನ್ ಡೇ ಡೆವಿಲ್’ (ಮಧ್ಯಾಹ್ನದ ಭೂತ)ವನ್ನು ಬರದಂತೆ ತಡೆಯಲು ಪ್ರಸಿದ್ಧ ಸಾಹಿತಿಗಳು ಮಾಡುತ್ತಿದ್ದ ಪ್ರಯೋಗಗಳು ಸ್ವಾರಸ್ಯಕರ. ಹೆಮ್ಮಿಂಗ್‌ವೇ ‘ತಡೆಗೋಡೆ’ ಮಧ್ಯಾಹ್ನದ ವೇಳೆಗೆ ಬರುವುದನ್ನು ತಡೆಯಲು 20 ಪೆನ್ಸಿಲ್‌ಗಳನ್ನು ಮೊದಲು ಹರಿತ ಮಾಡಿಡುವುದನ್ನು ರೂಢಿಸಿಕೊಂಡಿದ್ದರಂತೆ. ಪ್ರತಿದಿನ ಬರೆಯುತ್ತಿದ್ದ ಪುಟದಲ್ಲಿ ಕೊನೆಯ ವಾಕ್ಯವನ್ನು ಅರ್ಧಕ್ಕೇ ನಿಲ್ಲಿಸುತ್ತಿದ್ದರಂತೆ. ಮರುದಿನ ಬರೆಯುವುದು ಸುಗಮವಾಗಲು! ವಿಲ್ಲಾ ಕ್ಯಾಥರ್ ಎಂಬ ಲೇಖಕಿ ಬೈಬಲ್‌ನಿಂದ ಒಂದು ಪ್ಯಾರಾ ಓದಿನ ನಂತರವೇ ಬರವಣಿಗೆ ಆರಂಭಿಸುತ್ತಿದ್ದರು.
ಬರಹಗಾರರ ತಡೆಗೋಡೆಯ ಮುಖ್ಯ ಲಕ್ಷಣವೆಂದರೆ ಅದರ ಹಠಾತ್ ದಾಳಿ. ಹಾಗಾಗಿಯೇ ಅದು ‘ಮಧ್ಯಾಹ್ನದ ಭೂತ’. ಅಂದರೆ ಲೇಖಕ ಬರೆಯಲು ಎಂದಿನಂತೆ ಕುಳಿತು ಆರಂಭಿಸಿದ ಒಂದೆರಡು ಗಂಟೆಗಳಲ್ಲಿ ಅದು ಎದ್ದು ನಿಲ್ಲುವುದು. ಕೆಲವು ಸಮಯದ ನಂತರ ತಾನು ಬೇರೆಯವರೊಂದಿಗೆ ಹಂಚಿಕೊಳ್ಳುವಂತಹದ್ದು ಏನನ್ನೂ ಬರೆದಿಲ್ಲ ಅಥವಾ ಒಂದು ಪದವನ್ನೂ ಬರೆಯಲು ಆಗುತ್ತಿಲ್ಲ ಎಂಬ ಸತ್ಯ ಅರಿವಿಗೆ ಬರುತ್ತದೆ. ಸಾಹಿತಿಗಳು ಇದರಿಂದ ಹೊರಬರಲು ಹಲವು ಉಪಾಯಗಳನ್ನು ಪ್ರಯೋಗಿಸಿ ನೋಡಿದ್ದಾರೆ. ಕೆಲವು ಕಪ್ ಕಾಫಿ, ಬೇರೆ ಸ್ಥಳಕ್ಕೆ ಹೋಗಿ ಕುಳಿತುಕೊಳ್ಳುವುದು, ಟೈಪ್ ಬದಲು ಬರೆಯುವುದು, ಮಧ್ಯೆ ವಿರಾಮ ತೆಗೆದುಕೊಂಡು ದಿನಪತ್ರಿಕೆ ಓದುವುದು, ತಿಂಡಿ ತಿನ್ನುವುದು, ವ್ಯಾಯಾಮ ಮಾಡುವುದು–ಹೀಗೆ ಇತ್ಯಾದಿ, ಇತ್ಯಾದಿ. ಇವುಗಳಲ್ಲಿ ಯಾವುದಾದರೂ ಸರಿಯಾಗಿ, ಬರೆಯಲು ಸಾಧ್ಯವಾದರೆ ಸರಿ; ಇಲ್ಲವೆಂದಾದರೆ ತನ್ನ ಸೃಷ್ಟಿಸುವ ಪ್ರತಿಭಾ ಪಾತ್ರೆ ಖಾಲಿ ಆಯಿತು ಎಂಬ ಆತಂಕ ಕಾಡಲು ಆರಂಭವಾಗುತ್ತದೆ. ಇನ್ನು ಕೆಲವರಂತೂ ಹತಾಶೆಯಲ್ಲಿ ನಿಸರ್ಗ ತಾಣಗಳಿಗೆ ಹೋಗಿ ಜೋರಾಗಿ ಅರಚಿಕೊಂಡದ್ದು ಅಧ್ಯಯನಗಳಲ್ಲಿ ದಾಖಲಾಗಿದೆ!
ಲೇಖಕರರ ತಡೆಗೋಡೆಯ ಬಗ್ಗೆ ಬರೆಯುವಾಗ ಫ್ರಾನ್ ಲಿಬೋವಿಟ್ಜ್ ಎಂಬ ಲೇಖಕಿಯ ಬಗ್ಗೆ ನೆನಪಿಸಿಕೊಳ್ಳಲೇಬೇಕು. 1980 ರ ಸುಮಾರಿಗೆ ‘ಮೆಟ್ರೊಪಾಲಿಟನ್ ಲೈಫ್’ ಮತ್ತು ‘ಸೋಷಿಯಲ್ ಸ್ಟಡೀಸ್’ ಎಂಬ ಎರಡು ಪುಸ್ತಕಗಳನ್ನು ಬರೆದರು. ಅವು ಜನಪ್ರಿಯವೂ ಆದವು. 1981ರ ನಂತರ ಹತ್ತು ವರ್ಷಗಳ ಕಾಲ ತಮಗೆ ಅನುಭವವಾದ ‘ತಲೆ ಖಾಲಿ’ ಭಾವನೆಯಿಂದ ಅವರು ಬರೆಯಲೇ ಇಲ್ಲ. ‘ಬರೆಯಲಿಲ್ಲ’ ಎಂಬುದಕ್ಕೇ ‘ಬರೆದರು’ ಎಂಬಕ್ಕಿಂತ ಹೆಚ್ಚು ಪ್ರಸಿದ್ಧಿ ಗಳಿಸಿದರು!
ಕುತೂಹಲಕಾರಿ ವಿಷಯವೆಂದರೆ ಲೇಖಕರಲ್ಲಿ ‘ಬರೆಯದಿರುವುದು’ ಬಹುವಾಗಿ ಗಮನಕ್ಕೆ ಬರುತ್ತದೆ; ಒತ್ತಡ ಹೆಚ್ಚಿಸುತ್ತದೆ; ಸವಾಲುಗಳನ್ನು ಎದುರಿಸುವಂತೆ ಮಾಡುತ್ತದೆ. ಏಕೆಂದರೆ ‘ಬರೆಯುವುದು’ ಅವರ ಸಹಜ ಸ್ಥಿತಿ ಎಂಬ ನಿರೀಕ್ಷೆ ಸಮಾಜದ್ದು. ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ಧ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು 25 ವರ್ಷಗಳ ದೀರ್ಘಕಾಲದ ಮೌನದ ನಂತರ ಮತ್ತೆ ಕವಿತೆಗಳನ್ನು ಬರೆದಾಗ ಅವರು ಆ ಕಾಲವನ್ನು ಕರೆದದ್ದು ‘ಚಿಂತನೆಯ ಕಾಲವೆಂದೇ’. ಅಂದರೆ ‘ತಡೆಗೋಡೆ’ ಯನ್ನೂ ಸಕಾರಾತ್ಮಕವಾಗಿ ಬಿರುಗಾಳಿ ಮುನ್ನದ ಸ್ತಬ್ಧತೆಯಾಗಿ ಗ್ರಹಿಸಲು ಸಾಧ್ಯವಿದೆ. ಅಂದರೆ ಸೃಜನಶೀಲತೆಯ ಮುನ್ನದ ಸ್ಫೂರ್ತಿಯ ಪ್ರಚಂಡ ಅಲೆಯೇಳುವ ಮೊದಲಿನ ಸ್ತಬ್ಧತೆ! ಹಾಗಾಗಿಯೇ ಕೆಲವು ಲೇಖಕರು ಈ ತಡೆಗೋಡೆಯನ್ನು ನಿರೀಕ್ಷಿಸುತ್ತಾರೆ; ಸ್ವಾಗತಿಸುತ್ತಾರೆ.
‘ಲೇಖಕರ ತಡೆಗೋಡೆ’ ಯನ್ನು ಒಡೆಯಲು ಹಲವು ಉಪಾಯಗಳಿವೆ. ಮಧ್ಯೆ ಮಧ್ಯೆ ವಿರಾಮ ದೇಹ-ಮನಸ್ಸುಗಳೆರಡಕ್ಕೂ ಅವಶ್ಯಕ. ಬರಹವನ್ನು ಬದಿಗಿರಿಸಿ ನಾವು ಸಂತೋಷಿಸುವ ಯಾವುದಾದರೊಂದು ಚಟುವಟಿಕೆಯಲ್ಲಿ ಆಗಾಗ ತೊಡಗಿಕೊಳ್ಳುವುದು, ನಾವೆಷ್ಟೇ ಒಂಟಿತನವನ್ನು ಆನಂದಿಸುವವರಾದರೂ, ಜನರೊಟ್ಟಿಗೆ ಬೆರೆಯುವಿಕೆ ಆರೋಗ್ಯಕರ. ಬದಲಿ ಕಲೆಯ ಆಸ್ವಾದನೆ ಹೊಸ ಒಳನೋಟ ಕೊಡಲು ಸಾಧ್ಯ. ಲೇಖಕನಾದರೆ ಸಂಗೀತ, ನೃತ್ಯ ಕಲಾವಿದೆಯಾದರೆ ಕಾದಂಬರಿ ಓದುವಿಕೆ–ಹೀಗೆ ಇದು ನಡೆಯಬೇಕು. ಪೂರ್ತಿ ಪುಸ್ತಕ ಮುಗಿಸುವ ಬಗ್ಗೆ ಚಿಂತಿಸುವ ಬದಲು, ಒಂದು ಪದ, ಒಂದು ವಾಕ್ಯ ಬರೆಯಲು ಪ್ರಯತ್ನಿಸುವುದು. ಸ್ವವಿಮರ್ಶೆ ಮಾಡಿಕೊಳ್ಳುವುದನ್ನು ಬದಿಗಿಟ್ಟುಬಿಡುವುದೇ ಸರಿ. ಪ್ರತಿ ಬಾರಿಯೂ ಬರಹ ಸರಿಯಾಗಿಯೇ ಇರಬೇಕು, ಪರಿಪೂರ್ಣವಾಗಿಯೇ ಇರಬೇಕು, ಸ್ವಾರಸ್ಯಕರವಾಗಿಯೇ ಇರಬೇಕು ಎಂಬುದು ಕಾನೂನಲ್ಲವಷ್ಟೆ!
ಈಗ ಚ್ಯಾಟ್ ಜಿಪಿಟಿ ಕಾಲ. ಮೇಲೆ ಹೇಳಿದ ಪರಿಹಾರಗಳೆಲ್ಲ ಬೇಕಾಗಿಲ್ಲ. ಚ್ಯಾಟ್ ಜಿಪಿಟಿ ಈ ತಡೆಗೋಡೆಯನ್ನು ಒಡೆಯಲು ಬಹು ಸಹಾಯಕವಂತೆ! ಆದರೆ, ತೆರೆಯ ಮೇಲೆ ಮೂಡುವ ಬರಹದ ಲೇಖಕರು ಯಾರು ಗೊತ್ತಲ್ಲ?! ಆದರೂ ವಿವೇಚನೆಯುಳ್ಳವರಿಗೆ ‘ಸ್ಟಾರ್ಟಿಂಗ್ ಟ್ರಬಲ್ ‘ ನಿವಾರಿಸಲು, ಒಂದು ಪದದಿಂದ ಹಠಾತ್ ಅಂಥ ಸ್ಫೂರ್ತಿ ಪಡೆಯುವ ಪ್ರತಿಭಾವಂತರಿಗೆ ಅದು ಸಹಾಯ ಮಾಡಬಹುದು ಅನ್ನೋಣ. ಉಳಿದವರಿಗೆ ಅದು ತಡೆಗೋಡೆಯನ್ನು ಮತ್ತೂ ದೊಡ್ಡದಾಗಿಸಿ ತಾನೇ ಬರಹಗಾರ ಆಗಿ ಕುಳಿತುಬಿಟ್ಟರೆ?! ಶಾಶ್ವತವಾಗಿ ಬರೆಯದಿರುವ ಹಾಗೆ ಮಾಡಿಬಿಟ್ಟರೆ?!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.