ಬೆಂಗಳೂರು: 1980ರ ದಶಕದಲ್ಲಿ ದಲಿತ ಸಾಹಿತ್ಯದ ಸ್ವೀಕೃತಿ ಉತ್ತಮ ರೀತಿಯಲ್ಲಿ ಆಯಿತು. 2000ದ ನಂತರ ಪರಿಸ್ಥಿತಿ ತುಸು ಕಷ್ಟವೆನಿಸತೊಡಗಿತು ಎಂದು ಕಾದಂಬರಿಗಾರ್ತಿ, ಕವಯಿತ್ರಿ ಹಾಗೂ
ಸ್ವಯಂ ನಿವೃತ್ತಿ ಪಡೆದ ಐಎಎಸ್ ಅಧಿ ಕಾರಿ ಪಿ. ಶಿವಕಾಮಿ ಪ್ರತಿಪಾದಿಸಿದರು.
ಬೆಂಗಳೂರು ಸಾಹಿತ್ಯ ಉತ್ಸವದ ಮೊದಲ ದಿನವಾದ ಶನಿವಾರ ನಡೆದ ‘ಓಯಿಂಗ್ ದಿ ನರೇಟಿವ್: ದಲಿತ್ ರೈಟಿಂಗ್ ಇನ್ ಫೋಕಸ್’ (ದಲಿತ ಕೇಂದ್ರಿತ ಬರಹದಲ್ಲಿ ಕಥಾ ನಿರೂಪಣೆಯ ಕಾಣ್ಕೆ) ಎಂಬ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪೆರುಮಾಳ್ ಮುರುಗನ್, ಜಯರಾಮನ್ ಅವರಂತಹ ತಮಿಳು ದಲಿತ ಲೇಖಕರನ್ನು ಮೊದಮೊದಲು ಕೆಟ್ಟ ಧೋರಣೆಯಿಂದ ನೋಡಿದ್ದರು. ಕಾಲಕ್ರಮೇಣ ದಲಿತೇತರರ ಬರಹಗಳ ಮೇಲೂ ಅವರ ಸಾಹಿತ್ಯ ಪರಿಣಾಮ ಬೀರಿತು. ಇದರಿಂದ ನಿಧಾನವಾಗಿ ಧೋರಣೆ ಬದಲಾಯಿತಷ್ಟೆ. ಈಗಲೂ ಬೇರೆ ಜಾತಿಯವರಲ್ಲಿ ದಲಿತ ಬರಹಗಳ ಸ್ವೀಕೃತಿ ಕಷ್ಟವೇ ಎಂಬ ಸ್ಥಿತಿ ಇದೆ’ ಎಂದರು.
‘ನೂರಕ್ಕೂ ಹೆಚ್ಚು ದಲಿತರು ತಮಿಳಿನಲ್ಲಿ ಬರಹಗಳ ಮೂಲಕ ಹೆಚ್ಚಿನದನ್ನು ಸಾಧಿಸಲು ಸಾಧ್ಯವಾಗಿದೆ. ಜಾತಿ ಸೂಕ್ಷ್ಮದ ಇಂತಹ ಬರಹಗಳು ದಲಿತೇತರರಿಗೆ ನಾಟುವುದು ಕಷ್ಟ. ಬರಹವೆಂದರೆ ಬರೀ ಕಟ್ಟುವಿಕೆಯ ಸೌಂದರ್ಯ ಕುರಿತದ್ದಲ್ಲ, ಅದು ನಮ್ಮ ಬದುಕನ್ನು ಸುಧಾರಿಸುವಂತೆ ಇರಬೇಕು. ತಮಿಳಿನ ಎಷ್ಟೋ ಹಳ್ಳಿಗಳ ದಲಿತ ಮಹಿಳೆಯರಲ್ಲಿ ಈಗಲೂ ಒಂದು ಗ್ರಾಂ ಚಿನ್ನ ಕೂಡ ಇಲ್ಲ’ ಎಂದು ವಸ್ತುಸ್ಥಿತಿಯ ಮೇಲೆ ಬೆಳಕು ಚೆಲ್ಲಿದರು.
ದಲಿತ ಸಾಹಿತ್ಯದ ಅನುವಾದದ ಮೂಲಕ ಹೆಸರಾಗಿರುವ ವಸಂತ ಸೂರ್ಯ, ಕೆಲವು ಪ್ರಮುಖ ಬರಹಗಳು, ಕಾವ್ಯಗಳ ಉದಾಹರಣೆ ನೀಡುತ್ತಾ ಮಾತನಾಡಿದರು. ಕಳೆದ ವರ್ಷ ದೆಹಲಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ ವಿಷಯದಿಂದ ಕೈಬಿಟ್ಟ ದಲಿತ ಬರಹವೊಂದರ ಸಾರಾಂಶವೊಂದನ್ನು ನೆನಪಿಸಿಕೊಂಡರು. 1968ರಲ್ಲಿ 23 ಮಕ್ಕಳನ್ನೂ ಸೇರಿದಂತೆ 56 ಮಂದಿಯನ್ನು ಗುಡಿಸಲಿನಲ್ಲಿ ಬಂಧಿಸಿ ಕೊಳ್ಳಿಇಟ್ಟ ಪ್ರಸಂಗವೊಂದು ದಲಿತ ಸಾಹಿತ್ಯದ ಭಾಗವಾಗಿರುವುದನ್ನು ಭಾವುಕರಾಗಿ ವಿವರಿಸಿದರು.
‘ಸತ್ಯವೇವ ಜಯತೆ’ ಎನ್ನುವುದು ತಮಿಳಿನ ಪ್ರಮುಖ ದಲಿತ ಸಾಹಿತಿಗಳ ನರನಾಡಿ, ಬೆನ್ನುಹುರಿಯಲ್ಲೂ ಮಿಳಿತವಾಗಿದೆ ಎಂದರು.
ಮಿನಿ ಕೃಷ್ಣನ್ ವಿಚಾರ ಮಂಥನದ ನಿರ್ವಹಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.