ADVERTISEMENT

ಅನನ್ಯ ‘ನುಡಿ ನಿರ್ಮಾಪಕ’ನ ಕಥನ

ವಿಮರ್ಶೆ

ಬಿ.ಜನಾರ್ದನ ಭಟ್ಟ
Published 26 ಮಾರ್ಚ್ 2016, 19:30 IST
Last Updated 26 ಮಾರ್ಚ್ 2016, 19:30 IST
ಅನನ್ಯ ‘ನುಡಿ ನಿರ್ಮಾಪಕ’ನ ಕಥನ
ಅನನ್ಯ ‘ನುಡಿ ನಿರ್ಮಾಪಕ’ನ ಕಥನ   

ಕನ್ನಡದ ಕಾರಣ ಪುರುಷ
ರಾ. ಹ. ದೇಶಪಾಂಡೆ
ಲೇ: ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ
ಪ್ರ: ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ

ಬ್ರಿಟಿಷರ ಆಧಿಪತ್ಯದ ಮುಂಬಯಿ ಪ್ರಾಂತ್ಯಕ್ಕೆ ಸೇರಿದ್ದ ಮುಂಬಯಿ ಕರ್ನಾಟಕದಲ್ಲಿ ಕನ್ನಡಕ್ಕೆ ಒಂದು ನೆಲೆ ಕಲ್ಪಿಸಿಕೊಡಲು ತಮ್ಮ ಬದುಕನ್ನು ಮುಡಿಪಾಗಿಟ್ಟ ರಾ.ಹ. ದೇಶಪಾಂಡೆ (ರಾಮಚಂದ್ರ ಹಣಮಂತ ದೇಶಪಾಂಡೆ, 1861 – 1931) ಅವರ ಕುರಿತಾದ ಒಂದು ಅಪೂರ್ವ ಕೃತಿಯನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಪ್ರಕಟಿಸಿದೆ.

ಕನ್ನಡಕ್ಕೆ ನೆಲೆಯೇ ಇಲ್ಲವೆಂಬಂತಿದ್ದ ಪ್ರದೇಶದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಮುಖ್ಯವಾಗಿ ಆತ್ಮಾಭಿಮಾನವನ್ನು ಎತ್ತಿಹಿಡಿದ ರಾ.ಹ.ದೇ. ಅವರ ಜೀವನ–ಸಾಧನೆಗಳನ್ನು ಅರಿಯುವುದರಿಂದ ಕನ್ನಡದ ಮುಂದಿನ ಸವಾಲುಗಳನ್ನು ಎದುರಿಸಲು ಕನ್ನಡಿಗರಿಗೆ ಸ್ಫೂರ್ತಿ ದೊರಕುವುದರಲ್ಲಿ ಸಂಶಯವಿಲ್ಲ.

‘ಸಿರಿಗನ್ನಡಂ ಗೆಲ್ಗೆ’ ಎನ್ನುವ ಧ್ಯೇಯವಾಕ್ಯದ ಸೃಷ್ಟಿಕರ್ತರು ದೇಶಪಾಂಡೆ ಅವರೇ. ‘ಧಾರವಾಡದ ವಿದ್ಯಾವರ್ಧಕ ಸಂಘ’ ಮತ್ತು ‘ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನ’ಗಳು ಅವರ ಎರಡು ಮಹತ್ವದ ಕೊಡುಗೆಗಳು ಎಂದು ಎಂ.ಎಂ. ಕಲಬುರ್ಗಿ ಅವರು ಕೃತಿಯ ಮುನ್ನುಡಿಯಲ್ಲಿ ಗುರುತಿಸಿದ್ದಾರೆ.

ಕಲಬುರ್ಗಿಯವರು ಹೇಳುವಂತೆ: ‘ಧಾರವಾಡ ವಿದ್ಯಾವರ್ಧಕ ಸಂಘದ ಮುಂದುವರಿಕೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳದ ಮುಂದುವರಿಕೆ ಇಂದಿನ ಕನ್ನಡ ಸಾಹಿತ್ಯ ಸಮ್ಮೇಳನಗಳು’.

ದೇಶಪಾಂಡೆಯವರು ಮುಂಬಯಿ ಸರಕಾರದ ಮೆಟ್ರಿಕ್ಯುಲೇಷನ್ ಪಾಸ್ ಮಾಡಿದ ನಂತರ ಅವರಿಗೆ ಹಲವು ವಿದ್ಯಾರ್ಥಿ ವೇತನಗಳು ದೊರೆತು ಪುಣೆಯಲ್ಲಿ ಕಲಿತು ಬಿ.ಎ. ಪದವಿ ಪಡೆದರು. (ಪುಣೆಯ ವಿದ್ಯಾರ್ಥಿ ದೆಸೆಯಿಂದ ವೃದ್ಧಾಪ್ಯದವರೆಗೆ ೪೫ ವರ್ಷಗಳ ಕಾಲ ಬರೆದ ದಿನಚರಿಯನ್ನು ಆಧಾರವಾಗಿಟ್ಟುಕೊಂಡು ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಈ ಕೃತಿಯನ್ನು ರಚಿಸಿದ್ದಾರೆ).

ಇದಾದ ನಂತರ ಎಂ.ಎ. ಪದವಿಯನ್ನು ಪಡೆದ ಮೊದಲನೆಯ ಕನ್ನಡಿಗರೆಂಬ ಹೆಮ್ಮೆಗೆ ಪಾತ್ರರಾದ (1884, ಮುಂಬಯಿ ವಿಶ್ವವಿದ್ಯಾಲಯ)  ಅವರನ್ನು ಕನ್ನಡ ಕೈಂಕರ್ಯಕ್ಕೆ ಪ್ರೇರೇಪಿಸಿ, ಅಧ್ಯಾಪಕರಾಗುವಂತೆ ಮಾಡಿದ್ದು ಧಾರವಾಡದ ಕನ್ನಡಾಭಿಮಾನಿ ಆಂಗ್ಲ ವಿದ್ಯಾಧಿಕಾರಿ ರಸೆಲ್. ಎಲ್.ಎಲ್.ಬಿ. ಮಾಡಿ ವಕೀಲರಾಗಬೇಕೆಂದಿದ್ದ ರಾ.ಹ.ದೇ. ಅವರಿಗೆ, ‘ಪದವೀಧರರಾಗಿ ಸಮಾಜದಲ್ಲಿ ಮುಂದೆ ಬರುತ್ತಿರುವ ತರುಣರು ದೇಶದ ಪ್ರಗತಿಗಾಗಿ ದುಡಿಯಬೇಕಾದುದು ತಮ್ಮ ಜವಾಬ್ದಾರಿ ಎಂದು ತಿಳಿಯಬೇಕು’ ಎನ್ನುವುದು ರಸೆಲ್ ಸಾಹೇಬರ ಹಿತವಚನವಾಗಿತ್ತು.

ಅದನ್ನು ಪಾಲಿಸಿದ ದೇಶಪಾಂಡೆ ಅವರು ಬೆಳಗಾವಿ ಸರದಾರ ಹೈಸ್ಕೂಲಿನಲ್ಲಿ ಸಹಾಯಕ ಹೆಡ್ ಮಾಸ್ಟರ್ ಆಗಿ ಶಿಕ್ಷಣ ಇಲಾಖೆಗೆ ಸೇರಿದರು. ಮರಾಠಿಯಿಂದ ಕನ್ನಡದ ಮೇಲಾಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸುತ್ತ ಬಂದ ಅವರಿಗೆ ಬಡ್ತಿಯನ್ನು ನೀಡದೆ ಊರಿಂದ ಊರಿಗೆ 20 ವರ್ಷಗಳಲ್ಲಿ 21 ಸಲ ವರ್ಗಾಯಿಸಲಾಯಿತು. ಇದರಿಂದ ಅವರೇನೂ ಕುಗ್ಗಲಿಲ್ಲ.

1890ರಲ್ಲಿ ಧಾರವಾಡದ ‘ಕರ್ನಾಟಕ ವಿದ್ಯಾವರ್ಧಕ ಸಂಘ’, ಅದರ ನಿಯತಕಾಲಿಕ ಪತ್ರಿಕೆ ‘ವಾಗ್ಭೂಷಣ’ ಇವುಗಳನ್ನು ಪ್ರಾರಂಭಿಸಲು ದೇಶಪಾಂಡೆ ಕಾರಣ ಪುರುಷರಾದರು. ಸಂಘದ ಮೂಲಕ ಪುಸ್ತಕಗಳ ಪ್ರಕಟಣೆಯನ್ನು ಮಾಡಿದರು. 1907ರಲ್ಲಿ ಸಂಘದ ಆಶ್ರಯದಲ್ಲಿ ಮೊದಲನೆಯ ಗ್ರಂಥಕರ್ತರ ಸಮ್ಮೇಳನವನ್ನು ಏರ್ಪಡಿಸಿದರು.

ಎರಡು ಸಮ್ಮೇಳನಗಳು ಧಾರವಾಡದಲ್ಲಿ ನಡೆದ ನಂತರ ಮೂರನೆಯ ಸಮ್ಮೇಳನವು ಬೆಂಗಳೂರಿನಲ್ಲಿ ನಡೆಯಬೇಕೆಂಬ ಅವರ ಇರಾದೆಯಂತೆ ನಡೆದ ಸಮ್ಮೇಳನವೇ ಮೊದಲನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪವನ್ನು ಪಡೆಯಿತು. ಅವರ ಸಲಹೆಯಂತೆಯೇ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಸ್ಥಾಪನೆಯ ನಿರ್ಣಯ ಅಂಗೀಕೃತವಾಯಿತು. ದೇಶಪಾಂಡೆ ಅವರು ‘ಸಮಸ್ತ ಕರ್ನಾಟಕ’ವನ್ನು (ಅದರ ಏಕೀಕರಣವನ್ನು ಮತ್ತು ಕನ್ನಡ ಭಾಷಾಭಿವೃದ್ಧಿಯನ್ನು) ತಮ್ಮ ದೃಷ್ಟಿಕಕ್ಷೆಯಲ್ಲಿ ಇರಿಸಿಕೊಂಡಿದ್ದರೆನ್ನುವುದು ಮುಖ್ಯವಾಗಿದೆ.

ದೇಶಪಾಂಡೆ ಅವರ ದಿನಚರಿಯ ಪುಟಗಳು, ಅವರ ಕೃತಿಗಳ ಸಮೀಕ್ಷೆ, ಅವರಿಗೆ ಸಂಬಂಧಿಸಿದ ದಾಖಲೆಗಳ ಪ್ರತಿಗಳು, ಚಿತ್ರ ಸಂಪುಟ ಇವುಗಳಿಂದ ಈ ಕೃತಿ ಒಂದು ವಿಶಿಷ್ಟ ಆಕರ ಕೃತಿಯಾಗಿ ಮೂಡಿಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.