ಸರಹಪಾದ
ಲೇ: ಎಸ್. ನಟರಾಜ ಬೂದಾಳು
ಪ್ರ: ಗೋಧೂಳಿ ಪ್ರಕಾಶನ, ನಂ. 35, 5ನೇ ‘ಬಿ’ ಅಡ್ಡರಸ್ತೆ, ಸಿಂಡಿಕೇಟ್ ಬ್ಯಾಂಕ್ ಬಡಾವಣೆ, ತುಂಗಾನಗರ, ಬೆಂಗಳೂರು– 91
*
ಬೆಕ್ಕೊಂದು ಹೊಟ್ಟೆ ಕೆಟ್ಟರೆ ವೈದ್ಯರನ್ನೋ ಜ್ಯೋತಿಷಿಯನ್ನೋ ಹುಡುಕಿಹೊರಡದು. ತನ್ನ ಸದ್ಯದ ಸ್ಥಿತಿಗೆ ಔಷಧವಾಗಬಲ್ಲ ಹುಲ್ಲನ್ನು ಹುಡುಕತೊಡಗುತ್ತದೆ. ಯಾರ ನಿರ್ದೇಶನಕ್ಕೂ ಕಾಯದೆ ಆ ಹುಲ್ಲನ್ನು ತಾನೇ ಹುಡುಕಿ ತಿಂದು ಹಗುರಾಗುತ್ತದೆ.
ಹುಲ್ಲಿನ ಅಗತ್ಯ ತೀರಿದ ಮೇಲೆ ಅದನ್ನೇ ಧ್ಯಾನಿಸುತ್ತಾ ಕೂರದೆ, ಮತ್ತೆಲ್ಲಿಗೆ ಹೋಗಬೇಕೋ ಅಲ್ಲಿಗೆ ದಾಟುತ್ತದೆ. ಏನನ್ನು ಯಾವಾಗ ಆಹ್ವಾನಿಸಿಕೊಳ್ಳಬೇಕೋ ಆಗ ಆಹ್ವಾನಿಸಿ, ಬಿಡಬೇಕಾದಾಗ ವಿಸರ್ಜಿಸಿ ಮುಕ್ತವಾಗುವ ಈ ನಡೆ ಬೆಕ್ಕಿಗಷ್ಟೇ ಸೀಮಿತವಲ್ಲ.
ತನ್ನನ್ನು ಕಾದುಕೊಳ್ಳುವ ಹೊಣೆ ತನ್ನದೆಂಬ ಈ ನಿಸರ್ಗವಿವೇಕ ಜೀವಜಗತ್ತಿನ ಸಹಜನಡೆ. ಚಲನಶೀಲವಾದ ಜಗತ್ತಿನ ಈ ಸಹಜಲಯದಲ್ಲಿ ಪರಿಹಾರವಾದುದು ಸಾಪೇಕ್ಷ ಮಹತ್ವದಿಂದಾಚೆಗೆ ಪರಮೋಚ್ಛ ಸಂಕೇತವಾಗದು. ಯಾವ ಸಂರಚನೆಯೂ ಮನೋಕೋಶವಾಗಿ ಉಳಿಯದು.
ಭಾರತದ ಬದುಕಿನ ನಾಡಿಮಿಡಿತದ ಭಾಗವೇ ಆಗಿಹೋಗಿರುವ ಸಿದ್ಧಪಂಥದಲ್ಲೂ ಹೆಚ್ಚೂ ಕಡಿಮೆ ಈ ಮಾದರಿಯ ಜೀವಸಹಜವಾದ ಲೋಕನಡೆಯಿದೆ. ಅಲ್ಲಿ ಬೇರೆ ಯಾವುದೋ, ಹೊರಗಿನಿಂದ ಬಂದವರು ಯಾರೋ ಬದುಕಿನ ದಾರಿಯನ್ನು ಸಿದ್ಧಗೊಳಿಸಿಕೊಡುತ್ತಾರೆಂಬ ನಂಬಿಕೆಯಿಲ್ಲ.
ಅಲ್ಲಿ ಬದುಕು ನಾವೇ ಸಿದ್ಧಪಡಿಸಿಕೊಳ್ಳಬೇಕಾದುದು. ದೇಹ, ಮನಸ್ಸಿನ ಸಾಧ್ಯತೆ, ದೋಷಗಳನ್ನು ಅರಿತು ಲೋಕದ ನಡೆಗೆ ಧಕ್ಕೆಯಾಗದಂತೆ ಅದನ್ನು ನಿಭಾಯಿಸುವುದನ್ನೂ ನಾವೇ ಸಾಧ್ಯವಾಗಿಸಿಕೊಳ್ಳಬೇಕು. ಬದುಕು ನಡೆಯಬೇಕಾದ ಮತ್ತು ನಡೆಯುತ್ತಲೇ ಅರಿಯಬೇಕಾದ ಯಾನ.
ಈ ಚಲನಶೀಲ ಜಗತ್ತಿಗೆ ಇದಿರಾಗಲು ಹೊರಗಿನಿಂದ ಏನನ್ನೂ ತುಂಬಿಕೊಳ್ಳಬೇಕಾಗಿಲ್ಲ, ಒಳಗಿರುವ ವಿವೇಕವು ಕಳೆದುಹೋಗದಂತೆ ಎಚ್ಚರವಹಿಸಬೇಕಷ್ಟೇ. ಇದು ಸಿದ್ಧಪಂಥಗಳು ಕಾದುಕೊಂಡ ಎಚ್ಚರ. ಈ ಎಚ್ಚರವನ್ನೇ ಧ್ಯಾನಿಸಿದ, ಜನದನಿಯಲ್ಲಿ ಬೆಚ್ಚಗೆ ಪ್ರವಹಿಸುತ್ತಲೇ ಬಂದ ಸಹಸ್ರಮಾನದ ಸಿದ್ಧನೊಬ್ಬನನ್ನು ಕನ್ನಡದ ಅಕ್ಷರ ಜಗತ್ತು ಇದೀಗ ಆಹ್ವಾನಿಸಿಕೊಳ್ಳುತ್ತಿದೆ.
ಗುರಿಹಿಡಿದ ಬಾಣದೊಂದಿಗೆ ಎಲ್ಲ ಮಿಥ್ಯಾವಾದಗಳನ್ನು ಕತ್ತರಿಸುತ್ತಾ ಲೋಕಬದುಕಿನ ದುಃಖವನ್ನು ಮನೋಕೋಶಗಳ ನಿರಸನದ ಸಹಜಯಾನದ ಮೂಲಕವೇ ದಾಟುವಂತೆ ಬೋಧಿಸಿದ ಬೌದ್ಧಸಿದ್ಧ ಸರಹಪಾದನನ್ನು ಕುರಿತ ನಟರಾಜ ಬೂದಾಳು ಅವರ ‘ಸರಹಪಾದ’ ಕನ್ನಡದಲ್ಲಿನ ಬೌದ್ಧಸಾಹಿತ್ಯಕ್ಕೊಂದು ವಿಶಿಷ್ಟ ಸೇರ್ಪಡೆಯಾಗಿ, ಜಗತ್ತನ್ನು ಇರುವಂತೆಯೇ ಎದುರಾಗುವ ಅಪರೂಪದ ಪಾಠದೊಂದಿಗೆ ಹೀಗೆ ಬರುತ್ತಿದೆ.
ಸಿದ್ಧನಾಗಿಲ್ಲದಿರಲು ಸಿದ್ಧನಾಗು
ಅಭದ್ರತೆಯಲ್ಲಿ ಭದ್ರವಾಗಿರು
ನಿನ್ನ ಮನವ ಅಲಂಕರಿಸದೆ ಎದುರಾಗು
ಏನನ್ನೂ ಹೊತ್ತು ತರಬೇಡ, ನಿನ್ನನಂತೂ ಬೇಡವೇ ಬೇಡ
ನಿನ್ನೆಲ್ಲ ಯೋಚನೆಗಳ ಕೆಳಗಿಟ್ಟು ನೀನಿರುವಂತೆ ಬಾ
ಶಮಣಧಾರೆಯೇ ಭಾರತದ ಧಾರ್ಮಿಕ ಪರಂಪರೆಯ ಹಿರಿಯ ಪಾಲುದಾರ. ಲೋಕಾನುಭವಕ್ಕೆ ಆದ್ಯತೆಕೊಟ್ಟು ಧಾರ್ಮಿಕ ಏಕಶಿಲಾ ಮಾದರಿಗಳನ್ನು ವಿರೋಧಿಸಿದ ಈ ಧಾರೆಯಲ್ಲಿ ಹಲವು ಒಳಹರಿವುಗಳಿವೆ. ಅಂಥವುಗಳಲ್ಲಿ ಬೌದ್ಧಸಿದ್ಧರ ಪರಂಪರೆಯೂ ಒಂದು.
ಸರಹಪಾದ ಅಂತಹ ಸಹಜಯಾನಿ ಬೌದ್ಧಸಿದ್ಧ. ‘ಮೂಲಮಾಧ್ಯಮಕಕಾರಿಕೆ’ ಮೂಲಕ ಬುದ್ಧಗುರುವಿನ ತತ್ವವನ್ನು ಲೋಕಪರಿಚಿತಗೊಳಿಸಿದ ತಾರ್ಕಿಕ ನಾಗಾರ್ಜುನನ ಗುರು; ಚೌರಾಸಿ ಸಿದ್ಧರಲ್ಲಿ ಒಬ್ಬ. ‘ಸಾಮಾಜಿಕ ಬಂಡಾಯಗಾರ, ವೈಚಾರಿಕ ವಿದ್ರೋಹಿ’. ಈ ಜ್ಞಾನಮಾರ್ಗಿಗೆ ಸಹಜ ಇಲ್ಲವೆ ನೈಸರ್ಗಿಕ ಬದುಕೇ ಮುಖ್ಯ.
‘ವಿಷಯದಲ್ಲಿ ಕ್ರೀಡಿಸಲಾಗದವನಿಗೆಂತು ಬುದ್ಧತ್ವ ದೊರಕಬಲ್ಲದು?’ ಎಂದು ಪ್ರಶ್ನಿಸುವ ಮೂಲಕ ಸಂಸಾರ–ನಿರ್ವಾಣಗಳನ್ನು ಒಂದಾಗಿ ಕಂಡವನು. ಲೌಕಿಕದಲ್ಲಿ ತೊಡಗಿ ಬಾಳುತ್ತಲೇ ಅದನ್ನು ದಾಟುವುದನ್ನು ಶೋಧಿಸಿದವನು. ‘ಮನ ಮರಣಿಸಿದಲ್ಲಿ, ಗಾಳಿ ಸ್ತಬ್ಧವಾದಲ್ಲಿ ನೆಲೆನಿಂತು ವಿಶ್ರಮಿಸು’ವುದನ್ನು ಹೇಳಿ ಪ್ರವಾಹರೂಪಿ ಜಗತ್ತಿನಲ್ಲಿ ಸ್ಥಗಿತ ಅವಸ್ಥೆಯನ್ನೇ ಕಾಣದವನು.
ಎಲ್ಲದಕ್ಕೂ ಬೀಜವಾದ ‘ಮನವನ್ನು ತೆರವುಗೊಳಿಸಿ’ ಯಾವುದಕ್ಕೂ ಜೋತುಬೀಳದೆ ದಾಟಿಕೊಳ್ಳುವ ಮೂಲಕ ಲೋಕವನ್ನು ಅದಿರುವಂತೆಯೇ ಎದುರಾಗಬೇಕೆಂದವನು. ಸಹಜವಾದದ ಈ ಪ್ರಥಮಾಚಾರ್ಯ ಕನ್ನಡದ ಮಹಾತಾತ್ವಿಕ ಅಲ್ಲಮನ ಕೈಹಿಡಿದು ನಡೆದಂತಿದೆ. ಅಲ್ಲಮನಂತೆಯೇ ಸರಹನ ದೋಹೆಗಳು ದಂಗೆಕೋರ ಗುಣದೊಂದಿಗೆ ಅಪಾರ ಕರುಣಾಮೈತ್ರಿಯಲ್ಲಿ ಲೋಕಬದುಕಿನ ಸಹ್ಯತೆಗೆ ದುಡಿಯುತ್ತವೆ.
ಅಪಾರ ಕರುಣಾಮೈತ್ರಿಯಲ್ಲಿ ದುಃಖಾನುಸಂಧಾನವನ್ನೇ ಪ್ರಮುಖ ಉದ್ಯೋಗವಾಗಿಸಿಕೊಂಡ ಬುದ್ಧಗುರುವಿಗೆ ಜಗತ್ತು ಚಲನಶೀಲಪ್ರವಾಹ. ಇಲ್ಲಿ ಯಾವುದನ್ನಾದರೂ ಸ್ಥಿತವೆಂದು ಭಾವಿಸಿ ಅಂಟಿಕೂರುವುದರಲ್ಲೇ ದುಃಖದ ಕಾರಣವಿದೆ.
ಅದನ್ನು ದಾಟಿಕೊಳ್ಳುವುದರಲ್ಲೇ ಪಾರಾಗುವ ಉಪಾಯವೂ ಇದೆ. ಇದನ್ನು ಲೋಕಮುಖಕ್ಕೆ ತೋರಿದ ಬುದ್ಧಗುರುವಿನಂತೆ ಸರಹನೂ ಮನೋಕೋಶಗಳ ನಿರಸನವನ್ನೇ ಮತ್ತೆ ಮತ್ತೆ ಹೇಳಿದವನು. ಇಂದ್ರಿಯಸುಖವನ್ನು ನಿರಾಕರಿಸದೆ, ಜಗತ್ತು ಸಹಜಾನಂದದಿಂದ ತುಂಬಿರುವಾಗ ಕುಣಿ, ಹಾಡು, ವಿಲಾಸಮಾಡು ಆದರೆ ನೀನೇನಾದರೂ ವಾಸನಾಬಂಧಿಯಾದೆಯೋ ಭವಪಾಶಕ್ಕೆ ಬಿದ್ದೆಯೆಂದೇ ತಿಳಿ (ದೋಹಾಲಂಕಾರಪುಷ್ಪ ೧೩೯,ಪು.೩೯) ಎಂದು ಎಚ್ಚರಿಕೆ ಕೊಟ್ಟವನು.
ಈ ಎಚ್ಚರಿಕೆ ಇಂದ್ರಿಯ ಸುಖಕ್ಕಷ್ಟೇ ಅಲ್ಲ. ಅಲ್ಲಿ ತಾತ್ವಿಕತೆಯೂ ಬಂಧನವಾಗಕೂಡದು. ಅಲ್ಲಮ ಹೇಳುವ ಧ್ಯಾನಸೂತಕ, ಅನುಷ್ಠಾನ ಸೂತಕಗಳಂತೆ ಮೋಕ್ಷವೂ ಮೋಹವಾಗಕೂಡದು. ಅದಕ್ಕೆಂದೇ ಸರಹ ಯಾವುದನ್ನಾದರೂ ವಿಪರೀತ ಮೋಹಿಸುತ್ತಿದ್ದರೆ ಅದನ್ನೂ ಅಷ್ಟೇ ದೂರ ಒಗಾಯಿಸು ಎನ್ನುತ್ತಾನೆ. ಆದರೆ ಈ ನಿರಸನಕ್ಕೆ ಎರಡು ದಾರಿ. ಒಂದು ಹಿಮ್ಮುಖ ನಡೆಯಲ್ಲಿ ಎಲ್ಲವನ್ನೂ ಖಾಲಿಮಾಡಿಕೊಳ್ಳುವ ಬಗೆ.
ಇನ್ನೊಂದು ದೂರಯಾನದ ನಂತರ ಕುದುರೆಯೊಂದರ ರೀತಿ ಒಮ್ಮೆಗೇ ಎಲ್ಲವನ್ನೂ ಮೈಕೊಡವಿ ಖಾಲಿಮಾಡಿಕೊಳ್ಳುವುದು. ತಾಕ್ಷಣಿಕತೆಯಲ್ಲಿ ನಿರ್ಣಯಿತವಾಗುವ ವಿಸರ್ಜನೆಯ ಹಾದಿ. ಬುದ್ಧಮಾರ್ಗವನ್ನೇ ಸರಹನೂ ಮುಂದಿಟ್ಟಿದ್ದಾನೆ.
ಈ ನಿರಸನೋದ್ಯೋಗವು ದುಃಖದ ದಾಟುವಿಕೆಯೊಂದಿಗೆ ದೇಹದಲ್ಲೇ ಇರುವ ಬುದ್ಧನನ್ನು ಕಾಣಬಯಸುತ್ತದೆ. ಆ ಸಹಜಯಾನಕ್ಕೆ ಗುಡ್ಡೆಹಾಕಿಕೊಂಡ ಎಲ್ಲ ಸಂರಚನೆಗಳೂ ಖಾಲಿಯಾಗಬೇಕು. ಇದು ನಿರಸನ ತತ್ವದ ಮುಖ್ಯಭೂಮಿಕೆ. ಹಾಗಾಗಿ ಈ ಮನೋನಿರಸನವು ಕೇವಲ ಲೋಕೋತ್ತರಸತ್ಯವಲ್ಲ.
ಲೋಕಸುಖದ ಭ್ರಾಂತುಗಳಿಗೆ ಸೀಮಿತವೂ ಅಲ್ಲ. ಅದು ಸಾಮಾಜಿಕವೂ ಹೌದು. ಯಾಕೆಂದರೆ ಲೋಕದುಃಖದ ಕಾರಣಗಳಾದ ಸಾಮಾಜಿಕ ಸಂರಚನೆಗಳೂ ಕಳಚಿಕೊಳ್ಳಬೇಕಾದವುಗಳೇ ಆಗಿವೆ. ಹಾಗಾಗಿ ದೇಹವನ್ನೇ ಎಲ್ಲ ಸಾಧನೆಗಳ ಮಹಾಮಾಧ್ಯಮವಾಗಿ ಪ್ರತಿಪಾದಿಸುವ ಸಾಧಕ ಪಂಥಗಳ ಬಂಡಾಯವು ಈ ಸಾಮಾಜಿಕ ರಚನೆಗಳ ನಿರಸನದಿಂದಲೇ ತೊಡಗುತ್ತದೆ. ಅವುಗಳಲ್ಲಿ ಬಹಳ ಮುಖ್ಯವಾದುದು ಜಾತಿ.
ಅಂದರೆ ಹುಟ್ಟನ್ನಾಧರಿಸಿದ ಸಾಮಾಜಿಕತೆಯು ದೇಹಕ್ಕೆ ಆರೋಪಿಸುವ ಶುದ್ಧಾಶುದ್ಧತೆ. ಗುರುಪಂಥಗಳ ದೀಕ್ಷೆ ಮೊದಲಾದ ಸಾಂಕೇತಿಕ ಆಚರಣೆಗಳಲ್ಲಿ ಇದರ ದಾಟುವಿಕೆಯೇ ಇದೆ. ಆದರೆ ನಮ್ಮ ಸಾಂಸ್ಕೃತಿಕಚರಿತ್ರೆಯ ಅಳಿಸಲಾಗದ ಈ ರೋಗದಿಂದ ಸಮೂಹದ ಪಾರಾಗುವಿಕೆ ಅಷ್ಟು ಸುಲಭವಲ್ಲ.
ಇದನ್ನು ಸಾಧಿಸಲೆಂದೇ ಸಾಧನಾಪಂಥಗಳು ಕರ್ಮಸಿದ್ಧಾಂತದ ತಳಹದಿಯಲ್ಲಿ ನಿರೂಪಿತವಾದ ದೇಹವರ್ಗೀಕರಣ ಮತ್ತು ದೇಹನಶ್ವರತೆಯನ್ನು ನಿರಾಕರಿಸುತ್ತವೆ. ಹುಟ್ಟಿನ ಸೂತಕ ಕಳೆದು ದೇಹಸಾಮಾನ್ಯವೆಲ್ಲವನ್ನೂ ಅಸಮಾನ ತೀರ್ಥವಾಗಿಸುತ್ತವೆ. ಬಸವಣ್ಣನ ದೇಹದೇಗುಲದಂತೆ ಸಾಮಾಜಿಕ ಸಂರಚನೆಯನ್ನೇ ಕಳಚಿನೋಡುವ ಸರಹನ ಜ್ಞಾನಮಾರ್ಗವೂ ಅರಿವಿನ ನೆಲೆಯಾದ ದೇಹವನ್ನು,
ಇಲ್ಲೇ ಇದೆ ಸರಸ್ವತಿ, ಸೋಮನಾಥ ಇಲ್ಲೇ ಗಂಗಾಸಾಗರ
ಇಲ್ಲೇ ಇವೆ ಪ್ರಯಾಗ, ವಾರಾಣಸಿ ಇಲ್ಲೇ ಚಂದ್ರ–ದಿವಾಕರ
ಕೆಲವರು ತೀರ್ಥಕ್ಷೇತ್ರಗಳ ತಿರುಗಿ, ಪೀಠ ಉಪಪೀಠಗಳಲ್ಲಿ
ಮುಕ್ತಿಯ ಕಂಡೆವೆಂಬರು, ನಾನಂತೂ ಕನಸಿನಲ್ಲಿಯೂ ನಂಬಲ್ಲ.
ದೇಹಸಮಾನ ತೀರ್ಥವನ್ನೆಲ್ಲಿಯೂ ಕೇಳಲಿಲ್ಲ ನೋಡಲಿಲ್ಲ.
ಎಂದು ಎತ್ತರಕ್ಕೇರಿಸುತ್ತದೆ. ಅಷ್ಟೇ ಅಲ್ಲ, ಜಾತಿ ಸಾಮಾಜಿಕತೆಯನ್ನು ಮೀರಿದ ಈ ದೇಹಮೀಮಾಂಸೆಯನ್ನು ಮುಂದಿಟ್ಟು ಆ ಸಾಮಾಜಿಕ ರಚನೆಯ ಕೋಶದಲ್ಲೇ ಬಿದ್ದು ಅದಕ್ಕೇ ಬಂಧಿಯಾದವನನ್ನುದ್ದೇಶಿಸಿ,
ಅಯ್ಯೋ ಮೂಢ, ಚಾಂಡಾಲನೆಂದು ಗೊತ್ತಿಲ್ಲದೆ ಉಣ್ಣುವವರೆಗೂ ಇಲ್ಲದ ದೋಷ ಅಮೇಲೆ ಗೊತ್ತಾಗಿಬಿಟ್ಟರೆ ಬಂದು ಮೆತ್ತಿಕೊಂಡುಬಿಡುತ್ತದೆಯೇ?
ಎಂದು ಚುಚ್ಚಿ, ಜಾತಿಯೂ ಒಂದು ಅಸ್ವಾಭಾವಿಕವಾದ ಮನೋಕೋಶವೆಂಬುದನ್ನು ಬಿಚ್ಚಿಡುತ್ತದೆ. ಆದರೆ ಈ ದಾಟುವಿಕೆ ಅದ್ವೈತವನ್ನು ಹೇಳಿ ಚಾಂಡಾಲನೊಬ್ಬ ಎದುರುಗೊಂಡಾಗ ‘ಮುಟ್ಟೀಯ ಮುಟ್ಟೀಯ..’ ಎಂದು ಮುಡಚಿಟ್ಟು ಆಚರಿಸುವ ಒಣತಾತ್ವಿಕತೆಯ ವಂಚನೆಯಲ್ಲ.
ಅದು ಮನ ಅಸ್ತಮಿಸಿದಾಗ, ತನು ಬಂಧಮುಕ್ತವಾದಾಗ, ಸಹಜದಲ್ಲಿ ಸಮರಸವುಂಟಾದಾಗ ‘ಶೂದ್ರನೆಂಬುದೂ ಇಲ್ಲ ಬ್ರಾಹ್ಮಣನೆಂಬುದೂ ಇಲ್ಲ’ ಎಂಬಂತಾಗಬೇಕಾದ ಮುಕ್ತತೆ. ಸಿದ್ಧಪಂಥಗಳ ಮೌಲಿಕತೆ ಇರುವುದೇ ಇಲ್ಲಿ. ಅವು ಚಾಂಡಾಲನನ್ನು ಚಾಂಡಾಲತ್ವದಿಂದ, ಬ್ರಾಹ್ಮಣನನ್ನು ಬ್ರಾಹ್ಮಣತ್ವದಿಂದ ಏಕಕಾಲದಲ್ಲಿ ಬಿಡುಗಡೆಗೊಳಿಸಬಲ್ಲವು.
ಇದಕ್ಕಾಗಿ ಪ್ರಮಾಣಗಳನ್ನು ಮೀರಿ ಅನುಭವದಲ್ಲಿ ಸ್ವಯವಾಗುವ ದಾರಿ ಕಂಡುಕೊಳ್ಳಬೇಕಷ್ಟೇ. ಯಾಕೆಂದರೆ ಸರಹ ಹೇಳುವಂತೆ ಪ್ರಮಾಣ ಬೇಕೆಂಬ ಮೂಢನಿಗೆ ಸಿಗುವುದು ಶಾಸ್ತ್ರಾರ್ಥ.
ಅನುಭವಕ್ಕೆ ಬದ್ಧವಾದ ಶಮಣಧಾರೆಗಳು ಲೌಕಿಕವನ್ನು ನಿರಾಕರಿಸವು. ಅವು ‘ಮನೆಯಲ್ಲೇ ಇದ್ದು ಮಡದಿಯ ಜೊತೆ ರಮಿಸಿ, ವಾಸಿಸಿ ಮುಕ್ತನಾಗುವ’ ಸಹಜ ಸಾಧ್ಯತೆಯನ್ನೇ ಮುಂದಿಡುತ್ತವೆ. ನಿತ್ಯದ ಬದುಕನ್ನು ತಿರಸ್ಕರಿಸದ ಜ್ಞಾನವನ್ನು ಗೌರವಿಸುತ್ತವೆ.
‘ಪ್ರತ್ಯಕ್ಷವಾಗಿರುವುದ ಕಾಣಲು ಕಣ್ಣುಮುಚ್ಚಿ ಧ್ಯಾನಮಾಡಬೇಕಿಲ್ಲ’ ಎಂಬ ಅರಿವುಳ್ಳ ಸಿದ್ಧಪರಂಪರೆಗಳು ಲೌಕಿಕದ ನಿತ್ಯ ಬದುಕನ್ನು ಅಪಮಾನಿಸುವುದನ್ನು, ಅವಹೇಳನ ಮಾಡುವುದನ್ನೂ ಸಹಿಸವು. ಅಧಿಕಾರ ಕೇಂದ್ರಕ್ಕಿಂತ ದೂರವೇ ಉಳಿದು ಅಧಿಕಾರದ ಎಲ್ಲ ಮರೆಮೋಸಗಳನ್ನು ವಿರೋಧಿಸುವ ಅವು ಎಲ್ಲಾ ಬಗೆಯ ಮಿಥ್ಯಾವಾದಿ ಸಾಂಸ್ಥಿಕ ಧರ್ಮಗಳನ್ನೂ ಈಡಾಡುತ್ತವೆ.
ಅದರಲ್ಲೂ ಭೇದ ಮತ್ತು ಅಸಮಾನತೆಯನ್ನೇ ತನ್ನೊಡಲೊಳಗೆ ಬಚ್ಚಿಟ್ಟುಕೊಂಡು ಸಮೂಹವನ್ನು ಹೊರಗೆ ನಿಲ್ಲಿಸುವ ತಂತ್ರಗಾರಿಕೆಯಲ್ಲೇ ನಿರಂತರ ತೊಡಗಿಕೊಂಡುದೆಂಬ ಟೀಕೆಗೆ ಗುರಿಯಾದ ವೈದಿಕವಂತೂ ಸಿದ್ಧರ ಧಾಳಿಯ ನೇರ ಗುರಿಗಳಲ್ಲೊಂದು. ವ್ಯಕ್ತಿಯ ಬಿಡುಗಡೆಯನ್ನು ಸಮೂಹಕ್ಕೆ ವಿಸ್ತರಿಸಿ ನೋಡುವ ಬುದ್ಧಮಾರ್ಗಿಯಾದ ಸಹಜಯಾನಿ ಸರಹನಿಗೆ ಲೋಕವನ್ನು ದಿಕ್ಕು ತಪ್ಪಿಸುವ ಈ ಪೊಳ್ಳು ಆಚರಣೆಗಳ ಬಗೆಗೆ ಎಲ್ಲಿಲ್ಲದ ಸಿಟ್ಟು.
ಯಾಕೆಂದರೆ ಆಚರಣೆಗಳನ್ನೇ ಧರ್ಮವಾಗಿಸಿ ಸಮೂಹ ಬದುಕಿನ ಲೋಕಗ್ರಹಿಕೆಯನ್ನೇ ಭ್ರಷ್ಟಗೊಳಿಸಿ, ಸುಳ್ಳುಗಳನ್ನೇ ತಾತ್ವಿಕತೆಯಯ ಹೆಸರಲ್ಲಿ ಮುಂದಿಟ್ಟು ಸಮೂಹ ಒಪ್ಪಿಗೆಯನ್ನು ಉತ್ಪಾದಿಸುವ ಈ ಮತ ಧರ್ಮಗಳು ಏನನ್ನೂ ನೀಡದೆ ಸಮೂಹವನ್ನು ದಿಕ್ಕುತಪ್ಪಿಸುತ್ತವೆ ಎಂಬ ಕಾರಣಕ್ಕಾಗಿ ಸರಹನ ‘ದೋಹಾಲಂಕಾರಪುಷ್ಪ’ವು ಆಚರಣೆಗಳ ಅಪಹಾಸ್ಯದ ಜೊತೆಗೇ ಆರಂಭವಾಗಿದೆ.
ಈ ಸರದಿಯಲ್ಲಿ ಜಡ ವೈದಿಕಾಚರಣೆಗಳು ಸರಹನ ಕಟುಮಾತುಗಳ ಮೊದಲ ಗುರಿಯಾದರೂ, ಮಿಕ್ಕವುಗಳಿಗೇನೂ ವಿನಾಯಿತಿ ಸಿಕ್ಕಿಲ್ಲ. ಬ್ರಾಹ್ಮಣ್ಯವನ್ನು ವಿರೋಧಿಸಿ ಮತ್ತೆ ಅದೇ ದಾರಿಯಲ್ಲಿ ನಡೆದ ಯೋಗಾಚಾರ, ಶಿವಾಚಾರ, ಬೌದ್ಧವನ್ನೂ ಸೇರಿದ ಶಮಣಧಾರೆಗಳ ಕವಲುಗಳೂ ಅಪರಾಧಿ ಸ್ಥಾನದಲ್ಲಿ ನಿಂತು ಹೀಗೆ ವಿಚಾರಣೆಗೊಳಗಾಗಿವೆ.
ಬೆತ್ತಲಾಗುವುದರಿಂದ ಮುಕ್ತಿ ಸಿಗುವುದಾದರೆ
ನಾಯಿನರಿಗಳಿಗೂ ಸಿಗಬೇಕು
ಬೋಳುಮಂಡೆಯಿಂದ ಸಿದ್ಧಿಯೆಂದಾದರೆ
ಯುವತೀ ನಿತಂಬಕ್ಕೆ ಸಿಗಬೇಕು
ಪಿಂಛದಿಂದ ಮುಕ್ತಿ ಎಂದಾದರೆ ನವಿಲು ನರಿಗಳಿಗೆ ಸಿಗಬೇಕು
ಸಸ್ಯಹಾರದಿಂದ ಜ್ಞಾನ ಸಿಗುವುದಾದರೆ
ಆನೆ ಕುದುರೆಗಳಿಗೆ ಸಿಗಬೇಕು.
ಸರಹ ನುಡಿಯುತ್ತಾನೆ:
ಕ್ಷಪಣಕರ ಮೋಕ್ಷದ ದಾರಿ ನನಗೆ ಒಪ್ಪಿಗೆಯಾಗದು
ತತ್ವರಹಿತ ಸಾಧನೆಯಿಂದ ಕೇವಲಜ್ಞಾನ ದೊರಕದು
ಹೀಗೆ ಮತಾಚಾರಗಳನ್ನು ಲೇವಡಿ ಮಾಡುವ ಸರಹ ಸಾಧಕಪಂಥಗಳಲ್ಲಿ ಬಹುಜನಪ್ರಿಯವಾಗಿದ್ದ, ಉಸಿರನ್ನು ನಿಯಂತ್ರಿಸುವ ಕಸರತ್ತಾಗಿ ಇಂದು ಇಹ–ಪರಗಳೆರಡಕ್ಕೂ ಏಕೌಷಧವೆಂಬ ಬೃಹತ್ ಉದ್ಯಮವಾಗಿ ಬೆಳೆದುನಿಂತ ಯೋಗಾಚಾರವನ್ನೂ ‘ಮೂಗಿನ ಹೊಳ್ಳೆಗಳನ್ನು ಬಂಧಿಸುವ ಕಷ್ಟವೇಕೆ?’ ಎಂದು ಪ್ರಶ್ನಿಸಿ, ‘ಕಟ್ಟಾಜೋಗಿ ಮೂಗಿನ ತುದಿಯ ನೋಡುತ್ತಾ ಕೂರಬೇಡ, ಮೂಗಿನ ತುದಿಯಲ್ಲಿ ಏನಿದೆ? ಮೂಗಿನ ತುದಿ ಇದೆ’ ಎಂದು ಸರಹ ಗದರಿಸುತ್ತಾನೆ.
ಅಂದಮಾತ್ರಕ್ಕೆ ಆತನಿಗೆ ಮತಪಂಥಗಳ ಬಗೆಗೆ ದ್ವೇಷವಿಲ್ಲ. ಲೋಕವನ್ನು ದಿಕ್ಕುತಪ್ಪಿಸುವ ಬಗೆಗಿನ ಜೀವಕರುಣೆಯ ಕಾರಣದ ಕೋಪವಿದೆ. ಕಟ್ಟಾಜೋಗಿಯನ್ನು ಗದರಿಸುವಲ್ಲೂ ಆತನಲ್ಲಿ ಇಡಿಯಾಗಿ ಯೋಗಾಚಾರದ ನಿರಾಕರಣೆಯಿಲ್ಲ. ಮಹಾಮುದ್ರೆಯ ಮಹಾಸುಖವನ್ನು ಕಾಣದೆ ಸಣ್ಣಪುಟ್ಟ ಸಾಧನೆಯ ಮೈಮರೆವಿನಲ್ಲೇ ಕಳೆದುಹೋಗಬಾರದೆಂಬ ಎಚ್ಚರವೇ ಇದೆ.
ಸರಹ ಮತ್ತು ಅಲ್ಲಮ ಇಬ್ಬರೂ ಮತ್ತೆ ಮತ್ತೆ ಸುಮ್ಮನಿರುವುದನ್ನೇ ಪ್ರಸ್ತಾಪಿಸುತ್ತಾರೆ. ಶಬ್ದದೊಳಗಣ ನಿಶ್ಶಬ್ದವನ್ನು ಹುಡುಕುವ ಈ ಪರಿ ಪ್ರಾಣಿಗಳಂತೆ ಸುಮ್ಮನಿರುವುದಲ್ಲ. ಅದೊಂದು ಜ್ಞಾನಮಾರ್ಗ, ಮಹಾಮುದ್ರೆ, ಮಾತಿಗತೀತವಾದ ಮಹಾಸುಖ. ಬಯಲನ್ನು ಸ್ವಯವಾಗಿಸಿಕೊಂಡು ಅದನ್ನು ಕಾಪಾಡಿಕೊಳ್ಳುವ ಎಚ್ಚರದ ನಡೆ.
ನಿರಸನಗೊಂಡ ಮನಸ್ಸು ಎಲ್ಲ ಸಂರಚನೆಗಳಿಂದ ಮುಕ್ತವಾಗಿ, ‘ಮಹಾಸುಖದ ಆ ವಿಸ್ತಾರ ಭೂಮಿಕೆಯನ್ನು ಹೊಕ್ಕು ಅದರ ಸಹಜ ಸ್ವಭಾವವನರಿತು ವಿಸ್ತಾರಗೊಳ್ಳುತ್ತಾ, ಅಲ್ಲಿಂದ ಮುಂದೆ ಹೋದಂತೆ ತಾನೆಂಬುದೇ ಕರಗಿ ಹೋಗುವ ಅಭಾಷಿಕ ನಡೆ’. ಈ ಅಮನಸ್ಕಯೋಗದಲ್ಲಿ ಹೇಳಲೇನಿದೆ? ಭಾಷಿಕ ಸಂಕೇತಗಳಲ್ಲಿ ಕಟ್ಟಲಾಗದದು. ಅಮನಸ್ಕವೂ ಕೂಡಾ ಒಂದು ಸ್ಥಿತಿಯಲ್ಲವಾಗಿ ಅದೇ ಮತ್ತೊಂದು ಕುರುಹಾಗದು.
ಅದು ಸಂಕೇತವಾಗಿ ನಿಂತು ಬಿಡದಂತೆ, ‘ಅರಿವನಱದು ಸುಖವಾಯಿತ್ತೆಂದಡೆ ಆ ಅಱವಿಗೆ ಭಂಗ’ ಎಂಬ ಅಲ್ಲಮನ ಎಚ್ಚರಬೇಕು. ಯಾಕೆಂದರೆ ಅದು ಅನುಭವಿಸುವ ಪ್ರತ್ಯೇಕವಾದ ಮನವೇ ಇಲ್ಲದ ‘ತೋರಲಿಲ್ಲ, ಅಡಗಲಿಲ್ಲ’ದ ಗತಿಯಲ್ಲದೆ, ಸ್ಥಿತಿಯಲ್ಲ.
ತಾನು–ಇದಿರು ಎರಡೂ ಇಲ್ಲದಂತಾಗಿ ಮನಸ್ಸಿನಿಂದ ಏನೇನನ್ನು ಅಳಿಸಿದೆ ಎಂಬ ನೆನಪೂ ಉಳಿಯಬಾರದು. ಹಾಗೊಂದು ವೇಳೆ ಏನೇನನ್ನು ಅಳಿಸಿದೆ ಎಂಬುದು ಉಳಿದರೆ ಅದು ಶಬ್ದಮುಗ್ಧನಾಗುವ ಪ್ರಕ್ರಿಯೆ ಅಲ್ಲವಾಗುತ್ತದೆ.
ಅದಕ್ಕೆಂದೇ ‘ಕುಮಾರಿಗೆ ಸುರತಸುಖವ ಯಾರು ಬಣ್ಣಿಸಿ ಪೂರೈಸಬಲ್ಲರು?’ ಎಂಬ ಪ್ರಶ್ನೆಯಲ್ಲಿ ಸರಹನೂ, ‘ಅಱವು ಸಯವಾದ ಬಳಿಕ ಕೊಂಡಾಟಕ್ಕಿಂಬುಂಟೆ ಹೇಳಾ! ಶಬ್ದಕ್ಕೆ ತೆರಹಿಲ್ಲ’ ಎಂಬಂತೆ ಅಲ್ಲಮನೂ ಈ ಅಭಾಷಿಕತೆಯ ಕಾರಣ ಸೂಚಿಸಿ ಸುಮ್ಮನಾಗುತ್ತಾರೆ. ಇಬ್ಬರಲ್ಲೂ ಎಲ್ಲ ಮಿತಿಗಳನ್ನು ದಾಟುವ ಮತ್ತು ಅನುಭವ ಗೋಚರವಾದುದನ್ನು ಹೆಸರಿಟ್ಟು ಸೂಚಿಸಿದಾಕ್ಷಣ ಅದು ಮಿತಿಗೊಳಪಡುತ್ತದೆ ಎಂಬ ಸಂಕಟವಿದೆ.
ರೂಪದ ರಚನೆಯ ವ್ಯಸನಕ್ಕೆ ಬಿದ್ದ ಮನಸ್ಸು ಲೋಕಸಮಸ್ತವನ್ನೂ ಹಾಗೆಯೇ ಪರಿಭಾವಿಸಲು ತೊಡಗಿ, ಮಾತಿನಾಚೆಗಿದನ್ನು ಕಂಡುಕೊಳ್ಳಲು ಮಾತಿಗೂ ಮತ್ತು ಮೋಹದಿಂದ ಮುಕ್ತಗೊಳಿಸುವ ಧ್ಯಾನದ ಬದಲಿಗೆ ಧ್ಯಾನದ ಮೋಹಕ್ಕೂ ಜೋತುಬೀಳುವ ‘ಪ್ರಾಣಘಾತುಕ’ ವಿಪರೀತವಾಗುತ್ತದೆ ಎಂಬ ಭಯವಿದೆ.
ಯಾಕೆಂದರೆ ಇದು ತಾನು, ಇದಿರು, ತಾನು–ಇದಿರು ಎರಡೂ ಹೌದು ಹಾಗೂ ತಾನೂ–ಇದಿರು ಎರಡೂ ಅಲ್ಲ ಎಂಬ ಚತುಷ್ಕೋಟಿಯನ್ನು ಮೀರಿದ ಸುಮ್ಮನಿರುವಿಕೆ. ಅದು ಸುಮ್ಮನಿದ್ದೇನೆ ಎಂದುಕೊಳ್ಳದೇ ಸುಮ್ಮನಿರುವ ಪರಿ. ಹಾಗಾಗಿಯೇ ‘ದಾಟುವವರೆಗೆ ಅಕ್ಷರವ ಬಳಸು, ದಾಟಿದ ಮೇಲೆ ನಿರಕ್ಷರಿಯಾಗು’ ಎನ್ನುವ ಸರಹ ಹಾಗೂ ‘ಗುಹೇಶ್ವರನ ಶರಣರು ದೇಹವಿಲ್ಲದ ನಿರ್ದೇಹಿಗಳು’ ಎನ್ನುವ ಅಲ್ಲಮ ಇಬ್ಬರೂ ಈ ಬಗೆಗೆ ವಿಶೇಷ ಎಚ್ಚರ ವಹಿಸುತ್ತಾರೆ.
ಸಹಜವಾಗಿ ಮಕ್ಕಳಂತೆ ಇರುವುದನ್ನು ಬೋಧಿಸಿದ ಈ ಸಿದ್ಧನನ್ನು ನಟರಾಜ ಬೂದಾಳರು ಅಪಾರ ಲೋಕಾನುಕಂಪೆಯಿಂದ ಜನರ ನಡುವೆಯೇ ಬಂದ ಕನ್ನಡದ ನಿಜಜಂಗಮ ಅಲ್ಲಮನೊಂದಿಗೆ ಬೆಸೆಯುತ್ತಾ ಬೆಳೆಸಿಟ್ಟಿದ್ದಾರೆ. ಆಹ್ವಾನ–ವಿಸರ್ಜನ, ರೂಪನಿರಸನ, ನಿರಯೋನ್ವಯೋತ್ಪತ್ತಿ ವಿನಾಶವೇ ಮೊದಲಾದ ಮೀಮಾಂಸಾ ಪರಿಕಲ್ಪನೆಗಳ ಮೂಲಕ ಪ್ರಕ್ರಿಯಾಮೀಮಾಂಸೆಯ ನಿರೂಪಣೆಗೆ ಪೂರಕವಾದ ಮತ್ತಷ್ಟು ಪರಿಕರಗಳನ್ನೂ ಒದಗಿಸಿದ್ದಾರೆ.
ಕೃತಿಯ ಒಟ್ಟು ನಡೆಯಲ್ಲಿ ಅನೇಕ ಬಾರಿ ಹೇಳಿದ್ದನ್ನೇ ಹೇಳಿದ ಪುನರಾವರ್ತನೆ ಕಾಣಿಸುತ್ತದೆ. ಆದರೆ ಇದು ತಿಳಿವನ್ನು ಎರೆಯುವ, ಒಳಗೆರೆದು ಗಟ್ಟಿಗೊಳಿಸುವ ಶಮಣಧಾರೆಯ ಹಾಗೂ ಜಾನಪದದ ನಡೆಯೇ ಆಗಿರುವುದರಿಂದ ಅದನ್ನೊಂದು ಉದ್ದೇಶಿತ ಪುನರಾವರ್ತನೆಯಾಗಿಯೇ ಪರಿಭಾವಿಸಬಹುದು.
ಜಾತಿಶ್ರೇಷ್ಠತೆ, ಮತಶ್ರೇಷ್ಠತೆ, ಪುಸ್ತಕೀಯಜ್ಞಾನ, ಜ್ಞಾನದ ನಿಗೂಢತೆಯ ಅಂಬೋಣಗಳಿಗೆ ಕೆಂಡಾಮಂಡಲವಾಗುವ ಸರಹನಿಗೆ ತೆರೆದುಕೊಂಡೇ ಇರುವ ಈ ಲೋಕದಲ್ಲಿ ಗುಟ್ಟಿನಲ್ಲಿ ತೀವ್ರ ಜಟಾಪಟಿಯಲ್ಲಿ ಕಂಡುಕೊಳ್ಳುವುದು ಏನೂ ಕಾಣದು. ಹೂ ಅರಳಿ ನಿಂತ ಹಾಗೆ ತೆರೆದೇ ಇರುವ ಲೋಕವನ್ನು ಅನುಭವಿಸಿ ಕಾಣುವ ಸಹಜವಿವೇಕವಲ್ಲದೆ ಬಟ್ಟಬಯಲಾಗಿರುವಲ್ಲಿ ಗುಟ್ಟಾಗಿ ಉಸುರುವುದೇನಿದೆ ಎಂದೇ ಆತ ಪ್ರಶ್ನಿಸಿದವನು.
ಕನ್ನಡದ ಜೊತೆಗೆ ಎಂದೋ ಒಡನಾಡಬೇಕಾಗಿದ್ದ ಈ ದನಿಗಳು ಇಲ್ಲಿಯವರೆಗೆ ಅಪರಿಚಿತವಾಗಿಯೇ ಇದ್ದವು. ಈ ಬರಹದ ರಾಜಕಾರಣಕ್ಕೆ ಉತ್ತರಿಸುವುದಕ್ಕಾದರೂ, ಮಾತಿನ ನಡೆಯಲ್ಲಿರುವ ಇವನ್ನು ಅಕ್ಷರದ ಕಡಾಯಿಯಲ್ಲಿ ತುಂಬಿ ಕ್ಷಣಮಾತ್ರವಾದರೂ ಕಣ್ತುಂಬಿಕೊಳ್ಳಬೇಕಾಗಿದೆ. ನಟರಾಜ ಬೂದಾಳರು ಅದನ್ನೇ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.