ಸುತ್ತಲಿನ ಬದುಕೇ ಈ ಕತೆಗಾರನನ್ನು ಕಟ್ಟಿದೆ ಎನ್ನುವಂತೆ ಕತೆಗಳನ್ನು ಕಟ್ಟುವ ಅಮರೇಶ ನುಗಡೋಣಿಯವರ ನಾಲ್ಕನೆಯ ಸಂಕಲನ ‘ಒಡಲ ಹಂಗು’. ಇದಿರಾದ ಪ್ರಸಂಗಗಳನ್ನು ತಾತ್ವಿಕತೆಯ ಮೂಸೆಯಲ್ಲಿ ಒಮ್ಮೆ ಕರಗಿಸಿ, ಕಂಬಚ್ಚಿಗೆ ಹಾಕಿ ಎಳೆದಂತೆ ಕತೆಯ ಕಟ್ಟುವ ಕೌಶಲದ ಮಾದರಿಗಳಂತೆ ಇರುವ ಏಳು ಕತೆಗಳು ಇಲ್ಲಿ ಒಟ್ಟಾಗಿವೆ.
‘ನೆರಳ ಸೂರು’, ‘ದಾರಿಗಳು’, ‘ಪರಿಣಾಮಿ’, ‘ಬೆಳಕೂ ಅದೆ ಕತ್ತಲೆಯೂ ಅದೇ’, ‘ಒಡಲ ಹಂಗು’, ‘ನೆಲೆಗೆ ಈ ನಡಿಗೆ’, ‘ಮೈಲಿಗೆ ಮಾಸುವ ಸಮಯ’– ಈ ಕತೆಗಳು ಉತ್ತರ ಕರ್ನಾಟಕದ ಸ್ಥಳೀಯ ಜೀವನಮೀಮಾಂಸೆಯು ಇದಿರಿಸುತ್ತಿರುವ ಇಕ್ಕಟ್ಟುಗಳು ಮತ್ತು ಸದ್ಯವು ಒಡ್ಡುತ್ತಿರುವ ಬಿಕ್ಕಟ್ಟುಗಳು ಇಲ್ಲಿನ ಕತೆಗಳ ಕ್ಯಾನ್ವಾಸಿನ ಪ್ರಮುಖ ಭಾಗವನ್ನು ಆವರಿಸಿವೆ. ಇವೆಲ್ಲ ಕುಟುಂಬದ ಕತೆಗಳು. ವ್ಯಕ್ತಿ ಮತ್ತು ಸಮಷ್ಟಿಯ ಸಂಬಂಧದ ಪ್ರಥಮ ಎಳೆಯಾದ ಕುಟುಂಬವನ್ನು ಪ್ರಮುಖ ನೆಲೆಯಲ್ಲಿ ಪರಿಭಾವಿಸುವ ಮತ್ತು ಆ ಮೂಲಕ ಜೀವನ ಮೀಮಾಂಸೆಯೊಂದರ ಶೋಧವನ್ನು ನಡೆಸುವ ರೀತಿಯಲ್ಲಿ ಕತೆಗಳು ರೂಪಿಸಲ್ಪಟ್ಟಿವೆ. ಅವು ನಿರ್ವಹಿಸುತ್ತಿರುವ ತಾತ್ವಿಕತೆ ಮತ್ತು ಆಕರಗಳನ್ನು ಎಚ್ಚರದಿಂದ ಪರಿಭಾವಿಸಿದಾಗ ಕನ್ನಡದ ನಿಜ ಚಹರೆಗಳನ್ನು ಹೆಪ್ಪುಹಾಕಿ ಹದಗೊಳಿಸಿದಂತೆ ಕತೆಗಳು ಉಂಟಾಗಿವೆ.
ಹದ ಕಂಡುಕೊಂಡ ಕುಂಬಾರನಂತೆ ಕಥನ ಕೌಶಲವನ್ನು ಬಳಸುವ ನುಗಡೋಣಿಯವರು ಕತೆ-ಕತೆಗಾರ ಹಾಗೂ ಕತೆ ಮತ್ತು ಓದುಗರನ್ನು ಒಂದು ಎಚ್ಚರದ ದೂರದಲ್ಲಿ ನಿಲ್ಲಿಸುತ್ತಾರೆ. ತಾವೂ ಓದುಗರ ಜೊತೆಗೇ ನಡೆಯುತ್ತಾರೆ. ಅದೊಂದು ರೀತಿಯಲ್ಲಿ ತಾಕ್ಷಣಿಕತೆಯ ಜೊತೆಗೇ ಸಾಗುವ ದಣಿವಿಲ್ಲದ ಆರೋಗ್ಯಕರ ನಡೆ. ‘ದಾರಿಗಳು’ ಕತೆ ಇದಕ್ಕೆ ಒಂದು ಉದಾಹರಣೆಯಂತಿದೆ.
ಮೇಲ್ನೋಟದ ಓದಿಗೆ ಕಪ್ಪು ಬಿಳುಪಿನ ಪಾತ್ರಗಳು, ಸನ್ನಿವೇಶಗಳು ಎಂದೆನ್ನಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ತಾತ್ವಿಕತೆಯೊಂದರ ಅನ್ವಯವನ್ನೇ ಗುರಿಯಿಟ್ಟುಕೊಂಡಂತೆ ಸಾಗುವ ಕತೆಗೆ ಈ ನೆಲದ ವಚನಮೀಮಾಂಸೆಯ ಸಾತತ್ಯವಿದೆ. ತಾನು ಮತ್ತು ಇದಿರನ್ನು ಬೇರೆ ಬೇರೆಯೆಂದು ಪರಿಭಾವಿಸಿದಷ್ಟೂ ಸಂಘರ್ಷವು ತೀವ್ರವಾಗುತ್ತದೆ. ಹಾಗೆಯೇ ತಾನು ಮತ್ತು ಇದಿರಿನಲ್ಲಿ ಯಾವುದಾದರೋ ಒಂದರ ನಿರಸನವೂ ಸಾಮರಸ್ಯಕ್ಕೆ ದಾರಿಯಾಗಿ ಪರಿಣಾಮಿಯಾಗುತ್ತಾನೆ. ಅದು ಲೋಕವೆಲ್ಲ ಹಂಬಲಿಸುವ ಸುಖೀಭಾವ. ಈ ಕತೆಯಲ್ಲಿ ಸಿದ್ರಾಮಪ್ಪ ಮಾಸ್ತಾರ ಮತ್ತು ಪಾಟೀಲರನ್ನು ಅವಳಿ ವಿರುದ್ಧ ಪಾತ್ರಗಳಂತೆ ನಿರೂಪಿಸಿದರೂ ಎಲ್ಲಿಯೂ ಇವೆಲ್ಲ ಸಿದ್ಧಗೊಂಡ ಪಾತ್ರಗಳಂತಾಗಲೀ, ಸಿದ್ಧಗೊಂಡ ಸನ್ನಿವೇಶಗಳಂತಾಗಲೀ ಅನ್ನಿಸುವುದಿಲ್ಲ. ಹಾಗೆ ನೋಡಿದರೆ ನಮ್ಮ ಉತ್ತರ ಕರ್ನಾಟಕದ ಕತೆಗಾರರು ಅತ್ಯಂತ ವೈವಿಧ್ಯಮಯ ಜೀವನಾನುಭವಗಳ ನಡುವೆಯೇ ಒಡನಾಡುತ್ತಾರೆ. ಅನುಭವಗಳ ರಾಶಿಯನ್ನು ನಿಯಂತ್ರಿಸುವುದೇ ಅವರಿಗೊಂದು ಸವಾಲು. ಕುಂವೀ ಅವರ ಕಥನ ಪ್ರಪಂಚದಲ್ಲಿ ಇದು ಢಾಳಾಗಿ ಗೋಚರವಾಗುತ್ತದೆ.
ಸ್ಥಳೀಯವೆಂದೂ ಸರಳವಲ್ಲ. ಅದರ ಸಂಕೀರ್ಣತೆಯನ್ನು ಇದಿರಾಗುವುದು ಸಂಭ್ರಮವೂ ಹೌದು; ಸವಾಲೂ ಹೌದು. ಜೀವನ ಮೀಮಾಂಸೆಯ ಸರಳ ನಿಲುವುಗಳು ಅಲ್ಲಿ ಕಕ್ಕಾಬಿಕ್ಕಿಯಾಗುತ್ತವೆ. ಉದಾಹರಣೆಗೆ ‘ಮೈಲಿಗೆ ಮಾಸುವ ಸಮಯ’ ಕತೆಯ ಎಲ್ಲ ಹೆಣ್ಣುಗಳೂ ದೇಹವನ್ನು ನಿರ್ವಹಿಸುವ ಗಂಡುಮಾದರಿಗಳನ್ನು ಉಲ್ಲಂಘಿಸುವುದರಿಂದಲೇ ಜೀವಂತ ಮಾದರಿಗಳಾ ಗುತ್ತಾರೆ. ಅದಕ್ಕೆ ಬೇಕಾದ ಒಪ್ಪಿಗೆಯನ್ನು ವ್ಯಷ್ಟಿ ಮತ್ತು ಸಮಷ್ಟಿ ಎರಡರಿಂದಲೂ ಪಡೆಯುತ್ತಾರೆ. ಅಷ್ಟೇ ಅಲ್ಲ, ಎಲ್ಲರಿಂದ ಆರಾಧನೆಗೊಳ್ಳುತ್ತಿರುವ ಭಗವತಿಯೂ ಅಂತಹ ಒಂದು ಸಂಕೇತವೇ ಆಗಿರುವುದರಿಂದ, ಕತೆಗಾರ ಎಲ್ಲ ಹೆಣ್ಣುಗಳನ್ನು ಮಡಿ-ಮೈಲಿಗೆಯಿಂದಾಚೆ ಇಟ್ಟು ನೋಡುವ ಮನುಷ್ಯಪರ ನಿಲುವನ್ನು ಕತೆಯಾಗಿಸಿದ್ದಾರೆ. ಅಲ್ಲಿ ಬಿಡುಗಡೆಯ ಬಾಗಿಲು ಎಂದೂ ಯಾರಿಗೂ ಮುಚ್ಚುವುದಿಲ್ಲ. ಆದರೆ ಬಂಧನದ ಸಂಕಟಗಳನ್ನು ಅಷ್ಟೇ ತೀವ್ರವಾಗಿ ಕಾಣಿಸಿದ್ದಾರೆ.
ಒಂದೆರಡು ಕತೆಗಳನ್ನು ಹೊರತುಪಡಿಸಿದರೆ ಎಲ್ಲವೂ ಜಾತಿ ಯಜಮಾನಿಕೆಯಡಿಯಲ್ಲಿ, ಜಮೀನ್ದಾರಿಕೆಯ ಅಡಿಯಲ್ಲಿ ನಲುಗಿ ದುರ್ಬಲಗೊಂಡ ಸಮೂಹಗಳನ್ನು ಚಿತ್ರಿಸುತ್ತವೆ. ಬಲಿಷ್ಟ ಜಾತಿಗಳ ಕ್ರೌರ್ಯಕ್ಕೆ ಅನಿವಾರ್ಯವಾಗಿ ತಮ್ಮನ್ನು ತಾವು ಒಪ್ಪಿಸಿಕೊಂಡ ಅಸಹಾಯಕ ಸಮೂಹಗಳಲ್ಲಿ ಪ್ರತಿಭಟನೆಯೆಂಬ ಶಬುದವೇ ಅಡಗಿಹೋಗಿದೆ. ಕುಡುಗೋಲು – ಕುಂಬಳಕಾಯಿ ಎರಡೂ ಬಲಿಷ್ಠರ ಕೈಲೇ ಇವೆ. ಇಂತಹ ಮೇಲ್‌ಸ್ತರದ ಪಾತ್ರಗಳಲ್ಲಿ ಅಲ್ಲಲ್ಲಿ ಮೂಡುವ ಒಳಿತಿನ ಬೆಳಕು ಸಮೂಹದ ಒತ್ತಡದಿಂದ ಮೂಡಿಬರದೆ ಅಚಾನಕ್ಕಾಗಿ ಮತ್ತು ಅಕಾರಣವಾಗಿ ಅವತರಿಸುತ್ತದೆ. ‘ಪರಿಣಾಮಿ’ ಮತ್ತು ‘ನೆರಳಸೂರು’ ಕತೆಗಳಲ್ಲಿ ಇಂತಹ ನಿರೂಪಣೆ ಇದೆ.
‘ಪರಿಣಾಮಿ’ ತುಸು ಸಂಕೀರ್ಣವಾದ ಕತೆ. ಜಂಗಮರ ಛಾಯಮ್ಮನ ಸಂಗಕ್ಕೆ ಹಾತೊರೆದ ದಣಿಯ ಆ ನಿರ್ಣಾಯಕ ಕ್ಷಣವನ್ನು ಒಂದು ರೀತಿಯ ಟ್ರಾನ್ಸ್‌ಗೆ ಒಳಗಾದವನಂತೆ ಚಿತ್ರಿಸುತ್ತಾರೆ. ಅದು ಅವನನ್ನು ಭಯಭೀತಗೊಳಿಸಿ ಅನೇಕ ಕೇಡಿನ ಯೋಚನೆಗಳಿಂದ ಮುಕ್ತಗೊಳಿಸುತ್ತದೆ. ಅಂತಹ ಅನೇಕ ಕೇಡುಗಳನ್ನು ನಿರಾತಂಕವಾಗಿ ಈವರೆಗೆ ಮಾಡಿದ ದೊಡ್ಮನೆಯ ಧಣಿಯಾಗಲೀ ಅವನು ಪ್ರತಿನಿಧಿಸುವ ಬಲಿಷ್ಠ ಜಾತಿಯ ಜಮೀನ್ದಾರೀ ಸಮೂಹಗಳಾಗಲೀ ಒಳಿತಿನ ದಾರಿಗೆ ಬರಲು ಯಾವ ಸಾಮಾಜಿಕ ತಾತ್ವಿಕತೆಯೂ ಕಾರಣವಾಗುವುದಿಲ್ಲ. ಅದು ಕತೆಗಾರನ ಸದಾಶಯ ಮಾತ್ರವೇನೋ ಅನ್ನಿಸುವಂತಿದೆ. ಅಂತಹ ಇನ್ನೊಂದು ಕತೆಯಾದ ‘ನೆರಳ ಸೂರು’ ಕೂಡ ಅಂತಹ ಒಂದು ನಿರಾಳ ಅಂತ್ಯವನ್ನು ಆಶಯ ರೂಪದಲ್ಲಿ ಹೊಂದಿದೆ. ಈ ಕತೆಗಳನ್ನು ಗಮನಿಸಿದಾಗ, ಹಳೆಯ ಮೈಸೂರು ಪ್ರಾಂತದ ಗ್ರಾಮೀಣ ಅನುಭವಗಳನ್ನು ದುಡಿಸಿಕೊಂಡು ಕತೆಗಳನ್ನು ಕಟ್ಟಿದ ಬೆಸಗರಹಳ್ಳಿ ರಾಮಣ್ಣನವರ ಕತೆಗಳಲ್ಲಿ ಕಾಣುವ ವರ್ತಮಾನದ ರಾಜಕೀಯ ಬೆಳವಣಿಗೆಗಳು, ದಲಿತ ಮತ್ತು ರೈತ ಚಳವಳಿಗಳ ಪ್ರಭಾವಗಳು ಮತ್ತು ಅದರಿಂದಾಗಿ ಕೆಳಸ್ತರಗಳಲ್ಲಿ ಮೂಡುತ್ತಿರುವ ಎಚ್ಚರಗಳು ಉತ್ತರ ಕರ್ನಾಟಕದ ಹಿಂದುಳಿದ ಸಮೂಹಗಳಲ್ಲಿ ಮೂಡಲಿಲ್ಲವೇ ಎಂಬ ಪ್ರಶ್ನೆ ಕಾಡುತ್ತದೆ. ಜಾತಿವ್ಯವಸ್ಥೆಯ ವಿರುದ್ಧ ಬಂಡೆದ್ದ ವಚನ ಚಳವಳಿಯ ನೆಲದಲ್ಲಿ ಅದರ ಯಾವ ಪ್ರಭಾವವೂ ಉಳಿದಂತೆ ಕಾಣುವುದಿಲ್ಲ.
ಅಮರೇಶ ನುಗಡೋಣಿಯವರ ಕಥನದ ಸಾಂಸ್ಕೃತಿಕ ರಾಜಕಾರಣವನ್ನು ತೀವ್ರವಾಗಿ ಪರಿಭಾವಿಸಬೇಕಾಗಿದೆ. ಕನ್ನಡದ ಪ್ರಮುಖ ಕತೆಗಾರರಲ್ಲೊಬ್ಬರಾದ ಇವರ ಕತೆಗಳನ್ನು ಈವರೆಗಿನ ಕನ್ನಡದ ಕಥನ ಕ್ರಮದ ಜೊತೆಗಿಟ್ಟು ನೋಡಬೇಕಾಗಿದೆ. ಉತ್ತರ ಕರ್ನಾಟಕದ ಜೀವನಕ್ರಮದ ಸ್ಥಳೀಯತೆಯನ್ನು ಮೈದುಂಬಿ ಕೊಂಡು ಬರುವ ನುಗಡೋಣಿಯವರ ಕತೆಗಳಲ್ಲಿ ಬಲಿಷ್ಠ ಜಾತಿಗಳ ಸಾಂಸ್ಕೃತಿಕ ಪೊಳ್ಳುತನ ಮತ್ತು ದುರ್ಬಲ ಸ್ತರಗಳ ಸಾಂಸ್ಕೃತಿಕ ಸಮೃದ್ಧಿ ಅನಾವರಣ ವಾಗುತ್ತದೆ. ಇದು ಕನ್ನಡ ನಾಡಿನ ಎಲ್ಲ ಭಾಗಗಳಿಗೂ ಅನ್ವಯಿಸಬಹುದಾದುದು. ಜಮೀನ್ದಾರೀ ಅಹಂಕಾರದಲ್ಲಿ, ಯಾವ ಕ್ರಿಯಾಶೀಲತೆಯೂ ಸಾಧ್ಯವಿಲ್ಲ. ಅವೇನಿದ್ದರೂ ತೀರಾ ಕೆಳಸ್ತರಗಳ ಸ್ವತ್ತು.
ಇಡೀ ಸಂಕಲನವನ್ನು ಒಂದೇ ಪಟ್ಟಿನಲ್ಲಿ ಓದಿದಾಗ, ಒಂದು ಕಾದಂಬರಿಯನ್ನು ಓದಿದ ಅನುಭವವಾಗುತ್ತದೆ. ಹತ್ತಾರು ಕುಟುಂಬಗಳಲ್ಲಿ ಘಟಿಸುತ್ತಿರುವ ಅನೇಕ ಸಂಗತಿಗಳನ್ನು ಒಟ್ಟುಮಾಡಿಟ್ಟಾಗ ಅವುಗಳ ನಡುವಿನ ಸಂಬಂಧದ ಎಳೆಗಳು ಪರಸ್ಪರ ಜಗ್ಗಿಕೊಳ್ಳುವುದರಿಂದ ಇಂತಹ ಅನುಭವವಾಗಲು ಸಾಧ್ಯ. ನಗರೀಕರಣ, ವ್ಯಾಪಾರೀಕರಣದಂತಹ ಬೆಳವಣಿಗೆಗಳು ಆರ್ಥಿಕವಾಗಿ ದುರ್ಬಲವಾದ ಸಮೂಹಗಳ ಜೀವನಕ್ರಮದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡುತ್ತಿವೆ. ಅವರ ಬದುಕಿನ ಏಕೈಕ ಆಸರೆಯಾಗಿರುವ ಭೂಮಿ ಅನೇಕ ಕಾರಣಗಳಿಂದ ಪರಾಸ್ತವಾಗುತ್ತಿರುವುದರಿಂದ ಕಂಗಾಲಾಗುತ್ತಿದ್ದಾರೆ. ‘ಒಡಲ ಹಂಗು’, ‘ಪರಿಣಾಮಿ’ ಮುಂತಾದ ಕತೆಗಳಲ್ಲಿ ಇದು ತೀವ್ರವಾಗಿ ವ್ಯಕ್ತವಾಗುತ್ತದೆ. ಅವುಗಳನ್ನು ತೀರಾ ಹತ್ತಿರದಿಂದ ಕಂಡು ಚಿತ್ರಿಸುವ ಕತೆಗಳು ಕತೆಗಳೆನ್ನಿಸದೆ ನಮ್ಮ ನಡುವಿನ ಆಗುಹೋಗುಗಳಂತೆ ಅನ್ನಿಸುತ್ತವೆ. ಕತೆಗಳ ಒಟ್ಟಾರೆ ಪರಿಣಾಮವನ್ನು ಪರಿಭಾವಿಸುವಾಗ ಈ ಅನುಭವಗಳು ನೇರ ನಿರೂಪಣೆಯಂತೆ ಕಂಡರೂ ಕತೆಗಾರನ ಕಲಾಮೂಸೆಯಲ್ಲಿ ಹದವಾಗಿ ಮಾಗಿ ಬಂದಿವೆ ಎನ್ನುವುದು ಖಾತರಿಯಾಗುತ್ತದೆ.
ಈ ಕತೆಗಳಲ್ಲಿನ ಮತ್ತೊಂದು ಸಂಗತಿ ಗಮನ ಸೆಳೆಯುತ್ತದೆ. ವರ್ತಮಾನದ ಅನೇಕ ಬೆಳವಣಿಗೆಗಳಿಂದಾಗಿ ತನ್ನ ಆವರಣಕ್ಕೆ ಅನ್ಯನಾಗುತ್ತಿರುವ ಅನೇಕ ಜೀವಗಳು ಮತ್ತೆ ಅಲ್ಲಿ ತನ್ನನ್ನು ಕಂಡುಕೊಳ್ಳಲು ಹಂಬಲಿಸುತ್ತಿವೆ. ಅನೇಕ ವ್ಯಾಮೋಹಗಳಿಂದಾಗಿ ತನ್ನ ನೆಲದ ಬೇರು ಕತ್ತರಿಸಿಕೊಂಡವರ ತೊಯ್ದಾಟಗಳನ್ನು ಎಲ್ಲ ಕತೆಗಳೂ ಒಳಗೊಂಡಿವೆ. ಈ ಅನ್ಯನೆಂದೆನಿಸುವ ಅನಾಥ ಪ್ರಜ್ಞೆ ಆಧುನಿಕತೆಯ ಪರಿಣಾಮವೆಂದೇನಲ್ಲ. ಅದನ್ನು ವ್ಯಕ್ತಿ ವಿಶಿಷ್ಟವೆಂದು ಮಾತ್ರ ಪರಿಗಣಿಸಲಾಗದು. ಈ ನೆಲದ ದೊಡ್ಡ ಸಮೂಹವೊಂದು ಜಾತಿವ್ಯವಸ್ಥೆಯ ಕಾರಣಕ್ಕೆ ಇಂದಿಗೂ ಸಾಮೂಹಿಕ ಅನಾಥ ಪ್ರಜ್ಞೆಯನ್ನು ಅನುಭವಿಸುತ್ತಲೇ ಇದೆ. ಅಂತಹ ವಿಸ್ತರಣೆಗಳು ನುಗಡೋಣಿಯವರ ಕತೆಗಳ ಸತ್ವವನ್ನು ಹೆಚ್ಚಿಸಬಲ್ಲವು.
ಗ್ರಾಮೀಣ ಪರಿಸರದ ಕತೆಗಳು ಅನಿವಾರ್ಯವಾಗಿ ಭೂಮಿ ಮತ್ತು ಮನುಷ್ಯನ ಸಂಬಂಧದ ಸಂಕೀರ್ಣತೆಯನ್ನು ನಿರ್ವಹಿಸಲೇಬೇಕು. ಅದನ್ನು ಒಂದು ಆಧ್ಯಾತ್ಮಿಕ ಸಂಗತಿಯಾಗಿ ನೋಡುವ ಕ್ರಮವೊಂದಿದೆ. ಆದರೆ ಇಲ್ಲಿಯ ಸಂಬಂಧದ ಸ್ವರೂಪ ಬೇರೆ. ಅದು ಮೂರ್ತವೂ ಲೌಕಿಕವೂ ಆಗಿರುವ ಹಾಗೆಯೇ ದೇಹ-ಜೀವದಂತಹ ಅನಿವಾರ್ಯ ಸಂಬಂಧವೂ ಆಗಿದೆ. ಭೂಮಿಯ ಒಡೆತನ ಎನ್ನುವುದೇ ಒಂದು ಅನೈಸರ್ಗಿಕ ಕಲ್ಪನೆಯಾಗಿದ್ದು, ಈ ಒಡೆತನದ ಸಂರಚನೆ ಸಂಪಾದಿಸಿರುವ ಸಾಮಾಜಿಕ ಒಪ್ಪಿಗೆ ಅದೆಷ್ಟೇ ಬಲವಾದುದಾದರೂ ಅದೊಂದು ಪೊಳ್ಳು ಅಷ್ಟೆ. ಇಂತಹ ಪೊಳ್ಳುತನವನ್ನು ಬಯಲು ಮಾಡುವ ಕತೆಗಳನ್ನು ಜಗತ್ತಿನ ಶ್ರೇಷ್ಠ ಮಾದರಿಗಳೆಂದು ನಾವು ಒಪ್ಪಿಕೊಂಡಿದ್ದೇವೆ. ಈ ಸಂಕಲನದ ಅನೇಕ ಕತೆಗಳಿಗೆ ಈ ವಿಸ್ತರಣೆಯನ್ನು ಪಡೆಯುವ ಸಾಧ್ಯತೆ ಇದೆ.
ಬಿಸಿಲನ್ನೆ ಹಾಸಿ, ಹೊದ್ದು, ಉಂಡು ಬದುಕುವ ನಾಡಿನ ಕತೆಗಳಿವು. ಅಲ್ಲಿ ಕತೆಗಳೂ ಹೆಚ್ಚು. ಕಾವ್ಯವೂ ಹೆಚ್ಚು. ಅನೇಕ ಪ್ರಮುಖ ತತ್ವಪದಕಾರರನ್ನು ಆ ನೆಲ ನೀಡಿದೆ. ಇಂದಿಗೂ ಅವುಗಳೆಲ್ಲ ಅಲ್ಲಿನ ಬದುಕಿನ ಭಾಗವಾಗಿವೆ. ನುಗಡೋಣಿಯವರು ಕೂಡ ಅವುಗಳನ್ನು ಅನುಭವಿಸುತ್ತ ಬೆಳೆದವರು. ಆ ತಾತ್ವಿಕತೆಯ ದಟ್ಟ ಪ್ರಭಾವ ಅವರ ಕಥನ ನಿರೂಪಣೆಯ ಕ್ರಮದಲ್ಲಿ ಕಾಣಿಸುತ್ತದೆ. ಕಥನವೆನ್ನುವುದು ಒಂದು ರಾಜಕಾರಣವೂ ಹೌದು ಮತ್ತು ಇನ್ನೂ ಮೇಲ್ ಸ್ತರದಲ್ಲಿ ಅದರ ನಿರಸನವೂ ಹೌದು. ಕಟ್ಟುವ ಮತ್ತು ವಿಸರ್ಜಿಸುವ ಎರಡೂ ಕ್ರಿಯೆಗಳನ್ನು ನಿರುಮ್ಮಳವಾಗಿ ನಿರ್ವಹಿಸಬಲ್ಲ ಕತೆಗಳನ್ನು ನೀಡಬಲ್ಲ ನುಗಡೋಣಿಯವರಿಂದ ಕನ್ನಡದ ಕಥನದ ಆವರಣ ಸಮೃದ್ಧಗೊಳ್ಳಲಿ.
ಒಡಲ ಹಂಗು
ಲೇ: ಅಮರೇಶ ನುಗಡೋಣಿ
ಪು:216, ರೂ.150
ಪ್ರ: ಅಂಕಿತ ಪುಸ್ತಕ, 53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.