ADVERTISEMENT

ಕನ್ನಡದ ಕನ್ನಡಿಯಲ್ಲಿ ಜಗದ ಮೊಗ

ಡಾ.ಚಿಂತಾಮಣಿ ಕೊಡ್ಲೆಕೆರೆ
Published 7 ಮೇ 2011, 19:30 IST
Last Updated 7 ಮೇ 2011, 19:30 IST

ಎರಡು ಪ್ರತ್ಯೇಕ ಸಂಕಲನಗಳಾಗಿ ಪ್ರಕಟವಾಗಬಹುದಾಗಿದ್ದ ಕವಿತೆಗಳು ಅರವಿಂದ ಮಾಲಗತ್ತಿ ಅವರ ‘ವಿಶ್ವತೋಮುಖ ಹೂ ಬಲು ಭಾರ’ ಸಂಕಲನದಲ್ಲಿ ಒಂದೆಡೆ ಸಮಾವೇಶಗೊಂಡಿವೆ.

ಕವಿ ಹೇಳುವಂತೆ ವಿಚಾರ ಪ್ರಧಾನ ಮತ್ತು ಭಾವಪ್ರಧಾನ (ಗೇಯ) ಎಂದು ಇವನ್ನು ವಿಂಗಡಿಸಬಹುದು. ಆದರೆ ಕಾವ್ಯದ ಕಾಳಜಿ, ಧಾತುಗಳ ದೃಷ್ಟಿಯಿಂದ ನೋಡಿದರೆ ಈ ವಿಭಾಗೀಕರಣ ಸ್ಥೂಲಸ್ವರೂಪದ್ದು. ಜಾಗತೀಕರಣ ಸೃಷ್ಟಿಸಿರುವ ಬಿಕ್ಕಟ್ಟು ಈ ಕವಿಯನ್ನು ಇನ್ನಿಲ್ಲದಂತೆ ಕಾಡಿದೆ.

‘ಕಾವ್ಯ ಹೊಸ ವಸ್ತುವಿನೊಂದಿಗೆ ಚಲಿಸುವಾಗ ಮೊದಲು ಓದಿಸಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು’ ಎಂದು ನಂಬುವ ಮಾಲಗತ್ತಿ ಜಾಗತೀಕರಣ, ಪ್ರಾದೇಶಿಕತೆಗಳ ದ್ವಂದ್ವವನ್ನು ಮೈಮೇಲೆ ತೆಗೆದುಕೊಂಡಿದ್ದಾರೆ. ಹಾಗಾಗಿ ಇಂದಿನ ಬದುಕಿನ ನೂರಾರು ಸಮಸ್ಯೆಗಳ ಸಿಕ್ಕುಗಳನ್ನು ಅರಿಯುವ, ಬಿಡಿಸುವ ಅಪಾರ ಸಹನೆಯಿಂದ ಅವರು ಕಾವ್ಯಕರ್ಮದಲ್ಲಿ ತೊಡಗಿಕೊಂಡಿದ್ದಾರೆ.

ಕವನ ತನ್ನ ಅಸಹಾಯಕತೆಯ ಪ್ರತೀಕ ಎಂದೂ ಅವರಿಗನಿಸಿದ್ದಿದೆ. ಭ್ರಷ್ಟ ರಾಜಕೀಯ, ಯುವಜನತೆಯ ಹಿಂಸಾಪರ ಧೋರಣೆ, ಜೀವನ ಶೈಲಿಯನ್ನು ಪಲ್ಲಟಗೊಳಿಸುತ್ತಿರುವ ಆಧುನಿಕತೆಯ ತಂತ್ರಜ್ಞಾನ, ಪಾಶ್ಚಾತ್ಯೀಕರಣದ ತಂತ್ರಗಾರಿಕೆ.. ಇವೆಲ್ಲ ಕೂಡಿ ಅರಿಯಲಿಕ್ಕೇ ಅಸಾಧ್ಯ ಎಂಬ ಮಟ್ಟದ ತೀಕ್ಷ್ಣವೇಗ ನಮ್ಮ ಬಾಳಿಗೆ ಬಂದುಬಿಟ್ಟಿದೆ.

ಇವನ್ನೆಲ್ಲ ಇವತ್ತಿನ ಕಾವ್ಯ ಎದುರಿಸಬೇಕು, ಚಿತ್ರಕಲೆ, ನೃತ್ಯ, ಸಂಗೀತಗಳಂಥ ಕಲೆಗಳೂ ಈ ಸವಾಲುಗಳನ್ನು ಎದೆಗೊಟ್ಟು ಎದುರಿಸಬೇಕು ಎಂದು ಕವಿ ಪ್ರತಿಪಾದಿಸುತ್ತಾರೆ. ಹಾಗೆ ಬದುಕಿಗೆ ಹತ್ತಿರವಲ್ಲದ ವಿಚಾರ, ಕಾವ್ಯ ಎರಡೂ ವ್ಯರ್ಥ ಎಂದು ಅವರ ನಂಬಿಕೆ. ಕಾವ್ಯ ಸಕಾಲಿಕವಾಗಬೇಕಾದುದು ಅಗತ್ಯ. ಅರಣ್ಯನ್ಯಾಯದ ಜಾಗತಿಕ ನೀತಿ (‘ಪಾಲಿಥಿನ್ ಬರ’ ಕವಿತೆ) ಯನ್ನು ಈ ಕವಿ ಅನುಮಾನದಿಂದಲೇ ನೋಡುತ್ತ ಬಂದಿದ್ದಾರೆ. ಆದರೆ ಬದುಕೇ ಜಾಗತೀಕರಣದ ಪ್ರಭಾವಕ್ಕೊಳಗಾಗುತ್ತಿರುವಾಗ ಕವಿ ಅದನ್ನು ಒಳಗೊಳ್ಳುವುದು, ಪ್ರತಿರೋಧಿಸುವುದು ಇಂಥ ಪ್ರಕ್ರಿಯೆಗಳ ಮೂಲಕ ಸಮಾಜ ಸಮ್ಮುಖಿಯಾಗಿ ಸಲ್ಲಬೇಕಾದುದು ಸೂಕ್ತ ಎಂದೂ ಅವರು ತಿಳಿಯುತ್ತಾರೆ.

‘ಇರುವಿಕೆ ಇಲ್ಲದ ಚಲನಶೀಲತೆಗೆ ಅರ್ಥವಿಲ್ಲ’. ಆದ್ದರಿಂದ ಪ್ರಾದೇಶಿಕತೆಯ ಸೊಗಡಿನೊಡನೆ ವಿಶ್ವತೋಮುಖಿಯಾಗಿ ಬೆಳೆಯಬೇಕು. ಜಾಗತೀಕರಣದ ಪ್ರಚಲಿತ ರೂಪ ವಾಣಿಜ್ಯವನ್ನು ಆಧರಿಸಿದ್ದರೆ ಮಾಲಗತ್ತಿ ಪ್ರತಿಪಾದಿಸುವ ವಿಶ್ವತೋಮುಖತೆ ತಾತ್ವಿಕ ಸ್ವರೂಪದ್ದು. ಪ್ರಾದೇಶಿಕ ಸಂಸ್ಕೃತಿಗಳ, ಸಮಾಜಗಳ ವೈಶಿಷ್ಟ್ಯಗಳನ್ನು ಬಿಟ್ಟುಕೊಡದೆ ಪ್ರಪಂಚ ಪ್ರಜ್ಞೆಯನ್ನು ಒಳಗೊಂಡು ಅನನ್ಯತೆ ಸಾಧಿಸುವ ಹಿರಿಯ ಆದರ್ಶ ಅವರ ಕಾವ್ಯದ್ದಾಗಿದೆ.

ಸೃಷ್ಟಿಯನೆ ಗೆಲ್ಲುವೆನೆಂಬ ಹಮ್ಮಿನ ಮನುಷ್ಯನನ್ನು ಅವರು ‘ಕಾಲಜ್ಞಾನದ ಕಿರೀಟ ತೊಟ್ಟ ಬಚ್ಚ ಬಾಯಿಯಪೋರ’ ಎಂದು ವರ್ಣಿಸುತ್ತಾರೆ. (‘ನಾ ನಿಲ್ಲುವಳಲ್ಲ’ ಕವಿತೆ). ನೆಲ ತಾಯ ಕಡುಕೋಪ ಸುನಾಮಿಯಾಗಿ ಎಲ್ಲವನ್ನೂ ಹೊಸಕಿ ಹಾಕಬಹುದು. ‘ಕಾಲನ ಕಟ್ಟಿ ಗೆದ್ದವರುಂಟೆ?’- ಮನುಷ್ಯ ಹದವರಿತ ಹಾದಿ ಹಿಡಿಯಬೇಕು. ‘ಬೀಜ ಸಾಯುವುದಿಲ್ಲ, ಧರಣಿ ದಣಿಯುವುದಿಲ್ಲ’- ದಣಿಯುವುದು ಮನುಷ್ಯ.
‘ತ್ಸುನಾಮಿ’ ಪುನಃ ಸೃಷ್ಟಿಯ ವೈಭವ, ಮುನಿಸು, ಕ್ಷೋಭೆ, ಉತ್ಪಾತಗಳನ್ನು ಧ್ಯಾನಿಸುವ ಕವಿತೆ.

ಹೇ ಸೃಷ್ಟಿಯೇ ನೀ ಹೇಳುಆ ಕಡಲೂ ನಿನ್ನದೆ ಆ ಹಡಗುಗಳು ನಿನ್ನದೇಸತ್ತುಬಿದ್ದಿರುವ ಜೀವರಾಶಿ, ಆಕ್ರಂದನದ ಜೀವಕೋಡಿನಿನ್ನದೆ ಆಗಿರುವಾಗ ನೀನೇಕೆ ಮಾಡಿದೆ ಹೀಗೆ?
‘ಇಳೆ ಉಗಿದರೆ ಬೆಂಕಿ ಹೊಳೆ, ಆಕಳಿಸಿದರೆ ಚಂಡಮಾರುತ, ಮೈ ಹೊರಳಿದರೆ ಭೂಕಂಪನ, ನಿಟ್ಟುಸಿರೆ ಕಡಲಾಗ್ನಿ’ ಇಂಥ ವಿಶ್ವ ವಿಸ್ಮಯದ ಕತ್ತರಿಸಿದೆಳೆಗಳ ಪಾಠವಷ್ಟೇ ವಿಜ್ಞಾನದ ಕೈಗೆ ದಕ್ಕಿದೆ. ‘ಕಾಲದ ಶರಗಲಿ ಮಗುವಾಡಿದಂತೆ ಮನುಜ! ಪ್ರಕೃತಿ ಎದುರು ಮನುಷ್ಯ ಹಸುಗೂಸು, ಅವಿವೇಕಿ, ಅಪ್ರಬುದ್ಧ, ಕಾಲಜ್ಞಾನಿ!’.

‘ಪಾತರಗಿತ್ತಿ ಪರಿಣಾಮ’ ಕವಿತೆ ಮನುಷ್ಯನ ಅಳತೆಗೆ ಸಿಗಲಾರದ ಸೃಷ್ಟಿಯ ಶಕ್ತಿಯನ್ನು ಕೌತುಕದಿಂದ ನೋಡುತ್ತದೆ. ‘ನಾವೇನಿದ್ದರೂ ಗಳಿಗೆ ಗೆಲುವಿನ ಮಾನವರು’ ಎಂದು ವಿನೀತವಾಗಿ ನುಡಿಯುತ್ತದೆ. ಈ ಗಳಿಗೆ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವುದು ಹೇಗೆಂಬುದು ಮುಂದಿನ ತೊಡಕಿನ ಪ್ರಶ್ನೆ. ಜಾಗತೀಕರಣ ಮತ್ತು ಮನುಷ್ಯನ ಮಿತಿಯಿಲ್ಲದ ಭೋಗ, ಸ್ವಾರ್ಥ ಇವೆರಡೂ ವರ್ತಮಾನದ ಮಹಾನ್ ಸವಾಲುಗಳಾಗಿವೆ.

‘ಯು-235’ ಈ ಹಂತದಲ್ಲೇ ಚರ್ಚಿಸಬೇಕಾದ ಕವಿತೆ. ಪ್ರಪಂಚದ ಸಂಪನ್ಮೂಲದ ಶಕ್ತಿ, ಮಿತಿ ಅರಿಯದೆ ಮನುಷ್ಯ ಮುನ್ನುಗ್ಗುತ್ತಿದ್ದಾನೆ. ಚರಿತ್ರೆಗೆ ಬಿದ್ದ ಗಾಯಗಳುಂಟು, ಗೆದ್ದ ಸಂಭ್ರಮಗಳುಂಟು. ಕತ್ತಲಲ್ಲಿ ಸಿಕ್ಕಷ್ಟೆ ಶೋಧ! ಹೀಗೆಯೇ ಮುಂದುವರಿದರೆ ‘ಮತ್ತೆ ಎದುರಾಗಬಹುದು. ಆದಿಮನ ದೃಷ್ಟಿಸೃಷ್ಟಿ’ ಎಂಬುದು ಕವಿಯ ಆತಂಕ. ಇದಕ್ಕೆ ಪರಿಹಾರವೆಂದರೆ ‘ಕಾರ್ವಾಲೊ, ಮಂದಣ್ಣರ ಸಮಾಗಮ’. ಪರಂಪರೆಯ ಜ್ಞಾನದೊಂದಿಗೆ ವಿಜ್ಞಾನ ಬೆರೆತಾಗ ಉರಿವ ಬೂದಿಯ ‘ಯು -235’ ಬದಲು ಮರುಹುಟ್ಟಿನ ಹೊಸಬಾಳು ಸಾಧ್ಯವಾಗುವುದೆಂಬ ಆಶಾವಾದ ಕವಿತೆಯದು. ‘ಇಂಡಿಯಾ-ನೀ ಭಗೀರಥನ ಭಾರತ’ ಎಂಬ ಸಾಲಿನಲ್ಲಿ ಆಧುನಿಕ ರಾಷ್ಟ್ರಕ್ಕೆ ಅವರು ತಂದುಕೊಡುವ ಸಾಂಸ್ಕೃತಿಕ ಸ್ಕೃತಿ ಅಚ್ಚರಿ ಹುಟ್ಟಿಸುವಂತಿದೆ.

‘ಬಿಡು ನನ್ನ ಚಹರೆಗಳೊಂದಿಗೆ ನನ್ನ ಬದುಕಲು’ ಎಂದು ಈ ಕವಿ ಕೋರುತ್ತಾರೆ. (‘ಕಡತಗಳು’) ಕಂಪ್ಯೂಟರೇ ಬೋಧಿವೃಕ್ಷವಾದ ವರ್ತಮಾನದ ‘ಕತ್ತರಿಸು-ನಕಲಿಸು-ಅಂಟಿಸು’ ಜ್ಞಾನವನ್ನು ಈ ಕವಿತೆ ಗೇಲಿ ಮಾಡುತ್ತದೆ. ಹಾಗೆಯೇ ಜಾಗತಿಕ ರಾಜಕೀಯದಲ್ಲಿ ದೊಡ್ಡಣ್ಣನಂತೆ ವರ್ತಿಸುತ್ತಿರುವ ಸಾಮ್ರಾಜ್ಯಶಾಹಿ ರಾಷ್ಟ್ರಗಳ ಕುರಿತೂ ಅವರ ಪ್ರತಿರೋಧವಿದೆ. ಅವರಿಗೆ ಸದ್ದಾಂ ತೃತೀಯ ಜಗತ್ತಿನ ಸ್ವಾಭಿಮಾನದ ಸಂಕೇತವಾಗಿ ಕಾಣುತ್ತಾನೆ, ಕಾಡುತ್ತಾನೆ. (ಸದ್ದಾಂ ಸಾಯಲಿಲ್ಲ, ಮುದ್ದಾಂ ಸಾವು ಸದ್ದಾಂ ಕವಿತೆಗಳು).

‘ಅಗ್ರಜನ ಇತಿಹಾಸವೇ ಅಪರಾಧಗಳ ಸರಮಾಲೆ’ಯಾಗಿರುವಾಗ ಸದ್ದಾಂಗೆ ಸಂದ ಶಿಕ್ಷೆ, ‘ಭೂತ ಹೇಳಿಸಿತು ನ್ಯಾಯಃ ಹೇಳಿತು ಪುತ್ಥಳಿ!’ ಎನ್ನುತ್ತಾರೆ ಕವಿ. ‘ಮನೆಗೆ ಬಂದ ಕಾಕರಾಜ’ ಕವಿತೆಯಲ್ಲಿ ಸಾಕಷ್ಟು ಪರಿಚಿತವಾದ ಕಾಕಕ್ಕ, ಗುಬ್ಬಕ್ಕರ ಕಥೆಯ ಮೂಲಕ ಉದಾರೀಕರಣ ನೀತಿಯ ದುಷ್ಟ ಹುನ್ನಾರವನ್ನು ಸೂಚಿಸಿದೆ.

ಹಾಗಾಗಿ ಈಗ ನಾವು ‘ನಿದ್ದೆಯಲ್ಲೂ ಕಣ್ಣು ತೆರೆದೆ ಮಲಗಬೇಕಿದೆ’. ಕೊರಿಯಾ ಬಾಂಬ್ ಸ್ಫೋಟ (ಪರೀಕ್ಷೆಗಾಗಿ) ಮಾಡಿದಾಗ ಎದ್ದ ವಿವಾದಗಳು ‘ಬಾಂಬಾಸುರ ಮತ್ತು ಕೊರಿಯಾಳ ಚೊಚ್ಚಲ ಹೆರಿಗೆ’ ಕವಿತೆಗೆ ಪ್ರೇರಣೆಯಾಗಿವೆ. ಅಮೆರಿಕಾ, ರಶಿಯಾ, ಜಪಾನಿನ ತಾಯಿಯರಿಗೆ ಇವಳ ಚೊಚ್ಚಲ ಹೆರಿಗೆಯಿಂದ ಸವತಿಮತ್ಸರ ಉಂಟಾಗಿದೆ. ಪ್ರತಿಯೊಬ್ಬರಿಗೂ ತಾವು ಹೆತ್ತ ರಕ್ತ ಬೀಜಾಸುರನ ಬಗೆಗೆ ಹೆಮ್ಮೆ! ಮನುಕುಲದ ಸಾಮೂಹಿಕ ವಿನಾಶಕ್ಕೆ ಆಹ್ವಾನ ಕೊಡುವ ಇಂಥ ಬಾಂಬ್ ಪರೀಕ್ಷೆ ನಡೆಸಿ ವಿಶ್ವ ‘ಉಡಿಯಲೇ ಸಾವು ಕಟ್ಟಿಕೊಂಡು’ ಬದುಕಬೇಕಾಗಿದೆ.

ಭವಿಷ್ಯತ್ತಿನ ಭಾರತದಲಿ ವೈ2ಕೆ ಹೊಸ ವರ್ಣಾಶ್ರಮದ ಬಗೆಯೊಂದನ್ನು ರಚಿಸಿದೆ:
ಬ್ರಹ್ಮನ ಕಾಲಲಿ ಹುಟ್ಟಿತು ರೂಪಾಯಿ
ಯುರೋ ಹೊಟ್ಟೆಯಲಿ ಹುಟ್ಟಿತು
ಬ್ರಹ್ಮನ ತಲೆಯಲ್ಲೇ ಡಾಲರ್ ಹುಟ್ಟಿತು
ಉಳಿದದ್ದೆಲ್ಲ ತೋಳಲೇ ಹುಟ್ಟಿತು!
ಇದು ‘ಪುರಾತನದ ವೇಷ ತೊಟ್ಟ ನವಜಾತ ವಿಕೃತಶಿಶು’. ಡಾಲರಿನ ಸಿಂಬಳದಲ್ಲಿ ನೊಣಗಳು! ಭಾರತಾಂಬೆ ಇಲ್ಲಿ ಹಳೆ ಮುದುಕಿ. ಭಾರತದ ದುರಂತವು ಹೀಗೆಯೇ ಮುಂದುವರಿಯುವುದೆಂಬ ದಟ್ಟ ವಿಷಾದ ಈ ಕವಿತೆಯದು. ಇದಕ್ಕೆ ಪ್ರತಿಯಾಗಿ ಮತ್ತೊಂದು ಕವಿತೆಯಲ್ಲಿ ಆಶಾದಾಯಕವಾದ ಚಿತ್ರವಿದೆ.

ಭರತಖಂಡದ ಭವಿತವ್ಯ ಕವಿತೆ (‘ಬಹುಭಾಷೆ, ಬಹುನೇತ್ರ, ಬಹುನೋಟ’ ಒಡಗೂಡಿ, ಭಿನ್ನತೆಯೊಳಗೆ ಏಕತೆಯ ಜೀವಧಾತು ಮಿಡಿದು) ‘ಎಲ್ಲರಿಗೆಲ್ಲರಾಗಬೇಕು’ - ಅದರಲ್ಲೇ ಈ ದೇಶದ ಭವಿಷ್ಯವಿದೆ ಎಂದು ಭಾವಿಸುತ್ತದೆ. ‘ಬಹುಮುಖತೆ ಇಲ್ಲದ ಏಕತೆ/ಭುವನದ ಭಾಗ್ಯಕ್ಕಂಟಿದ   ಏಡ್ಸ್’ ಎಂದು ಕೊನೆಯಾಗುವ ಇನ್ನೊಂದು ಕವಿತೆಯಲ್ಲಿ (ಭುವನದ ಭಾಗ್ಯ) ಇದೇ ಚಿಂತನೆಯ ಇನ್ನಷ್ಟು ಮುಂದುವರಿಕೆ ಇದೆ. ಜ್ಞಾನದ ಪ್ರಶ್ನೆಗೆ ವಿಜ್ಞಾನದ ಉತ್ತರ ಸರಿ, ಆದರೆ ಅದು ಪ್ರಪಂಚಪಲ್ಲಟದ ನೀತಿ ಆಗಬಾರದು, ವಿಜ್ಞಾನದ ಭೀತಿ ಉಂಟಾಗಬಾರದು! ನೈತಿಕತೆಯ ಸಂಹಿತೆ ವಿಜ್ಞಾನಕ್ಕೆ ಬೇಕಲ್ಲವೇ ಎಂಬ ಪ್ರಶ್ನೆಯನ್ನೂ ಈ ಕವಿತೆ ಕೇಳಿಕೊಂಡಿದೆ.

ಸಮಾಜದಲ್ಲಿ ಆಹಾರ ಪದ್ಧತಿಗಳು ಹುಟ್ಟಿಸುವ ಸಮಸ್ಯೆ ‘ಖಮೇಲಿ ಕ್ರಾಂತಿ’ ಕವಿತೆಯಲ್ಲಿದೆ. ಸಸ್ಯಾಹಾರಿ ಮಾಂಸಾಹಾರಿಯಾದರೂ ಹೊಲೆಯಲ್ಲ, ಮಾಂಸಾಹಾರಿ ಸಸ್ಯಾಹಾರಿಯಾದರೂ ದ್ವಿಜನಲ್ಲ! ಸಮಾಜದ ನಿಶ್ಚಲಸ್ಥಿತಿಯನ್ನು ವ್ಯಂಗ್ಯ, ವಿಷಾದದಿಂದ ನೋಡುತ್ತಾ ಜಾತಿಯ ಕುರಿತು ‘ಬಿಡಲಿಲ್ಲ ಬೆನ್ನ ಬೇತಾಳ’ ಎಂದು ವರ್ಣಿಸಿ ‘ಈಗ ನಿನ್ನ ಸರದಿ ಮಗನೆ’ ಎಂದು ನಿಟ್ಟುಸಿರಿಡುತ್ತಾರೆ. ಆದರೆ ‘ಆತ್ಮಸಾಕ್ಷಿಗೆ ವಿರುದ್ಧ ಹೋಗಬೇಡ’ ಎಂಬ ಕೆಚ್ಚೂ ಜೊತೆಗಿದೆ.

‘ಆಧುನಿಕತೆಯ ಗುಮ್ಮು’ ಪ್ರತ್ಯೇಕತೆಯನ್ನು ನಾಗರಿಕತೆಯ ಗುಣವಾಗಿಸುತ್ತಿರುವ ಆಧುನಿಕತೆಯ ಮನೋಭಾವವನ್ನು ಟೀಕಿಸಿದೆ. ಹಳೆದಾರಿಗೆ ಹೊಸದಾರಿ ಬೆಸೆಯದೇ ಹೋದರೆ ವಿಕಲಾಂಗ ಸೃಷ್ಟಿಯೇ ಕಟ್ಟಿಟ್ಟ ಬುತ್ತಿ ಎಂದು ಕವಿ ಎಚ್ಚರಿಸುತ್ತಾರೆ. ‘ಕಾಲನ ನಾಡಿ ಹಿಡಿದು ಮೌಲ್ಯವನಳೆದು ಉತ್ತಿ ಬಿತ್ತಿ ಬೆಳೆದುಂಡು ನೀರಾಗಿ ಹರಿವ’ ಸಾಧ್ಯತೆಯೂ ನಮಗಿದೆ. (‘ಭವಕಾಲ ಮೌಲ್ಯ’).

ಇನ್ನೂ ಕೆಲವು ಮುಖ್ಯ ಕವಿತೆಗಳನ್ನು ಗಮನಿಸೋಣ:

1. ಹಂಸಾಗ್ನಿಯ ಧ್ಯಾನ
ತೃತೀಯ ಜಗತ್ತಿನ ದನಿ ಸಾಮ್ರಾಜ್ಯಶಾಹಿ ರಾಷ್ಟ್ರಗಳಿಗೆ ಕೇಳುತ್ತಿಲ್ಲ, ಕೇಳುವ ಆಸೆಯೂ ಅವುಗಳಿಗಿಲ್ಲ. ‘ತಲೆಯ ಮೇಲೆ ಉದಾರೀಕರಣದ ತುಪ್ಪದ ಗಡಿಗೆ ಹೊತ್ತು’ ತೃತೀಯ ರಾಷ್ಟ್ರಗಳು ಶೇಖ ಮಹಮ್ಮದನಂತೆ ಕನಸು ಕಾಣುತ್ತಿವೆ. ‘ಪಡ್ಡೆಹೈದರು’, ‘ಕೂಲಿ ಕೆಲಸ’ ಕಳೆದುಕೊಂಡಿದ್ದಾರೆ. ಸ್ವಾಭಿಮಾನ ಬಿಟ್ಟು ಬದುಕುವುದೆ? ‘ಒಳಗೆ ಕುದಿಕುದಿವ ನೀರಹಬೆ, ಹೊರಗೆ ಉರಿವ ಬೆಂಕಿ ಬೆವರು’- ಅಂತರಂಗ, ಬಹಿರಂಗದಲೂ ಕುದುರೆಯೋಟದ ಸ್ಪರ್ಧೆ! ಯಾವುದೂ ನಿಶ್ಚಿತವೆನಿಸದ ಸ್ಥಿತಿಯಲ್ಲಿ ಹಂಸಾಗ್ನಿಯಲೇ ಶ್ವೇತಹಂಸದ ಮಾರ್ಗ ಹುದುಗಿದೆ ಎಂದು ಕವಿತೆ ಕಂಡುಕೊಂಡಿದೆ. ‘ಮುಸ್ಸಂಜೆಯ ಚಂಬೆಳಕಲಿ ರಥವೇರಿ ಬರಲಿ ಯುಗಾಂತರ’ (‘ತಮಂಧದದ್ಭುತ’)

2. ‘ತಾಜ್ - ಅವರು ಮತ್ತೆ ಬರುತ್ತಾರೆ’
ಭಾರತವನ್ನು ಕಾಡುತ್ತಿರುವ ನವನೂತನ ಪಿಡುಗು ಭಯೋತ್ಪಾದನೆಯ ಕರಿಹೊಗೆಯನ್ನು ಈ ಕವಿತೆ ಆತಂಕದಿಂದ ನೋಡಿದೆ, ಕೆಚ್ಚಿನಿಂದ ಉತ್ತರಿಸಿದೆ. ‘ಉಗ್ರರೆ, ಹಾವಾಗಿ ನಮ್ಮ ಎದೆ ಹುತ್ತ ಹೊಗದಿರಿ’ ಎಂದು ಕೋರುವ ಈ ಕವಿತೆ ಭಯೋತ್ಪಾದನೆಯ ಮೂಗು ಹಿಡಿಯದೆ ಶಾಂತಿಯ ಬಾಯಿ ತೆರೆಯದು ಎಂಬ ನಿಲುವನ್ನು ಹೊಂದಿದೆ. ‘ಯುದ್ಧ ಮದ್ದಲ್ಲ ಪಿಡುಗಿಗೆ’. ಆದರೂ ಒಂದು ಸಂದೇಹ. ‘ಬುದ್ಧಿ ಬರುವುದು ಯುದ್ಧದಿಂದಲೆ?’ ಕವಿತೆಯ ಬಹುಮುಖ್ಯ ನೆಲೆಯೆಂದರೆ ‘ಗುಟುಕು ನೀರಿಗೆ ಸಮನಲ್ಲ ಧರ್ಮ, ತುತ್ತನ್ನಕ್ಕೆ ಸಾಟಿಯಲ್ಲ ಅಣ್ವಸ್ತ್ರ’ ಎಂಬ ತಿಳಿವಳಿಕೆ. ಚರಿತ್ರೆಯಿಂದ ಪಾಠ ಕಲಿಯದೇ ಹೋದರೆ ಮತ್ತೆ ಇಂಥ ಕರಿಹೊಗೆ ಕಾಣಬೇಕಾಗುತ್ತದೆ ಎಂಬ ದುಗುಡ ಕವಿಗಿದೆ.

3. ‘ಮಾಕಾವ್ಯ’
ಇಡೀ ಸಂಕಲನದಲ್ಲೇ ಇದು ಹೆಚ್ಚು ದೀರ್ಘ ಕವನ. ಚಿವುಟಿ ಹಾಕಿದರೂ ಉದ್ದುದ್ದ ಬೆಳೆಯುವ, ಬಳ್ಳಿ ಅಡ್ಡಡ್ಡ ಜಿಗಿಯುವ ಸೃಷ್ಟಿಯ ವಿಲಾಸ ಇಲ್ಲಿ ಮನುಷ್ಯ ಸೃಷ್ಟಿಸಿಕೊಳ್ಳುವ ನರಕಕ್ಕೆ ಪ್ರತೀಕವಾಗಿದೆ. ಇದೊಂದು ಬಗೆಯ ‘ಒಡೆಯಲಾರದ ಒಗಟು’.

ವಿಷಮೊಲೆಯನುಂಡು ಹಸುಗೂಸುಗಳು ಬೆಳೆದು ಹಾಲಾಹಲವನ್ನೇ ಕಕ್ಕಿವೆ. ಬಿತ್ತುವ ಭೂಮಿಗೆ ಬೇಲಿ, ಕಡಲ ಸೇರುವ ನೀರಿಗೆ ತಡೆ, ಸುಳಿವ ಗಾಳಿಗೆ ಪಹರೆ!. ‘ಮುಚ್ಚಲಿಲ್ಲ ಯಾರು ಹೆರವರು ಮನೆ ಬಾಗಿಲು! ಮುಚ್ಚಿಕೊಂಡರವ್ವ ತಾವೇ ತಮ್ಮ ಮನೆ ಬಾಗಿಲು’. ಮುಟ್ಟಿದರೆ ಮುನಿಯುವ ಆಳ ಬಾಳು ಕೆಲ ಮಕ್ಕಳದು - ಹಡೆದವ್ವ ಒಬ್ಬಳೇ! ಆದರೂ ‘ಮುಟ್ಟಿದರೂ ಹೊಲೆ, ಮುಟ್ಟಾದರೂ ಹೊಲೆ, ಹೆತ್ತರೂ ಹೊಲೆ, ಸತ್ತರೂ ಹೊಲೆ’. ಮುಳ್ಳಬೇಲಿಗಳು ಅಳಿದು, ಕಳ್ಳುಬಳ್ಳಿಗಳು ಬೆಳೆದು ಎಲ್ಲರೂ ಒಂದಾಗಿ ಬದುಕಬೇಕೆಂದರೆ-

ಹಿಡಿ ನೀ ನನ್ನ ಕೈಹಿಡಿವೆ ನಾ ನಿನ್ನ ಕೈಭಾಗಾದಿಗಳು ಕೂಡಿ ಧುಮ್ಮಿಕ್ಕಲಿಹರಿಯಲಿ ಹಾಲ ಹಳ್ಳವಾಗಿ ಜಾತಿ ತಾರತಮ್ಯದ ಸಮಾಜಕ್ಕೆ ಹೊಸ ಕನಸನ್ನು ಕೊಟ್ಟು, ಹೊಸ ಸಾಧ್ಯತೆಯನ್ನು ಒದಗಿಸಿ ಈ ಕವಿತೆ ಕೃತಾರ್ಥವಾಗಿದೆ. ಈ ಕವಿತೆಯ ಮುಂದಿನ ಭಾಗವಾಗಿಯೇ ‘ಬಿಟ್ಟು ಬಿಡಿ ಅವನನು’ ಪುಟ್ಟ ಕವಿತೆಯನ್ನು ಓದಿಕೊಳ್ಳಬಹುದು.

‘ನೆಲ ಮುಗಿಲಿಗೆ ಹೊಲಿಗೆ ಹಾಕುವ ಕನಸು’ ಹೊತ್ತ, ಹೊಸ ಬೀಜದುಳುಮೆಯ ಉತ್ಸಾಹದ ‘ಅವನು’ ನಿದ್ದೆಯಿಂದ ಎಚ್ಚತ್ತಿದ್ದಾನೆ. ಇನ್ನು ಅವನು ಮಲಗುವುದಿಲ್ಲ. (ಕವಿ ಅವನನ್ನು ಮಲಗಲು ಬಿಡುವುದೂ ಇಲ್ಲ, ಓದಿ: ‘ಕಲ್ಪದ ಕಂದ’). ಅಷ್ಟೇ ಅಲ್ಲ ‘ಆತ ನೆಲದ ಮೇಲೆಯೆ ನಡೆಯುವವ’ - ಈ ನೆಲ ಅವನದೆ, ಅದನ್ನು ಪಾಳು ಬಿಡುವುದು ಆತನಿಗೆ ಇಷ್ಟವಿಲ್ಲ. ಇಂಥ ವಿಕಸಿತ ಮನದಲ್ಲಿ ಹುಟ್ಟುವುದು ಕೃತಜ್ಞತಾಭಾವ:

ಹಳೆಯ ಬೇರಿನಿಂದ ಬಂದ ಹೊಸ ಚಿಗುರೆಲೆಈಗ ತಾನೆ ಅರಳಿನಿಂದ ಹೂವು ಕೋಮಲೆಇಳೆಗೆ ಇಳಿಯೆ ಇಳಿದು ಬಂದ ಸಸ್ಯಶ್ಯಾಮಲೆನಮೋ ನಮೋ ತಾಯಿ ನಿನಗೆ ಗುಪ್ತ ಶ್ಯಾಲ್ಮಲೆ

ಇದಕ್ಕೆ ಪ್ರತಿಯಾಗಿ ನಿರಾಸೆ ಕವಿಯುವುದೂ ಇದೆ:

‘ಏನು ಬಿತ್ತಿ ಏನು ಬೆಳೆದೆ
 ನೀನು ನಂಬಿದ ನೆಲದಲಿ
ಎಷ್ಟು ರಾಶಿಮಾಡಿ ತುಂಬಿದೆ
ತಳವನಿಲ್ಲದ ತಡಪೆಲಿ’

ADVERTISEMENT

‘ವ್ಯರ್ಥ ಬದುಕಿನ ಅರ್ಥ ತಿಳಿಸಿದ’ ನಾ ಕಲಿತ ಸಾಲಿ, ‘ಕೆಸರೊಳಗೆ ಹೂತಂತೆ ಭವಭಾವದ ಕೋಶ, ಹಗಲಿರುಳು ಅಗೆಯುತಿಹೆ ನಿಲುಕದ ಆಕಾಶ’ ಎನ್ನುವ ‘ದಾರಿ ಅತಿ ದೂರ’, ಬೆಳಕಿನ ರುಚಿ, ದಾರಿ ತೋರಿ ಮರೆಯಾದವನನ್ನು ಆದರದಿಂದ ನೆನೆಯುವ ‘ದಾರಿ’, ಕತ್ತಲಾಗದ ದಾರಿಯ ಬೆಳಕಿಗಾಗಿ ಕಾಯುತ್ತಿರುವ ‘ಕತ್ತಲಾಗದ ದಾರಿ’, ‘ಬೇರು ಬಿಡದ ಹೆಸರು ಇಲ್ಲದ’ ಮರವಾಗುವ ಕನಸಿನ ‘ಜಂಗಮ ಮರವಾಗುವೆ’, ಯುಗದ ಗೀತೆ ಬರೆಯುವ, ರೆಕ್ಕೆಗಳಿಗಾಗಿ ಹಂಬಲಿಸುವ ‘ಇಂದ್ರ ಸಿಕ್ಕ ಚಂದ್ರ ಸಿಕ್ಕ’.

ಹೆಸರಿಸಬೇಕಾದ ಕೆಲ ಗೇಯ ಕವಿತೆಗಳು ‘ವಿಶ್ವತೋಮುಖ’ ತಾತ್ತ್ವಿಕವಾಗಿ ಶೋಧಿಸಿದ್ದನ್ನು ಭಾವದಲೆಗಳಲ್ಲಿ ಅದ್ದಿ ತೆಗೆದ ಈ ಹಾಡುಗಳು ಆ ಕವಿತೆಗಳಿಗೊಂದು ಉತ್ತಮ ಚೌಕಟ್ಟು ಕಟ್ಟಿವೆ ಎನ್ನಬಹುದು.

ಮಾಲಗತ್ತಿಯವರ ಕವಿತೆಗಳು ಒಳಗೊಳ್ಳ ಹೊರಟಿರುವ ಆಧುನಿಕ ಭಾರತದ ಆಧುನಿಕ ಸಂಕ್ಷೋಭೆಗಳ ದಾವಾನಲ ಅಲಕ್ಷಿಸುವಂಥದಲ್ಲ. ಕವಿಯಾಗಿ ಅವರು ತನ್ನ ಜವಾಬ್ದಾರಿಯನ್ನು ಹೊತ್ತು ನಿಂತಿದ್ದಾರೆ. ಅವರದು ನಿದ್ದೆಯಿಲ್ಲದ, ಬಿಡುವಿಲ್ಲದ ಕಾಯಕ.
 
ವಿಶ್ವರಾಜಕೀಯ ಭಾರತದಂಥ ರಾಷ್ಟ್ರಗಳನ್ನು ತನ್ನ ಭದ್ರ ಮುಷ್ಠಿಯಲ್ಲಿರಿಸಿಕೊಳ್ಳಲು ನೋಡುತ್ತಿದೆ. ಅದಕ್ಕಾಗಿ ದೊಡ್ಡಣ್ಣಂದಿರು ಒಡ್ಡುವ ಪ್ರಲೋಭನೆಗಳೂ ಆಕರ್ಷಣೀಯವಾದವು. ಇವನ್ನೆಲ್ಲ ಅರಿತು ಭೇದಿಸುವುದು ತನ್ನ ಕರ್ತವ್ಯವೆಂದು ಈ ಕವಿ ತಿಳಿಯುತ್ತಾರೆ. ವಿಶ್ವಶಾಂತಿ ಅವರ ಲಕ್ಷ್ಯ.

ಚಿಂತನೆ, ಶೋಧನೆಗಳೊಂದಿಗೆ ಕ್ರಿಯಾಶೀಲವಾಗಿ ಹೊಸ ವಾಸ್ತವವನ್ನು ಅವರು ಎದುರಿಸುತ್ತಿದ್ದಾರೆ. ಆ ಮೂಲಕ ಹೊಚ್ಚ ಹೊಸದಾದ ಕಾವ್ಯ ಮಾದರಿಯನ್ನೂ ಅವರು ಕಟ್ಟುತ್ತಿದ್ದಾರೆ.

ವಿಶ್ವತೋಮುಖ ಹೂ ಬಲು ಭಾರ
ಲೇ: ಅರವಿಂದ ಮಾಲಗತ್ತಿ; ಬೆ: ರೂ. 150; ಪ್ರ: ಸಿರಾ ಪಬ್ಲಿಷಿಂಗ್ ಹೌಸ್, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.