ADVERTISEMENT

ಕಾಣದ ಕಡಲಿಗೆ ದ್ವಂದ್ವಗಳ ಹಾದಿ

2015 ನನ್ನ ಇಷ್ಟದ ಪುಸ್ತಕ

ಚಿಂತಾಮಣಿ ಕೊಡ್ಲೆಕೆರೆ
Published 2 ಜನವರಿ 2016, 19:30 IST
Last Updated 2 ಜನವರಿ 2016, 19:30 IST

‘ಮೂರ್ತಿ’ (ಮಾರುತಿ ಅಂಕೋಲೆಕರ) ಎಪ್ಪತ್ತರ ದಶಕದಲ್ಲಿ ಹಲವು ಮಹತ್ವದ ಕಥೆಗಳನ್ನು ಬರೆದು ಗಂಭೀರ ಸಾಹಿತ್ಯಾಸಕ್ತರ ಗಮನ ಸೆಳೆದವರು. ಅವರ ಆ ಕತೆಗಳಲ್ಲಿ ಹತ್ತನ್ನು ಒಟ್ಟುಗೂಡಿಸಿ ಈ ವರ್ಷ ಅವರ ಮೊದಲ ಕಥಾ ಸಂಕಲನ ಪ್ರಕಟವಾಯಿತು. ‘ಈ ಕತೆಗಳು ಪ್ರಕಟವಾದ ಕಾಲ ಕನ್ನಡ ಸಾಹಿತ್ಯದ ಸಂಕ್ರಮಣದ ಕಾಲ. ನನ್ನ ಬದುಕಿನಲ್ಲಿ ಶೀಘ್ರ ಸ್ಥಿತ್ಯಂತರಗಳ ಕಾಲವೂ ಆಗಿತ್ತು’ ಎಂದು ನೆನೆಯುವ ಈ ಕತೆಗಾರ ತನ್ನ ಕತೆಗಳು ‘ಸುಕುಮಾರ ಜೀವದ ದ್ವಂದ್ವಗಳಿಗೆ ದನಿ ಕೊಡುವ’, ‘ಮಾತಿಗೆ ಮೀರಿದ ಆಳದಲ್ಲಿ ಒಡಮೂಡಿದ’ ಆಕೃತಿಗಳೆಂದು ತಿಳಿಯುತ್ತಾರೆ.

‘ಮನುಷ್ಯರ ಪಾಡು ಅಂತರಂಗದ ಆಖ್ಯಾನದ ಸ್ವರೂಪದಲ್ಲಿ ಪ್ರಕಟಗೊಂಡು ಭಾವಶಿಲ್ಪಗಳಾಗಿವೆ’ ಎಂಬುದು ಅವರು ತಮ್ಮ ಕತೆಗಳ ಕುರಿತು ಆಡುವ ಮತ್ತೊಂದು ಮಹತ್ವದ ಮಾತು. ಈ ಮಾತುಗಳನ್ನು ಇಷ್ಟೊಂದು ವಿವರವಾಗಿ ಹೇಳುವುದಕ್ಕೆ ಕಾರಣ, ಇತ್ತೀಚಿನ ದಶಕಗಳಲ್ಲಿ ಕನ್ನಡ ಕಥಾ ನಾಯಕರ ಮನೋಧರ್ಮದಲ್ಲಿ ಆಗಿರುವ ವಿಪರೀತವೆನಿಸುವ ಬದಲಾವಣೆಗಳು. ಸಾಮಾಜಿಕ ಸಂಕಥನಗಳು ಮುಂಚೂಣಿಗೆ ಬಂದು ನಿಂತಿರುವ ಈ ಕಾಲ ಘಟ್ಟದಲ್ಲಿ ಇಲ್ಲಿಯ ಕತೆಗಳು ಪ್ರತ್ಯೇಕವೆನಿಸುವ ಒಂದು ಜಗತ್ತನ್ನು ನೋಡಲು ಆಹ್ವಾನಿಸುತ್ತಿವೆ. ಅನುಭವಗಳ ತಾತ್ವಿಕ ಚಿಂತನೆಗೈವ ಮಥನಕಾರನೊಬ್ಬ ಅವರ ಇಡೀ ಕಥಾಲೋಕದಲ್ಲಿ ಸಂಚರಿಸುತ್ತಿದ್ದಾನೆ. ಈ ಪುಟ್ಟ ಟಿಪ್ಪಣಿಗಾಗಿ ಅವರ ಎರಡು ಕತೆಗಳನ್ನಷ್ಟೆ ಇಲ್ಲಿ ಸಮೀಕ್ಷಿಸಿದೆ.

‘ಕಾಣದ ಕಡಲ ಹಾದಿ’ಯ ನಿರೂಪಕ ಶಿಕ್ಷಿತ, ಚಿಂತನಶೀಲ ಯುವಕ. ನಿರುದ್ಯೋಗದ ಸಂಕಷ್ಟ ಎದುರಿಸಿದವನು. ಒಟ್ಟು ಕುಟುಂಬದಲ್ಲಿ ಅಕ್ಕನ ಪ್ರೀತಿಯ ತಮ್ಮನಾಗಿ ಬೆಳೆದ ಈತನಿಗೆ ಜೀವನದ ದಾರಿಗಳು ತೆರೆಯುತ್ತಾ ಹೋದಂತೆ ಮುಗ್ಧತೆಯನ್ನು ಕಳೆದುಕೊಳ್ಳದ ಒಳ ನೋಟಗಳ ಪ್ರಬುದ್ಧತೆ ಪ್ರಾಪ್ತವಾಗುತ್ತಾ ಹೋಗುತ್ತದೆ. ಗೆಳೆಯ ಶಂಕರ ಜೀವನದ ತೀರ ವಿಲಕ್ಷಣ ಸಾಧ್ಯತೆಗಳನ್ನೆಲ್ಲ ಇವನಿಗೆ ತೋರಿಸಿ ದಿಗ್ಭ್ರಮೆ ಮೂಡಿಸುತ್ತಾನೆ. ಅಕ್ಕನ ಮಗಳು ರಮಾಳ ಸಂದಿಗ್ಧವೊಂದರಲ್ಲಿ ನೈತಿಕ ಪ್ರಜ್ಞೆಯದೋ ಜವಾಬ್ದಾರಿಯದೋ ಯಾವುದೇ ವೈಭವೀಕೃತ ತೋರುಗಾಣ್ಕೆಯಿಲ್ಲದೆ ಅವಳ ಕೈ ಹಿಡಿದು ನಿಲ್ಲುವ ಇವನು ‘ಯಾವ ಸದ್ದಿಗೂ ಅರ್ಥವಿಲ್ಲ; ನಾವು ಹಚ್ಚಿದರೆ ಇರುತ್ತದೆ.

ನಾವು ಅರ್ಥ ಹಚ್ಚಿದ ಸದ್ದುಗಳ ಸಮುದಾಯವನ್ನೇ ಭಾಷೆ ಎನ್ನುವುದಲ್ಲವೆ?’ ಎಂದು ಕೇಳಿಕೊಳ್ಳುತ್ತ ಸಮುದ್ರದ ಮೊರೆತದೊಡನೆ ತಾದಾತ್ಮ್ಯ ಪಡೆಯಬಲ್ಲವನು,, ‘ನೋವಿನರ್ಥ ತಿಳಿದವರುಂಟೇ?’ ಎಂದು ದುಗುಡದಲ್ಲಿ ಕೇಳಿಕೊಳ್ಳಬಲ್ಲವನು. ಇವನ ಚಿಂತನೆಯ ವಿನ್ಯಾಸಗಳು ಕಾಣದ ಕಡಲಿನ ಕಡೆ ಹೊರಟ ನದಿಗಳ ಪಯಣವನ್ನು ದಟ್ಟಗೊಳಿಸಿವೆ. ‘ಬರಿದೆ ಇಪ್ಪತ್ತು ಮತ್ತೈದು’ ಕತೆಯಲ್ಲಿ ‘ಶಾಲ್ಮಲೆ ಹರಿಯುವುದು ಯಾಕೆ, ಅಂಗಳದಲ್ಲಿ ತುಳಸಿ ಚಿಗುರುವುದು– ಮಲ್ಲಿಗೆ ಬಳ್ಳಿ ಮೊಗ್ಗು ಹಿಡಿಯುವುದು ಯಾಕೆ ಎಂದು ಯಾರಿಗಾದರೂ ಗೊತ್ತೆ?’ ಎಂದು ಕೇಳುವ ಲಲಿತ ಇದ್ದಾಳೆ. ಈಡೇರದ ಕನಸುಗಳ ಇಪ್ಪತ್ತೈದು ವರ್ಷಗಳೆಂದು ನೋವಿನಲ್ಲಿ ಕುದಿಯುವ ಹರ್ಷ ಇದ್ದಾನೆ. ಪಕ್ಕಾ ವ್ಯಾವಹಾರಿಕ ಮನುಷ್ಯ ಮೊಕ್ತೇಸರ ಭಟ್ಟರಿದ್ದಾರೆ.

ಜೀವನಕ್ಕೆ ಅರ್ಥ ಕಲ್ಪಿಸುವ ಲಲಿತಕ್ಕನ ಆಶಯ, ಅಂಥ ಅರ್ಥಗಳಾಚೆಗಿನ ಜೀವನದ ಅನಂತ ಸ್ವರೂಪದ ಕುರಿತು ಇರುವ ಅರಿವಿನಲ್ಲಿ ತೊಳಲಾಡುವ ನಾಯಕ, ಆ ಅರ್ಥ ರಚನೆಯಲ್ಲಿ ಪಾಲುಗೊಳ್ಳುತ್ತಲೇ ತನ್ನ ಜೀವನದ ಅರ್ಥ ಕಾಣಲು ಹೋರಾಡಬೇಕಾಗಿರುವ ಸೀತಾ ಈ ಮೂರೂ ಪಾತ್ರಗಳ ಗಂಭೀರ ನೋಟಗಳು ಈ ಕತೆಯ ಅನುಭವವನ್ನು ಅನೂಹ್ಯವಾಗಿ ವಿಸ್ತರಿಸುತ್ತ ಹೋಗುತ್ತವೆ. ತತ್ತ್ವಶೋಧನೆಯಿಂದ ಬಾಳಿನರ್ಥ ತಿಳಿಯ ಬಯಸುವ ಮೂರ್ತಿಯವರ ಕತೆಗಳು ಕನ್ನಡ ಕಥಾ ಸಾಹಿತ್ಯಕ್ಕೆ ಬಹು ಮುಖ್ಯ ಸೇರ್ಪಡೆಗಳಾಗಿವೆ. 
*
ಆಖ್ಯಾನ (ಕತೆಗಳು)
ಲೇ:
ಮೂರ್ತಿ (ಮಾರುತಿ ಅಂಕೋಲೆಕರ)
ಪುಟ: 224
ರೂ. 200
ಪ್ರ: ಕ್ರೈಸ್ಟ್ ಯೂನಿವರ್ಸಿಟಿ, ಕನ್ನಡ ಸಂಘ, ಹೊಸೂರು ರಸ್ತೆ, ಬೆಂಗಳೂರು-560 029

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.