ADVERTISEMENT

ಕೂಡಿಸಿ ಅರಿಯುವ ಅಪೂರ್ವ ಆಟ

ವಿಮರ್ಶೆ

ಟಿ.ಪಿ.ಅಶೋಕ
Published 12 ಮಾರ್ಚ್ 2016, 19:30 IST
Last Updated 12 ಮಾರ್ಚ್ 2016, 19:30 IST
-ಪು:88 ರೂ.95
-ಪು:88 ರೂ.95   

ಸೇತುಬಂಧನ ಹತ್ತು ದೃಶ್ಯಗಳ ಒಂದು ಸಂಭವನೀಯ ಸ್ವಭಾವೋಕ್ತಿ (ನಾಟಕ)
ಲೇ:
ಅಕ್ಷರ ಕೆ.ವಿ.
ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ

ತಮ್ಮ ಬಹುಮುಖಿ ಸಾಧನೆಯಿಂದ ನಾಡಿನ ಗಮನ ಸೆಳೆದಿರುವ ಕೆ.ವಿ. ಅಕ್ಷರ ಅವರು ಸಮಕಾಲೀನ ನಾಟಕ–ರಂಗಭೂಮಿ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟ ಛಾಪು ಮೂಡಿಸಿದ್ದಾರೆ. ನಾಟಕಕಾರ, ಅನುವಾದಕ, ರೂಪಾಂತರಕಾರ, ನಿರ್ದೇಶಕ, ವಿದ್ವಾಂಸ, ವಿಮರ್ಶಕ, ರಂಗ ಶಿಕ್ಷಕ, ಸಂಘಟಕ– ಹೀಗೆ ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲ ಸಂಗತಿಗಳಲ್ಲಿ ತೊಡಗಿಕೊಂಡ ಸಮೃದ್ಧ ವ್ಯಕ್ತಿತ್ವ ಇವರದು. ತಮ್ಮ ಜೀವಮಾನದ ಸಾಧನೆಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನೂ ಗಳಿಸಿರುವ ಅಕ್ಷರ ತಮ್ಮ ಅಂಕಣಗಳಿಂದಲೂ ಚಿಂತನಪರ ಬರಹಗಳಿಂದಲೂ ಖ್ಯಾತರಾಗಿದ್ದಾರೆ. ‘ಸೇತುಬಂಧನ’ ಅವರ ಐದನೆಯ ನಾಟಕ.

ಈ ನಾಟಕವನ್ನು ಒಂದು ಸ್ವತಂತ್ರ ನಾಟಕವಾಗಿಯೂ ಹಾಗೂ ಅಕ್ಷರ ಅವರ ಹಿಂದಿನ ನಾಟಕಗಳಾದ ‘ಸ್ವಯಂವರ ಲೋಕ’ ಮತ್ತು ‘ಭಾರತ ಯಾತ್ರೆ’ಗಳ ಮುಂದುವರೆದ ಭಾಗವಾಗಿಯೂ ಓದಬಹುದು. ಅಂದರೆ ‘ಸ್ವಯಂವರ ಲೋಕ’, ‘ಭಾರತ ಯಾತ್ರೆ’ ಮತ್ತು ‘ಸೇತುಬಂಧನ’ ನಾಟಕಗಳನ್ನು ಸಮಗ್ರವಾಗಿ  ಒಂದು ತ್ರಿವಳಿ ಎಂಬಂತೆಯೂ ಅಥವಾ ಬಿಡಿ ಬಿಡಿ ನಾಟಕಗಳಾಗಿಯೂ ಪರಿಗಣಿಸಬಹುದು. ಈ ಕುರಿತು ಸ್ವಲ್ಪ ವಿವರಣೆ ಅಗತ್ಯ.

‘ಸ್ವಯಂವರ ಲೋಕ’ ನಾಟಕವು ಹಳೆಯೂರು ಎಂಬ ದ್ವೀಪವೊಂದರಲ್ಲಿ ನಡೆಯುತ್ತದೆ. ಅಭಿವೃದ್ಧಿಗಾಗಿ ನದಿಯೊಂದಕ್ಕೆ ಅಣೆಕಟ್ಟು ಕಟ್ಟಿದ ಪರಿಣಾಮವಾಗಿ ಹಳೆಯೂರು ಒಂದು ದ್ವೀಪವಾಗಿದೆ. ಅದು ಒಂದು ಹಿಂದುಳಿದ ಪ್ರದೇಶ. ಹೊರ ಜಗತ್ತು ವೇಗವಾಗಿ ಚಲಿಸುತ್ತಿದೆ. ಹಾಗಾಗಿ ವಿದ್ಯಾಭ್ಯಾಸ, ಉದ್ಯೋಗ, ಹೊಸಜೀವನಗಳನ್ನು ಅರಸಿ ಅಲ್ಲಿನ ಅನೇಕರು ಪಟ್ಟಣ ಸೇರುತ್ತಿದ್ದಾರೆ. ಈ ನಾಟಕದ ಕೇಂದ್ರ ಪಾತ್ರವಾದ ರಾಮಕೃಷ್ಣ ಜೋಯಿಸರ ಮಕ್ಕಳೂ ಆಧುನಿಕ ವಿದ್ಯಾಭ್ಯಾಸ ಪಡೆದು ನಗರಗಳಲ್ಲಿ ನೆಲೆಸಿದ್ದಾರೆ.

ಜೋಯಿಸರು ತಮ್ಮ ಮಗಳು ಭಾಮೆ ಮತ್ತು ದೂರದ ಸಂಬಂಧಿ ಕಿಟ್ಟುವಿನೊಂದಿಗೆ ಹಳೆಯೂರಿನಲ್ಲಿಯೇ ಉಳಿದಿದ್ದಾರೆ. ‘ಒಂದು ಅಸಂಭವನೀಯ ಅನ್ಯೋಕ್ತಿ’ ಎಂಬ ಉಪಶೀರ್ಷಿಕೆಯನ್ನು ಹೊತ್ತ ಈ ನಾಟಕದಲ್ಲಿ ಭಾಮೆಗೆ ಒಂದು ಸ್ವಯಂವರ ಏರ್ಪಾಟಾಗುತ್ತದೆ. ಅಮೆರಿಕ, ರಷ್ಯಾ, ಚೀನಾ, ಸ್ವಿಟ್ಜರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಿಂದ ತಲಾ ಒಬ್ಬ ವರ ಸ್ವಯಂವರದಲ್ಲಿ ಭಾಗವಹಿಸುತ್ತಾರೆ. ಅಂದರೆ ಭಾಮೆಯ ಮುಂದೆ ಐದು ಆಯ್ಕೆಗಳಿವೆ.

ನಾಟಕದ ಒಟ್ಟೂ ಗತಿ ಮತ್ತು  ಸಂದರ್ಭವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಸಮಕಾಲೀನ ಭಾರತದ ಮುಂದೆ ಇರುವ ಆಯ್ಕೆಗಳೂ ಅಲ್ಲವೆ ಎಂದು ಅಕ್ಷರ ಅವರ ನಾಟಕವು ಅನ್ಯೋಕ್ತಿಯ ಮೂಲಕ ಧ್ವನಿಸುವಂತಿದೆ. ಅಂತಿಮವಾಗಿ ಭಾಮೆ ಯಾರನ್ನೂ ಆರಿಸಿಕೊಳ್ಳುವುದಿಲ್ಲ. ನಾಟಕದ ಕೊನೆಯಲ್ಲಿ ರಾಮಕೃಷ್ಣ ಜೋಯಿಸರು ಬದರೀನಾಥಕ್ಕೆ ಯಾತ್ರೆ ಹೋಗಲು ನಿರ್ಧರಿಸುತ್ತಾರೆ. ತಮ್ಮನ್ನು ಕಾಡುತ್ತಿರುವ ಸಂಕೀರ್ಣ ಪ್ರಶ್ನೆಗಳಿಗೆ ಈ ಯಾತ್ರೆಯಿಂದ ಏನಾದರೂ ಉತ್ತರಗಳು – ಪರಿಹಾರಗಳು ಸಿಗಬಹುದು ಎಂಬುದು ಅವರ ಆಶಯ.

ಈ ಶೋಧ ಮುಂದಿನ ನಾಟಕ ‘ಭಾರತ ಯಾತ್ರೆ’ಯಲ್ಲಿ ಮುಂದುವರೆಯುತ್ತದೆ. ತಮ್ಮ ಮಕ್ಕಳ ಮನೆಗಳಿಗೂ ಭೇಟಿ ನೀಡಿ ಅವರ ಜೀವನಕ್ರಮವನ್ನು ಜೋಯಿಸರು ಖುದ್ದಾಗಿ ಕಾಣುತ್ತಾರೆ. ಅದಕ್ಕಿಂತ ಮುಖ್ಯವಾಗಿ, ‘ಭಾರತ ಯಾತ್ರೆ’ಯಲ್ಲಿ ಜೋಯಿಸರು ವಿವಿಧ ವರ್ಗಗಳಿಗೆ, ಅಂತಸ್ತುಗಳಿಗೆ, ವೃತ್ತಿಗಳಿಗೆ ಸೇರಿದ ಹಲವಾರು ವ್ಯಕ್ತಿಗಳನ್ನು ಭೇಟಿಯಾಗುತ್ತಾರೆ. ಇವರಲ್ಲಿ ಮನೆಗೆಲಸದ ಹುಡುಗಿ, ರಿಕ್ಷಾ ಚಾಲಕ, ರಾಜಕಾರಣಿ, ಕ್ರಾಂತಿಕಾರಿ, ಕಂಪೆನಿಯೊಂದರ ಸಿ.ಇ.ಒ ಮುಂತಾಗಿ ಸಮಕಾಲೀನ ಭಾರತದ ಸದ್ಯದ ಪರಿಸ್ಥಿತಿ ಮತ್ತು ಆಶೋತ್ತರಗಳನ್ನು ಪ್ರತಿನಿಧಿಸುವಂಥ ಪಾತ್ರಮಾದರಿಗಳಿದ್ದಾರೆ.

ಇವರಿಗೂ ವೈಯಕ್ತಿಕವಾಗಿ ಹಲವಾರು ಪ್ರಶ್ನೆಗಳಿವೆ. ಅಂದರೆ ಬಗೆಬಗೆಯ ಜೀವನಕ್ರಮಗಳು, ಸಮಸ್ಯೆ–ಸವಾಲುಗಳ ಮೂಲಕ ಜೋಯಿಸರು ಸಮಕಾಲೀನ ಭಾರತವನ್ನು ಕಂಡುಕೊಳ್ಳುವ ಒಂದು ವಿನ್ಯಾಸ ಈ ನಾಟಕದಲ್ಲಿದೆ. ನಾಟಕದ ಕೊನೆಯಲ್ಲಿ ಜೋಯಿಸರಿಗೆ ಸಿದ್ಧ ಉತ್ತರಗಳೇನೂ ದೊರೆಯದಿದ್ದರೂ ಅವರ ಅನುಭವ ಹಿಗ್ಗಿದೆ, ತಿಳಿವಳಿಕೆ ವಿಸ್ತಾರಗೊಂಡಿದೆ. ಅವರು ಹಳೆಯೂರಿಗೆ ಮರಳಲು ನಿರ್ಧರಿಸುತ್ತಾರೆ. ಪ್ರಸ್ತುತ ‘ಸೇತು ಬಂಧನ’ ಪ್ರಾರಂಭವಾಗುವುದು ಇಲ್ಲಿಂದ. ಜೋಯಿಸರು ಮನೆ ಬಿಟ್ಟು ಸುಮಾರು ಎರಡೂವರೆ ವರುಷಗಳು ಸಂದುಹೋಗಿವೆ.

ಈ ಅವಧಿಯಲ್ಲಿ ಹಳೆಯೂರು ಅನೇಕ ಕ್ಷಿಪ್ರ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಮೊದಲ ದೃಶ್ಯದಲ್ಲಿ ಕಿಟ್ಟು, ಜೋಯಿಸರ ಆಗಮನವನ್ನು ನಿರೀಕ್ಷಿಸುತ್ತ  ಹಳೆಯೂರಿನ ಹೊಳೆಬಾಗಿಲಲ್ಲಿ ನಿಂತಿದ್ದಾನೆ. ‘‘ನಾಲ್ಕು ವರ್ಷದ ಕೆಳಗೆ ಈ ಊರಲ್ಲಿ ಏನಾದರೂ ಬದಲಾವಣೆ ಆಗಬಹುದು ಅಂತ ನಾನಾಗಲೀ ನೀವಾಗಲೀ ಕನಸಲ್ಲಾದರೂ ಕಂಡಿದ್ದೆವಾ? ಆದರೆ ಹೋದವರ್ಷ ಈ ಹೊಳೆಗೆ ಸರ್ಕಾರ ಒಂದು ಸೇತುವೆ ಕಟ್ಟತ್ತದೆ ಅಂತ ಘೋಷಣೆ ಮಾಡಿದ್ದೇ ತಡ, ಈ ಕೊಂಪೆಯ ಊರೇ ಇಡೀ ಜಗತ್ತಿನ ಕೇಂದ್ರ ಅನ್ನುವ ಹಾಗೆ ಇಲ್ಲಿಗೆ ಜನ ದಂಡುದಂಡಾಗಿ ಬರಲಿಕ್ಕೆ ಶುರು ಮಾಡಿದರು’’ ಎಂದು ಕಿಟ್ಟು ತನ್ನ ಸ್ವಗತದಲ್ಲಿ ಹಳೆಯೂರಿನ ಹೊಸ ವಿದ್ಯಮಾನಗಳನ್ನು ಸೂಚ್ಯವಾಗಿ ನಿರೂಪಿಸಿಬಿಡುತ್ತಾನೆ.

ಈ ನಾಟಕಕ್ಕೂ ಒಂದು ಉಪಶೀರ್ಷಿಕೆ ಇದೆ: ‘ಹತ್ತು ದೃಶ್ಯಗಳ ಒಂದು ಸಂಭವನೀಯ ಸ್ವಭಾವೋಕ್ತಿ’. ನಾಟಕದ ದೃಶ್ಯವಿನ್ಯಾಸಗಳು, ಸನ್ನಿವೇಶಗಳು ಬೆಳೆಯುವ ರೀತಿ ಮತ್ತು ಪಾತ್ರಗಳ ಬದಲಾದ ಜೀವನಕ್ರಮಗಳು ಮತ್ತು ಆಶೋತ್ತರಗಳಲ್ಲಿ ಈ ಶೀರ್ಷಿಕೆಯ ಸೂಚನೆ ಬೆಳೆಯುತ್ತಾ ಹೋಗಿ ಹಿಂದುಳಿದ ಒಂದು ಪ್ರದೇಶವು ಅಭಿವೃದ್ಧಿ ಹೊಂದುವ ಪ್ರಕ್ರಿಯೆಯ ಇಕ್ಕಟ್ಟು–ಬಿಕ್ಕಟ್ಟುಗಳು ಗೋಚರವಾಗುತ್ತ ಹೋಗುತ್ತವೆ. ಅಕ್ಷರ ಅವರ ನಾಟಕಗಳನ್ನು ಒಟ್ಟಾಗಿ ನೋಡಿದರೆ ಅವು ಸದ್ಯದ ಸನ್ನಿವೇಶಗಳು ಮತ್ತು ಸಮಸ್ಯೆಗಳ ಸುತ್ತ ಹೆಣೆಯಲಾಗಿದ್ದರೂ ವಾಸ್ತವವಾದೀ ಮಾರ್ಗವನ್ನು ಲೇಖಕರು ಪ್ರಜ್ಞಾಪೂರ್ವಕ ಬಿಟ್ಟುಕೊಟ್ಟಿರುವ ಹಾಗೆ ಕಾಣುತ್ತದೆ.

ಇವರ ನಾಟಕಗಳಲ್ಲಿ ಐತಿಹ್ಯಗಳು, ದಂತಕಥೆಗಳು, ಅನ್ಯೋಕ್ತಿಗಳು, ಅತಿಶಯೋಕ್ತಿಗಳು ಧಾರಾಳವಾಗಿ ಬಳಕೆಯಾಗುತ್ತವೆ. ಅಷ್ಟೇ ಅಲ್ಲ, ಅಕ್ಷರ ಅವರು ತಾವು ಬರೆಯಬಹುದಾಗಿದ್ದ ಕಥೆ–ಕಾದಂಬರಿಗಳನ್ನು ಈ ನಾಟಕರೂಪೀ ಬರಹಗಳಲ್ಲಿ ಬರೆದುಬಿಟ್ಟಿದ್ದಾರೋ ಅನ್ನಿಸುವಂತೆ ಕಥನಗಳ ಬಳಕೆಯೂ ಅವರ ನಾಟಕಗಳಲ್ಲಿ ಸಮೃದ್ಧವಾಗಿ ಕಾಣಿಸಿಕೊಂಡಿದೆ. ಕಾವ್ಯದ ಸಾಲುಗಳು, ಹಾಡು ಮತ್ತು ಹಾಡುಗಬ್ಬಗಳೂ ಉಚಿತವಾಗಿ ಬಳಕೆಯಾಗಿವೆ. ಕನ್ನಡದ ಹೆಚ್ಚಿನ ನಾಟಕಕಾರರು ಪುರಾಣಗಳನ್ನು ಇಂದಿನ ಸಂದರ್ಭಕ್ಕೆ ಪ್ರಸ್ತುತಗೊಳಿಸುವ ಪ್ರಯತ್ನಗಳನ್ನು ಮಾಡಿದ್ದರೆ,

ಅಕ್ಷರ ಅವರು ಸಮಕಾಲೀನ ಸನ್ನಿವೇಶಗಳಿಗೆ ಸೃಜನಶೀಲವಾಗಿ ಎದುರಾಗಿ ಆಧುನಿಕ ಪುರಾಣಗಳನ್ನು ಕಟ್ಟುವ ಮಹತ್ವಾಕಾಂಕ್ಷೆಯನ್ನು ತೋರುತ್ತಿದ್ದಾರೆ. ಹಾಗಾಗಿ ಅವರ ನಾಟಕಗಳಲ್ಲಿ ಸಮಕಾಲೀನ ಸಂದರ್ಭದ ಕೇವಲ ಜಡ ಪ್ರತಿಬಿಂಬವನ್ನು ನಾವು ಕಾಣುವುದಿಲ್ಲ. ಅದಕ್ಕೂ ಮಿಗಿಲಾಗಿ ಒಂದು ಸಂದರ್ಭವನ್ನು ಏಕಕಾಲದಲ್ಲಿ ಹಲವು ನೆಲೆಗಳಲ್ಲಿ, ಸ್ತರಗಳಲ್ಲಿ ಮತ್ತು ಮುಖಗಳಲ್ಲಿ ಕಾಣಬಲ್ಲ ಮುಕ್ತಬಂಧ ಅವರ ಕೃತಿಗಳಲ್ಲಿ ವಿನ್ಯಾಸಗೊಂಡಿದೆ ಅನ್ನಿಸುತ್ತದೆ. ಪ್ರತಿಯೊಬ್ಬ ಓದುಗ ಅಥವಾ ಪ್ರೇಕ್ಷಕನು ತನ್ನ ಅನುಭವವನ್ನೂ ಕೂಡಿಸಿ ಕೃತಿಯನ್ನು ವಿಸ್ತರಿಸಿಕೊಳ್ಳಬಲ್ಲ ಅವಕಾಶವನ್ನು ಈ ನಾಟಕಕಾರ ನೀಡಿದ್ದಾರೆ.

ಪ್ರಸ್ತುತ ‘ಸೇತು ಬಂಧನ’ದಲ್ಲಿ ಹೊಸ ವಿದ್ಯಮಾನಗಳು ಅಡಿಕೆ ಕೃಷಿ ಮಾಡುತ್ತಿರುವ ಕಿಟ್ಟುಗೆ ಮಾರಕವಾಗಿ ಕಾಣುತ್ತಿವೆ. ತೋಟದ ಕೆಲಸಕ್ಕೆ ಕೂಲಿಗಳೇ ಸಿಗುತ್ತಿಲ್ಲವೆಂದು ಅವನ ಅಳಲು. ಕೃಷಿಕಾರ್ಮಿಕರ ವರ್ಗದಿಂದ ಬಂದಿರುವ ಚೌಡನಿಗೆ ಈ ಹೊಸ ವಿದ್ಯಮಾನಗಳಿಂದ ತಮ್ಮ ಜನರಿಗೆ ಒಳ್ಳೆಯದೇ ಆಯಿತು ಎನ್ನಿಸುತ್ತಿದೆ. ಬೇರೆ ಕೆಲಸಗಳಲ್ಲಿ ಹೆಚ್ಚಿನ ಸಂಪಾದನೆಯಾಗುತ್ತಿರುವುದರಿಂದ ಎಲ್ಲಕ್ಕೂ ತೋಟದ ಒಡೆಯರನ್ನೇ ಅವಲಂಬಿಸಬೇಕಾದ ಪರಿಸ್ಥಿತಿಯಿಂದ ಮುಕ್ತಿ ಸಿಕ್ಕಿದೆ. ಹಸಲರ ತಿಮ್ಮ ಯಾವುದಕ್ಕೂ ಬೇಡವಾಗಿದ್ದ ತನ್ನ ಕೊಂಚ ಜಾಗವನ್ನು ಮಾರಿ ತನ್ನ ಆರ್ಥಿಕ, ಸಾಮಾಜಿಕ ಅಂತಸ್ತನ್ನು ಹೆಚ್ಚಿಸಿಕೊಂಡು ಈಗ ತಿಮ್ಮನಾಯ್ಕನಾಗಿದ್ದಾನೆ.

ಸಂಕಯ್ಯಶೆಟ್ಟಿಯ ಮರಳು ಗಣಿಗಾರಿಕೆಯಿಂದ ಹಳೆಯೂರಿನ ಅರ್ಥವ್ಯವಸ್ಥೆಗೆ ಹಿಂದೆಂದೂ ಕಾಣದ ಚಲನೆ ಬಂದುಬಿಟ್ಟಿದೆ. ಈ ಮಧ್ಯೆ ಕೇವಲ ಚೌಡಿ ಕಲ್ಲು ಅನ್ನಿಸಿಕೊಂಡಿದ್ದ ಜಾಗ ಈಗ ಸಾಕ್ಷಾತ್ ಜಗದಂಬಿಕೆಯ ಅವತಾರವಾಗಿರೋ ಚಾಮುಂಡೇಶ್ವರಿದೇವಿ ದೇವಸ್ಥಾನವಾಗಿ ಬೆಳೆದು ಪರವೂರುಗಳ ಸಹಸ್ರಾರು ಭಕ್ತಾದಿಗಳನ್ನು ಆಕರ್ಷಿಸಿ ತನ್ನ ಶ್ರೀಮಂತಿಕೆಯನ್ನೂ ಹೆಚ್ಚಿಸಿಕೊಂಡು ಊರಿನ ಪರ್ಯಾಯ ಆರ್ಥಿಕ ಶಕ್ತಿಯಾಗಿ ಪರಿವರ್ತಿತವಾಗಿದೆ. ಇದು ಊರಲ್ಲಿ ಹೊಸ ಸಂಘರ್ಷಗಳಿಗೆ ಕಾರಣವಾಗಿದ್ದರೂ ಹಳೆಯೂರಿನ ಇತಿಹಾಸ ಚಕ್ರ ಯಾರಿಗೂ ಕಲ್ಪಿಸಿಕೊಳ್ಳಲಾರದಷ್ಟು ವೇಗವಾಗಿ ಉರುಳಲಾರಂಬಿಸಿದೆ.

ಈ ಸಂಕೀರ್ಣ ಪರಿಸ್ಥಿತಿಯನ್ನು ಕೇವಲ ಒಳ್ಳೆಯದು–ಕೆಟ್ಟದ್ದು, ಪ್ರತಿಗಾಮಿ–ಪ್ರಗತಿಗಾಮಿ ಎಂಬ ಸರಳ ದ್ವಿದಳ ವರ್ಗೀಕರಣದ ಪರಿಭಾಷೆಯಲ್ಲಿ ಅರ್ಥೈಸಲಾಗದೆಂದು ರಾಮಕೃಷ್ಣ ಜೋಯಿಸರಿಗೆ ತಮ್ಮ ಲೋಕ ಸಂಚಾರದಿಂದಲೂ ಲೋಕಾನುಭವದಿಂದಲೂ ಮನದಟ್ಟಾಗಿದೆ. ನಮ್ಮ ಅನುಭವಗಳನ್ನು ಕಥನವಾಗಿಸುವ ಮೂಲಕ ಮಾತ್ರ ನಾವು ಅದರ ಒಳಸುಳಿಗಳನ್ನು, ವಿರೋಧಾಭಾಸಗಳನ್ನು, ಅಸಂಗತೆ–ಅಸಂಬದ್ಧತೆಗಳನ್ನು ಕಂಡುಕೊಳ್ಳಲು ಸಾಧ್ಯ ಎಂಬ ನಂಬಿಕೆ ಅವರದು. ‘ಸ್ವಯಂವರ ಲೋಕ’ದಲ್ಲಿ ‘ಭಾರತಯಾತ್ರೆ’ಗೆ ಹೋಗುವ ಮುನ್ನ ಜೋಯಿಸರು ಕಿಟ್ಟು ಮತ್ತು ಭಾಮೆಯನ್ನು ಉದ್ದೇಶಿಸಿ, ‘‘ಕಥೆ ಕಟ್ಟುವ ಉದ್ಯೋಗವನ್ನು ನೀವಿಬ್ಬರೂ ನಿಲ್ಲಿಸಬೇಡಿ.

ಕಥೆ ಕಟ್ಟತಾ ಕಟ್ಟತಾನೇ ವಾಸ್ತವದಲ್ಲಿ ಕಾಣದಿರೋ ಸತ್ಯಗಳು ನಮಗೆ ಕಾಣಿಸೋದಕ್ಕೆ ಸಾಧ್ಯವಿದೆ’’ ಎಂದು ಹೇಳುತ್ತಾರೆ. ‘ಭಾರತ ಯಾತ್ರೆ’ಯಲ್ಲಿ ಅವರು ಸ್ವತಃ ನಮ್ಮ ಸಮಾಜದ ಬಹುಸ್ತರಗಳಿಂದ ಮೂಡಿದ ಕಥನಗಳನ್ನು ಕೇಳಿಸಿಕೊಳ್ಳುತ್ತಾರೆ. ‘ಸೇತು ಬಂಧನ’ದಲ್ಲಿ ಎಷ್ಟೋ ವರುಷಗಳ ನಂತರ ಊರಿಗೆ ಮರಳುವ ಜೋಯಿಸರು ಹೊಸ ಕಥನಗಳಿಗೆ ಎದುರಾದಾಗ ಅವುಗಳನ್ನು ಅನುಸಂಧಾನ ಮಾಡಬೇಕಾದ ಹೊಸ ಪ್ರಯತ್ನಗಳಿಗೆ ಮುಂದಾಗಬೇಕಾಗುತ್ತದೆ. ಅದೆಂದರೆ ನಮ್ಮ ಅನುಭವಗಳನ್ನೇ ನಾಟಕಗಳಾಗಿ ಪ್ರಯೋಗಿಸುವುದು.

ಕಿಟ್ಟು, ಭಾಮೆ ಮತ್ತು ಹಳೆಯೂರಲ್ಲೇ ನೆಲೆಸಬೇಕೆಂದು ಪ್ರಜ್ಞಾಪೂರ್ವಕ ನಿಶ್ಚಯಿಸಿ ಬಂದಿರುವ ಮೊಮ್ಮಗ ಮದನ ಇವರಿಗೆ, ಮನೆಯಲ್ಲೇ ಮನೆಯ ಇತರ ಸದಸ್ಯರನ್ನೇ ಪ್ರೇಕ್ಷಕರನ್ನಾಗಿಸಿಕೊಂಡು ಮನೆಯ ಅಂಗಳದಲ್ಲೇ ನಾಟಕ ಮಾಡಲು ಉತ್ತೇಜಿಸುತ್ತಾರೆ. ಹಾಗೆ ಮಾಡುವ ಮೂಲಕ ನಮ್ಮ ಅನುಭವಗಳೇ ನಮ್ಮ ಕಥನಗಳಲ್ಲಿ ಪಡೆಯುವ ಪರಿವರ್ತನೆಗಳನ್ನು ಎಲ್ಲರ ಗಮನಕ್ಕೆ ತರುತ್ತಾರೆ. ಅಂಥ ಒಂದು ಪ್ರಯೋಗದ ನಂತರ ಜೋಯಿಸರು ಹೇಳುವ ಈ ಮಾತುಗಳು ಮನನೀಯವಾಗಿವೆ: ‘‘ನಾಟಕ ಅಂದರೇನು? ಅದು ಆಗಿಹೋಗಿರೋ ಭವವನ್ನು ಆಡಿತೋರಿಸೋ ಪುನರಾವರ್ತನೆ ಅಲ್ಲ; ಆ ಭವದಿಂದ ಹುಟ್ಟಿರುವ ಅನುಭವವನ್ನು ಕಂಡುಕೊಳ್ಳುವ ಆವಿಷ್ಕಾರ! ಅರ್ಥಾತ್, ನಾಟಕ ಅನ್ನೋದು ಭವ ಮತ್ತು ಅನುಭವದ ಮಧ್ಯೆ ನಡೆಯೋ ಸೇತುಬಂಧನ!’’.

ಇಂಥದೊಂದು ನಂಬಿಕೆಯು ಸ್ವತಃ ಅಕ್ಷರ ಅವರ ನಾಟಕ ಮತ್ತು ರಂಗಭೂಮಿ ಪ್ರಯೋಗಗಳ ಹಿಂದಿನ ಮುಖ್ಯ ಪ್ರೇರಣೆ ಎಂದೂ ತರ್ಕಿಸಲು ಸಾಧ್ಯವಿದೆ. ನಾಟಕದ ಬಂಧದ ಒಳಗೇ ಅಕ್ಷರ ಅವರು ನಡೆಸಿರುವ ಮೀಮಾಂಸೆಯು ಅವರ ಪ್ರಯೋಗಗಳಿಗೆ ಮೆಟಾ ಡ್ರಾಮಾ ಮತ್ತು ಮೆಟಾ ಥಿಯೇಟರಿನ ಆಯಾಮಗಳನ್ನೂ ತಾನಾಗಿ ಕೂಡಿಸಿಬಿಟ್ಟಿದೆ. ಈ ಸೇತುಬಂಧನ ಅನ್ನುವುದು ಅವರ ಬಿಡಿಬಿಡಿ ನಾಟಕಗಳು ಪರಸ್ಪರ ಕೂಡಿಕೊಳ್ಳುವ ಪರಿಯನ್ನೂ ಸೂಚಿಸುತ್ತದೆ ಮತ್ತು ರಾಮಕೃಷ್ಣ ಜೋಯಿಸರ ಆಗಮನ, ನಿರ್ಗಮನ ಮತ್ತು ಪುನರಾಗಮನದ ಕಥನಗಳನ್ನೂ ಕೂಡಿಸುವ ಬಗೆಯನ್ನೂ ಕಾಣಿಸಿ ತನ್ನ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿಕೊಂಡುಬಿಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT