ಕೂಡ್ಲಿಗಿ ತಾಲ್ಲೂಕಿನ ಭಿನ್ನ ಚಿತ್ರವನ್ನು ಕಟ್ಟಿಕೊಡುವ ಮೂರು ಪುಸ್ತಕಗಳು ಪ್ರಕಟವಾಗಿವೆ. ವಿಶೇಷವೆಂದರೆ ಇವು ಪತ್ರಿಕಾ ಬರಹಗಳು. ಸಾಮಾನ್ಯವಾಗಿ ಸ್ಥಳೀಯ ಸುದ್ದಿಗಳು ಪತ್ರಿಕೆಯನ್ನು ದಾಟಿ ಪುಸ್ತಕವಾಗುವುದು ಕಡಿಮೆ. ರಾಜ್ಯಮಟ್ಟದ ಪತ್ರಿಕೆಗಳಲ್ಲಿನ ಅಂಕಣಗಳು, ಬರಹಗಳು ಒಟ್ಟಾಗಿ ಪುಸ್ತಕವಾಗುವುದಿದೆ.
ತಾಲ್ಲೂಕು ಮಟ್ಟದ ವರದಿಗಳು ಪುಸ್ತಕವಾಗುವ ಅರ್ಹತೆ ಪಡೆದಿಲ್ಲವೇನೋ ಎನ್ನುವ ಅಸಡ್ಡೆಯೂ ಸ್ಥಳೀಯ ಪತ್ರಕರ್ತರಿಗೆ ಇದ್ದಂತಿದೆ. ಈ ಅಸಡ್ಡೆಗೆ ಉತ್ತರ ರೂಪದಂತಿವೆ ಇಲ್ಲಿನ ಪುಸ್ತಕಗಳು. ಉಜ್ಜಿನಿ ರುದ್ರಪ್ಪ, ಸಿದ್ಧರಾಮ ಹಿರೇಮಠ, ಭೀಮಣ್ಣ ಗಜಾಪುರ ಈ ಮೂವರು ಪತ್ರಕರ್ತರು ಒಂದು ತಾಲ್ಲೂಕನ್ನು ಮೂರು ಭಿನ್ನ ನೋಟಗಳಲ್ಲಿ ಕಟ್ಟಿಕೊಟ್ಟಿರುವ ಕಾರಣಕ್ಕೆ ಈ ಕೃತಿಗಳು ವಿಶಿಷ್ಟವಾಗಿವೆ.
ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲ್ಲೂಕಾದ ಕೂಡ್ಲಿಗಿ ಪತ್ರಕರ್ತರಿಗೆ ಸುದ್ದಿಯನ್ನು ಹೆಕ್ಕಿಕೊಡುವಂತಹ ಪ್ರದೇಶವೇನೂ ಅಲ್ಲ. ಆದರೆ ಇಲ್ಲಿನ ಪುಸ್ತಕಗಳಲ್ಲಿ ಸಂಕಲನಗೊಂಡಿರುವ ವರದಿಗಳನ್ನು ಗಮನಿಸುತ್ತಿದ್ದರೆ, ಪುಟ್ಟ ಪುಟ್ಟ ಸಂಗತಿಗಳ ಒಳಗಿನಿಂದ ತಾಲ್ಲೂಕಿನ ವಿಶಿಷ್ಟ ಮುಖಗಳನ್ನು ಕಾಣಿಸುವ ಕ್ರಿಯಾಶೀಲತೆ ಇಲ್ಲಿ ಕೆಲಸ ಮಾಡಿದೆ. ಇಲ್ಲಿನ ವರದಿಗಳಲ್ಲಿ ತಾಲ್ಲೂಕಿನ ಚರಿತ್ರೆ ಮತ್ತು ವರ್ತಮಾನದ ಭಿನ್ನ ಮುಖಾಮುಖಿ ಸಾಧ್ಯವಾಗಿದೆ. ಒಂದು ತಾಲ್ಲೂಕನ್ನು ನೋಡುವ ಹೊಸ ಕ್ರಮಗಳೂ ಈ ಬರಹಗಳಲ್ಲಿವೆ. ತಾಲ್ಲೂಕಿನ ಚರಿತ್ರೆಯನ್ನು ಅರಿಯಲು ಬೆರಳೆಣಿಕೆಯ ಆಕರಗಳು ಸಿಗಬಹುದು. ಆದರೆ ತಾಲ್ಲೂಕಿನ ವರ್ತಮಾನವನ್ನು ಅರಿಯಲು ಆಯಾ ಭಾಗದ ಪತ್ರಿಕಾ ಬರಹಗಳ ನೆರವು ಪಡೆಯಬೇಕು ಎನ್ನುವುದನ್ನು ಈ ಪುಸ್ತಕಗಳು ಹೇಳುವಂತಿವೆ.
ಸಿದ್ಧರಾಮ ಹಿರೇಮಠ ಅವರ `ವಡೇವು' ಪುಸ್ತಕದಲ್ಲಿ 90, ಭೀಮಣ್ಣ ಗಜಾಪುರ ಅವರ `ಕನಸುಗಳಿಗೆ ರೆಕ್ಕೆ ಕಟ್ಟಿದವರು ಕೃತಿಯಲ್ಲಿ 68, ಉಜ್ಜಿನಿ ರುದ್ರಪ್ಪ ಅವರ `ಕೌತುಕ ಕೃತಿಯಲ್ಲಿ 35 ಬರಹಗಳಿವೆ. ಒಂದು ತಾಲ್ಲೂಕಿನ ಭಿನ್ನ ಚಲನೆಗಳನ್ನು ಇಲ್ಲಿನ ಬರಹಗಳು ಕಟ್ಟಿಕೊಡುತ್ತಿವೆ. ಮುಖ್ಯವಾಗಿ ಗ್ರಾಮೀಣ ಜಗತ್ತಿನ ಪಲ್ಲಟಗಳನ್ನು ಗುರುತಿಸುವ ಬರಹಗಳಿವೆ, ಅಂತೆಯೇ ಜಾನಪದ ಕಲೆ, ಆಚರಣೆ, ಸಂಪ್ರದಾಯಗಳ ವರ್ತಮಾನದ ನಡೆಗಳನ್ನು ಕುತೂಹಲದಿಂದ ನೋಡಲಾಗಿದೆ.
ಅಸಹಾಯಕರ ಸಾಧನೆ, ಛಲಬಿಡದ ನಿರಂತರ ಕ್ರಿಯೆಯ ಪ್ರತಿಫಲಗಳು, ಕೂಡ್ಲಿಗಿ ತಾಲ್ಲೂಕಿನ ವಿಶಿಷ್ಟವಾದ ಸಂಗತಿಗಳು, ಪರಿಸರದ ಅಸಮತೋಲನದ ಛಾಯೆಗಳು, ದೇಸಿ ಕಸುಬಿನ ಏಳುಬೀಳಿನ ಕಥೆಗಳು ಇಲ್ಲಿವೆ. ಬಹುಪಾಲು ಮಳೆಯಾಶ್ರಿತ ಒಣ ಭೂಮಿಯಲ್ಲಿ ರೈತರ ಕ್ರಿಯಾಶೀಲತೆಯನ್ನು ಹುಡುಕುವ ಬರಹಗಳಿವೆ. ಸಮಸ್ಯೆಗಳನ್ನು ಎತ್ತಿ ತೋರಿಸಿ, ಪರಿಹಾರ ಸೂಚಿಸಿದ ವರದಿಗಳೂ ಇವೆ. ಇವು ಪತ್ರಕರ್ತರ ಓಡಾಟವನ್ನೂ, ಜನರೊಂದಿಗಿನ ಆಪ್ತ ಒಡನಾಟವನ್ನೂ, ಸಾಮಾಜಿಕ ಜವಾಬ್ದಾರಿಯನ್ನೂ ತೋರುವಂತಿವೆ. ಹಾಗಾಗಿ ಸಭೆ - ಭಾಷಣಗಳಿಗೆ ಸೀಮಿತವಾದ ವರದಿಗಳಿಗಿಂತ, ಇಲ್ಲಿನ ಬರಹಗಳು ಜೀವಂತವಾಗಿವೆ.
ಇಲ್ಲಿನ ವರದಿಗಳಿಗೆ ಸಹಜವಾಗಿ ಸಂಶೋಧನೆಯ ಆಳವಿಲ್ಲ. ಬದಲಾಗಿ ಸಂಶೋಧನೆ ಕೈಗೊಳ್ಳಬಲ್ಲವರಿಗೆ ಪ್ರಾಥಮಿಕ ಮಾರ್ಗದರ್ಶಿಗಳಂತಿವೆ. ಇಲ್ಲಿನ ವಿವರ ಮಾಹಿತಿಗಳನ್ನು ರಾಜ್ಯದ ಸಂಗತಿಗಳ ಜತೆ ತಳಕುಹಾಕಿ ಹುಟ್ಟಿಸಬಹುದಾದ ವಿಶ್ಲೇಷಣೆಯ ಕೊರತೆ ಎದ್ದು ಕಾಣುತ್ತದೆ. ಇದಕ್ಕೆ ಸ್ಥಳೀಯ ಸುದ್ದಿಗಳಿಗೆ ಪತ್ರಿಕೆಗಳೇ ವಿಧಿಸಿದ ಮಿತಿಯೂ ಕಾರಣವಿರಬಹುದು. ಸುದ್ದಿ ನಂತರದ ಪರಿಣಾಮಗಳನ್ನು, ಸುದ್ದಿಗೆ ವಸ್ತುವಾದ ವಿಷಯ ಸಂಗತಿಯು ಪುಸ್ತಕ ಪ್ರಕಟಣೆಯ ಹೊತ್ತಿಗೆ ಇರಬಹುದಾದ ಸ್ಥಿತಿಗತಿಯ ಟಿಪ್ಪಣಿಗಳನ್ನು ಕೊಡಬಹುದಿತ್ತು.
ಇದು ಈ ಪುಸ್ತಕಗಳ ಮಿತಿಯಾಗಿದೆ. ಈ ಕೃತಿಗಳು ಕೂಡ್ಲಿಗಿ ತಾಲ್ಲೂಕಿನ ಕೈಪಿಡಿಯಂತಿವೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇವು ಸ್ಥಳೀಯ ಸುದ್ದಿಯ ಭಿನ್ನ ಆಯಾಮಗಳನ್ನು ಕಟ್ಟಿಕೊಡುತ್ತವೆ. ಹೀಗೆ ತಾಲ್ಲೂಕು - ಜಿಲ್ಲೆಯ ವರದಿಗಳು ಪುಸ್ತಕವಾದರೆ, ಆಯಾ ಭಾಗದ ಚರಿತ್ರೆ ಮತ್ತು ವರ್ತಮಾನವನ್ನು ಅರಿಯಲು ನೆರವಾಗುತ್ತವೆ. ಈ ಬಗೆಯ ಮಾದರಿಗಾಗಿ ಈ ಕೃತಿಗಳನ್ನು ಒಮ್ಮೆ ಗಮನಿಸಬಹುದು.
-ಅರುಣ್ ಜೋಳದಕೂಡ್ಲಿಗಿ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.