ADVERTISEMENT

ಕೆಂಗಲ್‌ರ ಅಧಿಕೃತ ಚಿತ್ರಣ

ಲಕ್ಷ್ಮಣ ಕೊಡಸೆ
Published 16 ಏಪ್ರಿಲ್ 2011, 19:30 IST
Last Updated 16 ಏಪ್ರಿಲ್ 2011, 19:30 IST

‘ನಾನು ದಿವಾನರನ್ನು ಪರಿಚಯ ಮಾಡಿಕೊಳ್ಳುವುದಕ್ಕೆ ನಿಮ್ಮೊಡನೆ ಬಂದೆ. ಕೆಲಸ ಕೇಳುವುದಕ್ಕಲ್ಲ. ನನಗೆ ಅಮಲ್ದಾರ್ ಕೆಲಸ ಬೇಕಾಗಿಲ್ಲ. ಅಮಲ್ದಾರರನ್ನು ನೇಮಿಸುವ ಅಧಿಕಾರ ಬೇಕು..’

-ಕಾನೂನು ಪದವಿ ಮುಗಿಸಿದ ನಂತರವೂ ಜೀವನೋಪಾಯಕ್ಕಾಗಿ ಪರದಾಡುತ್ತಿದ್ದ ತಮ್ಮನ್ನು ಸಂಸ್ಥಾನದ ದಿವಾನರ ಬಳಿ ಕರೆದೊಯ್ದ ಸಮುದಾಯದ ಮುಖಂಡರಿಗೆ ಹೀಗೆ ದಿಟ್ಟತನದಿಂದ ಹೇಳಿದ ವ್ಯಕ್ತಿ ಕೆಂಗಲ್ ಹನುಮಂತಯ್ಯ. ಇದು ಅವರ ವ್ಯಕ್ತಿತ್ವವನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಘಟನೆ.

ದೇಶದಲ್ಲಿ ಬ್ರಿಟಿಷರ ಆಳ್ವಿಕೆ ಬಲವಾಗಿ ಬೇರುಬಿಟ್ಟಿದ್ದ ಕಾಲದಲ್ಲಿ, ಅಂದರೆ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ರಾಮನಗರ ಜಿಲ್ಲೆಯ ಕುಗ್ರಾಮ ಲಕ್ಕಪ್ಪನಹಳ್ಳಿಯ ಬಡಕುಟುಂಬದಲ್ಲಿ ಜನ್ಮ ತಳೆದ (1908) ಹನುಮಂತಯ್ಯ, ಬಂಧುಗಳ ನೆರವಿನಿಂದ ಮೈಸೂರಿನಲ್ಲಿ ಪದವಿಯನ್ನೂ, ಪುಣೆಯಲ್ಲಿ ಕಾನೂನು ಪದವಿಯನ್ನೂ ಗಳಿಸಿ, ಮಹಾತ್ಮ ಗಾಂಧೀಜಿ ಪ್ರೇರಣೆಯಿಂದ ಸಾರ್ವಜನಿಕ ಸೇವೆಗೆ ಬದುಕನ್ನು ಮುಡಿಪಾಗಿಟ್ಟ ಧೀಮಂತ ವ್ಯಕ್ತಿತ್ವ.

ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಧುಮುಕಿದ ಕೆಂಗಲ್ ಮೈಸೂರು ಸಂಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ನೆಲೆಯೂರಲು ಕಾರಣಕರ್ತರು. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೂ ಮೈಸೂರು, ರಾಜರ ಆಳ್ವಿಕೆಯಲ್ಲಿ ಮುಂದುವರಿದುದನ್ನು ವಿರೋಧಿಸಿ ‘ಜವಾಬ್ದಾರಿ ಸರ್ಕಾರ’ಕ್ಕಾಗಿ ಹೋರಾಟ ನಡೆಸಬೇಕಾಯಿತು.

ಸ್ವಾತಂತ್ರ್ಯ ಹೋರಾಟ ಮತ್ತು ನಂತರ ನಡೆಸಿದ ಜವಾಬ್ದಾರಿ ಸರ್ಕಾರಕ್ಕಾಗಿ ನಡೆಸಿದ ಅಹಿಂಸಾತ್ಮಕ ಹೋರಾಟದಲ್ಲಿ ಸುಮಾರು ನಾಲ್ಕೂವರೆ ವರ್ಷ ರಾಜ್ಯದ ವಿವಿಧ ಜೈಲುಗಳಲ್ಲಿ ಅವರು ಕಳೆಯಬೇಕಾಯಿತು. ಜವಾಬ್ದಾರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮೊಟ್ಟಮೊದಲ ಚುನಾಯಿತ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದರು. ವಿಧಾನಸೌಧ ನಿರ್ಮಾಣ ಅವರ ಕರ್ತೃತ್ವ ಶಕ್ತಿಯ ಸಂಕೇತ. ನಾಡುನುಡಿಯ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಕೆಂಗಲ್ ಹಳೇ ಮೈಸೂರಿನ ಕಾಂಗ್ರೆಸ್ ನಾಯಕರ ಸ್ವಾರ್ಥ ರಾಜಕಾರಣದ ಎದುರು ಅಧಿಕಾರವನ್ನು ಪಣಕ್ಕಿಟ್ಟವರಂತೆ ಏಕೀಕರಣಕ್ಕಾಗಿ ಶ್ರಮಿಸಿದ ಅಪರೂಪದ ರಾಜಕಾರಣಿ.

ಕೆಂಗಲ್ ಹನುಮಂತಯ್ಯ ಅವರನ್ನು ಹತ್ತಿರದಿಂದ ನೋಡಿದ ಡಿ.ಲಿಂಗಯ್ಯ ಅವರು ರೂಪಿಸಿದ ಇಂಥ ವ್ಯಕ್ತಿತ್ವ ಚಿತ್ರಣಕ್ಕೆ ಕೆಂಗಲ್ ಅವರ ದಿನಚರಿಯ ಬರಹಗಳು ಅಧಿಕೃತತೆಯನ್ನು ಒದಗಿಸಿವೆ. ಕೆಂಗಲ್ ಹನುಮಂತಯ್ಯ ಅವರು ಸುಮಾರು ಐದು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದರೂ ಅಧಿಕಾರ ನಡೆಸಿದ ಅವಧಿ ಹೆಚ್ಚಲ್ಲ. ಮುಖ್ಯಮಂತ್ರಿಯಾಗಿ ನಾಲ್ಕು ವರ್ಷ ಮತ್ತು ಕೇಂದ್ರದಲ್ಲಿ ಕಾನೂನು ಹಾಗೂ ರೈಲ್ವೆ ಖಾತೆ ಸಚಿವರಾಗಿ ಸುಮಾರು ಮೂರು ವರ್ಷವಷ್ಟೆ ಅಧಿಕಾರ ನಡೆಸಿದ್ದರೂ ತಾವು ಇದ್ದ ಸ್ಥಾನಗಳಲ್ಲಿ ಮೂಡಿಸಿದ ಛಾಪು ಐತಿಹಾಸಿಕ ಸ್ವರೂಪದ್ದು.

ಪ್ರಜಾಸತ್ತೆಯಲ್ಲಿ ಪ್ರಾಮಾಣಿಕ, ದಕ್ಷ ಆಡಳಿತ ಇರಬೇಕೆಂದು ಪ್ರತಿಪಾದಿಸುತ್ತಿದ್ದ ಕೆಂಗಲ್ ತಮ್ಮ ಅಧಿಕಾರವನ್ನು ಅದೇ ಮಾರ್ಗದಲ್ಲಿ ನಡೆಸಿದವರು. ಅಧಿಕಾರದಲ್ಲಿ ಉಳಿಯುವುದಕ್ಕಾಗಿ ತಾವು ನಂಬಿಕೊಂಡಿದ್ದ ಮೌಲ್ಯಗಳನ್ನು ಬಿಟ್ಟುಕೊಟ್ಟವರಲ್ಲ. ಪ್ರಜಾಸತ್ತೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕ ಆಡಳಿತ ಅವಶ್ಯಕ; ಗ್ರಾಮೀಣ ಜನತೆಯ ಅಗತ್ಯಗಳಿಗೆ ಆದ್ಯತೆ, ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿ, ಸ್ವಾವಲಂಬನೆ, ಸ್ವಂತ ಉದ್ಯೋಗ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಶಿಕ್ಷಣ, ಸಂಸ್ಕೃತಿ ಪ್ರಸಾರ ಮತ್ತು ಸಾಹಿತ್ಯಾಭಿವೃದ್ಧಿಯ ಮೂಲಕ ಸಮಾಜದ ನೈತಿಕ ಮಟ್ಟವನ್ನು ಎತ್ತರಿಸುವುದು, ಯಾವುದೇ ಒಂದು ಜಾತಿ ಪ್ರಬಲಸ್ಥಾನ ಪಡೆಯಲು ಅವಕಾಶ ಕೊಡದೆ ಪರಿಶಿಷ್ಟರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಹಕ್ಕು ರಕ್ಷಣೆ ಮತ್ತು ಅಭಿವೃದ್ಧಿಗೆ ಪ್ರಯತ್ನ ನಡೆಸುವ ಆದರ್ಶಗಳನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಕೈಗೊಂಡವರು.

‘ರಾಜಕೀಯದಲ್ಲಿ ಜಾತಿ ಪ್ರಧಾನವಾಗಬಾರದು. ಚುನಾವಣೆಗೆ ಸಮರ್ಥರು ಸತ್ಯವಂತರು ಸ್ಪರ್ಧಿಸಬೇಕು. ಅಂಥವನ್ನು ಗೆಲ್ಲಿಸಬೇಕು’ ಎಂಬ ರಾಜಕೀಯ ಸಿದ್ಧಾಂತ ಹೊಂದಿ ಅದಕ್ಕಾಗಿ ಶ್ರಮಿಸಿದ್ದ ಅವರ ಪ್ರಯತ್ನ ನಿರೀಕ್ಷೆಯಂತೆ ಯಶಸ್ವಿಯಾಗಲಿಲ್ಲ. ವರ್ತಮಾನದ ಮೌಲ್ಯರಹಿತ ಅವಕಾಶವಾದಿತನದ ರಾಜಕೀಯದ ಪರಿಚಯವಷ್ಟೇ ಇರುವ ಈಗಿನ ಪೀಳಿಗೆಯವರಿಗೆ ಕೆಂಗಲ್ ಅವರಂಥ ವ್ಯಕ್ತಿ ನಿಜಕ್ಕೂ ಇದ್ದರೇ ಎಂಬ ಬೆರಗು ಮೂಡಿದರೆ ಆಶ್ಚರ್ಯವಿಲ್ಲ.

ರಾಷ್ಟ್ರರತ್ನ ಕೆಂಗಲ್ ಹನುಮಂತಯ್ಯ
ಲೇ: ಪ್ರೊ.ಡಿ.ಲಿಂಗಯ್ಯ
ಪು: 532; ಬೆ: ರೂ. 300
ಪ್ರ: ಗೋಧೂಳಿ ಪ್ರಕಾಶನ, 35, 5ನೇ ‘ಬಿ’ ಅಡ್ಡರಸ್ತೆ, ಸಿಂಡಿಕೇಟ್ ಬ್ಯಾಂಕ್ ಬಡಾವಣೆ, ತುಂಗಾನಗರ, ಬೆಂಗಳೂರು-560 091.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.