ADVERTISEMENT

ಕೊರಳು, ಬೆರಳಿನ ವಿವೇಕ

ಸಿ.ಎಸ್.ಸರ್ವಮಂಗಳಾ
Published 23 ನವೆಂಬರ್ 2013, 19:30 IST
Last Updated 23 ನವೆಂಬರ್ 2013, 19:30 IST

ರಾಗಮಾಲ ವರ್ಣಚಿತ್ರಗಳನ್ನು ನೆನಪಿಸುವ ‘ರಾಗಮಾಲ’ ಎಂಬ ಪುಸ್ತಕಮಾಲಿಕೆಯ ಅಡಿಯಲ್ಲಿ ಪ್ರಕಟವಾಗಿರುವ ಎರಡು ಮೌಲಿಕ ಹೊತ್ತಿಗೆಗಳು ‘ಪಂಡಿತ್ ರವಿಶಂಕರ್ – Godfather of World Music’ ಮತ್ತು ಸಂಗೀತದ ಕೇಳ್ಮ್ಮೆಯನ್ನು ಕುರಿತ ಸಂಚಿಕೆ ‘ಕೇಳು ಜನಮೇಜಯ’. ಅಷ್ಟದಳ (ಡೆಮಿ) ಆಕಾರದಲ್ಲಿರುವ ಆಕರ್ಷಕ ವಿನ್ಯಾಸದ ಈ ಎರಡೂ ಕೃತಿಗಳು ಮೈಸೂರಿನ ಸಂಗೀತವಲಯದ ಶೈಲಜಾ ಮತ್ತು ಟಿ.ಎಸ್. ವೇಣುಗೋಪಾಲ್ ಎಂಬ ಆರೋಗ್ಯವಂತ ಮನಸ್ಸುಗಳ ಸಂಗೀತಪ್ರೀತಿ, ಕಲಾತ್ಮಕತೆ ಮತ್ತು ಅಚ್ಚುಕಟ್ಟುತನಕ್ಕೆ ಹಿಡಿದ ಕನ್ನಡಿಯಂತಿವೆ.

ಸಂಗೀತಾನುಭವ ಎಂಬುದು ಸಂಗೀತಶಾಸ್ತ್ರ, ಪಠ್ಯದ ಹಾಗಲ್ಲ. ಸಂಗೀತದ ಸೃಷ್ಟಿಕ್ರಿಯೆ ಮತ್ತು ಆಸ್ವಾದನೆ ಕುರಿತು ಮಾತನಾಡುವುದು, ಬರೆಯುವುದು ಕಠಿಣ ಮಾತ್ರವಲ್ಲ, ಒಂದು ಮಿತಿಯಾಚೆ ಅಸಾಧ್ಯವೇ ಸರಿ. ಸಂಗೀತಾನುಭವವನ್ನು ಇಡಿಯಾಗಿ ಭಾಷೆಯಲ್ಲಿ ಹಿಡಿಯಲಾಗದು ಎಂಬ ನಿಜನೆಲೆಯನ್ನು ಒಪ್ಪಿಕೊಂಡೇ, ಕನ್ನಡದಲ್ಲಿ ಈಗಾಗಲೇ ಬಂದಿರುವ  ಸಂಗೀತಬರಹಗಳನ್ನು ಗಮನಿಸಿದರೆ, ಈ ರಾಗಮಾಲ ಸಂಚಿಕೆಗಳಿಗೆ ವಿಶೇಷ ಮೆರುಗಿದೆ, ಉತ್ಸಾಹಭರಿತ ತುಡಿತವಿದೆ. ಈ ಮಾನೋಗ್ರಾಫ್‌ಗಳು ಸಂಗೀತ ಕಲಿಯುವವರಿಗೆ, ಆಸಕ್ತರಿಗೆ, ಕೇಳ್ಮೆಗೆ ಪ್ರವೇಶ ಬಯಸುವವರಿಗೆ– ಎಲ್ಲರ ಮನಸ್ಸನ್ನೂ ತಾಕುವಂತಿದೆ. 

ತಾಯಿಗಂಟಿಕೊಂಡಿದ್ದ ಎಳೆಯ ರವಿಶಂಕರನಿಂದ ಪ್ರಾರಂಭವಾಗಿ ಬಣ್ಣರಂಜಿತ, ಕಲಾಮಯ ಬದುಕನ್ನು ಅನುಭವಿಸಿ ಕಿಂಗ್ ಲಿಯರ್‌ನಂತೆ ಪರಿಪಕ್ವತೆ ಸಾಧಿಸಿದ ಇಳಿವಯಸ್ಸಿನ ಸಂಗೀತಋಷಿಯವರೆಗಿನ ಪಯಣವನ್ನು ಒಂದು ಅದ್ಭುತ ಕಥಾನಕದಂತೆ ‘ರವಿಶಂಕರ್’ ಸಂಚಿಕೆ ಹೆಣೆಯುತ್ತದೆ. ಸಿತಾರ್‌ ಸಂಗೀತ ‘ನುಡಿಸುವುದಕ್ಕಾಗಿ ಬದುಕಿದ’ ಭಾರತೀಯ ಶಾಸ್ತ್ರೀಯಸಂಗೀತದ ರಾಯಭಾರಿಯ ಕತೆಯನ್ನು ಅನಗತ್ಯ ವೈಯಕ್ತಿಕ ವಿವರಗಳಲ್ಲಿ ಕಳೆದುಹೋಗದೆ, ರೋಚಕಗೊಳಿಸದೆ, ಜೀವನದ ಹುಡುಕಾಟಕ್ಕೆ, ಸಂಗೀತದ ಖುಷಿ-ತಲ್ಲಣಗಳಿಗೆ, ಜೀವನತೀವ್ರತೆಗೆ, ತನ್ಮಯಬದುಕಿಗೆ  ಒತ್ತುಕೊಡುವ ಮ್ಯಾಪಿಂಗ್‌ನ ಮೂಲಕ ಈ ಸಂಚಿಕೆ ಕಟ್ಟಿಕೊಟ್ಟಿದೆ. ಮೇರುಕಲಾವಿದನೊಬ್ಬನ ವೈಯಕ್ತಿಕ ಪಯಣವನ್ನು ದಾಖಲಿಸುವ ಹೊತ್ತಿನಲ್ಲೇ ಆತನ ಸಂಗೀತಜೀವನದ ನಡೆಯನ್ನು ಬೇರೆ ಬೇರೆ ಹಾದಿಗಳ ಮೂಲಕ ಒಂದು ಕೇಂದ್ರಕ್ಕೆ ತಂದು ನಿಲ್ಲಿಸುತ್ತದೆ. ಸಂಚಿಕೆಯನ್ನು ಜೀವಂತಗೊಳಿಸಿ, ಮನಸ್ಸಿನಲ್ಲಿ ಅಚ್ಚೊತ್ತಿ ಉಳಿಯುವ ಇಲ್ಲಿನ ಕಪ್ಪುಬಿಳುಪು ಛಾಯಾಚಿತ್ರಗಳು ಪೂರಕವಾಗಿಯೂ, ಸ್ವತಂತ್ರವಾಗಿಯೂ ಇದೇ ಕೆಲಸವನ್ನು ಮುಂದುವರಿಸುತ್ತಿವೆ.

ಉದಾ: ಈ ಎರಡೂ ಸಂಚಿಕೆಗಳಲ್ಲಿ ರಾರಾಜಿಸುತ್ತಿರುವ ವಿಲಾಯತ್ ಖಾನರು ಮೀನ್ಡ್ ಎಳೆಯುತ್ತಿರುವ ಭಾವಚಿತ್ರ, ನುಡಿಸುವಿಕೆಯಲ್ಲಿ ಮಗ್ನರಾದ ರವಿಶಂಕರ್ ಫೋಟೊಗಳು ದಾಟಿಸುವುದು ಮಾತಿಗೆ ನಿಲುಕದ ಅಮೂರ್ತ ಆನಂದಾನುಭವವನ್ನೇ ರವಿಶಂಕರ್-ಸಿತಾರ್ ವಿಶೇಷಗಳ ಬಗ್ಗೆ ರಾಜೀವ್ ನಯ್ಯರ್ ಮಾತನಾಡಿದರೆ, ಪಂ.ರಾಜೀವ್  ತಾರಾನಾಥರು ಮುಂದುವರಿದು, ತಾನೇ ವಿಸ್ತರಿಸಿದ ವಾದ್ಯದ ಸಾಧ್ಯತೆಗಳ  ಉಪಯೋಗ ಪಡೆಯಲು ಬೇಕಾದ ಪ್ರಯೋಗಶೀಲತೆ ಮತ್ತು ಉತ್ತಮಾಂಶಗಳನ್ನು ದಾಟಿಸಲು ಬೇಕಾದ ಕೈಚಳಕ ಎಲ್ಲವೂ ರವಿಶಂಕರರಲ್ಲಿ ಅಗಾಧವಾಗಿದ್ದವು. ಹೀಗಾಗಿ ಅವರ ಕೊಡುಗೆ ‘ರಚನಾತ್ಮಕ, ಸಂಗೀತಾತ್ಮಕ ಮತ್ತು ನಿರಂತರ’ ಎಂದು ಕರಾರುವಾಕ್ಕಾಗಿ ನುಡಿಸಾಣಿಕೆಯ ಒಳಪದರಗಳನ್ನು ದಾಖಲಿಸುತ್ತಾರೆ. ರವಿಶಂಕರ್ ಮತ್ತು ವಿಲಾಯತ್‌ಖಾನ್- ಇಬ್ಬರು ದೈತ್ಯ ಸಿತಾರ್‌ ಕಲಾವಿದರ ಮುಖಾಮುಖಿ, ರವಿಶಂಕರ್ ಪಾಶ್ಚಾತ್ಯ ಸಂಗೀತಕ್ಕೆ ತೆರೆದುಕೊಂಡ ಕ್ರಮ ಇಂಥ ಅನೇಕ ವಿಚಾರಗಳನ್ನು ಭಿನ್ನವಾದ ಕಣ್ನೆಲೆಯಿಂದ ದಾಖಲಿಸಲಾಗಿದೆ.

ಸಂಗೀತದ ಕೇಳ್ಮೆ, ಕಲಿಕೆ, ವಿಮರ್ಶೆ, ಚಿಂತನೆ ಎಲ್ಲವನ್ನೂ ಕ್ರಮಬದ್ಧವಾಗಿ ಬೆಳೆಸುತ್ತ, ಉತ್ತಮ ರಸಿಕಸಮುದಾಯವನ್ನು ಸೃಷ್ಟಿಸುತ್ತಲೇ, ಸಂಗೀತಗಾರ-ಕೇಳುಗರ ನಡುವಿನ ಕೊಡುಕೊಳ್ಳುವಿಕೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ‘ರಾಗಮಾಲ’ ಮಾಲಿಕೆಯ ಮೊದಲ ಗಟ್ಟಿಹೆಜ್ಜೆ ಇದಾಗಿದೆ. ಸಂಗೀತಗಾರರು, ಕೇಳುಗರು, ವಿಮರ್ಶಕರು, ಮಾಧ್ಯಮಗಳು, ಸಂಘಟಕರು ಎಲ್ಲರನ್ನೂ ಒಳಗೊಂಡು ಸಂಗೀತಾನುಭವವನ್ನು ಹೆಚ್ಚು ಎತ್ತರ ಹಾಗು ಆಳಗೊಳಿಸುವ ಮುಂಬೈನ ‘ಮ್ಯೂಸಿಕ್ ಫೋರಂ’ ನ ಸದಾಶಯ ಮತ್ತು ಸಾಮುದಾಯಿಕ ಅನುಭವದ ಮಾದರಿ ನಮ್ಮ ಮುಂದಿದೆ. 

‘ಕೇಳ್ಮೆ’ಯ ಸಂಚಿಕೆ ಸಂಗೀತದ ಕೇಳ್ಮೆಯನ್ನು ಕುರಿತಂಥ ಕನ್ನಡದ ಮೊಟ್ಟಮೊದಲ ಏಕವಿಷಯ ಕೃತಿ. ‘ಈ ಸಂಪುಟದ ಹಿಂದಿನ ಪ್ರೇರಣೆ’ ರಾಜೀವ ತಾರಾನಾಥರು ಹಿಂದೊಮ್ಮೆ ಹೇಳಿದಂತೆ: ‘It is only in Robinson Crusoe’s world that there can be no classical music. Classical music is shared knowledge’. ‘ರಸಾಸ್ವಾದನೆಯೆಂಬುದು ಒಪ್ಪಿತ, ಅರ್ಥವಾಗುವ ಪರಸ್ಪರ ನಿಯಮಗಳನ್ನು ಆಧರಿಸಿರುವುದರಿಂದ, ಮಾನವ ಹಂತಹಂತವಾಗಿ  ಕಟ್ಟಿರುವ ಕ್ಲಾಸಿಸಿಸಂ ಅಥವಾ ಅಭಿಜಾತತೆಯ ಸಾರವನ್ನು ಅರಿಯುವುದು ಅಗತ್ಯವಾಗುತ್ತದೆ. ಭಾರತೀಯ ಸಂಗೀತದ ಮೆಲೊಡಿಕ್ ಮತ್ತು ಸರಣಿಗುಣ, ಷಡ್ಜದ ಸ್ವರೂಪ, ಶೃತಿಯ ಮಹತ್ವ, ಘರಾನಾದ ಕಲ್ಪನೆ, ರಾಗದ ಅಂತರಾಳ – ಎಲ್ಲದರ ಬಗ್ಗೆ ಮಾತನಾಡುವ ತಾರಾನಾಥರು ಸಂಗೀತವೆನ್ನುವುದು ‘ಗಾಯಕನಿಗೆ ಗಂಟಲಲ್ಲಿ, ವಾದ್ಯಗಾರನಿಗೆ ಬೆರಳಲ್ಲಿ, ಬೆರಳಿಗಿರುವ ಬುದ್ಧಿಯಲ್ಲಿ’ ನೆಲೆಸುತ್ತದೆ ಎನ್ನುತ್ತಾರೆ.

ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದ ರಸಾಸ್ವಾದನೆ ಕುರಿತ ಅಧ್ಯಾಯಗಳು ಎರಡೂ ಪದ್ಧತಿಗಳ ಸರ್ವಪರಿಚಯಾತ್ಮಕ ಉತ್ಕೃಷ್ಟ ಪಠ್ಯ ಹೊಂದಿವೆ. ಆಸ್ವಾದನೆಯ ಕ್ರಮ ಕಾಲಕಾಲಕ್ಕೆ ಬದಲಾಗುತ್ತ ಬಂದಿದೆಯೆ? ಹಾಗಿದ್ದಲ್ಲಿ ಅಂಥ ಬದಲಾವಣೆಯ ರೂಪುರೇಷೆಗಳೇನು? ಸಾಮಾಜಿಕ-ಆರ್ಥಿಕ- ಸಾಂಸ್ಕೃತಿಕ ಪ್ರಭಾವಗಳ ಪಾತ್ರವೇನು? ಕಲಾವಿದ- ಶ್ರೋತೃ ನಡುವಿನ ನಿರೀಕ್ಷೆಗಳೆಂಥವು? ಆಧುನಿಕ ಕಾಲದ ಕಛೇರಿ ಮತ್ತು ಪಾಶ್ಚಿಮಾತ್ಯ ಕಾನ್ಸರ್ಟ್ ಇವುಗಳ ಹೋಲಿಕೆಯ ಜೊತೆಜೊತೆಗೆ ರಾಜಕೀಯ ಪಲ್ಲಟಗಳು, ಸಾತಂತ್ರ್ಯ ಹೋರಾಟದ ಚೌಕಟ್ಟಿನಲ್ಲಿ ಬದಲಾವಣೆಗಳು, ಸಂಗೀತ ಸಭೆಗಳು, ಭಕ್ತಿಯ ಪಾತ್ರ, ಧ್ವನಿವರ್ಧನೆಯ ಪಾತ್ರ- ಹೀಗೆ ಕೊನೆಯಿಲ್ಲದ ವಿಚಾರಗಳ ಸರಣಿಯೇ ಈ ಹೊತ್ತಿಗೆಯನ್ನು ಆವರಿಸಿದೆ. ಕಛೇರಿ ಪದ್ಧತಿ ಕುರಿತ ಅರಿಯಾಕುಡಿ ಅವರ ಲೇಖನ,  ಜಿ.ಎನ್.ಬಿ. ಅವರ ‘ಕಛೇರಿ ಸಂಪ್ರದಾಯ’, ಕೇಳುಗನ ಮನಸ್ಸನ್ನು ಬಿಂಬಿಸುವ ಎ.ಎನ್. ಮೂರ್ತಿರಾಯರ ಲೇಖನ, ಟಿ.ಎಂ. ಕೃಷ್ಣ ಸಂಗೀತ ಹಾಗೂ ಸಂಗೀತ ಪ್ರದರ್ಶನದ ಚೌಕಟ್ಟಿನಲ್ಲಿ ಚರ್ಚಿಸುವ, ‘ಕಲಾಸಂಗೀತ’ದ ಪರಿಕಲ್ಪನೆ- ಇವೆಲ್ಲ ಮೌಲಿಕ ಸೇರ್ಪಡೆಗಳಾಗಿವೆ. ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಎರಡರ ಚೆಂದವನ್ನೂ, ಘನತೆಯನ್ನೂ ಬಿಂಬಿಸುವ ಒಂದು ಔಚಿತ್ಯಪೂರ್ಣ ಸ್ಪೇಸನ್ನು ಇಲ್ಲಿ ಸೃಷ್ಟಿ ಮಾಡಿದ್ದಾರೆ. ಎರಡೂ ಪದ್ಧತಿಗಳನ್ನು ನಿಕಟಗೊಳಿಸಬಲ್ಲಂತಹ ವಿಚಾರಗಳು, ಸಂಕುಚಿತ ಮನಸ್ಸುಗಳ ಸೀಮಿತ ಧೋರಣೆಯನ್ನು ತೊಲಗಿಸಬಲ್ಲಂತಹ ದಾಖಲೆಗಳು ಈ ಕೃತಿಯಲ್ಲಿವೆ.

ಸಂಗೀತ ಕಛೇರಿಗಳ, ಸಾಮುದಾಯಿಕ ಸಂಗೀತ ಕಾರ್ಯಕ್ರಮಗಳ ದಾಖಲೆಗಳು, ಕಲಾವಿದರ ಒಳಗೊಳ್ಳುವಿಕೆಯನ್ನು ತೋರುತ್ತಲೆ, ಆಯಾ ಕಾಲದೇಶದ ಒಂದು ಘನ ಪ್ರಪಂಚವನ್ನು ಸುಸಂಬದ್ಧವಾಗಿ ಅನಾವರಣ ಮಾಡುತ್ತವೆ. ಎಲ್ಲಾ ಬಗೆಯ ಸಂಕುಚಿತತೆಯನ್ನು ಕಳೆದು ಅನುಭವವನ್ನು ವಿಶಾಲಗೊಳಿಸುವ, ಮನಸ್ಸುಗಳನ್ನು ಹಿಗ್ಗಿಸುವ ಗುಣ ಈ ಕೃತಿಗಳಿಗಿವೆ. ಕಲಾ ಪ್ರಪಂಚಗಳಲ್ಲಿ ಮೇಲುಕೀಳು, ಸ್ಪೃಶ್ಯ- ಅಸ್ಪೃಶ್ಯತನಗಳು, ಸೂಕ್ಷ್ಮವಾಗಿ ಹಾಗೂ ಢಾಳಾಗಿ ಕೆಲಸ ಮಾಡುತ್ತಿರುವ, ಗೋಚರ ಅಗೋಚರ ಗೋಡೆಗಳು ಏಳುತ್ತಿರುವ ಈ ಹೊತ್ತಿನಲ್ಲಿ, ಕೇಸರೀಕರಣದ ವಿಷಗಾಳಿ ಆವರಿಸಿಕೊಳ್ಳುತ್ತಿರುವ ಇಂದಿನ ಸಮಾಜದಲ್ಲಿ, ನಿಜಮುಕ್ತತೆ, ಎಚ್ಚರದ ಆರೋಗ್ಯವಂತ ಆಲೋಚನೆ ಕಲೆಗಳಿಗೆ ಜೀವದಾಯಕ. ಇಂಥ ಜೀವಪರ ಕಲಾನುಭವವನ್ನು ರಾಗಮಾಲ ಸಂಚಿಕೆಗಳು ನಮ್ಮದಾಗಿಸುತ್ತವೆ.

ಪ್ರಕಾಶಕರ ವಿಳಾಸ:
ರಾಗಮಾಲ ಸಂಪಾದಕರು: ಶೈಲಜ ಮತ್ತು ಟಿ. ಎಸ್. ವೇಣುಗೋಪಾಲ್
ಸಿ ಎಚ್ - ೭೩, ೭ನೇ ಮುಖ್ಯರಸ್ತೆ, ಸರಸ್ವತೀಪುರಂ, ಮೈಸೂರು - ೫೭೦೦೦೯
ಬೆಲೆ: ರೂ. ೧೦೦

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.