ADVERTISEMENT

ಗಮನಾರ್ಹ ಶಾಸನಶೋಧ ಪರಿಶೋಧ

ವಿಮರ್ಶೆ

ಡಾ.ಎಚ್.ಎಸ್.ಗೋಪಾಲ ರಾವ್
Published 13 ಫೆಬ್ರುವರಿ 2016, 19:30 IST
Last Updated 13 ಫೆಬ್ರುವರಿ 2016, 19:30 IST
ಪುಟ:264 ರೂ.200
ಪುಟ:264 ರೂ.200   

ಅನ್ವೇಷಣೆ (ಸಂಶೋಧನಾ ಲೇಖನಗಳು)
ಲೇ: ಡಾ. ಬಿ. ರಾಜಶೇಖರಪ್ಪ
ಪ್ರಕಾಶಕರು: ಸಿವಿಜಿ ಇಂಡಿಯಾ, ಬೆಂಗಳೂರು

ಇತಿಹಾಸದ ಅಧ್ಯಯನಕ್ಕೆ ಅಗತ್ಯವಾದ ಆಕರಗಳ ಪೈಕಿ ಶಾಸನಗಳು ಮುಖ್ಯವೆನಿಸಿವೆ. ಸಮಕಾಲೀನ ಬರಹದ ದಾಖಲೆಗಳಾದ್ದರಿಂದ ಅವುಗಳ ಮಹತ್ವ ಹೆಚ್ಚು. ಭೌತಿಕ ಸಾಕ್ಷಿಗಳು ಪೂರಕ ಸಾಕ್ಷಿಗಳಾಗಿ ಹೆಚ್ಚು ಉಪಯುಕ್ತ. ಪ್ರಾಗಿತಿಹಾಸ ಕಾಲದ ಅಧ್ಯಯನಕ್ಕೆ ಅವೇ ಪ್ರಮುಖ ಸಾಕ್ಷಿಗಳು.

ಶಾಸನಾಧ್ಯಯನದಲ್ಲಿ ಶಾಸನಗಳ ಶೋಧವು ಪ್ರಾಥಮಿಕ ಮತ್ತು ಪ್ರಮುಖ ಘಟ್ಟ. ಶಾಸನಶೋಧದ ನಂತರ ಅವುಗಳ ಓದು, ನಂತರ ಪರಿಶೋಧನೆಯ ಮೂಲಕ ಶಾಸನಗಳ ಒಡಲಲ್ಲಿರುವ ಹೆಚ್ಚಿನ ವಿಚಾರಗಳತ್ತ ಗಮನ ಹರಿಸಲಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಶಾಸನದ ಓದಿನ ನಂತರ ಅವುಗಳಲ್ಲಿನ ಸ್ಥೂಲ ವಿಚಾರಗಳನ್ನು ಪ್ರಕಟಿಸಿ, ಬಿಡುವು ಪಡೆಯಲಾಗುತ್ತದೆ. ಇದರಿಂದ ಶಾಸನಶೋಧದ ಸಂಪೂರ್ಣ ಮತ್ತು ಸಮರ್ಥ ಬಳಕೆಯಾದಂತಾಗುವುದಿಲ್ಲ.

ಶಾಸನಶೋಧಕ್ಕೆ ಇತಿಹಾಸಾಸಕ್ತಿ ಸಾಕು; ಅದನ್ನು ಯಾರೂ ಮಾಡಬಹುದು; ಆದರೆ ಅದನ್ನು ಓದಲು ಲಿಪಿತಜ್ಞನಿಗೆ ಮಾತ್ರ ಸಾಧ್ಯ. ಉದ್ಯೋಗಕ್ಕೆ ಹೆಚ್ಚಿನ ಅವಕಾಶವಿಲ್ಲದ ಕಾರಣದಿಂದ ಲಿಪಿಶಾಸ್ತ್ರವು ಹೆಚ್ಚು ಜನರ ವಿಶ್ವಾಸಕ್ಕೆ ಪಾತ್ರವಲ್ಲ. ಶಾಸನಶೋಧ, ಅವುಗಳ ಓದು ಮತ್ತು ಪರಿಶೀಲನೆಯಾಗದೆ ಇತಿಹಾಸದ ಅಧ್ಯಯನ ಅಪೂರ್ಣವೆನಿಸಿ ಕೊಳ್ಳುತ್ತದೆ. ಆದ್ದರಿಂದ ಶಾಸನಶೋಧ ಮತ್ತು ಪರಿಶೋಧಕಾರ್ಯವು ನಿರಂತರವಾಗಿ ನಡೆಯುತ್ತಲೇ ಇರಬೇಕಾಗುತ್ತದೆ. ಅದು ಮುಗಿಯಿತು ಎಂದು ಬಿಡುವು ಪಡೆಯುವಂತಿಲ್ಲ.

ಡಾ. ಬಿ. ರಾಜಶೇಖರಪ್ಪ ಅವರ ‘ಅನ್ವೇಷಣೆ’ ಹೆಸರಿನ ಸಂಶೋಧನಾ ಲೇಖನಗಳ ಸಂಕಲನದ ೧೮ ಲೇಖನಗಳ ಪೈಕಿ ಮೊದಲ ೧೪ ಲೇಖನಗಳು ‘ಶಾಸನಶೋಧ’ ಮತ್ತು ‘ಪರಿಶೋಧ’ ಕಾರ್ಯಕ್ಕೆ ಮೀಸಲಾಗಿದ್ದು, ಕೊನೆಯ ಎರಡು ಲೇಖನಗಳು ಸಾಹಿತ್ಯ ಚರಿತ್ರೆ ಮತ್ತು ಧಾರ್ಮಿಕ ಸಂಸ್ಥೆಯೊಂದರ ಚಾರಿತ್ರಿಕ ಹಿನ್ನೆಲೆಯನ್ನು ಕುರಿತದ್ದಾಗಿವೆ. ಸಂಕಲನದ ಮೊದಲನೆಯ ಲೇಖನವು ಪ್ರಕಟಿತ ಶಾಸನಗಳನ್ನು ಆಧರಿಸಿ ಹಿಂಸೆಯ ಸಾಮಾಜಿಕ ಮತ್ತು ಆರ್ಥಿಕ ನೆಲೆಗಳನ್ನು ಕುರಿತ ಪರಿಶೋಧವಾಗಿದೆ.

ಹಿಂಸೆಯ ಸ್ವರೂಪವನ್ನು ಪರಿಚಯಿಸುತ್ತಾ, ಹಿಂಸೆಯನ್ನು ನಿರಾಕರಿಸುವ ಜೈನ ಧರ್ಮವೂ, ಕೆಲವು ಹಂತಗಳ ಹಿಂಸೆಯು ಅನಿವಾರ್ಯ ಎಂದು ವ್ಯಾಖ್ಯಾನಿಸಿರುವುದನ್ನು ನೆನಪು ಮಾಡಿಕೊಂಡು– ವೀರಗಲ್ಲು, ಮಾಸ್ತಿಗಲ್ಲುಗಳು ಮಾತ್ರವಲ್ಲದೆ ನಿಸಿಧಿಕಲ್ಲುಗಳ ಹಿಂದೆಯೂ ನಿರೂಪಿತವಾಗಿರುವ ಹಿಂಸೆಯ ಸ್ವರೂಪವನ್ನು ಶಾನಪಠ್ಯಗಳ ಉಲ್ಲೇಖಗಳೊಂದಿಗೆ ಗುರುತಿಸುವ ಪ್ರಯತ್ನವಾಗಿದೆ. ಶಾಸನೋಲ್ಲೇಖಗಳಲ್ಲಿ ಉತ್ಪ್ರೇಕ್ಷೆ, ಪುನರುಕ್ತಿ, ಕವಿಸಮಯ ಇತ್ಯಾದಿಗಳಿರುವುದನ್ನು ನಿರಾಕರಿಸದೆ, ಇವುಗಳ ನಡುವೆ ಇರುವ ಸತ್ಯಾಂಶವನ್ನು ತಿಳಿಯಲು ಪ್ರಯತ್ನಿಸುವುದು ಒಂದು ಸಾಹಸಕ್ರಿಯೆ.

ವೀರಸ್ವರ್ಗದ ಕಲ್ಪನೆ ಮತ್ತು ಸಹಗಮನ ಹಾಗೂ ಅನುಗಮನಗಳ ಹಿಂದಿನ ಹಿಂಸೆಯ ಪರಿಕಲ್ಪನೆ ಮಾತ್ರವಲ್ಲದೆ ಸಲ್ಲೇಖನ, ಸಮಾಧಿಮರಣಗಳ ಹಿಂದಿನ ಧಾರ್ಮಿಕ ನಂಬಿಕೆಗಳ ಹಿನ್ನೆಲೆ ಮತ್ತು ದಿವ್ಯಗಳಿಗೆ ಸಂಬಂಧಿಸಿದಂತಿರುವ ಹಿಂಸೆಯ ಬಗೆಗಿನ ಪರಿಶೀಲನೆಯು ಶಾಸನಾಧ್ಯಯನದ ಮಹತ್ವವನ್ನು ಮನದಟ್ಟು ಮಾಡುತ್ತವೆ. ಅನೇಕ ಅಸಹಜವೆನಿಸುವ ಸಾಮಾಜಿಕ ದುರಂತಗಳ ದಾಖಲೆಗಳಾಗಿ ಶಾಸನಗಳು ಮಹತ್ವದ ಮಾಹಿತಿ ನೀಡುವುದನ್ನು ಸಂಶೋಧನ ಲೇಖನ ಮನವರಿಕೆ ಮಾಡಿಕೊಡುತ್ತದೆ. ಸಾಮಾಜಿಕ ಇತಿಹಾಸದ ಅರಿವಿಗೆ ಶಾಸನಗಳ ಅಧ್ಯಯನವು ಸಹಕಾರಿ.

ಪ್ರಾದೇಶಿಕ ಇತಿಹಾಸದ ಅಧ್ಯಯನಕ್ಕೂ ಶಾಸನಗಳು, ಒಂದು ಮಿತಿಯಲ್ಲಿ ಪ್ರಮುಖ ಆಕರಗಳು. ಸಮಗ್ರವಾಗಿ ಎಲ್ಲವನ್ನೂ ತಿಳಿಸುತ್ತೇವೆ ಎಂದು ಸಂಶೋಧಕರೂ ಭಾವಿಸುವಂತಿಲ್ಲ ಮತ್ತು ಆಸಕ್ತರೂ ನಿರೀಕ್ಷಿಸುವಂತಿಲ್ಲ. ಇದಕ್ಕೆ ‘ಹರಿಹರ ತಾಲ್ಲೂಕಿನ ಶಾಸನಗಳು ಮತ್ತು ಚಿತ್ರದುರ್ಗದ ಪ್ರಮುಖ ಶಾಸನಗಳು’ ಉದಾಹರಣೆಯಾಗುತ್ತವೆ. ಇವುಗಳಿಂದ ಸ್ಥೂಲವಾದ ಹಲವು ಮಹತ್ವದ ವಿಚಾರಗಳನ್ನು ತಿಳಿಯಲು ಸಾಧ್ಯವಾಗಿದೆ.

ಶಾಸನಗಳಿಗೆ ಸಂಬಂಧಿಸಿದಂತೆ ರಾಜಶೇಖರಪ್ಪನವರ ಮಹತ್ವದ ಸಂಶೋಧನೆಯೆಂದರೆ ಚಿತ್ರದುರ್ಗಕ್ಕೆ ಸಮೀಪದ ಚಂದ್ರವಳ್ಳಿಯ ಮಯೂರವರ್ಮನ ಶಾಸನ ಕುರಿತ ಹೊಸ ವಿಚಾರ. ಅದು ಪ್ರಾಕೃತ ಭಾಷೆ ಮತ್ತು ಬಾಹ್ಮೀ ಲಿಪಿಯ ಶಾಸನವೆಂದು ಒಪ್ಪಿತವಾಗಿತ್ತು. ಆದರೆ ಅದು ಬ್ರಾಹ್ಮೀ ಲಿಪಿಯದಾದರೂ, ಭಾಷೆ ಸಂಸ್ಕೃತ ಎಂದು ಖಚಿತಪಡಿಸಿದವರು ರಾಜಶೇಖರಪ್ಪ. ಯಾವುದೇ ಸಂಶೋಧನೆಯಲ್ಲಿ ಇಂತಹ ಮರುವ್ಯಾಖ್ಯಾನಗಳು ಅಪರೂಪಕ್ಕೆಂಬಂತೆ ಆಗುತ್ತವೆ. ಇದಕ್ಕೆ ಲಿಪಿಶಾಸ್ತ್ರದ ತಿಳಿವಿನ ಜೊತೆಗೆ ಕ್ಷೇತ್ರಕಾರ್ಯದ ಪಾತ್ರವೂ  ಮುಖ್ಯ.

ಶಾಸನಗಳ ಪಠ್ಯದಲ್ಲಿನ ಸಾಹಿತ್ಯಿಕ ವಿಶೇಷಗಳನ್ನು ಗುರುತಿಸಲು ಪ್ರಾಚೀನ ಮತ್ತು ಮಧ್ಯಕಾಲೀನ ಸಾಹಿತ್ಯದ ಪರಿಚಯ ಚೆನ್ನಾಗಿ ಇರಬೇಕು. ಚಿತ್ರದುರ್ಗದ ಕೆಲವು ಶಾಸನಗಳಲ್ಲಿನ ಸಾಹಿತ್ಯಾಂಶಗಳು ಸಂಶೋಧನಾ ಲೇಖನದಲ್ಲಿ ಅಭಿವ್ಯಕ್ತಿಗೊಂಡಿರುವುದರಿಂದ ಶಾಸನಗಳು ಆಯಾ ಕಾಲಘಟ್ಟದ ಸಾಹಿತ್ಯದ ಅಧ್ಯಯನಕ್ಕೂ ಆಕರಗಳಾಗುತ್ತವೆ ಎಂದು ಸ್ಪಷ್ಟವಾಗುತ್ತದೆ. ಶಾಸನಗಳು ಸ್ಥಳನಾಮದ ಅಧ್ಯಯನಕ್ಕೆ ಮುಖ್ಯ ಆಕರಗಳಾಗುತ್ತವೆ. ಚಿತ್ರದುರ್ಗದ ಹೆಸರಿನ ಮೂಲ ಮತ್ತು ಬದಲಾವಣೆಗಳ ಅರಿವಿಗೆ ಶಾಸನಗಳು ನೆರವಾಗುತ್ತವೆ.

ಶಾಸನತಜ್ಞರಾದವರಿಗೆ ಯಾವುದೇ ಒಂದು ಹೊಸ ಶಾಸನದ ಸುಳಿವು ಸಿಕ್ಕಕೂಡಲೇ ಅದರ ಶೋಧದತ್ತ ಕುತೂಹಲ ಮೂಡುವುದು ಸಹಜ. ಇಂತಹ ಕುತೂಹಲದ ಕಾರಣವಾಗಿ ಬೇರೆಬೇರೆ ಭಾಗದ ಶಾಸನಗಳ ಶೋಧ ಸಾಧ್ಯವಾಗುತ್ತದೆ. ಅದರ ಗುರುತಾಗಿ ರಾಜಶೇಖರಪ್ಪನವರು ತುಮಕೂರು ಮತ್ತು ದಾವಣಗೆರೆ ಜಿಲ್ಲೆಯ ಕೆಲವು ಶಾಸನಗಳನ್ನು ಶೋಧಿಸಿ ಪ್ರಕಟಿಸಿದ್ದಾರೆ. ಇದರಿಂದ ಆ ಭಾಗದ ಇತಿಹಾಸ ಮತ್ತು ಸಂಸ್ಕೃತಿಯ ಅರಿವಿನ ವಿಸ್ತರಣೆಗೆ ಸಾಧ್ಯವಾಗಿದೆ. ಶಾಸನಗಳ ಪಾಠದ ಪ್ರಕಟಣೆಯ ಜೊತೆಗೆ ಅವುಗಳಿಗೆ ಸಂಬಂಧಿಸಿದ ಪ್ರಮುಖ ವಿಚಾರಗಳ ವಿಶ್ಲೇಷಣೆಯು ಆಯಾ ಪ್ರದೇಶದ ಇತಿಹಾಸದ ಮರುಅಧ್ಯಯನಕ್ಕೆ ದಾರಿ ಮಾಡಿಕೊಡುತ್ತದೆ.

ಅಪರೂಪಕ್ಕಾದರೂ, ತಮ್ಮ ಸ್ಥಳದ ಇತಿಹಾಸವನ್ನು ತಿಳಿಯಲು ತವಕಿಸುವ ಜನ ಇರುತ್ತಾರೆ. ಅಂತಹವರು ಎಂತಹ ಶ್ರಮವನ್ನಾದರೂ ತಮ್ಮದಾಗಿಸಿಕೊಳ್ಳುತ್ತಾರೆ. ಅದಕ್ಕೊಂದು ಉದಾಹರಣೆಯಾಗಿ ತಿಪಟೂರು ತಾಲ್ಲೂಕಿನ ಪಟ್ಟದದೇವರಹಳ್ಳಿಯ ಇತಿಹಾಸಾಸಕ್ತ ಜನರ ಸಾಹಸವನ್ನು ಉಲ್ಲೇಖಿಸಬೇಕಾದ್ದು ಅನಿವಾರ್ಯ. ಬಾವಿಯನ್ನು ತೋಡುತ್ತಿದ್ದಾಗ ಸಿಕ್ಕಿದ ಶಾಸನವಿದ್ದ ಚಿಕ್ಕ ಕಲ್ಲುಚಪ್ಪಡಿಯನ್ನು ಒಂದು ಗೋಣಿ ಚೀಲದಲ್ಲಿ ಹಾಕಿಕೊಂಡು ಚಿತ್ರದುರ್ಗಕ್ಕೆ ಬಸ್ಸಿನಲ್ಲಿ ತೆಗೆದುಕೊಂಡ ಹೋದ ಪ್ರಕರಣ ‘ವಿಚಿತ್ರವಾದರೂ ನಿಜ’ ಎನ್ನುವುದಕ್ಕೆ ಉದಾಹರಣೆ. ತಮ್ಮದೇ ಊರಿನ ದೇವಾಲಯಗಳ ಗೋಡೆಗಳನ್ನು, ಗೋಡೆಗಳ ಮೇಲಿನ ಶಿಲ್ಪಗಳನ್ನು ಮಾತ್ರವಲ್ಲದೆ ಮತ್ತಾವುದೇ ಐತಿಹಾಸಿಕ ಸ್ಮಾರಕಗಳನ್ನು ಪರಂಪರೆಯ ಅರಿವೇ ಇಲ್ಲದೆ ವಿವಿಧ ಕಾರಣಗಳಿಂದ ಹಾಳುಮಾಡುವ ಜನರೇ ಇರುತ್ತಾರೆ ಎಂಬ ತಿಳಿವಳಿಕೆಯು ತಪ್ಪು ಎನ್ನುವಂತಿದೆ ಪಟ್ಟದದೇವರಹಳ್ಳಿಯ ಜನರ ಸಾಹಸ.

ಶಾಸನಗಳ ಓದು ಒಮ್ಮೆಗೇ ಮುಗಿಯುವುದಿಲ್ಲ. ಕೆಲವು ಶಾಸನಗಳು ಮತ್ತೆಮತ್ತೆ ಓದಿಗೆ ತೆರೆದುಕೊಳ್ಳುತ್ತಲೇ ಇರುತ್ತವೆ. ಶಾಸನದ ಕಲ್ಲಿನ ಮೇಲಿನ ಬರಹವಿದ್ದ ಸ್ಥಿತಿ ಮತ್ತು ಅದರ ಪಡಿಯಚ್ಚು ತೆಗೆದುಕೊಂಡವರ ಪರಿಣತಿಗಳ ಮಿತಿಗಳ ಕಾರಣದಿಂದ ಕೆಲವು ಶಾಸನಗಳ ಓದು ಒಮ್ಮೆಗೇ ಸ್ಪಷ್ಟ ಆಗುವುದಿಲ್ಲ. ಶಾಸನತಜ್ಞನಾದವನು ಯಾವುದೇ ಶಾಸನವನ್ನು ಕಣ್ಣಾರೆ ಕಂಡು, ಕೈಯಾರೆ ಮುಟ್ಟಿ ಪಾಠವನ್ನು ಸ್ಪಷ್ಟಪಡಿಸಿಕೊಳ್ಳುವುದು ಸಹಜ. ಅದು ಶಾಸನಗಳ ಪರಿಷ್ಕರಣೆಯಾಗುವ ಕ್ರಮ.

ಹಾಗೆ ಪರಿಷ್ಕರಣೆಗೊಂಡಿರುವ ಒಂದು ಶಾಸನ ಎಡೆಯೂರಿನ ಸಿದ್ಧಲಿಂಗೇಶ್ವರರು ಮತ್ತು ಸಂಬಂಧಿಸಿದ ಮಠಕ್ಕೆ ಸಂಬಂಧಿಸಿದ್ದು, ಇದು ಸಾಂಸ್ಕೃತಿಕ ಇತಿಹಾಸದ ಅಧ್ಯಯನಕ್ಕೆ ವಿಶೇಷ ಕೊಡುಗೆಯಾಗಿದೆ. ಪರಿಷ್ಕರಣೆಯ ಸಂದರ್ಭದಲ್ಲಿ ಹಿಂದೆ ಆಗಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಮತ್ತು ಪರಾಮರ್ಶಿಸಲು ಅವಕಾಶಗಳಿರುತ್ತವೆ. ಕೆಲವು ಹೊಸ ಶಾಸನಗಳು ಇತಿಹಾಸದ ಪುನಾರಚನೆಗೆ ಅವಕಾಶ ಕಲ್ಪಿಸುತ್ತವೆ. ನೊಳಂಬ ಪಲ್ಲವರ ಇತಿಹಾಸದ ಪುನಾರಚನೆಗೆ ಶುಭತುಂಗನ ಹಿರೇಕೋಗಿಲೂರು ಶಾಸನ ಅವಕಾಶ ಕಲ್ಪಿಸಿದೆ.

ವಿಜಯನಗರದ ಅರಸರ ಪೈಕಿ ಇಬ್ಬರು ದೇವರಾಯರಿದ್ದಾರೆ. ಇವರಲ್ಲಿ ಮೊದಲನೆಯ ದೇವರಾಯನಿಗೆ ದಾಯಾದಿಗಳಿಂದ ತೊಂದರೆ ಇತ್ತೆಂದು ಇತಿಹಾಸ ಬಲ್ಲವರಿಗೆ ತಿಳಿದಿದೆ. ಚಿತ್ರದುರ್ಗದ ಒಂದು ಗುಡ್ಡದ ಮೇಲೆ ಬಂಡೆಗಳ ನಡುವಿನ ಇಕ್ಕಟ್ಟಾದ ಜಾಗದಲ್ಲಿ ಬಂಡೆಯೊಂದರ ಮೇಲಿರುವ ಕೇವಲ ಎರಡು ಸಾಲಿನ ಶಾಸನ ಮತ್ತು ಅದರ ಪಕ್ಕದಲ್ಲಿರುವ ಪುರುಷಶಿಲ್ಪವು ಅವು ದಾಖಲಾಗಿರುವ ಸ್ಥಳದಿಂದಾಗಿ ಕುತೂಹಲ ಕೆರಳಿಸುತ್ತವೆ. ಅಂತಹ ಶಾಸನ ಮತ್ತು ಶಿಲ್ಪದ ಬಗೆಗಿನ ಪರಿಶೀಲನೆಯು ದೇವರಾಯನ ಅಂತ್ಯಕಾಲದ ಬಗ್ಗೆ ಹೆಚ್ಚಿನ ಆಲೋಚನೆಗೆ ದಾರಿ ಮಾಡಿದೆ.

ಚಿತ್ರದುರ್ಗದ ಬೆಟ್ಟದ ಮೇಲೆ ನೋಡುಗರ ಗಮನ ಸೆಳೆಯುವ ‘ಗಾಳಿಮಂಟಪಗಳು’ ಎಂದೇ ಕರೆಯಲ್ಪಡುವ ವಾಸ್ತುವಿಶೇಷಗಳತ್ತ ಒಬ್ಬ ಶಾಸನತಜ್ಞ ಗಮನಹರಿಸುವುದರಿಂದ ಜನವಾಡಿಕೆಯ ಹೆಸರುಗಳು ಹೇಗೆ ದಾರಿ ತಪ್ಪಿಸುತ್ತವೆ ಎಂದು ತಿಳಿಯಲು ಸಾಧ್ಯವಾಗುತ್ತದೆ. ಗೋಪುರ, ರಥ, ತೇರು, ಉಪ್ಪರಿಗೆ, ಉಯ್ಯಾಲೆಮಂಟಪ ಇತ್ಯಾದಿ ಪಾರಿಭಾಷಿಕ ಶಬ್ದಗಳಿಂದ ಪರಿಚಿತವಾದ ರಥದಂತಹ ವಾಸ್ತುವಿನ ಸ್ವರೂಪವನ್ನು ಖಚಿತವಾಗಿ ಅರ್ಥೈಸಲು ಶಾಸನಗಳು ದಾರಿ ಮಾಡಿವೆ. ಈ ಉಪ್ಪರಿಗೆಗಳು ಯಾರ ಕಾಲದಲ್ಲಿ ನಿರ್ಮಾಣವಾಗಿವೆ ಎಂದು ಖಚಿತಪಡಿಸಲಾಗಿದೆ.

ಕೆರೆಗಳು ಕೃಷಿಗೆ ಅತ್ಯವಶ್ಯಕವಾದ ನೀರಿನ ನೆಲೆಗಳು. ಈಚಿನ ದಿನಗಳಲ್ಲಿ ನಗರ ಪ್ರದೇಶಗಳ ಕೆರೆಗಳು ಮಾತ್ರವಲ್ಲದೆ ಪಟ್ಟಣಗಳ, ವಿಶೇಷವಾಗಿ ತಾಲ್ಲೂಕು ಕೇಂದ್ರಗಳ ಕೆರೆಗಳೂ ಮರೆಯಾಗುತ್ತಿವೆ. ಇಂತಹ ಹೊತ್ತಿನಲ್ಲಿ ಯಾವುದೇ ಪ್ರದೇಶದಲ್ಲಿ ಇದ್ದ ಕೆರೆಗಳ ಬಗ್ಗೆ ಅರಿವು ಮೂಡುವುದು ಒಳಿತು. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಪ್ರದೇಶದ ಕೆರೆಗಳ ಐತಿಹಾಸಿಕ ಅವಲೋಕನವು ವಿಶೇಷ ಗಮನ ಸೆಳೆಯುತ್ತದೆ.

ಶಾಸನಗಳು ಮತ್ತು ಭೌತಿಕ ಸಾಕ್ಷಿಗಳ ನೆರವಿನಿಂದ ಆಗಿರುವ ಈ ಅಧ್ಯಯನವು ಆಯಾ ಕಾಲದ ಜನತೆಗೆ ನೀರಾವರಿಯ ಬಗ್ಗೆ ಇದ್ದ ವಿಶೇಷ ಆಸಕ್ತಿಯ ನೆನಪು ಮಾಡುತ್ತವೆ. ಕಟ್ಟಡಗಳನ್ನು ಕಟ್ಟುವುದರಲ್ಲಿ ನಿಷ್ಣಾತರಾಗುತ್ತಿರುವ ವರ್ತಮಾನದ ತಂತ್ರಜ್ಞರು, ನೀರಿನ ರಕ್ಷಣೆ, ಸಂಗ್ರಹಣೆ ಮತ್ತು ಸದ್ಬಳಕೆಯ ಬಗೆಗೂ ಆಲೋಚಿಸಲು ಇಂತಹ ಸಂಶೋಧನ ಲೇಖನಗಳು ನೆರವಿಗೆ ಬರುತ್ತವೆ. ಮಳೆಯ ನೀರನ್ನು ಸಂಗ್ರಹಿಸಿ, ಸದುಪಯೋಗ ಮಾಡಿಕೊಳ್ಳುವ ಕ್ರಿಯೆಯ ಬಗ್ಗೆ ನಮ್ಮ ಪ್ರಾಚೀನರಿಗಿದ್ದ ತಿಳಿವಳಿಕೆ ವರ್ತಮಾನದಲ್ಲಿ ಅರಿವು ಮೂಡಿಸಬೇಕು.

ಸಂಕಲನದ ಕೊನೆಯ ಎರಡು ಲೇಖನಗಳು ಮೊದಲೇ ಸ್ಪಷ್ಟಪಡಿಸಿರುವಂತೆ ಶಾಸನಾಧಾರಿತವಲ್ಲ. ‘ಸೋಮೇಶ್ವರ ಶತಕ’ದ ಮೂಲಕ ಕನ್ನಡಿಗರಿಗೆ ಚಿರಪರಿಚಿತನಾದ ಸೋಮನಾಥ ತೆಲುಗು ಸಾಹಿತ್ಯದಲ್ಲೂ ಪರಿಚಿತ. ಅವನ ಸ್ಥಳದ ಬಗೆಗಿನ ಚರ್ಚೆ ನಿಂತಿದೆ ಎಂದು ತಿಳಿಯುವಂತಿಲ್ಲ ಎಂಬುದನ್ನು ರಾಜಶೇಖರಪ್ಪ ನೆನಪಿಸಿದ್ದಾರೆ. ಹಲವು ಹಸ್ತಪ್ರತಿಗಳು ಮತ್ತು ಐತಿಹ್ಯಗಳನ್ನು ಆಧರಿಸಿ ಜಂಬಪ್ಪ ದೇವರು ಉಜ್ಜಯಿನಿಯನ್ನು ತೊರೆದ ಚಾರಿತ್ರಿಕ ಹಿನ್ನೆಲೆಯು ಹೊಸ ವಿಚಾರಗಳತ್ತ ಬೆರಳುಮಾಡಿದೆ.

ಒಂದು ನಿರ್ದಿಷ್ಟ ಕಾಲಮಾನ ಅಥವಾ ಒಂದು ಪ್ರದೇಶಕ್ಕೆ ಮಿತಿ ಮಾಡಿಕೊಳ್ಳದ ಸಂಶೋಧನ ಸಂಕಲನಗಳು ಹತ್ತು ಹಲವು ವಿಚಾರಗಳನ್ನು ತಿಳಿಸುವಲ್ಲಿ ಸಾರ್ಥಕ್ಯ ಪಡೆದರೂ, ಯಾವುದೇ ನಿರ್ದಿಷ್ಟ ಕಾಲಘಟ್ಟ ಮತ್ತು ಪ್ರದೇಶದ ಒಟ್ಟಾರೆ ವಿಚಾರಗಳನ್ನು ಸಂಗ್ರಹಿಸಿ ಕೊಡುವಲ್ಲಿ ವಿಫಲವಾಗುತ್ತವೆ ಎಂಬುದಕ್ಕೆ ‘ಅನ್ವೇಷಣೆ’ ಉದಾಹರಣೆಯಾಗುತ್ತದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.