ADVERTISEMENT

ಪಂಪನ ಕಾವ್ಯಕ್ಕೆ ಕೈ ದೀವಿಗೆ

ಲಕ್ಷ್ಮಣ ಕೊಡಸೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಬಿ. ವೀರಭದ್ರಪ್ಪ ಅವರ `ಪಂಪ ಪದ ಪ್ರಪಂಚ~ ಆಶ್ಚರ್ಯ ಹುಟ್ಟಿಸುವಷ್ಟು ವಿಶಿಷ್ಟವಾದ ಕೃತಿ. ಶೀರ್ಷಿಕೆಯೇ ಸೂಚಿಸುವಂತೆ `ಪಂಪ ಭಾರತ~ದಲ್ಲಿ ಬಳಕೆಯಾದ ಪದಗಳ ಅರ್ಥಗಳನ್ನು ವಿವರಿಸುವ ಪ್ರಯತ್ನಗಳು ಇದರಲ್ಲಿವೆ. ಕನ್ನಡದಲ್ಲಿ ಎಂ ಎ ಪದವಿ ಗಳಿಸಿದ್ದವರು ವೀರಭದ್ರಪ್ಪನವರು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿಯವರು. ಹುಟ್ಟೂರಿನಲ್ಲಿ ಶಾಲೆ ಆರಂಭವಾದಾಗ ಶಿಕ್ಷಕರಾಗಿ ಉಚಿತ ಸೇವೆ ಸಲ್ಲಿಸಿದ ಸಹೃದಯಿ. ನಂತರ ಚಿತ್ರದುರ್ಗದ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಅಧ್ಯಾಪಕರಾದರು. ಸಂತೇಬೆನ್ನೂರು ಸರ್ಕಾರಿ ಕಾಲೇಜಿಗೆ ಉಪನ್ಯಾಸಕರಾಗಿ ಸೇರಿಕೊಂಡರೂ ಪದವಿ ತರಗತಿಗಳಿಗೆ ಬೋಧಿಸುವ ಉದ್ದೇಶದಿಂದ ಸರ್ಕಾರಿ ಕಾಲೇಜಿನ ಕೆಲಸ ಬಿಟ್ಟು ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜು ಸೇರಿದರು. ಅಲ್ಲಿ ಕೆಲವೇ ವರ್ಷಗಳ ಸೇವೆಯ ನಂತರ ಕೆಲಸ ಕಳೆದುಕೊಂಡರು. ಸುಮಾರು 11 ವರ್ಷ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಗುಣವಾದ ಬಳಿಕ ಹತ್ತು ವರ್ಷ ಕೃಷಿ ಮತ್ತು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. 

ಹತ್ತು ವರ್ಷಗಳ ಅವಧಿಯಲ್ಲಿ `ಪಂಪ ಭಾರತ~ದ ಮೇಲೆ ಐವತ್ತಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದರು. ಎರಡು ಕಾದಂಬರಿ, 150ಕ್ಕೂ ಹೆಚ್ಚು ಕವಿತೆಗಳು, ಹಲವು ಸಣ್ಣಕತೆಗಳು, ಒಂದು ಗೀತನಾಟಕ ಅವರ ಸಾಹಿತ್ಯ ಕೃಷಿ. `ಪಂಪ ಪದ ಪ್ರಪಂಚ~ ವಿಕ್ರಮಾರ್ಜುನ ವಿಜಯಂ ಕಾವ್ಯದಲ್ಲಿರುವ ಅನೇಕ ಕ್ಲಿಷ್ಟಪದಗಳಿಗೆ ಅರ್ಥ ಹೇಳಿ ಪದ್ಯಗಳಿಗೆ ವಿನೂತನವಾದ ವ್ಯಾಖ್ಯಾನ ಮಾಡುವ ಪ್ರಯತ್ನ.

ಒಂದೂವರೆ ಸಾವಿರ ವರ್ಷಗಳಷ್ಟು ಸುದೀರ್ಘವಾದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಂಪೂಯುಗ ಹಳೆಗನ್ನಡ ಸಾಹಿತ್ಯದಲ್ಲಿ ಸುವರ್ಣ ಕಾಲ. ಪಂಪ, ರನ್ನ, ಪೊನ್ನ, ನಾಗವರ್ಮ, ಹರಿಹರ ಮೊದಲಾದ ಕವಿಗಳ ಚಂಪೂಕಾವ್ಯಗಳು ಗಾತ್ರದಲ್ಲಿ ಮಾತ್ರವಲ್ಲದೆ, ಸತ್ವದಲ್ಲಿಯೂ ಕನ್ನಡದ ಪ್ರಾಚೀನ ಸಾಹಿತ್ಯ ಶ್ರೀಮಂತಿಕೆಯನ್ನು ಬಿಂಬಿಸುತ್ತವೆ. ರಾಮಾಯಣ, ಮಹಾಭಾರತ, ಭಾಗವತ ಮತ್ತು ಜೈನ ಮಹಾಪುರಾಣದ ಆಕರಗಳನ್ನು ಆಧರಿಸಿದ್ದರೂ ಸ್ವಂತ ಪ್ರತಿಭೆಯಿಂದ ಅವುಗಳ ಅರ್ಥ ವಿಸ್ತರಣೆ ಮಾಡಿರುವುದು ಈ ಕವಿಗಳ ಹೆಗ್ಗಳಿಕೆ. ಪಂಪ ಕವಿ ಈಗ ಉಪಲಬ್ಧವಿರುವ ಪ್ರಾಚೀನ ಸಾಹಿತ್ಯ ಕೃತಿಗಳ ದೃಷ್ಟಿಯಿಂದ ಕನ್ನಡದ ಆದಿಕವಿ ಎಂಬ ಗೌರವಕ್ಕೆ ಪಾತ್ರನಾದವನು. ತನ್ನ ಎರಡು ಮಹಾಕಾವ್ಯಗಳಿಗೆ ಮಹಾಭಾರತ ಮತ್ತು ಜೈನ ಮಹಾಪುರಾಣದಿಂದ ವಸ್ತುಗಳನ್ನು ಪಡೆದಿದ್ದರೂ ಹೊಸದೊಂದು ಸಾಹಿತ್ಯ ಪರಂಪರೆಯನ್ನು ಆರಂಭಿಸಿದ ಶ್ರೇಯಸ್ಸು ಪಂಪನದು. ತನ್ನ ಆಶ್ರಯದಾತನಾದ ಸಾಮಂತರಾಜ ಅರಿಕೇಸರಿಯನ್ನು ಮಹಾಭಾರತದ ಅರ್ಜುನನಿಗೆ ಹೋಲಿಸಿ `ವಿಕ್ರಮಾರ್ಜುನ ವಿಜಯ~ವನ್ನು (`ಪಂಪ ಭಾರತ~) ರಚಿಸಿ ಮುಂದಿನ ಕವಿಗಳಿಗೆ ಮಾರ್ಗದರ್ಶಕನಾದವನು.

ADVERTISEMENT

ಪಂಪ ಕವಿ ದೇಸಿ ಮತ್ತು ಮಾರ್ಗ ಶೈಲಿಯ ಸಮನ್ವಯವನ್ನು ತನ್ನ `ವಿಕ್ರಮಾರ್ಜುನ ವಿಜಯ~ದಲ್ಲಿ ಸಾಧಿಸಿದ್ದಾನೆ; ಆದರೂ ಅವುಗಳ ಸ್ವಾರಸ್ಯವು ಈಗಿನ ಓದುಗರಿಗೆ ಗೊತ್ತಾಗುವುದಕ್ಕೆ ಪ್ರತಿ ಪದ್ಯಗಳನ್ನೂ ಆಧುನಿಕ ಗದ್ಯದಲ್ಲಿ ವಿವರಿಸದಿದ್ದರೆ ಗ್ರಾಹ್ಯವಾಗುವುದು ಕಷ್ಟ. ಈ ಕಷ್ಟ ನಿವಾರಣೆಗಾಗಿ ಕಳೆದ ಶತಮಾನದಿಂದ ಪ್ರಯತ್ನಗಳು ನಡೆದಿವೆ. ಮುಳಿಯ ತಿಮ್ಮಪ್ಪಯ್ಯ ಅವರ `ನಾಡೋಜ ಪಂಪ~, ಡಿ.ಎಲ್. ನರಸಿಂಹಾಚಾರ್ಯರ `ಪಂಪಭಾರತ ದೀಪಿಕೆ~, ಕೆ.ವೆಂಕಟರಾಮಪ್ಪ, ತೀ.ನಂ.ಶ್ರೀಕಂಠಯ್ಯ, ಎಲ್. ಬಸವರಾಜು, ಎನ್. ಅನಂತರಂಗಾಚಾರ್, ಎಚ್. ವಿ.ಶ್ರೀನಿವಾಸ ಶರ್ಮ ಅವರ ಗದ್ಯಾನುವಾದಗಳು ಪಂಪನ ಪದ್ಯಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನೆರವಾಗುತ್ತವೆ.

ಆದರೆ ಬಿ. ವೀರಭದ್ರಪ್ಪ ಅವರ `ಪಂಪನ ಪದ ಪ್ರಪಂಚ~ ಈ ಎಲ್ಲ ಕೃತಿಗಳಿಗಿಂತಲೂ ಭಿನ್ನವಾದ ವ್ಯಾಖ್ಯಾನವಾಗಿದೆ. `ಪಂಪ ಭಾರತ~ ಕಾವ್ಯದಲ್ಲಿ ಬಳಕೆಯಾಗಿರುವ ನುಡಿಗಟ್ಟು, ದೇಸಿ ಪದಗಳು ಮತ್ತು ಅಪೂರ್ವ ಪದಗಳನ್ನು ಕುರಿತು ವಿಸ್ತಾರವಾಗಿ, ತೌಲನಿಕವಾಗಿ ಚರ್ಚಿಸಿದ್ದಾರೆ. ಪ್ರಾಯೋಗಿಕ ವಿಮರ್ಶೆಯ ವಿಧಾನವನ್ನು ನೆನಪಿಸುವಂತೆ ಪ್ರತಿ ಪದದ ಬಳಕೆಯ ಹಿನ್ನೆಲೆ, ಔಚಿತ್ಯವನ್ನು ಗುರುತಿಸಿದ್ದಾರೆ. ಹೀಗೆ ಗುರುತಿಸುವ ಮೊದಲು ನಿರ್ದಿಷ್ಟ ಪದದ ಬಗ್ಗೆ ಹಿಂದಿನ ವಿದ್ವಾಂಸರು ನೀಡಿದ ಅರ್ಥವನ್ನು ಚರ್ಚಿಸಿ ಅದು ಎಷ್ಟರಮಟ್ಟಿಗೆ ಔಚಿತ್ಯಪೂರ್ಣ ಎಂಬುದನ್ನೂ ದಾಖಲಿಸಿದ್ದಾರೆ. ಕವಿಯ ಆಶಯವನ್ನು ಖಚಿತವಾಗಿ ಗುರುತಿಸಲು ನಡೆಸುವ ವೀರಭದ್ರಪ್ಪ ಅವರ ಚರ್ಚೆ ಗಣಿತಶಾಸ್ತ್ರದ ತರ್ಕವನ್ನು ನೆನಪಿಗೆ ತರುತ್ತದೆ. ಕೃತಿಯಲ್ಲಿನ ಆಂತರಿಕ ಸಾಕ್ಷ್ಯ, ಬಾಹ್ಯ ಸಾಕ್ಷ್ಯಗಳನ್ನು ಆಧರಿಸಿ ಬರುವ ತೀರ್ಮಾನಗಳು ಈವರೆಗಿನ ಚರ್ಚೆಯನ್ನು ಒಂದು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವಷ್ಟು ಸಮರ್ಥವಾಗಿ ತೋರುತ್ತವೆ.

ಡಿ.ಎಲ್.ಎನ್, ತೀ.ನಂ.ಶ್ರೀ, ಮುಳಿಯ ತಿಮ್ಮಪ್ಪಯ್ಯ ಮೊದಲಾದ ಮಹಾ ವಿದ್ವಾಂಸರು ಚರ್ಚಿಸಿ ತೀರ್ಮಾನಿಸಲಾಗದೆ ಪ್ರಶ್ನಾರ್ಥಕ ಚಿಹ್ನೆಯನ್ನು ಉಳಿಸಿರುವ ಅನೇಕ ಪದಗಳಿಗೆ ನಿಶ್ಚಿತ ಅರ್ಥವನ್ನು ಶೋಧಿಸಿ ಪಂಪನ ಕಾವ್ಯದ ಆಶಯವನ್ನು ಸಾಮಾನ್ಯ ಓದುಗರೂ ಸರಿಯಾಗಿ ಗ್ರಹಿಸುವಂತೆ ಮಾಡಿರುವುದು ಇಲ್ಲಿನ ವಿಶೇಷ. ಇಂಥ ಪ್ರಯತ್ನಕ್ಕೆ ಬೆರಗು ಮೂಡುತ್ತದೆ. ಪಂಪ ಭಾರತದ ಮೊದಲನೆಯ ವೃತ್ತದಲ್ಲಿ ಬರುವ `ಜೀಯನೆ ಬೇಡಿಕೊಳ್ಳದೆ~ ಪದ ವೃಂದದ ವ್ಯಾಖ್ಯಾನವನ್ನು ಅವರು ಮಂಡಿಸಿ ವಿಶ್ಲೇಷಿಸಿದ ರೀತಿಯೇ ವಿಸ್ಮಯಕಾರಿಯಾಗಿದೆ. `ಮೃಗಯಾ ವ್ಯಾಜದಿನೊರ್ಮೆ..~ ವೃತ್ತದಲ್ಲಿ ಬರುವ `ದಿಬ್ಯಂ ಬಿಡಿವಂತೆವೋಲ್~ ಸಂದರ್ಭಕ್ಕೆ ನೀಡಿದ ವ್ಯಾಖ್ಯಾನವೂ ಪ್ರೌಢವಾಗಿದೆ. ಇದೇ ರೀತಿ `ಸುಪುಷ್ಟಪಟ್ಟ~, `ಕೂಸು~, `ರುಂದ್ರ~, `ಕಿಂಕೊಳೆ~, `ಕೋಳ್ಮೊಗ~, `ಮೇಗು ಮೇಕು~, `ತಕ್ಕೊರ್ಮೆ~, `ಅತ್ತಿಗೆ~, `ದಂಡುರುಂಬೆ~, `ನಕ್ಕರವದ್ದಿ~, `ನೈಷ್ಠಿಕ ಮುಷ್ಠಿ~, `ತೀನಂ~, `ಮೂರಿ~, `ದ್ರಂಗ~, `ಡಂಗ~, `ಅಡಂಗಮ್~, `ಕಾಸಟ~, `ಪದಂಗಾಸಿದ ಪೊನ್ನ ಪುಂಜಿ~, `ಅಲಂಪು~, `ಸಂಬಳಂ~, `ಗೊರವ~, `ಕಳಿಂಚು~, `ಪುಳಿಂಚು~, `ತೊವಲ್~ ಮೊದಲಾದ ಪದಗಳು ಪಂಪನ ಕಾವ್ಯದಲ್ಲಿ ಹಾಗೂ ಕನ್ನಡದ ಇತರ ಕಾವ್ಯಗಳಲ್ಲಿ ಬಳಕೆಯಾದ ಸಂದರ್ಭಗಳ ಹಿನ್ನೆಲೆಯಲ್ಲಿ ಅರ್ಥವನ್ನು ಶೋಧಿಸಿರುವುದು ಈ `ಪದ ಪ್ರಪಂಚ~ದ ವೈಶಿಷ್ಟ್ಯವಾಗಿದೆ.

ಪಂಪನ ಕಾವ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ಈ ಕೃತಿ ಡಿಎಲ್‌ಎನ್ ಅವರ `ಪಂಪ ಭಾರತ ದೀಪಿಕೆ~ಯಂತೆಯೇ ಉಪಯುಕ್ತವಾಗಿದೆ. ಪಂಪನನ್ನು ಓದುವವರು, ಪಾಠ ಮಾಡುವವರು, ಸಂಶೋಧನೆ ಮಾಡುವವರು ಅವಶ್ಯಕವಾಗಿ ಗುರುತಿಸಲೇಬೇಕಾದ ಕೃತಿಯಾಗಿದೆ. ಮುನ್ನುಡಿಯಲ್ಲಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು `ವೀರಭದ್ರಪ್ಪನವರು ಈ ಪದಪ್ರಪಂಚದ ಮೂಲಕ  ಕರ್ನಾಟಕದ ಸಾಂಸ್ಕೃತಿಕ ಹೊಳಹನ್ನು, ಕಾವ್ಯದ ಅನನ್ಯತೆಯನ್ನು, ಪಂಪನ ಸಮಗ್ರ ದೇಸಿ ತಿಳುವಳಿಕೆಯನ್ನು ಪಡಿಮೂಡಿಸಿದ್ದಾರೆ~ ಎಂದು ಹೇಳಿರುವುದು ಪ್ರಶಂಸೆಯ ಔಪಚಾರಿಕ ಮಾತುಗಳಲ್ಲ; ವಿದ್ವತ್ತೆಗೆ ನೀಡಿದ ನುಡಿಗೌರವವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.