ಸಾವಿರದ ಐದುನೂರು ವರ್ಷಗಳಷ್ಟು ಸುದೀರ್ಘವಾದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಂಪೂಯುಗ ಹಳೆಗನ್ನಡ ಸಾಹಿತ್ಯದಲ್ಲಿ ಸುವರ್ಣ ಕಾಲ. ಪಂಪ, ರನ್ನ, ಪೊನ್ನ, ನಾಗವರ್ಮ, ಹರಿಹರ ಮೊದಲಾದ ಕವಿಗಳ ಚಂಪೂಕಾವ್ಯಗಳು ಗಾತ್ರದಲ್ಲಿ ಮಾತ್ರವಲ್ಲದೆ, ಸತ್ವದಲ್ಲಿಯೂ ಕನ್ನಡದ ಪ್ರಾಚೀನ ಸಾಹಿತ್ಯ ಶ್ರೀಮಂತಿಕೆಯನ್ನು ಬಿಂಬಿಸುವಂಥವು.
ರಾಮಾಯಣ, ಮಹಾಭಾರತ, ಭಾಗವತ ಮತ್ತು ಜೈನ ಮಹಾಪುರಾಣದ ಆಕರಗಳನ್ನು ಆಧರಿಸಿದ್ದರೂ ಸ್ವಂತ ಪ್ರತಿಭೆಯಿಂದ ಅವುಗಳ ಅರ್ಥ ವಿಸ್ತರಣೆ ಮಾಡಿರುವುದು ಈ ಕವಿಗಳ ಹೆಗ್ಗಳಿಕೆ. ಅದರಲ್ಲಿಯೂ ಪಂಪ ಕವಿ ಈಗ ಉಪಲಬ್ಧವಿರುವ ಪ್ರಾಚೀನ ಸಾಹಿತ್ಯ ಕೃತಿಗಳ ದೃಷ್ಟಿಯಿಂದ ಕನ್ನಡದ ಆದಿಕವಿ ಎಂಬ ಗೌರವಕ್ಕೆ ಪಾತ್ರನಾಗಿದ್ದಾನೆ.
ತನ್ನ ಎರಡು ಮಹಾಕಾವ್ಯಗಳಿಗೆ ಮಹಾಭಾರತ ಮತ್ತು ಜೈನ ಮಹಾಪುರಾಣದಿಂದ ವಸ್ತುಗಳನ್ನು ಪಡೆದಿದ್ದರೂ ಹೊಸದೊಂದು ಸಾಹಿತ್ಯ ಪರಂಪರೆಯನ್ನು ಆರಂಭಿಸಿದ ಶ್ರೇಯಸ್ಸು ಪಂಪನದು.
`ಬೆಳಗುವೆನಿಲ್ಲಿ ಲೌಕಿಕಮಂ, ಅಲ್ಲಿ ಜಿನಾಗಮಮಂ~ ಎಂದು ಸ್ಪಷ್ಟವಾಗಿ ಸಾರಿ ತನ್ನ ಆಶ್ರಯದಾತನಾದ ಸಾಮಂತರಾಜ ಅರಿಕೇಸರಿಯನ್ನು ಮಹಾಭಾರತದ ಅರ್ಜುನನನೊಂದಿಗೆ ಸಮೀಕರಿಸಿ, `ವಿಕ್ರಮಾರ್ಜುನ ವಿಜಯ~ವನ್ನು (`ಪಂಪ ಭಾರತ~) ರಚಿಸಿ ಮುಂದಿನ ಕವಿಗಳಿಗೆ ಮಾರ್ಗದರ್ಶಕನಾದವನು.
ಲೌಕಿಕ ಕಾವ್ಯಸೌಂದರ್ಯಕ್ಕೆ ಒಂದು ಕಾವ್ಯವನ್ನೂ, ಧಾರ್ಮಿಕ ಶ್ರದ್ಧೆಯನ್ನು ಅಭಿವ್ಯಕ್ತಿಸಲು ಇನ್ನೊಂದು ಆಗಮಿಕ ಕಾವ್ಯವನ್ನೂ ರಚಿಸುವ ಪರಂಪರೆ ರನ್ನ, ಪೊನ್ನ, ನಾಗವರ್ಮ ಮೊದಲಾದವರಲ್ಲಿ ಮುಂದುವರಿದಿರುವುದನ್ನು ಸಾಹಿತ್ಯ ಚರಿತ್ರಕಾರರು ಗುರುತಿಸಿದ್ದಾರೆ.
ಸಂಸ್ಕೃತದ ಛಂದಸ್ಸನ್ನು ಕನ್ನಡಕ್ಕೆ ಅನ್ವಯಿಸಿ ಪ್ರೌಢವಾದ ಚಂಪೂಶೈಲಿಯ ಕಾವ್ಯಗಳ ಸಮೃದ್ಧಿ ಹಳಗನ್ನಡದಲ್ಲಿದೆ. ಈ ಕಾವ್ಯಗಳ ಸೌಂದರ್ಯವನ್ನು ಸವಿಯುವುದಕ್ಕೆ ಈಗಿನ ಓದುಗರಿಗೆ ತೊಡಕಾಗಿರುವುದು ಪ್ರಾಚೀನ ಕನ್ನಡದ ಸಂಸ್ಕೃತ ಭೂಯಿಷ್ಠ ಪ್ರೌಢಶೈಲಿ.
ಪಂಪ ಕವಿ ದೇಸಿ ಮತ್ತು ಮಾರ್ಗ ಶೈಲಿಯ ಸಮನ್ವಯವನ್ನು ತನ್ನ `ವಿಕ್ರಮಾರ್ಜುನ ವಿಜಯ~ದಲ್ಲಿ ಸಾಧಿಸಿದ್ದಾನೆ; ಆದರೂ ಅವುಗಳ ಸ್ವಾರಸ್ಯವು ಈಗಿನ ಓದುಗರಿಗೆ ಗೊತ್ತಾಗುವುದಕ್ಕೆ ಪ್ರತಿ ಪದ್ಯಗಳನ್ನೂ ಆಧುನಿಕ ಗದ್ಯದಲ್ಲಿ ವಿವರಿಸದಿದ್ದರೆ ಗ್ರಾಹ್ಯವಾಗುವುದು ಕಷ್ಟ.
ಈ ಕಷ್ಟ ನಿವಾರಣೆಗಾಗಿ ಕಳೆದ ಶತಮಾನದಿಂದ ಪ್ರಯತ್ನಗಳು ನಡೆದಿವೆ. ಡಿ.ಎಲ್. ನರಸಿಂಹಾಚಾರ್ಯರ `ಪಂಪಭಾರತ ದೀಪಿಕೆ~ ವಿಕ್ರಮಾರ್ಜುನ ವಿಜಯ ಕಾವ್ಯವನ್ನು ಅರ್ಥ ಮಾಡಿಕೊಳ್ಳಲು ಅವಶ್ಯಕವಾದ ಅರ್ಥ ವಿವರಣೆಯನ್ನು ಒದಗಿಸುವ ಮಹತ್ವದ ಕೃತಿ.
ಇದು ಪಂಪನ ಕಾವ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಉಪನ್ಯಾಸಕರಿಗೆ ಉಪಯುಕ್ತವಾದ ಪರಾಮರ್ಶನ ಕೃತಿ. ಪಂಪ ಭಾರತವನ್ನು ರಸಾಸ್ವಾದನೆಯ ದೃಷ್ಟಿಯಿಂದ ಓದಬಯಸುವ ಸಾಹಿತ್ಯ ವಿದ್ಯಾರ್ಥಿಗಳಿಗೂ `ದೀಪಿಕೆ~ ಉತ್ತಮ ಮಾರ್ಗದರ್ಶಿ. ಆದರೆ ಸಾಮಾನ್ಯ ಓದುಗರಿಗೆ ಹಳಗನ್ನಡ ಕಾವ್ಯಗಳ ಗದ್ಯಾನುವಾದ ಹೆಚ್ಚು ಪ್ರಯೋಜನಕಾರಿ. ಇದನ್ನು ಲಕ್ಷ್ಯದಲ್ಲಿರಿಸಿಕೊಂಡು ಕೆಲವು ಪ್ರಯತ್ನಗಳು ನಡೆದಿವೆ.
ಹಿರಿಯ ವಿದ್ವಾಂಸರಾದ ಎನ್.ಅನಂತರಂಗಾಚಾರ್ ಅವರು ಪ್ರತಿ ಪದ್ಯಗಳ ಗದ್ಯಾನುವಾದವನ್ನು ಕ್ಲಿಷ್ಟತೆ ಇಲ್ಲದೆ ಒದಗಿಸಿದ್ದಾರೆ (ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ). ಡಾ.ಎಲ್. ಬಸವರಾಜು ಅವರ ಗದ್ಯಾನುವಾದ, ಪಂಪನೇ ತನ್ನ ಕೃತಿಯ ಬಗ್ಗೆ ಹೇಳಿಕೊಂಡಿರುವಂತೆ, `ಕಥೆಯ ಮೆಯ್ಗಡಲೀಯದೆ~ ಕಾವ್ಯದ ಸೌಂದರ್ಯವನ್ನು ಆಧುನಿಕ ಓದುಗರಿಗೆ ಮುಟ್ಟಿಸುವ ಪ್ರಯತ್ನ.
ಇದು ಪ್ರತಿ ಪದ್ಯಗಳ ಸಾರವನ್ನು ಮೂಲ ಅರ್ಥಕ್ಕೆ ಚ್ಯುತಿ ಬರದಂತೆ ಸಂಕ್ಷಿಪ್ತವಾಗಿ ನೀಡುವಲ್ಲಿ ಯಶಸ್ವಿಯಾಗಿದೆ. ರಾಜ್ಯ ಸರ್ಕಾರದ ಪ್ರತಿಷ್ಠಿತ `ಪಂಪ ಪ್ರಶಸ್ತಿ~ಗೆ ಭಾಜನವಾದ ಈ ಕೃತಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರವು ಸುಂದರವಾಗಿ ಮುದ್ರಿಸಿ ಅತ್ಯಲ್ಪ ಬೆಲೆಗೆ (ರೂ.15) ಸಾರ್ವಜನಿಕರಿಗೆ ಒದಗಿಸಿದೆ.
ಇದೇ ಬಗೆಯ ಇನ್ನೊಂದು ಪ್ರಯತ್ನ ಪ್ರೊ. ಎಚ್.ವಿ.ಶ್ರೀನಿವಾಸ ಶರ್ಮ ಅವರದು. ಇದನ್ನೂ ಕನ್ನಡ ಪುಸ್ತಕ ಪ್ರಾಧಿಕಾರವೇ ಪ್ರಕಟಿಸಿದೆ. ಮೂರು ಪ್ರಕಟಣೆಗಳ ಉದ್ದೇಶವೂ ಜನಸಾಮಾನ್ಯರಿಗೆ ಹಳೆಗನ್ನಡ ಸಾಹಿತ್ಯದ ಪರಿಚಯ ಮಾಡಿಸುವುದು, ಈ ಗದ್ಯಾನುವಾದಗಳನ್ನು ಓದುವ ಮೂಲಕ ಮೂಲ ಕಾವ್ಯದ ಸ್ವಾರಸ್ಯವನ್ನು ತಿಳಿದುಕೊಳ್ಳುವುದು.
ಹಳೆಗನ್ನಡ ಚಂಪೂಕಾವ್ಯಗಳ ಸ್ವಾರಸ್ಯ ಮೂಲವನ್ನೇ ಓದಿದಲ್ಲದೆ ಅನುಭವಕ್ಕೆ ಬಾರದು. ಆದರೂ ಗದ್ಯಾನುವಾದಗಳು ಕಾವ್ಯದ ಆಶಯವನ್ನು ಓದುಗರಿಗೆ ತಲುಪಿಸಿದರೆ ಅದರಿಂದ ಮೂಲ ಕಾವ್ಯವನ್ನು ಓದುವ ಅಪೇಕ್ಷೆ ಮೂಡಿಸುವಂತಿದ್ದರೆ ಇಂಥ ಪ್ರಯತ್ನಗಳು ಸಾರ್ಥಕವಾಗುತ್ತವೆ. ಈ ಮೂವರು ವಿದ್ವಾಂಸರು ಪಂಪ ಭಾರತದ ಒಂದು ವೃತ್ತಕ್ಕೆ ನೀಡಿದ ಸರಳ ಗದ್ಯಾನುವಾದದ ಪರಿಶೀಲನೆ ಕುತೂಹಲಕರ.
ಮೃಗಯಾ ವ್ಯಾಜದಿನೊರ್ಮೆ ಶಂತನು ತೊಳಲ್ತರ್ಪಂ, ಪಳಂಚಲ್ಕೆ, ತನ್ಮೃಗಶಾಬಾಕ್ಷಿಯ ಕಂಪು ತಟ್ಟಿ ಮಧುಪಂಬೋಲ್ ಸೋಲ್ತು, ಕಂಡೊಲ್ದು, ನಲ್ಮೆಗೆ ದಿಬ್ಯಂಬಿಡಿವಂತೆವೋಲ್ ಪಿಡಿದು, `ನೀಂ ಬಾ ಪೋಪಮ್~ ಎಂದಂಗೆ ಮೆಲ್ಲಗೆ ತತ್ಕನ್ಯಕೆ ನಾಣ್ಚಿ `ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ~
(ಪಂಪಭಾರತ, ಪ್ರಥಮಾಶ್ವಾಸ, 70ನೇ ಪದ್ಯ)
1. ಒಂದು ದಿನ ಬೇಟೆಯ ನೆಪದಿಂದ ಸುತ್ತಾಡಿ ಬರುತ್ತಿದ್ದ ಶಂತನುವು ಜಿಂಕೆಯ ಮರಿಯ ಕಣ್ಣಿನಂತೆ ಕಣ್ಣುಳ್ಳ ಯೋಜನಗಂಧಿಯ ವಾಸನೆಯು ಅವನನ್ನು ಮುಟ್ಟಲಾಗಿ (ಅದರಿಂದ ಆಕರ್ಷಿತನಾಗಿ) ದುಂಬಿಯ ಹಾಗೆ ಸೋತುಹೋಗಿ ಅವಳನ್ನು ಕೈ ಹಿಡಿದು `ನೀನು ಬಾ ಹೋಗೋಣ~ ಎನ್ನಲು ಆ ಕನ್ಯೆಯು ನಾಚಿಕೊಂಡು ಮೆಲ್ಲಗೆ `ನೀವು ನನ್ನನ್ನು ಬೇಡುವುದಾದರೆ ನಮ್ಮ ತಂದೆಯನ್ನು ಪ್ರಾರ್ಥಿಸಿ~ ಎಂದಳು. (ಎನ್. ಅನಂತರಂಗಾಚಾರ್ ಅನುವಾದ).
2. ಇತ್ತ ರಾಜಾ ಶಂತನು ಬೇಟೆಯಾಡಲೆಂದು ತೊಳಲುತ್ತ ಬಂದು ಆ ಹುಲ್ಲೆಗಣ್ಣಾಕೆಯಾದ ಯೋಜನಗಂಧಿಯ ಮೈ ಕಂಪು ತಟ್ಟುತ್ತಲೇ ದುಂಬಿಯಂತೆ ಮನಸೋತು, ಆಕೆಯನ್ನು ಕಣ್ಣಾರೆ ಕಾಣುತ್ತಲೇ ಮನಸಾರೆ ಒಲಿದು- ಒಲಿದ ಒಲುಮೆಗೆ ಸಾಕ್ಷಿ ಹಿಡಿದಂತೆ ಅವಳ ಕೈಯನ್ನು ಹಿಡಿದು- `ಬಾ ಹೋಗೋಣ~ ಎಂದ ಆ ಶಂತನುಗೆ ಆ ಕನ್ಯೆ ನಾಚಿ ಹೇಳಿದಳು: `ಕೇಳುವುದಿದ್ದರೆ ನಮ್ಮ ತಂದೆಯನ್ನು ಕೇಳಿರಿ~. (ಎಲ್. ಬಸವರಾಜು, `ಪಂಪನ ಸಮಸ್ತ ಭಾರತ ಕಥಾಮೃತ~)
3. ಇತ್ತ ಒಂದು ದಿನ, ಶಂತನು ಮಹಾರಾಜ ವಿನೋದ ಬೇಟೆಗಾಗಿ ಊರಿನಾಚೆ ಹೋಗಿರುತ್ತಾನೆ. ಬೇಟೆ, ಜೂಜು, ಕುದುರೆ ಸವಾರಿ ಇವೇ ಮುಂತಾದ ವಿನೋದಕ್ರೀಡೆಗಳು ರಾಜಮನೆತನಕ್ಕೆ ಬಂದ ಹವ್ಯಾಸ. ಕಾಡಿನಲ್ಲಿ ಸುತ್ತಾಡಿ, ಬಳಲಿಕೆಯಿಂದ ಆಯಾಸಗೊಂಡಿರುವ ಸಂದರ್ಭ. ಜಿಂಕೆ ಮರಿ ಕಣ್ಣಿನ ಯೋಜನಗಂಧಿಯ ಸುಗಂಧದ ಕಂಪು, ರಾಜನಿಗೆ ತಟ್ಟುತ್ತದೆ. ಆಗ ದುಂಬಿಯಂತೆ ಆತ ಸುವಾಸನೆಗೆ ಸೋಲುತ್ತಾನೆ.
ಅವಳ ಬಳಿ ಬರುತ್ತಾನೆ. ಕಣ್ತುಂಬ ನೋಡುತ್ತಾನೆ. ಮನ ಸೋಲುತ್ತಾನೆ. ನಲ್ಮೆಗೆ ದಿಬ್ಯಂಬಿಡಿವಂತೆವೋಲ್ ಎಂದರೆ ಪ್ರೀತಿಯನ್ನು ಪ್ರಮಾಣೀಕರಿಸಿ ತೋರಿಸುವಂತೆ ಆಕೆಯ ಕೈ ಹಿಡಿಯುತ್ತಾನೆ. ನೋಡನೋಡುತ್ತಲೇ `ನೀನು ಬಾ ಹೋಗೋಣ~ ಎಂದ ಶಂತನು ರಾಜನ ನಲ್ಮೆಯ ನುಡಿಗೆ ಕನ್ಯಾಮಣಿ ನಾಚುತ್ತಾಳೆ. ಪ್ರೇಮದ ಆವೇಶದಲ್ಲಿ ಮುಳುಗುವುದಿಲ್ಲ. ನಾಡಿನ ಸಂಸ್ಕೃತಿಯನ್ನು ಬೆಳಗುವ ನುಡಿಯನ್ನು ನುಡಿಯುತ್ತಾಳೆ.
`ಬೇಡುವುದಾದರೆ ನೀವು ನನ್ನ ಅಯ್ಯನನ್ನು ಬೇಡಿಕೊಳ್ಳಿ~ ಎಂದು.
ಅದು ಕನ್ನಡ ಹೆಣ್ಣುಮಕ್ಕಳ ಸಂಸ್ಕೃತಿ (ಈ ಆಶಯ ಮೂಲದಲ್ಲಿಲ್ಲ). `ನೀವು ನನ್ನನ್ನು ಬಯಸಿದ್ದೀರಿ. ಆದರೆ ನನ್ನ ತಂದೆಯ ಆಶೀರ್ವಾದವಿಲ್ಲದೆ, ನಿಮ್ಮಡನೆ ಬರಲಾರೆ. ಬೇಡುವುದಿದ್ದರೆ ನಮ್ಮ ತಂದೆಯ ಬಳಿಗೆ ಬನ್ನಿರಿ~ ಇದು ನಾಚಿ ನಿಂತ ಹೆಣ್ಣಿನ ನುಡಿ. (ಪ್ರೊ. ಶ್ರೀನಿವಾಸ ಶರ್ಮ, ಪಂಪ ಮಹಾಕವಿಯ ವಿಕ್ರಮಾರ್ಜುನ ವಿಜಯ ಗದ್ಯಾನುವಾದ, ಪುಟ 12)
ಮೊದಲಿನ ಎರಡು ಅನುವಾದಗಳು ಕವಿಯ ಆಶಯವನ್ನು ನೇರವಾಗಿ ಓದುಗರಿಗೆ ಹಿತಮಿತವಾಗಿ ತಲುಪಿಸುತ್ತವೆ ಎಂಬುದು ಇಲ್ಲಿ ವೇದ್ಯವಾಗುತ್ತದೆ. ಮೂರನೆಯ ಅನುವಾದ ಸಂದರ್ಭ ವಿಸ್ತರಣೆಯೊಂದಿಗೆ ಬೆಳೆಯುತ್ತದೆ. ಅನುವಾದಕರ ಸ್ವಂತ ನಿಲುವು ಸೇರುತ್ತದೆ. ಇದು ಗಮಕ ವಾಚನದಲ್ಲಿ ಪದ್ಯಗಳಿಗೆ ವ್ಯಾಖ್ಯಾನ ಮಾಡುವ ಶೈಲಿ. ಈ ಬಗೆಯ ನಿರೂಪಣಾ ಶೈಲಿ ಓದುಗರನ್ನು ಮೂಲವನ್ನು ಅರಸುವುದಕ್ಕೆ ಪ್ರೇರಣೆ ನೀಡುತ್ತದೆಯೇ ಎಂಬುದು ಕಾದುನೋಡಬೇಕಾದ ಸಂಗತಿ.
ಹಳಗನ್ನಡ ಕಾವ್ಯಗಳನ್ನು ವ್ಯಾಖ್ಯಾನ ಮಾಡುವ ವಿದ್ವಾಂಸರು ವಿರಳವಾಗುತ್ತಿರುವ ಈ ಸಂದರ್ಭದಲ್ಲಿ `ಪಂಪ ಭಾರತ~ವನ್ನು ಶ್ರೀನಿವಾಸ ಶರ್ಮ ಶ್ರಮವಹಿಸಿ ಅನುವಾದ ಮಾಡಿದ್ದಾರೆ. ಕೃತಿಯ ಆರಂಭದಲ್ಲಿ ಅರಿಕೇಸರಿ ಮತ್ತು ಕವಿ ಪಂಪನ ಕುರಿತಾಗಿ ಕಾವ್ಯದಲ್ಲಿ ಲಭ್ಯವಿರುವ ಸಂಗತಿಗಳ ಟಿಪ್ಪಣಿ ನೀಡಿರುವುದು ಉಪಯುಕ್ತವಾಗಿದೆ.
ಪಂಪ ಮಹಾಕವಿಯ ವಿಕ್ರಮಾರ್ಜುನ ವಿಜಯ
ಲೇ: ಪ್ರೊ. ಎಚ್.ವಿ. ಶ್ರೀನಿವಾಸ ಶರ್ಮ; ಪು: 568, ಬೆ: ರೂ. 150
ಪ್ರ: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಬೆಂಗಳೂರು-01
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.