ಪ್ರೀತಿ ಎಂಬುದು ಚಂದ್ರನ ದಯೆ
ಲೇ: ಎಸ್.ಎಫ್. ಯೋಗಪ್ಪನವರ್, ಪು: 258 ; ಬೆ: ₨ 180, ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ, ವಯಾ: ಎಮ್ಮಿಗನೂರ,
ಬಳ್ಳಾರಿ – 583 113.
ಬದುಕಿನಲ್ಲಿಯ ವಾಸ್ತವ, ಭ್ರಮೆ, ನಿಜ, ಸುಳ್ಳು, ವರ್ತಮಾನ, ನೆನಪು, ಪ್ರೀತಿ, ಕಾಮಗಳನ್ನು ಅವು ಇರುವಂತೆಯೇ ದಾಖಲು ಮಾಡಿದರೆ ಹೇಗಿರುತ್ತದೆ ಎಂಬುದಕ್ಕೆ ಎಸ್.ಎಫ್. ಯೋಗಪ್ಪನವರ್ ಅವರ ‘ಪ್ರೀತಿ ಎಂಬುದು ಚಂದ್ರನ ದಯೆ’ ಎಂಬ ಈ ಕಾದಂಬರಿ ಉದಾಹರಣೆಯಾಗಿದೆ. ನಮ್ಮ ಮುಂದಿನ ಅಥವಾ ನಮ್ಮನ್ನು ಸುತ್ತುವರಿದಿರುವ, ಯಾವಾಗಲೂ ಸುಳಿಯುತ್ತಲೇ ಇರುವ ಮಾಯಾವಾಸ್ತವವನ್ನು ಇಲ್ಲಿ ಆಧುನಿಕ ಪುರಾಣವನ್ನಾಗಿಸಿ ನೋಡಲಾಗಿದೆ. ಇದು ಕಥೆಯ ಹಂಗು ತೊರೆದ ಅಥವಾ ಅದರಿಂದ ಬಿಡಿಸಿಕೊಂಡ ಕಾದಂಬರಿ. ಪುರಾಣವನ್ನು ಸೃಷ್ಟಿಸಿ ಅದನ್ನೇ ಕಥನದ ಹರಿವನ್ನಾಗಿಸುವ, ಸಂಚಾರಿ ಭಾವಗಳನ್ನೇ ಕಥನವನ್ನಾಗಿಸುವ ಕುಶಲತೆ ಇಲ್ಲಿದೆ.
ಚಂದ್ರ, ಆ ಚಂದ್ರನ ಬೆಳಕಿನಲ್ಲಿ ಕಾಣಿಸುವ ವಸ್ತು ಪ್ರಪಂಚ, ಮನುಷ್ಯನ ಪ್ರೀತಿ ಈ ಕಾದಂಬರಿಯ ವಸ್ತು. ಚಂದ್ರನೆಂದರೆ ಕತ್ತಲೆ ಅಲ್ಲ, ಅತ್ತ ಹಗಲಿನ ಸ್ಪಷ್ಟ ಬೆಳಕೂ ಅಲ್ಲ. ಮನುಷ್ಯನ ಅಂತರಂಗದ ಅಸ್ಪಷ್ಟ ಹುಡುಕಾಟದಂತಿರುವ ಈ ಬೆಳಕು ಮತ್ತು ಅದನ್ನು ಕೊಡುವ ಚಂದ್ರ ಕಾದಂಬರಿಯ ಕೇಂದ್ರ. ಲೌಕಿಕ ಪ್ರೇಮದ ಅಲೌಕಿಕ ಹುಡುಕಾಟ ಇಲ್ಲಿದೆ. ಪ್ರೇಮದ ಆಕರ್ಷಣೆ, ಅದರ ನಿಗೂಢಲೋಕದ ತಾತ್ವಿಕ ಅರಸುವಿಕೆ ಅದು.
ಕಡೆಗೂ ಕೈಗೆ ಸಿಗದ ಅದು ಒಡೆದ ಒಗಟು, ಮತ್ತೆ ಮತ್ತೆ ಮತ್ತೇರಿಸುವ ಮಾದಕದ್ರವ್ಯ. ಪ್ರೀತಿಯನ್ನು ದೈವಿಕದ ನೆಲೆಯಲ್ಲಿಟ್ಟು ನೋಡುವ ಈ ಕಾದಂಬರಿ ಕನ್ನಡ ಕಾದಂಬರಿಗಳಲ್ಲಿ ಕೊಂಚ ಭಿನ್ನ, ವಿಶಿಷ್ಟ ಜಾಡನ್ನು ತುಳಿದಿದೆ. ಆ ಕಾರಣಕ್ಕಾಗಿಯೇ ಕಥನದ ಹಂಗು ತೊರೆದ ಇದನ್ನು ಸುಂದರ ಸುಂದರಿಯರಿಬ್ಬರ ಪ್ರೀತಿಯ ಕಥೆಯನ್ನಾಗಿ ಮಾತ್ರ ಓದುವಂತಿಲ್ಲ. ಹಾಗೆ ಓದಿನ ಕಲ್ಪಿತ ನಿರೀಕ್ಷೆಯನ್ನು ಈ ಕಾದಂಬರಿ ಮೊದಲಿಗೇ ಭಂಗಗೊಳಿಸುತ್ತದೆ.
ವಿಫಲ ಪ್ರೇಮಿಯೊಬ್ಬಳ ಸುದೀರ್ಘ ನಿರೂಪಣೆ, ನಿಟ್ಟುಸಿರಿನಂತಿರುವ ಇದು ಕಳೆದುಕೊಂಡ ಪ್ರೇಮದ ಮತ್ತು ಸದಾ ಎದೆಯಲ್ಲಿ ಜ್ವಲಿಸತ್ತಲೇ ಇರುವ ಪ್ರೀತಿಯ ಉಲ್ಲೇಖ ಕೂಡ. ಗತಕ್ಕೆ ಸಂದ ನೆನಪು ಎಲ್ಲರನ್ನೂ ಹೆಚ್ಚು ಸುಡುತ್ತದೆ. ಅದೇ ಈ ಕಾದಂಬರಿಯಲ್ಲೂ ಇದೆ. ಪ್ರೇಮದ ತೀವ್ರತೆ, ಚಡಪಡಿಕೆಯನ್ನು ಎಲ್ಲೆಡೆ ತುಂಬಿಕೊಂಡಿರುವ ಈ ಪುರಾಣ ಬಯಲುಸೀಮೆ ಊರೊಂದರ ಜನರ ಕಾಮದ ಉತ್ಸಾಹ, ಬದುಕಿನ ಉತ್ಸವ, ಪ್ರೇಮದ ದಾಹ, ಮೋಹವನ್ನು ತನ್ನಲ್ಲಿಟ್ಟುಕೊಂಡಿದೆ.
ಅಂತಃಕರಣ, ದಯೆಯಿಂದ ಮನುಷ್ಯ ಸಹಜ ವ್ಯಾಪಾರವಾದ ಪ್ರೀತಿಗೊಂದು ಬೆಲೆ ಸಿಗುತ್ತದೆ ಎಂಬುದನ್ನು ಧ್ವನಿಸುವಂತಿದೆ ಈ ಕಾದಂಬರಿ. ಇಲ್ಲಿ ಬರುವ ಜನರೆಲ್ಲ ತೀವ್ರ ಕಾಮನೆ ಉಳ್ಳವರು. ಬದುಕಿನ ಬಗ್ಗೆ ಅಪಾರ ವ್ಯಾಮೋಹ ಇರುವವರು. ಹುಣ್ಣಿಮೆ ಗಂಡು ಹೆಣ್ಣಿಗೆ ಮಾತ್ರ ಹುಚ್ಚು ಹಿಡಿಸುವುದಿಲ್ಲ, ಅದು ಜನರನ್ನು ಬೇಟೆ, ಬೇಟಕ್ಕೂ ಹಚ್ಚುತ್ತದೆ. ಬದುಕು, ಸಾವು, ಜಡ, ಚೈತನ್ಯ, ಹರೆಯ, ಮುಪ್ಪು, ನೀತಿ, ಅನೀತಿ ಹೀಗೆ ಹಲವು ದ್ವಂದ್ವಗಳನ್ನು ಮೀರಿದ ಬದುಕನ್ನು ಎಸ್.ಎಫ್. ಯೋಗಪ್ಪನವರ್ ಈ ಕಾದಂಬರಿಯಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಇಲ್ಲಿನ ಪ್ರೇಮ ಕೇವಲ ಪ್ರೀತಿಯಾಗಿರುವುದಿಲ್ಲ, ಸಾವು ಶೂನ್ಯವಾಗುವುದಿಲ್ಲ.
ಅದಕ್ಕೊಂದು ಅರ್ಥ, ಪುರಾಣದ ಪ್ರಭಾವಳಿ ಸೃಷ್ಟಿಯಾಗುತ್ತದೆ. ಇದೇ ಇದನ್ನು ಕನ್ನಡದ ಕಾದಂಬರಿಗಳಿಂದ ಭಿನ್ನವಾಗಿಸುವ ಅಂಶ. ಇಲ್ಲಿನ ನಾಯಕ ನಾಯಕಿಯ ಪ್ರೇಮದ ಜೊತೆಗಿರುವ ಚಂದಿರ ಅವರ ಬದುಕಿನಿಂದ ಹಲವು ಅರ್ಥಗಳನ್ನು ಹೊರಡಿಸುತ್ತಾನೆ; ಕೊಡುತ್ತಾನೆ. ಇದನ್ನು ಆದಿ ಅಂತ್ಯಗಳಿಲ್ಲದ ಕಥನವಾಗಿ ಕೂಡ ನೋಡಬಹುದಾಗಿದೆ, ಓದಬಹುದಾಗಿದೆ. ನಾವೇ ಸೃಷ್ಟಿಸಿಕೊಂಡ ಬದುಕಿನ, ಪ್ರೇಮದ ಕುರಿತಾದ ಅರ್ಥ, ಅದರ ಜಿಜ್ಞಾಸೆ ಇಲ್ಲಿ ಪ್ರತಿ ಪುಟದಲ್ಲೂ ಇದೆ. ಹಾಗಾಗಿ ಇದನ್ನು ಕಾದಂಬರಿ ಎಂದು ಕರೆಯಬಹುದೇ ಎಂಬ ಪ್ರಶ್ನೆಯೂ ಮೂಡುತ್ತದೆ. ಕಾದಂಬರಿ ಸ್ವರೂಪದ ಎಲ್ಲ ಎಲ್ಲೆಗಳನ್ನು ನಿರಾಕರಿಸಿ ಬೆಳೆಯುವ ನಿರೂಪಣೆ ಇದು.
ಕೆಲವೆಡೆ ಇದು ಬದುಕಿನ ಕುರಿತಾದ ತಾತ್ವಿಕ ಹೇಳಿಕೆಗಳ ಪುಸ್ತಕದಂತೆಯೂ ಕಾಣುತ್ತದೆ. ಛಿದ್ರಗೊಂಡ ಬದುಕನ್ನು ಅನುಭವಿಸಿದ ಪ್ರೇಮಿಯೊಬ್ಬಳ ಹಳವಂಡದಂತೆಯೂ ಕಾಣಬಹುದು. ಆದ್ದರಿಂದಲೇ ಇದು ಬದುಕಿನ ಚೂರು ಚೂರಾದ ಚಿತ್ರಗಳನ್ನು ಒಂದೆಡೆ ತಂದಿರುವ ಸಂಪುಟ. ಅದಕ್ಕೊಂದು ಹೆಸರು, ಅರ್ಥ ಇತ್ಯಾದಿಗಳನ್ನು ಹುಡುಕಿಕೊಳ್ಳುವ ಜವಾಬ್ದಾರಿಯನ್ನು ನಮಗೇ ವಹಿಸುತ್ತದೆ.
ಇಲ್ಲಿನ ಹೆಂಗಸರು ಧೈರ್ಯಶಾಲಿಗಳು, ಕಾದಂಬರಿಯ ನಾಯಕನೂ ಸೇರಿದಂತೆ ಎಲ್ಲ ಗಂಡಸರೂ ಶಕ್ತಿ ಉಡುಗಿಹೋದವರಂತೆ, ಬದುಕನ್ನು ಎದುರಿಸುವ ಧೈರ್ಯ ಕಳೆದುಕೊಂಡವರಂತೆ ಕಾಣುತ್ತಾರೆ.
ಹೆಣ್ಣಿನಲ್ಲಿರುವ ಅಗಾಧವಾದ ಜೀವದಾಯಿ ಚೈತನ್ಯವನ್ನು, ಅವಳೇ ಆದಿಮ ಶಕ್ತಿ, ಪ್ರೇಮ ದೇವತೆ ಎಂಬುದನ್ನು ಕಾದಂಬರಿ ಉದ್ದಕ್ಕೂ ಪ್ರಕಟಿಸುತ್ತದೆ. ಆದ್ದರಿಂದಲೇ ಇಲ್ಲಿನ ಹೆಣ್ಣುಗಳು ದೈವಿಕ ಸ್ವರೂಪಿಗಳಾಗಿ, ಬದುಕನ್ನು ನಿರಂತರ ಪೊರೆಯುವ ಜೀವಿಗಳಾಗಿ ಚಿತ್ರಿತಗೊಂಡಿದ್ದಾರೆ.
ಇಲ್ಲಿನ ರಂಗಮ್ಮ, ಹುಸೇನ್‌ಬಿ, ಸಂಗವ್ವಕ್ಕ, ಸುಮ್ಮಿ, ಶ್ಯಾವಂತ್ರವ್ವತ್ತಿ ಇಂಥ ಚೈತನ್ಯ ಸೂಸುವ ವ್ಯಕ್ತಿಗಳು. ಆದ್ದರಿಂದಲೇ ಇದು ಹೆಣ್ಣಿನ ಆದಿಮ ಪುರಣ ಸಹ. ಪುರಾಣದ ಕೆಲಸವೇ ಅದಕ್ಕೊಂದು ಅಸಾಮಾನ್ಯ ಗುಣವನ್ನು ಕೊಡುವುದು, ಮನುಷ್ಯನ ಸಾಮಾನ್ಯ ಚಟುವಟಿಕೆಗಳಿಗೆ ದೈವಿಕ ಚಹರೆಯನ್ನು ಆರೋಪಿಸುವುದಾದ್ದರಿಂದ ಇಲ್ಲಿನ ಪ್ರತಿ ವರ್ಣನೆಗಳು ಅದಕ್ಕೆ ಪೂರಕವಾದ ವಾತಾವರಣವನ್ನೇ ನಿರ್ಮಿಸುತ್ತವೆ. ಈ ಬರವಣಿಗೆಯಲ್ಲಿ ಕಾಣಿಸುವ ತೀವ್ರತೆಯೇ ಕಾದಂಬರಿಯ ಸ್ಥೂಲ ಹಂದರವೂ ಆಗಿದೆ.
ಸ್ವತಃ ತಾನೇ ಒಂದು ಪುರಾಣವಾಗಲು ಹೊರಟ ಈ ಕೃತಿ ಮನುಷ್ಯನ ಹಿಡಿತಕ್ಕೆ ಸಿಗದ ಅವನ ಭಾವನೆಗಳು, ಪ್ರೇಮ ಸ್ಥಾಯಿಯಾದ ಸತ್ಯಗಳು ಎಂಬುದನ್ನು ಸೂಚಿಸುತ್ತಿರುವಂತಿದೆ. ಇಲ್ಲಿ ಸಾಮಾಜಿಕವಾಗಿ ಹೆಸರು ಕೊಟ್ಟಿರುವ ಹಾದರ, ಹಾದರವಲ್ಲ, ಅದು ಪ್ರೇಮ, ಸಹಜ ನಡವಳಿಕೆ ಎನ್ನುತ್ತದೆ. ಮನುಷ್ಯನ ದೈನಿಕದ ವಹಿವಾಟು ಹಲವು ಬಗೆಗಳಲ್ಲಿ ಬಣ್ಣಗಳಲ್ಲಿ ಕಾಣಿಸುತ್ತಲೇ ಹೋಗುತ್ತದೆ. ಅದಕ್ಕೆ ವಿಶಾಲ ಪಾತಳಿಯೇನೂ ಇಲ್ಲ.
76 ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಈ ಕೃತಿ ಬಿಡಿ ಬಿಡಿಯಾಗಿ ಪ್ರೇಮ, ಕಾಮದ ಮೂಲಕ ಜೀವನದ ಸಂಭ್ರಮವನ್ನು ಮಂಡಿಸುತ್ತದೆ. ಅದು ಒಂದು ಪೂರ್ತಿಯಾದ ಅನುಭವವಾಗಿ ದಾಖಲಾಗುವುದಿಲ್ಲ; ಸಣ್ಣ ಸಣ್ಣ ಚಿತ್ರಗಳಾಗಿ ಮಾತ್ರ ಉಳಿದುಕೊಳ್ಳುತ್ತದೆ.
ಕಥೆ ಹೇಳುವುದೇ ಕಾದಂಬರಿಯೊಂದರ ಅಂತಿಮ ಗುರಿಯಲ್ಲದಿದ್ದರೂ ಅದರೊಳಗಿಂದಲೇ ಕಥನವೊಂದನ್ನು ಸೃಷ್ಟಿಸದಿದ್ದರೆ ಎಲ್ಲವೂ ನಿರುಪಯುಕ್ತವಾಗಬಹುದು. ಲೇಖಕನೊಬ್ಬ ತನ್ನ ಬರಹಕ್ಕೆ ತಾನೇ ಮೋಹಗೊಂಡರೆ ಆ ಬರವಣಿಗೆ ಜನರ ಆತ್ಮವನ್ನು ತಾಕುವ ಹಲವು ಗುಣಗಳಿಂದ ವಂಚಿತವಾಗುತ್ತದೆ. ಅದು ಈ ಕಾದಂಬರಿಯಲ್ಲೂ ಆಗಿದೆ. ಮತ್ತು ಈ ಮೋಹ ದಾಹದ ನಿರೂಪಣೆಗೆ ಸರಿಯಾದ ಸೂತ್ರವೊಂದು ದಕ್ಕಿದ್ದರೆ ಇದರ ಸ್ವರೂಪ ಬೇರೆಯದೇ ಆಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.