ಶೆಟ್ಟರ್ ಅವರ ‘ಹಳಗನ್ನಡ – ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ’ ಕನ್ನಡವನ್ನು ಕುರಿತ ಬಹು ಮುಖ್ಯ ಅಧ್ಯಯನಗಳಲ್ಲಿ ಒಂದು. ಈ ಪುಸ್ತಕಕ್ಕೆ ಇರುವ ಸಾಹಿತ್ಯ ಚರಿತ್ರೆಯ ಒಂದು ಓದು ಮತ್ತು ಸಾಮಾಜಿಕ ಚರಿತ್ರೆಯ ಮರು ಓದು ಎಂಬ ಉಪಶೀರ್ಷಿಕೆಗಳು ಶೆಟ್ಟರ್ ಅವರ ಅಧ್ಯಯನದ ವ್ಯಾಪ್ತಿಯನ್ನು ತಿಳಿಸುತ್ತವೆ. ಜನಸಮುದಾಯವೊಂದರ ಸಂಸ್ಕೃತಿಯ ಬೆಳವಣಿಗೆಯ ಕಥನವನ್ನು ಭಾಷೆ ಮತ್ತು ಲಿಪಿಗಳನ್ನು ಕೇಂದ್ರವಾಗಿರಿಸಿಕೊಂಡು ನಿರೂಪಿಸುವ ಪ್ರಯತ್ನ ಕನ್ನಡಕ್ಕಂತೂ ಹೊಸತು. ಭಾಷಾಶಾಸ್ತ್ರ, ಲಿಪಿ ವಿನ್ಯಾಸ, ಚರಿತ್ರೆ, ಸಾಹಿತ್ಯದ ಶಿಸ್ತುಗಳನ್ನು ಆಧಾರವಾಗಿಟ್ಟುಕೊಂಡು ಬರವಣಿಗೆಯ ವಿಕಾಸದಲ್ಲಿ ಜನಸಮೂಹವೊಂದರ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಯತ್ನ ಈ ಕೃತಿಯಲ್ಲಿದೆ.
ಶೆಟ್ಟರ್ ಅವರ ಹಿಂದಿನ ಪುಸ್ತಕ, ೨೦೦೭ರಲ್ಲಿ ಪ್ರಕಟವಾದ ‘ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ’ಯಲ್ಲಿ ಮಂಡಿತವಾದ ವಿಚಾರಗಳ ಮುಂದುವರಿಕೆಯಾಗಿ, ಶೆಟ್ಟರ್ ಅವರು ವಿವಿಧ ಎಡೆಗಳಲ್ಲಿ ಕಳೆದ ಮೂವತ್ತು ವರ್ಷಗಳ ಕಾಲ ಇಂಗ್ಲಿಷ್ ನಲ್ಲಿ ಮಂಡಿಸುತ್ತ ಬಂದಿರುವ, ಚೆದುರಿಹೋಗಿದ್ದ ವಿಚಾರಗಳ ಕ್ರೋಡೀಕರಣವಾಗಿ ಈ ಪುಸ್ತಕ ರೂಪುಗೊಂಡಿದೆ.
ಕನ್ನಡದ ಬೆಳವಣಿಗೆಯ ಬಗ್ಗೆ, ಈ ನೆಲದ ಸಾಮಾಜಿಕ ಬದುಕಿನ ಸ್ವರೂಪದ ಬಗ್ಗೆ ಸ್ವೀಕೃತವೆಂದು ಒಪ್ಪಿರುವ ಅನೇಕ ಸಂಗತಿಗಳನ್ನು ಮರುಪರಿಶೀಲಿಸಿಕೊಳ್ಳುವ ಅಗತ್ಯವನ್ನು ಈ ಪುಸ್ತಕ ಮನಗಾಣಿಸುತ್ತದೆ. ಸಾಮಾನ್ಯ ಶಕೆಯ ಮೊದಲ ಸಾವಿರ ವರ್ಷಗಳಲ್ಲಿ ೨,೦೨೦ ಕನ್ನಡ, ೩೦೦ ಸಂಸ್ಕೃತ ಮತ್ತು ೩೦೦ ಪ್ರಾಕೃತ ಶಾಸನಗಳನ್ನು ಶೆಟ್ಟರ್ ಅವರು ಮೂಲ ಆಕರಗಳೆಂದು ಕರೆದಿದ್ದಾರೆ. ಮೊದಲ ಸಹಸ್ರಮಾನದ ಶಾಸನಗಳ ಪ್ರಮಾಣವೇ ಅಚ್ಚರಿ ಹುಟ್ಟಿಸುತ್ತದೆ. ಭಾರತದ ಇನ್ನು ಯಾವ ದೇಶೀ ಭಾಷೆಯಲ್ಲೂ ಈ ಪ್ರಮಾಣದ ಶಾಸನಗಳು ಇಲ್ಲದಿರುವುದರಿಂದ ಆರಂಭ ಕಾಲದ ದೇಶೀಯ ಅಕ್ಷರ ಇತಿಹಾಸ ರಚನೆಯಲ್ಲಿ ಕರ್ನಾಟಕಕ್ಕೆ ವಿಶಿಷ್ಟ ಸ್ಥಾನವಿದೆ ಎನ್ನುತ್ತಾರೆ ಶೆಟ್ಟರ್.
ಕನ್ನಡದ ಲಿಪಿ ಹಾಗೂ ಭಾಷೆಯ ಉಗಮ, ಬೆಳವಣಿಗೆ, ವೈವಿಧ್ಯ, ಭಾಷಾ ಒಡನಾಟ, ಸಾಹಿತ್ಯ ಪ್ರಭೇದ, ಸಮಾಜ ಹಾಗೂ ಸಂಸ್ಕೃತಿಯ ಸ್ವರೂಪವನ್ನು ಅರಿಯುವಲ್ಲಿ ಈ ಶಾಸನಗಳಿಗೆ ಮಹತ್ವವಿರುವಂತೆಯೇ ಶಾಸನಗಳನ್ನು ಕೊರೆದ ಲಿಪಿ, ಶಿಲ್ಪಿಗಳು ಹಾಗೂ ಅವರ ಪೋಷಕರ ಬಗ್ಗೆಯೂ ಈ ಶಾಸನಗಳು ಹೊಸ ಬೆಳಕನ್ನು ಬೀರುತ್ತವೆ. ಹಾಗೆ ಲಿಪಿ, ಭಾಷೆ, ಸಾಹಿತ್ಯ ಮತ್ತು ಸಾಮಾಜಿಕ ಚರಿತ್ರೆಗಳನ್ನು ಹೊಸದಾಗಿ ನಿರೂಪಿಸುವ ಅವಕಾಶವನ್ನೂ ಒದಗಿಸುತ್ತವೆ. ಶೆಟ್ಟರ್ ಅವರ ಪುಸ್ತಕ ಕನ್ನಡದ ಆದಿ ಕಾಲದ ಚರಿತ್ರೆಯ ಇಂಥ ಒಂದು ಹೊಸ ನಿರೂಪಣೆಯಾಗಿದೆ.
ಈ ಕೃತಿಗೆ ಮುನ್ನಡಿಯನ್ನು ಬರೆದಿರುವ ಡಾ. ಕಲ್ಬುರ್ಗಿಯವರು ಶೆಟ್ಟರ್ ಅವರ ವಿಧಾನವನ್ನು ಮರುವ್ಯಾಖ್ಯಾನ ಶೋಧ, ಆಕರನಿಷ್ಠ, ವಿಶ್ಲೇಷನನಿಷ್ಠ, ಸಂಖ್ಯಾನಿಷ್ಠ, ವ್ಯಾಖ್ಯಾನನಿಷ್ಠ ಶೋಧವೆಂದು ಕರೆದಿದ್ದಾರೆ. ಹಳಗನ್ನಡ ಕೃತಿಯ ಶೋಧ ವಾಹಿನಿಯಲ್ಲಿ ಮೂರು ಕವಲುಗಳು ಕಾಣಿಸುತ್ತವೆ. ಮೊದಲನೆಯದು ಕನ್ನಡದ ಲಿಪಿಯ ವಿಕಾಸವನ್ನು ಕುರಿತದ್ದು; ಎರಡನೆಯದು ಲಿಪಿಕಾರರನ್ನು ಕುರಿತ ನಿರೂಪಣೆ; ಮೂರನೆಯದು ಲಿಪಿ ಮತ್ತು ಲಿಪಿಕಾರರನ್ನು ಕುರಿತ ತಿಳಿವಳಿಕೆ ಒಟ್ಟು ಜನಸಮುದಾಯದ ಬದುಕಿನಲ್ಲಿ ಆದ ಸಾಮಾಜಿಕ ಸಂಚಲನಗಳನ್ನು ಕುರಿತ, ಸ್ವೀಕೃತ ನಿಲುವುಗಳಿಗಿಂತ ಭಿನ್ನವಾದ, ಚಿತ್ರಣ. ಈ ಮೂರೂ ಕವಲುಗಳು ಒಂದರೊಡನೊಂದು ಬೆರೆತು ಶೆಟ್ಟರ್ ಅವರ ನಿರೂಪಣೆಯ ಹರಿವು ರೂಪುಗೊಂಡಿದೆ.
ಅಶೋಕನ ಕಾಲದಲ್ಲಿ ಆಫ್ಘಾನಿಸ್ತಾನದಿಂದ ಬಂದ, ಖರೋಷ್ಠೀ ಮಾತೃಭಾಷೆಯ ಚಪಡನೆಂಬ ಲಿಪಿಕಾರ, ಕನ್ನಡದ ನೆಲದಲ್ಲಿ ಶಾಸನಗಳನ್ನು ಕೊರೆದ. ಅವನಿಂದ ಭಾರತದ ಲಿಪಿಯ ಇತಿಹಾಸ ತೊಡಗುತ್ತದೆ. ಅಲ್ಲಿಂದ ಆರಂಭಿಸಿ ಹತ್ತನೆಯ ಶತಮಾನದವರೆಗೆ ಪ್ರಾಕೃತದ ಏಕಸ್ವಾಮ್ಯ, ಪ್ರಾಕೃತದೊಳಕ್ಕೆ ಪ್ರವೇಶಪಡೆದ ಕನ್ನಡದ ಪದಗಳು, ಸಂಸ್ಕೃತ–ಪ್ರಾಕೃತ–ಬ್ರಾಹ್ಮೀ–ಕನ್ನಡ ಲಿಪಿ ಮತ್ತು ನುಡಿಗಳ ಒಡನಾಟ, ದ್ವಿಭಾಷಾ ಬರಹಗಳು, ಗಂಗರ, ರಾಷ್ಟ್ರಕೂಟರ ಕಾಲದ ಶಾಸನ ಭಾಷೆಯ ಪರಿಶೀಲನೆ; ಪ್ರಾಕೃತದ ಸ್ವಾಮ್ಯ ಮೂರನೆಯ ಶತಮಾನದಲ್ಲಿ ಕೊನೆಗಂಡು ಅದರ ಸ್ಥಾನವನ್ನು ಸಂಸ್ಕೃತ ಪಡೆದುಕೊಳ್ಳಲು ಯತ್ನಿಸಿದಾಗ ಲಿಪಿರಹಿತ ಸಂಸ್ಕೃತ ಭಾಷೆಗೆ ಕನ್ನಡ ಲಿಪಿ ಬಳಕೆಯಾದದ್ದು; ಶಕಟರೇಫ ಮತ್ತು ರಳಗಳು, ಋ ಮೊದಲಾದ ಸ್ವರಾಕ್ಷರಗಳು, ಶ, ಷ, ಹ ಗಳು ಪ್ರಾಕೃತದಿಂದ ಕನ್ನಡಕ್ಕೆ ಬಂದ ಬಗೆ, ಕನ್ನಡ ಲಿಪಿಯು ಸಂಸ್ಕೃತವನ್ನು ಒಗ್ಗಿಸಿಕೊಂಡ, ಸಂಸ್ಕೃತಕ್ಕೆ ತನ್ನದೇ ಕಾಣಿಕೆ ನೀಡಿದ ಸಂಗತಿ ಇವನ್ನೆಲ್ಲ ಶೆಟ್ಟರ್ ಕುತೂಹಲಕರವಾಗಿ ನಿರೂಪಿಸಿದ್ದಾರೆ.
ಶಾಸನಗಳಲ್ಲಿ ಸಂಸ್ಕೃತದ ಬರವಣಿಗೆಗೆ ಕನ್ನಡದ ಲಿಪಿ ಬಳಕೆಯಾಗಿದ್ದರಿಂದ ಕನ್ನಡಕ್ಕಾದ ಲಾಭ, ನಷ್ಟ ಮತ್ತು ಸಂಸ್ಕೃತದ ಮೇಲೆ ಕನ್ನಡ ಬೀರಿದ ಪ್ರಭಾವಗಳನ್ನು ಅವರು ತೋರಿಸಿಕೊಟ್ಟಿದ್ದಾರೆ. ಪುಸ್ತಕದ ಪ್ರತಿಪುಟದಲ್ಲೂ ಇರುವ ಶಾಸನಾಕ್ಷರಗಳು ಮತ್ತು ಇಂದಿನ ಕಂಪ್ಯೂಟರ್ ಲಿಪಿಯಲ್ಲಿ ಇಂದಿನ ಓದುಗರು ಶಾಸನಾಕ್ಷರಗಳನ್ನು ಓದಲು ಸಾಧ್ಯವಾಗುವಂತೆ ಒದಗಿಸಿರುವುದು ಇವು ಆಸಕ್ತರ ಗಮನವನ್ನು ಉದ್ದಕ್ಕೂ ಕಾಪಾಡಿಕೊಂಡು ಹೋಗುತ್ತವೆ. ಮೊದಲ ಲಿಪಿಕಾರ ಚಪಡ ಮಾಡಿದ ಅಚಾತುರ್ಯವೇ ಹೇಗೆ ಸಂಸ್ಕೃತಿ–ಭಾಷೆಗಳ ಇತಿಹಾಸ ಶೋಧಕ್ಕೆ ಆಕರವಾಗುತ್ತದೆ ಎಂಬುದನ್ನು ನುಡಿ ಪತ್ತೇದಾರರಂತೆ ಶೆಟ್ಟರ್ ನಿರೂಪಿಸಿರುವುದು ಇದಕ್ಕೆ ಒಂದು ಉದಾಹರಣೆ.
ಕೇವಲ ಲಿಪಿಯ ಕಥೆಯಾಗಿದ್ದರೆ ನಿರೂಪಣೆ ಶುಷ್ಕವಾಗಬಹುದಾಗಿತ್ತು. ಶೆಟ್ಟರ್ ಅವರ ಉದ್ದೇಶವಿರುವುದು ಶಾಸನಗಳ ವಿಷಯ, ವಸ್ತು, ಲಿಪಿಕಾರರ ಮಾಹಿತಿಯ ಮೂಲಕ ಮೊದಲ ಸಹಸ್ರಮಾನದ ಸಾಮಾಜಿಕ ಸ್ಥಿತಿಗತಿಗಳನ್ನು ಕುರಿತು ಸತಾರ್ಕಿಕವಾದ ಪ್ರಮೇಯಗಳನ್ನು ಮಂಡಿಸುವುದರಲ್ಲಿ. ನಾವು ಶಿಲ್ಪಗಳನ್ನು ಅಭ್ಯಸಿಸಿದ್ದೇವೆ, ಶಿಲ್ಪಿಗಳನ್ನು ಮರೆತಿದ್ದೇವೆ; ಲಿಪಿಯನ್ನು ಅಭ್ಯಸಿಸಿದ್ದೇವೆ, ಲಿಪಿಕಾರರನ್ನು ಮರೆತಿದ್ದೇವೆ ಎಂಬುದು ಶೆಟ್ಟರ್ ಅವರ ನಿಲುವು. ಶಿಲ್ಪಿಗಳ ಜಾತಿ, ಕಸುಬು, ಅವರಿಗೆ ಇದ್ದ ಮನ್ನಣೆ ಹೆಚ್ಚಿದ–ಕಡಮೆಯಾದ ಕ್ರಮ, ಶಾಸನಗಳಲ್ಲಿರುವ ವಿಷಯ, ಮತ್ತು ಲಿಪಿಕಾರ ಮಾಹಿತಿ ಒಟ್ಟಾರೆ ಸಮಾಜದ ಚಿತ್ರಣವನ್ನು ರೂಪಿಸುವ ಬಗೆ– ಇವು ಈ ಪುಸ್ತಕದ ತಿರುಳು.
ಸಂಸ್ಕೃತೀಕರಣ/ಬ್ರಾಹ್ಮಣೀಕರಣ ಏಕಮುಖವಾದುದಲ್ಲ; ಯಜಮಾನಸಂಸ್ಕೃತಿಯು ಪ್ರಜಾಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ತನ್ನ ಮೂಲ ಸ್ವರೂಪವನ್ನು ಬದಲಿಸಿಕೊಂಡಿತೇ ಅಥವಾ ತನ್ನ ಪ್ರಭಾವದಿಂದ ಎಲ್ಲವನ್ನೂ ಸಂಸ್ಕೃತೀಕರಣಗೊಳಿಸಿಕೊಂಡಿತೇ ಅನ್ನುವ ಪ್ರಶ್ನೆಗಳನ್ನು ಶೆಟ್ಟರ್ ಅವರ ಪುಸ್ತಕ ಚರ್ಚಿಸುತ್ತದೆ. ಬ್ರಾಹ್ಮಣೀಕರಣ ಮತ್ತು ಸಂಸ್ಕೃತೀಕರಣ ಒಂದೇ ನಾಣ್ಯದ ಎರಡು ಮುಖಗಳಲ್ಲ ಎಂಬುದು ಮೊದಲ ಸಹಸ್ರಮಾನದ ಶಾಸನಗಳಿಂದ ತಿಳಿಯುತ್ತದೆ ಅನ್ನುವ ತೀರ್ಮಾನಕ್ಕೆ ಬರುತ್ತಾರೆ.
ಆರಂಭಕಾಲದಲ್ಲಿ ಬ್ರಾಹ್ಮಣ್ಯ ಅಲ್ಲೊಮ್ಮೆ ಇಲ್ಲೊಮ್ಮೆ ಕಂಡುಬಂದರೂ ಸಂಸ್ಕೃತ ಭಾಷೆಯ ಪಾತ್ರ ೩–೬ನೆಯ ಶತಮಾನದ ಅವಧಿಯ ಸಮಾಜದಲ್ಲಿ ಶೂನ್ಯವಾಗಿತ್ತು ಎನ್ನುತ್ತಾರೆ. ಆ ಕಾಲದ ಬ್ರಾಹ್ಮಣನೆಂದರೆ ವೈದಿಕ, ಸಂಸ್ಕೃತವೆಂದರೆ ದತ್ತಿಯ ಭಾಷೆ ಅಷ್ಟೇ; ವೈದಿಕರಿಗೂ ಸಂಸ್ಕೃತ ವ್ಯವಹಾರಕ್ಕೂ ಇದ್ದ ಸಂಬಂಧ ಆ ಕಾಲದಲ್ಲಿ ಗಾಢವಾಗಿರಲಿಲ್ಲ; ಸಂಸ್ಕೃತ ಭಾಷಾ ವ್ಯವಹಾರವು ಲಿಖಿಸುವುದನ್ನೇ ವೃತ್ತಿಯಾಗಿಟ್ಟುಕೊಂಡಿದ್ದ ಆಚಾರ್ಯರು, ತ್ವಷ್ಟರು, ವಿಶ್ವಕರ್ಮಿಗಳೆಂಬ ಬ್ರಾಹ್ಮಣೇತರ ದ್ವಿಜರ ವಶದಲ್ಲಿತ್ತೇ ಹೊರತು ವೈದಿಕರ ವಶದಲ್ಲಿ ಅಲ್ಲ; ಆ ಪ್ರಧಾನ ಕಾಲಘಟ್ಟದಲ್ಲಿ ಕವಿಗಳಾಗಿ, ಸಾಹಿತಿಗಳಾಗಿ, ವೈಚಾರಿಕರಾಗಿ ವೈದಿಕರಾರೂ ಹೆಸರು ಮಾಡಲಿಲ್ಲ; ಅವರು ಶ್ರುತಿಜ್ಞಾನವನ್ನು ಬಿಟ್ಟು ಇನ್ನುಳಿದ ಕ್ಷೇತ್ರಗಳೆಡೆ ಗಮನ ಹರಿಸಲಿಲ್ಲ ಎಂದು ಶೆಟ್ಟರ್ ಹೇಳುತ್ತಾರೆ.
ಎಂಟನೆಯ ಶತಮಾನದ ಹೊತ್ತಿಗೆ ವೈದಿಕ ವ್ಯವಸ್ಥೆ ಕುಸಿದು ಬಿದ್ದು ವೈದಿಕರ ಸ್ಥಾನವನ್ನು ಪೌರಾಣಿಕರು ಮತ್ತು ಶೂದ್ರರು ತುಂಬಿದ್ದನ್ನು ಶಾಸನ ಆಕರಗಳು ತೋರುತ್ತವೆ. ನಾಲ್ಕರಿಂದ ಎಂಟನೆಯ ಶತಮಾನದವರೆಗೆ ವೈದಿಕರಿಗೆ ಮಾತ್ರ ಮೀಸಲಾಗಿದ್ದ ದಾನ ದತ್ತಿಗಳು ಎಂಟನೇ ಶತಮಾನದ ನಂತರ ಬ್ರಾಹ್ಮಣೇತರ ಸಮುದಾಯಗಳಿಗೆ ವಿಸ್ತರಿಸಿಕೊಂಡವು; ಕೆಲವು ರಾಜಮನೆತನಗಳು ವೈದಿಕರಿಂದ ದೂರ ಸರಿದು ಉಳಿದ ವರ್ಗಗಳನ್ನು ಪೋಷಿಸುವುದರಲ್ಲಿ ತೊಡಗಿದವು ಅನ್ನುವುದು ಶೆಟ್ಟರ್ ಅವರ ಪ್ರತಿಪಾದನೆ.
ಸಂಸ್ಕೃತೀಕರಣ ಮತ್ತು ಬ್ರಾಹ್ಮಣೀಕರಣ ಅವ್ಯಾಹತವಾಗಿ, ಸಾರ್ವತ್ರಿಕವಾಗಿ ಇರಲಿಲ್ಲ; ಮೊದಲ ಸಹಸ್ರಮಾನದ ಸಂಸ್ಕೃತ ಭಾಷಾ ವ್ಯವಹಾರವು ಒಂದು ಸಮಾಜದ ಒಂದೇ ಬಗೆಯ ಕೊಡುಕೊಳ್ಳುವಿಕೆಗೆ ಸೀಮಿತವಾಗಿತ್ತು, ಕನ್ನಡ ಭಾಷಾ ವ್ಯವಹಾರ ಶೂದ್ರರಾದ ಮಾದಿಗ ಮತ್ತು ಚರ್ಮಕಾರರನ್ನು ಒಳಗೊಂಡು ಸಮಾಜದ ಎಲ್ಲ ವರ್ಗಗಳ ಕೊಡುಕೊಳುವಿಕೆಗೆ ಬಳಕೆಯಾಗುತ್ತಿತ್ತು ಅನ್ನುವುದು ಶಾಸನಗಳ ವ್ಯಾಖ್ಯಾನದಿಂದ ಶೆಟ್ಟರ್ ರೂಪಿಸುವ ಇನ್ನೊಂದು ಪ್ರಮೇಯ.
ಶಾಸನಗಳಲ್ಲಿ ಬಳಕೆಯಾಗಿರುವ ಛಂದೋರೂಪಗಳಿಗೂ ಸಂಸ್ಕೃತ–ಕನ್ನಡ ಸಾಹಿತ್ಯಗಳಿಗೂ ಇರುವ ಸಂಬಂಧದ ಚರ್ಚೆಯೂ ಸ್ವಾರಸ್ಯಕರವಾಗಿದೆ. ಅಕ್ಷರಶಃ ನೂರಾರು ಲಿಪಿಕಾರರ ಮಾಹಿತಿಯೊಡನೆ ಅವರ ಕಸುಬು, ಸಾಮಾಜಿಕ ಸ್ಥಾನಮಾನ, ಅವರಿಗೆ ದೊರೆತ ಮನ್ನಣೆ, ಶಾಸನಗಳಲ್ಲಿ ಉಕ್ತವಾಗಿರುವ ವ್ಯಕ್ತಿ–ಸಮುದಾಯಗಳು ಇವನ್ನೆಲ್ಲ ದಾಖಲಿಸುತ್ತ ಶೆಟ್ಟರ್ ಅವರ ಪುಸ್ತಕವು, ಕಲ್ಬುರ್ಗಿಯವರು ಗುರುತಿಸುವಂತೆ, ಈವರೆಗೂ ಬ್ರಾಹ್ಮಣ ಮತ್ತು ಕ್ಷತ್ರಿಯರ ಸುತ್ತ ಹೆಣೆದಿದ್ದ ಇತಿಹಾಸವನ್ನು ಮಧ್ಯಮ ಮತ್ತು ಕೆಳಸ್ತರದವರೆಗೂ ವಿಸ್ತರಿಸಿ, ಸಮಾಜಕ್ಕಾಗಿ ಜೀವತೆತ್ತ ಗೌಡ, ಮಾದಿಗ, ಚರ್ಮಕಾರ, ಇನ್ನಿತರ ಶೂದ್ರರಿಗೆ ಇತಿಹಾಸದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದೆ.
ಈ ಪುಸ್ತಕದ ಸಾಮಾಜಿಕ ಚರಿತ್ರೆಯ ಭಾಗವಾಗಿ ಉದ್ದಕ್ಕೂ ಪರಿಶೀಲನೆ, ಚರ್ಚೆಗಳಿಗೆ ಒಳಗಾಗಿರುವ ಸಾಂಸ್ಕೃತಿಕ ಸಂಗತಿಗಳು ಅನೇಕವಿವೆ. ದೇವಸ್ವ, ಬ್ರಹ್ಮಸ್ವ, ವೀರಗೊಡುಗೆ, ಅಧಿಕಾರಕೊಡುಗೆ, ಬಿತ್ತುವಾಟಕೊಡುಗೆ, ನೆತ್ತರ್ಪಟ್ಟಿ, ಬಾಳ್ಗಚ್ಚು, ಕಲ್ನಾಟು, ಇಂಥವುಗಳ ಬಗ್ಗೆ ಅನೇಕ ಹೊಸ ಸಂಗತಿಗಳು, ವ್ಯಾಖ್ಯಾನಗಳು ಈ ಕೃತಿಯಲ್ಲಿ ಕಾಣುತ್ತವೆ. ಹಲವು ಜ್ಞಾನಶಿಸ್ತುಗಳನ್ನು ಅಳವಡಿಸಿಕೊಂಡು, ಹಲವು ಆಕರಗಳಿಂದ ಮಾಹಿತಿಯನ್ನು ಸಂಗ್ರಹಿಸಿ, ಸಾಂಸ್ಕೃತಿಕ ಕಥನದ ನೇಯ್ಗೆಯನ್ನು ಮಾಡಿರುವ ಈ ಕೃತಿಯ ಮಹತ್ವ ಕಾಲ ಕಳೆದಂತೆ ನಮ್ಮ ತಿಳಿವಳಿಕೆಗೆ ಇಳಿಯುತ್ತದೆ. ಪುಸ್ತಕವು ಮಂಡಿಸುವ ವಿಷಯಗಳ ಬಗ್ಗೆ ಕುತೂಹಲವಿರುವ ನನ್ನಂಥ ಓದುಗರು ಭಾಷೆ, ಸಾಹಿತ್ಯ ಚರಿತ್ರೆ, ಸಮಾಜಶಾಸ್ತ್ರ, ಲಿಪಿಶಾಸ್ತ್ರಗಳ ತಜ್ಞರು ಈ ಕೃತಿಯು ತಿಳಿಸಿರುವ ಸಂಗತಿಗಳ ಬಗ್ಗೆ ಚರ್ಚಿಸಿ ಕನ್ನಡದ ವಿವೇಕವನ್ನು ವೃದ್ಧಿಸಲಿ ಎಂದು ಹಂಬಲಿಸುತ್ತೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.