ADVERTISEMENT

ಮೊದಲ ಓದು

ಸಂದೀಪ ನಾಯಕ
Published 14 ಫೆಬ್ರುವರಿ 2015, 10:08 IST
Last Updated 14 ಫೆಬ್ರುವರಿ 2015, 10:08 IST

ವಾದಿ ಸಂವಾದಿ
(ಸಂಗೀತವನ್ನು ಕುರಿತು ಪಂಡಿತ್‌ ರಾಜೀವ ತಾರಾನಾಥ ಅವರ ಚಿಂತನೆಗಳು)
ಸಂಪಾದನೆ ಹಾಗೂ ಅನುವಾದ: ಶೈಲಜ ಮತ್ತು ಟಿ.ಎಸ್‌. ವೇಣುಗೋಪಾಲ್‌
ಪು: 168 ; ಬೆ: ₨ 125
ಪ್ರ: ರಾಗಮಾಲಾ, ಸಿ.ಎಚ್‌ 73, 7ನೇ ಮುಖ್ಯ ರಸ್ತೆ, ಸರಸ್ವತೀಪುರಂ,
ಮೈಸೂರು– 570 009


ಹಿಂದೂಸ್ತಾನಿ ಸಂಗೀತಗಾರ, ಸರೋದ್‌ ವಾದಕ ಪಂಡಿತ್‌ ರಾಜೀವ್‌ ತಾರಾನಾಥರ ಕುರಿತಾದ ಪುಸ್ತಕವನ್ನು ಶೈಲಜ ಮತ್ತು ಟಿ.ಎಸ್‌. ವೇಣುಗೋಪಾಲ್‌ ಸಂಪಾದಿಸಿದ್ದಾರೆ. ತಮ್ಮ ‘ರಾಗಮಾಲಾ ಪ್ರಕಾಶನ’ದಿಂದ ಸಂಗೀತದ ಕುರಿತಾದ ಪುಸ್ತಕಗಳನ್ನು ಪ್ರಕಟಿಸುವ ಕಷ್ಟದ ಕೆಲಸವನ್ನು ಮಾಡಿಕೊಂಡು ಅವರು ಬರುತ್ತಿದ್ದಾರೆ. ಇದು ಸಂಗೀತವನ್ನು ಕುರಿತ ಅವರ ಪ್ರಕಾಶನದ ಪುಸ್ತಕ ಮಾಲಿಕೆಯ ಐದನೇ ಪುಸ್ತಕ.

ಸಂಗೀತದಲ್ಲಿನ ರಾಜೀವ ತಾರಾನಾಥರ ಕಸುಬುಗಾರಿಕೆ, ಹದ, ಕಲ್ಪನೆ ಮತ್ತವರ ಚಿಂತನೆ ಈ ಇಡೀ ಪುಸ್ತಕವನ್ನು ಆವರಿಸಿಕೊಂಡಿದೆ. ಅವರೊಂದಿನ ಮಾತುಕತೆ, ಅವರ ಭಾಷಣ, ಸಂದರ್ಶನಗಳನ್ನು ಒಳಗೊಂಡ ಪುಸ್ತಕ ಇದು. ಸರೋದ್‌ ಮಾಂತ್ರಿಕ ಉಸ್ತಾದ್‌ ಅಲಿ ಅಕ್ಬರ್‌ ಖಾನ್‌ ಅವರ ಶಿಷ್ಯರಾದ ರಾಜೀವ ತಾರಾನಾಥರ ಸಂಗೀತವನ್ನು ಅವರ ಗುರುಗಳಿಲ್ಲದೆ ನೋಡಲು ಸಾಧ್ಯವಿಲ್ಲ.

ಅವರು ತಮ್ಮ ಗುರುಗಳ ಬಗ್ಗೆ, ತಮ್ಮ ಸಿನಿಮಾ ವ್ಯಾಮೋಹ, ಅಲ್ಲಿ ಮಾಡಿದ ಪ್ರಯೋಗದ ಬಗ್ಗೆಯೂ ಮಾತನಾಡಿದ್ದಾರೆ. ಕನ್ನಡದ ‘ಸಂಸ್ಕಾರ’, ‘ಪಲ್ಲವಿ’, ‘ಖಂಡವಿದೆಕೊ ಮಾಂಸವಿದೆಕೊ’ ಸಿನಿಮಾಗಳಿಗೆ ಅವರು ಸಂಗೀತ ಕೊಟ್ಟಿದ್ದಾರೆ. ಸಿನಿಮಾ ಸಂಗೀತದ ಕುರಿತಾದ ಅವರ ಚಿಂತನೆಯೂ ಇಲ್ಲಿದೆ.

ಇಲ್ಲಿರುವ ಅವರ ಮಾತುಗಳ ಕೇಂದ್ರದಲ್ಲಿ ಸಂಗೀತವಿದ್ದರೂ ಅದು ಅದಕ್ಕೆ ಮಾತ್ರ ಸೀಮಿತವಾಗಿಲ್ಲ; ಕಲೆಯ ಹಲವು ಸ್ತರಗಳನ್ನು ಒಳಗೊಂಡಿವೆ. ಇಲ್ಲಿರುವುದು ಅವರ ಚಿಂತನೆಯ ಒಂದು ಭಾಗವಷ್ಟೆ. ಅದು ಅವರನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ರಾಜೀವ ತಾರಾನಾಥರು ಮಾತನಾಡಿದ ಧಾಟಿಯಲ್ಲಿಯೇ ಇಲ್ಲಿನ ಎಲ್ಲ ಬರಹಗಳಿವೆ ಎಂಬುದು ಈ ಪುಸ್ತಕದ ವೈಶಿಷ್ಟ್ಯ. ಆರು ಭಾಗಗಳಲ್ಲಿ ಹರಡಿಕೊಂಡಿರುವ ಇದರಲ್ಲಿ ರಾಜೀವರ ಸಂಗೀತ, ಕಲೆಯ ಕುರಿತಾದ ದಾಹ, ವ್ಯಾಮೋಹದ ಮಾತುಗಳನ್ನು ಓದುಗರು ಕೇಳಿಸಿಕೊಳ್ಳಬಹುದಾಗಿದೆ.

ಪಾರಂಪರಿಕ ಕೆರೆ ಕಟ್ಟೆಗಳು
ಅಳಿವು–ಉಳಿವು
ಲೇ: ತೈಲೂರು ವೆಂಕಟಕೃಷ್ಣ
ಪು: 176; ಬೆ: ₨ 150
ಪ್ರ: ಬಾನು ಪ್ರಕಾಶನ
ನಂ. 2958, ನೆಹರು ನಗರ, ಮಂಡ್ಯ– 571 401


ಕೆರೆಗಳನ್ನು ಅನಾದಿಯಿಂದ ಮನುಷ್ಯ ನಂಬಿಕೊಂಡು, ಅವಲಂಬಿಸಿಕೊಂಡು ಬಂದಿದ್ದಾನೆ. ಒತ್ತುವರಿಯಿಂದಾಗಿ ಕೆರೆಗಳಿಗೆ ಕೆರೆಗಳೇ ಮಾಯವಾಗುತ್ತಿರುವ, ಕೊಳಚೆಗುಂಡಿ ಆಗುತ್ತಿರುವ ಈ ಹೊತ್ತಿನಲ್ಲಿ ತೈಲೂರು ವೆಂಕಟಕೃಷ್ಣ ಅವರು ಕರ್ನಾಟಕ ಮತ್ತಿತರ ಕಡೆಗಿನ ಪಾರಂಪರಿಕ ಕೆರೆಕಟ್ಟೆಗಳ ಬಗ್ಗೆ ಅಧ್ಯಯನ ನಡೆಸಿ ಮಹತ್ವದ ಈ ಪುಸ್ತಕವನ್ನು ಬರೆದಿದ್ದಾರೆ. ಅನೇಕ ವರ್ಷಗಳ ಅವರ ಪರಿಶ್ರಮದಿಂದ ಸಿದ್ಧವಾದ ಈ ಪುಸ್ತಕ ಕೆರೆಕಟ್ಟೆಗಳ ಬಗ್ಗೆ ಜನಪದರ ಪಾರಂಪರಿಕ, ವೈಜ್ಞಾನಿಕ ನೋಟಗಳನ್ನು ಕೊಡುತ್ತದೆ.

ಜನಪದ ಕಥೆ, ಹಾಡುಗಳನ್ನು ಕೂಡ ಬಳಸಿಕೊಂಡು ಕಥೆಗಳ ಕುರಿತಾದ ಈ ಕಥನವನ್ನು ಲೇಖಕರು ಕಟ್ಟಿದ್ದಾರೆ. ಅವುಗಳ ಆಕಾರ, ಅವು ಊರೊಂದರ ಗುರುತಾಗಿರುವುದು, ದಾನಿಯೊಬ್ಬಳ/ನ ನಿರ್ಮಾಣವಾಗಿರುವುದು ಇವೆಲ್ಲವನ್ನೂ ಗಮನಿಸಿ ಕರೆಗಳ ಪ್ರಾಮುಖ್ಯತೆ ಏನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಕರ್ನಾಟಕದ ಬಹುಪಾಲು ಕೆರೆಗಳು ಇರುವುದು ಬಯಲುಸೀಮೆಯಲ್ಲಿಯೇ.

ಅಂತರ್ಜಲನ್ನು ಹೆಚ್ಚಿಸುತ್ತಿದ್ದ ಈ ಕೆರೆಗಳು ಕಣ್ಮರೆಯಾಗುತ್ತಿರುವುದರಿಂದ ಪರಿಸರ ಹಾಗೂ ಜನರ ಮೇಲೆ ಆಗುತ್ತಿರುವ ಪರಿಣಾಮ ಊಹೆಗೆ ನಿಲುಕದ್ದು. ಸಾವಿರಾರು ಜನರ ಬದುಕು ಹಸನಾಗಲಿ ಎಂಬ ಸದುದ್ದೇಶದಿಂದ ನಿರ್ಮಾಣವಾದ ಕೆರೆಗಳ ಕುರಿತ ಈ ಬರಹ ಜನರ ಒಳಗಣ್ಣನ್ನು ಮಾತ್ರವಲ್ಲ ಮುಚ್ಚಿದ ಕಿವಿಯನ್ನೂ ತೆರೆಸುವಂತಿದೆ. ನೀರು ಒಂದು ಕಾದಿಡಬೇಕಾದ ಸಂಪತ್ತು ಎಂಬುದು ಲೇಖಕ ತೈಲೂರು ವೆಂಕಟಕೃಷ್ಣ ಅವರ ಬರಹದ ಹಿಂದಿನ ಕಾಳಜಿಯಾಗಿದೆ. ಪರಿಸರದ ಕುರಿತಾದ ಪ್ರೇಮ, ಕಳಕಳಿಯಿಂದ ಬರೆಯಲಾದ ಈ ಪುಸ್ತಕ ಆಸಕ್ತರಿಗೆ ಒಂದು ಆಕರದಂತೆಯೂ ಉಪಯುಕ್ತವಾಗುವಂತಿದೆ.

ಅಲೆಮಾರಿ ಇರುಳು
(ಕವಿತೆಗಳು)
ಲೇ: ವಿಜಯಶ್ರೀ ಹಾಲಾಡಿ
ಪು: 72 ; ಬೆ: ₨ 50
ಪ್ರ: ಅಭಿರುಚಿ ಪ್ರಕಾಶನ
ನಂ. 386, 14ನೇ ಮುಖ್ಯ ರಸ್ತೆ,
3ನೇ ಅಡ್ಡ ರಸ್ತೆ, ಸರಸ್ವತೀಪುರ, ಮೈಸೂರು– 570 009


ದಕ್ಷಿಣ ಕನ್ನಡ ಜಿಲ್ಲೆಯ ಕವಯಿತ್ರಿ ವಿಜಯಶ್ರೀ ಹಾಲಾಡಿ ಅವರ ಪುಟ್ಟ ಕವಿತೆಗಳನ್ನು ಈ ಸಂಕಲನ ಒಳಗೊಂಡಿದೆ. ಪ್ರಕೃತಿಯೊಂದಿಗಿನ ಮಾತುಕತೆ, ಪ್ರತಿಸ್ಪಂದನದಂತಿರುವ ವಿಜಯಶ್ರೀ ಅವರ ಕವನಗಳು ಆಗಸವನ್ನು ಬೊಗಸೆಯಲ್ಲಿ ಹಿಡಿಯುವ ಹಿರಿದಾದ ಪ್ರಯತ್ನಗಳಲ್ಲ. ಇಬ್ಬನಿಯ ಭಾರಕ್ಕೆ ನೆಲದ ಮೇಲೆ ಬಾಗಿದ ಗರಿಕೆಯ ಕನವರಿಕೆಯನ್ನು ಪದಗಳಲ್ಲಿ ಮೂಡಿಸಿದ ಕಿರು ಅಲೆಗಳವು. ಇರುಳು, ಅದರ ನಿಶ್ಶಬ್ದ, ವಿಷಾದ ಇಲ್ಲಿನ ಕವಿತೆಗಳ ಸ್ಥಾಯಿ ಭಾವ.

ಇಲ್ಲಿನ ಎಲ್ಲ ಕವಿತೆಗಳಲ್ಲಿ ಅಲೆಮಾರಿಯಾದ ಇರುಳು ಅನೇಕ ಕವಿತೆಗಳ ಸಾಲುಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. ದೈನಿಕದ ಸಾಮಾನ್ಯ ಕ್ರಿಯೆಯಾದ ಇರುಳು ಹಲವು ಭಾವ, ಬಣ್ಣಗಳನ್ನು ಇಲ್ಲಿ ಧರಿಸುತ್ತದೆ. ‘ಹಗಲಿನ/ ಎದುರು/ ಇರುಳು/ ತತ್ತರಿಸಿತು;/ ಸೋಲಲಿಲ್ಲ/ ಗಾಢವಾಯಿತು/ ಗೂಢವಾಯಿತು’ (ಪು.43), ‘ಕಿಕ್ಕಿರಿದ ಹಗಲುಗಳನ್ನು/ ಪೇರಿಸಿಡುವ ಸೂರ್‍ಯ/ ಖಾಲಿ ಇರುಳುಗಳನ್ನು /ಎದುರಿಗಿಟ್ಟು ತಮಾಷೆ/ ನೋಡುತ್ತಾನೆ’ (ಪು.2).

ಇರುಳಿಗೆ ನೂರಾರು ಕಣ್ಣುಗಳನ್ನು ಕೊಡುವ ಮಿಂಚುಹುಳುಗಳ ಸಣ್ಣ ಬೆಳಕು ಇಲ್ಲಿನ ಹಲವು ಕವಿತೆಗಳಲ್ಲಿದೆ. ಅವು ಕೆಲವೆಡೆ ಪ್ರಖರವಾಗಿದ್ದರೆ, ಇನ್ನು ಕೆಲವು ಕಡೆ ಮಂದವಾಗಿವೆ. ರೂಪ ಹಾಸನ ಅವರ ಮುನ್ನುಡಿ, ಚಿತ್ರಗಳೊಂದಿಗೆ ಬಂದಿರುವ ಈ ಕವನ ಸಂಗ್ರಹ ಒಂದು ವಿಶಿಷ್ಟ ಪ್ರಯತ್ನವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.