ರಾ. ರಘುನಾಥರಾಯರ ‘ನಿಯೋಗ ವಿಧಿಯ ವಿಚಾರ’ ಮೈಸೂರಿನ ಗ್ರಾಜುಯೇಟ್ಸ್ ಟ್ರೇಡಿಂಗ್ ಅಸೋಸಿಯೇಷನ್ ಪ್ರೆಸ್‌ನಿಂದ ಜೂನ್ 1913ರಲ್ಲಿ ಮುದ್ರಣಗೊಂಡಿದೆ. ಬೆಲೆ ನಮೂದಾಗದ ಈ ಕೃತಿಯಲ್ಲಿ 66 ಪುಟಗಳಿವೆ.
ರಾಮನಾಥಪುರಂ ರಘುನಾಥರಾಯರು (1860–1918) ಮೈಸೂರಿನವರು. ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದ ರಾಯರು ಮದ್ರಾಸು ವಿಶ್ವವಿದ್ಯಾಲಯದ ಪರೀಕ್ಷಕರೂ ಆಗಿದ್ದರು. ಬೆಂಗಳೂರು, ಶಿವಮೊಗ್ಗ, ಚಿತ್ರದುರ್ಗ ಮುಂತಾದೆಡೆಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ಇವರ ಅಧ್ಯಾಪನದ ವಿಷಯಗಳು – ಭೂಗೋಳ, ಇತಿಹಾಸ, ಭಾಷಾಂತರ ಹಾಗೂ ಇಂಗ್ಲಿಷ್. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕೆಲ ಕಾಲ ಮುಖ್ಯ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದರು. ಬೆಂಗಳೂರು ಥಿಯಸಾಫಿಕಲ್ ಸೊಸೈಟಿಯಲ್ಲಿ (ಬೆಂಗಳೂರು ದಿವ್ಯ ಜ್ಞಾನ ಸಮಾಜ) ಕಾಳಜಿ ಉಳ್ಳವರಾಗಿದ್ದರು. ಚಿತ್ರದುರ್ಗ ಥಿಯಸಾಫಿಕಲ್ ಸೊಸೈಟಿಯ ಅಧ್ಯಕ್ಷರೂ ಆಗಿದ್ದರು. ಅವರ ಮೇಲೆ ಆನೀಬೆಸೆಂಟರ ಪ್ರಭಾವ ಇತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗಾಗಿ ಶ್ರಮಿಸಿದ ಅವರು 1916ರಿಂದ 1918ರವರೆಗೆ ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದರು.
ಹಿರಿಯರು ಎಂಬ ಕಾರಣದ ಮರ್ಯಾದೆ, ಕಿರಿಯರು ಎಂಬ ಕಾರಣದ ತಾತ್ಸಾರ – ಇವುಗಳನ್ನು ಮೀರಿದ ವಸ್ತುನಿಷ್ಠ ವಿಮರ್ಶೆಗೆ ಇವರು ಹೆಸರಾಗಿದ್ದರು. ‘ನೀತಿರತ್ನಾಕರ’ (ಈಸೋಪನ ನೀತಿ ಕಥೆಗಳ ಕನ್ನಡಾನುವಾದ), ‘ಕರ್ನಾಟಕ ವ್ಯಾಕರಣೋಪನ್ಯಾಸ ಮಂಜರಿ’, ‘ಆರೋಗ್ಯಮಾರ್ಗದರ್ಶಿನಿ’, ‘ಸನಾತನಧರ್ಮದೀಪಿಕೆ’, ‘ಸನಾತನಧರ್ಮ ಪ್ರಶ್ನೋತ್ತರಮಾಲೆ’, ‘ಸ್ತ್ರೀಸಂಸ್ಕಾರಪ್ರಕಾಶಿಕೆ’, ‘ದ್ವೈತ ಭಾಷ್ಯದ ಪ್ರಕ್ಷಿಪ್ತ ವಚನವೊಂದರ ಜಾತಕ’, ‘ಪ್ರಾಣಿಶಾಸ್ತ್ರ’, ‘ಪ್ರೌಢವಿವಾಹ’, ‘ವಿವಾಹದ ಮುಖ್ಯತಮ ಕರ್ಮವಿಚಾರ’ – ಇವು ಇವರ ಕನ್ನಡದ ಕೃತಿಗಳು.
ರಘುನಾಥ ರಾಯರ ಕುರಿತು ಡಿ.ವಿ.ಜಿ ಅವರು ತಮ್ಮ ‘ಜ್ಞಾಪಕಚಿತ್ರಶಾಲೆ’ಯಲ್ಲಿ ಹೇಳಿರುವುದು ಹೀಗೆ: ‘‘ಪ್ರವಚನ ವಿಧಾನದಲ್ಲಿ ಅವರು ತಮ್ಮ ಸ್ವಂತದ್ದನ್ನಾಗಿ ಮಾಡಿಕೊಂಡಿದ್ದ ವಾಕ್ಯಪರಿಷ್ಕಾರ ಪದ್ಧತಿಯನ್ನು ಅವರ ಶಿಷ್ಯರನೇಕರು ಪದೇಪದೇ ನೆನೆಸಿಕೊಳ್ಳುತ್ತಿದ್ದುದನ್ನು ನಾನು ಕೇಳಿದ್ದೇನೆ. ಅವರು ಯಾವ ಸೊಗಸಾದ ಇಂಗ್ಲಿಷ್ ವಾಕ್ಯವನ್ನೋದಿದರೂ ಕೂಡಲೇ ಅದನ್ನು ಕನ್ನಡಕ್ಕೆ ಪರಿವರ್ತನೆ ಮಾಡಿಸುವ ಪದ್ಧತಿಯನ್ನಿಟ್ಟುಕೊಂಡಿದ್ದರು. ಅವರು ಕೊಟ್ಟ ವಾಕ್ಯಕ್ಕೆ ವಿದ್ಯಾರ್ಥಿಗಳು ನೀಡಿದ ತರ್ಜುಮೆಗಳನ್ನು ಒಂದೊಂದನ್ನಾಗಿ ಓದಿ ವಿಮರ್ಶೆ ಮಾಡಿ – ‘ಮೂಲವಾಕ್ಯದ ಸ್ಪಿರಿಟ್ ಬರಲಿಲ್ಲವಯ್ಯ, ಸ್ಪಿರಿಟ್ ಬರಲಿಲ್ಲ’ ಎನ್ನುತ್ತಿದ್ದರಂತೆ. ಮಾತಿಗೆ ಪಡಿ ಮಾತನ್ನಿಟ್ಟು ಮಾಡಿದ ತರ್ಜುಮೆ ಅವರಿಗೆ ಒಪ್ಪದು. ಮೂಲದ ಅರ್ಥ ಸ್ಥೂಲವಾಗಿ ಹೊರಟರೂ ಅವರಿಗೆ ಸಾಲದು. ಕನ್ನಡದ ಒಳ್ಳೆಯ ವಾಕ್ಯವನ್ನು ವಿದ್ಯಾರ್ಥಿಗಳಿಗೆ ಕೊಟ್ಟು ಅದನ್ನು ಇಂಗ್ಲಿಷಿಗೆ ತರ್ಜುಮೆ ಮಾಡ ಹೇಳಿ, ಅದನ್ನೂ ಹೀಗೆಯೇ ವಿಮರ್ಶೆಗೆ ಒಳಪಡಿಸುತ್ತಿದ್ದರು. ಪದಕ್ಕೆ ಪದವನ್ನಿಡುವುದು ದೊಡ್ಡದಲ್ಲ, ಮೂಲದ ಸ್ಪಿರಿಟ್ ಅದರ ಭಾವಧೋರಣೆ, ಅದರ ಕಾವು ಅದರ ಜೋರು – ನಮ್ಮ ಭಾಷಾಂತರದಲ್ಲಿ ಕಾಣಬೇಕು. ಗಂಡರ ಗಂಡ=Man among men ; ಬಿರುದಂತೆಂಬರ ಗಂಡ=anquisher of those who challenge his title, ಇದು ರಘುನಾಥ ರಾಯರ ಸರಣಿ. ಇಂಗ್ಲಿಷಿನಿಂದ ಕನ್ನಡಕ್ಕೆ ಪರಿವರ್ತನೆ ಮಾಡಿದಾಗಲೂ ಹಾಗೆಯೇ: Bloemfontein=ಕುಸುಮಪುರಿ, Roof of the world=ಭುವನಭವನದ ಕರುಮಾಡ ಇಂಥ ವೀರ್ಯವತ್ತಾದ ಪದಪ್ರಯೋಗಗಳು ಅವರ ಬರವಣಿಗೆಯಲ್ಲಿ ಹೇರಳವಾಗಿ ಸಿಕ್ಕುತ್ತವೆ’’.
ಆ ಕಾಲಘಟ್ಟದಲ್ಲಿ ರಚನೆಗೊಂಡ ಸ್ತ್ರೀ ವಿದ್ಯಾಭ್ಯಾಸ, ಬಾಲ್ಯವಿವಾಹ, ಸ್ತ್ರೀ ಪುನರ್ವಿವಾಹ, ವಿಧವಾವಿವಾಹ, ಸಹಗಮನ ನಿಷೇಧ, ವಿಧವಾ ಕೇಶಮಂಡನ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡ ಲೇಖಕರಿಂದ ರಚಿತವಾದ ಚಿಕಿತ್ಸಕ ಮನೋಧರ್ಮದ, ಕ್ರಾಂತಿಕಾರಿ ಮನೋಧರ್ಮದ ಕೃತಿಗಳನ್ನು ಗಮನಿಸಿಯೇ ತಿಳಿದುಕೊಳ್ಳಬೇಕು. ಸ್ತ್ರೀಯರ ಪುನರ್ವಿವಾಹವನ್ನು ಕುರಿತು 1883ರಲ್ಲಿ ತಂದೆ ಮಕ್ಕಳಾದ ಸಿದ್ಧಾಂತಿ ಸಬ್ರಹ್ಮಣ್ಯ ಶಾಸ್ತ್ರೀ ಹಾಗೂ ಸಿದ್ಧಾಂತಿ ಶಿವಶಂಕರ ಶಾಸ್ತ್ರೀ ಇವರುಗಳು ಕೃತಿಗಳನ್ನು ರಚಿಸಿದ್ದಾರೆ. 1889ರ ಹೊತ್ತಿಗೇನೇ ವೆಂಕಟ ರಂಗೋ ಕಟ್ಟಿ ಅವರು ‘ವಿಧವಾ ವಪನ ವಿಚಾರ’ವನ್ನು ಕುರಿತು ಕೃತಿ ರಚಿಸಿದ್ದಲ್ಲದೆ, ವೈಸರಾಯ್ ವಿಲಿಯಂ ಬೆಂಟಿಂಗ್ ಹಾಗೂ ರಾಜಾರಾಮ ಮೋಹನರಾಯ್ ಅವರನ್ನು ಖುದ್ದಾಗಿ ಕಂಡು ಸ್ತ್ರೀ ಶೋಷಣೆ ತಪ್ಪಿಸಲು ಶಾಸನಗಳನ್ನು ಸರಕಾರ ತರಬೇಕಾಗಿರುವ ತುರ್ತನ್ನು ಮನವರಿಕೆ ಮಾಡುವಷ್ಟರ ಮಟ್ಟಿಗಿನ ಮಹತ್ವದ ಕಾರ್ಯ ಮಾಡಿರುತ್ತಾರೆ. ಶಾಮರಾವ್ ವಿಠ್ಠಲ ಕಾಯ್ಕಿಣಿ ಅವರ ‘ವಿಧವಾ ಪುನರ್ವಿವಾಹ’, ನಂಜನಗೂಡು ತಿರುಮಲಾಂಬ ಅವರ ‘ವಿಧವಾ ತತ್ವ’, ರೊದ್ದ ಶ್ರೀನಿವಾಸ ಕೊನ್ಹೇರ ಅವರ ‘ಸ್ತ್ರೀ ಶಿಕ್ಷಣದ ಅವಶ್ಯಕತೆ’, ಭಿಕಾಜಿ ಪರಶುರಾಮ ಕಾಳೆ ಅವರ ‘ಸ್ತ್ರೀಯರ ಹಕ್ಕು’ ಹಾಗೂ ‘ಅವಿವಾಹಿತ ಸ್ತ್ರೀಯರ ಸಮಸ್ಯೆ’, ಪಂಡಿತ ರಮಾಬಾಯಿ ಅವರ ‘ಸ್ತ್ರೀಧರ್ಮ ನೀತಿ’, ಶಾಂತಕವಿಗಳ ‘ವ್ಯಭಿಚಾರಾನರ್ಥ ಸಿಂಧು’ – ಇವು, ಸ್ತ್ರೀ ಏಳಿಗೆಯ ವಿಚಾರದ ಕನ್ನಡದ ಕೆಲವು ಮಹತ್ವದ ಪುಸ್ತಕಗಳು ಮಾತ್ರ.
ಪ್ರಸಕ್ತ ಕೃತಿಯ ವಿಷಯ ಸೂಚಿಕೆಯಲಿ – ‘ಅವತರಣಿಕೆ’, ‘ಸ್ತ್ರೀಯರ ಸಹಗಮನದ ನಿಷೇಧ’, ‘ಸ್ತ್ರೀಯರ ವಪನ ಸಹಗಮನಗಳ ಸೃಷ್ಟಿ’, ‘ನಿಯೋಗ ವಿಧಿಯ ಆಧಾರಗಳು’, ‘ನಿಯೋಗದ ಪ್ರಭೇದಗಳು’, ‘ನಿಯೋಗ ವಿಚಾರದ ಫಲಿತಾಂಶಗಳು’, ‘ಶ್ರೀಮಠಾಧಿಪತಿಗಳ ನಡೆವಳಿಕೆ’ ಎನ್ನುವ ಆರು ಅಧ್ಯಾಯಗಳಿವೆ. ಡಿವಿ.ಜಿ. ಅವರು ಈ ಕೃತಿಯ ಬಗ್ಗೆ ಹೇಳಿರುವುದು ರಾಯರ ಉದಾರೀ ಚಿಕಿತ್ಸಕ ಮನೋಧರ್ಮಕ್ಕೆ ನಿದರ್ಶನದಂತಿದೆ. ಈ ಕೃತಿಯೊಳಗೆ ಮುಖ್ಯವಾಗಿ ಸ್ತ್ರೀ ಪುನರ್ವಿವಾಹ, ವಿಧವಾಸ್ತ್ರೀಯರ ಕೇಶ ಮಂಡನ, ಬಾಲ್ಯ ವಿವಾಹ, ವಿಧವೆಯರ ವಿವಾ, ಸಹಗಮನ ನಿಷೇಧ, ನಿಯೋಗವಿಧಿ ಹಾಗೂ ನಿಯೋಗ ವಿಧಿಯ ವಿವಿಧ ಪ್ರಭೇದ ಮುಂತಾದ ಸ್ತ್ರೀಯರ ಏಳ್ಗೆಯ ವಿಚಾರಗಳನ್ನು ಗಂಭೀರವಾಗಿ ಚರ್ಚಿಸಲಾಗಿದೆ.
ಅಮಾನುಷವಾದ ಸಹಗಮನ ಪದ್ಧತಿಯು ವೇದವಿರುದ್ಧವೆಂದು ಸಾಧಾರವಾಗಿ ನಿರೂಪಿಸಿರುವ ಲೇಖಕರು, ‘ಒಂದು ವೇಳೆ ಸಹಗಮನ ಆಚರಣೆ ಇರಬೇಕಿದ್ದರೆ ಅದು ಏಕಮುಖವಾದದ್ದಲ್ಲ, ಗಂಡ ಸತ್ತಾಗ ಹೆಂಡತಿ, ಹೆಂಡತಿ ಸತ್ತಾಗ ಗಂಡ ಸಹಗಮನ ಮಾಡಬೇಕೆನ್ನುವುದು ಉಚಿತವಲ್ಲವೇ?’ ಎಂದು ಪ್ರಶ್ನಿಸಿದ್ದಾರೆ. ‘ಅನ್ಯಮಿಚ್ಛಸ್ವ ಸುಭಗೇ ಪತಿಂ ಮತ್–ಸುಭಗೇ ಮದನ್ಯಂ ಪತಿ ಇಚ್ಛಸ್ವ’ ಎನ್ನುವ ಋಗ್ವೇದದ ದಶಮ ಮಂಡಲದ ದಶಮಸೂಕ್ತದ ದಶಮ ಮಂತ್ರವನ್ನು ಉಲ್ಲೇಖಿಸಿ, ವಿವಾಹಿತ ಪತಿಗೆ ಪುಂಸ್ತ್ವವಿಲ್ಲದಿರುವುದರಿಂದಾಗಲಿ ಬೇರೆ ಕಾರಣದಿಂದಾಗಲಿ, ಪ್ರಜೋತ್ಪಾದನ ಕರ್ಮವು ಸಾಧ್ಯವಲ್ಲದಿದ್ದರೆ, ಅಂತಹ ಪತಿಯು ತನ್ನ ಪತ್ನಿಗೆ ದ್ವಿತೀಯ ಪತಿಯಿಂದ ಮಕ್ಕಳನ್ನು ಪಡೆಯುವುದಕ್ಕೆ ಆಜ್ಞೆಯನ್ನು ಕೊಡಬೇಕು ಎನ್ನುವ ಅದರ ಅರ್ಥವನ್ನು ನಿರೂಪಿಸಿರುತ್ತಾರೆ. ಹೀಗಿರುವಾಗ ತನ್ನ ಶವದೊಡನೆಯೇ ಜೀವವಂತಳಾದ ತನ್ನ ಪ್ರಿಯಪತ್ನಿಯನ್ನೂ ಸುಟ್ಟು ಬೂದಿ ಮಾಡಬೇಕೆಂದು ಯಾವ ಆಸ್ತಿಕ ಶಿಖಾಮಣಿ ತಾನೇ ಬಯಸುವನು? ಎಂದು ಪ್ರಶ್ನಿಸುತ್ತಾರೆ. ಹಾಗೆಯೇ ಗಂಡ ಸತ್ತ ಹೆಂಡತಿಗೆ ಕೇಶ ಮುಂಡನ ಕ್ರಿಯೆಯನ್ನೂ ಸಹ ಯಾವ ಶಾಸ್ತ್ರಗಳಲ್ಲಿಯೂ ಹೇಳಿಲ್ಲ, ಇದು ನಂತರದ ಕಾಲಗಳಲ್ಲಿ ಶ್ರೀಮಠಗಳ ಸ್ವಾರ್ಥದ ಕಾರಣಗಳಿಂದಾಗಿ ನಿರೂಪರೂಪವಾಗಿ ಹೊರಟ ಆಜ್ಞೆಗಳ ಫಲವೇ ಹೊರತು ಯಾವ ಭಾರತೀಯ ಧರ್ಮಶಾಸ್ತ್ರ ಗ್ರಂಥಗಳಲ್ಲೂ ಇದಕ್ಕೆ ಆಧಾರವಿಲ್ಲ, ಹಾಗೇನಾದರೂ ಶ್ಲೋಕಗಳಿದ್ದಲ್ಲಿ ಅವು ಪ್ರಕ್ಷೇಪಗಳೇ ಹೊರತು ಮೂಲಶಾಸ್ತ್ರಕೃತವಲ್ಲ ಎಂದೂ ಸ್ಪಷ್ಟಪಡಿಸುತ್ತಾರೆ.
ಲೇಖಕರು ಮಠಾಧಿಪತಿಗಳನ್ನು ಕುರಿತು, ‘‘ಕಳೆದ ಒಂದು ಸಹಸ್ರ ವರುಷಗಳಲ್ಲಿ ಮಠಾಧಿಪತಿಗಳು ಕೆಲವರ ಪ್ರೋತ್ಸಾಹದಿಂದ ನವೀನ ವಿದ್ವಾಂಸರು ರಚಿಸಿದ ವೇದಮಾರ್ಗ ಪ್ರಧ್ವಂಸಕ ಧರ್ಮಶಾಸ್ತ್ರಗಳನ್ನು ಮೂಲೆಗೆ ಬಿಸುಟ ಹೊರತು ದ್ವಿಜಸ್ತ್ರೀಯರಿಗಾಗಿರುವ ಅನ್ಯಾಯ ಪರಂಪರೆಗಳು ಪರಿಹಾರವಾಗಲಾರವು. ವೇದ ಪ್ರೋಕ್ತ ಧರ್ಮಗಳೂ ಉದ್ಧಾರಿತಗಳಾಗವು. ಈ ಸಹಸ್ರ ವರುಷಗಳಲ್ಲಿ ಭರತಖಂಡಕ್ಕೆ ಇವರುಗಳಿಂದ ಆಗಿರುವ ಕೆಡುಕನ್ನು ಅಳೆಯುವುದಕ್ಕೆ ಯಾರಿಂದ ತಾನೇ ಆದೀತು? ಈಗಲಾದರೂ ಕಣ್ಣು ತೆರೆದು ನೋಡುವವರಾದರೆ ಲೋಕಕ್ಕೆ ಕ್ಷೇಮವುಂಟಾದೀತು’’ ಎಂದು ಅತ್ಯಂತ ವಿಷಾದದಿಂದ ಮನವಿ ಮಾಡಿದ್ದಾರೆ.