ಲೂಲು ಟ್ರಾವೆಲ್ಸ್
ಲೇ: ಪ್ರಸಾದ್ ಶೆಣೈ ಕಾರ್ಕಳ
ಪ್ರ: ಬಿಳಿಕಲ್ಲು ಪ್ರಕಾಶನ, ಉಡುಪಿ
ಯುವ ಕಥೆಗಾರ ಪ್ರಸಾದ್ ಶೆಣೈ ಕಾರ್ಕಳ ಅವರ ಚೊಚ್ಚಲ ಕಥಾಸಂಕಲನ ‘ಲೂಲು ಟ್ರಾವೆಲ್ಸ್’. ಇದಕ್ಕೆ ‘Express ಕತೆಗಳು’ ಎಂಬ ಉಪಶೀರ್ಷಿಕೆಯೂ ಇದೆ. ಲೂಲು ಟ್ರಾವೆಲ್ಸ್ ಎನ್ನುವ ಹೆಸರಿನ ಖಾಸಗಿ ಶಟ್ಲ್ ಬಸ್ಸೊಂದು ಕಾರ್ಕಳ ಪ್ರದೇಶದ ಹಳ್ಳಿಗಳಲ್ಲಿ ಸಂಚರಿಸುತ್ತದೆ. ಅದು ಎಕ್ಸ್‌ಪ್ರೆಸ್ ವೇಗದಲ್ಲಿ ಒಮ್ಮೊಮ್ಮೆ ಓಡಿದರೂ ಎಕ್ಸ್‌ಪ್ರೆಸ್ ಬಸ್ಸೇನೂ ಅಲ್ಲ. ಕಾರ್ಕಳದ ಸುತ್ತುಮುತ್ತಲಿನ ಹಳ್ಳಿಗಳ ಈ ಕಥೆಗಳು ಕೂಡಾ ಅದರ ಹಾಗೆ ಶಟ್ಲ್ ಎಕ್ಸ್‌ಪ್ರೆಸ್ ಅನ್ನುವ ಹಾಗೆ ಇವೆ. ಅವು ಸಣ್ಣಸಣ್ಣ ನಿಲ್ದಾಣಗಳ ನಡುವೆ ಧಾವಂತದಲ್ಲಿ ಓಡುತ್ತವೆ.
ಸಣ್ಣ ಸಣ್ಣ ಘಟನೆಗಳನ್ನು ಮತ್ತು ಭಾವನೆಗಳನ್ನು ಲವಲವಿಕೆಯ ತಾಜಾ ಕವಿಸಮಯಗಳುಳ್ಳ ಭಾಷೆಯಲ್ಲಿ ಕಥೆಗಾರ ದಾಖಲು ಮಾಡುತ್ತಾ ಹೋಗುತ್ತಾರೆ. ಕಥೆಗಳ ಅದ್ಭುತವಾದ ಭಾಷೆಯ ಓಘದಲ್ಲಿ ಮುಂದಿನ ನಿಲ್ದಾಣ ಬಂದದ್ದೇ ಗೊತ್ತಾಗದೆ ಪ್ರಯಾಣ ಮುಗಿಯಿತೆ? ಎಂದು ಅಚ್ಚರಿಯಾಗುವಂತೆ ಕಥೆಗಳು ಮುಗಿಯುತ್ತವೆ. ಈ ಕಥೆಗಳ ಹಿಂದೆ ಒಂದು ಪ್ರಾದೇಶಿಕ ತುಡಿತ ಇದೆ. ಇವುಗಳೆಲ್ಲ ಕಾರ್ಕಳ ಸುತ್ತಮುತ್ತಲಿನ ಹಳ್ಳಿಗಳ ಮತ್ತು ಅಲ್ಲಿನ ಸಾಮಾನ್ಯ ನಿವಾಸಿಗಳ ಕಥೆಗಳು. ತುಂಬಾ ಸಾಮಾನ್ಯ ಅನ್ನುವ ಸಂಗತಿಗಳನ್ನು ತುಂಬಾ ವಿಶಿಷ್ಟವಾಗಿ ಗಮನಿಸುವ ಮೂಲಕ ಕಥೆಗಳನ್ನಾಗಿಸುವ ಹಂಬಲ ಹೆಚ್ಚಿನ ಕಥೆಗಳಲ್ಲಿ ಕಾಣಿಸುತ್ತದೆ. ಪ್ರಸಾದ್ ಶೆಣೈ ಅವರು ಸಂಗತಿಗಳನ್ನು ಗಮನಿಸುವ ಮತ್ತು ಸನ್ನಿವೇಶಗಳನ್ನು ಚಿತ್ರಿಸುವ ಶೈಲಿ ಅಬ್ದುಲ್ ರಶೀದ್ ಅವರನ್ನು ನೆನಪಿಸುತ್ತದೆ.
ಅಬ್ದುಲ್ ರಶೀದ್ ಅವರೇ ಈ ಸಂಕಲನಕ್ಕೆ ಒಂದು ಮುನ್ನುಡಿ ಬರೆದಿದ್ದಾರೆ. ರಶೀದ್ ಗುರುತಿಸಿದಂತೆ ‘ಆತ್ರೇಯಿ ಮಾತಾಡಿದಳು’, ‘ಬಿಡ್ಕಿ ಬಜಾರ್’, ‘ಚಂಡೆಕ್ರಾಸಿನ ಮಧ್ಯಾಹ್ನ’ ಮತ್ತು ‘ಚೌತಿ ಚಂದ್ರನೂ ನಕ್ಕುಬಿಟ್ಟ’ ಎಂಬ ಕಥೆಗಳು ಸಂಕಲನದ ಅತ್ಯುತ್ತಮ ರಚನೆಗಳು. ಇವುಗಳಲ್ಲಿ ಕಥೆಗಳಿಗೊಂದು ಸಂವಿಧಾನ ಇದೆ. ಉಳಿದ 13 ಕಥೆಗಳೂ ಇಷ್ಟೇ ಆಕರ್ಷಕವಾಗಿವೆ. ಅವುಗಳಲ್ಲಿ ಕೆಲವು ಕಥೆಗಳಿಗೆ ಸರಳವಾದ ಸಂವಿಧಾನವಿದೆ, ಹಾಗಿಲ್ಲದ ಕಾವ್ಯಮಯ ವಾರ್ತೆಯ ರೂಪದ ಕಥೆಗಳೂ ಇವೆ.
ಉದಾಹರಣೆಗೆ ‘ಲೂಲು ಟ್ರಾವೆಲ್ಸ್’ ಕಥೆಯಲ್ಲಿ ಆ ಹಳ್ಳಿ ಬಸ್ಸಿನ ಡ್ರೈವರ್ ಸುರೇಶನಿಗಾಗಿ ಶಾಂತಾ ಎಂಬ ಹುಡುಗಿ ಕಾದು ಕುಳಿತಿರುತ್ತಿದ್ದುದನ್ನು, ಅವರ ನಡುವೆ ನಿರ್ಮಲವಾದ ಆಕರ್ಷಣೆಯಿದ್ದುದನ್ನು, ಇವತ್ತು ಆ ಡ್ರೈವರನು ಕೊನೆಯ ಬಾರಿಗೆ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಅವರು ಪರಸ್ಪರ ಕಾಣಲಾಗದುದನ್ನು ಮತ್ತಿತರ ಸಂಗತಿಗಳನ್ನು ಹೇಳುತ್ತಾ, ಲೂಲು ಟ್ರಾವೆಲ್ಸ್ ಸುರೇಶನ ಕೊನೆಯ ಡ್ಯೂಟಿಗೆ ಸಂತುಷ್ಟವಾಗಿ ಕತ್ತಲಲ್ಲಿ ಗಾಢ ಆಕಳಿಕೆಯೊಂದನ್ನು ತೆಗೆಯುತ್ತಾ ಬಸ್ ಸ್ಟ್ಯಾಂಡಿನೆಡೆಗೆ ಜಾರಿತು ಎಂದು ಮುಕ್ತಾಯವಾಗುತ್ತದೆ.
ಮೇಲೆ ಹೇಳಿದ ನಾಲ್ಕು ಕಥೆಗಳಲ್ಲಿ ಸಣ್ಣ ಸಣ್ಣ ಸಂಗತಿಗಳ ಭಾವಲೋಕವೇ ಒಂದು ಸಂವಿಧಾನವಾಗಿಬಿಡುತ್ತದೆ. ಉದಾಹರಣೆಗೆ, ‘ಚೌತಿ ಚಂದ್ರನೂ ನಕ್ಕುಬಿಟ್ಟ’ ಕಥೆಯಲ್ಲಿ ಈಗ ಜೀರ್ಣವಾಗಿರುವ ತರವಾಡು ಮನೆಯೊಂದರಲ್ಲಿ ಪೂರ್ವಪದ್ಧತಿಯಂತೆ ಚೌತಿ ಗಣಪತಿಯ ಮಣ್ಣಿನ ವಿಗ್ರಹವನ್ನು ಕೂರಿಸಿ ಪೂಜೆ ಮಾಡಬೇಕಾದ ಅನಿವಾರ್ಯತೆಯನ್ನು ಕುಟುಂಬಿಕರಿಗೆ ಮನದಟ್ಟು ಮಾಡಿದ ಮನೆಯ ಒಡೆಯ ಸಂಜೀವ ಪೈಗಳು, ಅದಕ್ಕೆ ಎಲ್ಲರ ವಂತಿಗೆಯನ್ನು ಸಂಗ್ರಹಿಸಿ ಆಚರಣೆಯನ್ನು ಮಾತ್ರ ಭಕ್ತಿ ಭಾವಗಳಿಲ್ಲದೆ ಯಾಂತ್ರಿಕವಾಗಿ ಮಾಡುತ್ತಾರೆ. ಅವರು ಒಂದು ಕೈಯಲ್ಲಿ ಬೀಡಿ ಸೇದುತ್ತ ಮತ್ತೊಂದು ಕೈಲಿ ಆರತಿ, ಬೆಳ್ಳಿ ದೀಪಗಳನ್ನೆಲ್ಲಾ ಹಿಡಿದುಕೊಂಡು ಹೋಗುತ್ತಿದ್ದರು. ಅವರ ಮಗ ಗಣಪತಿಯ ವಿಗ್ರಹವನ್ನು ಅಕ್ಕಿಮೂಟೆಯಂತೆ ಹೊತ್ತು ತರುತ್ತಾನೆ.
ಇಂತಹ ಅರ್ಥಹೀನ ಚಟುವಟಿಕೆಗಳನ್ನು ಜನ್ನ ಎಂಬ ಸಣ್ಣ ಬಾಲಕ ನೋಡುತ್ತಾ, ಚೌತಿ ಆಚರಣೆಯಲ್ಲಿ ಸರ್ವಾಂಗೀಣ ಸಂಭ್ರಮವನ್ನು ಹುಡುಕುವ ಈ ಕಥೆಯಲ್ಲಿ ಎರಡು ಮೌಲ್ಯಗಳ ತಾಕಲಾಟವೇ ಸಂವಿಧಾನವಾಗಿದೆ. ಕಥಾನಕವಿರಲಿ, ಸುಮ್ಮನೆ ಗಮನಿಸುವ ಭಾವಪ್ರಧಾನ ನಿರೂಪಣೆಯಿರಲಿ, ಪ್ರಸಾದ್ ಶೆಣೈ ಅವರು ಅಷ್ಟೇ ತನ್ಮಯತೆಯಿಂದ ಇದೇ ಈಗ ಜಗತ್ತಿನ ಅತ್ಯಂತ ಮಹತ್ವದ ಸಂಗತಿ ಎನ್ನುವಂತೆ ಬರೆಯುತ್ತಾರೆ. ‘ಭವಾನಿ ಪೋಡಿ ಸ್ಟಾಲ್’, ‘ಗಂಪಿಯ ಅಂಬೊಡೆ ಸ್ಟಾಲ್’ ಕಥೆಗಳಲ್ಲಿ ಬಡವರ, ಶ್ರಮಜೀವಿಗಳ, ಬಡಹುಡುಗರ ಬದುಕಿನ ಚಿತ್ರಗಳು ಜೀವಂತವಾಗಿ ಮೂಡಿಬಂದಿವೆ.
ಕೆಲವೊಮ್ಮೆ ಈ ಕಥೆಗಳ ಜಗತ್ತಿನಲ್ಲಿ ಸಂಭವಿಸುವ ಸಾವುಗಳಿಗೆ, ನೋವುಗಳಿಗೆ ಕಾರಣವೇ ಇರುವುದಿಲ್ಲ. ಪ್ರಸಾದ್ ಅವರ ಯುವ ಮನಸ್ಸು ಬದುಕಿನ ಗಹನತೆಯನ್ನು ಹಾಗೂ ನಿಗೂಢತೆಯನ್ನು ಒಟ್ಟಿಗೆ ಹಿಡಿಯಲು ಪ್ರಯತ್ನಿಸುವಾಗ ಇಂತಹ ರಹಸ್ಯ ಬಿಟ್ಟುಕೊಡದ ಸನ್ನಿವೇಶಗಳು ಸೃಷ್ಟಿಯಾಗಿವೆ. ಮುಂದೆ ಈ ಕಥೆಗಳೂ ಬೆಳೆಯುತ್ತವೆ, ಕಥೆಗಾರನೂ ಬೆಳೆಯುತ್ತಾನೆ ಎಂಬ ನಂಬಿಕೆಯನ್ನು ‘ಲೂಲು ಟ್ರಾವೆಲ್ಸ್’ ಎಂಬ ಲವಲವಿಕೆಯ ಕಥೆಗಳ ಸಂಕಲನ ಮೂಡಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.