ADVERTISEMENT

ಶಾಂತಿರಸ್ತೆ: ಕವಲಿನಲ್ಲಿ ನಿಂತು...

ವಿಮರ್ಶೆ

ಎಚ್.ಎ.ಅನಿಲ್ ಕುಮಾರ್
Published 24 ಅಕ್ಟೋಬರ್ 2015, 19:40 IST
Last Updated 24 ಅಕ್ಟೋಬರ್ 2015, 19:40 IST

ಸಮಕಾಲೀನ ದೃಶ್ಯಕಲೆಗೆ ಅವಕಾಶ ಮಾಡಿಕೊಡುತ್ತಿರುವ ಬೆಂಗಳೂರಿನ ದೃಶ್ಯಸಂಸ್ಥೆಯೊಂದರ ಹತ್ತು ವರ್ಷದ ಸಾಧನೆಯನ್ನು ದಾಖಲಿಸುವ ಪುಸ್ತಕ ‘1 ಶಾಂತಿರೋಡ್, ಬೆಂಗಳೂರು’. ಹೀಗೆಂದು ಹೇಳಿದರೆ ಏನನ್ನೂ ಹೇಳಿದಂತಾಗದು. ನಮ್ಮ ನಡುವೆಯೇ ಇದ್ದೂ ಸಾಂಸ್ಕೃತಿಕವಾಗಿ ಅಪರಿಚಿತವಾಗಿಯೇ ಉಳಿದೂ, ಅಳಿಯದಿರುವ ದೃಶ್ಯಕಲಾ ರಂಗ ಒಂದಿದೆ.

ಆ ರಂಗದೊಳಗೂ ರೂಢಿಗತ ಕಲಾಕೃತಿ-ಗ್ಯಾಲರಿ- ಸಂಗ್ರಹಾಲಯಗಳ ಅವಘಡಗಳನ್ನು ಒಳಗಿನಿಂದಲೇ ಪ್ರತಿರೋಧಿಸುವ ಹಳೆಯ ಸಂಪ್ರದಾಯವನ್ನು ‘ಅವನ್‌ಗಾರ್ಡ್’ ಎನ್ನುತ್ತೇವೆ. ಇಂತಹ ಆದರ್ಶವನ್ನು ಹೊಂದಿದ್ದು, ಸಾಧಾರಣವಾಗಿ ವಿಕ್ಷಿಪ್ತವೆನಿಸುವ ಮನೆ-ಗ್ಯಾಲರಿ-ಸಂಗ್ರಹಾಲಯ-ಆರ್ಟಿಸ್ಟ್ ರೆಸಿಡೆನ್ಸಿಯ ನೆನಪಿಸುವ ಮನೆ ಬೆಂಗಳೂರಿನ ‘1 ಶಾಂತಿರಸ್ತೆ’. ದಶಕವೊಂದನ್ನು ಪೂರೈಸಿದ ಸಂದರ್ಭದಲ್ಲಿ ಆ ಮನೆಗಿಂತಲೂ ಅಂತಹ ಮನೆಯ ಬಗ್ಗೆ ಧ್ಯಾನಸ್ಥವಾಗಿ ಬರೆಯಲಾಗಿರುವ, ಬಹುಪಾಲು ಮಹಿಳಾ ಬರಹಗಾರ್ತಿಯರ ಲೇಖನಗಳನ್ನು ಒಳಗೊಂಡ ವಿಶಿಷ್ಟ ಪುಸ್ತಕ ‘1 ಶಾಂತಿರಸ್ತೆ’.

ಇದೊಂದು ಕಾಫಿ ಟೇಬಲ್ ಪುಸ್ತಕವೋ ಕ್ಯಾಟಲಾಗೋ ಅಥವ ಶೈಕ್ಷಣಿಕ ಶಿಸ್ತಿನ ದೃಶ್ಯಕಲೆಯ ಅಧ್ಯಯನ ಗ್ರಂಥವೋ ಎಂಬ ಅನಿರ್ದಿಷ್ಟತೆಯು ನಮಗೆ ಭಾಸವಾಗಲು ಕಾರಣ ಈ ಪುಸ್ತಕವಲ್ಲ. ಬದಲಿಗೆ ‘1 ಶಾಂತಿರೋಡ್’ ಪರ್ಯಾಯ ಕಲಾಗ್ಯಾಲರಿಯ ದೈನಂದಿನ ಚಟುವಟಿಕೆಯೇ ಕಳೆದ ಒಂದೂವರೆ ದಶಕದಿಂದ ಇಂತಹ ಅತಂತ್ರತೆಯನ್ನು ಕಾಪಾಡಿಕೊಂಡು ಬಂದಿದೆ. ದಶಕ ಪೂರೈಸಿದ ಕಲಾಮನೆಯ ಬಗ್ಗೆ ಈ ಪುಸ್ತಕವು ರೂಪುಗೊಳ್ಳಲೇ ಅರ್ಧ ದಶಕ ಬೇಕಾದದ್ದೊಂದು ಸಾಂಸ್ಕೃತಿಕ ವಿಪರ್ಯಾಸ. ಇದೇ ಈ ಪುಸ್ತಕದ, ಅದರ ವಸ್ತುವಿಷಯದ ವಿಶೇಷ ಕೂಡ.

ಈ ಪುಸ್ತಕದ ಲೇಖಕರಲ್ಲಿ ಒಬ್ಬರಾದ ಫ್ಯಾಂಟಮ್ ಲೇಡಿ (ಖ್ಯಾತ ಕಲಾವಿದೆ ಎನ್. ಪುಷ್ಪಮಾಲ) ಒಂದೆಡೆ ಹೀಗೆ ಬರೆಯುತ್ತಾರೆ, ‘‘ಪೈಂಟಿಂಗ್ ಅಥವ ಶಿಲ್ಪ ಅಲ್ಲದಿರುವುದೆಲ್ಲ ಇನ್‌ಸ್ಟಲೇಷನ್ ಎಂಬ ಅರ್ಥೈಸುವಿಕೆಯು ದೃಶ್ಯಾನಕ್ಷರತೆಯ ಸಾಮರ್ಥ್ಯ ಹೊಂದಿರುವ ಕನ್ನಡದ ಬರಹಗಾರರು ಹಾಗೂ ಬುದ್ಧಿವಂತ ವರ್ಗದ ಪದಕೋಶವನ್ನೂ ಪ್ರವೇಶಿಸಿಬಿಟ್ಟಿದೆ... ನೀವು ಕಲಾವಿದರುಗಳು ಇನ್ನೂ ಇನ್‌ಸ್ಟಲೇಷನ್ ಮಾಡುತ್ತಿದ್ದೀರೋ? ಎಂದು ರಂಗಕರ್ಮಿ ಪ್ರಸನ್ನ ಒಮ್ಮೆ ವ್ಯಂಗ್ಯವಾಡಿದ್ದರು. ಕವಿಗಳು ಇನ್ನೂ ಖಾಲಿ ಗದ್ಯಗಳನ್ನು ರಚಿಸುತ್ತಿದ್ದಾರೋ ಎಂಬಂತಿದೆ ಈ ಪ್ರಶ್ನೆ...’’ (‘ಇತರೆ ಅವಕಾಶಗಳು, ಇನ್ನಿತರೆ ಮುಖಗಳು’).

ಈ ಪುಸ್ತಕವು ಶಾಂತಿರಸ್ತೆಯು ಪರ್ಯಾಯ ಗ್ಯಾಲರಿಯಾದ ಬಗೆ, ರೂಢಿಗತರಲ್ಲದ ಕಲಾವಿದರಲ್ಲಿ ಮೇಲುಕೀಳೆಂಬ ವ್ಯತ್ಯಾಸವಿಲ್ಲದಂತೆ ಅವಕಾಶ ಮಾಡಿಕೊಟ್ಟ ಬಗೆ, ಹಲವು ದೇಶಖಂಡಗಳಿಂದ ಬಂದ ಕಲಾವಿದರುಗಳು ಇಲ್ಲಿದ್ದು, ಕೃತಿರಚಿಸಿ, ಇಲ್ಲಿಯೇ ಪ್ರದರ್ಶಿಸಿದ ಬಗೆ; ಜೊತೆಗೆ ಮನೆ-ಗ್ಯಾಲರಿ-ಸಂವಹನ ಸ್ಥಳ ಇತ್ಯಾದಿಯಾಗಿ ನಿರಂತರ ರೂಪಾಂತರಗೊಳ್ಳುವ ಸ್ಥಳವಾಗಿ, ಶಾಂತಿನಗರದ ಈ ಮನೆಯ ಇತಿಹಾಸವನ್ನು ಹತ್ತು ಮಂದಿ ಬರಹಗಾರರು ಕಟ್ಟಿಕೊಡುವ ಸಾಹಸಮಯ, ಕಲಾ-ಪತ್ರಿಕೋದ್ಯಮದ ಧ್ವನಿಯ ಯತ್ನವಾಗಿದೆ ಈ ಪುಸ್ತಕ.      

‘‘ಹಲವು ಕಥನಗಳನ್ನು ಒಂದೇ ಚೌಕಟ್ಟಿನಲ್ಲಿರಿಸುವ ಪ್ರಯತ್ನ ಈ ಶಾಂತಿರಸ್ತೆ’’ ಎಂದಿದ್ದರು ಬರೋಡದ ಖ್ಯಾತ ಕಲಾವಿದ-ವಿಮರ್ಶಕ ಗುಲಾಂ ಮೊಹಮ್ಮದ್ ಶೇಖ್. ಶಾಂತಿರಸ್ತೆಯ ನಿಯಮಾತೀತ ಕಲಾಚಟುವಟಿಕೆಯ ಅಭ್ಯಾಸವು ಈ ಪುಸ್ತಕಕ್ಕೂ ಹರಡಿದಂತಿದೆ. ಸುಮಾರು ನಾಲ್ಕು ವರ್ಷಗಳಿಂದ ತಯಾರಾಗುತ್ತಿದ್ದ ಈ ಪುಸ್ತಕವು ಹಲವು ವಿನ್ಯಾಸಕರ ಕೈ ಬದಲಾಗಿದೆ. ಕೊನೆಗೂ, ವ್ಯಂಗ್ಯೋಕ್ತಿಯೆಂಬಂತೆ, ಈ ಪುಸ್ತಕದೊಳಗೇ ಇರುವ ಸ್ಪರ್ಧೆಯು ಬರವಣಿಗೆ ಹಾಗೂ ವಿನ್ಯಾಸದ ನಡುವೆಯೇ!

‘1 ಶಾಂತಿರಸ್ತೆ’ಯನ್ನು ಎಂದೂ ನೋಡದವರಿಗೆ ಈ ಪುಸ್ತಕವು ಆ ಚಿತ್ರಮನೆಯನ್ನು ಕಟ್ಟಿಕೊಡುವ ಪರಿಕಲ್ಪನೆಯೊಂದಿದೆ. ಮತ್ತದು ಶಾಂತಿರಸ್ತೆಯನ್ನು ಗೋಡೆಗಳಿಲ್ಲದ ಚಿತ್ರಮನೆ ಎಂತಲೇ ನಿರೂಪಿಸಿಬಿಟ್ಟಿದೆ. ಕಲಾವಿದರ ಹೇಳಿಕೆ/ಬರಹಗಳನ್ನು ಅವರದೇ ಕೃತಿಗಳ ಮಾನದಂಡವನ್ನು ನಿರ್ಧರಿಸಲು ಎಂದೂ ಬಳಸಬಾರದು ಎಂಬ ನಂಬಿಕೆ ಈ ಪುಸ್ತಕಕ್ಕೂ ಅನ್ವಯಿಸುತ್ತದೆ.

ಸುಮಾರು 225 ಪುಟಗಳ ಈ ಪುಸ್ತಕದ ತುಂಬೆಲ್ಲ ನೂರಾರು ಕಪ್ಪುಬಿಳುಪು ಹಾಗೂ ವರ್ಣಚಿತ್ರಗಳಿದ್ದು, ಹಲವು ದೇಶಗಳಿಂದ ಬಂದ ಕಲಾವಿದರುಗಳ, ಸ್ಥಳೀಯ ಯುವಕಲಾವಿದರ ಕೃತಿಗಳು ಅಚ್ಚಾಗಿವೆ. ಮೊದಲ ನೂರು ಪುಟಗಳ ಬರವಣಿಗೆಗೂ, ಎರಡನೆಯ ಚಿತ್ರಿತ ಭಾಗಕ್ಕೂ ಜುಗಲ್‌ಬಂದಿ ಏರ್ಪಟ್ಟಿದೆ.

ಫ್ಯಾಂಟಮ್‌ಲೇಡಿಯು ಬೆಂಗಳೂರಿನಲ್ಲಿ ಎರಡು ದಶಕಗಳಿಂದ ಉಂಟಾದ ಇಂತಹ ಪರ್ಯಾಯ ಕಲಾಪ್ರಯೋಗಗಳ ಬಗ್ಗೆ ವೈಯಕ್ತಿಕ ನೆಲೆಯಿಂದ ದಾಖಲಿಸುತ್ತಲೇ, ಕಲಾವಿದೆಯಾಗಿ ಸ್ಪಷ್ಟ ನಿಲುವುಗಳನ್ನೂ ವ್ಯಕ್ತಿಪಡಿಸುತ್ತ ಹೋಗುತ್ತಾರೆ. ಬೆಂಗಳೂರು, ಮೈಸೂರುಗಳಲ್ಲಿ ಪರ್ಯಾಯ ದೃಶ್ಯಕಲಾ ಚಳವಳಿಗಳನ್ನು ರೂಪಿಸುವಲ್ಲಿ ಪಾತ್ರವಹಿಸಿದವರಲ್ಲಿ ಪ್ರಮುಖರಾದ ಸುರೇಶ್‌ಕುಮಾರ್, ಸುರೇಖ, ಹರ್ಷ ಮುಂತಾದವರ ಕೊಡುಗೆಗಳನ್ನು ಗುರ್ತಿಸುತ್ತಲೇ, ತಮ್ಮ ಪ್ರಯೋಗಗಳ ಬಗ್ಗೆಯೂ ಬರೆದಿದ್ದಾರೆ– ಸ್ವತಃ ಇಂತಹ ಸಮಕಾಲೀನ ಕಲಾಸೃಷ್ಟಿಯಲ್ಲಿ ನಿರತರಾದ ಪುಷ್ಪಮಾಲ, ಆಯೆಷಾ ಅಬ್ರಹಾಂ ಮುಂತಾದವರು.

ಇವರುಗಳಿಗೆ ಹೋಲಿಸಿದರೆ, ಶಾಂತಿರಸ್ತೆಯ ಸ್ಥಾಪಕ-ಸಂಚಾಲಕರಾಗಿ ಸ್ವತಃ ಕಲಾ ಇತಿಹಾಸಕಾರರಾಗಿರುವ ಸುರೇಶ್ ಜಯರಾಮ್ ಬರೆದಿರುವ ಲೇಖನ, ಅವರ ವ್ಯಕ್ತಿತ್ವದಂತೆಯೇ ನಿರ್ಭಾವುಕವೆನಿಸಿಬಿಡುತ್ತದೆ.

‘1 ಶಾಂತಿರಸ್ತೆ’ಯನ್ನು ಸ್ವಂತದ ಸಾಧನೆಯೆಂದು ಅವರು ಭಾವಿಸುವುದರಿಂದಲೋ ಏನೋ, ಈ ನಿರ್ಭಾವುಕತೆಗೊಂದು ತಾರ್ಕಿಕ ಸಮರ್ಥನೆಯೂ ದೊರಕಿಬಿಡುತ್ತದೆ. ಈ ಹಿನ್ನೆಲೆಯಲ್ಲಿ ಒಂದು ವಿಶೇಷವನ್ನು ಗಮನಿಸಿ: ‘‘ಚಿತ್ರಕಲಾ ಪರಿಷತ್ತನ್ನು ಒಳಗೊಂಡಂತೆ ರೂಢಿಗತ ಕಲಾಶಾಲೆಗಳ, ಗ್ಯಾಲರಿಗಳ ಬಗ್ಗೆ ಅಸಾಧಾರಣ ಅಸಮಾಧಾನದ ಫಲವಾಗಿ ಹುಟ್ಟಿಕೊಂಡ ಸಂಸ್ಥೆಯಿದು (ಮತ್ತು ಇಂತಹದ್ದೇ ಆದ, ಇದಕ್ಕೂ ಮುಂಚೆ ಅಸ್ತಿತ್ವದಲ್ಲಿದ್ದ ‘ಬಾರ್ ಒನ್’, ಸಮೂಹ, ಈಗಿನ್ನೂ ಇರುವ ಜಾಗ ಮತ್ತು ಮಾರ ಸಂಸ್ಥೆಗಳು)’’ ಎಂಬ ಒಂದು ಬಲವಾದ ನಂಬಿಕೆಯಲ್ಲಿ, ಔಪಚಾರಿಕವಾದ ವಿದ್ಯಾರ್ಥಿ ಸಮೂಹವನ್ನು ಅಸಲಿ ಸೃಜನಶೀಲತೆಯ ಅವಕಾಶದಿಂದ ವಂಚಿತರು ಎಂಬಂತೆ ಬಿಂಬಿಸುತ್ತ ಬರಲಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಪ್ರತಿ ಕಲಾಸಂಸ್ಥೆಯ ಯಶಸ್ಸಿಗೂ ಒಬ್ಬೊಬ್ಬ ವ್ಯಕ್ತಿಗಳನ್ನು ಹೊಣೆಮಾಡುವುದರಿಂದಾಗಿ ಹೀಗಾಯಿತು ಎಂಬ ಅರ್ಥಿಸುವಿಕೆಯೇ ಇದಕ್ಕೆ ಕಾರಣವಾಗಿದ್ದು, ಸುರೇಶರ ಸಂಕೋಚದ ಬರವಣಿಗೆಗೆ ಇದೇ ಮುಖ್ಯ ಕಾರಣವಿರಬಹುದು.

ಶಾಂತಿರಸ್ತೆಯ ಸಾಫಲ್ಯತೆಗೆ ತನ್ನೊಬ್ಬನದ್ದೇ ಕೊಡುಗೆ ಇರಲಾರದೇನೋ ಎಂಬ ವಿನಮ್ರತೆಯ ಅಭಿವ್ಯಕ್ತಿಯ ಸಲುವಾಗಿ ಅವರ ಲೇಖನ ಸೊರಗಿದೆ. ಜನಜನಿತ ಕನ್ನಡದ ವಿಮರ್ಶಾಸಾಹಿತ್ಯಕ್ಕೆ ವ್ಯತಿರಿಕ್ತವಾಗಿ ವಿಮರ್ಶೆಯ ವಿನಯ ಇಲ್ಲಿ ನೇತ್ಯಾತ್ಮಕ ಪಾತ್ರವಹಿಸಿಬಿಟ್ಟಿದೆ! 

ಕಲಾವಿದೆ ಆಯೆಶಾ ಅಬ್ರಹಮರ ಬರವಣಿಗೆಯು ಶಾಂತಿರಸ್ತೆಯಂತಹ ಯುರೋಪು-ಅಮೆರಿಕದ ತಾಣಗಳ ಬಗ್ಗೆ ಕುರಿತದ್ದಾಗಿದೆ. ಎಲ್ಲರ ಬರವಣಿಗೆಯಲ್ಲೂ (ಈ ಮನೆಯ ಪ್ರಶಸ್ತಿ ವಿಜೇತೆ ವಿನ್ಯಾಸಕಿ ಮೀತಾ ಜೈನ್, ಹಳೆಯ ಸಹವರ್ತಿ ಕಲ್ಪನಾ ಪ್ರಕಾಶ್, ಅಚಲಾ ಪ್ರಬಲ ಮುಂತಾದವರ ಲೇಖನಗಳಲ್ಲಿ) ಒಂದು ಶೋಧ ಗುಣವಿದೆ.

‘1 ಶಾಂತಿರಸ್ತೆ’ ಎಂದರೆ ಏನು? ಆರ್ಥಿಕ ಹಾಗೂ ಉಳಿವಿನ ದೃಷ್ಟಿಯಿಂದ ಅದರ ಭವಿಷ್ಯವೇನು? ಎಂಬ ಪ್ರಶ್ನೆ ಕೇಳುತ್ತಲೇ, ದೃಶ್ಯಕಲೆಯ ಪರ್ಯಾಯ ಸಂಸ್ಥೆಯಿದು ಎಂಬ ಒಮ್ಮತದ ಧ್ವನಿಯು ಅವಸರದಲ್ಲಿ ಅದಕ್ಕೊಂದು ಐತಿಹಾಸಿಕ ಸಾರ್ಥಕ್ಯವನ್ನು ದೊರಕಿಸಿಕೊಡುವ ಸಹಾನುಭೂತಿಯನ್ನು ವ್ಯಕ್ತಪಡಿಸಿಬಿಡುತ್ತವೆ. ದೆಹಲಿಯ ಶುಕ್ಲಾ ಸಾವಂತ್ ಅವರು ಕರ್ನಾಟಕದ ಕಲಾಶಾಲೆಗಳನ್ನು ಪರ್ಯಾಯ ಕಲಾರೆಸಿಡೆಸಿನ್ಸಿ ಮನೆಗಳ ಪೂರ್ವಸೂರಿಗಳೆಂದು ನಿರೂಪಿಸುವ ತಾಳ್ಮೆಯ ಲೇಖನವೊಂದರ ಹರಿವು ವಿಸ್ತಾರವನ್ನು ಈ ಪುಸ್ತಕದ ಎಲ್ಲ ಲೇಖನಗಳೂ– ಪುಷ್ಪಮಾಲರ ಲೇಖನವನ್ನು ಹೊರತುಪಡಿಸಿ– ನಿರಾಕರಿಸಿಬಿಡುತ್ತವೆ.

ಶಾಂತಿರಸ್ತೆಯ ಬಗ್ಗೆ ಇರುವ ಒಂದು ಹೊಳಹು ಏನೆಂದರೆ, ಆ ಕಲಾಮನೆಯು ಅನಿಯಮಿತವಾದ ಗುಣಲಕ್ಷಣ ಹೊಂದಿರುವ, ಎಲ್ಲೆಲ್ಲಿಂದಲ್ಲೋ ದೃಶ್ಯಕಲೆಯ ಪ್ರಮುಖರು ಬಂದುಹೋಗುತ್ತಿರುವ ತಾತ್ಕಾಲಿಕ ತಂಗುದಾಣವೆಂದು. ಇದರ ಭವಿಷ್ಯ (ಪುಸ್ತಕದ್ದೂ ಸಹ) ಉದ್ದೇಶಪೂರ್ವಕವಾಗಿ ಅಯೋಮಯವಾದುದು. ಆದರೂ ಇಷ್ಟು ದಿನ, ನೂರಾರು ಪ್ರದರ್ಶನಗಳು, ಡಜನ್‌ಗಟ್ಟಲೆ ಗಂಭೀರ ಕಮ್ಮಟಗಳು ಇಲ್ಲಿ ನಡೆದಿವೆ.

ಅಂತರರಾಷ್ಟ್ರೀಯ ಖ್ಯಾತಿಯ, ಜಗತ್ತಿನ ಅತ್ಯುತ್ತಮ ಕಲಾಪ್ರದರ್ಶನವಾದ ‘ಡಾಕ್ಯುಮೆಂಟ’ದ ಕ್ಯುರೇಟರ್‌ಗಳೂ ಬಂದು ಹೋದ ಈ ಜಾಗದ ನಿರಂತರ ಅಸಹಜತೆಯ ಗುಟ್ಟನ್ನು ಈ ಲೇಖನಗಳು ಹೆಚ್ಚು ಹೆಚ್ಚು ನಿಗೂಢಗೊಳಿಸಿ ಬಿಡುತ್ತವೆಯೇನೋ ಎನ್ನಿಸದಿರದು. ‘ಶಾಂತಿರಸ್ತೆಗೆ ಬರಲು ಮೈಲುಗಲ್ಲಿನ ಅವಶ್ಯಕತೆ ಇಲ್ಲ, ಶಾಂತಿರಸ್ತೆಯೇ ಒಂದು ಮೈಲುಗಲ್ಲು’ ಎಂದು ಸುರೇಶ್ ಯಾರಿಗೋ ಹೇಳಿದ್ದರು! ಇದು ಅವರ ತುಮುಲದ ದಾಖಲೆ, ಹಾಗೂ ಈ ಪುಸ್ತಕದ ಸಾರರೂಪ. ಗೋಡೆಗಳಿಲ್ಲದ ಮನೆಯಿದು, ಸುರೇಶ್‌ರದ್ದೇ ಆದ ಸ್ವಂತ ಒಂದು ಕೋಣೆಯೆಂಬುದು ಅದರಲ್ಲಿ ಇತ್ತೀಚಿನವರೆಗೂ ಇರಲಿಲ್ಲ ಸಹ. (ಎಚ್. ನರಸಿಂಹಯ್ಯನವರ ನೆನಪಾಗುತ್ತದೆ.)

ನಮ್ಮಗಳ ವಿದ್ಯಾರ್ಥಿ ದೆಸೆಯಿಂದಲೂ, ಈ ಮನೆ ಶಾಂತಿರಸ್ತೆಯಾಗುವ ಮುಂಚಿನಿಂದಲೂ (1980ರ ದಶಕದಿಂದ), ಇದರಲ್ಲಿ ಸುರೇಶ್‌ ಅವರ ತಾಯಿ ಲಕ್ಷ್ಮಿದೇವಿಯವರ ಪಾತ್ರವು ಅಪಾರವಾದುದು. ವೈಯಕ್ತಿಕ ಸಾಧನೆ ಹಾಗೂ ಸಾರ್ವತ್ರಿಕ ಕೊಡುಗೆಯ ನಡುವೆ ತುಯ್ದಾಡುವ ಮನೆಯಾಗಿ ಹಾಗೂ ಪುಸ್ತಕವಾಗಿ.

ಒಂದು ದಾಖಲಾತಿ ಪುಸ್ತಕ ಮಾಡಲು ಹೊರಟು ಕಾಲಾಂತರದಲ್ಲಿ ಸ್ವಯಂ-ಮೆಚ್ಚುಗೆಯ ಸಂಕೋಚದಿಂದ ಹಲವು ತಿರುವುದಗಳನ್ನು ನಾಲ್ಕಾರು ವರ್ಷಗಳ ಕಾಲಘಟ್ಟದಲ್ಲಿ ಪಡೆದುಕೊಂಡ ಈ ಪುಸ್ತಕವನ್ನು ದೃಶ್ಯಶೈಕ್ಷಣಿಕ ತಜ್ಞರಿಂದ ಬರೆಸಲಾಗಿದ್ದರೂ, ಅವರ ದಿನಚರಿಗಳಂತೆ ಅಹ್ಲಾದ ನೀಡುವ ಈ ಲೇಖನಗಳು ಮುದ್ರಣಕ್ಕೆ ಹೋಗುವ ಕಾಲಕ್ಕೆ ತಿದ್ದುಕೊಟ್ಟಿದ್ದ ಪಕ್ಷದಲ್ಲಿ ಹೆಚ್ಚು ಸಂಗತಿಗಳು ಸೇರಿಕೊಳ್ಳುತ್ತಿದ್ದವೆಂಬುದೇನೋ ನಿಜ.

ಘಟನೆಗಳು ಪ್ರಸ್ತುತ ಚಾಲನೆಯಲ್ಲಿರುವಾಗಲೇ ಅದನ್ನು ದಾಖಲಿಸುವ ಕ್ರಮವು ಇತಿಹಾಸವಾಗಬಲ್ಲದೆ ಎಂದು ಕೇಳುತ್ತದೆ ಈ ಪುಸ್ತಕ. ಜೊತೆಗೆ, ಒಂದು ಸಮ್ಯಕ್ ದೃಷ್ಟಿಕೋನದಿಂದ ನೋಡಿದಾಗ ‘1 ಶಾಂತಿರಸ್ತೆ’ ಎಂಬ ಹೆಸರಿನ ಪುಸ್ತಕ ಹಾಗೂ ಅದು ಬೊಟ್ಟು ಮಾಡುತ್ತಿರುವ ಅದೇ ಹೆಸರಿನ ಜಾಗಗಳಲ್ಲಿ ಯಾವುದು ಗುಣಮಟ್ಟದಲ್ಲಿ ಹೆಚ್ಚು ಎಂಬ ಪ್ರಶ್ನೆಯು ಕರ್ನಾಟಕದ ದೃಶ್ಯಕಲಾ ಇತಿಹಾಸದಲ್ಲಿ ತೀರ ಅಪರೂಪಕ್ಕೆ ಮೌಲಿಕ ಪ್ರಶ್ನೆಯಾಗಿ ಉಳಿದುಕೊಳ್ಳಲಿದೆ.

ಒಟ್ಟಿನಲ್ಲಿ, ಶಾಂತಿರಸ್ತೆ ಎಂಬ ಪುಸ್ತಕವು ಅದೇ ಹೆಸರಿನ ಮನೆಯ ಬಗ್ಗೆಯಾಗಿರದೆ, ಒಂದು ಪ್ರಾಯೋಗಿಕ ಕಲಾಮನೆಯನ್ನು ಮುದ್ರಿತ ಪಠ್ಯವನ್ನಾಗಿ ಹೇಗಾದರೂ ಮಾರ್ಪಡಿಸಿಬಿಡಲು ಸಾಧ್ಯವಾದಲ್ಲಿ, ಆ ಸಾಧ್ಯತೆಯಲ್ಲಿ ಆ ಮನೆಗೆ ನೆರಳನ್ನು ಒದಗಿಸುವ ಬಾದಾಮಿ ಮರ ಹಾಗೂ ಮೇಲ್ಛಾವಣಿಯನ್ನು ತೆಗೆದುಹಾಕಿಬಿಟ್ಟಲ್ಲಿ ಹೇಗಿರುತ್ತದೋ ಹಾಗೆ ಭಾಸವಾಗುತ್ತದೆ. ದೃಶ್ಯಕಲೆಯ ಬಗ್ಗೆ ಜನಸಾಮಾನ್ಯರಿಗೆ ಮಾತ್ರ ನೆಚ್ಚುಗೆಯಾಗುವ ಬಣ್ಣಬಣ್ಣದ ತೆಳು ಸತ್ವದ ಪುಸ್ತಕಗಳನ್ನೇ ಉಣಬಡಿಸಲಾಗುತ್ತಿರುವ ಈ ಕಾಲದಲ್ಲಿ, ಕರ್ನಾಟಕದ ಕಲಾಚಟುವಟಿಯ ಅತ್ಯಂತ ತುಮುಲಯುಕ್ತ ಮನೆಯೊಂದರ ಬಗ್ಗೆ ತುಮುಲವನ್ನಾದರೂ ಗಂಭೀರವಾಗಿ ಹಂಚಿಕೊಳ್ಳುವುದು ಒಂದು ಸಾಹಸಮಯ ಯತ್ನವೇ ಹೌದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT