ಒಂದೊಮ್ಮೆ ಕನ್ನಡದ ಪ್ರಜ್ಞೆಯಲ್ಲಿ ಅರಿವನ್ನು ವ್ಯಕ್ತಪಡಿಸುವ ಕ್ರಿಯೆಯು ಸಂಕೀರ್ಣ ಆಗತೊಡಗಿದ್ದ ಕಾಲಕ್ಕೆ ಹುಟ್ಟಿಕೊಂಡ ಸಮಾಜೋ–ರಾಜಕೀಯ ಪರಿಹಾರವೇ ವಚನ ಸಾಹಿತ್ಯ. ಉತ್ತಮ ಪ್ರಭುತ್ವವನ್ನು ಲೊಳಲೊಟ್ಟೆ ಎಂದೂ ನಿರೂಪಿಸಿದ ಚಳವಳಿಯದು.
ಭೌತಿಕ ಇತಿಮಿತಿಗಳಿಗೆ ಆದಿಭೌತಿಕ ಅರ್ಥಾನುಭವಗಳನ್ನು ಸಹಜವಾಗಿ ಅಂಟಿಸುವ ಮೂಲಕ ಜೀವನವನ್ನು ಚೇತೋಹಾರಿಗೊಳಿಸುವ ಶಕ್ತಿ ಈ ಸಾಹಿತ್ಯದೊಳಗೆ ಅಡಕವಾಗಿತ್ತು, ಅಡಕವಾಗಿದೆ. ಸರಳವಲ್ಲದಿದ್ದರೂ ಸಹಜವೆನಿಸುವಂತೆ, ಎಲ್ಲರಿಗೂ ಅರ್ಥವಾಗಬಲ್ಲದು ಎಂಬ ಅಗಾಧವಾದ ನಂಬಿಕೆಯನ್ನು ಈ ಸಾಹಿತ್ಯಪ್ರಕಾರದ ಮುಂದಾಳುಗಳು ಪ್ರತಿ ಪಾದಿಸು ತ್ತಾರೆ. ಹಲವು ಶತಮಾನಗಳ ಕಾಲ ವಾಚ್ಯ ಸಂಪ್ರದಾಯದ ಭಾಗವೂ ಆಗಿರಬಹುದಾಗಿದ್ದ ಈ ಬರವಣಿಗೆಯ ಪ್ರಕಾರವು, ಮುದ್ರಣ ತಂತ್ರಜ್ಞಾನದ ಆಗಮನದ ನಂತರ ವಾಚ್ಯಾಭಿ ವ್ಯಕ್ತಿಯ ಸೃಜನಶೀಲ ಹಾಗೂ ನಂಬಿಕೆಗಳ ಚೌಕಟ್ಟುಗಳೊಳಗೆ ಒಂದರ್ಥದಲ್ಲಿ ಬಂಧಿತ ವಾಗಿ ಬಿಟ್ಟದ್ದೂ ಒಂದು ಅಂತರ್ಗತ ವಿಪರ್ಯಾಸವೇ ಇರಬಹುದು.
ಇಷ್ಟೆಲ್ಲ ಆದರೂ ಸಹ, ವಚನ ಸಾಹಿತ್ಯ ಎನ್ನುವುದು ಮಾತು ಎಂಬಂತಿರುವ ಜನಪ್ರಿಯ ನಂಬಿಕೆಯು, ವಚನವೆಂಬುದು ವಾಚನದಾಚೆಗಿನ ಅನುಭವವೂ ಹೌದು ಎಂಬ ಮತ್ತೊಂದು ನಂಬಿಕೆಯೊಂದಿಗೆ ಮುಖಾಮುಖಿ ಆದ ವಾಗ್ವಾದವು ‘ಪ್ರಜಾವಾಣಿ’ಯಲ್ಲಿ ಕಳೆದ ವರ್ಷ ಸುದೀರ್ಘವಾಗಿ ಹರಿದು ಬಂದದ್ದಿದೆ.
ಪ್ರಸ್ತುತ, ಈ ವಾಗ್ವಾದದ ಹಿನ್ನೆಲೆಯಲ್ಲಿ, ಅಭಿವ್ಯಕ್ತಿ ಮಾಧ್ಯಮ ಹಾಗೂ ಲಿಖಿತ ವಚನಗಳ ನಡುವಣ ಸಂಬಂಧದ ಸಂಕೀರ್ಣತೆಯನ್ನು ಚೇತೋಹಾರಿಯಾಗಿ ಪ್ರಚುರಪಡಿಸಲೋ ಎಂಬಂತೆ ‘ವಚನ ಚಿತ್ರಸಂಗಮ’ ಚಿತ್ರ-ಪುಸ್ತಕ ಪ್ರಕಟವಾಗಿದೆ. ಕಲಾವಿದ ಪುಂಡಲೀಕ ಕಲ್ಲಿಗನೂರ ಅವರು ಅಷ್ಟೇನೂ ಜನಪ್ರಿಯವಲ್ಲದ ಸುಮಾರು ನೂರ ಹನ್ನೊಂದು ವಚನಗಳಿಗೆ ಚಿತ್ರಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯವಲಯವು ಶುದ್ಧಾಂಗ ದೃಶ್ಯಕಲೆಗಿಂತಲೂ ಪೂರಕಚಿತ್ರಗಳೊಂದಿಗೇ (ಇಲಸ್ಟ್ರೇಷನ್ಸ್) ಸಾದ್ಯಂತವಾಗಿ ಹೆಚ್ಚು ಸಂಬಂಧವಿರಿಸಿಕೊಂಡು ಬಂದಿರುವುದು ಒಂದು ಚಾರಿತ್ರಿಕ ಸತ್ಯ.
ಅಂತಹವರಿಗೂ ಸಹ ಲಿಖಿತ-ವಚನ ಹಾಗೂ ಚಿತ್ರಿತ-ವಚನಗಳ ಈ ಪುಸ್ತಕದಲ್ಲಿ ಚಿತ್ರಭಿತ್ತಿಯು ಗಾಢವಾಗಿ, ಜೋರು ಸದ್ದಿನೊಂದಿಗೆ ಪ್ರಸ್ತುತವಾಗಿರುವುದನ್ನು ಗಮನಿಸದೇ ಇರಲು ಸಾಧ್ಯವಿಲ್ಲ. ಇಲ್ಲಿನ ಚಿತ್ರಗಳು ಸತ್ವದಲ್ಲಿ, ವೈವಿಧ್ಯತೆಯಲ್ಲಿ ಒಂದರಂತೆ ಇನ್ನೊಂದು ಇಲ್ಲದಿರುವುದು ಸೋಜಿಗವೇ ಸೈ (ಮುನ್ನುಡಿ ಬರೆದ ಪ್ರೊ. ಜಿ.ಎಚ್. ಹನ್ನೆರಡುಮಠರು ಗಮನಿಸಿರುವ ಅಂಶವಿದು).
ಈ ಪುಸ್ತಕದ ಬಹುಪಾಲು ಪುಟಗಳು ವರ್ಣಮಯವಾಗಿದ್ದು, ಚಿತ್ರಕಲೆಯನ್ನು ಸ್ವಯಂ ಪರಿಶ್ರಮದಿಂದ ಕಲಿತಿರುವ ಕಲ್ಲಿಗನೂರರ ಈ ನೂರಾರು ವರ್ಣಚಿತ್ರಗಳ ಈ ಪುಸ್ತಕವು ಕನ್ನಡ ದೃಶ್ಯಕಲಾ ಸಾಹಿತ್ಯ ಪರಂಪರೆಯಲ್ಲಿ ಅತ್ಯಂತ ಹೆಚ್ಚಿನ ಆರ್ಥಿಕ ಬೆಲೆಯ ಪುಸ್ತಕವೂ ಹೌದಾಗಿದೆ. ಶೈಕ್ಷಣಿಕವಾಗಿ ಕಲಿಯದ ಕಲಾವಿದರಿಗೆ ನೈಪುಣ್ಯತೆ ದಕ್ಕದು ಎಂಬ ನಂಬಿಕೆಯನ್ನು ಅರ್ಥಪೂರ್ಣವಾಗಿ ಇಲ್ಲಿ ವಚನಸಾರದ ವೈವಿಧ್ಯತೆಯನ್ನು ಸಾರಿ ಹೇಳಲು ಬಳಸಿದ್ದಾರೆ ಎಂದು ನಂಬಿದಲ್ಲಿ ಮಾತ್ರ ಈ ಚಿತ್ರಗಳು ಸುಂದರವಾಗಲ್ಲದಿದ್ದರೂ ಅರ್ಥಪೂರ್ಣವಾಗುತ್ತವೆ. ಗಾಢಿಯಾಗಿದ್ದರೂ ಗಾಢವಾಗಿರುವ ಈ ಚಿತ್ರಗಳು ಅಸಲಿಯಾಗಿ ಅಕ್ಷರರೂಪಿ ವಚನಗಳ ದೃಶ್ಯರೂಪಕಗಳಲ್ಲ. ಬದಲಿಗೆ ಅವುಗಳ ಸಂದರ್ಭಸೂಚಿಯಾಗಿವೆ.
ಇಂದಿನ ಡಿಜಿಟಲ್ ಯುಗದಲ್ಲಿ, ಮುದ್ರಣ ತಂತ್ರಜ್ಞಾನದ ಚೌಕಟ್ಟಿನೊಳಗೆ, ನಮ್ಮ ಅನುಭವದ ಚೌಕಟ್ಟುಗಳನ್ನು ತಂತ್ರಜ್ಞಾನವು ನಿರ್ವಚಿಸಿರುವ ಸಂದರ್ಭದಲ್ಲಿ, ಐತಿಹಾಸಿಕ ವಚನ-ವಾಚನಾ ಸಂಪ್ರದಾಯವನ್ನು ದೃಶ್ಯವನ್ನಾಗಿಸಿ, ಒಬ್ಬನೇ ಕಲಾವಿದನ ಮೂಲಕ ರೂಪಾಂತರಿಸಿಕೊಂಡಲ್ಲಿ, ಆ ಎಲ್ಲವುಗಳ ಮೊತ್ತವೆಂಬಂತೆ ಅದು ಹೊಂದುವ ಮಾರ್ಪಾಟುಗಳ ದಾಖಲೆ ಎಂತಲೂ ಈ ಪುಸ್ತಕದ ದೃಶ್ಯಾವಳಿಯನ್ನು ಸ್ವೀಕರಿಸಬಹುದಾಗಿದೆ. ಎರಡನೆಯದಾಗಿ, ಮುಖ್ಯವಾಗಿ ಕನ್ನಡದ ನವ್ಯ ಕಾಲದಿಂದ ಆರಂಭಿಸಿ ಸಾಹಿತ್ಯಕ್ಕೆ ಚಿತ್ರಕಲೆಯು ಏಕಪ್ರಕಾರವಾಗಿಯಷ್ಟೇ (ಒನ್ ವೇಯಲ್ಲಿ) ಸ್ಪಂದಿಸಿದ ಇತಿಹಾಸದ ಪ್ರಜ್ಞೆಯನ್ನು ಒಟ್ಟುಗೂಡಿಸಿ, ಅದರ ಅಭಿಮಾನಿ ಕಲಾವಿದನೊಬ್ಬ ವಚನಗಳಿಗೆ ಆರೋಪಿಸಿದರೆ ಹೇಗಿರಬಹುದೋ, ಅಪ್ರಜ್ಞಾಪೂರ್ವಕವಾಗಿ ಅದಾಗಿಬಿಟ್ಟಿದೆ ಈ ಪುಸ್ತಕ. ಈ ನಿಟ್ಟಿನಲ್ಲಿ ಕನ್ನಡದ ದೃಶ್ಯಪ್ರಕಟನೆಗಳಲ್ಲಿ ಇದೊಂದು ದಾಖಲೆಯ ಪುಸ್ತಕವೇ ಹೌದಾಗಿದೆ.
ಔಪಚಾರಿಕ ಶಿಕ್ಷಣದಿಂದ ಹೊರತಾದ, ಕಲೆಯನ್ನು ಸ್ವಯಂ ಕಲಿತ ಪುಂಡಲೀಕರ ಅಭಿವ್ಯಕ್ತಿಗೂ, ವಚನ ಸಂಪ್ರದಾಯವು ಸಂಸ್ಕೃತ, ಶೈಕ್ಷಣಿಕ ಚೌಕಟ್ಟುಗಳನ್ನು ಮುರಿದ ಪರಿಗೂ ಸಂಬಂಧ ಕಲ್ಪಿಸಿಬಿಡಬಹುದಾದರೆ; ಮತ್ತು ಹಾಗಾದಾಗ ಮಾತ್ರ ಇದೊಂದು ಅರ್ಥಪೂರ್ಣ ಪುಸ್ತಕವಾಗಬಲ್ಲದು. ಮುನ್ನುಡಿ, ಬೆನ್ನುಡಿ ಬರೆದ ಮೂವರು ಪಂಡಿತರೂ ಸಹ ಇಲ್ಲಿ ಅದನ್ನು ಬದಿಗಿರಿಸಿ ಒಂದೆರೆಡು ಒಳನೋಟಗಳ, ನಾಲ್ಕಾರು ನಿಜಕ್ಕೂ ಒಳ್ಳೆಯ ಮಾತಗಳನ್ನು ಹೇಳಿದ್ದಾರೆ ಈ ಕಲಾವಿದ ಪ್ರತಿಭೆಯ ಬಗ್ಗೆ. ಇದೇ ಹಿನ್ನೆಲೆಯಲ್ಲಿ ಚಂದ್ರನಾಥ್ ಆಚಾರ್ಯ, ಎಂ.ಎಸ್. ಮೂರ್ತಿ, ಪ.ಸ. ಕುಮಾರ್, ಜಿ.ಕೆ. ಶಿವಣ್ಣ, ಜಿ.ವೈ. ಹುಬ್ಳೀಕರ್ ಮುಂತಾದ ಕನ್ನಡ ಸಾಹಿತ್ಯ ವಲಯಕ್ಕೂ ಬಹುಪರಿಚಿತವಾದ ಕಲಾವಿದರನ್ನು ಪ್ರಸ್ತುತ ಕಲಾವಿದರು ಮರೆತಿಲ್ಲ, ಅಥವ ತಮ್ಮ ಚಿತ್ರಣ ಶೈಲಿ ಹಾಗೂ ಸತ್ವದ ಮೂಲಕ ನೆನಪಿಸದೆ ಬಿಡುವುದಿಲ್ಲ. ಏಕಪಾತ್ರವನ್ನು ನಿರ್ವಹಿಸುತ್ತಲೇ ಬಹುಶೈಲಿಗಳನ್ನು ನಿರ್ವಹಿಸುವ ಕಲ್ಲಿಗನೂರರ ಪ್ರತಿಭೆಯು ವಚನ ಸಂಪ್ರದಾಯದ ನೆಪದಲ್ಲಿ ಟಿಸಿಲೊಡೆದಿರುವುದು ಬಹು ಕುತೂಹಲಕರ.
ವಚನಗಳನ್ನು ಕಲ್ಲಿಗನೂರು ಚಿತ್ರರೂಪಕ್ಕೆ ಇಳಿಸುವುದರ ಜೊತೆ ಜೊತೆಗೇ ಮುದ್ದಾದ ರೆಡಿಮೇಡ್ ಕನ್ನಡದ ಫಾಂಟ್‌ಗಳನ್ನು ಚಿತ್ರಗಳ ಬದಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಶಾಲಾಮಕ್ಕಳ ಪಠ್ಯಪುಸ್ತಕದ ಅಕ್ಷರಮಾದರಿಯನ್ನು ಇವು ಉದ್ದೇಶಪೂರ್ವಕವಾಗಿ ಹೋಲುವ ಮೂಲಕ ನಮ್ಮ ಅನುಭಾವಿಕ ಅರಿವಿನ ಬಾಲ್ಯಾವಸ್ಥೆಯ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸುವ ‘ಫ್ಯುಕೋನ ಆರ್ಕಿಯಾಲಜಿ ಆಫ್ ನಾಲೆಜ್’ ವಾದಕ್ಕೆ ಈ ಪುಸ್ತಕ ಸಾದ್ಯಂತವಾಗಿ ಸಂವಾದಿಯಾಗಿದೆಯೇ? ಇಲ್ಲದಿದ್ದಲ್ಲಿ ಇಷ್ಟು ದಟ್ಟ ಸಾಂಸ್ಕೃತಿಕ ಯೋಜನೆ ಯಾದ ಈ ಪುಸ್ತಕ-ಪ್ರಸ್ತುತಿಯ ಸಾರ್ಥಕ್ಯವನ್ನು ಮತ್ತಿನ್ಯಾವ ನೆಲೆಯಲ್ಲಿ ಹುಡುಕಬಹುದಾಗಿ ದೆಯೋ? ಈ ಕಲಾವಿದರ ಸಹಜ ಅಭಿವ್ಯಕ್ತಿಗೆ ಇಷ್ಟೆಲ್ಲ ಅರ್ಥೈಸುವಿಕೆ ಯನ್ನು ಆರೋಪಿಸಿ ಬಿಡಬಹುದೇ ಎಂಬುದು ಇತರೆ ದೃಶ್ಯಕಲಾವಿದರಲ್ಲಿ ಸರಾಗವಾಗಿ ಹುಟ್ಟಿಕೊಳ್ಳ ಬಹುದಾದ ಅನುಮಾನ.
ಆದರೆ, ಇಹದ ಗಂಡನ ತೊರೆದು ನಿರಾಕಾರ ದೈವಕ್ಕೆ ಶರಣು ಹೋಗುವ ವಚನಕಾರರ ಯತ್ನದಂತಲ್ಲದಿದ್ದರೆ ಈ ಓದುವಿಕೆ, ಕೇವಲ ಶೃಂಗಾರವಾಗಿಬಿಡುವ ದೃಶ್ಯಪ್ರಯತ್ನಗಳನ್ನು ರೂಪನಿಷ್ಠತೆಯ ಶಾಪದಿಂದ ಬಿಡುಗಡೆಗೊಳಿಸುವುದಾದರೂ ಹೇಗೆ?
ಈ ಚಿತ್ರಗಳು ಚಂದ್ರನಾಥರಂತೆ ನಯನ ಮನೋಹರ ಆದುವಲ್ಲ, ಒರಟಾಗಿ ನಮ್ಮ ಅನು ಭವವನ್ನು ಚುಟುಕಾಗಿ ಚುಚ್ಚುವಂತಹವು. ಅಂತೆಯೇ ವಚನವೂ ಜೋಗುಳವಲ್ಲ, ತದ್ವಿ ರುದ್ಧ ವಾಗಿ ಸುಖನಿದ್ರೆಯ ಸೌಖ್ಯವನ್ನು ಪ್ರಶ್ನೆಗೊಡ್ಡುವಂತಹದ್ದು. ಅಜ್ಞಾನದ ತೊಟ್ಟಿಲೊಳಗೆ ಅರಿವಿನ ಶಿಶುವ ಮಲಗಿಸಿ, ವೇದಶಾಸ್ತ್ರಗಳ ನೇಣು ಕಟ್ಟಿ, ಭ್ರಾಂತಿಯೆಂಬುವಳು ಜೋಗುಳವಾಡುತ್ತಿರಲು, ತೊಟ್ಟಿಲು, ನೇಣು, ಜೋಗುಳಗಳ ತೊರೆದಲ್ಲದೆ ಗುಹೇಶ್ವರನ ಕಾಣಬಾರದು ಎಂಬರ್ಥದ ಅಲ್ಲಮಪ್ರಭುವಿನ ವಚನವನ್ನೂ ಇವರು ಚಿತ್ರಿಸಿದ್ದಾರೆ.
ಕಲಾವಿದರಾಗಿ ಕಲ್ಲಿಗನೂರು ಅವರು ಆಯ್ಕೆಯನ್ನು ಬದಿಗಿರಿಸಿ ತೊಟ್ಟಿಲು, ವೇದಶಾಸ್ತ್ರ, ನೇಣು, ಭ್ರಾಂತಿಗಳನ್ನೆಲ್ಲವನ್ನೂ ಚಿತ್ರಿಸಿಬಿಟ್ಟಿದ್ದಾರೆ, ಈ ವಚನವನ್ನು ಚಿತ್ರಿಸುವಾಗಲೂ ಸಹ. ಸಮಗ್ರ ಪುಸ್ತಕದ ಒಟ್ಟಾರೆ ಚಿತ್ರಗಳ ಸಾರವೂ ಇದೇ ಹೌದೆ?
ಮೂರುನಾಲ್ಕು ದಶಕಗಳ ಕಾಲ ಕನ್ನಡ ಸಾಹಿತ್ಯ ಸಂದರ್ಭದ ಕಥೆ, ಕವನ, ಕಾದಂಬರಿಗಳ, ಆಹ್ವಾನ ಪತ್ರಿಕೆಗಳ ಮುಖಪುಟಗಳನ್ನು ಅಲಂಕರಿಸಿದ ಪ್ರಮುಖ ಕಲಾವಿದರುಗಳ ಚಿತ್ರಣ ಶೈಲಿಗಳಲ್ಲಿ ಪ್ರಮುಖವಾದುವನ್ನೆಲ್ಲ ಇಲ್ಲಿ ಪುಂಡಲೀಕರು ವಚನಗಳ ದೃಶ್ಯವಾಗಿಸುವಲ್ಲಿ ದುಡಿಸಿಕೊಂಡಿದ್ದಾರೆ. ದೃಶ್ಯಕಲೆಯು ಸಮಾಜವನ್ನು ಚಿತ್ರಿಸುವುದು ಬೇರೆ, ದೃಶ್ಯಕಲಾ ಇತಿಹಾಸವನ್ನೇ ಸಾಮಾಜಿಕ ವಸ್ತುವನ್ನಾಗಿಸಿಕೊಳ್ಳುವ ದೃಶ್ಯಗಳು ಬೇರೆ. ಈ ಕಲಾವಿದರು ಪ್ರಾಯಶಃ ಪ್ರಜ್ಞಾಪೂರ್ವಕವಾಗಿಯೇ ಹೀಗೆ ಮಾಡುತ್ತಿರಬಹುದು.
ಇದು ಹೇಗೆಂದರೆ, ಈ ಕನ್ನಡ ಚಿತ್ರಕಲೆಯ ಇಲಸ್ಟ್ರೇಷನ್ ಸಂಪ್ರದಾಯದಲ್ಲಿ ಕಥನದ ಹಾಗೂ ಕಾವ್ಯದ ಚಿತ್ರಗಳು ಪರಸ್ಪರ ವಿರುದ್ಧ ನೆಲೆಯಲ್ಲಿ ಅನುಭವವನ್ನು ಚಿತ್ರಿಸಿವೆ. ಅರ್ಥವಾಗದ ನವ್ಯ ಕಾವ್ಯಕ್ಕೆ ಅರ್ಥವಿಲ್ಲದ ಚಿತ್ರಗಳನ್ನು ಕಲಾವಿದರುಗಳು ರಚಿಸಿಕೊಡುತ್ತಿದ್ದರು ಎಂದು ಕವಿ ರಾಮಚಂದ್ರಶರ್ಮರು ಒಮ್ಮೆ ಹೇಳಿದ್ದು ಈ ನಿಟ್ಟಿನಲ್ಲೇ. ಈ ಪುಸ್ತಕದಲ್ಲಿ ಸ್ಥಳೀಯ ಸೊಗಡಿನ ‘ಚಂದಮಾಮ’ ಚಿತ್ರಗಳಿಂದಾರಂಭಿಸಿ, ಅಮೂರ್ತ ನವ್ಯ ಭಾವದ ಕಾವ್ಯಕ್ಕೆ ಪೂರಕವಾದ ದೃಶ್ಯಗಳಿವೆ, ಕ್ಲೀಷೆಯ ರೂಪಕಗಳಿಗೂ ವಚನಸಾರದ ಪಚನದ ಲೇಪನದ ಸೋದ್ದೋಶ ವಿದೆ, ಡಿಜಿಟಲ್ ತಂತ್ರದ ಹಸಿಹಸಿ ಹಿನ್ನೆಲೆಯ ವರ್ಣನೆ ಇದೆ, ಎಲ್ಲಕ್ಕೂ ಹೆಚ್ಚಾಗಿ ಇವೆಲ್ಲಕ್ಕೂ ಪರಸ್ಪರ ಅಸಮ್ಮತಿಯ ನೆಲೆಯನ್ನು ಒಟ್ಟಾಗಿ ಚಿತ್ರಿಸುವ ಉಮೇದು ಸಹ ಇದೆ. ಸಹಜವಾದ ವಚನಗಳನ್ನೂ ಸರಳಗೊಳಿಸಿಬಿಡುವುದು ಪುಂಡಲೀಕರ ಕಲಾಪ್ರತಿಭೆಯ ಮುಖ್ಯ ಸಾರ.
ಮತ್ತೂ ಒಂದರ್ಥದಲ್ಲಿ, ಅಕ್ಷರ ಹಾಗೂ ಚಿತ್ರಗಳನ್ನು ಪರಸ್ಪರ ಬೇರ್ಪಡಿಸಿದಲ್ಲಿ, ವಿಭಿನ್ನವಾಗಿ ಪುನರ್ ಜೋಡಿಸಿದಲ್ಲಿ ಮತ್ತು ಈ ಚಿತ್ರಗಳಿಗೆ ತಮ್ಮದೇ ಕಥೆಗಳನ್ನು ಸೂಚಿಸಲು ಓದುಗರಿಗೆ ಮಾನಸಿಕ ಪರೀಕ್ಷೆಯೊಂದನ್ನು ಒಡ್ಡಿದಲ್ಲಿ, ಈ ಪುಸ್ತಕದ ಸಾರ್ಥಕ್ಯದ ಅಂದಾಜು ದೊರಕ ಬಹುದು. ಒಟ್ಟಾರೆಯಾಗಿ ಈ ಚಿತ್ರ ಹಾಗೂ ಅಕ್ಷರಗಳು ಪರಸ್ಪರ ಗೌರವಾನ್ವಿತ ಹಾಗೂ ಅರ್ಥಪೂರ್ಣ ಸೃಜನಶೀಲ ಅಂತರವೊಂದನ್ನು ಕಾಯ್ದುಕೊಂಡಿವೆ. ತೊಟ್ಟಿಲ ಸಮೇತ ಶಿಶು ಕಾಣಸಿಗುತ್ತದೆ. ಸಹಜವನ್ನು ಸರಳವಾಗಿಸುವ ಅರ್ಥೈಸುವಿಕೆಯಿದೆ. ಅನುಭಾವವೆಂದರೆ ವಿವರಿಸುವುದೂ ಅಲ್ಲ, ನಿಗೂಢಗೊಳಿಸುವುದೂ ಅಲ್ಲ, ಬದಲಿಗೆ ಸಂವಹನದ ಮಾರ್ಗವಲ್ಲದ ದಾರಿಗಳನ್ನು ಹುಟ್ಟಿಹಾಕುವುದು.
ಕಲಾವಿದ ಪುಂಡಲೀಕ ಕಲ್ಲಿಗನೂರು ಅವರು ತಮ್ಮ ವೈವಿಧ್ಯಮಯ ಶೈಲಿಯ, ಉದ್ದೇಶಗಳ, ರೂಢಿಯ, ತಂತ್ರಜ್ಞಾನೋತ್ಸಾಹದ ಸೃಷ್ಟಿಯ ಮೂಲಕ ಬಹುಪಾಲು ಅನಾಮಿಕ ವಚನಗಳಿಗೆ ಸಂವಾದಿಸಿರುವ ರೀತಿಯನ್ನು ಓದುಗ-ನೋಡುಗರು ಅರ್ಥೈಸುವ ರೀತಿಯಲ್ಲೇ ಅವರ ಗ್ರಹಿಕೆಯ ಪ್ರೌಢಿಮೆಯ ನೆಲೆ ನಿರ್ಧರಿತವಾಗುತ್ತದೆಯೆಂದು ಈ ಪುಸ್ತಕ ಸೂಚಿಸುತ್ತದೆ. ಮಿಕ್ಕಂತೆ, ಕನ್ನಡದ ದೃಶ್ಯ–ಸಾಹಿತ್ಯ ಒಡನಾಟಕ್ಕೆ ಇದೊಂದು ವರ್ಣಮಯ, ಬೃಹತ್ ಚೌಕಟ್ಟಿನ ಸೇರ್ಪಡೆ ಕೂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.