ಮಲಾಲಾ ಅಲ್ಲಾ(ನಾಟಕ)
ಲೇ: ಬೊಳುವಾರು ಮಹಮದ್ ಕುಂಞಿ
ಪ್ರ: ಮನೋಹರ ಗ್ರಂಥಮಾಲಾ, ಧಾರವಾಡ
ತಮ್ಮ ಕತೆ–ಕಾದಂಬರಿಗಳಿಂದ ಪ್ರಸಿದ್ಧರಾಗಿರುವ ಬೊಳುವಾರು ಮಹಮದ್ ಕುಂಞಿ ಅವರ ಮೊದಲ ಪ್ರಕಟಿತ ನಾಟಕ ‘ಮಲಾಲಾ ಅಲ್ಲಾ’. ‘ಈ ನಾಟಕವು ಪಾಕಿಸ್ತಾನ – ಆಫ್ಘಾನಿಸ್ತಾನ ನಡುವಣ ಸ್ವಾತ್ ಕಣಿವೆಯ ಸಂಜಾತೆ, ಪ್ರಸ್ತುತ ಲಂಡನ್ ನಿವಾಸಿ, ನೊಬೆಲ್ ಶಾಂತಿಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್ ಝಾಯಿಯ ಬದುಕಿಗೆ ನೇರ ಸಂಬಂಧಿಸಿದ್ದಲ್ಲ’ ಎಂದು ಲೇಖಕರು ತಮ್ಮ ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ‘ಈ ನಾಟಕದ ವಸ್ತು ನನ್ನದು ಹಾಗೂ ನನ್ನಂತೆ ಹೆಣ್ಣುಮಕ್ಕಳಿರುವ ಬಹುಪಾಲು ಕುಟುಂಬಗಳಲ್ಲಿ ಯಜಮಾನಿಕೆ ನಡೆಸುತ್ತಿರುವ ನನ್ನಂಥ ಎಲ್ಲ ಗಂಡು ಯಜಮಾನರುಗಳದ್ದು.
ಇವರೆಲ್ಲರೊಂದಿಗೆ ನಾನು ಗುಟ್ಟಿನಲ್ಲಾದರೂ ನಾಚಿಕೊಳ್ಳಬೇಕಾದ ವಸ್ತುವೊಂದರ ಆಚೀಚೆಗೆ ಸಂಬಂಧಿಸಿದ್ದು’ ಎಂದೂ ಕಾಣಿಸಿ, ನಾಟಕದ ಸ್ವರೂಪ ಮತ್ತು ಆಶಯಗಳ ಬಗ್ಗೆ ಸೂಚ್ಯವಾಗಿ ನಮ್ಮ ಗಮನ ಸೆಳೆದಿದ್ದಾರೆ. ಆದರೆ ಈ ನಾಟಕವು ಮಲಾಲಾ ಬದುಕಿನ ಸ್ಮೃತಿಯನ್ನು ಸಂಪೂರ್ಣವಾಗಿ ಬಿಟ್ಟಿಲ್ಲ. ನಾಟಕದ ಉದ್ದಕ್ಕೂ ಮಲಾಲ ಬೇರೆಬೇರೆ ರೀತಿಗಳಲ್ಲಿ ಪ್ರಸ್ತಾಪಿತವಾಗುತ್ತ ಹೋಗುತ್ತಾಳೆ. ಆರಂಭದ ದೃಶ್ಯದಲ್ಲಿ ತಾಲಿಬಾನ್ ಸೈನಿಕರ ಘೋಷಣೆಗಳು
ನೇರವಾಗಿಯೇ ದಾಖಲಾಗಿವೆ.
ಸ್ವಾತ್ ಕಣಿವೆಯು ಪಾಕಿಸ್ತಾನದ ಭೂಪಟದಲ್ಲಿ ಕಾಣಿಸುವುದಾದರೂ ಅಧಿಕಾರ ನಡೆಸುವವರು ತಾವು; ತಮ್ಮ ಸರ್ಕಾರದ ಹೆಸರು ‘ಇಸ್ಲಾಮಿಕ್ ಎಮಿರೇಟ್ಸ್ ಆಫ್ ಆಫ್ಘಾನಿಸ್ತಾನ್’; ತಾವು ಸ್ವಾತ್ ಕಣಿವೆಯ ಎಲ್ಲ ನಾಗರಿಕರ ‘ಮರಣಾನಂತರದ ಧರ್ಮ–ವಿಜಯ’ಕ್ಕಾಗಿ ಸಮರ್ಪಿತರಾದವರು ಎಂದು ಪರಿಚಯಿಸಿಕೊಂಡು, ದೃಶ್ಯದ ಕಡೆಯಲ್ಲಿ ‘ಫತ್ವಾ’ ಘೋಷಣೆ ಮಾಡುತ್ತಾರೆ.
‘‘ಸ್ವಾತ್ ಕಣಿವೆಯ ಯಾವುದೇ ಹೆಣ್ಣುಮಗು ಇನ್ನು ಮುಂದೆ ಶಾಲೆಗಳಿಗೆ ಹೋಗುವುದು ‘ಹರಾಮ್’ ಎಂದು ಫತ್ವಾ ನೀಡಲಾಗಿದೆ. ನಮ್ಮ ಫತ್ವಾಗಳನ್ನು ಧಿಕ್ಕರಿಸುವವರು ಅಪರಾಧಿಗಳಾಗುತ್ತಾರೆ; ಅಪರಾಧಿಗಳಿಗೆ ಕಠಿಣ ಶಿಕ್ಷೆಗಳು ಕಾದಿರುತ್ತವೆ’’. ಈ ನಾಲ್ವರು ಪಾತ್ರಧಾರಿಗಳೇ ನಾಟಕದಲ್ಲಿ ‘ದೇವದೂತ’ರಾಗಿ, ‘ಸೇನೆ’ಯ ಸದಸ್ಯರಾಗಿ, ‘ಜಾತ್ಯತೀತ ಮುಸ್ಲಿಂ ಪಂಥ’ದ ಸದಸ್ಯರಾಗಿ ‘ಕಡ್ಡಾಯವಾಗಿ’ ನಟಿಸುತ್ತಾರೆಂದು ಲೇಖಕರು ಸೂಚಿಸುತ್ತಾರೆ.
ಎರಡನೆಯ ದೃಶ್ಯವು ಇತಿಹಾಸದಿಂದ ವರ್ತಮಾನಕ್ಕೆ, ಪಾಕಿಸ್ತಾನದಿಂದ ಇಂಡಿಯಾಕ್ಕೆ ಶಿಫ್ಟ್ ಆಗುತ್ತದೆ. ಒಂದು ರೀತಿಯಲ್ಲಿ ಮುಖ್ಯ ನಾಟಕ ಇಲ್ಲಿಂದ ಪ್ರಾರಂಭವಾಗುತ್ತದೆ. ಮುಖ್ಯ ಪಾತ್ರಧಾರಿಗಳೆಂದರೆ ಪ್ರೊಫೆಸರ್ ಮುರಾರಿ ರಾವ್, ಅವರ ಮಗಳು ಸೌಮ್ಯಾ, ಆಕೆಯ ಗೆಳತಿ ದುರ್ಗಾ ಪಾಂಡೆ ಮತ್ತು ಕ್ಯಾಮೆರಾಮನ್ ಪ್ರಭು ದಯಾಳ್. ಮುರಾರಿ ರಾವ್ ಒಂದು ಪ್ರಾಜೆಕ್ಟ್ ಮಾಡುತ್ತಿದ್ದಾನೆ. ಅದರ ಪಂಚ್ ಲೈನ್, ‘ಎಜುಕೇಟ್ ಅನದರ್ ವುಮನ್, ಇಕ್ವಾಲಿಟಿ ಫಾಲ್ಸ್ ಟು ಯುವರ್ ಫೀಟ್’.
ಆ ಸಂಬಂಧ ಅವನು ಒಂದು ನಾಟಕವನ್ನು ಸಿದ್ಧಪಡಿಸುತ್ತಿದ್ದಾನೆ. ತನ್ನ ಪ್ರಾಜೆಕ್ಟಿಗೆ ಸ್ಪಾನ್ಸರರ್ಸ್‌ಗಳನ್ನು ಹುಡುಕುತ್ತಿರುವ ರಾವ್ ಅವರಿಗೆ ತೋರಿಸಿ ಇಂಪ್ರೆಸ್ ಮಾಡಲು ನಾಟಕದ ಒಂದೆರಡು ದೃಶ್ಯಗಳನ್ನು ಚಿತ್ರೀಕರಿಸುವ ಏರ್ಪಾಟುಗಳನ್ನೂ ಮಾಡುತ್ತಿದ್ದಾನೆ. ಈ ನಾಟಕದಲ್ಲಿ ಅವನ ಮಗಳು ಸೌಮ್ಯಾ ರಾವ್ ಮಲಾಲಾ ಆಗಿ ಅಭಿನಯಿಸಬೇಕಾಗಿದೆ. ಅವಳಿಗೆ ಒಂದು ಸ್ಕ್ರಿಪ್ಟ್ ಬರೆದುಕೊಟ್ಟು ಅದನ್ನು ಧ್ವನಿಪೂರ್ಣವಾಗಿ ಮಂಡಿಸಲು ಸೂಕ್ತ ನಿರ್ದೇಶನಗಳನ್ನು ಕೊಡುತ್ತಿದ್ದಾನೆ.
ಅಂದರೆ ಮಲಾಲಾ ಈಗ ಒಂದು ಬ್ರ್ಯಾಂಡ್ ನೇಮ್. ಅವಳು ವಿಶ್ವವಿಖ್ಯಾತೆ. ಲೇಖಕ–ಕಲಾವಿದರಿಗೆ ಮತ್ತು ಮಾಧ್ಯಮಕ್ಕೆ ಅವಳು ಒಂದು ಲಾಭದಾಯಕ ‘ವಸ್ತು’. ಅದನ್ನು ನಗದೀಕರಿಸಿಕೊಳ್ಳಲು ಬುದ್ಧಿವಂತನಾದ ಮುರಾರಿರಾವ್ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾನೆ. ಸ್ಪಾನ್ಸರರ್ಸ್‌ಗಳಿಗೆ ಇಷ್ಟವಾಗುವ ರೀತಿಯಲ್ಲಿ ಅವನ ಮಗಳು ಹೊಟೇಲ್ ಅಶೋಕದಲ್ಲಿ ತನ್ನ ಪ್ರೆಸೆಂಟೇಷನ್ ನೀಡಬೇಕಾಗಿದೆ.
ಕಳೆದ ಸಲ ಅವಳು ಕೆಂಪು ದುಪಟ್ಟಾ ಹಾಕಿದ್ದಕ್ಕೆ ಸ್ಪಾನ್ಸರರ್ಸಿಗೆ ಲೈಕ್ ಆಗಿರಲಿಲ್ಲವಂತೆ. ಆದುದರಿಂದ ಮಲಾಲಾ ಪಾತ್ರಧಾರಿ ಸೌಮ್ಯಾ ತೆಳುಹಳದಿ ಬಣ್ಣದ ಸೆಲ್ವಾರ್ ಕಮೀಜ್ ತೊಟ್ಟುಕೊಂಡು ಹಸುರು ಬಣ್ಣದ ದುಪಟ್ಟಾ ಹಾಕಿಕೊಳ್ಳಲು ನಿರ್ದೇಶಕ ಮುರಾರಿ ರಾವ್ ಮಗಳಿಗೆ ಒತ್ತಾಯಿಸುತ್ತಿದ್ದಾನೆ. ಮಲಾಲಾ ಈಗ ಉದ್ಯಮಿಗಳಿಗೆ ಒಂದು ಕಚ್ಚಾಮಾಲು. ಆ ಮಾಲನ್ನು ಎಷ್ಟು ಆಕರ್ಷಕವಾಗಿ ಪ್ರೆಸೆಂಟ್ ಮಾಡಬಹುದು ಎಂದು ಅವರು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಈ ವ್ಯಂಗ್ಯವನ್ನು ಬೊಳುವಾರು ಅವರ ನಾಟಕವು ಸಮರ್ಥವಾಗಿ ಹಿಡಿದಿದೆ.
ಒಂದು ಕಡೆ ಮಲಾಲಾಳನ್ನು ನಾಟಕದ ಮೂಲಕ ಪಾತ್ರಧಾರಿಯ ಸೂಕ್ತವಾದ ಕಾಸ್ಟ್ಯೂಮ್‌ನಲ್ಲಿ ಮತ್ತು ಮಲಾಲಾಳೇ ಆಡುತ್ತಿದ್ದಾಳೆ ಎಂಬ ಭಾಸವನ್ನು ಉಂಟುಮಾಡುವ ಉಚಿತವಾದ ಮಾತು–ಹಾವಭಾವಗಳಲ್ಲಿ ಕಟ್ಟುವ ಕೆಲಸ ನಡೆದಿದ್ದರೆ, ಮುರಾರಿ ರಾವ್ ಮನೆಯಲ್ಲಿ ವಾಸ್ತವದಲ್ಲಿ ಬೇರೊಂದು ನಾಟಕವೇ ಆರಂಭವಾಗಿದೆ. ಸ್ವತಃ ಸೌಮ್ಯಾಳಿಗೆ ತನ್ನ ಅಪ್ಪನ ಪ್ರಾಜೆಕ್ಟಿನ ನಿಜ ಸ್ವರೂಪ ಗೊತ್ತಿದೆ.
‘ಬಹಳ ಪ್ರೊಗ್ರೆಸಿವ್ ಥಿಂಕಿಂಗ್ ಇರೋರು; ಈಗ ಎತ್ತಿಕೊಂಡಿರುವ ಡ್ರಾಮಾ ಪ್ರೊಜೆಕ್ಟ್ ನೋಡಿದ್ರೇ ಗೊತ್ತಾಗುವುದಿಲ್ವಾ? ಜಗತ್ತಿನ ಎಲ್ಲ ಹೆಣ್ಣುಗಳ ಧ್ವನಿಯಾಗಿ ಬೆಳೆಯಬಲ್ಲ ಮಲಾಲಾ ಬ್ರಾಂಡ್‌ನ್ನು ಡೀಲ್ ಮಾಡುವುದೆಂದ್ರೆ ಸಾಮಾನ್ಯ ಸಂಗತಿಯಾ? ಅದೂ, ನನ್ನನ್ನು ಹೀರೋಯಿನ್ ಮಾಡಿಕೊಂಡು?’ ಎಂದು ವ್ಯಂಗ್ಯದಿಂದ ಅವಳು ನುಡಿದರೆ ಅವಳ ಗೆಳತಿ ದುರ್ಗಾ ಪಾಂಡೆ, ‘ಇಂಥಾ ಡೀಲಿಂಗ್‌ಗಳಲ್ಲಿ ಸ್ವಂತ ಮನೆಯವರಿಗೆ ಮಾತ್ರ ಧ್ವನಿಯಿರೋದಿಲ್ಲ, ಅಲ್ವಾ? ಹೆಣ್ಣು ಮಕ್ಳಿಗೆ ಸಮಾನ ಅವಕಾಶ ಕೊಡಬೇಕು ಅಂತ ಭಾಷಣ ಮಾಡುವ ಇವ್ರೆಲ್ಲ, ತಮ್ಮ ಮನೆಯೊಳಗೆ ಮಾತ್ರ ಅಪ್ಪಟ ಗಂಡು ಆಗಿಬಿಡುತ್ತಾರೆ’ ಎಂದು ಪ್ರತಿಕ್ರಿಯಿಸುವ ಮೂಲಕ ಸನ್ನಿವೇಶದ ಒಟ್ಟೂ ವ್ಯಂಗ್ಯಕ್ಕೆ ಒಂದು ಭಾಷ್ಯವನ್ನೇ ಬರೆದುಬಿಡುತ್ತಾಳೆ.
ಇನ್ನು ದುರ್ಗಾಳದು ಮತ್ತೊಂದು ಕಥೆಯೇ. ಅವಳು ಮುಸಲ್ಮಾನ ಯುವಕನ್ನೊಬ್ಬನನ್ನು ಪ್ರೀತಿಸಿದ್ದಾಳೆ. ಇದರಿಂದ ಕುಪಿತನಾಗಿರುವ ಅವಳ ಅಣ್ಣನು ತಂಗಿಯ ಪ್ರೇಮಿಯ ಮೇಲೆ ದಾಳಿ ಮಾಡಿಸಿದ್ದಾನೆ. ಹಾಗೆ ದಾಳಿ ಮಾಡಿದವರು ‘ಜೈಶ್ರೀರಾಮ್’ ಎಂದು ಘೋಷಣೆ ಕೂಗಿ ಹೋದರಂತೆ. ಆದರೆ ದುರ್ಗಾಳ ಪ್ರಕಾರ ಅವಳ ಅಣ್ಣ ‘ಸೇನೆ’ಯ ಸದಸ್ಯನೂ ಅಲ್ಲ, ಅವರ ಬೆಂಬಲಿಗನೂ ಅಲ್ಲ. ಅವನೊಬ್ಬ ‘ಪ್ರೊಜೆಕ್ಟೆಡ್ ಲೆಫ್ಟಿಸ್ಟ್’. ಯಾರಿಂದಲೋ ದಾಳಿ ಮಾಡಿಸಿ ಅದನ್ನು ‘ಸೇನೆ’ಯವರ ಮೇಲೆ ಹಾಕುವುದು ಅವನ ಉಪಾಯವಾಗಿರುತ್ತದೆ.
ರಿಜ್ವಾನ್ ಆಸ್ಪತ್ರೆಯಲ್ಲಿದ್ದಾನೆ. ದುರ್ಗಾ ಪಾಂಡೆ ಬುರ್ಖಾ ಧರಿಸಿ ತನ್ನನ್ನು ರಕ್ಷಿಸಿಕೊಳ್ಳಬೇಕಾಗಿದೆ. ಹಾಸ್ಟೆಲಿನಲ್ಲೂ ಸದ್ಯ ಇರುವಂತಿಲ್ಲ. ಸೌಮ್ಯಾಳ ಮನೆಯಲ್ಲಿ ಸ್ವಲ್ಪ ದಿನ ಇರಬೇಕೆಂಬ ಇರಾದೆ ಅವಳದು.
ಈಗ ಸೌಮ್ಯಾ/ಮುರಾರಿ ರಾವ್ ಮತ್ತು ದುರ್ಗಾ ಪಾಂಡೆಯ ಕಥೆಗಳು ಕೂಡಲಾರಂಭಿಸುತ್ತವೆ. ‘ಡ್ಯಾಡಿಯ ಸ್ಕ್ರಿಪ್ಟ್ ಪ್ರಕಾರ ಬುರ್ಖಾ ಹೆಣ್ಣುಮಕ್ಕಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದಂತಲ್ಲ’ ಎಂದು ಸೌಮ್ಯಾ ಕುಶಾಲು ಮಾಡಿದರೆ ದುರ್ಗಾ, ‘ಹೆಣ್ಣುಮಕ್ಕಳ ಸ್ವಾತಂತ್ರ್ಯವನ್ನಲ್ಲ, ನಿಜಕ್ಕೂ ಬುರ್ಖಾ ಕಿತ್ತುಕೊಳ್ಳುವುದು ಪೋಲಿ ಹುಡುಗರ ಕಣ್ಣುಗಳ ಸ್ವಾತಂತ್ರ್ಯವನ್ನು’ ಎಂದು ಲಘುಧಾಟಿಯಲ್ಲೇ ಉತ್ತರಿಸುತ್ತಾಳೆ. ಅಂದರೆ ಈ ಹೆಣ್ಣುಮಕ್ಕಳ ಲಘುಸಂಭಾಷಣೆಯಲ್ಲಿ ಲೇಖಕರು ಮುರಾರಿ ರಾವ್ ಅಂಥವರ ‘ಆದರ್ಶ’ದ ಪ್ರದರ್ಶನ ಮತ್ತು ನಾವು ಬದುಕುತ್ತಿರುವ ವಾಸ್ತವದ ನಡುವಣ ಬಿರುಕನ್ನು ಕಾಣಿಸುತ್ತಾ ಹೋಗುತ್ತಾರೆ.
ಬುರ್ಖಾಧಾರಿಯನ್ನು ಹುಡುಕಿಕೊಂಡು ‘ಸೇನೆ’ಯವರು ಮುರಾರಿ ರಾವ್ ಮನೆಗೆ ಬರುತ್ತಾರೆ. ಮುಂದೆ ‘ಜಾತ್ಯತೀತ ಮುಸ್ಲಿಮ್ ಪಂಥ’ದವರೂ ಬರುತ್ತಾರೆ. ಈ ಎರಡೂ ಗುಂಪುಗಳು ‘ಧರ್ಮ ರಕ್ಷಣೆ’ಯ, ‘ಸಂಸ್ಕೃತಿ ರಕ್ಷಣೆ’ಯ ಮಾತುಗಳನ್ನು ಆಡುತ್ತಾರೆ. ಇವುಗಳ ಹೆಸರಿನಲ್ಲಿ ಮುರಾರಿ ರಾವ್, ಸೌಮ್ಯಾ ಮತ್ತು ದುರ್ಗಾರ ವಿಚಾರಣೆಯನ್ನು ಮಾಡುತ್ತಾರೆ.
ಮಲಾಲಾ ಬಗ್ಗೆ ಏನೂ ಗೊತ್ತಿರದಿದ್ದರೂ ಮುರಾರಿ ರಾವ್ ಪ್ರಾಜೆಕ್ಟಿನೊಳಗೆ ಪ್ರವೇಶ ಮಾಡುತ್ತಾರೆ. ಇವರ ಮಾತುಗಳಲ್ಲಿ ಧರ್ಮ, ಸಂಸ್ಕೃತಿಗಳ ಪ್ರಸ್ತಾಪ ಮತ್ತೆ ಮತ್ತೆ ಬಂದರೂ ಅವರ ಗಂಡುದರ್ಪ ವಾಚ್ಯವಾಗಿಯೇ ಎದ್ದುಕಾಣುತ್ತದೆ. ಆ ಎರಡು ಸಂಘಟನೆಗಳು ಮೇಲುನೋಟಕ್ಕೆ ಭಿನ್ನ ಭಿನ್ನ ಎನಿಸಿದರೂ ಸ್ತ್ರೀಯರ ಕುರಿತ ಅಸಹನೆಯಲ್ಲಿ, ಗಂಡುದರ್ಪದಲ್ಲಿ, ತಾವು ಪ್ರತಿಪಾದಿಸುವುದೇ ಸತ್ಯವೆಂಬ ಹಟ, ಗರ್ವ ಮತ್ತು ದಬ್ಬಾಳಿಕೆಯ ಮನಸ್ಥಿತಿಯಲ್ಲಿ ಸಾದೃಶ್ಯವನ್ನೇ ಕಾಣಿಸುತ್ತಾರೆ. ಅಂದರೆ ತಾಲಿಬಾನ್ ಸಂಸ್ಕೃತಿಯು ದೂರದಲ್ಲಿ ಎಲ್ಲೋ ಇರುವಂಥದ್ದಲ್ಲ.
ಅದು ಬೇರೆ ಬೇರೆ ರೀತಿಗಳಲ್ಲಿ, ಬೇರೆ ಬೇರೆ ಬಗೆಗಳಲ್ಲಿ ನಮ್ಮಲ್ಲೂ ಇರುವಂಥದ್ದೇ ಎಂದು ಬೊಳುವಾರರ ನಾಟಕ ಸೂಚಿಸುವಂತಿದೆ. ಇದು ವ್ಯಕ್ತಿಗಳ ಬಗ್ಗೆಯೂ ನಿಜ, ಗುಂಪುಗಳ ಬಗ್ಗೆಯೂ ನಿಜ ಎನ್ನಿಸುವಂಥ ದೃಶ್ಯಗಳು ನಾಟಕದಲ್ಲಿ ಕಂಡುಬರುತ್ತವೆ. ಕೊನೆಗೂ ಎಲ್ಲರ ಅಸಹನೆಯ, ದೌರ್ಜನ್ಯದ ಗುರಿ ಹೆಣ್ಣು ಎನ್ನುವುದು ಈ ನಾಟಕದ ಪ್ರಬಂಧಧ್ವನಿಯಾಗಿದೆ. ಉದಾಹರಣೆಗೆ ದುರ್ಗಾ ಮುಸಲ್ಮಾನ ಹುಡುಗನನ್ನು ಪ್ರೀತಿಸಿದ್ದು ಹಿಂದೂ ಗುಂಪು ಮತ್ತು ಮುಸಲ್ಮಾನರ ಗುಂಪು ಇಬ್ಬರ ದೃಷ್ಟಿಯಿಂದಲೂ ತಪ್ಪು.
ತನ್ನನ್ನು ರಕ್ಷಿಸಿಕೊಳ್ಳಲು ಬುರ್ಖಾ ಧರಿಸಿದ್ದು ಎರಡೂ ಗುಂಪುಗಳ ದೃಷ್ಟಿಯಲ್ಲಿ ಅಕ್ಷಮ್ಯ. ಹಾಗೆಯೇ ಮಲಾಲಾಳ ಬಗ್ಗೆ ಮಾತನಾಡುವುದು, ಆಕೆಯನ್ನು ಕುರಿತ ನಾಟಕ ಮಾಡುವುದು ಕೂಡ ಇವರಿಗೆ ಸಹಿಸದು. ಇನ್ನು ಮಲಾಲಾಳನ್ನು ಆರಾಧಿಸುತ್ತೇವೆ ಎಂದು ಹೊರಟವರ ಇಂಗಿತಗಳೂ ವಾಣಿಜ್ಯ–ವ್ಯಾಪಾರಗಳಿಂದ ಚೋದಿತವಾದಂಥವೇ. ಸೌಮ್ಯಾ ಮತ್ತು ದುರ್ಗಾ ಇಂಥವರ ಒಳಗಿನ ಮಲಾಲಾ ಹಾಗೂ ಮುರಾರಿ ರಾವ್, ‘ಸೇನೆ’, ‘ಜಾ.ಮು.ಪ.’ದಂಥ ಗುಂಪುಗಳ ಒಳಗೇ ಇರುವ ತಾಲಿಬಾನ್‌ಳನ್ನು ಅನಾವರಣಗೊಳಿಸುವುದು ನಾಟಕದ ಪ್ರಮುಖ ಉದ್ದೇಶವೆಂದು ತೋರುತ್ತದೆ.
ಇದನ್ನು ನಾಟಕಕಾರ ಬೊಳುವಾರು ತಮ್ಮ ದೃಶ್ಯ ಸಂಯೋಜನೆಗಳಲ್ಲಿ, ನಾಟಕದೊಳಗಣ ನಾಟಕಗಳಲ್ಲಿ, ಚುರುಕಾದ ಸಂಭಾಷಣೆಗಳಲ್ಲಿ, ತಮಗೇ ವಿಶಿಷ್ಟವಾದ ಹಾಸ್ಯ–ವಿನೋದಗಳಲ್ಲಿ ಕಟ್ಟಿರುವ ರೀತಿ ಆಕರ್ಷಕವಾಗಿದೆ. ತಾಲಿಬಾನ್ ಹಿಂಸೆ–ದೌರ್ಜನ್ಯಗಳ ವಿಶಾಲಭಿತ್ತಿಯಲ್ಲಿ ಈ ನಾಟಕವು ನಮ್ಮ ಬದುಕಿನಲ್ಲೇ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಣುಕುತ್ತಿರುವ ಅಸಹನೆ–ದರ್ಪಗಳ ಅನುಭವವನ್ನು ಮೂಡಿಸಲು ಸಾಕಷ್ಟು ಯಶಸ್ವಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.