ಬ್ಯಾರಿ ಭಾಷೆಯ ಸಾಹಿತ್ಯದ ಮೇಲೆ ಅದರಲ್ಲೂ ಮುಖ್ಯವಾಗಿ ‘ಬ್ಯಾರಿ ಕಾವ್ಯದ’ ಮೇಲೆ ಕನ್ನಡ ಸಾಹಿತ್ಯದ ಪ್ರಭಾವ ಮಾತ್ರವಲ್ಲ, ಪ್ರಭುತ್ವವೂ ಇದೆ. ಕನ್ನಡದಲ್ಲಿ ನವೋದಯ ಕಾವ್ಯದ ಪ್ರಭಾವ ಕ್ಷೀಣವಾಗುತ್ತಾ ‘ನವ್ಯ ಸಾಹಿತ್ಯ’ ವಿಜೃಂಭಿಸತೊಡಗಿದ ಬಳಿಕವಷ್ಟೇ ‘ಬ್ಯಾರಿ ಕಾವ್ಯ’ ಕಣ್ಣು ತೆರೆದದ್ದು. ಆದ್ದರಿಂದಲೇ ಸಹಜವಾಗಿ ಬಹಳಷ್ಟು ಬ್ಯಾರಿ ಕವಿತೆಗಳು ಅದೇ ಮಾದರಿಯನ್ನು ನೇರವಾಗಿ ಅನುಸರಿಸಿವೆ.
ಬ್ಯಾರಿ ಕಾವ್ಯ ಪರಂಪರೆಯಲ್ಲಿ ನವೋದಯ ಎಂಬ ಘಟ್ಟವೇ ಇರಲಿಲ್ಲವಾದ್ದರಿಂದ ನೇರವಾಗಿ ‘ನವ್ಯ’ಕ್ಕೆ ನುಗ್ಗಿದ ಕವಿಗಳೇ ಜಾಸ್ತಿ. ಆದ್ದರಿಂದಲೇ ಇರಬೇಕು, ಕಳೆದ ಎರಡು ದಶಕಗಳಿಂದ ಬ್ಯಾರಿ ಭಾಷೆಯಲ್ಲಿ ನೆನಪಿಗೆ ಬರುವ ‘ಕವಿ’ಗಳನ್ನು ಎಣಿಸಲು ಎರಡು ಮುಷ್ಟಿ ಬೆರಳುಗಳು ಸಾಕಾಗುತ್ತವೆ. ಅದರಲ್ಲೂ ಹೆಚ್ಚು ನೆನಪಿಗೆ ಬರುವವರು ಕನ್ನಡದಲ್ಲಿ ನವೋದಯದಲ್ಲಿದ್ದಂತೆ ನೆನಪಿಸಿಕೊಳ್ಳಲು ಸುಲಭವಾಗುವಂತಹ ‘ಹಾಡುವ ಕವಿತೆ’ಗಳನ್ನು ಬರೆಯುತ್ತಿರುವವರು. ‘ಹಾಡಲಾಗದ ಕವಿತೆಗಳನ್ನು’ ಬರೆಯುತ್ತಿರುವವರು.
ಅಪರೂಪಕ್ಕೊಮ್ಮೆ ಏರ್ಪಡುವ ಸಭೆ ಸಮಾರಂಭಗಳಲ್ಲಿ ಓದುವ ಮೂಲಕವಷ್ಟೇ ಗೆಲ್ಲಲು ಯತ್ನಿಸುತ್ತಿದ್ದಾರೆ. ಮಂಗಳೂರಿನ ಅಕ್ಕಪಕ್ಕದ ಬ್ಯಾರಿ ಆಡುಭಾಷೆ ಬೇರೆ ಬಗೆಯದು ಮತ್ತು ಇದುವರೆಗೆ ಪ್ರಕಟವಾಗಿರುವ ಕೃತಿಗಳಲ್ಲಿ ಬಹುಪಾಲು ‘ಮಂಗಳೂರು ಬ್ಯಾರಿ’ ಆಡುಭಾಷೆಯಲ್ಲಿದೆ ಎಂಬುದೂ ಓದುಗರ ಸಂಖ್ಯೆಯನ್ನು ಏರದಂತೆ ನಿಯಂತ್ರಿಸುತ್ತಿದೆ.
ಬ್ಯಾರಿ ಭಾಷೆಯಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗುವ ಯಾವುದೇ ಸಾಹಿತ್ಯವನ್ನು ಹುಡುಕಿಕೊಂಡು ಹೋಗಿ ಕೊಳ್ಳುವ ಬ್ಯಾರಿಗಳು ಇಲ್ಲವೇ ಇಲ್ಲವೆನ್ನುವ ಸತ್ಯ ಅಬ್ದುಲ್ ರಹೀಮ್ ಟೀಕೆಯವರಿಗೆ ಗೊತ್ತಿರಬಹುದು. ವಾಸ್ತವದ ಅರಿವಿದ್ದೂ, ತಮ್ಮ ಕವಿತೆಗಳನ್ನು ಬ್ಯಾರಿ ಭಾಷೆಯ ಪುಸ್ತಕ ರೂಪದಲ್ಲಿ ಪ್ರಕಟಿಸುವ ಈ ಗೆಳೆಯನ ಹಟದ ಬೆನ್ನಲ್ಲಿ, ತಮ್ಮ ಮಾತೃಭಾಷೆಯಲ್ಲಿಯೂ ಒಳ್ಳೆಯ ಕವಿತೆಗಳು ದಾಖಲಾಗಬೇಕೆಂಬ ಉದ್ದೇಶದ ಹೊರತಾಗಿ ಬೇರಾವುದೇ ಲಾಭದ ಲೆಕ್ಕಾಚಾರವಿದ್ದಿರಬಹುದು.
ಈ ‘ಮಲ್ಲಿಗೆ ಬಳ್ಳಿ’ಯಲ್ಲಿರುವ ಬಹಳಷ್ಟು ಹೂವುಗಳನ್ನು ಹತ್ತಾರು ಕವಿಗೋಷ್ಠಿಗಳಲ್ಲಿ ಅವರೇ ಸ್ವತಃ ಓದಿದ್ದಾರೆ. ಕೇಳುಗರಿಂದ ಮೆಚ್ಚುಗೆ ಪಡೆದಿದ್ದಾರೆ. ಇವರ ಅನುವಾದವೊಂದನ್ನು ಮೆಚ್ಚಿದ ಕನ್ನಡ–ಇಂಗ್ಲಿಷ್ ಕವಯಿತ್ರಿಯೊಬ್ಬರು ಆ ಕವನವನ್ನು ತನ್ನ ಅಂತರರಾಷ್ಟ್ರೀಯ ಕವಿಗಳ ಸಂಕಲನದಲ್ಲಿ ಸೇರಿಸಿಕೊಂಡು ಬ್ಯಾರಿ ಭಾಷೆಯ ಸೊಗಡನ್ನು ಗುರುತಿಸಿರುವ ಸುದ್ದಿಯೂ ಇದೆ.
ಕವಿತೆಯೊಂದನ್ನು ಅದರ ಕರ್ತನೇ ಸ್ವತಃ ಓದಿದಾಗ ಕೇಳುಗನಿಗೆ ದಕ್ಕುವ ಸಂತೋಷಕ್ಕೂ, ತಾವೇ ಒಂಟಿಯಾಗಿ ಓದಿ ಆಸ್ವಾದಿಸುವಾಗ ಸಿಗುವ ಅನುಭವಕ್ಕೂ ಬಹಳ ವ್ಯತ್ಯಾಸವುಂಟು. ಅವುಗಳಲ್ಲಿ ಯಾವುದು ಹೆಚ್ಚು, ಯಾವುದು ಕಮ್ಮಿ ಎಂಬುದನ್ನು ಕರಾರುವಾಕ್ಕಾಗಿ ಹೇಳಬಲ್ಲ ಯಾವುದೇ ಅಳತೆಗೋಲು ಇನ್ನೂ ಸಿದ್ಧವಾಗಿಲ್ಲ. ಅಂತೆಯೇ, ಒಂದೇ ಕವಿತೆಯು ಬೇರೆ ಬೇರೆ ಓದುಗನಿಗೆ ಬೇರೆ ಬೇರೆ ಬಗೆಯ ಅನುಭವಗಳನ್ನು ನೀಡುತ್ತವೆ ಎಂಬುದನ್ನೂ ಅಲ್ಲಗಳೆಯಲಾಗುವುದಿಲ್ಲ.
ಇಲ್ಲಿರುವ ಎಲ್ಲ ಕವಿತೆಗಳನ್ನು ನಾನು ಮತ್ತೆ ಮತ್ತೆ ಓದಿ ಸಂತೋಷಪಟ್ಟಿದ್ದೇನೆ. ಆ ಕವಿತೆ ಹೀಗಿದೆ, ಈ ಕವಿತೆ ಹಾಗಿದೆ ಎಂದು ವಿವರಿಸಲು, ಕೆಲವು ತುಂಡು ಸಾಲುಗಳನ್ನು ಆರಿಸಿ, ನಾನು ಅನುಭವಿಸಿದ ಸಂತೋಷವನ್ನು ವಿವರಿಸುತ್ತಾ, ಓದುಗರೂ ಹೀಗೆಯೇ ಸುಖ ಅನುಭವಿಸಬೇಕು ಎಂದು ಒತ್ತಾಯಿಸುವುದೂ ಸರಿಯಾಗುವುದಿಲ್ಲ.
ಕೊನೆಗೊಂದು ಮಾತು. ಇದುವರೆಗೆ ಜಗತ್ತಿನ ಯಾವ ಭಾಷೆಯಲ್ಲೂ ಒಂದೇ ಒಂದು ಕವಿತೆ ಬರೆಯಲು ಸಾಧ್ಯವಾಗದ ನನ್ನಿಂದ, ವಿಶ್ವಕವಿ ರವೀಂದ್ರನಾಥ ಟ್ಯಾಗೋರ್, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮೊದಲಾದವರ ಕವಿತೆಗಳ ಅನುವಾದಗಳೂ ಸೇರಿಕೊಂಡಂತೆ 51 ಹೂವುಗಳನ್ನು ಬಿರಿದ ಈ ಬಳ್ಳಿಗೆ ‘ತಾಂಗ್ ಕೋಳು’ ಊರುವ ಕೆಲಸ ಕೊಟ್ಟ ಈ ನನ್ನ ಗೆಳೆಯನ ಎದೆಗಾರಿಕೆಗೆ ‘ಶಾಭಾಷ್ ಟೀಕೇ’ ಎನ್ನದಿರಲಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.